ಅಥವಾ

ಒಟ್ಟು 39 ಕಡೆಗಳಲ್ಲಿ , 15 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವೆ ಪೀಠಿಕೆ ಪ್ರಾಣವೆ ಲಿಂಗವಾಗಿರಲು, ಬೇರೆ ಮತ್ತೆ ಕುರುಹೇಕಯ್ಯಾ? ಕುರುಹುವಿಡಿದು ಕೂಡುವ ನಿರವಯವುಂಟೆ? ಜಗದೊಳಗೆ. ನಷ್ಟವ ಕೈಯಲ್ಲಿ ಹಿಡಿದು ದೃಷ್ಟವ ಕಂಡೆಹೆನೆಂದಡೆ, ಕಪಿಲಸಿದ್ಧಮಲ್ಲಿನಾಥಯ್ಯನು ಸಾಧ್ಯವಹ ಪರಿಯ ಹೇಳಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ. ಈ ಕಾಣಬಾರದ ಘನವ ನಾನಾರ ಕೇಳಲಯ್ಯ! ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ. ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು, ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ, ಆ ಕಾಣಬಾರದ ಘನವ ಹೇಳಿದುದು ಇಲ್ಲ. ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ ! ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ, ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ, ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು, ತಾನೊಬ್ಬರಿಗೆ ಹೇಳಲು ಬಾರದು. ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ. ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು, ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ, ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು? ಆ ಲೋಕದಲ್ಲಿ ಹೋದರೇನು? ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಕಡಲೊಳಗಣ ಮೊಸಳೆಯ ನಡುವ ಹಿಡಿದು ಕಡೆಗೆ ಸಾರಿ ಹೋಹೆನೆಂಬವರುಂಟೆ ? ಜಗದೊಳಗೆ ಮಡದಿ ಮಕ್ಕಳು ಮಾತಾಪಿತರು ಬಾಂಧವರು, ಮಾಯಾಮೋಹಕ್ಕೆ ದಂದುಗವಿಡಿದು ನಡೆವ ತುಡುಗುಣಿಯ ಮನದಿಚ್ಫೆಗೆ ಹರಿದು, ಕಡೆಯಗಾಣದೆ, ಕರ್ಮದ ಕಡಲೊಳಗೆ ಮುಳುಗಿಹೋದರೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆರಾಧಿಸಿ ವಿರೋಧಿಸುವರೆ ? ಪೂಜಿಸಿ ಪೂಜೆಯ ಮರೆಯುವರೆ ? ಜಂಗಮಲಿಂಗವೆಂದರಿದವರು ಸಂಚ ತಪ್ಪುವರೆ ? ಗಾಳಿಯೂ ಗಂಧವೂ ಕೂಡಿದಂತೆ ಜಗದೊಳಗೆ ಇದೆ ! ಕೀರ್ತಿವಾರ್ತೆಯ ಹಡೆದೆಯಲ್ಲಾ ಬಸವಣ್ಣಾ. ನಿನ್ನ ಶಿಶುವಿನೊಡತಣ ತೆರಹುಮರಹ ಪ್ರಮಥರು ಮೆಚ್ಚುವರೆ ? ತಿಳಿದು ನೋಡುವಡೆ ಗುಹೇಶ್ವರನ ಶರಣ ಅಲ್ಲಯ್ಯಂಗೆ ನೀನು ಪರಮಾರಾಧ್ಯ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ, ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ, ಅಂಗನೆಯರ ಸಂಗವ ಮಾಡಿಹೆನೆಂಬಿರಿ. ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ ? ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ? ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ? ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ. ಒಡಲೊಳಗಿಲ್ಲ; ಹೊರಗಿಲ್ಲ, ಒಳಗಿಲ್ಲ. ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು ತನ್ನೊಳಗೆ ತಾನೆ ತನ್ಮಯವಾಗಿ ಇರುವುದ ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ. ಅದೆಂತೆಂದಡೆ : ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ, ಅಲೆನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನಬಣ್ಣದಂತೆ, ಸಿಪ್ಪೆಹಣ್ಣಿನಂತೆ, ಒಪ್ಪಚಿತ್ರದಂತೆ, ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಜಂಗಮವೆ ಜ್ಞಾನರೂಪು, ಭಕ್ತನೆ ಆಚಾರರೂಪವೆಂಬುದು ತಪ್ಪದು ನೋಡಯ್ಯಾ. ನಾನು ನಿಮ್ಮಲ್ಲಿ ಆಚಾರಿಯಾದಡೇನಯ್ಯಾ, ಜ್ಞಾನವಿಲ್ಲದನ್ನಕ್ಕರ ತಲೆಯಿಲ್ಲದ ಮುಂಡದಂತೆ. ಜ್ಞಾನ ಉದಯವಾಗದ ಮುನ್ನವೆ ತಲೆದೋರುವ ಆಚಾರವುಂಟೆ ಜಗದೊಳಗೆ ಜ್ಞಾನದಿಂದ ಆಚಾರ, ಜ್ಞಾನದಿಂದ ಅನುಭಾವ, ಜ್ಞಾನದಿಂದ ಪ್ರಸಾದವಲ್ಲದೆ, ಜ್ಞಾನವನುಳಿದು ತೋರುವ ಘನವ ಕಾಣೆನು. ಎನ್ನ ಆಚಾರಕ್ಕೆ ನೀನು ಜ್ಞಾನರೂಪಾದ ಕಾರಣ ಸಂಗನಬಸವಣ್ಣನೆಂಬ ಹೆಸರುವಡೆದೆನು. ಅನಾದಿ ಪರಶಿವನು ನೀನೆ ಆಗಿ, ಘನಚೈತನ್ಯಾತ್ಮಕನೆಂಬ ಮಹಾಜ್ಞಾನವು ನೀನೆ ಆದೆಯಲ್ಲದೆ, ನಾನೆತ್ತ, ಶಿವತತ್ತ್ವವೆತ್ತಯ್ಯಾ ಕೂಡಲಸಂಗಮದೇವರು ಸಾಕ್ಷಿಯಾಗಿ, ನಾನು ಪ್ರಭುದೇವರ ತೊತ್ತಿನ ಮಗನೆಂಬುದ ಮೂರು ಲೋಕವೆಲ್ಲವೂ ಬಲ್ಲುದು ಕಾಣಾ, ಪ್ರಭುವೆ.
--------------
ಬಸವಣ್ಣ
ಅಯ್ಯಾ, ಮರದೊಳಗೆ ಅಗ್ನಿ ಇದ್ದಡೇನಯ್ಯಾ, ಮಥನಿಸಿ ತೋರುವರಿಲ್ಲದನ್ನಕ್ಕರ ಕಾಣಬಹುದೆ ಜಗದೊಳಗೆ ಕೂಡೆ ಪರಿಪೂರ್ಣ ಶಿವನೆಂದಡೆ ಅಂತರಂಗದಲ್ಲಿ ಕಾಣಬಹುದೆ ಆದಿ ಲಿಂಗ ಅನಾದಿ ಶರಣನ ಭೇದವ ತಿಳುಹಿ, ನಿಜಪ್ರಾಣದೊಳಗಿಪ್ಪ ಸುಜ್ಞಾನಲಿಂಗವ ಕರಸ್ಥಲಕ್ಕೆ ತಂದು, ಆ ಕರಸ್ಥಲದ ಲಿಂಗವನೆನ್ನ ಸರ್ವಾಂಗದೊಳಗೆ ಪ್ರತಿಷಿ*ಸಿ ತೋರಿ, ನಿತ್ಯ ನಿಜಲಿಂಗೈಕ್ಯವಹ ಹೊಲಬಿನ ಹರಿಬ ತೋರಿ, ಮತ್ರ್ಯಲೋಕದೊಳಗೆಲ್ಲಾ ಇಂದು ಮೊದಲಾಗಿ ಪ್ರಾಣಲಿಂಗದ ಘನವ ಹರಹಿ ಶಿವಭಕ್ತಿಯನುದ್ಧರಿಸಿದನು. ಕೂಡಲಸಂಗಮದೇವರಲ್ಲಿ, ಚೆನ್ನಬಸವಣ್ಣನೆನ್ನನಾಗುಮಾಡಿ ಉಳುಹಿದನಾಗಿ ಇನ್ನು ಮತ್ರ್ಯಲೋಕಕ್ಕೆ ಬಂದಡೆ ಚೆನ್ನಬಸವಣ್ಣನ ಪಾದದಾಣೆ.
--------------
ಬಸವಣ್ಣ
ಜಗದೊಳಗೆ ಜಗ ಹುಟ್ಟಿ ಜಗಮಯವಾಗಿದ್ದುದ ಕಂಡೆನು. ಜಗವನಾಳುವ ದೊರೆ ರಾಕ್ಷಿಗವಿಯಲ್ಲಿ ಸಿಲ್ಕಿ, ಘಾಸಿಯಾಗುತಿರ್ದನು ನೋಡಾ. ಆ ರಾಕ್ಷಿ ಬ್ರಹ್ಮನ ಚರ್ಮವ ಹೊತ್ತು, ವಿಷ್ಣುವಿನ ರಕ್ತವ ಕುಡಿದು, ರುದ್ರನ ಭಸ್ಮವ ಮಾಡಿ, ಈಶ್ವರನ ಗಾಳಿಯಾಗಿ ಹಾರಿಸಿ, ಸದಾಶಿವನ ಆಕಾಶದ ಗುರಿಯನೆ[ಚ್ಚಿ] ಆಡುತಾಡುತ ಬಂದವಳು. ಅರಸಿನ ಪ್ರಜೆ-ಪರಿವಾರ, ಆನೆ-ಸೇನೆ ಎಲ್ಲವ ನುಂಗಿ ತೇಗಿ, ಜಗದೊಳಗಣ ಜಗ ಹಿರಿದಪ್ಪ ಜಗವಾಗಿ ಜಲದ ಕೊಣದಲ್ಲಿ ಹೊರಟು ದೃಷ್ಟವಾಗಿ ನಿಂದುದ ಕಂಡು ರಕ್ಷಿ ನಗುತಿದೆ. ಈ ಭೇದವ ಹಳೆಯ ಮನೆಯ ಸುಟ್ಟು ಹೊಸ ಮನೆಯಾದಲ್ಲಿ ಕಂಡೆ, ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು. ಗಮನವಿಲ್ಲದ ಪಿಕಶಿಶು ನುಡಿಯಲರಿಯದು. ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ. ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ ! ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ? ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ ? ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು. ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ;_ ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ. ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ. ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ ಎನಗೆ ತೋರದಿರಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ ? ಹಿರಿದು ಕಿರಿದೆಂದಲ್ಲಿ ಏನಾಯಿತ್ತು ? ಹಿರಿದು ಕಿರಿದೆಂಬ ಶಬ್ದವಡಗಿದರೆ, ಆತನೆ ಶರಣ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಾ ಕೇಳಿ, ನೋಡಿ, ಮುಟ್ಟಿ ಮನವರಿದ ಸುಖವ ಲಿಂಗಕ್ಕೆ ಕೊಡುವುದೆಂತೊ ಅಂಗ ಮನವೆಂಬವನು ? ಲಿಂಗದ ಪರಿಪೂರ್ಣವನು ಕಾಣದಿಹ ಅಂಗಹೀನರಿಗೇಕೆ ವ್ರತಾಚಾರದ ಹೊಲಬು ? ಜೀರ್ಣಪರ್ಣ_ರವಿರಶ್ಮಿ ಜ್ಞೇಯದಂತೆ (ನ್ಯಾಯದಂತೆ?) ಜಗದೊಳಗೆ ಏತರಲ್ಲಿಯೂ ಖಂಡಿತವಿಲ್ಲದೆ ಗುಹೇಶ್ವರನಿಪ್ಪ ಭಕ್ತದೇಹಿಕನಾಗಿ !
--------------
ಅಲ್ಲಮಪ್ರಭುದೇವರು
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು; ತುಂಬಿದ ಸಾಗರದೊಳಗೆ ನೋಡಯ್ಯ. ನಿಂದ ದೋಣಿಯನೇರಿದಂದಿನ ಹುಟ್ಟ ಕಂಡವರಂದವನರಿದಾತ ತೊಳಸುತ್ತಿದ್ದನು. ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೋಪ ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು. ಲೋಕದೊಳಗೆ ಜನನಸಂಗಬಾಧೆಯನು ತೊಡೆದವರಾರು ಹೇಳಾ? ಮೋಹ ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು; ಇಳೆಯೊಳಗೆ ತಾಪಸ್ಥಿತಿಸಂಗಬಾಧೆಯನು ತೊಡೆದವರಾರು ಹೇಳಾ? ಮರವೆಗಳಿಂದೊಗೆದ ಕುರುಹಿಂಗೆ ಬಾಹ್ಯಬಾಧೆಯನು ತೊಡೆದವರುಂಟು; ಜಗದೊಳಗೆ ಮರಣಸಂಗಬಾಧೆಯನು ತೊಡೆದವರಾರು ಹೇಳಾ? ಅಶನವ್ಯಸನವಿತ್ತುಗಳಿಂದೆ ಹಿರಿಯರೆನಿಸಬಹುದು, ಲೋಕದೊಳಗೆ ಕ್ರಿಯಾಜ್ಞಾನೈಶ್ವರ್ಯಗಳಿಂದೆ ಹಿರಿಯರೆನಿಸುವರಾರು ಹೇಳಾ, ಗುರುನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಗಂಭೀರದೊಳಗೆ ಜಗ ಹುಟ್ಟಿದಡೇನು, ಆ ಲಿಂಗದಿಂದ ಘನವೆ ಶಿವಲಿಂಗದೊಳಗೆ ಜಗ, ಜಗದೊಳಗೆ ಶಿವಲಿಂಗ, ಲೋಕಾದಿ ಲೋಕಂಗಳಿಗೆ ನೀನು ಭಕ್ತಿಯ ಕಂದೆರೆದು ತೋರಿದೆ, ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣಾ, ನಿನ್ನ ಶ್ರೀಪಾದಕ್ಕೆ ನಮೋ ನಮೋ ಎನುತ್ತಿರ್ದೆನು.
--------------
ಬಸವಣ್ಣ
ಇನ್ನಷ್ಟು ... -->