ಅಥವಾ

ಒಟ್ಟು 159 ಕಡೆಗಳಲ್ಲಿ , 49 ವಚನಕಾರರು , 143 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಜತತ್ವದ ನಿರ್ವಯಲು ನಿರ್ವಾಹವಾಯಿತ್ತು. ನೆನೆವರ ಪರುಷ ಘನವನೊಡಗಲಿಸಿತ್ತು. ಭಕ್ತರ ಭಾಗ್ಯ ಮುಕ್ತಿಯನೈದಿತ್ತು. ಬಸವಣ್ಣ ಚನ್ನಬಸವಣ್ಣನ ಮಾಮನೆಯಲ್ಲಿ, ಮಹಾದಾನಿ ಸೊಡ್ಡಳನ ಶರಣ ಪ್ರಭುದೇವರು ನಿರವಯ ಬೆರಸಲೊಡನೆ, ಸತ್ಯಲೋಕದ ಬಾಗಿಲ ಕದವು ತೆರೆಯಿತ್ತು.
--------------
ಸೊಡ್ಡಳ ಬಾಚರಸ
ಮಹಾವಾಯುವಂ ಪಿಡಿದು ಬಹುಮೂಲಜ್ವಾಲೆಯನೆಬ್ಬಿಸಿ, ಮೇಲಣ ಬಯಲ ಬಾಗಿಲ ತೆಗೆದು ಒಳಹೊಕ್ಕು ಮಹಾಜ್ಯೋತಿರ್ಮಯಲಿಂಗದಲ್ಲಿ ಬಯಲಾದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಕುಲಸೂತಕವ ಕಳೆದಾತ ಬಸವಣ್ಣ. ಎನ್ನ ಛಲಸೂತಕವ ಕಳೆದಾತ ಬಸವಣ್ಣ. ಎನ್ನ ತನುಸೂತಕವ ಕಳೆದಾತ ಬಸವಣ್ಣ. ಎನ್ನ ಮನಸೂತಕವ ಕಳೆದಾತ ಬಸವಣ್ಣ. ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ. ಎನ್ನ ಭಾವಸೂತಕವ ಕಳೆದಾತ ಬಸವಣ್ಣ. ಎನ್ನ ಅರುಹುಮರಹಿನ ಸಂದುಸಂಶಯವಬಿಡಿಸಿದಾತ ಬಸವಣ್ಣ. ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ. ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ. ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ. ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ ನಿಜನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.
--------------
ನಾಗಲಾಂಬಿಕೆ
ಭಕ್ತನಾದ ಮತ್ತೆ ಬಂಧಗಳ ಬಿಡಬೇಕು. ವಿರಕ್ತನಾದ ಮತ್ತೆ ಧರಿತ್ರಿಯಲ್ಲಿ ಸುಖಕ್ಕೆ ಸಿಕ್ಕಿ ಮತ್ತನಾಗದಿರಬೇಕು. ಇಕ್ಕುವರ ಬಾಗಿಲ ಕಾಯದೆ, ಸುಚಿತ್ತದಿಂದ ಬಂದ ಬ್ಥಿಕ್ಷವ ಕೊಂಡು, ಅನಿತ್ಯವ ಮರೆದು, ಸತ್ತುಚಿತ್ತಾನಂದ ಭಕ್ತ ಜಂಗಮಕ್ಕೆ ನಿತ್ಯ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ. ಉಕ್ಕುದನಿಕ್ಕಿದಲ್ಲಿ ಅವನ ಅರ್ಥಪ್ರಾಣ ಅಬ್ಥಿಮಾನಕ್ಕೆ ತಪ್ಪುವನಾದಡೆ ಕರ್ತೃತ್ವ ಮೊದಲೆ ಕೆಟ್ಟಿತ್ತು, ಜಂಬುಕಫಲದ ನೇಮವ ಹಿಡಿದಂತಾಯಿತ್ತು, ಅದರಂಗವ ಕಂಡು ನಿಂದಿಸಿದ ಭಕ್ತಂಗೆ. ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ. ನೆರೆ ನಂಬು ಏನ ಹಿಡಿದಲ್ಲಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಆವಾವ ಪರಿಯಲ್ಲಿ ಆವಾವ ಭಾವದಲ್ಲಿ ಗುರುಲಿಂಗಜಂಗಮಕ್ಕೆ ದಾಸೋಹವ ಮಾಡಿಹೆನೆಂಬ, ಕೂಡಿಹೆನೆಂಬ ಸದ್ಭಕ್ತರ ಬಾಗಿಲ ತೋರಿ ಬದುಕಿಸಯ್ಯಾ. ಎಲ್ಲವನೊಪ್ಪಿ `ಲಿಂಗಜಂಗಮವೆನ್ನ ಪ್ರಾಣೇಶ್ವರ' ಎಂಬ ಮಹಾಪುರಾತನರ ಪಾದರಕ್ಷೆಯ ಹೊತ್ತಿರಿಸೆನ್ನನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಯದ ಕಕ್ಕುಲತೆಗಾಗಿ ಜೀವಿಗಳ ಬಾಗಿಲ ಕಾಯದೆ, ಈಷಣತ್ರಯಕ್ಕಾಗಿ ಭವದುಃಖಿಗಳ ಬಾಗಿಲಲ್ಲಿ ನಿಂದು ವೇಳೆಯ ಕಾವಂಗೆ ಭಾವರಹಿತ ಬ್ರಹ್ಮವೇಕೆ? ಅದು ನಾಣ್ನುಡಿಗಳೊಳಗು, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಕಾಯವೆಂಬ ಪಟ್ಟಣಕ್ಕೆ ಅಕಾಯನಿತ್ಯನೆಂಬರಸು ಕ್ಷಮೆ ದಮೆ ತಿತಿಕ್ಷೆ ಶಾಂತಿ ಉಪರತಿ ಸುಮನ ನಿರಹಂಕಾರಗಳೆಂಬ ಪರಿವಾರ. ಆ ಪಟ್ಟಣದ ಹೊರ ಒಳಯಕ್ಕೆ ಒಂಬತ್ತು ಬಾಗಿಲು. ಮಧ್ಯ ಒಳಯಕ್ಕೆ ನಾಲ್ಕು ಬಾಗಿಲು. ಆ ಅರಸಿನರಮನೆಯ ಸ್ವಯಂಭುನಾಥನ ಗರ್ಭಗೃಹಕ್ಕೆ ಎರಡು ಬಾಗಿಲು. ಮೇಲುಶಿಖರದಲೊಂದು ಬಾಗಿಲು ಉರಿಯನುಗುಳುವರು. ಆ ಪಟ್ಟಣದ ಅರಸು ಸ್ವಯಂಭುನಾಥನಿಗೆ ನಿತ್ಯ ನೇಮವ ಮಾಡಲೆಂದು ಗರ್ಭಗೃಹವ ಹೊಗಲೊಡನೆ ಆತನ ಕೈವಿಡಿದು ಉಭಯ ಬಾಗಿಲ ಹೊಕ್ಕು ಹೋಗಿ ಉಭಯ ನಿರ್ವಯಲಾದ ನಿಲವನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಒಂದಾದ ಲಿಂಗೈಕ್ಯವನು?
--------------
ಸ್ವತಂತ್ರ ಸಿದ್ಧಲಿಂಗ
ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
--------------
ಸೊಡ್ಡಳ ಬಾಚರಸ
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ನಾನು ನಿಮ್ಮೊಡನೆ ನುಡಿವೆ ನುಡಿಯಲಂಜುವೆನಯ್ಯ. ಲಿಂಗದ ವಿನೋದಾರ್ಥವಾಗಿ ಗಮನವಂಕುರಿಸಿ ಒಂದಾದೊಂದು ದೆಸೆಗೆ ಹೋಗುತ್ತಿಪ್ಪಾಗ ಅರಣ್ಯಮಧ್ಯದಲ್ಲಿ ಹಸಿವೆದ್ದು ತನುವನಂಡಲೆವುತ್ತಿರುವಲ್ಲಿ ತೃಷೆಯೆದ್ದು ಮನವ ಮತಿಗೆಡಿಸಿ ಹಲ್ಲುಹತ್ತಿ ನಾಲಿಗೆ ಕರ್ರಗಾಗಿ ಮೂರ್ಛೆಯಾಗುತ್ತಿರಲು ಆ ಸಮಯದಲ್ಲಿ ಖರ್ಜೂರ ಮಾವು ಜಂಬುನೇರಳೆ ಮೊದಲಾದ ಎಲ್ಲಾ ಫಲಂಗಳು ಜೀವನ್ಮುಕ್ತಿಯೆಂಬ ಸಂಜೀವನರಸವ ತುಂಬಿಕೊಂಡು ವೃಕ್ಷಂಗಳಡಿಯಲ್ಲಿ ಬಿದ್ದಿರಲು ಕಣ್ಣಿನಲ್ಲಿ ನೋಡಿ ಮನದಲ್ಲಿ ಬಯಸಿ ಕೈಮುಟ್ಟಿ ಎತ್ತಿದೆನಾದರೆ ಎನ್ನ ವಿರಕ್ತಿಯೆಂಬ ಪತಿವ್ರತಾಭಾವಕ್ಕೆ ಅದೇ ಹಾನಿ ನೋಡಾ. ಅದೇನು ಕಾರಣವೆಂದೊಡೆ `ಅಂಗಭೋಗ ಅನರ್ಪಿತ ಲಿಂಗಭೋಗ ಪ್ರಸಾದ'ವೆಂದು ಆದ್ಯರ ವಚನ ಸಾರುತೈದಾವೆ ನೋಡಾ. ಇದು ಕಾರಣ- ಅನರ್ಪಿತವ ಭುಂಜಿಸಿ ತನುವ ರಕ್ಷಣೆಯ ಮಾಡಿ ಶ್ವಾನನ ಬಸುರಲ್ಲಿ ಬಂದು ಹೊಲೆಯರ ಬಾಗಿಲ ಕಾಯ್ದು ಹಲವು ಆಹಾರವನುಂಡು ನರಕಕ್ಕಿಳಿಯಲಾರದೆ ಮುಂದನರಿಯದೆ ನುಡಿದೆನಯ್ಯ. ಸತಿಯ ಭಾಷೆ ಪತಿಗೆ ತಪ್ಪದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆ [ಆಜ್ಞಾಚಕ್ರದ] ದ್ವಿದಳಪದ್ಮವ ಹೊಕ್ಕು ನೋಡಿ ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಜೀವ ಪರಮರಂ ಏಕೀಕರಿಸಿ ಅಲ್ಲಿ ಮಾಣಿಕ್ಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಓಂಕಾರಜ್ಯೋತಿಯಂ ಬೆರಸುತ್ತ ಉನ್ಮನಿಯ ಬೆಳಗನೊಳಕೊಂಡು ಕರ್ಣದ್ವಾರದಲ್ಲಿ ಶಂಖ ದುಂದುಬ್ಥಿ ಧ್ವನಿಗಳಂ ಕೇಳುತ್ತ ಪರಮಕಾಷ್ಠಿಯಾಗಿ ತಾನೇ ಜಗತ್ತಾಗಿ ``ಅಣೋರಣೀಯಾನ್ ಮಹತೋ ಮಹೀಯಾನ್'' ``ಏಕಮೇವ ಅದ್ವಿತೀಯಂ'' ಎಂಬ ಶ್ರುತಿಪ್ರಮಾಣದರಿವು ನೆಲೆಗೊಂಡು ಷಡುಚಕ್ರ ಪ್ರಾಪ್ತಿಯಾಗಿ, ಮನ-ಪವನ-ಬಿಂದು-ರವಿ-ಶಶಿ-ಶಿಖಿಗಳನೇಕೀಕರಿಸಿ ಮೇಗಣ ಬಯಲ ಬಾಗಿಲಂ ತೆಗೆದು ಸಹಸ್ರದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ, ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ. ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ, ಹೊನ್ನು, ಹೆಣ್ಣು, ಮಣ್ಣನೀವವರ ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ. ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ, ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ. ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು, ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ, ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ, ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ ಸುಳಿವ ಜಂಗಮದ ಈಶನೆಂದೆ ಕಾಂಬೆ. ಆ ಜಂಗಮಕ್ಕೆ ಅರ್ಥ, ಪ್ರಾಣ, ಅಬ್ಥಿಮಾನವನೊಪ್ಪಿಸಿ, ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ. ಇದನೆಂತಾದರೂ ಒಪ್ಪುಗೊಳ್ಳ ಎನ್ನ. ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು.
--------------
ಹಡಪದ ಅಪ್ಪಣ್ಣ
ಕುನ್ನಿಗೆ ರನ್ನದ ಹಲ್ಲಣವ ಹಾಕಿದಂತೆ, ಹಂದಿಯ ತಂದು ಅಂದಣವನೇರಿಸಿದಂತೆ, ಎನಗೊಲಿದು ಶಿವಲಾಂಛನವ ಕೊಟ್ಟ ಕಾರಣವೇನಯ್ಯ ಗುರುವೆ?. ನಾನು ಲಿಂಗದ್ರೋಹವ ಮಾಡಿ ಜಂಗಮವ ಕೆಡನುಡಿದೆನು. ಕೈವಿಡಿದ ಸ್ತ್ರೀಯ ಕಡಿಖಂಡವಮಾಡಿದೆ. ಒಡನಾಡಿದವರ ಕಡುಕೋಪದಿನಿರಿದುಕೊಂದೆ. ನಂಬಿದ ಹಳೆಯರ ಪ್ರಾಣಕ್ಕೆ ಮುನಿದೆ. ಪಶುವಿನ ಶಿಶುವ ತಲೆಯೊಡೆಯಿಕ್ಕಿದೆ. ಗೋವ ಕೊಂದವರ ವಹಿಸಿಕೊಂಡೆ. ಪರಧನವ ಕದ್ದೆ, ಪರಸ್ತ್ರೀಯರಿಗಳುಪಿದೆ. ಭವಿಹೆಣ್ಣುಗಳ ಕೂಡುಂಡ ಬಾಯಹುಳುಕನಯ್ಯ ನಾನು. ಇಂತಪ್ಪ ಮಹಾಪಾತಕಂಗಳ ಮಾಡಿದ್ದ ಹೊಲೆಯನಿವನೆಂದು ನೀನರಿದ ಬಳಿಕ, ಎನಗೆ ವಿರಕ್ತಿಯೆಂಬ ಲಾಂಛನ ಕೊಟ್ಟುದು, ಕೋಪದ ಕಾರಣವಲ್ಲದೆ ಕೃಪೆಯಲ್ಲವಯ್ಯ. ಅದೇನು ಕಾರಣವೆಂದೊಡೆ- ಬಟ್ಟೆಯ ಬಡಿದ ಕಳ್ಳಬಂಟನ ಭೂಪಾಲರು ಬೇಹನಿಕ್ಕಿ ಹಿಡಿತರಿಸಿ, ನಾಳೆ ಶೂಲಕ್ಕೆ ತೆಗಸುವರೆ, ಇಂದು ಕಳ್ಳಬಂಟಂಗೆ, ಪುನುಗು ಜವಾಜಿಯ ಲೇಪಿಸಿ, ಹೂವಿನ ದಂಡೆಯ ಕೊರಳು- ಮಂಡೆ-ಉರದೊಳಗೆ ಅಡ್ಡಹಾಕಿ, ಹಾಲು ತುಪ್ಪ ಹಣ್ಣುಗಳ ಉಣಕೊಟ್ಟು, ಅಡಿಗಡಿಗೆ, ಅಡಕೆಲೆಯ, ಮೆಲುಕೊಟ್ಟು ವೀರವೃಂದದ ಹಲಗೆ ಕಹಳೆಯಂ, ಅವನ ಮುಂದೆ ಸಂಭ್ರಮಿಸುವ ಬರಿಯುಪಚಾರದಂತೆ, ನಾನು ಮಾಡಿದ ಸರ್ವ ದ್ರೋಹಕ್ಕೆ ನಿನ್ನ ಮನನೊಂದು, ಎನ್ನ ಎಕ್ಕಲನರಕಕ್ಕೆ ನೂಂಕುವುದಕ್ಕೋಸ್ಕರ ಕೊಟ್ಟ ಸಟೆಯುಪಚಾರಕ್ಕಾದ ಲಾಂಛನವಲ್ಲದೆ, ದಿಟದೊಲವಲ್ಲವಯ್ಯ ದೇವನೆ. ನಾನು ಮುಂದನರಿಯದಂಧಕನಯ್ಯ. ನಿನ್ನ ಬಾಗಿಲ ಕಾವ ಗೊಲ್ಲನಯ್ಯ. ನಿನ್ನ ಕುದುರೆಯ ಸಾಕುವ ಗೋವನಯ್ಯ. ನಿನ್ನ ಚಮ್ಮಾವುಗೆಯ ಹೊತ್ತು ಬರುವ ಬೋವರ ಲೆಂಕನಯ್ಯ. ನಿನ್ನ ಪಡುಗವ ಹಿಡಿವ ಪಡುಡಿಂಡಿಯಯ್ಯ. ನೀನುಗುಳ್ದ ತಂಬುಲವನುಂಬ ನಿನ್ನಾದಿಯ ಹಳೆಯನಯ್ಯ. ನಿನ್ನಂಗಳದಲ್ಲಿ ಬೊಗಳುವ ಶ್ವಾನನಯ್ಯ. ಎನ್ನ ತಪ್ಪ ಕಾಯಯ್ಯ ಶಿವಧೋ ಶಿವಧೋ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಊರವಂಕದ ಹೊರಗಿದ್ದು, ಮನೆಯ ಬಾಗಿಲ ಕಾಣೆನೆಂದು ಅರಸುವನಂತೆ, ಇದಿರಿನಲ್ಲಿ ತೋರುವ ಕುರುಹ ಮರದು ಅರಿವನೊಳಕೊಂಡೆನೆಂಬುವನಂತೆ, ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ
ಇನ್ನಷ್ಟು ... -->