ಅಥವಾ

ಒಟ್ಟು 46 ಕಡೆಗಳಲ್ಲಿ , 25 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುಕ್ಲಶೋಣಿತದಲ್ಲಿ ಬಲಿದ ಕರುಳು ಕತ್ತಲೆಯಲ್ಲಿ ಬೆಳೆದು, ಮೂತ್ರನಾಳದಲ್ಲಿಳಿದು, ಕರ್ಮವೆ ಕರ್ತುವಾಗಿ, ಕಪಟವೆ ಆಶ್ರಯವಾಗಿ, ಕೇವಲಜ್ಞಾನಶೂನ್ಯವಾಗಿ, ಬರಿಯ ಮಾತ ಬಣ್ಣಿಸಿ, ಬಯಲ ಮಾತ ಕೊಟ್ಟು, ಬಸುರ ಮಾತ ತೆಗೆದು ಜಿಹ್ವೆ ಗುಹ್ಯಂಗಳ ಹೊರೆವ ಚೋರವಿದ್ಯಕ್ಕೆ ನಿಜ ಸಾಧ್ಯವಪ್ಪುದೆ ?ಅದು ಹುಸಿ. ಅದೆಂತೆಂದಡೆ: ಕರ್ಮಕಾಪಟ್ಯಮಾಶ್ರಿತ್ಯ ನಿರ್ಮಲಜ್ಞಾನವರ್ಜಿತಾಃ ವಾಗ್ಬ್ರಹ್ಮಣಿ ಪ್ರವರ್ತಂತೇ ಶಿಶ್ನೋದರಪರಾಯಣಾಃ ಇಂತೆಂದುದಾಗಿ, ತ್ರಿಡಂಬಿಂದೊಡಲ ಹೊರೆದು ಕುಟಿಲ ತಮಗಿಲ್ಲೆಂಬ ಡಂಭಕರನೇನೆಂಬೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಆದಿಯನಾದಿ ಆಚಾರವ ಕಾಣದೆ, ಸಮಮಾನದ ಲಿಂಗದ ಘನವ ತಿಳಿಯದೆ, ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ, ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ. ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ, ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ, ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ, ಕೃತಿಯ ದ್ವೆ ೈತವ ನಟಿಸುವ ಪಂಚಮಹಾಪಾತಕದೇವರ ದೇವತ್ವದ ಬಲ್ಲರು ಕೇಳಿರಣ್ಣ. ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ. ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ. ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ | ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ | ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ | ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ, ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು, ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು, ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ, ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ. ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ, ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ? ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ ಯೋನಿಚಕ್ರವ ಕೂಡಿ ನೆರೆದ ಬಳಿಕ, ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ, ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ, ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ. ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ. ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ. ಅವ ಅಮೇಧ್ಯ ಸುರ ಭುಂಜಕನು. ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ. ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು. ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ. ಸೋವಿಯ ಸಂಗ ಆಲಿಂಗನಂಗೈದವ, ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು. ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು. ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು. ಸಚರಾಚರಯೋನಿ ಯೋನಿನವಕೋಟಿ ತಪ್ಪದು. ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು. ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ, ಅಲ್ಲ ನಿಲ್ಲು, ಮಾಣು, ಹೊರಗಯ್ಯ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು. ನೀ ಹೊರೆವ ಜಗದ ಜೀವರಾಸಿಗಳೊಳಗೆ, ಆಸೆಗೆ ಬೇರೆ ಕೊಟ್ಟುದುಳ್ಳಡೆ ಹೇಳು ದೇವಾ. ಅರ್ಚಿಸಿ ಪೂಜಿಸಿ, ನಿಮ್ಮ ವರವ ಬೇಡಿದೆನಾದಡೆ ಬಾರದ ಭವಂಗಳಲ್ಲಿ ಎನ್ನ ಬರಿಸು, ಸಕಳೇಶ್ವರದೇವಾ.
--------------
ಸಕಳೇಶ ಮಾದರಸ
ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಅಣ್ಣಗಳಿರಾ, ನೀವು ಕೇಳಿರೊ. ಅವರ ಬಾಳುವೆ ರಿಂತೆಂದಡೆ; ಕುರುಡ ಕನ್ನಡಿಯ ಹಿಡಿದಂತೆ. ತನ್ನ ಒಳಗೆ ಮರೆದು ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಚದುರರೆಲ್ಲರೂ ಹಿರಿಯರೆ ? ಅಲ್ಲಲ್ಲ. ಇದ ಮೆಚ್ಚುವರೆ ನಮ್ಮ ಶರಣರು ? ಅವರ ನಡೆ ಎಂತೆಂದಡೆ: ಒಳಗನರಿದು, ಹೊರಗ ಮರೆದು, ತನುವಿನೊಳಗಣ ಅನುವ ಹಸುಗೆಯ ಮಾಡಿದರು. ಪೃಥ್ವಿಗೆ ಅಪ್ಪುವಿನ ಅಧಿಕವ ಮಾಡಿದರು. ಅಗ್ನಿಯ ಹುದುಗಿದರು, ವಾಯುವ ಬೀರಿದರು, ಆಕಾಶದಲ್ಲಿ ನಿಂದರು, ಓಂಕಾರವನೆತ್ತಿದರು; ಅದರೊಡಗೂಡಿದರು. ಕಾಣದ ನೆಲೆಯನರಿದರು; ಪ್ರಮಾಣವನೊಂದುಗೂಡಿದರು. ಮಹಾಬೆಳಗಿನಲ್ಲಿ ಓಲಾಡುವ ಶರಣರ ವಾಗ್ಜಾಲವಕಲಿತುಕೊಂಡು ನುಡಿವ ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಾತ ಕಲಿತು ಮಂಡೆಯ ಬೋಳಿಸಿಕೊಂಡಡೇನು ? ವೇಷಲಾಂಛನಧಾರಿ, ಉದರಪೋಷಕರಪ್ಪರಲ್ಲದೆ ಆಗಮಾಚಾರಿಯರಾಗಲರಿಯರು ಕಾಣಿರೇ. ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಸಲ್ಲದು ಸೀಮೆಯ ಕಲ್ಲು. ಅನ್ಯರ ಬೋಸರಿಸಿ ತನ್ನ ಉದರವ ಹೊರೆವ ವೇಷಡಂಭಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಕಾಯದ ಕರ್ಮ ಮಾಡುವನ್ನಕ್ಕ ಶಿವಪೂಜಕನಲ್ಲ. ಜೀವ ಭವಕ್ಕೆ ತಿರುಗುವನ್ನಕ್ಕ ವೈರಾಗ್ಯಭಾವ ಸಂಬಂಧಿಯಲ್ಲ. ಇವೆಲ್ಲವೂ ಹೊಟ್ಟೆಯ ಹೊರೆವ ಘಟ್ಟಿಯತನವಲ್ಲದೆ ನಿಶ್ಚಯವಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಉದಾಸೀನವ ಮಾಡದ[ಮಾಡಿದ?] ಭಕ್ತರ ಮಂದಿರದಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ; ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ ಲಿಂಗಾರ್ಚಕ ಶ್ರೇಷ*ರು ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು ಅಂದಂದಿಂಗವರ ಹೊಂದಿ ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳವುತ್ತ ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗತ್‍ಪಾವನ. ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ ತನ್ನ ಒಡಲುಕಕ್ಕುಲತೆಗೆ ಉಪಾಧಿಯ ನುಡಿದು ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು. ಅದೆಂತೆಂದೊಡೆ; ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್ ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ. ಉಪಾಧಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್ ಇಂತೆಂದುದಾಗಿ ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ. ಆ ತಾಮಸ ಮುಖದಿಂದ ಮಾಯೋಚ್ಛಿಷ*ವ ಕೊಂಡಾತ ಜಂಗಮವಲ್ಲ ಅವರೀರ್ವರನ್ನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು, ಸತ್ತುಹೋದವರ ಸಮರ್ಥಿಕೆಯ ಹೊಗಳಿ, ಹೊಟ್ಟೆಯ ಹೊರೆವ ಕವಿಗಳು ಕೋಟ್ಯಾನುಕೋಟಿ. ಅರ್ಥವುಳ್ಳವರ ಅಗ್ಗಳಿಕೆಯ ಹೊಗಳುವ ಕವಿಗಳು ಕೋಟ್ಯಾನುಕೋಟಿ. ಲಿಂಗವ ಹೊಗಳಿ ಹೊಗಳಿ, ಅಂಗದ ಸೂತಕ ಹಿಂಗಿಸಿ, ಜಂಗಮದ ದಾಸೋಹದಿಂದ ಸರ್ವಾಂಗಲಿಂಗಿಯಾದ ಭಕ್ತನಂಗಳವೆನಗೆ ವಾರಣಾಸಿ, ಗಾಯತ್ರಿ, ಮಲಪ್ರಹರಿಯಿಂದಧಿಕವಯ್ಯಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಒಡಲ ಹೊರೆವ ಇಚ್ಫೆಯಿಂದ, ಹಗಲೆನ್ನದೆ ಇರುಳೆನ್ನದೆ ಬೆಂದ ಬಸುರಿಂಗೆ ಕುದಿವುತ್ತಿದ್ದೇನೆ. ನಿಮ್ಮ ನೆನೆಯಲೂ ವೇಳೆಯಿಲ್ಲ, ಪೂಜಿಸಲೂ ವೇಳೆಯಿಲ್ಲ. ಒಂದುವೇಳೆಯಾದರೂ ಶಿವಮಂತ್ರವ ಸ್ಮರಿಸ ತೆರಹಿಲ್ಲ. ಈ ಪ್ರಯಾಸವ ಬಿಡಿಸಿ, ನಿಮ್ಮ ನೆನೆವಂತೆ ಮಾಡಯ್ಯಾ, ಕಲಿದೇವರದೇವಾ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಮಡಿವಾಳ ಮಾಚಿದೇವ
ಮೂಷಕ, ವಿಹಂಗ, ಕುಕ್ಕುಟ,ಮಾರ್ಜಾಲ, ಕುಕ್ಕುರ, ದೌಷ್ಟ್ರ ಇವು ಮೊದಲಾದ ನೇಮಿಗಳೆಲ್ಲರು ಸಿಕ್ಕಿದರಲ್ಲಾ ನೀವು ಹಿಡಿದ ವ್ರತಕ್ಕೆ ಭಂಗಿತರಾಗಿ, ಭವಿಯ ಪರಾಪೇಕ್ಷದಿಂದ ದ್ರವ್ಯವ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆಂದು ಮರೆಯಲ್ಲಿ ಒಡಲ ಹೊರೆವ ಸುರೆಗುಡಿಹಿಗೆ ನೆರೆ ಭಕ್ತಿಯೇಕೆ ವ್ರತಕ್ಕೆ ದೂರ, ಆಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಅರಿವು ಆಚಾರವುಳ್ಳ ಸಮ್ಯಜ್ಞಾನಿಗೆ ಹೇಳುವೆನಲ್ಲದೆ, ಜಗದಲ್ಲಿ ನಡೆವ ಜಂಗುಳಿಗಳಿಗೆ ನಾ ಹೇಳುವನಲ್ಲ. ಆರುಸ್ಥಲವನರಿದ ಲಿಂಗೈಕ್ಯಂಗೆ ಅಂಗದಮೇಲಣ ಲಿಂಗ ಭಿನ್ನವಾಗಲು ಸಂದೇಹಗೊಳ್ಳಲಿಲ್ಲ, ಲಿಂಗ ಹೋಯಿತ್ತು ಎಂದು ನುಡಿಯಲಿಲ್ಲ. ವೃತ್ತ ಗೋಳಕ ಗೋಮುಖ ಈ ತ್ರಿವಿಧ ಸ್ಥಾನದಲ್ಲಿ ಭಿನ್ನವಾಗಲು ಲಿಂಗದಲ್ಲಿ ಒಡವೆರೆಯಬೇಕು. ಹೀಂಗಲ್ಲದೆ ಸಂದೇಹವೆಂದು ಘಟವ ಹೊರೆವ ಅಜ್ಞಾನಿ ಕೋಟಿಜನ್ಮದಲ್ಲಿ ಶೂರಕನಾಗಿ ಹುಟ್ಟುವ. ಸಪ್ತಜನ್ಮದಲ್ಲಿ ಕುಷ್ಟನಾಗಿ ಹುಟ್ಟುವ. ದಾಸೀ ಗರ್ಭದಲ್ಲಿ ಹುಟ್ಟಿ, ಹೊಲೆಯರ ಎಂಜಲ ತಿಂದು, ಭವಭವದಲ್ಲಿ ಬಪ್ಪುದು ತಪ್ಪದು ಕಾಣಾ, ಚೆನ್ನಬಸವಣ್ಣ ಸಾಕ್ಷಿಯಾಗಿ ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ವೇಷದ ಹೊತ್ತ ಹಿರಿಯರು ಈಶ್ವರಧ್ಯಾನದಲ್ಲಿರಬೇಕು. ವೇಷವ ತೋರಿ ಗ್ರಾಸಕ್ಕಾಗಿ ಆಸೆಮಾಡಿ ಲೋಗರ ಮನೆಯ ಕಾದು ಗ್ರಾಸವ ಪಡೆದು ಉದರವ ಹೊರೆವ ವೇಷವು ವೇಶಿಯಿಂದವು ಕರಕಷ್ಟ! ರಾಮನಾಥ.
--------------
ಜೇಡರ ದಾಸಿಮಯ್ಯ
ಧನದ ಮೇಲೆ ಬಂದವರೆಲ್ಲ ಅನುಸರಿಗಳಲ್ಲದೆ ಆಗುಮಾಡಬಂದವರಲ್ಲ. ಮನದ ಮೇಲೆ ಬಂದು ನಿಂದು ಜರೆದು ನುಡಿದು ಪಥವ ತೋರಬಲ್ಲಡಾತನೆ ಸಂಬಂಧಿ. ಹಾಗಲ್ಲದೆ ಅವರಿಚ್ಚೆಯ ನುಡಿದು ತನ್ನುದರವ ಹೊರೆವ ಬಚ್ಚಣಿಗಳ ಮಚ್ಚುವನೆ ಚೆನ್ನಮಲ್ಲಿಕಾರ್ಜುನ ?
--------------
ಅಕ್ಕಮಹಾದೇವಿ
ಭಕ್ತರೆಂಬವರೆಲ್ಲರೂ ಲೆಕ್ಕಕ್ಕೆ ಹಾಯ್ದು, ದೃಷ್ಟವಪ್ಪ ಜಂಗಮದ ಕೈಯಲೂ ಕಷ್ಟತನವಹ ಊಳಿಗವ ಕೊಂಡು, ಮತ್ತೆ ಜಂಗಮವೆಂದು ಪ್ರಸಾದವನಿಕ್ಕಿಸಿಕೊಂಡುಂಬ ಸಿಕ್ಕಿಸುಗಾರರ ನೋಡಾ. ಇಂತೀ ಹೊಟ್ಟೆಯ ಹೊರೆವ ಜಂಗಮಕ್ಕೆಯೂ ಠಕ್ಕಿಂದ ಮಾಡುವ ಭಕ್ತಂಗೆಯೂ ಹುಚ್ಚುಗೊಂಡ ನಾಯಿ ಒಡೆಯನ ತಿಂದು, ಅದರಲ್ಲಿ ಮಿಕ್ಕುದ ನರಿ ತಿಂದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶಿವಲಾಂಛನವ ಧರಿಸಿ, ಚರಲಿಂಗಮೂರ್ತಿಯಾದ ಬಳಿಕ ತ್ರಿಲೋಕಕ್ಕೆ ಕರ್ತುಭಾವದಿಂದಿರಬೇಕಲ್ಲದೆ ಅಶನದ ಅಪ್ಯಾಯನ ವಿಷಯಂಗಳಿಗೆ ಕಂಡಕಂಡವನರಫ ಕಂಡ ಕಂಡಲ್ಲಿ ಕರಕರದು ಕರಕರಿಸಿ ಕಾಂಚಾಣಕ್ಕೆ ಕೈನೀಡುವ ಕಷ್ಟವ ನೋಡಾ. ಉಪಾಧಿಯಿಂದೊಡಲ ಹೊರೆವ ಪರಿಯ ನೋಡಯ್ಯಾ. ಇಂತಿವೆಲ್ಲ ಭಂಗವೆಂದರಿತು ಅಭಂಗನಾಗಿರಬೇಕಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇನ್ನಷ್ಟು ... -->