ಅಥವಾ

ಒಟ್ಟು 44 ಕಡೆಗಳಲ್ಲಿ , 15 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತೆಯಿಲ್ಲದ ಅಜಾತನು, ತಂದೆಯಿಲ್ಲದ ಇಂದುಧರನು, ತಂದೆ ತಾಯಿ ಹೆಸರು ಕುಲವಿಲ್ಲದ ಪರಮನು. ಲಿಂಗದಲ್ಲಿ ಉದಯನಾದ ಚಿನುಮಯನು ನೋಡಾ, ಭಕ್ತನು. ನಿರ್ವಿಕಲ್ಪ ನಿರಂಜನನಾಗಿ ಮಾಯಾರಂಜನೆಯಿಲ್ಲದ ಮಹಾಮಹಿಮನು ನೋಡಾ, ಭಕ್ತನು. ಒಳಹೊರಗನರಿಯದ ಪರಿಪೂರ್ಣಸರ್ವಮಯವಾದ ಜಗಭರಿತನು, ಅದ್ವಯನು ನೋಡಾ ಭಕ್ತನು. ಇಂತಪ್ಪ ನಿರುಪಾಧಿಕ ಭಕ್ತನ, ನಿರ್ಗುಣ ಚರಿತ್ರವನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸತ್ತವರ ಸಮಾಧಿಯಲ್ಲಿ ತಡಿಗಿಯ ಕಟ್ಟಿಸಿ, ಹಿರಿಯರ ಗದ್ದುಗೆಯನ್ನು ಪೂಜಿಸುವವರು ಮಹೇಶ್ವರರಲ್ಲ. ಕಟ್ಟಿಗೆ ಹಾವಿಗೆ, ಬೆಳ್ಳಿಯ ಕಟ್ಟಿಗೆ ಜಡಿಗಟ್ಟಿದ ಕೂದಲು ಹಿರಿಯರೆಂದು ಪೂಜಿಸುವವರು ಮಹೇಶ್ವರರಲ್ಲ. ಸತ್ತ ತಾಯಿತಂದೆಗಳ ಹೆಸರು ತಮ್ಮ ಪುತ್ರರಿಗೆ ಇಟ್ಟು, ಪರರಿಗೆ ತಮ್ಮ ಹಿರಿಯರು ಗಳಿಸಿದ ಮಠಮಾನ್ಯವೆಂದು ಹೋರಾಡಿ ತಗಾದಿ ತಳ್ಳಿ ತಡಿಯ ಮಾಡಿ ಸರಕಾರಕ್ಕೆ ಹೊನ್ನ ಕೊಟ್ಟವರು ಮಹೇಶ್ವರರಲ್ಲ. ಇಂತಿವರು ಮಹೇಶ್ವರರೆಂದಡೆ ನಿಮ್ಮ ಶರಣರು ತಮ್ಮ ಪಾದರಕ್ಷೆಯಿಂದ ಹೊಡೆಯದೆ ಮಾಣ್ಬರೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂದು ಆದಿಯ ಬಿಂದುವಿಲ್ಲದಂದು, ನಿಮಗೂ ನನಗೂ ಲಿಂಗಾಂಗವೆಂಬ ಹೆಸರಿಲ್ಲದೆ ಇರ್ದೆವೆಂದು, ಆದಿಬಿಂದು ರೂಹಿಸಿದಲ್ಲಿ ಲಿಂಗಾಂಗವೆಂಬ ಹೆಸರು ಬಂದಿತ್ತೆಂದು, ಅಂದು ಆದಿಯಾಗಿ ನೀವಾವಾವ ಲೀಲೆಯ ಧರಿಸಿದಡೆ, ಆ ಲೀಲೆಗೆ ನಾನಾಧಾರವಾದೆ. ನಿಮಗೂ ನನಗೂ ಎಂದೆಂದೂ ಹೆರಹಿಂಗದ ಯೋಗ. ಅದು ನೀವು ಬಲ್ಲಿರಿ, ನಾ ಬಲ್ಲೆನು, ನುಡಿದು ತೋರಲೇಕಿನ್ನು? ಇಂದೆನಗೆ ತನು ಯೋಗವಾದಲ್ಲಿ ನಿಜ ಹೊರತೆ? ``ಶಿವಯೋಗಿ ಶರೀರೇ ಚ ಸದಾ ಸನ್ನಿಹಿತಶ್ಯಿವಃ' ಎಂದುದಾಗಿ, ನಿಮಗೆ ಬೇರೆ ದೇಹವಿಲ್ಲ. ನನ್ನ ದೇಹವೆ ನಿಮ್ಮ ದೇಹವೆಂಬುದಕ್ಕೆ ನೀವೇ ಸಾಕ್ಷಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಐಮುಕ್ತಿ ಕ್ಷೇತ್ರದ ವಾಸದ ರಜತಗಿರಿಯ ಮಧ್ಯದಲ್ಲಿ ಕುರುಕ್ಷೇತ್ರ. ಅದರೊಳಗಿಬ್ಬರು ದೊರೆಗಳು ಅರಿರಿಪುಗಳಾದರು. ಅವರ ಹೆಸರು ಕಳಾಂಧರ ಕಮ್ಮಟಹತ. ಅಸುಗತನೆಂಬವ ಬೇರೊಬ್ಬನರಸು ರಿಪು. ಕುಲತಮನಾಶಗತಿ ಮಂಡಲವಿರಹಿತ ರಾಜಕುಲ ಅಸುನಾಥ. ಇವರಿಬ್ಬರು ಮಸಕಲಿಕೆ ಮೊನೆಯಾಯಿತ್ತು. ಅಸುಭಟರೆಲ್ಲರು ಹುಸಿಭಟರಾದರು, ಬಂಕೇಶ್ವರಲಿಂಗವ ಅಹುದಲ್ಲವೆಂದ ಕಾರಣ.
--------------
ಸುಂಕದ ಬಂಕಣ್ಣ
ಅಂತರಂಗದ ನಿರವಯವದು ಲಿಂಗವೆ ? ಬಹಿರಂಗದ ಸಾವಯವದು ಜಂಗಮವೆ ? ಅಂತರಂಗದ ನಿರವಯವದು ಜ್ಞಾನಸೂಚನೆಯ ಭಾವವೆಂದು ನಾಚರು ನೋಡಾ. ಬಹಿರಂಗದ ಸಾವಯವದ ವಿಷಯದೃಷ್ಟಿಯೆಂದು ಹೆಸರು ನೋಡಾ. ಈ ಉಭಯ ಒಂದಾದಡದು ಅಭೇದ್ಯ ಕೂಡಲಚೆನ್ನಸಂಗ ನಿಮ್ಮಲ್ಲಿ.
--------------
ಚನ್ನಬಸವಣ್ಣ
ಭಕ್ತಿಭಾಂಡದ ಶಿವಭಕ್ತರ ನಿಷೇಧವ ಮಾಡುವ ಕರ್ಮಭಾಂಡದ ದ್ವಿಜರು ನೀವು ಕೇಳಿಭೋ : `ಸತ್ಯಂ ಭೋ ಬ್ರೂತ ಪಂಚಪ್ರಾಣ ಇಂದ್ರಿಯನಿಗ್ರಹಮೆಂದೋದಿ ಗುದ್ದಿ ಗುದ್ದಿ ಹೋತನ ತಿಂಬುದಾವಾಚಾರವೊ ? `ಪಿತಾಮಹಶ್ಚ ವೈಶ್ಯಸ್ತು ಕ್ಷತ್ರಿಯೋ ಪರಯೋ ಹರಿಃ ಬ್ರಾಹ್ಮಣೋ ಭಗವಾನ್ ರುದ್ರಃ ಸರ್ವೇಷ್ವ್ಯುತ್ತಮೋತ್ತಮಃ ಎಂಬ ಶ್ರುತಿಯ ನೋಡಿ, ತಮ್ಮ ಕುಲದೈವವಹ ಬ್ರಾಹ್ಮಣನಹ ರುದ್ರನ ನಿಂದಿಸಿ, ತಮಗಿಂದ ಕೀಳುಜಾತಿಯಹ ಕ್ಷತ್ರಿಯ ಹರಿಯ ಆರಾಧಿಸುವ ಕುಲಹೀನರು ನೀವು ಕೇಳಿಭೋ : `ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ದ್ವಿಜ ಉಚ್ಯತೇ `ವೇದಾಭ್ಯಾಸೇನ ವಿಪ್ರಸ್ತು ಬ್ರಹ್ಮಣಾ ಚರಂತೀತಿ ಬ್ರಾಹ್ಮಣಃ ಎಂಬ ಶ್ರುತಿಯನೋದಿ, ಪರಬ್ರಹ್ಮನಂತಹ ಶಿವಲಿಂಗಪೂಜೆಯನಾಚರಿಸಿ ಬ್ರಾಹ್ಮಣತ್ವವನೈ[ದದೆ] ಶತಯಾಗಂಗಳ ಮಾಡಿ ಶೂದ್ರನಹ ಇಂದ್ರತ್ವವ ಬಯಸುವ ಅಧಮರು ನಿವು ಕೇಳಿಭೋ : `ಜನ್ಮನಾ ಜಾಯತೇ ಶೂದ್ರಃ ಮಾತಾ ಸಾ ಪ್ರಥಮಂ ಶೂದ್ರಾಣಿ ನಚೋಪದೇಶಃ ಗಾಯತ್ರೀ ನ ಚ ಮೌಂಜೀ ನ ಚ ಕ್ರಿಯಾ ಎಂದುದಾಗಿ, ದೀಕ್ಷೆಯಿಲ್ಲದೆ ಸತಿಶೂದ್ರಗಿತ್ತಿಗೆ ಹುಟ್ಟಿದವನೊಡನುಂಬ ಅನಾಚಾರಿಗೆ ಎಲ್ಲಿಯದೊ ಬ್ರಾಹ್ಮಣತ್ವ ? ಆವ ಜಾತಿಯವನಾದರೇನು ಶಿವಭಕ್ತನೆ ಬ್ರಾಹ್ಮಣ. ಅದಕ್ಕೆ ಸಾಕ್ಷಿ : . `ತಪಸಾ ಬ್ರಾಹ್ಮಣೋ[s]ಭವತ್ ಸಾಂಖ್ಯಾಯನ ಮಹಾಮುನಿಃ ತಪಸಾ ಬ್ರಾಹ್ಮಣೋ[s]ಭವತ್ ಗೌತಮಸ್ತು ಮಹಾಮುನಿಃ ಜಾತಿಂ ನ ಕಾರಯೇತ್ತೇಷು ಶ್ರೇಷಾ*ಃ ಸಮಭವಂಸ್ತತಃ ತಜ್ಜಾತಿರಭವತ್ತೇನ' ಎಂದುದಾಗಿ, ತಮ್ಮ ತಮ್ಮ ಗೋತ್ರಂಗಳೆ ಸಾಕ್ಷಿಯಾಗಿ ಸಾರುತ್ತಿರಲು ಕುಭ್ರಮೆಯಾತಕ್ಕೆ ? ಶ್ವಪಚೋ[s]ಪಿ ಮುನಿಶ್ರೇಷ*ಃ ಶಿವಭಕ್ತಿಸಮನ್ವಿತಃ ಶಿವಭಕ್ತಿವಿಹೀನಸ್ತು ಶ್ವಪಚೋ[s]ಪಿ ದ್ವಿಜಾಧಮಃ ಎಂದುದಾಗಿ ಶಿವಭಕ್ತನೆ ಕುಲಜ, ಶಿವಭಕ್ತಿ ಇಲ್ಲದವನೆ ಶ್ವಪಚನೆಂದರಿಯದ ಅಜ್ಞಾನಿಗಳು ನೀವು ಕೇಳಿಭೋ ! `ಏಕ ಏವ ರುದ್ರೋ ನ ದ್ವಿತೀಯಾಯತಸ್ಥೇ' ಎಂದು ವೇದವನೋದಿ `ಪಶುಪತಯೇ ನಮಃ' ಎಂದಾ ರುದ್ರವನೋದಿ ಶಿವನೆ ಪತಿ ಮಿಕ್ಕಿನ ದೈವಂಗಳೆಲ್ಲ ಪಶುಗಳೆಂಬುದ ತಿಳಿದು ಮತ್ತೆಯೂ ಈ ದ್ವಿಜರು ಕಾಣಲರಿಯರು. ಹರಹರನೊಂದೆಯೆಂಬ ನರಗುರಿಗಳು ನೀವು ಕೇಳಿಭೋ ! ಪಾರಾಶ[ರ] ಪುರಾಣೇ : ಆದೌ ರುದ್ರಾಂಗಮುತ್ಪತ್ತಿಃ ಮುಖೇ ಬ್ರಾಹ್ಮಣವೀಶ್ವರಃ ವಿಷ್ಣುಂ ಕ್ಷತ್ರಿಯಮಿತ್ಯಾಹುರ್ಬಾಹುನಾ ಚ ಅವಸ್ಥಿತಃ ವೈಶ್ಯಶ್ಚ ಬ್ರಹ್ಮಾ ಇತ್ಯಾಹುಃ ಲಿಂಗಾದೇವ ಅವಸ್ಥಿತಃ ಸುರಪೋ ಶೂದ್ರಯಿತ್ಯಾಹುಃ ದೇವಪಾದಾದವಿಸ್ಥಿತಃ ಎಂದುದಾಗಿ, ರುದ್ರನ ಮುಖದಲ್ಲಿ ಹುಟ್ಟಿದವನೆ ಬ್ರಾಹ್ಮಣ, ಮಿಕ್ಕಾದ ವಿಪ್ರರೆಲ್ಲರು ಋಷಿಗೋತ್ರದಲ್ಲಿ ಹುಟ್ಟಿದರು. ಆ ಋಷಿಮೂಲದ ವಿಪ್ರರೆಲ್ಲರು ಅಧಮಜಾತಿ ಅಧಮಜಾತಿಯಾದರೇನು ? ರುದ್ರಭಕ್ತರಾದ ಕಾರಣ ಬ್ರಾಹ್ಮಣರಾದರು. ಈ ವರ್ಮವನರಿಯದ ಚಾಂಡಾಲ ವಿಪ್ರರ್ಗೇನೂ ಸಂಬಂಧವಿಲ್ಲ. ಕಾಕ ರುದ್ರನ ಮುಖದಲ್ಲಿ ಉದ್ಭವವೆಂಬುದಕ್ಕೆ ಶ್ವಾನಸೂಕರರೂಪೇ ಪ್ರೇತಪಿಂಡ ಪ್ರದಾನತಃ ಪ್ರೇತತ್ವಂ ಚ ಸದಾ ಸ್ಯಾತ್ ತಥಾ ಧರ್ಮೇಣ ಲುಪ್ಯತೇ ಎಂದುದಾಗಿ ಆಗಮಾರ್ಥವನರಿಯದೆ, ಪ್ರೇತಪಿಂಡವನಿಕ್ಕುವ ಪಾತಕರು, [ಪ್ರಾಣಾಯಸ್ವಾಹಾ]ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ' ಎಂದು ಭೂತಬಲಿಯ ಬೆಕ್ಕು ನಾಯಿಗೆ ಹಾಕಿ ಮಿಕ್ಕ ಭೂತಶೇಷವ ಕೊಂಬ ಅಕುಲಜರು, ನೀವು ಕೇಳಿಭೋ ! `ವಸುರೂಪೋ ಮಧ್ಯಪಿಂಡಃ ಪುತ್ರ¥õ್ಞತ್ರಪ್ರವರ್ಧನಃ' ಎಂದು, ರುದ್ರಪ್ರಸಾದವನೆ ಕೊಂಡು ರುದ್ರಪಿಂಡದಿಂದ ಹುಟ್ಟಿ, ದೀಕ್ಷಾಕಾಲದಲ್ಲಿ ಭಸಿತವ ಧರಿಸಿ, ಬ್ರಹ್ಮಕಪಾಲಪಾತ್ರೆಯಂ ಪಿಡಿದು, ಪಲಾಶಕಂಕಾಳದಂಡಮಂ ಪಿಡಿದು, `ಭವತೀ ಭಿಕ್ಷಾಂ ದೇಹಿ'ಯೆಂದು ಭಿಕ್ಷಮಂ ಬೇಡಿ ಪಿತೃಕಾರ್ಯದಲ್ಲಿ `ವಿಶ್ವೇ ದೇವಾಂಸ್ತರ್ಪಯಾಮಿ'ಯೆಂದರ್ಚಿಸಿ, ಮರಣಕಾಲದಲ್ಲಿ ರುದ್ರಭೂಮಿಯಲ್ಲಿ ರುದ್ರಾಗ್ನಿಯಿಂದ ದಹನ ರುದ್ರವಾಹನದ ಬಾಲವಿಡಿದು ಸ್ವರ್ಗವನೆಯ್ದಿದರು, ರುದ್ರಭಕ್ತಿವಿರುದ್ಧ ವಿಚಾರಹೀನರು. `ತ್ರ್ಯಾಯುಕ್ಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ, ಅಗಸ್ತ್ಯಸ್ಯ ತ್ರಿಯಾಯುಷಂನತನ್ಮೇಡಿಸ್ತುಫತ್ರಿಯಾ ಶತಸಯುಷಂ ಎಂದು ಸಕಲಋಷಿಗಳು ಶ್ರೀ ವಿಭೂತಿಯನು ಧರಿಸಿ, ಬಹಳಾಯುಷ್ಯಮಂ ಪಡೆದರೆಂದು ಮತ್ತೆಯು ಯಜುಸ್ಸಿನಲ್ಲಿ ದೀಕ್ಷೆಯನೈದಲ್ಲಿ, `ಭೂತಿವಾಂಶ್ಚ ಪ್ರಿಯಂ ಹೋತವ್ಯಂ'ಯೆಂದು, ಶ್ರೀವಿಭೂತಿಯನೆ ಧರಿಸಹೇಳಿತ್ತು ವೇದವು. `ಗೋಪೀ ಮಲಿನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ ತದೈಕವಿಂಶತಿಕುಲಂ ಸಾಕ್ಷಾತ್ತು ನರಕಂ ವ್ರಜೇತ್ ' ಎಂದು, ಗೋಪಿ ಮಲಿನ ಚಂದನವನಿಟ್ಟು, ಪಾತಕರು[ವ] ಶಿವಲಿಂಗ ಮುಟ್ಟಿದರೆ ತಮ್ಮಿಪ್ಪತ್ತೊಂದು ಕುಲಸಹಿತ ಕೇಡಿಲ್ಲದ ನರಕದಲ್ಲಿ ಬೀಳುವರೆಂದರಿಯದೆ ಮುಟ್ಟಿಯನಿಟ್ಟ ಭ್ರಷ್ಟರು, ಮತ್ಸ್ಯ ಕೂರ್ಮ ವರಾಹ ನಾರಸಿಂಹ ಈ ನಾಲ್ಕೂ ಅವತಾರದಲ್ಲಿ ನೀರಿಂದ ಬಲಿ ಧಾರೆಯನೆರೆದನೆಂಬುದನರಿದು, ವಿಷ್ಣುವಿನ ಪಾದದಲ್ಲಿ ಗಂಗೆ ಹುಟ್ಟಿತೆಂಬ ವಿಚಾರಹೀನರು `ವಿಯದ್ವಿಷ್ಣುಪದಂ ಪ್ರೋಕ್ತಂ ಪುಂಸ್ಯಾಕಾಶವಿಹಾಯಸೀ ವಿಹಾಯಸೋ[s]ಪಿನಾಕೋ[s]ಪಿ ದ್ಯುರಪಿ ಸ್ಯಾತ್ತಿದವ್ಯಯಂ' ಎಂದು ನಿಘಂಟಿನಲ್ಲಿ ಆಕಾಶದ ಹೆಸರು ವಿಷ್ಣುಪದಿ, ಆಕಾಶಗಂಗೆ ಮುನ್ನಲುಂಟೆಂಬುದನರಿತು, ವಿಷ್ಣುವಿನ ಕಾಲಲ್ಲಿ ಗಂಗೆ ಹುಟ್ಟಿತೆಂಬ ದುಷ್ಟರು, ವೇದಕ್ಕೆ ನೆಲೆಗಟ್ಟು ಓಂಕಾರ, ಬ್ರಾಹ್ಮಣಕ್ಕೆ ನೆಲೆಗಟ್ಟು ಗಾಯತ್ರಿಯಲ್ಲಿ ಶಿವನೆ ದೈವವೆಂದಿತ್ತು. `ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಹರ ಹರಿಭಕ್ತನೆಂದನಿಸುವ ವಿಚಾರಹೀನರು ನೀವು ಕೇಳಿಭೋ ! ಹರಿ ಶಿವನ ಭಕ್ತನೆಂಬುವದಕ್ಕೆ ಸಾವಿರಕಮಲ ಕೊರತೆಗೆ ತನ್ನ ನಯನ ಕಮಲಮಂ ಕಳೆದು ಶಿವನಂಘ್ರಿಗರ್ಪಿಸಿ, ಚಕ್ರಮಂ ಪಡೆದನೆಂದು ಮಹಿಮದಲ್ಲಿ ಹರಿಸ್ತೇ ಸಾಹಸ್ರಂ ಕಮಲಬಲಿಯಾಧಾಯ ಪದಯೋಃ' ಎಂದೋದಿ ಮರೆದ ಮತಿಭ್ರಷ್ಟರು ನೀವು ಕೇಳಿಭೋ ! ಹರನೆ ಕರ್ತ, ಹರಿಯೆ ಭೃತ್ಯನೆಂಬುದಕ್ಕೆ ರಾಮಪ್ರತಿಷೆ* ಶಿವಲಿಂಗ[ದ] ಮೂರ್ತಿಗಳಿಂ ಕಾಣಿರೆ, ಕಂಡು ತಿಳಿಯಲರಿಯದ ಹುಲಮನುಜರು ಶ್ರೀರಾಮನ ಗುರು ವಶಿಷ* ಹಂಪೆಯಲ್ಲಿ ವಿರೂಪಾಕ್ಷಲಿಂಗನ ಭಕ್ತನೆಂದರಿದು, ಕೃಷ್ಣಾವಿಷ್ಣುವಿನ ಗುರು ಉಪಮನ್ಯು ಅಹಿಪುರದಲ್ಲಿ ಸೋಮೇಶ್ವರಲಿಂಗನ ಭೃತ್ಯನೆಂಬುದನರಿದು, ಇಂತು ಭೃತ್ಯನ ಶಿಷ್ಯಂಗೆ ಕರ್ತನ ಸರಿಯೆಂಬ ಕರ್ಮಚಂಡಾಲರು ನೀವು ಕೇಳಿಭೋ ! `ಅಸಂಖ್ಯಕೋಟಿಬ್ರಹ್ಮಾಣಾಂ ಕೋಟಿವಿಷ್ಣುಗಣಂ ತತಃ ಗಂಗಾವಾಲುಕ ಸಮೌ ಹೇvõ್ಞ ಕಿಂಚಿದಜ್ಞಾಃ ನ ಮಹೇಶ್ವರಾತ್ ಎಂದು ರುದ್ರನ ಎವೆಯಾಡುವನಿತಕ್ಕೆ ಲೆಕ್ಕವಿಲ್ಲದ ಕೋಟಿ ಬ್ರಹ್ಮವಿಷ್ಣುರು ಸತ್ತುಹೋದರೆಂದು ಓದಿ ತಿಳಿದು ಇಂಥ ಹುಲುದೈವಂಗಳ `ಮೃತ್ಯುಂಜಯಃ ನಿತ್ಯಃ ಏಕೋ ದೇವಃ ನ ದ್ವಿತೀಯಃ' ಎಂದೆನಿಸುವ ಶಿವಗೆ ಸರಿಯಂದೆನಿಸುವ ಭವಿವಿಪ್ರರಿಗೆ ತಾವು ಓದುವ, ವೇದಾಗಮಂಗಳು ತಮಗೆ ಹಗೆಯಾಗಿ ನಡೆಯೊಂದು ಪರಿ ನುಡಿಯೊಂದು ಪರಿ ಆಗಿಹುದು. ಅದೆಂತೆಂದರೆ:ಗೌತಮ ದಧೀಚಿ ಭೃಗುವಾದಿಯಾಗಿ ಹಿರಿಯರುಗಳೇ ಶಾಪದಿಂದ ಶಾಪಹತರಾಗಿ ಶಿವದ್ರೋಹಿಗಳಾಗಿ ನರಕಕ್ಕಿಳಿವ ಚಾಂಡಾಲರಿಂದ ವಿಪ್ರರ ಸತ್ಪಾತ್ರರೆಂದಾರಾಧಿಸುವರ ನರಕದ ಕುಳಿಯೊಳು ಮೆಟ್ಟಿ ನರಕಾಗ್ನಿಯಿಂದ ಸುಡುತಿರ್ಪ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನ್ನ ಕಾರ್ಯಕ್ಕೆ ಹೋಗುತ್ತ ಅಡವಿಯಲಿ ಅಸ್ತಮಾನವಾಗೆ ಹಸಿದು ನಿಲಲಾರದೆ ಉಣಲಿಕ್ಕಿರವ್ವಾಯೆಂದು ಬೇಡಿದರೆ, ನೀನಾರಾತನಾರಾತನೆಂದರೆ ರೋಮರುಷ್ಟಿಯರತ್ಸಾತ್ರ? ನೋಡಯ್ಯ. ಇತ್ತ ಬಾರಯ್ಯಾ ಬಾರಯ್ಯಾ ಎಂದು ಕರೆದು ವೃಕ್ಷ ಭಿಕ್ಷವನಿಕ್ಕಿದುವು. ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಶರಣರ ಹೆಸರು ಕಲ್ಪವೃಕ್ಷ ನೋಡಯ್ಯಾ.
--------------
ಸಿದ್ಧರಾಮೇಶ್ವರ
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ
--------------
ಬಸವಣ್ಣ
ಪೃಥ್ವಿಯಿಂದ ಈಶ್ವರ ಪರಿಯಂತ ಪಂಚವಿಶಂತಿ ತತ್ವಂಗಳುತ್ಪತ್ಯ, ಈಶ್ವರಾದಿ ಪರಶಿವ ಪರಿಯಂತ ಶಿವತತ್ವದುತ್ಪತ್ಯ. ದೇವತಾದಿಗೆ ಜಗದಾದಿಗೆ ಪೃಥ್ವಿಯಾದಿಗೆ ಪಂಚವಿಂಶತಿತತ್ವಂಗಳುತ್ಪತ್ಯಮಂ ಪೇಳ್ವೆ: ಪಂಚಶತಕೋಟಿ (ವಿಸ್ತೀರ್ಣ) ಭೂಮಂಡಲವಳಯದಲ್ಲಿ ಮೇರುಮಂದಿರದ ವಿಸ್ತೀರ್ಣ ಒಂದುಕೋಟಿ ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನ ಪ್ರಮಾಣು. ಆ ಮೇರುಮಂದಿರದ ಮೇಲೆ ಬ್ರಹ್ಮ ವಿಷ್ಣು ರುದ್ರ ಸದಾಶಿವ ನಂದಿ ಮಹಾಕಾಳ ವೀರಭದ್ರ ಅಷ್ಟಾಶೀತಿಸಹಸ್ರ ಋಷಿಯರು, ಅಸಂಖ್ಯಾತ ಮಹಾಗಣಂಗಳು, ದ್ವಾದಶಾದಿತ್ಯರು, ನಾರದಯೋಗೀಶ್ವರರು, ಅಷ್ಟದಿಕ್ಪಾಲಕರು ಏಕಾದಶ ರುದ್ರರು ಮುಖ್ಯವಾಗಿ ಶಿವಸುಖಸಂತೋಷದಿಂ ರಾಜ್ಯಂಗೆಯ್ವರು. ಆ ಮೇರುಮಂದಿರದ ಕೆಳಗಣ ಜಂಬೂದ್ವೀಪದ ವಿಸ್ತೀರ್ಣ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. (ಅಲ್ಲಿಂದ ಮುಂದೆ) ಲವಣಸಮುದ್ರ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಆ ಲವಣಸಮುದ್ರದಿಂದಾಚೆಯಲ್ಲಿ ಭೂಮಿ ಎರಡುಲಕ್ಷದ ಮೇಲೆ ಐವತ್ತುಸಾವಿರ ಯೋಜನಪ್ರಮಾಣು. (ಆ ದ್ವೀಪದ ಹೆಸರು ಪ್ಲಕ್ಷದ್ವೀಪ) ಪ್ಲಕ್ಷದ್ವೀಪಕ್ಕೆ ಇಕ್ಷುರಸಮುದ್ರ ಎರಡುಲಕ್ಷ ಐವತ್ತುಸಾವಿರ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ಐದುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಶಾಲ್ಮಲಿದ್ವೀಪ) ಶಾಲ್ಮಲಿದ್ವೀಪಕ್ಕೆ ಮಧುಸಮುದ್ರ, ಐದುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಹತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪಕ್ಕೆ ಹೆಸರು ಕುಶದ್ವೀಪ) ಕುಶದ್ವೀಪಕ್ಕೆ ಘೃತಸಮುದ್ರ ಹತ್ತುಲಕ್ಷ ಯೋಜನಪ್ರಮಾಣು. ಅಲ್ಲಿಂದತ್ತ ಭೂಮಿ, ಇಪ್ಪತ್ತೈದು ಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಶಾಕದ್ವೀಪ) ಶಾಕದ್ವೀಪಕ್ಕೆ ದಧಿಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ನಾಲ್ವತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು Põ್ಞ್ರಂಚದ್ವೀಪ) Põ್ಞ್ರಂಚದ್ವೀಪಕ್ಕೆ ಕ್ಷೀರಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಎಂಬತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಪುಷ್ಕರದ್ವೀಪ) ಪುಷ್ಕರದ್ವೀಪಕ್ಕೆ ಸ್ವಾದೋದಕಸಮುದ್ರ ಎಂಬತ್ತುಲಕ್ಷ ಯೋಜನಪ್ರಮಾಣು, ಅಲ್ಲಿಂದತ್ತತ್ತ ಲೋಕಾಲೋಕ ಪರ್ವತಾಕಾರವಾಗಿಪ್ಪುದು. ಇಂತೀ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಪ್ರಮಾಣವೊಂದಾಗಿ ಮೇಳೈಸಿದಡೆ ಮೂರುಕೋಟಿಯುಂ ಹದಿನೇಳುಲಕ್ಷದೈವತ್ತುಸಹಸ್ರ ಯೋಜನ ಪರಿಮಾಣಿನ ಕಟ್ಟಳೆಯಾಯಿತ್ತು. ಮತ್ತಲ್ಲಿಂದ ಭೂಮಂಡಲ ಉಂಟೆರಿ ಎಂದೊಡೆ, ಉಂಟು: ನಾನೂರುಕೋಟಿಯೋಜನ ಹೇಮೋರ್ವಿ. ಅಲ್ಲಿಂದತ್ತ ಭೂಮಂಡಲ ಉಂಟೆರಿ ಎಂದೊಡೆ ಉಂಟು: ಹತ್ತುಕೋಟಿ ಇಪ್ಪತ್ತುಲಕ್ಷ ಯೋಜನಪ್ರಮಾಣು, ಹೇಮದ ಬೆಟ್ಟ. ಮತ್ತಲ್ಲಿಂದತ್ತಲೂ ಭೂಮಂಡಲ ಉಂಟೆರಿ ಎಂದಡೆ, ಉಂಟು: ಎಂಬತ್ತೈದುಕೋಟಿ ಮೂವತ್ತೈದುಲಕ್ಷದ ಅರುವತ್ತೈದುಸಾವಿರ ಯೋಜನ ಪರಿಮಾಣ ವಳಯದಲ್ಲಿಅಂಧಕಾರವಾಗಿ, ಸೂರ್ಯಚಂದ್ರರ ಬೆಳಗಿಲ್ಲ. ಇಂತಿವನೆಲ್ಲವನೊಂದಾಗಿ ಮೇಳೈಸಿದಡೆ ಐನೂರುಕೋಟಿ ಯೋಜನ ಪರಿಪ್ರಮಾಣು ಕಟ್ಟಳೆಯಾಗಿತ್ತು. ಆ ಮೇರುವಿನ ಒಂದು ದಿಕ್ಕಿನ ಪ್ರಮಾಣು:ಆ ಮೇರುವಿನ ಪ್ರದಕ್ಷಿಣವಾಗಿ ಎಂಟು ದಳದಲ್ಲಿಎಂಟು ಪಂಚಶತಕೋಟಿ [ಯೋಜನ] ವಿಸ್ತೀರ್ಣವಾಯಿತ್ತು. ಇದನು ದಿವಸದೊಳಗೆ ಸೂರ್ಯ ತಿರುಗುವನು, ರಾತ್ರಿಯೊಳಗೆ ಚಂದ್ರ ತಿರುಗುವನು, ಇಪ್ಪತ್ತೇಳು ನಕ್ಷತ್ರ, ಧ್ರುವಮಂಡಲ, ಸಪ್ತಋಷಿಯರು, ರಾಹುಕೇತು, ನವಗ್ರಹ- ಇಂತಿವರೆಲ್ಲರು ಆ ಮೇರುಮಂದಿರದ ಹೊಸಪ್ರದಕ್ಷಿಣವಂ ದಿವಾರಾತ್ರಿಯಲ್ಲಿ ತಿರುಗಿ ಬಹರು. ಇವರೆಲ್ಲರ ಪ್ರಮಾಣವನು ಮಹಕ್ಕೆ ಮಹವಾಗಿಪ್ಪ ಶರಣಸ್ಥಲದವರು ಬಲ್ಲರು. ಪ್ರಭುದೇವರು ಸಿದ್ಧರಾದೇವರು ಸಾಮವೇದಿಗಳು, ಆದಿಲಿಂಗ ಅನಾದಿಶರಣ ಪೂರ್ವಾಚಾರಿ ಸಂಗನಬಸವಣ್ಣನು ಕಟ್ಟಿದ ಕಟ್ಟಳೆಯೊಳಗೆ ಜ್ಯೋತಿಜ್ರ್ಞಾನದವರು. (ಇಂತೀ) ಕಾಲ ಜ್ಯೋತಿಷ ಗ್ರಹಣ ಸಂಕ್ರಮಣ ತಿಥಿ ವಾರ ನಕ್ಷತ್ರ ಯೋಗ ಕರಣ ಸಂವತ್ಸರ ಇವೆಲ್ಲವು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಟ್ಟಿದ ಕಟ್ಟಳೆ.
--------------
ಚನ್ನಬಸವಣ್ಣ
ಶೂನ್ಯ ಹುಟ್ಟದಂದು, ನಿಶ್ಶೂನ್ಯವಿಲ್ಲದಂದು, ಬ್ರಹ್ಮ ವಿಷ್ಣು ಮಹೇಶ್ವರರಿಲ್ಲದಂದು, ಹದಿನಾಲ್ಕು ದಿಗುವಳಯವಿಲ್ಲದಂದು, ಕೂಡಲಚೆನ್ನಸಂಗಯ್ಯನೆಂಬ ಹೆಸರು ಮುನ್ನಿಲ್ಲದಂದು
--------------
ಚನ್ನಬಸವಣ್ಣ
ರೂಪಾದ ಮೇಲೆ ನಿರೂಪವಿಲ್ಲಾ, ನಿರೂಪಾದ ಮೇಲೆ ರೂಪವಿಲ್ಲಾ. ತಾನೇ ರೂಪಾಯಿತ್ತು, ತಾನೇ ನಿರೂಪವಾಯಿತ್ತು. ಬೇಕಾದರೆ ಬಂತು, ಸಾಕಾದರೆ ಹೋಯ್ತು. ತಾ ಬಂದು ಹೋಗುವದರೊಳಗೆ ಶಿವಬ್ಯಾರೆ, ಜಗಬ್ಯಾರೆ, ನರರು ಬ್ಯಾರೆ, ಸುರರು ಬ್ಯಾರೆ, ಇಹಬ್ಯಾರೆ, ಪರಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸುಖ ಬ್ಯಾರೆ ದುಃಖ ಬ್ಯಾರೆ, ಈ ಸರ್ವವು ಬ್ಯಾರೆ ಬ್ಯಾರೆಯಾಗಿ ತೋರುವ ತನ್ಮ ವಿನೋದ, ತನ್ನಾಟ, ತಾನೆಂದರೇನು ? ಮಾಯೆ. ಮಾಯೆಯೆಂದರೇನು ? ನಿರ್ಮಾಯೆ. ನಿರ್ಮಾಯೆ ಎಂದರೆ ಬಂತ್ಹಾ ್ಯಂಗೆ, ಹೋಯಿತ್ಹಾ ್ಯಂಗೆ ? ಹುಟ್ಟಿತ್ಹಾ ್ಯಂಗೆ ? ಬೆಳೀತ್ಹಾ ್ಯಂಗೆ ಸತ್ತಿತ್ಹ್ಯಾಂಗೆ ಮಹಾಂತಯೋಗಿ ? ಹೋಗೋದಲ್ಲಾ ನಿರ್ಮಾಯ ನಿರ್ವಯಲಾದ ಮ್ಯಾಲೆ ಬರುವದಲ್ಲ, ಅಲ್ಲಂದರೇನು ಬಂತು ? ಏನು ಬಂತೆಂದರೇನು ಹೋಯಿತು ? ಹೋಗೋದೇನು ? ಬರೋದೇನು ? ಬರೋದಿಲ್ಲಾ ಹೋಗೋದಿಲ್ಲಾ. ಏನೂ ಇಲ್ಲಾ, ಎಂತೂ ಇಲ್ಲಾ, ಸುಮ್ಮನೆ ಪರಬ್ರಹ್ಮ, ಪರಬ್ರಹ್ಮೆಂಬೋ ನಾಮವುಂಟೆ ? ಆ ಪರಬ್ರಹ್ಮ ಎಲ್ಲಿಯಿತ್ತು ? ಪರಬ್ರಹ್ಮ ತಾನಾಗುವುದಕ್ಕೆ ಮೊದಲೇ ಏನೆಂಬೋ ನಾಮವುಂಟು ? ಚಿತ್ತೆಲ್ಲಿತ್ತು ? ಪ್ರಾಣೆಲ್ಲಿತ್ತು ? ಭಾವೆಲ್ಲಿತ್ತು ? ಚಿತ್ತ ಚಿತ್ತಾಗುವದು, ಆ ಚಿತ್ತ ಪಟ್ಟಾಗುವದು. ಇದರೊಳಗ ಭಾವೇನು ಜೀವೇನು ? ಸಾವೇನು ನೋವೇನು ? ಈ ಮಾಯೆಯ ಬೆಡಗಿನ ಹೆಸರು ಮಹಾಂತ. ಈ ಮಾಯೆ ತಾನೆ ನಿರ್ಮಾಯೆ ಆದರೆ ಸಾವು ಇಲ್ಲಾ ಗೀವು ಇಲ್ಲಾ, ಬ್ರಹ್ಮಾಂಡವಿಲ್ಲಾ ಪಿಂಡಾಂಡವಿಲ್ಲಾ, ನಾನೂ ಇಲ್ಲಾ ನೀನೂ ಇಲ್ಲಾ, ಶಿವನು ಇಲ್ಲಾ ಗಿವನು ಇಲ್ಲಾ. ಮುಕ್ತಿ ಇಲ್ಲಾ ಗಿಕ್ತಿ ಇಲ್ಲಾ, ಮಾಂತ ಇಲ್ಲಾ ಗೀಂತ ಇಲ್ಲಾ. ಇಲ್ಲಗಿಲ್ಲ ಸುಳ್ಳೆ ಸುಳ್ಳೆ ಸುಳ್ಳೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸಾರಾಯ ಪದಾರ್ಥವನಾರಯ್ಯಾ ಅರಿವರು ? ಆರರಿಂದ ಬೇರೆ ತೋರಲಿಲ್ಲೆನಿಸಿತ್ತು. ಹೆಸರೆನಿಸಿಕೊಂಬಡೆ ಹೆಸರು ಮುನ್ನಿಲ್ಲ, ಹೆಸರೆಲ್ಲವೂ ಪರಿಣಮಿಸಲಾಯಿತ್ತು. ಕಂಡೆನೆಂದಡೆ ಕಾಣಲಾಯಿತ್ತು, ಕಂಡು ನುಡಿಸುವಂಥದಲ್ಲ, ಕಂಡಾತ ಕಲಿಕೆಯೊಳಗಿಲ್ಲದಂತಿಪ್ಪ, ಕಾರ್ಯವಿಲ್ಲದ ಕಾರಣಕರ್ತ. ಆರರಿಂದತ್ತ ತಾನಿಲ್ಲೆಂದೆನಿಸಿಕೊಂಡ ಕೂಡಲಚೆನ್ನಸಂಗಯ್ಯಾ, ಆ ಮಹಾಲಿಂಗದ ಅನುಭಾವ ಶರಣಫಲದ ಸಂಬಂಧವ ಮೀರಿತ್ತು.
--------------
ಚನ್ನಬಸವಣ್ಣ
ಕೊಡೆವಿಡಿಯೆ, ಕುದುರೆಯ ದೃಢವುಳ್ಳ ರಾವುತನೇರೆ, ಕೊಡೆ ಕೋಟಿ, ಶೂರರು ಹನ್ನಿಬ್ಬರಯ್ಯಾ ! ಚಂದ್ರಕಾಂತದ ಗಿರಿಯ ಬಂದು ಗಜ ಮೂದಲಿಸೆ ಅರಿದು ಕೊಲುವೊಡೆ ರಿಪುಗಳ ಕಲಿತನವ ನೋಡಾ ! ಆವಿಗೆಯಲೊದಗಿದ ಪುತ್ಥಳಿಯ ರೂಹಿನಂತೆ ಆಯಿತ್ತು ಕೂಡಲಸಂಗಮದೇವಾ, ನಿನ್ನ ಹೆಸರಿಲ್ಲದ ಹೆಸರು ! 16
--------------
ಬಸವಣ್ಣ
ಆ ಗುರುಶಿಷ್ಯರೆರಡು ಒಂದಾಗಿ ತಾನೇ ತಾನಾದ ವಿನೋದವೇನೆಂಬೆ ? ಮಹಾಂತ ಮಹಾಂತ ನೀನೆಂದರೆ ನೀನು ಇಂದಿನ ಮಹಾಂತನೇ ಅಲ್ಲಾ, ಅಂದಿನ ಮಹಂತ ನೀನು. ನೀನು ನಿರುಪಮ, ನಿರಾಳ, ನಿಷ್ಕಳ, ನಿರ್ಬೈಲು, ಮಹಾಬಯಲಾದ ಅಂದಿನ ಮಹಾಂತ ನೀನಲ್ಲವೆ ? ಅದು ನೀ ಹ್ಯಾಂಗ ಬಲ್ಲೆಯೆಂದರೆ : ನೀನು ನನಗೆ ತತ್ವೋಪದೇಶ ಹೇಳಿದಾತನೇ ? ಅಲ್ಲ. ಅಷ್ಟಾಂಗಯೋಗಂಗಳ ಹೇಳಿದಾತನೇ ? ಅಲ್ಲ. ಮುದ್ರೆಸಾಧನವ ಹೇಳಿದಾತನೇ ? ಅಲ್ಲ. ಹಠಯೋಗ ಲಯಯೋಗ ಲಂಬಿಕಾಯೋಗ ತಪಜಪ ಅದ್ವೈತಾದಿ ನಿತ್ಯನೇಮ ಪುಣ್ಯ ಸತ್ಕರ್ಮ ಮೊದಲಾದ ಇವು ಏನಾದರೂ ಎನಗೆ ಹೇಳಿದಾತನೇ ? ಅಲ್ಲ. ಇವು ಏನು ಹೇಳಲೊಲ್ಲದೆ ನನಗೊಂದು ಹೇಳಿದಿರಿ. ಅದ ಏನು ಹೇಳಿದಿರಿ ಅಂದರೆ, ನಿನ್ನ ನೀ ತಿಳಿದು ಹಾಡೆಂದು ಹೇಳಿದಿರಿ. ನೀನು ಹೇಳಿದುದಕ್ಕೆ ನಾನು ನನ್ನ ಒಬ್ಬುಳಿಯ ಮಾಡಿ ಏಕಚಿತ್ತಾಗಿ ಹೊರ ಆಸೆ ಬಿಟ್ಟು ಒಳನೋಟವಿಟ್ಟು ಹಸಿವೆ ತೃಷೆಗಳಂ ಸುಟ್ಟು ನನ್ನನ್ನೇ ನಾ ಕೆಟ್ಟು ರತಿ ನಿನ್ನೊಳಗಿಟ್ಟು ಆತ್ಮಜ್ಞಾನ ಅಳವಟ್ಟು, ಅಹಂಬ್ರಹ್ಮವಂ ಬಿಟ್ಟು, ನೀ ಒಂದು ಮಾಡೆಂದರೆ ನಾ ಒಂಬತ್ತು ಮಾಡಿ ಹುಡುಕಲು, ಅಲ್ಲಿ ನಿನ್ನ ಬಲ್ಲಾದೆ, ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ನನ್ನ ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ಅದು ಹ್ಯಾಂಗ ಬಲ್ಲಿ ಅಂದರೆ, ಮಾತಿಲೆ ಬಲ್ಲಲ್ಲಿ ನಿನ್ನ ವಾರ್ತಿ ಕೇಳಿ ಬಲ್ಲೆ, ನಿನ್ನ ಸನ್ನಿಧಿಗೆ ಹೋಗಿ ಬಲ್ಲೆ, ನಿನ್ನ ಕಂಡು ಬಲ್ಲೆ, ನಿನ್ನ ಕೂಡಿ ಬಲ್ಲೆ, ನಿನ್ನ ಸದ್ವಾಸನೆಗೊಂಡು ಬಲ್ಲೆ, ನಿನ್ನ ಸ್ನೇಹವ ಮಾಡಿ ಬಲ್ಲೆ, ನಿನ್ನ ಕೂಡುಂಡು ಬಲ್ಲೆ, ನಿನ್ನ ಸಮರಸಗೂಡಿ ಬಲ್ಲೆ, ನಿನ್ನ ಕೂಡಿದ ಪರಮಸುಖ ಪರಮ ಉಪಕಾರಕ್ಕೆ ಹೇಳಬಲ್ಲೆ, ವಿಸ್ತಾರವಾಗಿ ನಿನ್ನ ಹಾಡಿ ಬಲ್ಲೆ, ಒಂದೆ ಮಾಡಬಲ್ಲಲ್ಲಿ ಒಂಬತ್ತ ಮಾಡಬಲ್ಲೆ, ಈ ಒಂಬತ್ತುಮಾಡಿ ಬಲ್ಲಲ್ಲಿ ನಾ ಮೊದಲಾದ ಸರ್ವವು ನೀನೆಂಬುದು ಬಲ್ಲೆ. ಇನ್ನು ಎನ್ನ ಪ್ರಾಣ, ಮನ, ದೇಹ, ಭಾವ, ಅರವು, ಮನವು ನನ್ನ ಸರ್ವವು ನೀನಾದ ಮ್ಯಾಲೆ ನನಗೇನುಂಟು ? ಮತ್ರ್ಯಲೋಕದ ಮಹಾಗಣಂಗಳು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಎನಗೊಂದು ಹೆಸರಿಟ್ಟಿದ್ದರು. ಅದು ಹೆಸರು ನಿನಗೆ ಆಯಿತು. ಅದೇನು ಹೆಸರೆಂದರೆ ? ಸರ್ವವು ನೀನಾದಮ್ಯಾಲೆ, ಸತ್ಕರ್ಮ ದುಷ್ಕರ್ಮ ಎರಡು ನೀನೇ ಆದಿ. ನಾನು ಇನ್ನೇನು ಮಾಡಲಿ ಎಂದು ಆವ ಕರ್ಮವಿಲ್ಲದೆ ಸುಮ್ಮನೆ ಇರುತಿರಲು, ಅದ ಕಂಡು ಹೆಸರಿಟ್ಟಿದ್ದರು. ಈತ ಸತ್ಕರ್ಮಿಯೆಂಬುವೆ ಸತ್ಕರ್ಮಿ ಅಲ್ಲಾ, ಈತಗೆ ನಾವು ದುಷ್ಕರ್ಮಿಯೆಂಬುವೆ ದುಷ್ಕರ್ಮಿ ಅಲ್ಲಾ, ಪಾಪಿಯೆಂಬುವೆ ಪಾಪಿ ಅಲ್ಲಾ, ಪುಣ್ಯನೆಂಬುವೆ ಪುಣ್ಯನಲ್ಲಾ, ಆಸೆ ಅಲ್ಲಾ ನಿರಾಸೆ ಅಲ್ಲಾ, ಅಜ್ಞಾನಿ ಅಲ್ಲಾ ಸುಜ್ಞಾನಿ ಅಲ್ಲಾ, ಕಾಮಿ ಅಲ್ಲಾ ನಿಷ್ಕಾಮಿ ಅಲ್ಲಾ, ಕ್ರೋಧಿ ಅಲ್ಲಾ ನಿಷ್ಕ್ರೋಧಿ ಅಲ್ಲಾ, ಲೋಭಿ ಅಲ್ಲಾ ನಿರ್ಲೋಭಿ ಅಲ್ಲಾ, ಮೋಹಿ ಅಲ್ಲಾ ನಿರ್ಮೋಹಿ ಅಲ್ಲಾ, ಅಹಂಕಾರಿ ಅಲ್ಲಾ ನಿರಹಂಕಾರಿ ಅಲ್ಲಾ, ಮತ್ಸರಿ ಅಲ್ಲಾ ಮತ್ಸರರಹಿತನೇ ಅಲ್ಲಾ. ಯೋಗಿಯೇ ಅಲ್ಲಾ ಭೋಗಿಯೆ ಅಲ್ಲಾ. ತ್ಯಾಗಿಯೇ ಅಲ್ಲಾ ರಾಗಿಯೇ ಅಲ್ಲಾ, ಸುಖಿಯೇ ಅಲ್ಲಾ ದುಃಖಿಯೆ ಅಲ್ಲಾ, ಕ್ರಿಯಯುಕ್ತನೇ ಅಲ್ಲಾ ಕ್ರಿಯಾಬಾಹ್ಯನೇ ಅಲ್ಲಾ, ಭವಿಯೇ ಅಲ್ಲಾ ಭಕ್ತನೇ ಅಲ್ಲಾ, ಶಿವನೇ ಅಲ್ಲಾ ಜೀವನೇ ಅಲ್ಲಾ. ಅರುವೇ ಅಲ್ಲಾ ಮರವೆಯೇ ಅಲ್ಲಾ, ಸತ್ತವನೇ ಅಲ್ಲಾ ಬದುಕಿದವನೇ ಅಲ್ಲಾ, ಊರವನೇ ಅಲ್ಲಾ ಅಡವಿಯವನೇ ಅಲ್ಲಾ, ಗುರುವೇ ಅಲ್ಲಾ ಶಿಷ್ಯನೇ ಅಲ್ಲಾ, ಶಂಕರನೆ ಅಲ್ಲಾ ಕಿಂಕರನೇ ಅಲ್ಲಾ, ಹೇಳುವವನೇ ಅಲ್ಲಾ ಕೇಳುವವನೇ ಅಲ್ಲಾ, ಮೂಕನೇ ಅಲ್ಲಾ ಮಾತಾಡುವವನೇ ಅಲ್ಲಾ, ಹೆಣ್ಣೆ ಅಲ್ಲಾ ಗಂಡೇ ಅಲ್ಲಾ, ನಪುಂಸಕನೇ ಅಲ್ಲಾ ಅಂತರಪಿಶಾಚಿಯೇ ಅಲ್ಲಾ, ವಿಷಯಾತುರಿಯೇ ಅಲ್ಲಾ ವಿರಕ್ತನೇ ಅಲ್ಲ, ಇಹಲೋಕ ಇಚ್ಛಿಯೇ ಅಲ್ಲಾ ಪರಲೋಕ ಬಯಕಿಯೇ ಅಲ್ಲಾ. ಅದು ಎಂಬುವೆ ಅದು ಅಲ್ಲ, ಇದು ಎಂಬುವೆ ಇದು ಅಲ್ಲ. ಹಾಂಗೂ ಅಲ್ಲ ಹೀಂಗೂ ಅಲ್ಲ, ಅಂತೂ ಅಲ್ಲಾ ಇಂತೂ ಅಲ್ಲಾ, ಏನೂ ಅಲ್ಲಾ ಅಲ್ಲಾ ಅಲ್ಲಾ ಎಂದು ಹೆಸರಿಟ್ಟಿದ್ದರು ಎನಗೆ. ಇದು ಹೆಸರು ನಿನಗೆ ಆಯಿತು. ಅದೆಂತೆಂದೊಡೆ : ಅಲ್ಲಮಪ್ರಭು ಎಂಬುವ ನಾಮವು ನಿನಗೆ ಆಯಿತಲ್ಲದೆ ನನಗೆಲ್ಲಿಹದು ? ಅದು ಕಾರಣ ನನಗೆ ನಾಮವಿಲ್ಲಾ ರೂಪವಿಲ್ಲಾ ಕ್ರೀಯವಿಲ್ಲಾ ಬಯಕೆಯಿಲ್ಲಾ ಭವವಿಲ್ಲಾ ಆವುದೂ ಇಲ್ಲಾ. ಅದೇಕೆ ನೀ ಅಲ್ಲಾ ನಾ ಇಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಹಲವುಕಾಲದ ಋಷಿಯರೆಲ್ಲರೂ ಶಿವಭಕ್ತಿಯ ನೆಲೆಯನರಿತು ಬ್ರಾಹ್ಮಣರೆನಿಸಿಕೊಂಡರು. ಇವರ ನೆಲೆಯನರಿಯದ ನಿಂದಕರು ಗೆಲವಿಂಗೆ ಹೆಣಗುವ ಪರಿಯ ನೋಡಾ. ಹಲವು ದೈವಂಗಳಿಗೆರಗಿ ಕುಲದಲ್ಲಿ ಶಿಷ್ಟರೆನಿಸಿಕೊಂಬರು. ಮೊದಲೆ ಹುಟ್ಟಿದ ರುದ್ರನ ಹೆಸರ ಹೇಳಿ, ಬ್ರಾಹ್ಮಣನಲ್ಲದ ಭುಜದಲ್ಲಿ ತೊಡೆಯಲ್ಲಿ ಅಂಗದಲ್ಲಿ ಹುಟ್ಟಿದ ಶೂದ್ರ ವೈಶ್ಯ ಕ್ಷತ್ರಿಯಂಗೆ ಹೊಡೆವಡುವ ಗುರುದ್ರೋಹಿಗಳು ತಮ್ಮ ಹೆಸರು ವೇದಬ್ರಾಹ್ಮಣರೆನಿಸಿಕೊಂಡು, ಗೋವನರ್ಚಿಸಿ ಪೂಜಿಸಿ ಅನಂತ ಪರಿಯಲ್ಲಿ ಶರಣೆಂಬರು. ಮರಳಿ ಗೋಹಿಂಸೆಯ ಮಾಡುವರು. ಗೋನಾಯಿಗಳು ನುಡಿದಂತೆ ನಡೆಯರು, ನುಡಿ ಹೊಲೆ ಹಿಂಗದು. ಇಂತಿವರ ವೇದಬ್ರಾಹ್ಮಣರೆಂದವರಿಗೆ ನಾಯಕನರಕ ತಪ್ಪದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->