ಅಥವಾ

ಒಟ್ಟು 155 ಕಡೆಗಳಲ್ಲಿ , 46 ವಚನಕಾರರು , 140 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ವೇದವನೋದಿದಡೇನು? ಶಾಸ್ತ್ರವ ಕಲಿತಡೇನು? ಮಾಘವ ಮಿಂದಡೇನು? ಮೂಗ ಹಿಡಿದಡೇನು? ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು? ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು? ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು? ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು? ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು? ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು? ಅವಕ್ಕೆ ಶಿವಗತಿ ಸಿಕ್ಕದು. ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು, ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ, ಶಿವಗತಿ ಸಿಕ್ಕುವುದು. ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ, ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದ್ಥಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಬ್ಥೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿ ನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಬ್ಥಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ಲೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂಮವಾಯುವ ಶ್ವೇತವರ್ಣ. ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳೆ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ. ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ. ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂದ್ಥಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾರ್ಥಚಿಹ್ನವೆಂದರಿದು ಆ ಲಿಂಗವನೇ ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕಿ ್ರಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂದ್ಥಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಬ್ಥಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾದ್ಥಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ ್ಯ, ಬಿಂದುಲಕ್ಷ ್ಯ, ಕಲಾಲಕ್ಷ ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಣ್ಣಿನೊಳಗಣ ಮತ್ಸ ್ಯಕ್ಕೆ ಬಲೆಯ ಬೀಸಿ, ಹದ್ದಿನ ಬಾಯ ಹಾವಿಂಗೆ ಹೇಳಿಗೆಯ ಮಾಡಿ, ಕಾಣಬಾರದ ಬಯಲಿಂಗೆ ಮನೆಯ ಕಟ್ಟಿ ಬಾಳುತ್ತಿದ್ದವನ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕುಡುವವ ಮಾನವನೆಂದಡೆ ಹೊಡೆ ಬಾಯ ಕೆರವಿನಟ್ಟೆಯಲ್ಲಿ , ಮಾನುಷನ ಹೃದಯದೊಳು ತಾನೀಶ ಹೊಕ್ಕು, ಸಲ್ಲುವಷ್ಟು ಕುಡಿಸುವ, ದೇವರಾಯ ಸೊಡ್ಡಳ.
--------------
ಸೊಡ್ಡಳ ಬಾಚರಸ
ಅಂದೊಮ್ಮೆ ಜಗನ್ನಾಥ ಭಸ್ಮವ ತೊಡೆದು ಕೈಯ ಬಿರ್ಚಿದರೆ ಕೇಳಿರಣ್ಣ! ಅಣ್ಣ! ಅಣ್ಣ ಕೇಳಿರಣ್ಣ! ಬ್ರಹ್ಮ ತಾ ಮರದೊರಗಿ ವಿಷ್ಣು [ತಾ] ಜುಮ್ಮೆಂದು ವೇದಗಳು ಮತಿಗೆಟ್ಟು ದೆಸೆಗೆ ಬಾಯ ಬಿಟ್ಟವಯ್ಯ! ಎನಿಸೆನಿಸು ಲೋಕಂಗಳು ಅನಿಸು ಬಾಯ ಬಿಟ್ಟವು! ಕೇಳಿರಣ್ಣ! ಅಣ್ಣ! ಅಣ್ಣ! ಕೇಳಿರಣ್ಣ! ತಮ್ಮ ಬಲ ಅವಕುಂಟು ಕೇಳಿರಣ್ಣ! ಆಯುಷ ತನಿಗೆನಿಸೆಂಬುದವೈ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಕೈಯ ಸಬುದಕಣ್ಣಾ
--------------
ಸಿದ್ಧರಾಮೇಶ್ವರ
ಒಂದೊಂದರ ಸಂಬಂಧ ಮತ್ತೊಂದಕ್ಕಳವಡದು. ಕಂದನೊಳಗಣ ಸ್ವಪ್ನ ಮುಂದುದೋರುವುದೇ ? ಚಂದ್ರಕಾಂತಶಿಲೆಯಲ್ಲಿ ರತ್ನವ ಕಂಡೆನೆಂಬ ಅಹಂಕಾರ ನಿನಗೇಕೆ ಶರಣಾ? ಕೈಯ ಕುರುಹಳಿಯದು, ಬಾಯ ಮೊರೆ ಮಿಗೆವರಿಯುತ್ತಿದೆ, ಕೂಡಲಚೆನ್ನಸಂಗಯ್ಯನಲ್ಲಿ ಬಸವನೂ ಪ್ರಭುವೂ ಇಬ್ಬರೂ ಮರುಳಾದರು.
--------------
ಚನ್ನಬಸವಣ್ಣ
ಕರಿಯು ಸ್ಪರ್ಶನೇಂದ್ರಿಯದಿಂದ ಬಂಧನವಡೆದಳಿಯಿತ್ತು. ಪತಂಗನು ರೂಪೇಂದ್ರಿಯದಿಂದ ಬಂಧನವಡೆದಳಿಯಿತ್ತು. ಭೃಂಗನು ಗಂಧೇಂದ್ರಿಯದಿಂದ ಬಂಧನವಡೆದಳಿಯಿತ್ತು. ಕುರಂಗನು ಶಬ್ದೇಂದ್ರಿಯದಿಂದ ಬಂಧನವಡೆದಳಿಯಿತ್ತು. ಮತ್ಸ್ಯವು ರಸನೇಂದ್ರಿಯದಿಂದ ಬಂಧನವಡೆದಳಿಯಿತ್ತು._ ಇಂತೀ; ಒಂದೊಂದು ಇಂದ್ರಿಯೋದ್ರೇಕದಿಂದ ಒಂದೊಂದು ಪ್ರಾಣಿಯು ಪ್ರಳಯವಾಯಿತ್ತು. ಪಂಚೇಂದ್ರಿಯಂಗಳ, ಒಂದು ಘಟದಲ್ಲಿ ತಾಳಿಹ ಮನುಷ್ಯ ಪ್ರಾಣಿಗಳಿಗೆ, ಮರವೆ ಎಡೆಗೊಂಡು ದೇಹಮೋಹಭ್ರಾಂತು ಮುಸುಕಿ ಮಾಯೆಯ ಬಾಯ ತುತ್ತಹುದು ಚೋದ್ಯವೇನು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಮುನ್ನೂರ ಅರುವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳು ತಂದೆ. ಎಲ್ಲವಕ್ಕೆ ಬಾಯ ಬಿಟ್ಟಡೆ ತಾನೆಲ್ಲಿಯ ಮುತ್ತಪ್ಪುದು ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು ಕರಣಾದಿ ಗುಣಂಗಳ ಮರೆದರು, ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ.
--------------
ಬಸವಣ್ಣ
ಬ್ರಹ್ಮನ ಬಾಯಲ್ಲಿ ಅದೆ, ವಿಷ್ಣುವಿನ ಕೈಯಲ್ಲಿ ಅದೆ, ರುದ್ರನ ಶಿರದಲ್ಲಿ ಅದೆ. ತಲೆ ಬಾಯ ನುಂಗಿ, ಕೈ ತಲೆಯೊಳಡಗಿ, ಕಣ್ಣು ಕಾಲಾಯಿತ್ತು, ಅರ್ಕೇಶ್ವರಲಿಂಗನನರಿವ ಭೇದದಿಂದ.
--------------
ಮಧುವಯ್ಯ
ಭವಿಯ ಕಳೆದು ಭಕ್ತನಾದ ಬಳಿಕ ಭವಿ ನಂಟನೆಂದು ಹೊಗಿಸಲಾಗದು. ನಂಟುತನಕ್ಕೆ ಆತ್ಮನಿಚ್ಛೆಗೆ ಅಳುಪಿ ಭವಿಯೊಡನುಂಡಡೆ ಹಂದಿಯ ಬಾಯ ತುತ್ತ ನಾಯಿ ಸೆಳತಿಂದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಧರೆಯ ಮೇಲೆ ಬಿದ್ದ ಬೀಜ, ಧರೆಯಲ್ಲಿಯೆ ಅಳಿದು, ಆಕಾಶದಲ್ಲಿ ಫಲವಾಯಿತ್ತು. ಆ ಫಲವ ಬಯಲ ಕಣದಲ್ಲಿ ಒಕ್ಕಿ, ಮನದ ಹಗಹದಲ್ಲಿ ತುಂಬಿ, ಬಾಯ ಹಗಹದಲ್ಲಿ ತೆಗೆದು, ಕಣ್ಣಿನ ಕೊಳಗದಲ್ಲಿ ಅಳೆವುತ್ತಿರಲಾಗಿ, ಖಂಡುಗವೆಂಬುದಕ್ಕೆ ಮೊದಲೆ ಕೊರಳಡಗಿತ್ತು. ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನರಿಕೆಯಾಗಿ.
--------------
ಹೊಡೆಹುಲ್ಲ ಬಂಕಣ್ಣ
ತುಂಬಿದ ನಾಳಿ ಬಾಯ ಹಂಗಾದಂತೆ, ಬಾಯ ಬೆಣ್ಣೆಯ ಹಂಗಿಗನಾಗಿ, ನಳಿಗೆ ಬಾಯಿ ಬೆಣ್ಣೆಯೆರೆವಳ ಹಂಗು. ಮಂಡೆಯ ಶೂಲೆ ಇನ್ನೆಂದಿಗೆ ಹರಿಗು ? ಈ ಅಬ್ಥಿಸಂದ್ಥಿಯ ಹೇಳು, ಅಲೇಖನಾದ ಶೂನ್ಯ ಕಲ್ಲಿನ ಮರೆ ಬೇಡ
--------------
ವಚನಭಂಡಾರಿ ಶಾಂತರಸ
`ಜಾತಸ್ಯ ಮರಣಂ' ಆವಗೆಯೂ ತಪ್ಪದು. ಅರಿದು ಮರೆಯಬೇಡಯ್ಯಾ. ಉರಗನ ಬಾಯ ಕಪ್ಪೆಯಂತೆ ಸಂಸಾರ ಹೆರೆಗೊಳುತ್ತಿರ್ದುದಲ್ಲಾ! ರೋಮಜರು ಮೀನಜರ ಕಾಲಕಲ್ಪಿತಕೊಳಗಾದರು. ಮಹಾಲಿಂಗ ಗಜೇಶ್ವರಯ್ಯನೊಬ್ಬನೆ ಶಾಶ್ವತನು.
--------------
ಗಜೇಶ ಮಸಣಯ್ಯ
ತನು ಹೇಳಿಗೆ, ಮನ ಸರ್ಪನಾಗಿ, ತನ್ನಯ ವಿಲಾಸಿತದಿಂದ ಹೆಡೆಯೆತ್ತಿ ಆಡುತ್ತಿರಲಾಗಿ, ನಾನಾರೂಪು ತೋ[ರುವ] ಆಕಾಶದ ಮಧ್ಯದಲ್ಲಿ, ಉಭಯನಷ್ಟವಾದ ಚಿದ್ಘನರೂಪಿನ ಹದ್ದು ಬಂದು, ಹೊಯ್ಯಿತ್ತು ಸರ್ಪನ. ಆ ಸರ್ಪ ಹದ್ದಿನ ಕೊರಳ ಸುತ್ತಿ, ಬಾಯ ಬಿಟ್ಟು ಕಚ್ಚದಂತೆ ಹೆಡೆಯೊಳು ಮುಚ್ಚಿ, ಹದ್ದೆದ್ದಾಡದಂತಿರಲು, ಆ ಬುದ್ಧಿಯ ನೆನೆದು ಒದ್ದು, ತನ್ನ ಸಖದ ಉಗುರಿನಲ್ಲಿ ಹೆಡೆ ಉಡುಗಿ, ಹಾವಿನ ತೆಕ್ಕೆ ಬಿಟ್ಟು ಹದ್ದೆದ್ದಿದಿತ್ತು ಮಹದಾಕಾಶಕ್ಕೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ.
--------------
ಸಗರದ ಬೊಮ್ಮಣ್ಣ
ಇನ್ನಷ್ಟು ... -->