ಅಥವಾ

ಒಟ್ಟು 45 ಕಡೆಗಳಲ್ಲಿ , 20 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೂತಕವಿರಹಿತ ಲಿಂಗಾರಾಧನೆ ತನುಮೂರ್ತಿಯಾದಲ್ಲಿ ಲಿಂಗೈಕ್ಯ. ಪಾತಕವಿರಹಿತ ಜಂಗಮಾರಾಧನೆ ಮನಮೂರ್ತಿಯಾದಲ್ಲಿ ಲಿಂಗೈಕ್ಯ. ಸೂತಕ ಪಾತಕವೆಂಬ ಉಭಯ ಸಂಗ ಹಿಂಗಿತ್ತು, ಕೂಡಲಚೆನ್ನಸಂಗಾ ನಿಮ್ಮ ಲಿಂಗೈಕ್ಯಂಗೆ.
--------------
ಚನ್ನಬಸವಣ್ಣ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ ಎನ್ನಂಗದ ಭಂಗ ಹಿಂಗಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಲಿಂಗದ ಸಂಯೋಗವಾಯಿತ್ತು ನೋಡಾ. ಅಯ್ಯಾ, ನಿಮ್ಮ ಶರಣರ ಸಂಗದಿಂದ ಮಹಾಪ್ರಸಾದದ ಪರುಷವ ಕಂಡೆ, ಆ ಪರುಷದ ಮೇಲೆ ಮೂರು ಜ್ಯೋತಿಯ ಕಂಡೆ, ಆ ಜ್ಯೋತಿಯ ಬೆಳಗಿನಲ್ಲಿ ಒಂಬತ್ತು ರತ್ನವ ಕಂಡೆ, ಆ ರತ್ನಂಗಳ ಮೇಲೆ ಒಂದು ಅಮೃತದ ಕೊಡನ ಕಂಡೆ. ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರದ, ಕರದವನೆ ನೆರದ, ನೆರದವನೆ ಕುರುಹನರಿದ, ಅರಿದವನೆ ನಿಮ್ಮನರಿದವ ಕಾಣಾ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಗುಡಿಯೊಡೆಯಂಗೆ ಕಂಬವೊಂದು, ಬಿಗಿಮೊಳೆಯೆಂಟು, ಕಂಬಕ್ಕೆ ಕಟ್ಟಿದ ಆಧಾರ ದಾರವೈದು, ಗುಡಿಯ ಸಂದು ಹದಿನಾರು. ಕೂಟದ ಸಂಪಿನ ಪಟ್ಟಿ ಇಪ್ಪತ್ತೈದು, ಒಂಬತ್ತು ಬಾಗಿಲು, ಮುಗಿಯಿತ್ತು ಗುಡಿ. ಗುಡಿಯ ಮೇಲೆ ಮೂರು ಕಳಸ, ಮೂರಕ್ಕೊಂದೆ ರತ್ನದ ಕುಡಿವೆಳಗು. ಬೆಳಗಿದ ಪ್ರಜ್ವಲಿತದಿಂದ ಗುಡಿ ಒಡೆಯಿತ್ತು. ಗುಡಿಯೊಳಗಾದವೆಲ್ಲವು ಅಲ್ಲಿಯೆ ಅಡಗಿತ್ತು. ಕಳಸದ ಕಳೆ ಹಿಂಗಿತ್ತು, ಮಾಣಿಕದ ಬೆಳಗಿನಲ್ಲಿ. ಆ ಬೆಳಗಡಗಿತ್ತು, ಅಗಮ್ಯೇಶ್ವರಲಿಂಗದಲ್ಲಿ ಒಡಗೂಡಿತ್ತು.
--------------
ಮನುಮುನಿ ಗುಮ್ಮಟದೇವ
ಇಳೆಯ ಮೇಲಿರ್ದ ಶಿಲೆಯೆಲ್ಲ ಲಿಂಗವಾದಡೆ ಗುರುವಿನ ಹಾಂಗೆ ಕೈ, ಜಲ ನದಿಯಲ್ಲಿ ತೀರ್ಥವಾದಡೆ, ಲಿಂಗದ ಹಾಂಗೆ ಕೈ, ಬೆಳೆದ ಬೆಳೆಯಲ್ಲ ಪ್ರಸಿದ್ಧವಾದಡೆ, ಜಂಗಮದ ಹಾಂಗೆ ಕೈ, ಎಂದುದಾಗಿ ತ್ರಿವಿಧದ ಹಂಗು ಹಿಂಗಿತ್ತು ಕಾಣಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಜಂಗಮವಿಲ್ಲದ ಮಾಟ ಕಂಗಳಿಲ್ಲದ ನೋಟ, ಹಿಂಗಿತ್ತು ಶಿವಲೋಕ ಇನ್ನೆಲ್ಲಿಯದಯ್ಯಾ. ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ, ಸಮಯೋಚಿತವನರಿಯದೆ ಉದರವ ಹೊರೆವವರ ನರಕದಲ್ಲಿಕ್ಕದೆ ಮಾಬನೆ ಕೂಡಲಸಂಗಮದೇವ 427
--------------
ಬಸವಣ್ಣ
ಕಂಗಳಿಲ್ಲದ ನೋಟ, ಲಿಂಗವಿಲ್ಲದ ಮಾಟ, ಜಂಗಮವಿಲ್ಲದೂಟ, ಪ್ರಸಾದವಿಲ[ದ] ಪರ, ಹಿಂಗಿತ್ತು ಶಿವಲೋಕವಿನ್ನೆಲ್ಲಿಯದೊ ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ ಹಿಂಗಿತ್ತು ಶಿವಲೋಕವಿನ್ನೆಲ್ಲಿಯದೊ ಬಂದ ಸಮಯವನರಿಯದೆ ಉದರವ ಹೊರೆವವರ ಕೂಗಿಡೆ ನರಕದಲ್ಲಿಕ್ಕನೆ ಕೂಡಲಸಂಗಮದೇವ
--------------
ಬಸವಣ್ಣ
ಕಾಯಗುಣ ಕೆಟ್ಟ ಮತ್ತೆ ಅರ್ಚನೆ ಹಿಂಗಿತ್ತು. ಪ್ರಾಣಗುಣ ಕೆಟ್ಟ ಮತ್ತೆ ಅರ್ಪಿತ ಹಿಂಗಿತ್ತು. ಭಾವಗುಣ ಕೆಟ್ಟ ಮತ್ತೆ ಉಭಯ ಜಂಜಡ ಹಿಂಗಿತ್ತು. ಇಂತಾದ ಕಾರಣ_ನಮ್ಮ ಗುಹೇಶ್ವರನ ಶರಣರು ಲಿಂಗಭೋಗೋಪಭೋಗವೆಂಬ ಖಂಡಿತ ಬುದ್ಧಿಯ ಮೀರಿ, ಅಖಂಡಾದ್ವೈತಬ್ರಹ್ಮದಲ್ಲಿ ತಲ್ಲೀಯವಾದರು.
--------------
ಅಲ್ಲಮಪ್ರಭುದೇವರು
ತನುವಿನ ಮಹಾಮನೆಯಲ್ಲಿ ಮಾಡುವ ಮಾಟ, ಘನಕ್ಕೆ ಘನವೆಂದು ಎದ್ದಿತ್ತು ಉಪ್ಪರಗುಡಿ ಲೀಲೋಲ್ಲಾಸವೆಂಬ ಕಳೆ ನೆಟ್ಟಿತ್ತು , ಭವವಿರಹಿತನೆಂಬ ಗುಡಿಗಟ್ಟಿತ್ತು , ಮಾಡುವ ದಾಸೋಹಕ್ಕೆ ಕೇಡಿಲ್ಲಾ ಎಂದು. ಕಾಯ ಸವೆದು ಮನಮುಟ್ಟಿ, ಭಾವನಿಶ್ಚಯವಾಗಿ ಮಾಟಕೂಟಸಂದಿತ್ತು , ಮಹಾಮನೆ ಮಹವನೊಡಗೂಡಿತ್ತು , ಕಾಯದ ಕಣೆ ಹಿಂಗಿತ್ತು, ಭಾವಗೂಡಿ ಅಳಿಯಿತ್ತು ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ತಾನಾದಲ್ಲಿ ,
--------------
ಸಗರದ ಬೊಮ್ಮಣ್ಣ
ಜ್ಞಾನಸೂತಕ, ಮೋನಸೂತಕ, ಜಪತಪ ಅನುಷಾ*ನಸೂತಕ, ಸೋಹಂ ಎಂಬ ಸೂತಕ, ಸಿದ್ಧಸೋಮನಾಥ ಪ್ರಾಣಲಿಂಗವಾಗಿ ಸೂತಕ ಹಿಂಗಿತ್ತು ಯಥಾ ಸ್ವೇಚ್ಛೆ.
--------------
ಅಮುಗಿದೇವಯ್ಯ
ಪ್ರಾಣಲಿಂಗವೆಂದಡೆ ಹೇಳದೆ ಹೋಯಿತ್ತು. ಲಿಂಗಪ್ರಾಣವೆಂದಡೆ ತನ್ನಲ್ಲೆ ಹಿಂಗಿತ್ತು. ಅದೇನೇನೆಂಬೆನೇನೆಂಬೆನು, ಮೂರು ಲೋಕವೆಲ್ಲ ತೊಳಲಿ ಬಳಲುತ್ತಿದೆ. ಉಭಯಲಿಂಗ ನಾಮ ನಷ್ಟವಾದಡೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬೆ.
--------------
ಘಟ್ಟಿವಾಳಯ್ಯ
ಪ್ರಾಣ ಲಿಂಗವೆಂದರಿದ ಬಳಿಕ ಪ್ರಾಣ ಪ್ರಸಾದವಾಯಿತ್ತು. ಲಿಂಗ ಪ್ರಾಣವೆಂದರಿದ ಬಳಿಕ ಅಂಗದಾಸೆ ಹಿಂಗಿತ್ತು. ಲಿಂಗ ಸೋಂಕಿನ ಸಂಗಿಗೆ ಕಂಗಳೆ ಕರುವಾದವಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಹಿಂಗದೆ ಅನಿಮಿಷನಾಗಿಹ ಶರಣಂಗೆ.
--------------
ಅಕ್ಕಮಹಾದೇವಿ
ಅಯ್ಯಾ, ನಾ ಮರ್ತ್ಯದಲ್ಲಿ ಹುಟ್ಟಿ ಕಷ್ಟಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿ ಕರ್ಮಕ್ಕೆ ಗುರಿಯಾಗುತ್ತಿದ್ದಡೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗವ ಕಟ್ಟಿದನು. ತಂದೆಯೆಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು. ಪ್ರಾಣಕ್ಕೆ ಪ್ರಸಾದವನೂಡಲಾಗಲೆ ಕತ್ತಲೆ ಹರಿಯಿತ್ತು; ಕರ್ಮ ಹಿಂಗಿತ್ತು ಮನ ಬತ್ತಲೆಯಾಯಿತ್ತು; ಚಿತ್ತ ಸುಯಿದಾನವಾಯಿತ್ತು ನಿಶ್ಚಿಂತವಾಯಿತ್ತು. ನಿಜವ ನೆಮ್ಮಿ ನೋಡುವನ್ನಕ್ಕ, ಎನ್ನ ಅತ್ತೆ ಮಾವರು ಅರತುಹೋದರು; ಅತ್ತಿಗೆ ನಾದಿನಿಯರು ಎತ್ತಲೋಡಿಹೋದರು, ಸುತ್ತಲಿರುವ ಬಂಧುಗಳೆಲ್ಲ ಬಯಲಾದರು. ಎನ್ನ ತಂದೆ ತಾಯಿ ಕಟ್ಟಿದ ಚಿಕ್ಕಂದಿನ ಗಂಡನ ನೋಡುವ ನೋಟ ಹೋಗಿ, ಎನ್ನ ಮನಕ್ಕೆ ಸಿಕ್ಕಿತ್ತು; ಅಂಗಲಿಂಗವೆಂಬ ಉಭಯವಳಿಯಿತ್ತು; ಸಂಗಸುಖ ಹಿಂಗಿತ್ತು. ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಧರ್ಮವ ನುಡಿವಲ್ಲಿ ಕ್ರಿಯಾಧರ್ಮ, ನಿರ್ಮವ ನುಡಿವಲ್ಲಿ ಮಾಯಿಕಮಲಂ ನಾಸ್ತಿ. ಕಾಯ ಉಳ್ಳನ್ನಕ್ಕ ಪೂಜೆ, ಜೀವವುಳ್ಳನ್ನಕ್ಕ ನೆನಹು. ಎರಡಿಟ್ಟು ನೋಡುವಲ್ಲಿ ಕೂಟ, ಆತುರ ಹಿಂಗಿದ ಮತ್ತೆ ಬಂಕೇಶ್ವರಲಿಂಗನ ಎಡೆಯಾಟ ಹಿಂಗಿತ್ತು.
--------------
ಸುಂಕದ ಬಂಕಣ್ಣ
ಯೋನಿಜನಾಗಿ ದಶ ಅವತಾರಕ್ಕೆ ಒಳಗಾದಲ್ಲಿ ದೇವಪದ ಹಿಂಗಿತ್ತು. ನಾಭಿ ಅಂಬುಜದಲ್ಲಿ ಹುಟ್ಟಿ ಪಿತಭವಕ್ಕೆ ಬಾಹಾಗ ಸುತಂಗೆ ಸುಖವಿಲ್ಲವಾಗಿ ಬ್ರಹ್ಮಪದ ನಿಂದಿತ್ತು. ಸಂಹಾರಕಾರಣನಾಗಿ ಕಪಾಲಶೂಲನಾಟ್ಯಾಡಂಬರನಾಗಿ ಇದ್ದುದರಿಂದ, ಈಶ್ವರಪದ ನಿಂದು ರ್ರಪದವಾಯಿತ್ತು. ಇಂತೀ ತ್ರಿವಿಧವನರಿದು ತೊಲಗಿ ನಿಂದಲ್ಲಿ ಸದಾಶಿವಮೂರ್ತಿಲಿಂಗದ ನೆಲೆಯಾಯಿತ್ತು.
--------------
ಅರಿವಿನ ಮಾರಿತಂದೆ
ಆಧಾರವ ಬಲಿಯೆ ಬೇಗೆವರಿಯಿತ್ತು; ಕಿಚ್ಚು ಆವರಿಸಿ ಊರ್ದ್ವಕ್ಕೇರಿತ್ತು. ಸಾಸಿರದಳದ ಅಮೃತದ ಕೊಡ ಕಾಯಿತ್ತು. ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು ಹಸಿವು ಕೆಟ್ಟಿತ್ತು; ತೃಷೆಯಡಗಿತ್ತು ನಿದ್ರೆಯರತಿತ್ತು; ಅಂಗಗುಣವಳಿಯಿತ್ತು ಲಿಂಗಗುಣ ನಿಂದಿತ್ತು ಸಂಗಸುಖ ಹಿಂಗಿತ್ತು. ಅಂಗಲಿಂಗವೆಂಬ ಉಭಯವಳಿದು, ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->