ಅಥವಾ

ಒಟ್ಟು 51 ಕಡೆಗಳಲ್ಲಿ , 26 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರುಷ ಸೋಂಕಲು ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ? ಹಲವು ತೃಣಂಗಳೆಲ್ಲವು ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ? ಹಳ್ಳಕೊಳ್ಳದ ನೀರೆಲ್ಲಾ ಬಂದು ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ. ಹಲವು ವರ್ಣದ ಪದಾರ್ಥವನೆಲ್ಲವ ತಂದು ಶಿವಲಿಂಗಾರ್ಪಣವ ಮಾಡಲು ಆ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಪ್ಪುದು ತಪ್ಪದು ನೋಡಾ. ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ. ಆತನು ಶುದ್ಧ ನಿರ್ಮಲನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಗ್ನಿವರ್ಣದ ಚಿತ್ರ ಆಕಾಶವ ನುಂಗಿತ್ತು. ಚಂದ್ರವರ್ಣದ ಚಿತ್ರ ಜಲವ ನುಂಗಿತ್ತು. ಸೂರ್ಯವರ್ಣದ ಚಿತ್ರ ಪೃಥ್ವಿಯ ನುಂಗಿತ್ತು. ಉಳಿದ ವರ್ಣದ ಚಿತ್ರವು ಪಂಚವರ್ಣದ ಭೂಮಿಯ ನುಂಗಿದವು, ಈ ಚಿತ್ರದ ಭೇದವ ಬಲ್ಲವರು ಅಸುಲಿಂಗಿಗಳು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಪ್ಪಿನ ಭೂಮಿಗೆ ಮೂರುಗಜ ಸೂರ್ಯಕಾಂತದ ಕಲ್ಲು ಹಾಕಿ, ಮೂರು ಹಣವ ಕೊಂಡೆ. ಕೆಂಪಿನ ಭೂಮಿಗೆ ಆರು ಐದು ಗಜ ಚಂದ್ರಕಾಂತದ ಕಲ್ಲು ಹಾಕಿ, ಆರೈದು ಹಣವ ಕೊಂಡೆ. ಬಿಳುಪಿನ ಭೂಮಿಗೆ ಎರಡೆಂಟು ಏಳುಗಜದ ಅಗ್ನಿಕಾಂತದ ಕಲ್ಲು ಹಾಕಿ, ಎರಡೆಂಟು ಏಳು ಹಣವ ಕೊಂಡೆ. ಉಳಿದ ವರ್ಣದ ಭೂಮಿಗೆ ಮೂವತ್ತಾರು ಗಜ ಹಲವು ವರ್ಣದ ಚಿಪ್ಪುಗಲ್ಲುಗಳ ತುಂಬಿ ಈರೈದುಹಣವ ಕೊಂಡೆ. ಹೀಗೆ ಕಲ್ಲುಮಾರಿ ಹಾಗದ ಹಣವ ಕೊಂಡು ಕಾಯಕವ ಮಾಡುತಿರ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ, ಅರಿಬಿರಿದಿನ ಪಕ್ಷಿ ಬಂದಿತ್ತು ನೋಡಾ. ಆ ಪಕ್ಷಿಯ ವರ್ಣ, ಹಾರುವ ರಟ್ಟೆ ಕೆಂಪು, ತೋರಿಹ ರಟ್ಟೆ ಕಪ್ಪು. ಮೀರಿಹ ರಟ್ಟೆಯ ತುಟ್ಟತುದಿಯಲ್ಲಿ ನಾನಾ ವರ್ಣದ ಬಣ್ಣ. ಆ ಹಕ್ಕಿಯ ಗಳದಲ್ಲಿ ಹೇಮವರ್ಣ, ಆ ಹಕ್ಕಿಯ ತುದಿಯಲ್ಲಿ ಧವಳವರ್ಣ. ಆ ಹಕ್ಕಿಯ ಹಾರುವ ರಟ್ಟೆಯ ಕಳೆದು, ತೋರಿಹ ರಟ್ಟೆಯ ಮುರಿದು, ಮೀರಿಹ ರಟ್ಟೆ[ಯ] ಬೆಂದು, ಕೊರಳಿನ ಹಳದಿ, [ಹಾರಿ], ಕೊಕ್ಕಿನ ಬೆಳ್ಪು ನಿಃಪತಿಯಾಗಿ, ನಿಃಕಳಂಕ ಮಲ್ಲಿಕಾರ್ಜುನ ಸತ್ತನೊ.
--------------
ಮೋಳಿಗೆ ಮಾರಯ್ಯ
ಶೂಲದ ಮೇಲಣ ವಿಭೋಗವೇನಾದಡೇನೊ ? ನಾನಾ ವರ್ಣದ ಸಂಸಾರ ಹಾವು ಹಾವಡಿಗನ ಸ್ನೇಹದಂತೆ ! ತನ್ನಾತ್ಮ ತನಗೆ ಹಗೆಯಾದ ಮತ್ತೆ ಬಿನ್ನಾಣವುಂಟೆ, ಮಹಾದಾನಿ ಕೂಡಲಸಂಗಮದೇವಾ 12
--------------
ಬಸವಣ್ಣ
ಆರು ವರ್ಣದ ಅಂಗನೆಯು ಮೂರು ಬಾಗಿಲ ಮಾಡಿಕೊಂಡು ಬೇರೊಂದು ಸ್ಥಾನದಲ್ಲಿ ಲಿಂಗಧ್ಯಾನವ ಮಾಡುತಿರ್ಪಳು ನೋಡಾ. ಆ ಲಿಂಗದ ಬೆಳಗಿನೊಳಗೆ ಪರಿಪೂರ್ಣವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾನಾ ವರ್ಣದ ಗೋವುಗಳೆಲ್ಲವೂ ಕೂಡಿ ಒಂದೇ ಹೊಲದಲ್ಲಿ ಮೇದು, ಆರು ಕೆರೆಯ ನೀರ ಕುಡಿದು, ಒಂದೇ ದಾರಿಯಲ್ಲಿ ಬಂದು, ಮೂರು ಕೊಟ್ಟಿಗೆಯ ಗೊತ್ತಿಂಗೊಳಗಾದುವು. ಬಿಟ್ಟು ಕರೆಯಲಾಗಿ ಗೋವಿಂಗೆ ಹಲವು, ಹಾಲಿಗೆ ಏಕವರ್ಣ. ಹಾಲ ತಂದು ಭಾಜನದಲ್ಲಿ ನೀಡಿ ಕಾಸುವಲ್ಲಿ ಚಟ್ಟಿ ಹತ್ತದೆ, ಹಸುಕು ನಾರದೆ, ಕೌರು ಏಳದೆ, ನೀರ ರಸ ತಪ್ಪಿ ಮಧುರ ರಸ ತುಂಬಿ ಕಾಸಿ ಉಣಬಲ್ಲಡೆ ಆತನೆ ಭೋಗಿ. ಆತ ನಿರತಿಶಯಾನುಭಾವ ಶುದ್ಧಾತ್ಮನು, ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗ ತಾನೆ.
--------------
ಶಂಕರದಾಸಿಮಯ್ಯ
ಎಸಳು ಬಿಳಿದು ಆ ಎಸಳ ಕಂಪಿನ ವರ್ಣದ ಮುಂದೆ ಕಂಪಿನ ಕುಸುಮವ ನೋಡ ನೋ[ಡ] ಹೋದರೆ ಆ ಎಸಳೆಸಳಿಗೆ ಒಂದು ತುಂಬಿಗಳ ಬಳಗವ ಮೂರುತಿಗೂಡಿದರು. ಆ ಮೂರುತಿಯ ಇರವನರಿದು ಆನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು. ಹೊರವೊಳಯದಲೆರಡಗುಸೆಯ ಬಾಗಿಲು. ಮಂದೇಳು ದ್ವಾರ, ತುಂಬಿದ ವ್ಯಾಪಾರ, ಸರಕ ಕೊಳುಕೊಡೆಗಳುಂಟು. ಅದೆಂತೆಂದೊಡೆ : ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು. ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು ಕೊತವಾಲನ ಮುಂದಿಟ್ಟು. ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು. ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು. ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು. ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ ಕಂಟಕ ಬಂದುದನೇನೆಂಬೆನಯ್ಯಾ! ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು. ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು ಕೊತ್ತಲೆಂಟಕ್ಕಾವರಿಸಲು ಶೆಟ್ಟಿ ಮಧ್ಯಬುರುಜನೇರಲು, ಬೆಂದ ತಲೆ ಉರಿದು ನಿಂದು ನೋಡಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೌಕ್ತಿಕದ ಮಂಟಪ ಕಟ್ಟಿ ಮನೆಯೊಳಗೆ ತೋರಣಗಟ್ಟಿದವು. ಮಾಣಿಕ್ಯದ ವರ್ಣದ ತೋರಣವು. ಆ ಮಾಣಿಕ್ಯದ ವರ್ಣದ ತೋರಣವ ಕಂಡು, ಆ ತೋರಣವ ಸರಗೊಳಿಸಿ ಸರದ ಮುಂದೆ ಮಧ್ಯಸ್ವರೂಪವಾಗಿ ಆನು ನಿಜ ಪರಿಣಾಮಿಯಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ (ಮಾಡಿ) ಧರಿಸುವ ಭೇದವೆಂತೆಂದಡೆ : ಆವ ವರ್ಣದ ಗೋವಾದಡೆಯೂ ಸರಿಯೆ, ಅವಯವಂಗಳು ನೂನು-ಕೂನಿಲ್ಲದೆ, ಬರೆಗಳ ಹಾಕದೆ ಇರುವಂತಹ ಗೋವ ತಂದು, ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ; ಧೂಳಪಾದೋದಕಸೇವನೆಯೆ ಮಹಾತೀರ್ಥ. ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು. ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ, ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ ಪೂರ್ವದಲ್ಲಿ (ಗುರು) ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ ಗುರುದೀಕ್ಷೆಯುಂಟಾಗುವುದಯ್ಯಾ, ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ, ನಿರುಪಾಧಿಭಕ್ತಂಗೆ ತ್ರಿವಿಧಪಾದೋದಕ ಪ್ರಸಾದ ದೊರೆಯುವುದಯ್ಯಾ ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ ನಿರ್ವಂಚಕ ಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ, ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬ್ರಹ್ಮಾಂಡದಲ್ಲಿ ಪುಟ್ಟಿಹ ಲಕ್ಷಣ ಪಿಂಡಾಂಡದಲ್ಲಿ ಉಂಟೆಂಬರು. ಆ ಬ್ರಹ್ಮಾಂಡಕ್ಕೆ ತ್ರಿಜಾತಿವರ್ಗ, ಚರಸ್ಥಾವರ ಮೂಲಾದಿಭೇದ ಸಪ್ತಸಿಂಧು ಸವಾಲಕ್ಷ ಮುಂತಾದ ಮಹಾಮೇರುವೆ ಅಷ್ಟಾಷಷ್ಟಿ ಗಂಗಾನದಿಗಳು ಮುಂತಾದ ನವಪಾಷಾಣದೊಳಗಾದ ರತಿಸಂಭವ ಮುಂತಾದ ಷಟ್ಕರ್ಮ ಆಚರಣೆ ಮುಂತಾದ ಇಂತೀ ಬ್ರಹ್ಮಾಂಡದೊಳಗಾದ ವಸ್ತುಕ ವರ್ಣಕ ಇವು ಎಲ್ಲವು, ಲಕ್ಷಿಸಿಕೊಂಡು ಪ್ರಮಾಣಾದವು. ಈ ಪಿಂಡಾಂಡಕ್ಕೆ ಬ್ರಹ್ಮಾಂಡವ ಸರಿಗಾಬಲ್ಲಿ ನಾನಾ ವರ್ಣದ ಭೇದಂಗಳೆಲ್ಲವ ವಿಚಾರಿಸಲಿಕ್ಕೆ ಉಂಟು. ಘಟಭೇದದಲಿ ಇಲ್ಲ, ಜ್ಞಾನಭೇದದಲ್ಲಿ ಉಂಟೆಂದು ಕರ್ಮವ ವಿಚಾರಿಸಲಿಕ್ಕೆ ಪೃಥ್ವೀತತ್ವದೊಳಗಾದುದೆಲ್ಲವೂ ವಸ್ತುಕರೂಪು. ಅಪ್ಪುತತ್ವದೊಳಗಾದುದೆಲ್ಲವೂ ವರ್ಣಕರೂಪು. ತೇಜತತ್ವದೊಳಗಾದುದೆಲ್ಲವೂ ದೃಶ್ಯಾಂತರಭಾವ. ವಾಯುತತ್ವದೊಳಗಾದುದೆಲ್ಲವೂ ಖೇಚರಸಂಚಾರಭಾವ. ಆಕಾಶತತ್ವದೊಳಗಾದುದೆಲ್ಲವೂ ಇಂತೀ ಚತುರ್ಗುಣ ಭಾವವನೊಳಗೊಂಡು ಶಬ್ದಗಮ್ಯವಾಗಿ ಮಹದಾಕಾಶವ ಎಯ್ದುತ್ತಿಹುದಾಗಿ. ಇಂತೀ ಅಂಡಪಿಂಡವ ವಿಸ್ತರಿಸಿ ನೋಡಿಹೆನೆಂದಡೆ ಅಗ್ನಿಗೆ ಆಕಾಶದ ಉದ್ದ ಕಾಷ*ವನೊಟ್ಟಿದಡೂ ಅಲ್ಲಿಗೆ ಹೊತ್ತುವದಲ್ಲದೆ ಸಾಕೆಂದು ಒಪ್ಪುವದಿಲ್ಲ. ಇಂತೀ ಭೇದದಂತೆ ಸಕಲವ ನೋಡಿಹೆನೆಂದಡೆ ನಾಲ್ಕು ವೇದ ಒಳಗಾಗಿ ಹದಿನಾರು ಶಾಸ್ತ್ರ ಮುಂತಾಗಿ ಇಪ್ಪತ್ತೆಂಟು ದಿವ್ಯಾಗಮಂಗಳು ಕಡೆಯಾಗಿ ಇಂತಿವರೊಳಗಾದ ಉಪಮನ್ಯು, ಶಾಂಕರಸಂಹಿತೆ, ಚಿಂತನೆ, ಉತ್ತರ ಚಿಂತನೆ, ಪ್ರತ್ಯುತ್ತರ ಚಿಂತನೆ, ಸಂಕಲ್ಪಸಿದ್ಧಿ ಇಂತಿವರೊಳಗೆ ತಿಳಿದೆಹೆನೆಂದಡೆ ಕಲಿಕೆಗೆ ಕಡೆಯಿಲ್ಲ ಅರಿವಿಗೆ ತುದಿ ಮೊದಲಿಲ್ಲ. ಇಂತಿವೆಲ್ಲವ ಕಳೆದುಳಿದು ನಿಲಬಲ್ಲಡೆ ವರ್ಮಸ್ಥಾನ ಶುದ್ಧಾತ್ಮನಾಗಿಪ್ಪ ಭೇದವ ಹಿಡಿದು ಮಾಡುವಲ್ಲಿ ದೃಢಾತ್ಮನಾಗಿ, ಲಿಂಗವನರ್ಚಿಸಿ ಪೂಜಿಸುವಲ್ಲಿ ನೈಷಿ*ಕವಂತನಾಗಿ, ತ್ರಿವಿಧವ ಕುರಿತು ಅರಿದು ಮಾಡುವಲ್ಲಿ ನಿಶ್ಚಯವಂತನಾಗಿ, ಅಶ್ವತ್ಥವೃಕ್ಷದ ಪರ್ಣದ ಅಗ್ರದ ತುದಿಯ ಮೊನೆಯಲ್ಲಿ ಬಿಂದು [ಸಾ]ರಕ್ಕೆ ಮುನ್ನವೆ ಬಿದ್ದಂತೆ ಇಂತೀ ಕರ್ಮಕಾಂಡದಲ್ಲಿದ್ದ ಆತ್ಮನು ಹಾಗಾಯಿತ್ತೆಂಬುದ ಹೀಗರಿದು ಇಂತೀ ಉಭಯದಲ್ಲಿ ಚೋದ್ಯನಾಗಿ ಸದ್ಯೋಜಾತಲಿಂಗವ ಕೂಡಬೇಕು.
--------------
ಅವಸರದ ರೇಕಣ್ಣ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಭೂಮಿಯಲ್ಲಿ ಲಿಂಗಸ್ಥಾಪನೆಯಿಲ್ಲದೆ ಶ್ಮಶಾನಭೂಮಿಯಲ್ಲಿ ಶವವ ಸಂಚಗರಿಸಲಾಗದು ಎಂಬಿರಿ. ಭೂಮಿಯ ಶುದ್ಧಮಾಡಿ ಸಂಚಗರಿಸುವ ಕ್ರಮವಂ ಪೇಳ್ವೆ, ಅದೆಂತೆಂದೊಡೆ : ಆರೂ ಇಲ್ಲದ ಅರಣ್ಯದ ಬೆಟ್ಟವನೊಡದು, ಚಂದ್ರ ಸೂರ್ಯ ಅಗ್ನಿ ಪ್ರಕಾಶವನುಳ್ಳ ನಾನಾ ವರ್ಣದ ಕಲ್ಲು ತಂದು, ಸಪ್ತಚರಣದ ಭೂಮಿಯ ಮೂರಾರು ಕೋಣೆಗೆ ಹಾಕಿ, ಹಂಚು ಹರಳು ಎಲುವು ನೋಡಿ ತೆಗೆದು, ಹುಲ್ಲುಕೊಯ್ದು ಭೂಮಿಯ ಹಸನ ಮಾಡಿ, ಕಳ್ಳಿ ಮುಳ್ಳ ಹಚ್ಚದೆ ಬೇಲಿಯ ಬಂಧಿಸಿ, ಆ ನಿರ್ಮಳವಾದ ಭೂಮಿಯಲ್ಲಿ ಶವಸಂಚಗರಿಸಿದಾಕ್ಷಣವೇ ಬಯಲಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ವರ್ಣದಿಂದ, ಭೇದಕ್ರಮದಿಂದ ಕೂಡಲಾಗಿ, ಪಂಚವರ್ಣವಾಯಿತ್ತು. ಶ್ವೇತವರ್ಣ ಮೊದಲು ಪರಿಕ್ರಮದಿಂದ ಷಡುವರ್ಣವಾಯಿತ್ತು. ಆ ವರ್ಣದ ಭೇದ ಬಿಳುಹಿನ ಸ್ವಾಯತ್ತೆಯಲ್ಲಡಗಿತ್ತು. ಇಂತೀ ಪರಮನಿಂದ ಇಂದ್ರಿಯ ವಿಕಾರವಾದುದನರಿಯದೆ, ಆತ್ಮಂಗೆ ಪರಿಭ್ರಮಣವೆಂದು ಸಂದೇಹವ ಮಾಡುವ ಬಂಧಮೋಕ್ಷಕರ್ಮಂಗಳಿಗೆ ಪರಮಸಂದ ಹರಿದಲ್ಲದೆ, ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವು ಸಾಧ್ಯವಲ್ಲ.
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಇನ್ನಷ್ಟು ... -->