ಅಥವಾ

ಒಟ್ಟು 49 ಕಡೆಗಳಲ್ಲಿ , 23 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ರೋಮ ಮುಮ್ಮೊನೆದೋರಿ ಮೊಳೆಗಾಣದಂತೆ, ದಶಾಂಗುಲಿಯ ನಖ ಪ್ರತಿರೂಪುದೋರದಂತೆ. ಇದು ಶರೀರ ಚಿತ್ರಾಂಗಿಯ ಕಾಯದ ನಿರಿಗೆಯ ತೆರ. ಹೊರಗಣ ಕ್ರೀ, ಆತ್ಮನೊಳಗಣ ಜ್ಞಾನ ಇಂತೀ ಉಭಯವನರಿದು ಕಾಯಕವನೊಡಗೂಡಿ ಮಾಡಬೇಕು. ಹದಿನೆಂಟು ಕಾಯಕದೊಳಗಾದ, ನಾಲ್ಕು ಕಾಯಕ ಹೊರಗಾದ ಮೂರು ಕಾಯಕ ಮುಂತಾದ ಕಾಯಕದಂದವ ತಿಳಿದು ಚೆನ್ನಬಸವಣ್ಣ ಸಾಕ್ಷಿಯಾಗಿ ಕಮಳೇಶ್ವರಲಿಂಗವನೊಡಗೂಡಬೇಕು.
--------------
ಶ್ರೀಗುರು ಪ್ರಭುನ್ಮುನೀಶ್ವರ
ಆರಾರ ಭಾವಕ್ಕೆ ಒಳಗಾದ ವಸ್ತು, ಆರಾರ ಭ್ರಮೆಗೆ ಹೊರಗಾದ ವಸ್ತು, ಆರಾರ ಆಚಾರಕ್ಕೆ ಒಳಗಾದ ವಸ್ತು, ಆರಾರ ಅನಾಚಾರಕ್ಕೆ ಹೊರಗಾದ ವಸ್ತು, ಆಚಾರ ಶ್ರದ್ಧೆ ಇದ್ದಲ್ಲಿ ನೀನೆಂಬೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ, ಆ ಗುಣ ಇಲ್ಲದಿರ್ದಡೆ ನೀನು ಎನ್ನವನಲ್ಲಾ ಎಂಬೆ.
--------------
ಅಕ್ಕಮ್ಮ
ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ ! ಆ ವ್ರತದ ವಿಚಾರವೆಂತೆಂದಡೆ ; ಅಲಗಿನ ತುಪ್ಪದ ಸವಿಗೆ ಲಲ್ಲೆಯಿಂದ ನೆಕ್ಕಿದಡೆ ಅಲಗಿನ ಧಾರೆ ನಾಲಗೆಯ ತಾಗಿ, ಆ ಜೀವ ಹಲುಬುವ ತೆರದಂತೆ. ಒಲವರವಿಲ್ಲದ ಭಕ್ತಿ, ಛಲವಿಲ್ಲದ ನಿಷ್ಠೆ, ಎಲವದ ಮರನ ಕಾಯ್ದ ವಿಹಂಗನಂತೆ. ಇಂತೀ ಸಲೆನೆಲೆಯನರಿಯದವನ ವ್ರತಾಚಾರ ಕೊಲೆ ಹೊಲೆ ಸೂತಕಕ್ಕೊಡಲಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ
--------------
ಅಕ್ಕಮ್ಮ
ಏಕಾದಶ ರುದ್ರರು ಹೊರಗಾದ, ಈರೇಳು ಲೋಕ ಹದಿನಾಲ್ಕು ಭುವನ ಯುಗಜುಗಂಗಳಲ್ಲಿ ಒಳಗಾಗಿ ತಿರುಗುವುದೊಂದು ಶಕ್ತಿಯ ಭೇದ. ದಶಾವತಾರವಾಗಿ ಕಾಲಕರ್ಮಂಗಳಲ್ಲಿ ಓಲಾಡುತ್ತಿಪ್ಪುದು ಒಂದು ಶಕ್ತಿಯ ಭೇದ. ಉಂಟು ಇಲ್ಲಾ ಎಂದು ನಿಶ್ಚಿಂತಕ್ಕೆ ಹೋರುವುದೊಂದು ಶಕ್ತಿಯ ಭೇದ. ಇಂತೀ ತ್ರಿವಿಧಶಕ್ತಿಯ ಆದಿ ಆಧಾರವನರಿದು ಕರ್ಮವ ಕರ್ಮದಿಂದ ಕಂಡು, ಧರ್ಮವ ಧರ್ಮದಿಂದ ಅರಿದು, ಜ್ಞಾನವ ಜ್ಞಾನದಿಂದ ವಿಚಾರಿಸಿ, ಇಂತೀ ತ್ರಿಗುಣದಲ್ಲಿ ತ್ರಿಗುಣಾತ್ಮಕನಾಗಿ, ದರ್ಪಣದಿಂದ ಒಪ್ಪಂಗಳನರಿವಂತೆ ಅರಿವು ಕುರುಹಿನಲ್ಲಿ ನಿಂದು, ಕುರುಹು ಅರಿವನವಗವಿಸಿದಲ್ಲಿ ತ್ತøಮೂರ್ತಿ ನಷ್ಟವೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ ಇದಿರಿಟ್ಟ ಪದಾರ್ಥಂಗಳ ಲಿಂಗಕ್ಕೆ ತೋರಿ, ತಾ ಕೊಂಬಲ್ಲಿ ದೃಷ್ಟವಾಯಿತ್ತು. ಸ್ವಪ್ನ ಸುಷುಪ್ತಿಗಳಲ್ಲಿ, ಮಿಕ್ಕಾದ ಏಕಾಂತ ಸತಿ ಕೂಟಂಗಳಲ್ಲಿ ಅದಕ್ಕೆ ದೃಷ್ಟವಹ ಸಹಭೋಜನವಾವುದಯ್ಯಾ ? ಯೋನಿ ಸ್ವಪ್ನ ಸುಷುಪ್ತಿ ಮುಂತಾದ ಭಾವದ ಸಹಭೋಜನ ಎಲ್ಲಿ ಇದ್ದಿತ್ತು ? ಆ ಭಾಜನದ ಸಹಭೋಜನದ ಸಂಬಂಧ ಎಲ್ಲಿದ್ದಿತು ? ಅದು ಕಲ್ಲಿನೊಳಗಣ ನೀರು, ನೀರೊಳಗಣ ಶಿಲೆ, ಇದಾರಿಗೂ ಅಸಾಧ್ಯ ನೋಡಾ. ಅದು ಕಾಯದ ಹೊರಗಾದ ಸುಖ, ಸುಖದ ಹೊರಗಾದ ಅರ್ಪಿತ. ಇಂತೀ ಗೊತ್ತಮುಟ್ಟಿ ಸಹಭೋಜನದಲ್ಲಿ ಅರ್ಪಿಸಬಲ್ಲವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಸಹಭಾಜನ ಭೋಜನವಾಗಿಪ್ಪನು.
--------------
ಅಕ್ಕಮ್ಮ
ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು. ದ್ವಯಮುಖರು ಅದ್ವಯಮುಖರು ಸ್ವತಂತ್ರಮುಖರು ಸನ್ನಹಿತಮುಖರು ಉಗ್ರಮುಖರು ಉತ್ಪತ್ಯಕ್ಕೆ ಹೊರಗಾದ ಮುಖರು ಸ್ಥಿತಿಗತಿಯಿಂದರಿಯದ ಮುಖರು ಸರ್ವವಿಸ್ತೀರ್ಣದೊಳಗುಳ್ಳ ಮುಖರು ಅಷ್ಟತನುಮೂರ್ತಿ ಮೊದಲಾದ ಅನಂತಮೂರ್ತಿಗಳೆಲ್ಲ ದೇವಾರಾಧನೆ ಪೂಜಕರಾದರಲ್ಲದೆ ಭಕ್ತಮುಖರಲ್ಲ. ಸಂಸಾರ ಸಂಗದೊಳಗಿದ್ದವರಲ್ಲ. ಇಂಥ ಮುಖರೆಲ್ಲ ಅಂತಿರಲಿ. ಇಲ್ಲದ ನಿರವಯವ ಆಕಾರಕ್ಕೆ ತಂದು, ಜಂಗಮಲಿಂಗವೆನಿಸಿ ಸಾಹಿತ್ಯವ ಮಾಡಿದಾತ ಬಸವಣ್ಣನು. ಇದನರಿದು ಧನ್ಯನಾದೆನೆಂಬೀತ ಪರುಷದೊಳಗು. ಈ ಕ್ರಮವನರಿಯದೆ, ಅನಂತ ಮತವ ಹಿಡಿದು ಭೂಭಾರಕರಾದರು. ಅವರ ಮುಟ್ಟಿ, ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದವಾಗದೆಂದು ಜಂಗಮಕ್ಕೆ ಅರ್ಪಿಸಿದ ನಿತ್ಯಪ್ರಸಾದವೆನಗೆ ಬಸವಣ್ಣನ ಪ್ರಸಾದ. ಆ ಬಸವಣ್ಣನ ಪ್ರಸಾದವೆ ಎನಗೂ ನಿನಗೂ ವಿಸ್ತಾರವಾಗಿತ್ತು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಯೋಗಭೂಷಣ, ನಿಮ್ಮ ಆ ಅಕ್ಷರಭೇದ ಆದಿಯಾಧಾರಂಗಳಿಲ್ಲದಂದು, ಆನಂದಸ್ಥಾನದಲ್ಲಿಪ್ಪ ಗುರು ಬಸವಣ್ಣ, ತಾನೆನ್ನ ಕರುಣಂ ನಿತ್ಯನೆನಿಸಿ; ಯೋಗಸಿದ್ಧಾಂಗದಲ್ಲಾದ ಪಂಚಬ್ರಹ್ಮದಿಂ ದಾಗಾದೆನೈ ಚೆನ್ನಬಸವ ತಂದೆ; ಯೋಗಮೂರುತಿಯೆ ನೀನೆನ್ನ ಗುರುವಾಗಿ ಶಿವಯೋಗಿಯಾನಾದೆನಯ್ಯಾ. ನಿನ್ನವರ ಹೊರೆಗೈದೆ ಯೋಗಿಗುರು ಪ್ರಭುರಾಯ ನಾ ನಿಮ್ಮ ಕರುಣಲ್ಲಿ ಶಿವಯೋಗಮುದ್ರೆಯನೆ ನೆನೆದು ಸುಖಿಯಾದೆನೈ ಆಗಮಕ್ಕೊಳಗಾದ ಆಗಮಕೆ ಹೊರಗಾದ ಆನಂದಸ್ಥಾನದ ಸ್ವಯವಾದೆನೈ ದೇವ ಯೋಗಜ್ಞಾನ ಕಪಿಲಸಿದ್ಧಮಲ್ಲಿನಾಥನ ಕರುಣ ನಿಮಗಾಯಿತ್ತು, ಶ್ರೀಗುರು ಚೆನ್ನಬಸವಣ್ಣ ತಂದೆ.
--------------
ಸಿದ್ಧರಾಮೇಶ್ವರ
ಅಂಗ ಲಿಂಗ ಸಂಬಂಧವನ್ನುಳ್ಳ ನಿಜವೀರಶೈವ ಭಕ್ತಾರಾಧ್ಯ ಜಂಗಮದ ಭಕ್ತಿ ವಿವಾಹದ ಕ್ರಮವೆಂತೆಂದಡೆ: ಪಾಣಿಗ್ರಹಣ, ವಿಭೂತಿಪಟ್ಟ, ಏಕಪ್ರಸಾದ, ಭಕ್ತಗಣ, ಸಾಕ್ಷಿಯಾಗಿ ಭಕ್ತಿವಿವಾಹವಾಗಿ, ಭಕ್ತ ಜಂಗಮವನಾರಾಧಿಸಿ, ಭಕ್ತಿಪದಾರ್ಥ ಮತ್ತು ಭಕ್ತಿಪ್ರಸಾದವ ಕೊಂಡು ನಿಜಮುಕ್ತಿಯನೈದುವದೆ ವೀರಶೈವ ಭಕ್ತಾರಾಧ್ಯರುಗಳ ಭಕ್ತಿಕಲ್ಯಾಣ ನೋಡ. ಇಂತಪ್ಪ ಭಕ್ತಿಕಲ್ಯಾಣವನರಿಯದೆ ಸತ್ಯಸದಾಚಾರ ಭಕ್ತಿಯುಕ್ತವಾದ ಗುರುಲಿಂಗ ಜಂಗಮದ ಪಾದೋದಕ ಪ್ರಸಾದವೆಂಬ ಪಂಚಾಚಾರಕ್ಕೆ ಹೊರಗಾದ ಭವಿ ಶೈವ ಕೃತಕಶಾಸ್ತ್ರವಿಡಿದು ಮಾಡುವ ಪಂಚಸೂತಕ ಸಂಕಲ್ಪ ಪಾತಕವನುಳ್ಳ ಶಕುನ ಸ್ವಪ್ನ ಸಾಮುದ್ರಿಕಲಕ್ಷಣ ಸ್ತ್ರೀ ಪುರುಷ ಜಾತಕ ಚರಿತ್ರೆ ಕಾಮಶಾಸ್ತ್ರ ಕಲಾಭೇದ ರಾಶಿಫಲ, ನಕ್ಷತ್ರ ಯೋಗ ಕರಣ ದಿನ ತಿಥಿಗಳಿಗೆ ಲಗ್ನಮುಹೂರ್ತ ಭವಿಶಬ್ದ ಪಾರ್ವ ಧಾರಾಪೂರಿತವಾದಿಯಾದ ಜಗದ್ವ್ಯವಹಾರವನು, ಪಂಚಾಂಗ ಕರ್ಮಸೂತಕ ವಿವಾಹವೆನಿಪ್ಪ ಭವಿಮಾಟಕೂಟ ಭವಿ ದುಷ್ಕ್ರೀಯನ್ನು ಭವಿಶೈವರಹಿತ ಭವಹರವಾದ ನಿಜವೀರಶೈವಾರಾಧ್ಯ, ಭಕ್ತಜಂಗಮದ ಭಕ್ತಿವಿವಾಹಕ್ಕೆ ಆ ಭವಿದುಷ್ಕ್ರೀಯವ ಮಾಡಿದವಂಗೆ ಗುರುವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ. ಇಂತಪ್ಪ ಅನಾಚಾರಿಗಳು ಭಕ್ತಾರಾಧ್ಯಸ್ಥಲಕ್ಕೆ ಸಲ್ಲರಾಗಿ ಅವರಿರ್ವರನ್ನು ಕೂಡಲಚೆನ್ನಸಂಗಯ್ಯ ಅಘೋರ ನರಕದಲ್ಲಿಕ್ಕುವನು.
--------------
ಚನ್ನಬಸವಣ್ಣ
ಸೀತೆ ಸೆರೆಹೋಹಾಗ, ವಾಣಿಯ ನಾಸಿಕ ಅರಿವಾಗ, ಉಮಾದೇವಿಯ ಅಸುರನರಸುವಾಗ, ಉತ್ಪತ್ಯದಾತ, ಸ್ಥಿತಿಗೆ ಕರ್ತ, ಲಯಕ್ಕೊಡೆಯ ಎಲ್ಲಿ ಹೋದ[ರೆ]ಂದರಿ[ಯೆ] ಇಂತಿವ ಬಲ್ಲವ ಕಲ್ಲಿಗೆ ಹೊರಗಾದ ಸದಾಶಿವಮೂರ್ತಿಲಿಂಗವಲ್ಲದಿಲ್ಲ.
--------------
ಅರಿವಿನ ಮಾರಿತಂದೆ
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ, ಎನ್ನ ಅಂಗದೊಳಗಾಗು. ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು. ಆಗೆಂಬುದಕ್ಕೆ ಮುನ್ನವೆ ಆ ಗುಂಡು ಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ, ಕಾಯವಡಗಿ, ಭಾವವೆಂಬ ಬಯಲಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
--------------
ಘಟ್ಟಿವಾಳಯ್ಯ
ಗುರುಲಿಂಗ ಬ್ರಹ್ಮರೂಪವಾಯಿತ್ತು. ಚರಲಿಂಗ ವಿಷ್ಣುರೂಪಾಯಿತ್ತು. ಸ್ಥಾವರಲಿಂಗ ರುದ್ರರೂಪಾಯಿತ್ತು. ಗುರುಚರಲಿಂಗರೂಪು ತ್ರಿವಿಧಮಲ ಕಾರಣವಾಯಿತ್ತು. ಆ ಮಲಗುಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಾಮಕ್ಕೆ ಹೊರಗಾದ.
--------------
ಶಿವಲೆಂಕ ಮಂಚಣ್ಣ
ಲಿಂಗಸೀಮೆ ಸೀಮೋಲ್ಲಂಘನವಾದಲ್ಲಿ, ಸೀಮೆಯ ಮೀರಿದಲ್ಲಿ ಪ್ರಾಣಯೋಗವಾಗಬೇಕು. ಆ ಗುಣ ತೋರುವುದಕ್ಕೆ ಮುನ್ನವೆ ಸಾವಧಾನಿಯಾಗಿರಬೇಕು. ಲೌಕಿಕ ಮೆಚ್ಚಬೇಕೆಂಬುದಕ್ಕೆ, ಭಕ್ತರೊಪ್ಪಬೇಕೆಂಬುದಕ್ಕೆ, ಉಪಾಧಿಕೆಯ ಮಾಡುವಲ್ಲಿ ವ್ರತ ಉಳಿಯಿತ್ತು, ಆಚಾರ ಸಿಕ್ಕಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಆತನ ದೃಕ್ಕಿಂಗೆ ಹೊರಗಾದ.
--------------
ಅಕ್ಕಮ್ಮ
ಅಯ್ಯ! ಶ್ರೀಗುರುಲಿಂಗಜಂಗಮದ ವೇಧಾಮಂತ್ರಕ್ರಿಯಾದೀಕ್ಷೆಗೆ ಹೊರಗಾದ ಭುವನದ ಶೈವದೈವದಾರ್ಚನೆ ಪೂಜೆಯ ಮಾಡಿ, ಅದರುಚ್ಛಿಷ್ಟವ ಭುಂಜಿಸುವದಂಗಾಚಾರ. ಅದನುಳಿದು ಶುದ್ಧಸಿದ್ಧಪ್ರಸಿದ್ಧಪ್ರಸಾದಸ್ವರೂಪವಾದ ಅನಾದಿಗುರುಲಿಂಗಜಂಗಮದ ಅರ್ಚನೆ ಪೂಜೆಯ ಮಾಡಿ ಕಿಂಕರ್ವಾಣದಿಂದ ಅವರ ಒಕ್ಕುಮಿಕ್ಕ ಪ್ರಸಾದವ ಹಾರೈಸುವುದೆ ಲಿಂಗಾಚಾರ. ಈ ಭೇದವ ತಿಳಿದು ಪಂಚಾಚಾರ ಆಚರಣೆಗೆ ತಂದು, ಸಪ್ತಾಚಾರವ ಸಂಬಂಧವಿಟ್ಟು, ಅಷ್ಟಾವರಣದ ಕಲೆನೆಲೆಗಳ ಒಳಗು-ಹೊರಗು ಎನ್ನದೆ, ಸದ್ಗುರುಮುಖದಿಂದ ಆಚರಣೆ-ಸಂಬಂಧವ ತಿಳಿದು, ಸದ್ಭಕ್ತಿ-ಸಮ್ಯಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು, ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವಲ್ಲದೆ, ಉಳಿದ ವೇಷಧಾರಿಗಳೆಲ್ಲ ಎನ್ನೊಡೆಯ ಪ್ರಮಥಗಣಾಚಾರಕ್ಕೆ ಹೊರಗೆಂದಾತನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಆಚಾರದ ಅರಿವು ಹೊರಗಾದ ಮೇಲೆ. ಅಂಗದ ಮೇಲೆ ಲಿಂಗವಿದ್ದು ಫಲವೇನು? ಕುರುಡನ ಕೈಯ ಕನ್ನಡಿ ಇದ್ದ ಹಾಗೆ, ಬರಡಾವಿಗೆ ಶಿಶು ಹುಟ್ಟಿದ ಹಾಗೆ, ಕುರುಡಗೆ ಕಣ್ಣೆಬೇನೆ ಬಂದ ಹಾಗೆ, ಕುರುಡಿಗೆ ಮಕ್ಕಳಾದ ಹಾಗೆ, ದೀನನ ಮನೆಯಲ್ಲಿ ಹೊನ್ನಿದ ಹಾಗೆ. ಇವರೇನ ಮಾಡಿದರೇನು? ತಮ್ಮ ಹಾನಿವೃದ್ಧಿಯನರಿಯದನ್ನಕ್ಕ, ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ, ಅಗಿದಗಿದು ತಿನಿಸಿಕೊಳುತಿಪ್ಪರಲ್ಲ, ಎನ್ನ ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಬೀಜವ ಮೀರಿದ ವೃಕ್ಷವುಂಟೆ ಅಯ್ಯಾ ? ಶಿರ ಹೊರಗಾದ ಚಕ್ಷುವುಂಟೆ ಅಯ್ಯಾ ? ಕಾಯ ಹೊರಗಾದ ಭೋಗವುಂಟೆ ಅಯ್ಯಾ ? ಇಷ್ಟ ಹೊರಗಾದ ಅರ್ಪಿತ ಅದೆತ್ತಣ ಬಾಯಿ ? ಕಷ್ಟದ ಮಾತು ದೃಷ್ಟವಲ್ಲ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ ಅರಿತವರ ಅರಿವಲ್ಲ.
--------------
ಮನುಮುನಿ ಗುಮ್ಮಟದೇವ
ಇನ್ನಷ್ಟು ... -->