ಅಥವಾ

ಒಟ್ಟು 41 ಕಡೆಗಳಲ್ಲಿ , 13 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಬಿದ್ದಿತು, ಲಿಂಗ ಬಿದ್ದಿತೆಂಬರಯ್ಯಾ. ಲಿಂಗ ಬೀಳಿಲು ಬಲ್ಲುದೆ ? ಭೂಮಿ ತಾಳಲು ಬಲ್ಲುದೆ ? ಕಮ್ಮಾರ ಕಡೆದು ಮಾರಿದ, ಬೋಗಾರ ತಂದು ಮಾರಿದ, ಗುರು ಕೊಂಡು ಮಾರಿದ ಈ ಲಿಂಗ ಬಿದ್ದಡೆ ಸಮಾಧಿಯುಂಟೆ ? ಲಿಂಗವ ಕಟ್ಟಿದ ಗುರು ಸತ್ತಡೆ ಸಮಾಧಿಯನೇಕೆ ಕೊಳ್ಳರೊ ಕೂಡಲಚೆನ್ನಸಂಗಮದೇವಾ ?
--------------
ಚನ್ನಬಸವಣ್ಣ
ಕತ್ತೆ, ಕರ್ಪುರವ ಬಲ್ಲುದೆ ? ನಾಗ, ನಾಣ್ಣುಡಿಯ ಬಲ್ಲುದೆ ? ನಾಯಿ, ಸುಭಕ್ಷ್ಯವ ಬಲ್ಲದೆ ? ಮಕ್ಷಿಕ, ಗಂಧವ ಬಲ್ಲುದೆ ? ಹುಟ್ಟುಗೊಡ್ಡು, ಮಕ್ಕಳ ಗರ್ಭವ ಬಲ್ಲುದೆ ? ಜಗದಲ್ಲಿ ಹೊತ್ತುಹೊರುವ ಮಿಥ್ಯವಂತರಿಗೆ ತತ್ವದ ಶುದ್ಧಿಯ ಹೇಳಿದಡೆ, ನಿತ್ಯರುದ್ರನಾದಡೂ ತಪ್ಪದು ನರಕ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ ? ಅಟ್ಟುಣ್ಣಬಾರದ ಮಡಕೆ ಇರ್ದಡೇನಯ್ಯಾ ಮನೆಯೊಳಗೆ ? ಶಿವ ನಿಮ್ಮ ಮುಟ್ಟದ ಮನವಿರ್ದಡೇನಯ್ಯಾ ತನುನಿನೊಳಗೆ ? ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ? ಬಚ್ಚಲೊಳಗಣ ಬಾಲ್ಪುಳು ಬಲ್ಲುದೆ ನಿಚ್ಚಳದ ನೀರಸುಖವ ? ನಿಚ್ಚನಿಚ್ಚಲೋದುವ ಗಿಳಿ ಬಲ್ಲುದೆ ತನಗೆ ಬಹ ಬೆಕ್ಕಿನ ಬಾಧೆಯ ? ಹುಚ್ಚುಕೊಂಡ ನಾಯಿ ಬಲ್ಲುದೆ ತನ್ನ ಸಾಕಿದೊಡೆಯನ ? ಇದು ಕಾರಣ, ಒಡಲ ಪಡೆದಡೇನು ? ಮಡದಿಯ ನೆರಹಿದಡೇನು ? ಒಡವೆಯ ಗಳಿಸಿದಡೇನು ? ಶಿವನೆ ನಿಮ್ಮನರಿಯದ ಮನುಜನ ಒಡಲೆಂಬುದು, ಹೊಲೆಜೋಗಿಯ ಕೈಯ ಒಡೆದ ಸೋರೆಯಂತೆ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ವೇದ ನಾಲ್ಕನು ಓದಿದಡೇನು ? ಶಾಸ್ತ್ರವ ನೆರೆ ಕೇಳಿದಡೇನು ? ಶಿವಜ್ಞಾನಹೀನರು ಬಲ್ಲರೆ ಭಕ್ತಿಯ ಪಥವನು ? ಅಲೋಡ್ಯಂ ಚ ಚತುರ್ವೇದೀ ಸರ್ವಶಾಸ್ತ್ರವಿಶಾರದಃ | ಶಿವತತ್ವಂ ನ ಜಾನಾತಿ ದರ್ವೀ ಪಾಕರಸಂ ಯಥಾ || ಕ್ಷೀರದೊಳಗಣ ಸಟ್ಟುಗ ಸವಿಸ್ವಾದುಗಳ ಬಲ್ಲುದೆ ? ಓದಿದ ನಿರ್ಣಯವ ನಮ್ಮ ಮಾದಾರ ಚೆನ್ನಯ್ಯ, ಮಡಿವಾಳಯ್ಯ, ಡೋಹರ ಕಕ್ಕಯ್ಯನವರು ಬಲ್ಲರು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಹೊಟ್ಟೆಯ ಹೊರೆವ ಪಶು, ಕಟ್ಟಿ ಕೊಲ್ಲುವುದ ಬಲ್ಲುದೆ ? ಕಷ್ಟಜೀವಗಳ್ಳರು; ಕರ್ತುವಿನ ವೇಷವ ತೊಟ್ಟು ಕತ್ತೆಯಂತೆ ತಿರುಗುವ ಕಳ್ಳರನೊಲ್ಲ ಅಮುಗೇಶ್ವರಲಿಂಗವು.
--------------
ಅಮುಗೆ ರಾಯಮ್ಮ
ಅಮೃತ ಸಾರವ ಬಲ್ಲುದೆ ? ಶಾಖೆ ಫಲವ ಬಲ್ಲುದೆ ? ನಿರ್ಜಾತರ ಜಾತ ಬಲ್ಲನೆ ? ಅವನೇತಕ್ಕೂ ಸಿಕ್ಕ ಅರಿಯದವರಾಸೆಗೆ ಸಿಕ್ಕುವ, ಇದು ಭಾಷೆ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಸುಡುವಗ್ನಿ ಕಾಷ*ದಿರದ ಬಲ್ಲುದೆ ಅಯ್ಯಾ? ಕೊರೆದು ಹರಿವ ಉದಕ ಗಿರಿಯ ಗರ್ವವ ಬಲ್ಲುದೆ ಅಯ್ಯಾ ಮುರಿದು ತಿಂಬ ತೋಳ ಕುರಿಯ ಮರಿಯ ಬೇನೆಯ ಬಲ್ಲುದೆ? ಅಯ್ಯಾ ತನ್ನವಸರಕ್ಕೆ ಆರನಾದರೂ ಸಾಧಿಸಿ ಭೇದಿಸಿ ಕೊಂಬೆ ತಿಂಬೆನೆಂಬವ ಅಸತ್ಯ ಸುಸತ್ಯದ ಕುರುಹ ಬಲ್ಲನೆ? ಸತ್ಯದ ಕುರುಹನರಿಯನಾಗಿ ಶಿವಭಕ್ತಿಯನೆಂತರಿವನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->