ಅಥವಾ

ಒಟ್ಟು 33 ಕಡೆಗಳಲ್ಲಿ , 16 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ನಿರಂಜನ ತಾನೆಂದರಿಯದೆ, `ತತ್ತ್ವ ಮಸಿ' ಎಂದು ಹೊರಗನೆ ಬಳಸಿ ಸತ್ತಿತ್ತಲ್ಲಾ ಜಗವೆಲ್ಲ ನಾಯ ಸಾವ ! ತಮ್ಮ ತಾವರಿಯದೆ, ಸತ್ತವರ ಹೆಸರ ಪತ್ರವನೋದಿದಡೆ ಎತ್ತಣ ಮುಕ್ತಿ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಹರಸ್ರಾವದಲ್ಲಿ ಹುಟ್ಟಿ ನರಸ್ರಾವವ ನೆನೆವ ಭಂಡರನೆನಗೊಮ್ಮೆ ತೋರದಿರಯ್ಯಾ ! ಹರಸ್ರಾವವೆಂದರೆ-ಗುರುವಿನ ಕರಕಮಲದಲ್ಲಿ ಹುಟ್ಟಿ ನರರ ತಂದೆತಾಯಿಗಳೆನಬಹುದೆ ? ಎನಲಾಗದು. ನಿಮಗೆ ತಂದೆ ತಾಯಿಗಳೆಂದರೆ ಹೇಳುವೆ ಕೇಳಿರೊ. ಗುರುವೆ ತಾಯಿ, ಗುರುವೆ ತಂದೆ, ಗುರುವೆ ಬಂಧು, ಗುರುವೆ ಬಳಗ, ಗುರುವಿನಿಂದ ಅಧಿಕವಾಗಿಪ್ಪರು ಇನ್ನಾರೂ ಇಲ್ಲ. ಸಾಕ್ಷಿ :``ಗುರುರ್ಮಾತಾ ಗುರುಃಪಿತಾ ಗುರುಶ್ಚ ಬಂಧುರೇವ ಚ | ಗುರುದೈವತಾತ್‍ಪರಂ ನಾಸ್ತಿ ತಸ್ಮೆ ೈ ಶ್ರೀ ಗುರುವೇ ನಮಃ ||'' ಎಂದುದಾಗಿ, ಗುರುಪುತ್ರನಾಗಿ ನರರ ಹೆಸರ ಹೇಳುವ ನರಕಜೀವಿಯನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳೆಂಬೆ. ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ. ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ ಅಫ್ಸೋರಿಗಳ ವಿರಕ್ತರೆನ್ನಬಹುದೆ? ಎನಲಾಗದು. ವಚನದ ರಚನೆಯ ಅರಿದೆನೆಂಬ ಅಹಂಕಾರವ ಮುಂದುಗೊಂಡು ತಿರುಗುವ ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ. ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ ; ವಾಯು ಬೀಸದ ಉದಕದಂತಿರಬೇಕು; ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು; ದರಿದ್ರಗೆ ನಿಧಾನಸೇರಿದಂತಿರಬೇಕು; ರೂಹಿಲ್ಲದ ಮರುತನಂತಿರಬೇಕು; ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು; ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು. ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು. ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು.
--------------
ಅಮುಗೆ ರಾಯಮ್ಮ
ತಂದೆಯ ಹೆಸರ ಮಗನಮಡದಿಗೆ ಮಿಂಡರು ಮೂವರು ನೋಡಾ. ಒಬ್ಬಂಗೆ ಕೈಗೊಟ್ಟು ಗುದ್ಯಾಡುವಳು, ಒಬ್ಬಂಗೆ ಮಾತುಕೊಟ್ಟು ಚಿಂತಿಸುವಳು, ಒಬ್ಬನ ನೆರೆದು ಸುಖಿಸುವಳು, ಇಂತಪ್ಪ ನಿತ್ಯ ನೇಮದ ಹಾದರಗಿತ್ತಿಗೆ ಗುರುನಿರಂಜನ ಚನ್ನಬಸವಲಿಂಗವ ಕೂಡುವಳೆಂದು ನಗುವರು ಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಡಮಂಡಗೆ ಬೆಲ್ಲ ದ್ರಾಕ್ಷೆ ಸಕ್ಕರೆ, ಸರಿಭಾಗವಾದ ಹೊಸ ಹೆಸರ ಭಕ್ಷ್ಯ ಪನ್ನಿರ್ಖಂಡುಗ, ಸುಲಿಗಡಲೆಯ ಕಜ್ಜಾಯ ಹದಿನೆಂಟು ಖಂಡುಗ, ಅಕಾಲ ಮಾವಿನಹಣ್ಣು ಇಪ್ಪತ್ತುನಾಲ್ಕು ಲಕ್ಷ, ಕಡೆಯಿಲ್ಲದ ಕದಳೀಫಲ, ಚಾರಬೀಜ ಎಂಬತ್ತು ಖಂಡುಗ, ತವರಾಜ ಹೆತ್ತುಪ್ಪ, ಹಲಸಿನ ಹಣ್ಣು ಮನ ಮೇರೆ, ಹಾಲಕೆನೆ ಹದಿನೆಂಟು ಖಂಡುಗ, ಉತ್ತತ್ತಿ, ಚಿಲುಪಾಲಘಟ್ಟಿ ಕಟ್ಟಣೆಯಿಲ್ಲ. ಮನವೊಲಿದ ಕಜ್ಜಾಯವನಾರೋಗಣೆಯ ಮಾಡು ದೇವಾ, ಕೂಡಲಸಂಗಮದೇವಾ.
--------------
ಬಸವಣ್ಣ
ಮುನ್ನಿನ ಕಲಿ ವೀರಧೀರರು ಕಾದಿದ ರಣಗಳನು ಪರಿಪರಿಯಲಿ ಬಣ್ಣಿಸಿ ಹೇಳಲುಬಹುದಲ್ಲದೆ ಆ ದಳವಿದಿರಾದಲ್ಲಿ ಬಿರಿದ ಪಚಾರಿಸಿ, ಕಾದಿ ತೋರಲುಬಾರದು. ಮುನ್ನಿನ ಪುರುಷಬ್ರತಿಯರು ಒಲಿಸಿದ ಆಯತವ ಪರಿಪರಿಯಲು ಬಣ್ಣಿಸಲು ಬಹುದಲ್ಲದೆ ಪುರುಷನಿರ್ವಾಣಕ್ಕುರಿವಗ್ನಿಯ ಬಂದು ಹೊಕ್ಕು ತೋರಲುಬಾರದು. ಮುನ್ನಿನ ಪುರಾತನರೆಲ್ಲರು ತನುಮನಧನವನ್ನಿತ್ತು ಮಾಡಿ, ನೀಡಿ ಲಿಂಗವ ಕೂಡಿದ ಪರಿಗಳನು ಅನುಭವದಲರ್ಥೈಸಿ ಹೇಳಬಹುದಲ್ಲದೆ ಮಾಡಿ, ನೀಡಿ ತೋರಲುಬಾರದು. ಇಂತೀ ಅರೆಬಿರಿದಿನ ಬಂಟರು, ಪುರುಷಬ್ರತಿಯರು, ಪುರಾತನರು ಬರಿಯ ಮಾತನಾಡಿ ಹೊರಗೆ ಮೆರೆವರಲ್ಲಾ ! ಪರೀಕ್ಷೆಯುಂಟಾಗಿಯಿದ್ದಡೆ ಒಳಗಣವರ ಹೆಸರ ಹಿಡಿದು ಪರಿಪರಿಯಲು ಹೊಗಳುವರು. ಶರೀರಮರ್ಥಪ್ರಾಣ ಗುರುಲಿಂಗಜಂಗಮಕ್ಕೆ ಪರೀಕ್ಷೆಯುಂಟಾಗಿಯೆ `ಆತ ಮಹೇಶ್ವರ ಪುರಾತವಳಿ'ಯೆಂಬ ಪರಮಬಂಧುಗಳಾತನ ನೆನೆನೆನೆದು ಬದುಕುವರು. ಇಂತೀ ಅನುಭಾವದಲೋದಿ, ಅಕ್ಷರಾಭ್ಯಾಸವ ಸಾಧಿಸಿ ತರ್ಕಿಸಿ ನಿಂದಿಸಲಾಗದು, ಕೂಡಲಸಂಗನ ಶರಣರಿಗಲ್ಲದನುಭಾವವಿಲ್ಲ.
--------------
ಬಸವಣ್ಣ
ಅರಸನ ಹೆಸರಿಟ್ಟ ಅನಾಮಿಕನಂತೆ ನಾಮಕ್ಕರುಹರಲ್ಲದೆ ಪಟ್ಟಕ್ಕರುಹರಪ್ಪರೆ ? ಲಿಂಗ ಜಂಗಮ ಪ್ರಸಾದದ ಅನುಭಾವದ ಹೆಸರ ಹೇಳಿಕೊಂಡು ಬದುಕುವರಲ್ಲದೆ, ವೇಷವ ಧರಿಸಿಪ್ಪ ಆಶ್ರಿತರೆಲ್ಲರೂ, ಸಜ್ಜನ ಸಂಬಂಧ ಗುಣಾದಿಗುಣಂಗಳಿಗೆ ಯೋಗ್ಯರೆ ? ಕೂಡಲಚೆನ್ನಸಂಗಯ್ಯಾ ಸಹಜ ಸಮ್ಯಕ್ಕರಲ್ಲದವರಂತಿರಲಿ.
--------------
ಚನ್ನಬಸವಣ್ಣ
ಒಡೆಯನ ಹೆಸರ ಹೇಳಿ ಒಡಲ ಹೊರೆವವರು ಕೋಟ್ಯಾನುಕೋಟಿ. ಮೃಡನ ವೇಷವ ಧರಿಸಿ ಕಡುಗಲಿಗಳಾಗಿ ಚರಿಸುವರ ಕಣ್ಣಿನಲ್ಲಿ ಕಾಣೆ. ನುಡಿವರು, ಮಾತಿನಲ್ಲಿ ಬ್ರಹ್ಮವ ನುಡಿದಲ್ಲಿ ಫಲವೇನು ¯ ಎನ್ನೊಡೆಯಾ, ಎನ್ನ ಬಿಡದೆ ಕಡುಗಲಿಯ ಮಾಡಯ್ಯಾ ಅಮುಗೇಶ್ವರಾ.
--------------
ಅಮುಗೆ ರಾಯಮ್ಮ
ಆವುದರಲಾದಡೇನು ನೀನು? ನೀನು ಮಹಾಸಮರ್ಥನಯ್ಯಾ ಧನದಲ್ಲಿ ಗುಣದಲ್ಲಿ ಹೆಂಪಿನ ಹೆಸರ ಹಿರಿಯನು ನೀನಯ್ಯಾ. ಅಯ್ಯಾ, ನೀನೆಲ್ಲರಲ್ಲಿ ಸಂಪನ್ನನಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವರ ದೇವ.
--------------
ಸಿದ್ಧರಾಮೇಶ್ವರ
ವೇದಶಾಸ್ತ್ರಪುರಾಣಂಗಳ ಗತಿಯಲ್ಲಿ ನಡೆದು ತಪ್ಪಿತ್ತೆಂಬವನಲ್ಲ ಶರಣ. ಲಿಂಗದ ಹೆಸರ ಹೇಳಿ ಫಲಪದವೆಂಟತೋರಿ ಮಾರುವನಲ್ಲ ಶರಣ. ಅಚೇತನವ ಚೇತನಿಸುವ ಪೂರ್ವಕರ್ಮವಿಡಿದು ಆಚರಿಸುವವನಲ್ಲ ಶರಣ. ಆರು ಮೂರಕ್ಕೆ ತಂದು, ತ್ರಿವಿಧವನೊಂದು ಮಾಡಿ ಬಿಚ್ಚಿ ಬೇರಿಲ್ಲದೆ ಬೆರಸಿ, ಒಂದಿಲ್ಲದಿರಬಲ್ಲನಾಗಿ ತರ್ಕಂಗಳಿಗೆ ಅತಕ್ರ್ಯ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಆದಿಯನರಿಯದೆ, ಅನಾದಿಯಿಂದತ್ತತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ; ಮಾಡಿದಡೆ ಫಲವೇನಯ್ಯಾ ಬಸವಯ್ಯಾ ? ಸಾವನ್ನಕ್ಕ ಸಾಧನೆಯ ಮಾಡಿದಡೆ, ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ ? ಬಾಳುವನ್ನಕ್ಕ ಭಜನೆಯ ಬಾಡಿದಡೆ ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ ?_ ಇದು ಕಾರಣ, ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ, ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು, ತಮ್ಮ ತಾವರಿಯದೆ ಕೆಟ್ಟರು. ತಲೆಯ ಕೊಯಿದು ದೇಹವ ಕಡಿದು, ಕಣ್ಣ ಕಳೆದು ಹೊಟ್ಟೆಯ ಸೀಳಿ, ಮಗನ ಕೊಂದು ಬಾಣಸವ ಮಾಡಿ, ವಾದಿಗೆ ಪುರಂಗಳನೊಯ್ದು, ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ ? ಅವರಿಗೆ ಶಿವಪಥವು ಸಾಧ್ಯವಾಯಿತ್ತೆ ? ಭವ ಹಿಂಗಿತ್ತೆ ? ಅದು ಸಹಜವೆ ?_ಅಲ್ಲಲ್ಲ ನಿಲ್ಲು ಮಾಣು. ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು, ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು, ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು, ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು, ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು, ಲಿಂಗವ ಹಿಡಿದವರೆಲ್ಲರು ಫಲ_ಪದಗಳೆಂಬ ಸಂಸಾರಕ್ಕೊಳಗಾದರು, ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ ? ಇದು ಕಾರಣ; ನಿತ್ಯ ನಿಜತತ್ವ ತಾನೆಂದರಿಯದೆ, `ತತ್ವಮಸಿ' ವಾಕ್ಯವ ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು, ಸತ್ತರಲ್ಲಾ ನಾಯಿ ಸಾವ ! ಸತ್ತವರ ಹೆಸರ ಪತ್ರವ ನೋಡಿದಡೆ (ಓದಿದಡೆ?) ಅದೆತ್ತಣ ಮುಕ್ತಿಯೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹಲವುಕಾಲದ ಋಷಿಯರೆಲ್ಲರೂ ಶಿವಭಕ್ತಿಯ ನೆಲೆಯನರಿತು ಬ್ರಾಹ್ಮಣರೆನಿಸಿಕೊಂಡರು. ಇವರ ನೆಲೆಯನರಿಯದ ನಿಂದಕರು ಗೆಲವಿಂಗೆ ಹೆಣಗುವ ಪರಿಯ ನೋಡಾ. ಹಲವು ದೈವಂಗಳಿಗೆರಗಿ ಕುಲದಲ್ಲಿ ಶಿಷ್ಟರೆನಿಸಿಕೊಂಬರು. ಮೊದಲೆ ಹುಟ್ಟಿದ ರುದ್ರನ ಹೆಸರ ಹೇಳಿ, ಬ್ರಾಹ್ಮಣನಲ್ಲದ ಭುಜದಲ್ಲಿ ತೊಡೆಯಲ್ಲಿ ಅಂಗದಲ್ಲಿ ಹುಟ್ಟಿದ ಶೂದ್ರ ವೈಶ್ಯ ಕ್ಷತ್ರಿಯಂಗೆ ಹೊಡೆವಡುವ ಗುರುದ್ರೋಹಿಗಳು ತಮ್ಮ ಹೆಸರು ವೇದಬ್ರಾಹ್ಮಣರೆನಿಸಿಕೊಂಡು, ಗೋವನರ್ಚಿಸಿ ಪೂಜಿಸಿ ಅನಂತ ಪರಿಯಲ್ಲಿ ಶರಣೆಂಬರು. ಮರಳಿ ಗೋಹಿಂಸೆಯ ಮಾಡುವರು. ಗೋನಾಯಿಗಳು ನುಡಿದಂತೆ ನಡೆಯರು, ನುಡಿ ಹೊಲೆ ಹಿಂಗದು. ಇಂತಿವರ ವೇದಬ್ರಾಹ್ಮಣರೆಂದವರಿಗೆ ನಾಯಕನರಕ ತಪ್ಪದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಊರೊಳಗೆ ಆರುಮಂಟಪವ ಕಂಡೆನು. ಐವತ್ತೆರಡು ಎಸಳಿಂದ ರಚಿಸುತ್ತಿಪ್ಪುದಯ್ಯ. ಎಸಳೆಸಳು ತಪ್ಪದೆ ಅಕ್ಷರ ಲಿಪಿಯನೇ ಕಂಡು ಅಕ್ಷರ ಲಿಪಿಯ ಹೆಸರ ಕಲ್ಪಿತ ಲಿಪಿಯನೇ ತೊಡೆದು ನಿರ್ವಿಕಲ್ಪ ನಿತ್ಯಾತ್ಮಕನಾದೆನಯ್ಯ. ಆರು ಮಂಟಪವನಳಿದು ಮೂರು ಕೋಣೆಯ ಕೆಡಿಸಿ ಸಾವಿರೆಸಳ ಮಂಟಪವ ಹೊಗಲಾಗಿ ಸಾವು ತಪ್ಪುವುದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವಾಶ್ರಯದಲ್ಲಿ ಹುಟ್ಟಿ, ಭವಾಶ್ರಯವ ನೆನೆರ ಭಂಡರ ಮುಖವ ನೋಡೆ, ನೋಡೆ. ಶಿವಾಶ್ರಯವೆಂದರೆ, ಶ್ರೀ ಗುರುವಿನ ಕರಕರಮಲವೆಂಬ ಪರಿ; ಭವಾಶ್ರಯವೆಂದರೆ, ತನ್ನ ಹಿಂದಣ ತಾಯಿ ತಂದೆಗಳೆಂಬ ಪರಿ. ಇಂತು ಗುರುಕರಜಾತನಾಗಿ, ಗುರುಕುಮಾರನಾಗಿ, ನರರ ಹೆಸರ ಹೇಳುವ ನರಕಜೀವಿಯ ಎನಗೊಮ್ಮೆ ತೋರದಿರ. ತಾನು ಶುದ್ಧನಿರ್ಮಲನಾಗಿ ಮಲಸಂಬಂಧವ ಬೆರೆಸುವ ಮರುಳುಮಾನವನ ಪರಿಯ ನೋಡಾ. ಇಂತಪ್ಪ ಅಜ್ಞಾನಿಯ ಶಿಷ್ಯನೆಂದು ಕೈವಿಡಿಯಬಹುದೆ?. ಇಂತಿವರಿಬ್ಬರ ಗುರುಶಿಷ್ಯಸಂಬಂಧವ ಕಂಡು ನಾನು ಹೇಸಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
ಇನ್ನಷ್ಟು ... -->