ಅಥವಾ

ಒಟ್ಟು 258 ಕಡೆಗಳಲ್ಲಿ , 56 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುದಿ ಮೊದಲಾಯಿತ್ತು. ಮೊದಲೇ ತುದಿಯಾಯಿತ್ತು. ತುದಿ ಮೊದಲೆಂಬವೆರಡಿಲ್ಲದೆ ಹೋಯಿತ್ತು. ಮುನ್ನೆಂತಿದ್ದುದಂತೆ ಆಯಿತ್ತು. ಸಹಜದ ನಿಲವು ಉದಯಸಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಘೋರವಕ್ತ್ರ, ಅಜಾತವಕ್ತ್ರ, ಸಾಧ್ಯವಿಲ್ಲದ ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು, ಸದ್ಯೋನ್ಮುಕ್ತಿಯ ಪಡೆಯಲು, ಪ್ರಸಾದ ಇಹಪರಕ್ಕೆ ಸಾಲದೆ ಹೋಯಿತ್ತು. ಎನಗೆ ಕಾಯದ ಹಂಗಿಲ್ಲ, ಕರ್ಮದ ಹಂಗಿಲ್ಲ ಸಂಗಯ್ಯ.
--------------
ನೀಲಮ್ಮ
ಸಕಲ ಬಹುಕೃತವೆಂಬ ಗಹನದಲ್ಲಿ, ಜೀವವೆಂಬ ದಂತಿ ತಿರುಗಾಡುತ್ತಿರಲಾಗಿ, ಅರಿವೆಂಬ ಕೇಸರಿ ಅದ ಕಂಡು ಒದಗಿಯೈದಿ, ಮಸ್ತಕದ ಕುಂಭಸ್ಥಲವನೊಡೆದು ಸೇವಿಸುತ್ತಿರಲಾಗಿ, ಶಾರ್ದೂಲ ಹೋಯಿತ್ತು, ಕೇಸರಿ ಬಿಟ್ಟಿತ್ತು , ಗಜ ಬದುಕಿತ್ತು, ಶಾರ್ದೂಲ ಶಂಕೆಯ ಹರಿಯಿತ್ತು . ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಲೀಲೆಗೆ ಹೊರಗಾಗಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಪರಬ್ರಹ್ಮವ ನುಡಿವರೆಲ್ಲಾ ಬ್ರಹ್ಮನ ಬಾಯಾಟ, ಹಿಂಗಿದಲ್ಲಿ ಹೋಯಿತ್ತು. ಬೊಮ್ಮ ಬಾಯೆಂಬ ಬಾಗಿಲಮುಂದೆ ಸುಳಿಯದಿರೆ, ಅನ್ನ ಆತ್ಮಂಗೆ ಅರಿವೆ ಪ್ರಾಣ ವಿರಕ್ತಂಗೆ. ಇಂತೀ ಗುಣಕ್ಕೆ ಇದಿರ ಕೇಳಲಿಲ್ಲ, ತನ್ನ ಮರೆಯಲಿಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಂಗದೊಳಗೊಂದು ಮಂಗಳದ ಹಕ್ಕಿ ಕುಳಿತಿಪ್ಪುದ ಕಂಡೆನಯ್ಯ. ಆ ಹಕ್ಕಿಯ ಹಿಡಿದು ಹೋಗದ ಮುನ್ನ ಅದು ಗಗನಕ್ಕೆ ಹಾರಿತ್ತು ನೋಡಾ! ಹಕ್ಕಿ ಹೋಯಿತ್ತು ಲಿಂಗದ ಗುಡಿಗೆ. ಮತ್ತೆ ಕಂಡನು ಒಬ್ಬ ತಳವಾರನು. ಆ ತಳವಾರನು ಗದೆಯ ತಕ್ಕೊಂಡು ಇಡಲೊಡನೆ ಮಂಗಳನೆಂಬ ಹಕ್ಕಿ ಬಿತ್ತು ನೋಡಾ! ಇದ ನೀವಾರಾದಡೆ ಹೇಳಿರಯ್ಯ, ನಾನಾದರೆ ಅರಿಯೆನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
--------------
ಅಲ್ಲಮಪ್ರಭುದೇವರು
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ, ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ. ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ, ಹೊನ್ನು, ಹೆಣ್ಣು, ಮಣ್ಣನೀವವರ ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ. ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ, ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ. ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು, ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ, ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ, ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ ಸುಳಿವ ಜಂಗಮದ ಈಶನೆಂದೆ ಕಾಂಬೆ. ಆ ಜಂಗಮಕ್ಕೆ ಅರ್ಥ, ಪ್ರಾಣ, ಅಬ್ಥಿಮಾನವನೊಪ್ಪಿಸಿ, ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ. ಇದನೆಂತಾದರೂ ಒಪ್ಪುಗೊಳ್ಳ ಎನ್ನ. ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು.
--------------
ಹಡಪದ ಅಪ್ಪಣ್ಣ
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ_ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್''_ ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''_ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ. ಗಾವುದ ಹಾದಿಯ ಊರು ಭುವನ ಹದಿನಾಲ್ಕು ಲೋಕವ ನುಂಗಿತ್ತು. ಮನೆಯೊಳಗಣ ಒರಳು ಜಂಬೂದ್ವೀಪ ನವಖಂಡ ಪೃಥ್ವಿಯ ನುಂಗಿತ್ತು. ನುಂಗಿದ ಮುಚ್ಚಳಿಗೆ ತೆರಹಿಲ್ಲದೆ ಮತ್ತೆ ಆ ಮನೆಯ ನುಂಗಿತ್ತು. ಇಂತೀ ಒಳಗಾದವನೆಲ್ಲ ಪತಂಗ ನುಂಗಿತ್ತು. ನುಂಗಿದ ಪತಂಗ ಹಿಂಗಿಯಾಡುತ್ತಿದ್ದಿತ್ತು. ಕಂಡಿತ್ತು ಬೆಂಕಿಯ ಬೆಳಗ, ಬಂದು ಸುಖಿಸಿಹೆನೆಂದು ಹೊಂದಿ ಹೋಯಿತ್ತು. ಇದರಂದವ ತಿಳಿ, ಲಿಂಗೈಕ್ಯನಾದಡೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು ಹುಲ್ಲು ತಿನ್ನದು, ನೀರ ಕುಡಿಯದು, ಇರ್ದಲ್ಲಿ ಇರದು, ಹೋದತ್ತ ಹೋಗದು. ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ, ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು ಮುತ್ತನುಗುಳಿ ಹೋಯಿತ್ತು. ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ, ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ. ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ, ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ.
--------------
ಆದಯ್ಯ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು, ನಿನಗೆ ಕೊಡುವೆನೆಂದವಧಾನಿಸುವನ್ನಬರ, ಎನಗೂ ಇಲ್ಲದೆ ಹೋಯಿತ್ತು , ನಿನಗೂ ಇಲ್ಲದೆ ಹೋಯಿತ್ತು . ಈ ಭೇದಬುದ್ಧಿಯು ಬಿಡಿಸಿ, ಆನರಿದುದೆ ನೀನರಿದುದೆಂಬಂತೆ ಎಂದಿಂಗೆನ್ನನಿರಿಸುವೆ ಸಕಳೇಶ್ವರಾ.
--------------
ಸಕಳೇಶ ಮಾದರಸ
ಕಾಲದೊಳು ತನುದಂಡಣೆ, ಜೀವಭವ ಸಂಭವ. ಈ ಉಭಯವು ಪ್ರಕೃತಿಯೊಳಗಾದಲ್ಲಿ, ಅರಿವು ಹೋಯಿತ್ತು ಸುಂಕಕ್ಕೆ, ಬಂಕೇಶ್ವರಲಿಂಗದಲ್ಲಿ.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->