ಅಥವಾ

ಒಟ್ಟು 54 ಕಡೆಗಳಲ್ಲಿ , 24 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡು ಕುರಿಯ ನುಂಗಿ ಬೆಕ್ಕಿನ ಹೊಟ್ಟೆಯ ಹೊಕ್ಕಿತ್ತು, ಬೆಕ್ಕು ಕಪ್ಪೆಯ ನೆರೆದು ಬಾವಿಯ ಹಾಲು ಕುಡಿಯುತ್ತಿರಲು ಕಟವಾಯಿಂದೆ ಕ್ಷೀರ ಸುರಿದು ಭೂಮಿಯಸೋಂಕಿ ಕಾಂತಾರ ಉರಿದು ವ್ಯಾಘ್ರನಳಿಯಿತ್ತು. ಮೃಗಾದಿ ಸಕಲ ಜನಿತ ತಮ್ಮ ಸ್ಥಲವ ಬಿಟ್ಟು ನೋಡುತ್ತ ನೋಡುತ್ತ ಅಡಗಿ ಒಂದೂ ಕಾಣದ ಬಯಲ ಬೆಡಗನೇನೆಂದುಪಮಿಸುವೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಅಟ್ಟಪದಾರ್ಥವೆಲ್ಲವ ಮೆಟ್ಟಿ ಮೆಟ್ಟಿ ತುಂಬಿಸಿಕೊಂಬರಯ್ಯ, ಹೊಟ್ಟೆಗೆ ಕಾಣದ ಅರಪಿನಂತೆ. ಇಷ್ಟಲಿಂಗಕ್ಕೆ ಕೊಟ್ಟೆನೆಂದು ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಹೊಟ್ಟೆಯ ತುಂಬಿಕೊಂಬ ಭ್ರಷ್ಟರಿಗೆ ಪ್ರಸಾದವೆಲ್ಲಿಯದೊ? ತಟ್ಟುವ ಮುಟ್ಟುವ ಮರ್ಮವನರಿದು ಕಾಯದ ಕರಣದ ಕೈಯಲ್ಲಿ ಇಷ್ಟಲಿಂಗದ ಮುಖವನರಿದು ಕೊಟ್ಟು ಕೊಳಬಲ್ಲರೆ ಪ್ರಸಾದಿಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊಟ್ಟೆಯ ಕಕ್ಕುಲತೆಗಾಗಿ, ಭಕ್ತರ ಮನೆಯ ಹೊಕ್ಕು ಸೇವೆಯ ಮಾಡುವ ಮಿಟ್ಟೆಯಭಂಡರಿಗೆಲ್ಲಿಯದೊ ನೆಟ್ಟನೆ ದೇವತ್ವ ? ಈ ಕಷ್ಟ ಜೀವನ ನೆಟ್ಟನೆ ಕಂಡಡೆ, ಬಟ್ಟೆಯ ಬಿಡಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಡಿಗಡಿಗೆ ತೊಳೆದು ಕುಡಿವಡೆ ಹೊಟ್ಟೆಯ ಜಲಗರಕುತ್ತ ಬೆಳೆಯಿತ್ತೆ ? ಅಚ್ಚ ಪ್ರಸಾದಿಯಾದಡೆ ಹಿಂದೆ ಪರಿಯಾಣ ಉಳಿವುದೆ ? ಇವರೆಲ್ಲರು ನಿಮ್ಮ ಪೂಜಿಸಿ ವ್ರತಗೇಡಿಗಳಾದರು. ನಾ ನಿಮ್ಮ ಪೂಜಿಸಿ ಬದುಕಿದೆನು ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಪರದೈವ ಪತಿಪೂಜೆಯ ಬಿಟ್ಟು ಇಷ್ಟವನರಿಯದೆ ಹೊಟ್ಟೆಯ ಹೊರಕೊಂಬ ಭ್ರಷ್ಟಬಂಟರು ನೀವು ಕೇಳಿರೊ. ಪಂಚಮಾಪಾತಕವಬಿಟ್ಟಡೆ ಬಿಟ್ಟುದು. ಪ್ರಪಂಚ ಬಿಟ್ಟಡೆ ಪತಿಪೂಜೆಯ ಬಿಟ್ಟುದು. ನುಡಿ ಎರಡಿಲ್ಲದೆ ನಡೆಯಬಲ್ಲಡೆ ಒಡೆಯನ ಕಟ್ಟಳೆ. ನಂಬಿಸಿ ಒಡಲ ಹೊರೆಯದಿರ್ದುದೆ ಒಡೆಯನ ಕಟ್ಟಳೆ. ಪಾತ್ರ ಸತ್ಪಾತ್ರವರಿತು ಕೊಡಬಲ್ಲಡೆ ಬಿಡುಗಡೆ. ಇಂತಲ್ಲದೆ ವಾರ್ತೆಕೀರ್ತಿಗೆ ಕೊಂಡಾಡಿಸಿಕೊಂಡು ಕೊಡುವ ಧೂರ್ತ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅರುವತ್ತಾರುತತ್ವಂಗಳ ಮೇಲೆ ನಿನ್ನ ಅರಿವವರಿಲ್ಲ. ಮೂವತ್ತಾರುತತ್ವಂಗಳ ಮೇಲೆ ನೀನು ರಚ್ಚೆಗೆ ಬಂದವನಲ್ಲ. ಕೈಲಾಸಕ್ಕೆ ಬಂದು ನೀನು ಬ್ರಹ್ಮ ವಿಷ್ಣು ರುದ್ರನ ವಾದದಿಂದ ಮತ್ರ್ಯಕ್ಕೆ ಬಂದವನಲ್ಲ. ಅನಾದಿಯಿಂದ ಅತ್ತಲಾದ ಬಸವನಭಕ್ತಿಯ ನೋಡಲೆಂದು ಬಂದವನಲ್ಲದೆ ಮಾಯಾವಾದದಿಂದ ಮತ್ರ್ಯಕ್ಕೆ ಬಂದನೆಂದು ನುಡಿವವರ ನಾಲಗೆಯ ಕಿತ್ತು ಕಾಲು ಮೆಟ್ಟಿ ಸೀಳುವೆನು. ಹೊಟ್ಟೆಯ ಸೀಳಿ, ಮುಳ್ಳಿನ ರೊಂಪೆಯ ಮಡಗುವೆನು ; ಅದೇನು ಕಾರಣವೆಂದಡೆ ಬಸವಣ್ಣಂಗೆ ಭಕ್ತಿಯ ತೋರಲೆಂದು, ಚೆನ್ನಬಸವಣ್ಣಂಗೆ ಆರುಸ್ಥಲವನರುಹಲೆಂದು, ಘಟ್ಟಿವಾಳ, ಮಹಾದೇವಿ, ನಿರವಯಸ್ಥಲದಲ್ಲಿ ನಿಂದ ಅಜಗಣ್ಣ, ಬೊಂತಲಾದೇವಿ ಇಂತಿವರಿಗೆ ಸ್ವತಂತ್ರವ ತೋರಲೆಂದು ಬಂದೆಯಲ್ಲಾ. ಅಮುಗೇಶ್ವರಲಿಂಗಕ್ಕೂ ಎನಗೂ ಪರತಂತ್ರವ ತೋರದೆ ಸ್ವತಂತ್ರನ ಮಾಡಿ ನಿರವಯಸ್ಥಲದಲ್ಲಿ ನಿಲ್ಲಿಸಿದೆಯಲ್ಲಾ, ಪ್ರಭುವೆ
--------------
ಅಮುಗೆ ರಾಯಮ್ಮ
ಕಾಯದ ಕರ್ಮ ಮಾಡುವನ್ನಕ್ಕ ಶಿವಪೂಜಕನಲ್ಲ. ಜೀವ ಭವಕ್ಕೆ ತಿರುಗುವನ್ನಕ್ಕ ವೈರಾಗ್ಯಭಾವ ಸಂಬಂಧಿಯಲ್ಲ. ಇವೆಲ್ಲವೂ ಹೊಟ್ಟೆಯ ಹೊರೆವ ಘಟ್ಟಿಯತನವಲ್ಲದೆ ನಿಶ್ಚಯವಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಳಮೇಘಮಂದಿರದ ಜಾಳಾಂಧರದ ಮನೆಯಲ್ಲಿ ಒಬ್ಬ ಸೂಳೆಯ ಬಾಗಿಲಲ್ಲಿ ಎಂಬತ್ತನಾಲ್ಕು ಲಕ್ಷ ಮಿಂಡಗಾರರು. ಅವಳ ಸಂಗದಲ್ಲಿ ಇರಲಮ್ಮರು, ಅವಳು ತಾವೇ ಬರಲೆಂದು ಕರೆಯದಿಹಳು. ಅವಳಿಗೆ ಯೋನಿ ಹಿಂದು, ಅಂಡ ಮುಂದು, ಕಣ್ಣು ಅಂಗಾಲಿನಲ್ಲಿ, ತಲೆ ಮುಂಗಾಲಿನಲ್ಲಿ, ಕಿವಿ ಭುಜದಲ್ಲಿ, ಕೈ ಮಂಡೆಯ ಮೇಲೆ, ಮೂಗು ಹಣೆಯಲ್ಲಿ, ಮೂಗಿನ ದ್ವಾರ ಉಂಗುಷ*ದಲ್ಲಿ, ಬಸುರು ಬಾಯಲ್ಲಿ, ನಡೆವಳು ತಲೆ ಮುಂತಾಗಿ, ಕಾಲು ಮೇಲಾಗಿ. ಅವಳ ಕೂಡುವ ಪರಿಯ ಹೇಳಾ, ಅಲೇಖನಾದ ಶೂನ್ಯ ಗೆದ್ದೆಯಲ್ಲಾ, ಕಲ್ಲಿನ ಹೊಟ್ಟೆಯ ಮರೆಯಲ್ಲಿ.
--------------
ವಚನಭಂಡಾರಿ ಶಾಂತರಸ
ತುಪ್ಪ ಬೋನವನುಂಡು, ನಚ್ಚುಮಚ್ಚಿನ ಮಾತ ನುಡಿದು, ರಚ್ಚೆಯಲ್ಲಿ ಕುಳಿತು ಇಷ್ಟಲಿಂಗವನಪ್ಪಿದವರ ನಿತ್ಯಜ್ಞಾನಿಗಳೆಂದಡೆ ಪ್ರತ್ಯಕ್ಷವಾಗಿ ಸುರಿಯವೆ ಬಾಯಲ್ಲಿ ಬಾಲಹುಳು ? ನಿತ್ಯರ ಕಂಡು ನಿಂದಿಸಿ ವಂದಿಸಿದಡೆ ಪ್ರತ್ಯಕ್ಷವಾಗಿ ಪರಶಿವನ ಶರಣರು ಹೊಟ್ಟೆಯ ಸೀಳದೆ ಮಾಣ್ಬರೆ ? ಅಮುಗೇಶ್ವರಲಿಂಗವನರಿಯದೆ ಬರಿಯ ಮಾತಿನಲ್ಲಿ ಅರಿವು ಸಂಬಂಧಿಗಳೆಂದಡೆ, ನೀವು ಸಾಕ್ಷಿಯಾಗಿ ಮಾರಿಗೆ ಹೊಯಿದ ಕೋಣನ ಕೊರಳ ಕೊಯಿದಂತೆ ಕೊಯ್ವರಯ್ಯಾ.
--------------
ಅಮುಗೆ ರಾಯಮ್ಮ
ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು? ಹಸಿವು ಹೋಹುದೆ? ಅಂಗದ ಮೇಲೆ ಲಿಂಗಸ್ವಾಯತವಾದಡೇನು? ಭಕ್ತನಾಗಬಲ್ಲನೆ? ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ, ಆ ಕಲ್ಲು ಲಿಂಗವೆ? ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ? ಇಂತಪ್ಪವರ ಕಂಡಡೆ ನಾಚುವೆನಯ್ಯಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ- ಎಂದು, ಇದಕ್ಕಂಜಿ ಉಮ್ಮಳಿಸುವ ಮಾಯಾಪ್ರಸೂತ ಮನವ ನೋಡ! ಆಯುಷ್ಯವೇ ಲಿಂಗ, ಶ್ರೀಯೇ ಜಂಗಮ! ನಿಧನವೆ ಸುಜ್ಞಾನ, ವಿದ್ಯವೆ ಶಿವಮಂತ್ರ, ದೇಹವೆ ದಾಸೋಹಮ್ಮೆಂದು ಶ್ರೀಗುರು ಬರದನಾಗಿ! ಹೊಟ್ಟೆಯ ಶಿಶುವಿಂಗೆ ಬೇರೆ ಬಟ್ಟಲ ಬಯಸುವರೊಳರೆ? ಮಹಾಘನ ಸೋಮೇಶ್ವರನಲ್ಲಿ ಅಯೋನಿಸಂಭವನಾದ ಶರಣಂಗೆ.
--------------
ಅಜಗಣ್ಣ ತಂದೆ
ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು, ಸತ್ತುಹೋದವರ ಸಮರ್ಥಿಕೆಯ ಹೊಗಳಿ, ಹೊಟ್ಟೆಯ ಹೊರೆವ ಕವಿಗಳು ಕೋಟ್ಯಾನುಕೋಟಿ. ಅರ್ಥವುಳ್ಳವರ ಅಗ್ಗಳಿಕೆಯ ಹೊಗಳುವ ಕವಿಗಳು ಕೋಟ್ಯಾನುಕೋಟಿ. ಲಿಂಗವ ಹೊಗಳಿ ಹೊಗಳಿ, ಅಂಗದ ಸೂತಕ ಹಿಂಗಿಸಿ, ಜಂಗಮದ ದಾಸೋಹದಿಂದ ಸರ್ವಾಂಗಲಿಂಗಿಯಾದ ಭಕ್ತನಂಗಳವೆನಗೆ ವಾರಣಾಸಿ, ಗಾಯತ್ರಿ, ಮಲಪ್ರಹರಿಯಿಂದಧಿಕವಯ್ಯಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಕೊಟ್ಟು ನೋಡುವ ಕೊಡದಲೆ ಕಾಡುವ ಸಿಟ್ಟು ಮಾಡುವ ಗಟ್ಟಿಯಾಗುವ ಹೊಟ್ಟೆಯ ತುಂಬುವ ಹೊಟ್ಟೆಸಲಹುವ ಕಟ್ಟೆಯನು ಕಟ್ಟುವ ಬಿಟ್ಟಿಯನು ಮಾಡುವ ಕಟ್ಟಳಿಲ್ಲದೆ ಉಂಬುವ ಹುಟ್ಟಲಿ ತಿವಿಸಿಕೊಂಬುವ ಕಟ್ಟಳಿಲ್ಲದೆ ತಿರುಗುವ ಗಟ್ಟಿಯಾಗಿ ಹಡಪವನು ಹೊತ್ತವ ಒಟ್ಟಿದವನ ಕೊಟ್ಟವಂ ಇಷ್ಟುದಿನ ತಪ್ಪದಲೆ ನಡೆಸಿ ಹುಟ್ಟದಲೆ ನಂಬಿಗೆ ಕೊಡದಲೆ ತನ್ನನು ನಂಬಿ ಇದ್ದಲ್ಲಿಗೆ ತರಿಸಿದ ನಮ್ಮ ಘನಗುರು ಸದಾಶಿವ ಸದ್ಗುರುವು ಕಾಣಾ ಕುವರ ಚೆನ್ನಬಸವೇಶ್ವರಾ.
--------------
ಮಾದಾರ ಚೆನ್ನಯ್ಯ
ಹುಟ್ಟಿದ ಮನುಜರೆಲ್ಲ ಹೊಟ್ಟೆಯ ಹೊರೆವುದೇನು ಸೋಜಿಗವೊ ? ಹುಲುಹೆಣನ ಸುಟ್ಟು, ಹೊಲೆಯನು ಹೊಟ್ಟೆಯ ಹೊರೆವುತ್ತ ಅವನೆ ಸಂತೆಯಲ್ಲಿ ಎದೆಯ ಮೇಲೆ ಕಲ್ಲಹಾಕಿಕೊಂಬವನು, ಹೊಟ್ಟೆಯ ಹೊರೆವುತ್ತಲವನೆ ಉಲಿ ಉಲಿದು ಕಂಡವರಿಗೆ ಹಲುಗಿರಿವವನು. ಹೊಟ್ಟೆಯ ಹೊರೆವುತ್ತ , ಅವನು, ಈ ಲಿಂಗದ ನೆಲೆಯನರಿಯದವರು ಇವರೊಳು ಸಲುವರಲ್ಲದೆ ಎಮ್ಮ ಶರಣರಿಗೆ ನಿಲುಕರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಉಚ್ಚೆಯ ಬಚ್ಚಲ ಹಲವು ಭಗದ ದೇವತೆಯ ಮಾಯೆಯ ಹಾವಳಿಯ ನೋಡಿರಣ್ಣ. ಕರಣಹಸುಗೆಯನೋದುವಣ್ಣಗಳ ಕಾಲ ಹಿಡಿದೆಳೆಯಿತು ಮಾಯೆ. ಮಿಶ್ರಾರ್ಪಣಗಳನೋದುವಣ್ಣಗಳ ಮೀಸೆಯ ಹಿಡಿದುಯ್ಯಾಲೆಯನಾಡಿತು ಮಾಯೆ. ಆತ್ಮನ ಸ್ವರೂಪವನರಿವಣ್ಣಗಳ ತನಗಾಳು ಮಾಡಿತ್ತು ಮಾಯೆ. ಶಿವಜ್ಞಾನವ ಕೀಳುಮಾಡಿ ತತ್ವಸ್ವರೂಪವನರಿವಣ್ಣಗಳ ತನಗೆ ಮುದ್ದು ಮಾಡಿಸಿ ಮೋಹಿಸಿ ಬತ್ತಲೆ ನಿಲಿಸಿತು ಮಾಯೆ. ಮಂತ್ರಗೋಪ್ಯವನೋದುವಣ್ಣಗಳ ಕುಟಿಲವೆಣ್ಣಿನ ಕುಮಂತ್ರಕ್ಕೆ ಸಿಕ್ಕಿಸಿ ಕಾಡಿತು ಮಾಯೆ. ಬರಿಯ ವೈರಾಗ್ಯದ ಮಾಡುವಣ್ಣಗಳ ಸ್ತ್ರೀಯರ ಮುಡಿಯ ಸಿಂಗರಿಸುವಂತೆ ಮಾಡಿತು ಮಾಯೆ. ಜಪಧ್ಯಾನಗಳ ಮಾಡುವಣ್ಣಗಳ ಭಗಧ್ಯಾನವ ಮಾಡಿಸಿತು ಮಾಯೆ. ಲಿಂಗವ ಕರಸ್ಥಲದಲ್ಲಿ ಹಿಡಿದಣ್ಣಗಳ ಅಂಗನೆಯರ ಹಿಂದಣ ಪುಕಳಿಯ ಮುಂದಣ ಯೋನಿಚಕ್ರವ ಮುಟ್ಟಿಸಿ ಮೂಗನರಿಯಿತು ಮಾಯೆ. ಪ್ರಸಾದ ಲೇಹ್ಯವ ಮಾಡುವಣ್ಣಗಳ ಪೊಸಜವ್ವನೆಯರ ತುಟಿಯ ಲೋಳೆಯ ನೆಕ್ಕಿಸಿತು ಮಾಯೆ. ಬೆಡಗಿನ ವಚನವನೋದುವಣ್ಣಗಳ ಸಖಿಯರ ತೊಡೆಯಲ್ಲಿ ಹಾಕಿತು ಮಾಯೆ. ವಚನವನೋದುವಣ್ಣಗಳ ರಚನೆಗೆ ನಿಲಿಸಿತು ಮಾಯೆ. ಇದು ಕಾರಣ, ಇಚ್ಛೆಯ ನುಡಿದು ಕುಚ್ಫಿತನಾಗಿ ಬರಿವಿರಕ್ತನಂತೆ ಹೊಟ್ಟೆಯ ಹೊರೆದು ಹೊನ್ನು ಹೆಣ್ಣು ಮಣ್ಣು ದೊರೆತಲ್ಲಿ ಹಿಡಿದಿಹ ಕರ್ಮಿಯೆಂಬ ಕಾಳಮೂಳರಿಗೆಲ್ಲಿಯದೋ ವಿರಕ್ತಿ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನಷ್ಟು ... -->