ಅಥವಾ

ಒಟ್ಟು 52 ಕಡೆಗಳಲ್ಲಿ , 29 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು. ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ! ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.
--------------
ಘಟ್ಟಿವಾಳಯ್ಯ
ಜಗಕ್ಕಹುದಾದುದ ಕಿತ್ತು ಜಗಕ್ಕಲ್ಲವಾದುದ ತೊಟ್ಟು ಜಗ ಹಿಡಿದುದ ಬಿಟ್ಟು, ಜಗ ಒಲ್ಲದುದ ತೊಟ್ಟು ತಾನರಿದುದ ಮರೆದು, ಆ ಮರವೆಗೆ ಒಡಲಾದುದನರಿದು ಉಭಯದ ಕೋಡ ಕಿತ್ತು, ನಲಿದೊಲವಿನ ಹೊಲನ ಬಿಟ್ಟು ಕೊಂಬಿನ ಗಿಲಿಕೆಯಲ್ಲಿ ಒಲಿದಾಡುವೆ. ಜಗಭಂಡರ ಅಂಗಳದಲ್ಲಿ ತುಳಿದಾಡುತ್ತಲಿರಬೇಕು ಮೇಖಲೇಶ್ವರಲಿಂಗ ಒಡಗೂಡುತ್ತಲಿರಬೇಕು.
--------------
ಕಲಕೇತಯ್ಯ
ಜಗದ ವರ್ತಕದ ಇರವು ಎಂತೆಂದಡೆ: ಶೈವ ನೇಮಸ್ಥ ಎರಡೆ ಭೇದ. ದಿವಾರಾತ್ರಿ ಉಭಯ ಕೂಡಿ ದಿನ ಲೆಕ್ಕಕ್ಕೆ ಬಂದಂತೆ, ಶಕ್ತಿ ಸಾಕಾರವಾಗಿ, ನಿಶ್ಶಕ್ತಿ ವಸ್ತುರೂಪಾಗಿ, ಉಭಯವು ಕೂಡಿ ಘಟ ನಡೆವಂತೆ ನಡೆವುದು ಜಗ ಸಂಬಂಧ, ಭಯಕ್ಕೆ ಹೊರಗಾದುದು, ಸದಾಶಿವಮೂರ್ತಿಲಿಂಗದ ಭಾವಸಂಬಂಧ.
--------------
ಅರಿವಿನ ಮಾರಿತಂದೆ
ಸೂತಕ ತಡೆದಲ್ಲಿ ಮಕ್ಕಳಾದಹರೆಂದು ಮಚ್ಚಿಪ್ಪುದು ಜಗ. ಸೂತಕವೇತರಿಂದೊದಗೂದು. ಜಗದ ಉತ್ಪತ್ಯ, ಈ ಕಾಯದ ಆಶೆಯ ಸೂತಕ ತಡೆದು, ನಿರಾಶೆಯ ಮಾತೆಯ ಗರ್ಭದಲ್ಲಿ, ನಿರ್ಜಾತನು ಬೆಸಲಾದ. ಭಾವವೆಂಬ ಯೋನಿಯಲ್ಲಿ , ಬಂಕೇಶ್ವರಲಿಂಗ ಅಂತುಕ ಕುಮಾರನಾದ.
--------------
ಸುಂಕದ ಬಂಕಣ್ಣ
ಪರುಷದ ಪುತ್ಥಳಿಗೆ ಲೋಹದ ಶೃಂಗಾರವೇತಕೊ ? ``ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ'' ಎಂಬ ಭ್ರಾಂತೇಕೋ ? ಲಿಂಗಮಧ್ಯೆ ಜಗತ್ಸರ್ವವಾದರೆ, ಈ ಆತ್ಮಂಗೆ ಹಿಂದಣುತ್ಪತ್ಯ ಸ್ಥಿತಿಲಯಂಗಳೆಂತಾದವು ? ಲಿಂಗ ಲಿಂಗದಂತೆ ಜಗ ಜಗದಂತೆ ಲಿಂಗವನೊಳಗುಮಾಡಿ, ಜಗವ ಹೊರಗು ಮಾಡಬಲ್ಲನೆಮ್ಮ ಶರಣ, ಗುಹೇಶ್ವರ ನೀನೇ ತಾನು.
--------------
ಅಲ್ಲಮಪ್ರಭುದೇವರು
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಜಗದುತ್ಪತ್ಯವೆಂಬುದು ಹುಸಿಮಾತು. ನಾನೆಂಬುದೆ ಐದು, ಆ ಐದರಿಂದ ಒದಗಿದ ಜಗ, ಲಯವಾದ ಮತ್ತೆ ಜಗವಿಲ್ಲವಾಗಿ. ತನ್ನ ಗುಣವೆ ಪೃಥ್ವಿ, ತನ್ನ ಗುಣವೆ ಅಪ್ಪು, ತನ್ನ ಗುಣವೆ ವಾಯು, ತನ್ನ ಗುಣವೆ ಆಕಾಶ, ತನ್ನಿಂದನ್ಯವಪ್ಪುದೊಂದಿಲ್ಲವಾಗಿ. ಅದಕ್ಕೆ ದೃಷ್ಟ: ಮರ್ಕಟ ದರ್ಪಣಸ್ಥಾನವೆಂದರಿವುದು. ಆ ಉಚಿತ ಬೀಜಕ್ಕುಚಿತವಪ್ಪುದೆ ಅದಕ್ಕೆ ದೃಷ್ಟ. ಪರುಷದ ಗಿರಿಯಲ್ಲಿ ಕಬ್ಬುನದ ಮೊರಡಿಯುಂಟೆ ? ಕ್ಷೀರ ಜಲಧಿಯಲ್ಲಿ ಕ್ಷಾರಜಲ ಸ್ಥಾಪ್ಯವುಂಟೆ ? ಕಲ್ಪದ್ರುಮದಗ್ರದಲ್ಲಿ ದತ್ತೂರದ ಫಲವುಂಟೆ ? ನೆರೆ ಸತ್ಯನಲ್ಲಿ [ಹಾ]ರುವ ಮ[ನದವನು]ಂಟೆ ? ಇಂತಿವನರಿದು ನಿಃಶಬ್ದನಾದ ಮಹಾತ್ಮಂಗೆ ಗುರುವೆಂದರರು, ಲಿಂಗವೆಂದರು, ಜಂಗಮವೆಂದರು. ಸ್ಥಾವರವೊಂದಾದಡೆ, ಶಾಖೆಯ ಲಕ್ಷ್ಯದ ತೆರನಂತೆ. ಅದಕ್ಕೆ ಪರಿಯಾಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ. ಇಂತೀ ಷಟ್‍ಸ್ಥಲದ ಎಲ್ಲಾ ಬೆಳಗಿನ ಕಳೆಯನೊಳಕೊಂಡಿಪ್ಪ ಮಹಾತ್ಮನಂ ಶಿವಭೌತಿಕವೆಂದರಿಯದೆ, ಬೀಗವ ತೆಗೆದಲ್ಲಿಯೆ ಕಂಡಿತ್ತು, [ಆಭ]ರಣದ ಇರವು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವೆಂಬಂಗವ ತಾಳಿ ಬಂದಾಗವೆ ಮನವೆಂಬ ಮಾರಿ ಒಡಲ ಹೊಕ್ಕಿತ್ತು. ಉಭಯದೊಡಲ ಕೊಂಡು ಬಂದೆ. ಬಲದ ಕೈಯಲ್ಲಿ ಜಗ ಪೂಜಿಸುವ ಶಕ್ತಿ. ಎನ್ನ ಮನದ ಕೊನೆಯಲ್ಲಿ ಕಾಲಾಂತಕ ಭೀಮೇಶ್ವರಲಿಂಗವಲ್ಲದಿಲ್ಲಾ ಎಂಬ ಭಾಷೆ.
--------------
ಡಕ್ಕೆಯ ಬೊಮ್ಮಣ್ಣ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಜಗಭಗದ ಊಧ್ರ್ವದಲ್ಲಿ ಮೋಹನದ ಗೊಟ್ಟಿ ಹುಟ್ಟಿತ್ತು. ಗೊಟ್ಟಿಯ ಪೂರ್ವದಲ್ಲಿ ಕಮಲವರಳಿತ್ತು. ಕಮಲ ಹೃತ್ಕಮಲದಲ್ಲಿ ಬಿಂದು ವ್ಯಂಜನದಿಂದ ಗುರುಲಿಂಗ ರೂಪಾಗಿ ಪುಲ್ಲಿಂಗ ಚರಿಸಿತ್ತು. ನಪುಂಸಕಲಿಂಗವಡಗಿತ್ತು. ಬಿಂದುವಿನಿಂದ ನಾದ, ಆ ಸುನಾದದಿಂದ ಕಳೆ, ಆ ಕಳೆಯ ಕಾಂತಿಯಿಂದ ಜಗ. ಇಂತೀ ಜಗದ ಉತ್ಪತ್ಯದಲ್ಲಿ ಹುಟ್ಟದೆ ಸ್ಥಿತಿಗೊಳಗಲ್ಲದೆ ಲಯಕ್ಕೆ ಹೊರಗಾಗಿ ಅರಿದುದು ಸ್ವಾನುಭಾವ ಸಂಬಂಧ ಇದು ಪಿಂಡ, ಪಿಂಡಜ್ಞಾನ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ತಾನೆ ಜಗ, ಜಗವೆಲ್ಲ ತಾನೆಂದರಿದ ಘನವೇದ್ಯನಭೇದರೂಪನಾಗಿ, ಅನ್ಯವಿಲ್ಲದನ್ಯವನರಿಯಲೆಲ್ಲಿಯದೊ ? ನಿರಂಜನ ನಿಜಚಿದ್ರೂಪು ತಾನಾಗಿ ಅರಿವು ತಾನೆಂಬ ಮಾತಿಗೆಡೆಯಲ್ಲಿಯದೊ ? ಅನ್ಯವೆನ್ನದ ತಾನೆನ್ನದಳಿದುಳಿಮೆಯನುಪಮಿಸಬಹುದೆ ? ಅನಪಮಸುಖಸಾರಾಯ, ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಅಗ್ನಿ ವಾಯುವ ಧರಿಸಿ, ವಾಯು ಆಕಾಶವ ಧರಿಸಿ, ಆಕಾಶ ಅಪ್ಪುವ ಧರಿಸಿ, ಅಪ್ಪು ಪೃಥ್ವಿಯ ಧರಿಸಿ, ಆ ಪೃಥ್ವಿಗೆ ಅಪ್ಪು, ಆ ಅಪ್ಪುವಿನ ಮಧ್ಯದ ಕಮಠ, ಕಮಠನ ಮಧ್ಯದ ಶೇಷ, ಶೇಷನ ಮಧ್ಯದ ಜಗ, ಜಗದ ಆಗುಚೇಗೆಯಲ್ಲಿ ಲೋಲನಾಗದೆ, ಕಾಯಗುಣವ ಕರ್ಮದಿಂದ ಕಳೆದು, ಜೀವ ಗುಣವ ಅರಿವಿನಿಂದ ಮರೆದು, ಭಾವ ನಿರ್ಭಾವವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಎಲೆ ವೈದಿಕರಿರಾ, ನಿಮಗೆ ಸತ್ವಬಲ ವೇದವಲ್ಲದೆ ಮತ್ತೇನೂ ಇಲ್ಲ. ಆ ವೇದವೆ ಸ್ವಯಂಭುಯೆಂದು ನುಡಿವಿರಿ, ನಾ ನಿಮಗೆ ತಿಳಿಯ ಪೇಳುವೆ. ಆದಿಸಿದ್ಧಾಂತವಿಡಿದು ವೇದ ಸ್ವಯಂಭುವಲ್ಲ. ಆದಿಮೂಲ ಶಿವನಿಂದಾದವೀ ವೇದಂಗಳು ಕೇಳಿರೆ. ಶಿವನಿಂದಾದ ಮೂವತ್ತಾರುತತ್ತ್ವದೊಳೈದನೆಯದು ಆಕಾಶತತ್ತ್ವವು. ಆ ಆಕಾಶತತ್ತ್ವದಿಂದಾದ ಶಬ ವಿಷಯವು ನಿತ್ಯವೆ ಹೇಳಿರೆ. ಪಂಚಭೂತಂಗಳೊಳಗೊಂದು ಭೂತವಿಷಯವಾ ಶಬ್ಧ. ಆ ಶಬ್ದ ಸಂಬಂಧವಾದ ವೇದಕ್ಕೆ ನಿತ್ಯವೆಲ್ಲಿಯದು ಹೇಳಿರೆ. ಆ ವೇದ ತನಗೆ ತಾನಾದುದೆಂಬಿರೆ. ಎಂಬಿರಾದಡೆ ಪ್ರಳಯಾಂತಕಾಲದಲ್ಲಿ ಅಳಿಯವೀ ವೇದಾದಿ ವಿದ್ಯೆಗಳು. ಜಗತ್ ಸೃಷ್ಟಿಕಾಲದಲ್ಲಿ ಆದಿಕರ್ತಾರ ಸೃಷ್ಟಿ ಸ್ಥಿತಿ ಲಯ ಪ್ರೇರಕಶಿವನಿಂದಾದವು ಕೇಳಿರೆ. ಚರಣಬಹ ಸೂಕ್ತಿಗಳಲ್ಲಿ ಕೇಳ್ದರಿಯಿರೆ. ಋಗ್ವೇದಕ್ಕೆ ದೇಹ ಉರುವರ್ಣ, ಅತ್ರಿಗೋತ್ರ, ಗಾಯತ್ರಿ ಛಂದ, ಅಧಿದೇವತೆ ಬ್ರಹ್ಮ. ಯಜುರ್ವೇದಕ್ಕೆ ಅಬ್ಜದಳಾಯತ ನೇತ್ರ, ಕುಂಚಿತ ಚಿಬುಕು ಮುಂಗೂರ ಮೀಸೆ, ತಾಮ್ರವರ್ಣದೇಹ, ಭಾರದ್ವಾಜಗೋತ್ರ, ತ್ರಿಷ್ಟುಪ್ ಛಂದ, ಅಧಿದೇವತೆ ವಿಷ್ಣು. ಸಾಮವೇದಕ್ಕೆ ದೇಹ ಶ್ವೇತವರ್ಣ, ಕಾಶ್ಯಪಗೋತ್ರ, ಜಗತಿ ಛಂದ, ಅಧಿದೇವತೆ ಈಶ್ವರನು. ಧವಳಶೃಂಗವೆರಡು ಅಥರ್ವಣವೇದಕ್ಕೆ ದೇಹ, ಕೃಷ್ಣವರ್ಣ, ವೈಭಾನುಗೋತ್ರ, ಅನುಷ್ಟುಪ್ ಛಂದ, ಅಧಿದೇವತೆ ಇಂದ್ರನು. ಇಂತು ಶ್ರುತಿಗಳಿಗೆ ಶರೀರವರ್ಣ, ಗೋತ್ರ, ಛಂದ, ಅಧಿದೇವತೆಗಳಿಂತಿರಲು, ತಮಗೆ ತಾವಾದವೆಂದು ನೀವು ನುಡಿವ ಪರಿ ಹೇಗೆ ಹೇಳಿರೆ ವೈದಿಕರಿರಾ. ಇವೇ ನಿತ್ಯವೆಂಬಿರಾದಡೆ ಲಯಗಮನಸ್ಥಿತಿಯುಂಟು ಕೇಳಿರೆ. ಹೃದಯ ದೈವ ಗಾಯಿತ್ರಿ ಸರ್ವವೇದೋತ್ತಮೋತ್ತಮ ಲಿಯಂಕೇ ಮೂದ್ರ್ನಿ ವೈವೇದಾಸಷದೊ ಎನಲು, ಆತ್ಮದೃಷ್ಟಿ ನೇತ್ರದೃಷ್ಟಿಯ ಪ್ರಮಾಣದಿಂ ನಮ್ಮ ಟರುರಿವಿಂದರಿದೆವೆಂಬರೆ, ನಿಮ್ಮ ನೀವರಿಯದವರು ಈ ಜಗದಾದಿಯನೆಂತರಿದಿರೆನಲು, ಜ್ಞಾನಸಾಧನವಹ ಶಾಸ್ತ್ರಾದಿಗಳಿಂದ ಜ್ಞಾನೇಂದ್ರಿಯ ಪ್ರಮಾಣ ನೇತ್ರದಿಂದರಿದವೆನಲು, ನಿಮಗೆ ಜ್ಞಾನೇಂದ್ರಿಯ ಸಾಧನ ನೇತ್ರಗಳೆಲ್ಲಿಯವು. ಈಶ್ವರನ ನಯನಾಶ್ವವೆನಿಸುವ ರವಿಚಂದ್ರಾಗ್ನಿ ತೇಜಸ್ಸಿಂದಲ್ಲದೆ, ಜಾತ್ಯಂಧರು ನೀವು ನಿಮಗೆಲ್ಲಿಯ ದೃಷ್ಟಿವಾಳತನ. ಅತಿಮತಿವಂತರೆನಿಸುವ ದೇವತೆಗಳುಂ ಕಾಣಲರಿಯರು. ಮತಿವಿಕಳರು ನೀವು ಕಾಣಲರಿದಿರೆಂತು ಜಗದಾಗುಹೋಗುಗಳ. ನೋಡಿಯರಿದೆವೆನಲು ಜಗವನಾಡಿ ನೀವು ಮೊನ್ನಿನವರು, ಸಾಮಾನ್ಯಮನುಜರು : ಜಗದನಾದಿಯ ನೀವೆಂತರಿದಿರೆನಲು, ಅದು ಕಾರಣ, ಜಗ ನಿರ್ಮಾಣಕ ಜಗ ಭ್ರಮಣ ಲೀಲಾಲೋಲ ಜಗದಂತರ್ಯಾಮಿ ಜಗತ್ರೈರಕ್ಷಕನೊಬ್ಬನೆಯರಿವ ನಿಮಗರುವಿಲ್ಲೆನಲು, ವೇದ ಶಾಸ್ತ್ರಾಗಮಾದಿಗಳಿಂ ಪ್ರಮಾಣಿಸಿ ಅರಿದೆವೆನಲು, ನಿಮಗೆ ಶ್ರುತಿ ಪ್ರಮಾಣ ಯೋಚನೆಯದೆಲ್ಲಿಯದು `ಜಗತಾಂ ಪತಯೇ ನಮಃ' ಎಂದು ಶ್ರುತಿಯಿರಲು, ಇದು ಕಾರಣ, ವೇದಾದಿಶಾಸ್ತ್ರಂಗಳಿಂದ ನಿಮಗೇನು ಆಗದು, ಪಾಠಕರರುಹಿರಲ್ಲದೆ. ಶ್ರುತಿಃ `ಶಿವೋ ಮಾಯೇವ ಪಿತರೌ' ಎನಲು, ಶಿವನೇ ವೇದಂಗಳಿಗೆ ತಂದೆ ತಾಯಾಗಿರಲು, ಜಗತ್ತಿಂಗೊಡೆಯನಾಗಿರಲು, `ಪಿತಾತದಸ್ಯಮಾ' ಎಂದು ಪಿತನೆ ಶಿವನು ತಾಯಿಪುತ್ರರೆಂದೆನಲು, ವೇದಸ್ವಯಂಭು ಜಗನಿತ್ಯವೆಂಬ ಪರಿಯೆ ಹೇಂಗೆ ಹೇಳಿರೆ. ಪೂರ್ವದಲ್ಲಿ ವೇದಪುರುಷರು, ಶಾಂಭವವ್ರತಿಗಳು, ಪಾಶುಪತವ್ರತಸ್ಥರು, ಶಿವಸಿದ್ಧಾಂತ ಭಕ್ತಿನಿಷಾ* ಸಾವಧಾನವ್ರತರು. ವೇದಾಧಾರಯಂತಿ ಎನಲು, ರುದ್ರಾಕ್ಷಧಾರಣ ಚತುರ್ವಿಧವ್ರತಿಗಳಿಗೆ ಮುಖ್ಯ ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯತ್ರಿಯಾಯುಷಂ | ಅಗಸ್ತಸ್ಯ ತ್ರಿಯಾಯುಷಂ ಯದ್ದೇವಾನಾಂ ತ್ರಿಯಾಯುಷಂ | ತನ್ಮೇ ಅಸ್ತು ತ್ರಿಯಾಯುಷಂ' ಎನಲು, ಭಸ್ಮಾವಾಲಿಪ್ತರು ತ್ರಿಪುಂಡ್ರಾಂಕಿತನಿಷ*ರಾಗಿರದೆ, `ವೇದಾಶ್ಚಕಾವಯಂತಿ' ಎನಲು, `ತದಾಸ್ಮಾಮಿ' ಎನಲು, ತದಾಸ್ಮಾಮಿಯನೆ ಶಿವಚರಣಸಲಿಲ ಪ್ರಸಾದ ಸುಭೋಗ ಸಾವಧಾನಿಗಳೆಂದು ತಾವೆ ಹೇಳುತ್ತಿರಲು, ವೇದಾಗಮಶಾಸ್ತ್ರಗಳಿಗೂ ಪಂಚಾಕ್ಷರಿಮಂತ್ರಗಳಲ್ಲಿಯೆ ಉದಯ ಸ್ಥಿತಿಲಯವೆನ್ನುತಿರಲು, ನೀವಾ ವೇದಂಗಳ ಸ್ವಯಂಭೂಯೆಂದೂ ನಿತ್ಯವೆಂದೂ ಜಗವನೆನಬಹುದೆ. ಅದು ಕಾರಣ, ಈ ಜಗಂಗಳನು ತನ್ನ ಲೀಲೆಯಿಂದಲೆ ನಿರ್ಮಿಸುವ ಭವನೆನಿಸಿ, ತನ್ನ ಲೀಲೆಯಿಂದಲೆ ರಕ್ಷಿಸುವ ಮೃಡನಾಗಿ, ತನ್ನ ಲೀಲೆ, ಈ ಲೀಲೆಯಿಂದಲೆ ಸಂಹರಿಸುವ ಹರನಾಗಿ, ಲೀಲಾತ್ರಯರಹಿತನಾಗಿ ಶಿವನೆನಿಸುವ, || ಶ್ರುತಿ || `ಆದಿ ವೇದಸ್ಯ ಶಾಸ್ತ್ರಾಣಿ ಮಂತ್ರ ಪಂಚಾಕ್ಷರೇ ಸ್ಥಿತಾ' ಎಂದುದಾಗಿ, ಇದು ಕಾರಣ, ಉದ್ದೈಸುವ ರಕ್ಷಿಸುವ ಸಂಹರಿಪ ಭವಮೃಡಹರನಾದ ಶಿವನಿರಲು, ನೀವು ವೇದಸ್ವಯಂಭು ಜಗನಿತ್ಯವೆನಲಾಗದು. ||ಶ್ರುತಿ|| `ಪರವೋ ಭವಂತಿ' ಎನಲು, ವೇದ ದೇವತಾ ಸೃಷ್ಟಿಯೆನಲು, ಈಹಿಂಗೆ ವೇದಂಗಳು ಶಿವನಿಂದ ತಮಗೆ ಉದಯಸ್ಥಿತಿಲಯವೆನಲು, ಈ ಜಗ ಸೃಷ್ಟಿಸ್ಥಿತಿಲಯ ಕಾರಣ ಸರ್ವಜ್ಞ ಸರ್ವೇಶ್ವರ ಸರ್ವಕರ್ತು `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎನಲು, ಒಬ್ಬನೆ ಶಿವನು ಎರಡೆನಿಪ ದೇವರಾರುಯಿಲ್ಲವೆಂದರಿದಿರಿ. ವೈದಿಕರಿರಾ, ವೇದಸ್ವಯಂಭುವಲ್ಲ ಶಿವನ ಶಿಶುಗಳು. ಜಗವು ನಿತ್ಯವಲ್ಲ. ಶಿವನ ಆಜ್ಞಾವಶವರ್ತಿಗಳು. ಅಹಂಗಾಗಲದಕ್ಕೇನು ವೈದಿಕಾಚರಣೆಯನಾಚರಿಸುವ ವೈದಿಕ ವ್ರತಿಗಳಿಗೆ ಸಾಧನವೆನಿಸುವ ವೇದಮಂತ್ರಂಗಳೆ ದೈವವೆನಲು, ವೇದಂಗಳೆ ದೈವವಾದಡೆ ಪಕ್ಷೀಶ್ವರನ ಕೈಯ ಸಿಲುಕುವುದೆ. ವೇದವೆ ದೈವವಾದಡೆ ಮುನೀಶ್ವರನಿಂದ ಅಳಿದುಹೋಗಿ ವೇದವ್ಯಾಸನಿಂದ ಪ್ರತಿಷಿ*ತವಹುದೆ. ವೇದವೆ ದೈವವಾದಡೆ ಶುನಕನಪ್ಪುದೆ, ವೇದವೆ ದೈವವಾದಡೆ ದಕ್ಷನಳಿವನೆ. ವೇದವೆ ದೈವವಾದಡೆ ತಮ್ಮಜನ ಶಿರಹೋಹಂದು ಸುಮ್ಮನಿಹವೆ. ವೇದವೆ ದೈವವಾದಡೆ ಕವಿತೆಗೊಳಗಾಹುದೆಯೆಂದು ಎನಲು, `ಆಘ್ರಾಯಘ್ರಾಯಾವದಂತಿ ವೇದ ಶ್ವಾನಶ್ಶನೈಶ್ಚನೈಃ ಯತ್ಸದಾನಿಮಹಾದಿವಾಂತಂ ವಂದೇ ಶಭರೇಶ್ವರಂ' ಇಂತೆಂದುದಾಗಿ, ಇದು ಕಾರಣ, ಶಿವನೇ ಸ್ವಯಂಭು ನಿತ್ಯವೆಂದರಿದ ವಿಪ್ರರೇ ವೈದಿಕೋತ್ತಮರು, ಬಸವಪ್ರಿಯ ಕೂಡಲಚೆನ್ನಸಂಗಯ್ಯ.
--------------
ಸಂಗಮೇಶ್ವರದ ಅಪ್ಪಣ್ಣ
ಗುರು ಅಳಿದನು ಉಳಿದನು ಎಂದೆಂಬರಿ ಗುರು ಅಳಿದರೆ ಜಗ ಉಳಿಯಬಲ್ಲುದೆ? `ಸ್ಥಾವರಂ ಜಂಗಮಾಧಾರಂ ನಿರ್ಮಲಂ ಸ್ಥಿರಮೇವ ಚ| ಜಗದ್ವಂದಿತಪಾದಾಯ ತಸ್ಮೆ ೈಶ್ರೀ ಗುರುವೇ ನಮಃ||' ಎಂದುದಾಗಿ, ಗುರು ಅಳಿವನೂ ಅಲ್ಲ; ಉಳಿವನೂ ಅಲ್ಲ. ನಿಮ್ಮ ಭ್ರಾಂತಿಯೇ ಅಳಿದನು ಉಳಿದನು ಎಂದು ಕುತ್ತಗೊಳಿಸುತ್ತಿದೆಯಲ್ಲ. ಈ ವಿಕಾರದಲ್ಲಿ ಮುಳುಗಿದವನ ಶಿಷ್ಯನೆಂದೆಂಬೆನೆ? ಎನ್ನೆನಯ್ಯ. ಗುರು ಸತ್ತನೆಂದು ಬಸುರ ಹೊಯಿಕೊಂಡು ಬಾಯಿಬಡಿಕೊಡು ಅಳುತ್ತಿಪ್ಪ ದುಃಖಜೀವಿಗಳಿಗೆ ಗುರುವಿಲ್ಲ; ಗುರುವಿಲ್ಲವಾಗಿ ಲಿಂಗವಿಲ್ಲ; ಲಿಂಗವಿಲ್ಲವಾಗಿ ಜಂಗಮವಿಲ್ಲವಯ್ಯಾ. ಈ ತ್ರಿವಿಧವೂ ಇಲ್ಲವಾಗಿ, ಪಾದೋದಕ ಪ್ರಸಾದವೂ ಇಲ್ಲವಯ್ಯ. ಪಾದೋದಕ ಪ್ರಸಾದವಿಲ್ಲವಾಗಿ, ಮುಕ್ತಿಯೆಂಬುದು ಎಂದೆಂದಿಗೂ ಇಲ್ಲವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ಥಾಣು ಚೋರರಜ್ಜುಸರ್ಪ ಮೃಗ ತೃಷ್ಣೆಕನಸು, ಇಂದ್ರಜಾಲ ಗಂಧರ್ವನಗರವೆಂಬ ಭ್ರಮೆಗಳ ಹುಸಿಯೆಂದರಿದವನು ಪ್ರಪಂಚ ಹೇಳಲರಿಯದಿರ್ದಡೆ ದಿಟವಪ್ಪುದೆ? ವಿಚಾರಿಸಿ ನೋಡಲು ಜಗ ಹುಸಿ, ದಿಟ ತಾನೆಂದರಿದಾತನ ಅರಿವು ಕೆಡಲರಿವುದೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಜಗ ಜನಕ ಜನನಿಯರಿಬ್ಬರ ಇರವ ಕೇಳಾ ಅಯ್ಯಾ, ಹಾ ಆಆ ಹೋ ಯೇ ಯೇ ಅಯ್ಯಾ, ಸಸಿ ಬೀಜದಂತೆ ಶಿವನು ಶಯ್ವರಿ ಕಂಡಾ ಅಯ್ಯಾ ಇಲ್ಲಿ ಒಮ್ಮೆಯೂ ಭೇದವಿಲ್ಲ ಕಪಿಲಸಿದ್ಧಮಲ್ಲಿನಾಥಯ್ಯನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->