ಅಥವಾ

ಒಟ್ಟು 77 ಕಡೆಗಳಲ್ಲಿ , 19 ವಚನಕಾರರು , 70 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದಂತೆ ಲಿಂಗ, ಲಿಂಗದಂತೆ ಅಂಗವಾದ ಬಳಿಕ ಅಂಗದಂತೆ ಲಿಂಗೈಕ್ಯ ಲಿಂಗದಂತೆ ಅಂಗೈಕ್ಯ. ಮನವೆ ಲಿಂಗ, ಲಿಂಗವೆ ಮನವಾದ ಬಳಿಕ, ಮಾತು ಮಾತುಗಳೆಲ್ಲ ಹೊಳ್ಳಾದ ಕಾರಣ ಮಾತೇ ಲಿಂಗೈಕ್ಯ :ಲಿಂಗೈಕ್ಯವೆ ಸ್ವರ! ಶಬ್ದಸಂದಣಿಗಿನ್ನು ತೆರಹುಂಟೆ? ಕಪಿಲಸಿದ್ಧಮಲ್ಲಿನಾಥಯ್ಯಾ, ಇನ್ನು ನಿಮ್ಮ ದೇವರೆಂದು ಅರಸಲುಂಟೋ ಇಲ್ಲವೋ ಎಂಬುದನು ತಿಳಿಹಿಕೊಡಾ ಅಯ್ಯಾ2
--------------
ಸಿದ್ಧರಾಮೇಶ್ವರ
ಅಂಗದಿಂದ ಲಿಂಗಸುಖ, ಲಿಂಗದಿಂದ ಅಂಗಸುಖ, ಅಂಗಲಿಂಗಸಂಗದಿಂದ ಪರಮಸುಖ ನೋಡಯ್ಯಾ. ಅಂಗಲಿಂಗಸಂಗದ ಸುಖವನು ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯ ಬಲ್ಲ.
--------------
ಚನ್ನಬಸವಣ್ಣ
ಲೋಹ ಪರುಷವ ಮುಟ್ಟುವುದಲ್ಲದೆ ಪರುಷ ಪರುಷವ ಮುಟ್ಟುವುದೆ ಅಯ್ಯಾ ಅಂಗವಿಡಿದಂಗೆ ಲಿಂಗವುಂಟಲ್ಲದೆ, ಲಿಂಗವಿಡಿದಂಗೆ ಲಿಂಗವುಂಟೆ `ಆಣೋರಣೀಯಾನ್ ಮಹತೋ ಮಹೀಯಾನ್ ಹಿರಿದಕ್ಕೆ ಹಿರಿದು, ಕಿರಿದಿಂಗೆ ಕಿರಿದು, ವಾಙ್ಮನಕ್ಕಗೋಚರ ಕೂಡಲಸಂಗಮದೇವಾ ಸ್ವರೂಪು ಪ್ರಸಾದ, ನಿರೂಪು ಲಿಂಗೈಕ್ಯ.
--------------
ಬಸವಣ್ಣ
ಸತ್ಯವೇ ಪರಮನು, ಜ್ಞಾನನವೇ ಜೀವನು, ಆನಂದವೇ ಶರೀರವು. ಅದೆಂತೆಂದೊಡೆ: ಶರೀರಾದಿ ಸಕಲಪ್ರಪಂಚಕ್ಕೂ ಜ್ಞಾನವೇ ಮೂಲವಾಗಿರ್ಪುದು. ಆನಂದಮುಖದೊಳ್ ಬಿಂದು ಜನಿಸಿ, ಆ ಬಿಂದುವೇ ಪೃಥ್ವೀರೂಪದಲ್ಲಿ ಘನೀಭವಿಸಿ, ಪಿಂಡಾಕಾರಮಾಗಿ ಶರೀರಮಪ್ಪಂತೆ, ಜ್ಞಾನಮುಖದಲ್ಲಿ ವಾಯುವು ಜನಿಸಿ, ತೇಜೋರೂಪದಲ್ಲಿ ಘನೀಭವಿಸಿ, ಜೀವನಾರ್ಪುದು. ನಿಜದಲ್ಲಾತ್ಮನು ಜನಿಸಿ, ಆಕಾಶರೂಪದಲ್ಲಿ ಘನೀಭವಿಸಿ ಪರಮನಾಗಿರ್ಪನು. ಆನಂದಬಿಂದುಮುಖದಿಂದ ಅಹಂಕಾರವು ಜನಿಸಿ, ಜ್ಞಾನವಾಯುಗಳ ಸಂಗದಿಂ ಮನವು ಪುಟ್ಟಿತ್ತು. ನಿಜಾತ್ಮಗಳ ಸಂಗದಿಂ ಭಾವವು ಹುಟ್ಟಿತ್ತು. ತತ್ಸಾಧ್ಯಕ್ಕವೇ ಸಾಧನಗಳಾಗಿರ್ಪುದರಿಂ ಇವೇ ಕರಣಂಗಳಾಗಿ, ಅವೇ ಕರಣಂಗಳಾಗಿರ್ಪವು. ಪೃಥ್ವವೀಬೀಜಗಳಸಂಗದಿಂದ ಬೀಜಮಧ್ಯದಲ್ಲಿ ವೃಕ್ಷವು ಜನಿಸಿತ್ತು. ವೃಕ್ಷವು ಬಲಿದಲ್ಲಿ ಬೀಜವು ನಷ್ಟಮಾಗಿ, ತದಗ್ರದಲ್ಲಿರ್ಪ ಫಲಮಧ್ಯದಲ್ಲಿ ಅನೇಕಮುಖಮಾಗಿ ತೋರುತ್ತರ್ಪಂತೆ, ಜ್ಞಾನವಾಯುಗಳಸಂಗದಿಂ ಜ್ಞಾನಮಧ್ಯದಲ್ಲಿ ಮನಸ್ಸು ಹುಟ್ಟಿ, ಅದು ಬಲಿದಲ್ಲಿ. ಆ ಮೂಲಜ್ಞಾನವಳಿದು, ತತ್ಫಲರೂಪಮಾದ ಇಂದ್ರಿಯಮಧ್ಯದಲ್ಲಿ ತೋರುತ್ತಿರ್ಪುದು. ಜಲವು ಆ ಬೀಜವಂ ಭೇದಿಸಿ, ತನ್ಮಧ್ಯದಲ್ಲಿ ವೃಕ್ಷವಂ ನಿರ್ಮಿಸುವಂತೆ, ಮನಸ್ಸೇ ಜಾಗ್ರತ್ಸ್ವರೂಪದಲ್ಲಿ ಜ್ಞಾನಬ್ಥಿನ್ನವಂ ಮಾಡಿ, ತನ್ಮಧ್ಯದಲ್ಲಾನಂದವಂ ನಿರ್ಮಿಸುತ್ತಿರ್ಪುದು. ಆನಂದವೂ ನಿರಾಕಾರವೂ ಬಿಂದುವು ಸಾಕಾರವೂ ಆದುದರಿಂದ ಆನಂದವಂ ಬಿಂದುವು ಬಂದ್ಥಿಸಿರ್ಪಂತೆ, ವಾಯುವು ಜ್ಞಾನವಂ ಬಂದ್ಥಿಸಿರ್ಪುದು. ಆನಂದವು ಜ್ಞಾನದೊಳ್ಬೆರೆದಲ್ಲಿ ಶರೀರವು ಜೀವನಳೈಕ್ಯಮಾಯಿತ್ತು. ಆ ಜ್ಞಾನವು ನಿಜದೊಳ್ಬೆರೆದಲ್ಲಿಜೀವನು ಪರಮನೊಳೈಕ್ಯಮಾಯಿತ್ತು. ನಿಜಾನಂದ ಶಿವಶಕ್ತಿಗಳೇಕಮಾದಲ್ಲಿ ಜ್ಞಾನವದೊರಲಗೆ ಬೆರೆದು, ಭೇದವಡಗಿ ಅವರೆಡರ ಸಂಯೋಗ ವಿಯೋಗಕ್ಕೆ ತಾನೇ ಕಾರಣಮಾಗಿ, ನಿಜಾನಂದವೇ ತೋರುತ್ತಾ, ತಾನೊಪ್ಪುತ್ತಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಗ್ನಿಯಲ್ಲಿ ಕಾಣಿಸುವ ಛಾಯೆಯು ನಿರಾಕಾರ ತಮೋರೂಪುಳ್ಳದ್ದು, ಜಲದಲ್ಲಿ ಕಾಣಿಸುವ ಛಾಯೆಯು ಸಾಕಾರಸತ್ವಸ್ವರೂಪುಳ್ಳದ್ದು. ಅಗ್ನಿಯಲ್ಲಿ ರೂಪುಮಾತ್ರವೇ, ಜಲದಲ್ಲಿ ರೂಪುರುಚಿಗಳೆರಡೂ ಪ್ರತ್ಯಕ್ಷಮಾಗಿಹವು. ಸಾಕಾರಛಾಯೆ ನಿಜಮಾಗಿ, ಹಾವಭಾವವಿಲಾಸವಿಭ್ರಮ ಕಾರಣಮಾಗಿಹುದು. ನಿರಾಕಾರಛಾಯೆ ಜಡಮಾಗಿ ವೈರಭಿನ್ನಮಾಗಿಹುದು. ಗುರುದತ್ತಲಿಂಗದಿಂದ ತನ್ನ ನಿಜಭಾವಮಂ ತಿಳಿದು, ಲಿಂಗವೂ ತಾನೂ ಏಕಮೆಂಬ ಭಾವವು ಬಲಿದು ಭಿನ್ನಭ್ರಮೆಯಳಿದು ಮನಂಗೊಂಡಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮೂರುಲೋಕದ ಮೋಹಿನಿ ಆರುಲೋಕದ ಅಂಗನೆಯರ ಸಂಗವ ಮಾಡಿ, ಮೂರುಲೋಕದ ಮೋಹವ ಮರೆದು ತಾ ಸತ್ತಳು ನೋಡಾ. ಮೂರುಲೋಕದ ಮೋಹಿನಿ ಸತ್ತುದ ಕಂಡು, ಆರುಲೋಕದ ಅಂಗನೆಯರು, ನಾವೀ ಲೋಕದಲ್ಲಿರಲಾಗದೆಂದು ಮೀರಿದ ಲೋಕಕ್ಕೆ ಹೋಗಿ, ಆರೂಢನ ನೋಡುತ್ತ ನೋಡುತ್ತ ಆರೂರವರೂ ಸತ್ತರು. ಇದು ಮೀರಿದ ಲಿಂಗೈಕ್ಯ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜ್ಞಾತೃವ ಜ್ಞಾನ ನುಂಗಿ, ಜ್ಞಾನವ ಜ್ಞೇಯ ನುಂಗಿ, ಜ್ಞೇಯವು ತನ್ನಲೆ ತಾ ವಿಶ್ರಮಿಸಿ, ಶ್ರವಣ ಮನನ ನಿಧಿಧ್ಯಾಸನದಲ್ಲಿ ತಲ್ಲೀಯವಾಗಿ, ಸ್ಥೂಲ ಸೂಕ್ಷ್ಮ ಕಾರಣಂಗಳನೇಕೀಭವಿಸಿ, ಒಂದೇ ಸಂವಿಧಾನವಾಗಿ, ಅನ್ಯಸಂಧಾನವರತು. ಪರಮಾನಂದವೆ ಆಲಿಂಗನವಾಗಿ, ಆಲಿಂಗನವೇ ಪರಮಾನಂದವಾಗಿ, ಪ್ರತಿದೋರದ ಅಪ್ರತಿಯಾಗಿ, ಉರಿಯೊಳು ಬೈಚಿಟ್ಟು ಕರ್ಪುರದಂತಿರ್ದುದೆ ಭಕ್ತಮಾಹೇಶ್ವರೈಕ್ಯ, ಇಂತಿರ್ದುದೆ ಪ್ರಸಾದಿ ಪ್ರಾಣಲಿಂಗಿಗಳೈಕ್ಯ, ಇಂತಿರ್ದುದೆ ಶರಣ ಲಿಂಗೈಕ್ಯ, ಇಂತಿರ್ದುದೆ ಜೀವಪರಮೈಕವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಹೊಸ ಮುತ್ತಿನ ಸುಪ್ಪಾಣಿಯಂತೆ ಲಿಂಗೈಕ್ಯವು. ಸ್ಫಟಿಕದ ಘಟದೊಳಗಣ ಪ್ರಭೆಯಂತೆ ಲಿಂಗೈಕ್ಯವು. ವಾಯುವಿನ ಸಂಚದ ಪರಿಮಳದ ನಿಲವಿನಂತೆ ಲಿಂಗೈಕ್ಯ ಸಂಬಂಧವದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸರ್ವೇಂದ್ರಿಯ ಸಮ್ಮತವಾಗಿ ಸರ್ವಕರಣಂಗಳ ಸಮಾಧಾನವ ಮಾಡಿ, ಸಮಸ್ತ ಸುಖಭೋಗಾದಿಗಳ ಬಯಸದೆ, ತನ್ನ ಮರೆದು ಶಿವತತ್ವವನರಿದು, ಅಹಂಕಾರ ಮಮಕಾರವಿಲ್ಲದೆ, ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯ ಮೀರಿ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಗಳನಳಿದು, ಸ್ತುತಿ_ನಿಂದಾದಿ, ಕಾಂಚನ ಲೋಷ*ಂಗಳ ಸಮಾನಂಗಂಡು, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಾದಿ ಪದಂಗಳ ಬಯಸದೆ, ವೇದ ವೇದಾಂತ ತರ್ಕ ವ್ಯಾಕರಣ ದರ್ಶನ ಸಂಪಾದನೆಗಳ ತೊಲಗಿಸಿ, ಖ್ಯಾತಿ ಲಾಭದ ಪೂಜೆಗಳ ಬಯಸದೆ ತತ್ವನಿರ್ಣಯವನರಿಯದವರೊಳು ತಾನೆಂಬುದನೆಲ್ಲಿಯೂ ತೋರದೆ; ಹೊನ್ನು ತನ್ನ ಲೇಸ ತಾನರಿಯದಂತೆ, ಬೆಲ್ಲ ತನ್ನ ಸಿಹಿಯ ತಾನರಿಯದಂತೆ, ವಾರಿಶಿಲೆ ಉದಕದೊಳಡಗಿದಂತೆ, ಪುಷ್ಪದೊಳಗೆ ಪರಿಮಳವಡಗಿದಂತೆ ಅಗ್ನಿಯೊಳಗೆ ಕರ್ಪೂರವಡಗಿದಂತೆ, ಮಹಾಲಿಂಗದಲ್ಲಿ ಲೀಯವಾದುದೆ ಲಿಂಗೈಕ್ಯ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಇಂತಪ್ಪ ಲಿಂಗೈಕ್ಯವಹ ಭೇದವ ತಿಳಿಯದೆ ಮೂಢಮತಿಯಿಂದ ಕಾಡಲಿಂಗವ ಕೈಯಲ್ಲಿ ಪಿಡಿದು, ಮೈಯಲ್ಲಿ ಬೂದಿಯ ಧರಿಸಿ, ಗುಡ್ಡಗಂಹರ ಗುಹೆಗಳಲ್ಲಿ ಕಲ್ಲಪಡಿಯಲ್ಲಿ ಪರ್ಣಶಾಲೆಯ ಬಂಧಿಸಿ, ಅನ್ನ ಉದಕ ನಿದ್ರೆಯ ತೊರೆದು, ಪರ್ಣಾಹಾರವ ಭಕ್ಷಿಸಿ, ತನುವನೊಣಗಿಸಿ, ಮನವ ಬಳಲಿಸಿ, ಆತ್ಮನ ಸತ್ವಗುಂದಿ, ಚಳಿ ಮಳಿ ಗಾಳಿ ಬಿಸಿಲುಗಳಿಂದ, ಕಲ್ಲುಮರದಂತೆ ಕಷ್ಟಬಟ್ಟರೆ, ಇಂತಪ್ಪವರು ಲಿಂಗೈಕ್ಯವಾಗಲರಿಯರು ; ಕಡೆಯಲ್ಲಿ ಭವಭಾರಿಗಳು. ಮತ್ತೆಂತೆಂದಡೆ : ತಮ್ಮ ನಿಲವ ತಾವರಿಯದೆ ಎಲ್ಲಿ ಕುಳಿತರೂ ಇಲ್ಲ ; ಎಲ್ಲಿ ಹೋದಡೆಯೂ ಇಲ್ಲ. ಏನು ಮಾಡಿದಡೆಯು ವ್ಯರ್ಥವಲ್ಲದೆ ಸ್ವಾರ್ಥವಿಲ್ಲ. ಅದೇನು ಕಾರಣವೆಂದಡೆ : ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಪಡೆದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದು, ಆ ಘನಮಹಾ ಇಷ್ಟಬ್ರಹ್ಮದಲ್ಲಿ ಬೇರೆಯಲ್ಲದೆ ಕೂಡಬಲ್ಲರೆ ಅದೇ ಲಿಂಗೈಕ್ಯ ಎಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಚಾರದರಿವು ಆಗಮವ ಕೂಡಿಕೊಂಡಿಹುದು. ವಿಚಾರದರಿವು ಶಾಸ್ತ್ರವ ಕೂಡಿಕೊಂಡಿಹುದು. ಲಿಂಗಾಚಾರದರಿವು ಅಂಗಭೋಗವ ಕೂಡಿಕೊಂಡಿಹುದು. ಆದಿ ವಿಚಾರದರಿವು ಜ್ಞಾನವ ಕೂಡಿಕೊಂಡಿಹುದು. ಈ ಚತುರ್ವಿಧದೊಳಗೆ ಆವಂಗವೂ ಅಲ್ಲ. ಎಮ್ಮ ಶರಣರ ಪರಿ ಬೇರೆ. ಅದೆಂತೆಂದರೆ; ಗುರು ಕರದಲ್ಲಿ ಹುಟ್ಟಿದರು, ಲಿಂಗದಲ್ಲಿ ಬೆಳೆದರು. ಜಂಗಮದ ಸಂಗವ ಮಾಡಿದರು, ಪ್ರಸಾದದಲ್ಲಿ ಅಡಗಿದರು. ಇದೀಗ ನಮ್ಮ ಶರಣರ ನಡೆನುಡಿ ಅರಿವು ಆಚಾರ ಲಿಂಗೈಕ್ಯ. ಈ ಚತುರ್ವಿಧವು ಹೊರತಾಗಿ, ಅವರೊಬ್ಬರು ಸಾಧಿಸಿ ಎಂದರೆ, ಸಾಧಕರಿಗೆ ಸಾಧ್ಯವಲ್ಲ, ಭೇದಕರಿಗೆ ಭೇದ್ಯವಲ್ಲ. ಅರಿವಿಂಗೆ ಅಪ್ರಮಾಣು, ವಾಙ್ಮನಕ್ಕಗೋಚರ. ಆಗಮ ಶಾಸ್ತ್ರಂಗಳು ಅರಸಿ ಕಾಣವು. ಇದು ಕಾರಣವಾಗಿ, ಎಮ್ಮ ಶರಣರು ಗುರು, ಲಿಂಗ, ಜಂಗಮ, ಪ್ರಸಾದ ಈ ಚತುರ್ವಿಧವಿಡಿದು ಅಚಲಪದವನೆಯ್ದಿದರು. ಇದಕ್ಕೆ ನೀವೆ ಸಾಕ್ಷಿ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಶಿವಶಿವಾ ಮೂರ್ತಿಗೆ ಸತ್ಯಶುದ್ಧ ಉಂಟೆಂಬಿರಿ. ಸತ್ಯ[ಶುದ್ಧ]ವುಳ್ಳವಂಗೆ ಗುರುವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಲಿಂಗವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಜಂಗಮವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಪ್ರಸಾದವಿಲ್ಲ, ಸತ್ಯ[ಶುದ್ಧ]ವುಳ್ಳವಂಗೆ ಗಣತ್ವವಿಲ್ಲ ಕೇಳಿರೆ. ಸತ್ಯಶುದ್ಧ ದೇವರಿಗೆ ಉಪಚಾರವುಂಟು, ಸತ್ಯಶುದ್ಧ ದೇವರಿಗೆ ಧ್ಯಾನಮೌನ ಅನುಷಾ*ನವುಂಟು, ಸತ್ಯಶುದ್ಧ ಉಪದೇಶಕ್ಕೆ ಜಪ ತಪ ಸಂಜೆ ಸಮಾಧಿ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರವುಂಟು. ಸತ್ಯಶುದ್ಧ ದೇವರಿಗೆ ಉಪಚಾರವುಂಟಾದ ಕಾರಣ ಇಂತಪ್ಪ ಸತ್ಯಶುದ್ಧ ಗುರುವಿಂಗೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಲಿಂಗಕ್ಕೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಜಂಗಮಕ್ಕೆ ಶರಣೆನ್ನೆ, ಇಂತಪ್ಪ ಸತ್ಯಶುದ್ಧ ಪ್ರಸಾದಕ್ಕೆ ಕೈಯಾನೆ. ಇವರೆಲ್ಲರು ಬ್ರಹ್ಮನ ಮಕ್ಕಳು. ಎನಗೆ ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಆವ ಸಹಜವೂ ಇಲ್ಲದ ಲಿಂಗೈಕ್ಯ ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಕೂಟದ ಸುಖದಲ್ಲಿ ತನ್ನ ಮರೆಯದ ಕೂಟವೇತಕಯ್ಯಾ? ಪ್ರಾಣಲಿಂಗದ ಸಂಬಂಧದಲ್ಲಿ ಕರಣಂಗಳನರಿಯದ ಪ್ರಾಣಲಿಂಗ ಸಂಬಂಧವೇತರದಯ್ಯಾ? ಹಂಗುಳ್ಳನ್ನಬರ ಶರಣನಲ್ಲ. ವ್ಯಾಕುಳದ ಹಂಗು ಹರಿದಡೆ ಆತ ಲಿಂಗೈಕ್ಯ ಕಪಿಲಸಿದ್ಧಮಲ್ಲಿಕಾರ್ಜುನ ಸಹಗಮನಿ.
--------------
ಸಿದ್ಧರಾಮೇಶ್ವರ
ಅಯ್ಯ ! ನಿರವಯಶೂನ್ಯಲಿಂಗದೇಹಿ ನಿಜಕರುಣಪ್ರಸಾದಾತ್ಮನು ಆ ನಿರವಯ ಶೂನ್ಯಲಿಂಗದಾಚಾರದಲ್ಲಿಯೆ ನಡೆವನಯ್ಯ ! ಲೋಕವರ್ತಕ ಲೋಕಚಾತುರ್ಯಕ್ಕೆ, ಲೋಕವ್ಯವಹರಣೆಯನನುಕರಿಸಿ ನಡೆವನಲ್ಲ ! ನಿಜಶಿವಜ್ಞಾನ_ನಿಜಶಿವಕ್ರಿಯಾಪ್ರಕಾಶವ ಸಂಬಂಧಿಸಿಕೊಂಡು ಸರ್ವಾಂಗವು ನಿರವಯಶೂನ್ಯಲಿಂಗರೂಪವಾಗಿ ಲಿಂಗಕ್ಕೆ ಲಿಂಗವೆ ಭಾಜನ ಪದಾರ್ಥ-ಪ್ರಸಾದ_ಪರಿಣಾಮವಾಗಿರಬಲ್ಲಡೆ ಅದು ಲಿಂಗೈಕ್ಯ ನೋಡ ! ನೆಲನಿಲ್ಲದ ನಿರ್ಮಲ ಚಿದ್ಭೂಮಿಯಲ್ಲಿ ಸ್ವಯಜ್ಞಾನಶಿಶು ಉದಯವಾಯಿತ್ತು ನೋಡ ! ಆ ಸ್ವಯಜ್ಞಾನ ಶಿಶು ಊಧ್ರ್ವಲೋಕಕ್ಕೆ ಹೋಗಿ ವ್ಯೋಮಾಮೃತಪ್ರಸಾದವನುಂಡು ನಾಮರೂಪು_ಕ್ರಿಯೆಗಳನಳಿದು, ನಿರವಯಶೂನ್ಯಲೀಲೆಯ ಧರಿಸಿ ಸೋಮನಾಳದಲ್ಲಿ ಶುಭ್ರ ಕಳೆ; ಪಿಂಗಳನಾಳದಲ್ಲಿ ಸುವರ್ಣಕಳೆ; ಸುಷುಮ್ನನಾಳದಲ್ಲಿ ಸುಜ್ಞಾನಜ್ಯೋತಿಪ್ರಕಾಶದಂತೆ ಏಳುನೂರ ಎಪ್ಪತ್ತುನಾಳದಲ್ಲಿ ಹೊಳೆವುತ್ತಿರ್ಪ ಪರಮಗುರು ಸಂಗನಬಸವಣ್ಣನ ಬೆಳಗಿನ ನಿಜಪ್ರಸಾದದೊಳಗೆ ಗುಹೇಶ್ವರ ಪ್ರಭುವೆಂಬ ರೂಪತಾಳಿ, ಪಕ್ವವಾದ ಮೇಲೆ ಮತ್ತಲ್ಲಿಯೆ ನಿರವಯಶೂನ್ಯವಪ್ಪುದು ತಪ್ಪದು ನೋಡ ! ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->