ಅಥವಾ

ಒಟ್ಟು 95 ಕಡೆಗಳಲ್ಲಿ , 39 ವಚನಕಾರರು , 85 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಬಹುಮಾತಿನ ಮಾಲೆ. ಸ್ಥಾಣುವ ತಿರುಗುವ ಪಶುವಿನಂತೆ, ವೇಣುವ ಹಿಡಿದ ಶುಕನಂತೆ, ಅದು ಪ್ರಾಣಕ್ಕೆ ಬಂದಾಗ ಅರಿದ ಇರವು. ಭಾಳಲೋಚನರಿಗೆ ಹೀಗಾಯಿತ್ತು. ಅರ್ಕೇಶ್ವರಲಿಂಗವನರಿವರಿನ್ನಾರು ?
--------------
ಮಧುವಯ್ಯ
ಪ್ರಾಣ ಲಿಂಗಕ್ಕೆ ಆಗಿ, ಲಿಂಗ ಪ್ರಾಣಕ್ಕೆ ಆಗಿ, ಆಚಾರ ಅನುಭಾವ ದ್ವಿವಿಧ ಸನುಮತವಾಗಿ, ತನು ಪ್ರಸಾದಕ್ಕೆಯಾಗಿ ಪ್ರಸಾದ ತನುವಿಂಗಾಗಿ, ಶರೀರಪ್ರೇಮದಿಂ ಸರ್ವಾಂಗ (ಲಿಂಗ) ನೋಡಾ. ಬಂದುದೆ ಓಗರ ನಿಂದುದೆ ಪ್ರಸಾದ. ಅಲ್ಲಿ ನಿತ್ಯನಿರಂತರ ಸಾವಧಾನಿ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು ಪ್ರಾಣಕ್ಕೆ ಪ್ರಾಣಲಿಂಗದ ಸಮ್ಯಕ್‍ಜ್ಞಾನಾಚಾರವ ಸಂಬಂದ್ಥಿಸಿ, ಅಂಗಲಿಂಗವೆಂಬ ಬ್ಥಿನ್ನಭಾವವಳಿದು ಒಳಹೊರಗೆಲ್ಲ ಅಖಂಡಜ್ಞಾನ ಸತ್‍ಕ್ರಿಯಾಚಾರಮಯವಾದ ಶರಣಂಗೆ ವಾರ ತಿಥಿ ಲಗ್ನ ವಿಘ್ನಂಗಳಿಲ್ಲ, ಶುಭಾಶುಭಂಗಳಿಲ್ಲ, ಸ್ತುತಿನಿಂದೆಗಳಿಲ್ಲ, ಪೂಜ್ಯಾಪೂಜ್ಯಂಗಳಿಲ್ಲವಾಗಿ, ಅಖಂಡೇಶ್ವರಾ, ನಿಮ್ಮ ಶರಣ ಎಂತಿರ್ದಂತೆ ಸಹಜಬ್ರಹ್ಮವೆ ಆಗಿರ್ಪನು.
--------------
ಷಣ್ಮುಖಸ್ವಾಮಿ
ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಕಂಗಳಿಗ ಮಂಗಳವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ತನುವಿಂಗೆ ತರಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಗಮ್ಯ ಅಗೋಚರನಾದ ಅಖಂಡೇಶ್ವರನೆಂಬ ಲಿಂಗಯ್ಯನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು. ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು. ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ? ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ? ಇಂತೀ ಉಭಯದೊಳಗನರಿತು, ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ತನು ಹೊರಗಿರಲು, ಪ್ರಸಾದ ಒಳಗಿರಲು ಏನಯ್ಯಾ ನಿಮ್ಮ ಮನಕ್ಕೆ ಮನ ನಾಚದು? ಪ್ರಾಣಕ್ಕೆ ಲಿಂಗದಲ್ಲಿ ಪ್ರಸಾದವ ಕೊಂಡಡೆ, ವ್ರತಕ್ಕೆ ಭಂಗ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬೆಟ್ಟವ ನೆಮ್ಮಿದಡೆ ಕಟ್ಟಿಗೆಯ ತಾಳುವದು, ಅದಾವ ಅಚ್ಚರಿ ಎನಿಸುವದು ? ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವದು, ಅದಾವ ಅಚ್ಚರಿ ಎಂದೆನಿಸುವದು ? ಪರಕಾಯವ ತೊಟ್ಟಿರ್ದಲ್ಲಿ ಅಚ್ಚರಿಗೆ ಅರಿಬಿರಿದೇಕೆ ? ನಿಮ್ಮುವ ಕಾರುಣ್ಯವನಾಗಿರ್ದಲ್ಲಿ ಎನಗೆಲ್ಲೆಲ್ಲಿ ಸುಖವಲ್ಲಲ್ಲಿಯೂ ನೀವೆ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುದೇವಯ್ಯಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಆನು ಬದುಕಿದೆನು ಕಾಣಾ, ಸಂಗನಬಸವಣ್ಣ.
--------------
ಮರುಳಶಂಕರದೇವ
ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು, ತನ್ನಂತರಂಗ ಬಹಿರಂಗದ ಸಂದುಸಂಶಯವ ಪರಿಹರಿಸಿ, ನಿಶ್ಚಿಂತನಾಗಿ ನಿಜದಲ್ಲಿ ನಿಂದು, ಅಂಗಕ್ಕಾಚಾರವ ಸಂಬಂಧಿಸಿ, ಮನಕ್ಕೆ ಅರಿವಿನಾಚರಣೆಯ ನೆಲೆಗೊಳಿಸಿ, ಆತ್ಮಂಗೆ ಸತ್ಕಿøಯಾ ಸಮ್ಯಕ್‍ಜ್ಞಾನವ ಬೋಧಿಸಿ, ಪ್ರಾಣಕ್ಕೆ ಲಿಂಗಮಂತ್ರಧಾರಣವ ಮಾಡಿ, ಜೀವ ಪರಮರಿಗೆ ಚಿದ್ಘನಪಾದೋದಕಸಾದಭೋಗವನಿತ್ತು, ಅವಕ್ಕೆ ತಾನಾಶ್ರಯನಾಗಿ, ತನ್ನ ನಿಜದಲ್ಲಿ ನಿಂದು ನೋಡಬಲ್ಲಾತನೆ ಶಿವಯೋಗಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಒಡಲಿಲ್ಲದೆ ಆತ್ಮನಿರಬಲ್ಲುದೆ? ಕ್ರೀಯಿಲ್ಲದೆ ಸತ್ಯ ನಿಲಬಲ್ಲುದೆ? ಭಾವವಿಲ್ಲದೆ ವಸ್ತು ಈಡಪ್ಪುದೆ? ಒಂದರಾಸೆಯಲ್ಲಿ ಒಂದ ಕಂಡು, ದ್ವಂದ್ವನೊಂದು ಮಾಡಿ, ಒಂದೆಂಬುದನರಿತು, ಪ್ರಾಣಕ್ಕೆ ಸಂಬಂಧವ ಮಾಡಿ, ಕೂಡಿಯಿದ್ದುದು ಪ್ರಾಣಲಿಂಗ. ಆ ಉಭಯದ ಸಂದಳಿದುದು, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಲಿಂಗಜಂಗಮ ಒಂದೆಂದರಿಯದೆ ಲಿಂಗಜಂಗಮವ ಭಿನ್ನವಿಟ್ಟು ಅರ್ಚಿಸುವರು. ಅದೆಂತೆಂದಡೆ: ದೇಹಕ್ಕೆ ಪ್ರಾಣಕ್ಕೆ ಭೇದ ಉಂಟೆ? ಬೀಜ ವೃಕ್ಷಕ್ಕೆ ಭೇದವುಂಟೆ? ಜ್ಯೋತಿ ಪ್ರಭೆಗೆ ಭೇದ ಉಂಟೆ? ಹಾಗೆ ಲಿಂಗಜಂಗಮಕ್ಕೆ ಭೇದವಿಲ್ಲ. ಅದೇನು ಕಾರಣವೆಂದಡೆ: ಲಿಂಗವೇ ಅಂಗ, ಜಂಗಮವೇ ಪ್ರಾಣ. ಲಿಂಗವೇ ಬೀಜ, ಜಂಗಮವೇ ವೃಕ್ಷ. ಲಿಂಗವೇ ಜ್ಯೋತಿ, ಜಂಗಮವೇ ಪ್ರಕಾಶ. ಇಂತೀ ನಿರ್ಣಯವ ತಿಳಿದರೆ ಪ್ರಾಣಲಿಂಗಿ, ತಿಳಿಯದಿದ್ದರೆ ಜಡಲಿಂಗಿಗಳೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಧಾರದಲ್ಲಿ ಆಚಾರಲಿಂಗಕ್ಕೆ ಗೃಹಸ್ಥದಳವೇ ಸ್ಥಾನವು, ಸ್ವಾಧಿಷಾ*ನದಲ್ಲಿ ಗುರುಲಿಂಗಕ್ಕೆ ಅಧ್ಯಾಪನದಳವೇ ಸ್ಥಾನವು, ಮಣಿಪೂರಕದಲ್ಲಿ ಶಿವಲಿಂಗಕ್ಕೆ ನೇತ್ರದಳವೇ ಸ್ಥಾನವು. ಇದು ರೂಪನಿಷ*ಮಾಗಿರ್ಪುದರಿಂ ಅಂತಪ್ಪ ರೂಪವೇ ಸದ್ರೂಪಮಾದ ಶಕ್ತಿಯು, ಅಂತಪ್ಪ ಸದ್ರೂಪಸಂಸರ್ಗದಿಂ ತಮೋಮಧ್ಯದಲ್ಲಿದ್ದು ಗ್ರಹಿಸುವುದರಿಂ ನೇತ್ರಮಧ್ಯದಲ್ಲಿರ್ಪ ನೀಲಿಮಕ್ಕೆ ತಾರಕವೆಂದು ಹೆಸರು, ಅದೇ ಶಿವನಿರುವ ಸ್ಥಾನಮಾದುದರಿಂ ನೇತ್ರೇಂದ್ರಿಯವೇ ಪ್ರಧಾನಮಾಯಿತ್ತು. ಆ ಈಶ್ವರನ ನಿಜಸ್ಥಾನವೇ ತಾರಕವು. ಅನಾಹತದಲ್ಲಿ ಜಂಗಮಲಿಂಗಕ್ಕೆ ತನುದಳವೇ ಸ್ಥಾನವು, ವಿಶುದ್ಧದಲ್ಲಿ ಪ್ರಸಾದಲಿಂಗಕ್ಕೆ ಪ್ರಮಾಣದಳವೇ ಸ್ಥಾನವು, ಆಜ್ಞೇಯದಲ್ಲಿ ಮಹಾಲಿಂಗಕ್ಕೆ ಪ್ರಾಣದಳವೇ ಸ್ಥಾನವು. ಪ್ರಾಣದಲ್ಲಿ ಹಂಕಾರವೇ ಬೀಜವು, ಪ್ರಮಾಣದಲ್ಲಿ ಅಕಾರವೇ ಬೀಜವು, ತನುವಿನಲ್ಲಿ ಕಕಾರವೇ ಬೀಜವು, ನೇತ್ರದಲ್ಲಿ `ಣ'ಕಾರವೇ ಬೀಜವು, ಅಧ್ಯಾಪನದಲ್ಲಿ ಯಕಾರವೇ ಬೀಜವು, ಗೃಹಸ್ಥದಲ್ಲಿ ವಕಾರವೇ ಬೀಜವು. ವಿಶುದ್ಧಾಜ್ಞೇಯಗಳಲ್ಲಿರ್ಪ `ಅಹಂ'ಕಾರಗಳೇ ಕಾರಣ, ಅದು ವಿಪರೀತಿಸಿ ಅನಾಹತಮಣಿಪೂರಕಗಳಲ್ಲಿರ್ಪ `ಕಣ'ವೇ ಸೂಕ್ಷ್ಮ, ಸ್ವಾಧಿಷಾ*ನಾಧಾರಗಳಲ್ಲಿರ್ಪ `ಯಶ'ವೇ ಸ್ಥೂಲ. ಕಾರಣರೂಪಮಾದ `ಅಹಂ'ಕಾರವೇ ಜೀವನು, ಶೋಭನರೂಪಮಾಗಿ ಅವಧಿಯಿಲ್ಲದೆ ಗಮಿಸುತ್ತಿರ್ಪ `ಕಣ'ವೇ ಬಿಂದು, ಗೃಹಸ್ಥಸ್ಥಾನದಲ್ಲಿ ಆಚಾರಮುಖದಲ್ಲಿ ದೊಡ್ಡಿತ್ತಾಗಿಹುದೇ ಯಶ, ಮಹದ್ಬೀಜವೇ ಪ್ರಾಣ, ಅದಕ್ಕೆ ಪ್ರಾಣವೇ ತನು, ಆ ತನುವಿಗೆ ನೇತ್ರವೇ ಪ್ರಧಾನ, ಅದಕ್ಕುಪದೇಶವೇ ಪರಿಶುದ್ಧಿ, ಗೃಹಸ್ಥಧರ್ಮವೇ ಆ ಶರೀರಕ್ಕೆ ಪ್ರಕಾಶವು. ಅಹಂಕಾರರೂಪಮಾದ ಜೀವನಿಗೆ ಇಷ್ಟರೂಪಮಾದ `ಕ್ಷ' ಕಾರವೇ ಸಂಹಾರ, ಆ `ಹ'ಕಾರರೂಪಮಾದ ಪ್ರಾಣಕ್ಕೆ ವಿಸರ್ಗರೂಪಮಾದ ನಿಗ್ರಹಸ್ಥಾನವೇ ಸಂಹಾರ, `ಶ'ಕಾರರೂಪಮಾದ ತನುವಿಗೆ `ಠ'ಕಾರರೂಪಮಾದ ವ್ಯಯವೇ ಸಂಹಾರ, `ಣ'ಕಾರರೂಪಮಾದ ನೇತ್ರಕ್ಕೆ `ಪ'ಕಾರರೂಪಮಾದ ಗೋಪ್ಯವೇ ಸಂಹಾರ, `ಯ'ಕಾರರೂಪಮಾದ ಅಧ್ಯಾಪನೆಗೆ `ಲ'ಕಾರರೂಪಮಾದ ಪರಿಗ್ರಹವೇ ಸಂಹಾರ, `ಶ'ಕಾರರೂಪಮಾದ ಗೃಹಸ್ಥಕ್ಕೆ `ಸ'ಕಾರರೂಪಮಾದ ಸಂನ್ಯಾಸವೇ ಸಂಹಾರ. ಅಂತಪ್ಪ ಸಂನ್ಯಾಸವೇ ತೂರ್ಯ, ಅಂತಪ್ಪ ತೂರ್ಯದಲ್ಲಿ ಜೀವನ್ಮುಕ್ತಿಯಪ್ಪ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದು ಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ. ನಿಷೆ* ನಿಬ್ಬೆರಸಿ ಗಟ್ಟಿಗೊಂಡು ಅಭಿಲಾಷೆಯ ಸೊಮ್ಮು ಸಮನಿಸದೆ ಪರಿಚ್ಛೇದ ಬುದ್ಧಿಯು?್ಳಲ್ಲಿ ಮಾಹೇಶ್ವರ. ಅನರ್ಪಿತ ಸಮನಿಸದೆ ಬಂದುದ ಕಾಯದ ಕರಣದ ಕೈಯಲು ಕೊಟ್ಟು, ಲಿಂಗಸಹಿತ ಭೋಗಿಸುವಲ್ಲಿ ಪ್ರಸಾದಿ. ಪ್ರಾಣಕ್ಕೆ ಪ್ರಾಣವಾಗಿ ಇದ್ದು ಕಾಯಸ್ಥಿತಿಯರಿದು ಎಚ್ಚರಿಕೆಗುಂದದಿಪ್ಪಲ್ಲಿ, ಪ್ರಾಣಲಿಂಗಸಂಬಂಧಿ. ತನಗೆ ಲಿಂಗವಾಗಿ, ಲಿಂಗಕ್ಕೆ ತಾನಾಗಿ ಬೆಚ್ಚು ಬೇರಿಲ್ಲದ ಬೆಡಗಿನ ಒಲುಮೆಯಲ್ಲಿ ಶರಣ. ಸದಾಚಾರ ಸಂಪತ್ತಿನಲ್ಲಿ ಬಂದ ಅನುಭಾವವ ಮೀರಿ ಹೆಸರಡಗಿದ ಸುಖವದು ಲಿಂಗೈಕ್ಯ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಬಸವಣ್ಣಂಗಲ್ಲದೆ ಷಡುಸ್ಥಲವಪೂರ್ವ.
--------------
ಚನ್ನಬಸವಣ್ಣ
ಅಂಗಕ್ಕೆ ಅಷ್ಟಾವರಣ, ಮನಕ್ಕೆ ಮಂತ್ರ, ಪ್ರಾಣಕ್ಕೆ ಪಂಚಾಚಾರ, ಭಾವಕ್ಕೆ ಅರಿವುಸಂಬಂಧವಾದ ಭಕ್ತ ಎಂತು ನಡೆದಂತೆ ಸಂತು, ಹಿಂದುಮುಂದೆಂಬ ಸಂದೇಹಿಗಳ ಮಾತು ಹಿಂದಕೆ ಸರಿ. ಗುರುನಿರಂಜನ ಚನ್ನಬಸವಲಿಂಗದಂಗವಾದ ಅಗಮ್ಯರಿಗೆ ಅಂತಿಂತೆನ್ನಲಾಗದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಆಸೆ, ಬಹಿರಂಗದಲ್ಲಿ ಕ್ರೋಧ, ಭಾವಕ್ಕೆ ವೇಷ. ಪ್ರಾಣಕ್ಕೆ ರೋಷ, ಕಾಮಕ್ಕೆ ಮದ. ಇಂತಿವನಿಂಬಿಟ್ಟುಕೊಂಡು ನಾವು ಜಂಗಮವೆಂದು ಸುಳಿದರೆ, ಹೇಯವಿಲ್ಲದ ಭಕ್ತರು ವೇಷವ ಕಂಡು ಪೂಜೆಯ ಮಾಡಿದರೆ, ಅಶನಕ್ಕೆ ಅನ್ನವನಿಕ್ಕಿದರೆ, ಶೀತಕ್ಕೆ ರಗಟೆಯ ಕೊಟ್ಟರೆ, ಅವರಿಗದು ಸಹಜ. ನಿಮ್ಮ ನೀವು ನೋಡಲಿಲ್ಲವೆ ? ನಾವು ದೇವರಾದೆವೆಂದು ವಿಚಾರಿಸಿ ನೋಡಿ, ಉಭಯವ ಮೆಟ್ಟಿನಿಂದು, ಅಭವನೆಂಬ ಹೆಸರಿಗೆ ಸಂದವರಿಗೆ ಸುಲಭದಿಂದ ಜಗವೆಲ್ಲವು ನಮೋ ನಮೋ ಎಂಬುದು. ಬಸವಪ್ರಿಯ ಕೂಡಲಚೆನ್ನಬಸವಣ್ಣಾ, ಈ ಉಭಯದ ಭೇದವ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->