ಅಥವಾ

ಒಟ್ಟು 258 ಕಡೆಗಳಲ್ಲಿ , 56 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಣು ನೋಡಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಕಿವಿ ಕೇಳಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಘ್ರಾಣ ವಾಸಿಸಿ ಅರ್ಪಿಸಿದುದು ಅದಾವ ಲಿಂಗಕ್ಕೆ ? ಜಿಹ್ವೆಯ ಕೊನೆಯಲ್ಲಿ ಸವಿದು ಅರ್ಪಿಸಿದುದು ಅದಾವ ಲಿಂಗಕ್ಕೆ ? ಕರ ಮುಟ್ಟಿದ ಸೋಂಕಿನ ಸುಖ ಅದಾವ ಲಿಂಗಕ್ಕೆ ? ಇಂತೀ ಪಂಚೇಂದ್ರಿಯಂಗಳಲ್ಲಿ ಅರ್ಪಿಸಿಕೊಂಬ ಆತ್ಮನ ತೃಪ್ತಿ ಐದೋ ಮೂರೋ ಬೇರೆರಡೋ ಏಕವೋ ? ಎಂಬುದ ನಿಧಾನಿಸಿ ಬಹುವೆಜ್ಜದ ಕುಂಭದಲ್ಲಿ ಅಗ್ನಿಯನಿರಿಸಿ ಉರುಹಲಿಕೆ ವೆಜ್ಜ ವೆಜ್ಜಕ್ಕೆ ತಪ್ಪದೆ ಕಿಚ್ಚು ಹೊದ್ದಿ ತೋರುವದು ವೆಜ್ಜದ ಗುಣವೋ ? ಒಂದಗ್ನಿಯ ಗುಣವೋ ? ಇಂತೀ ಗುಣವ ನಿಧಾನಿಸಿಕೊಂಡು ನಿಜಪ್ರಸಾದವ ಕೊಂಬ ಸ್ವಯಪ್ರಸಾದಿಗೆ ತ್ರಿವಿಧಪ್ರಸಾದ ಸಾಧ್ಯವಪ್ಪುದಲ್ಲದೆ ವರ್ತಕಪ್ರಸಾದಿಗಳಿತ್ತಲೆ ಉಳಿದರು. ದಹನ ಚಂಡಿಕೇಶ್ವರಲಿಂಗಕ್ಕೆ ಅರ್ಪಿತ ಮುಟ್ಟದೆ ಹೋಯಿತ್ತು.
--------------
ಪ್ರಸಾದಿ ಲೆಂಕಬಂಕಣ್ಣ
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು. ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು. ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು. ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು. ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅಂಗದ ಕೈಯಲ್ಲೊಂದಂಗವದೆ ನೋಡಾ. ಲಿಂಗದ ಕೈಯಲ್ಲೊಂದು ಲಿಂಗವದೆ ನೋಡಾ. ಈ ಉಭಯದ ಮಧ್ಯದಲ್ಲಿ ಅರಿದ ತಲೆಯ, ಕೈಯಲ್ಲಿ ಹಿಡಿದುಕೊಂಡು, ಮುಂಡ ಉದಯವಾಯಿತ್ತ ಕಂಡೆ. ಅದಕ್ಕೆ ತಲೆಯಲ್ಲಿ ಓಲೆ, ಮುಂಡದಲ್ಲಿ ಮೂಗುತಿ, ಮೂಗಿನಲ್ಲಿ ಕಣ್ಣು, ಕಿವಿಯಲ್ಲಿ ತೋರಣ, ಕಂಗಳ ಮುತ್ತುಸರವ ಪವಣಿಸುವ ಜಾಣೆಯ ಕಣ್ಣ ಕೈಯ ಲಿಂಗಕ್ಕೆ ಮದುವೆಯ ಮಾಡಿದರೆಮ್ಮವರು. ಆ ಲಿಂಗದಿಂದ ರೂಪಲ್ಲದ, ಸೋಂಕಿಲ್ಲದ ಸೊಬಗಿನ ಅಭಿನವ ಶಿಶು ಹುಟ್ಟಿತ್ತು ನೋಡಾ. ಆ ನಾಮವ ಹಿಡಿದು ಕರೆದಡೆ ಕೈಸನ್ನೆ ಮಾಡಿತ್ತು. ನೋಡಿದಡೆ ಮುಂದೆಬಂದು ನಿಂದಿತ್ತು. ಅಪ್ಪಿದಡೆ ಸೋಂಕಿಲ್ಲದೆ ಹೋಯಿತ್ತು. ಅರಸಹೋದಡೆ ಅವಗವಿಸಿತ್ತು. ನಿಜಗುರು ಭೋಗೇಶ್ವರಾ, ಇದರ ಕೌತುಕದ ಕಾರಣವೇನು ಹೇಳಯ್ಯಾ.
--------------
ಭೋಗಣ್ಣ
ಈಶ್ವರರೂಪ ತಾಳಿ ಜಗ ಜೀವಾಳರುಗಳ ಬಾಗಿಲಲ್ಲಿ ಬೆಳುಗರೆವನ್ನಬರ ಹೋಯಿತ್ತು, ವೇಷವಾಟದಲ್ಲಿ . ಈ ಆಸೆಯ ಬಿಟ್ಟು, ಈಶನ ರೂಪ ತಾಳಿದ ವಸ್ತು, ಆತ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಇಂದ್ರನಾವಾಸ, ಉಪೇಂದ್ರನ ಓಲಗ ಚಂದ್ರವರಿõ್ಞಳಿಯನರಿಯದೆ ಹೋಯಿತ್ತು, ಬಂಧಮೋಕ್ಷದ ಭವಬಂಧನ ಬಿಡದನ್ನಕ್ಕರ ಮತ್ತೊಂದರ ಮುಖ ಜನಿಸಿತಲ್ಲಾ. ಕೂಡಲಸಂಗಮದೇವಾ, ಚೆನ್ನಬಸವಣ್ಣನ ಸನ್ನಿಧಿಯಿಂದಲಾನು ಬದುಕಿದೆನು.
--------------
ಬಸವಣ್ಣ
ಅರುಹಿನ ಮರಹಿನ ಅಪ್ಯಾಯನವ ಲಿಂಗಕ್ಕೆ ಕೊಡುವ ಗುರುದ್ರೋಹಿಯನೇನೆಂಬೆ ? ಲಿಂಗದ್ರೋಹಿಯನೇನೆಂಬೆ ? ಇಷ್ಟಲಿಂಗಮವಗ್ರಾಹೀ ಪ್ರಾಣಲಿಂಗೇನ ಸಂಯುತಃ ನಿಮಿಷಾರ್ಧವಿಯೋಗೇನ ಮಹಾಪಾಪಂ ತು ಸಂಭವೇತ್ ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅರಿವಿನ ಮರಹಿನ ಭಕ್ತಿ, ಬಾಯಲ್ಲಿ ಹುಡಿಯ ಹೊಯ್ದು ಹೋಯಿತ್ತು.
--------------
ಚನ್ನಬಸವಣ್ಣ
ಭೂಮಿಯೊಳಗಿಂದಲುದಯಿಸಿ ರವಿ ಮೂಡಿಬರಲು ನೆಲ-ಜಲಾಗ್ನಿ ಮರುತಾಕಾಶಕ್ಕಾವರಿಸಿದ ಕತ್ತಲೆ ಹರಿದು ಹೋಯಿತ್ತು ನೋಡಾ ! ಸಕಲ ಜನರೆಲ್ಲ ಎಚ್ಚತ್ತು ಯುಕುತಿ ವ್ಯಾಪಾರ ಲೆಕ್ಕವನು ಗೈಯಲು ಲೋಕನಾಥನ ರಾಣಿವಾಸ ಮಡಿಯಿತ್ತು. ಚಿತ್ರಾಣಿ ಲೋಕನಾಥನ ಸೋಂಕಲು ದೇವಲೋಕನಾಥನಾದುದನೇನೆಂಬೆ ನಿರಂಜನ ಚನ್ನಬಸವಲಿಂಗಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಐವರ ಸಂಗಡ ಉದಯದಲ್ಲಿ ಹೊರವಂಟಿರಾದಡೆ, ಕೇಳಿರಣ್ಣಾ, ಮಧ್ಯಾಹ್ನಕ್ಕೆ ಬಂದಿರಾದಡೆ, ಕಳೆಯಳಿದು ಕಳೆಯ ತಪ್ಪದೆ ನಿಂದಿರಾದಡೆ, ಬಟ್ಟೆ ಸರಿಸ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿಗೆ ಹೋಯಿತ್ತು.
--------------
ಸಿದ್ಧರಾಮೇಶ್ವರ
ಅರ್ಥದ ಭಕ್ತಿ ಉತ್ತರಿಸಿ ಹೋಯಿತ್ತು, ಅರಸು ಭಕ್ತಿ `ನಿಲ್ಲು, ಮಾಣು' ಎಂದಲ್ಲಿ ಹೋಯಿತ್ತು, ಆಚರಣೆಯ ಭಕ್ತಿ ಅಡಗಿ ಹೋಯಿತ್ತು, ಕೂಡಲಚೆನ್ನಸಂಗಮದೇವರಲ್ಲಿ ಕೀಟಕರು ಹೆಚ್ಚಿ, ಪುರಾತರು ಅಡಗಿಹೋದರು
--------------
ಚನ್ನಬಸವಣ್ಣ
ಕೋಗಿಲ ಶಬ್ದ ಕಿವಿಗೆ ಕೂಗಿ ಹೋಯಿತ್ತು ಕಂಡ ಕಂಡ ಪುರುಷನನಪ್ಪಲು ಅಪ್ಪಿನ ಸುಖ ಸಂತಾನವಾಯಿತ್ತೆನಗೆ. ಅಪ್ಪಿನ ಸುಖದ ಸಂತಾನದ ಬಗೆಯ ಕೇಳಲು ಕರಣಿಕ ಹೇಳಿದನಯ್ಯಾ ಮೂವತ್ತಾರು ಕುಮಾರರನು. ಆ ಕುಮಾರನ ಕೂಟದಲ್ಲಿರಲು, ಹೆತ್ತ ಮಕ್ಕಳ ಕೂಟವೆಂದಡೆ, ಹುಟ್ಟಿದರಯ್ಯಾ, ಇನ್ನೂರ ಹದಿನಾರು ರಾಜಕುಮಾರರು. ಆ ಕುಮಾರರ ಚೆಲುವಿಕೆಯ ಕಂಡು, ಆ ಚೆಲುವಿಕೆಯ ಮಕ್ಕಳ ನೆರೆಯಲು ಪತಿವ್ರತೆಯೆನಿಸಿಕೊಂಡು, ಒಬ್ಬನೆ ಪುರುಷನೆಂದಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಹೆಂಡ್ಕ
--------------
ಸಿದ್ಧರಾಮೇಶ್ವರ
ಮನ ಮಂಕಾಯಿತ್ತು; ತನು ಮರೆಯಿತ್ತು; ವಾಯು ಬರತಿತ್ತು. ಉರಿ ಎದ್ದಿತ್ತು, ಹೊಗೆ ಹರಿಯಿತ್ತು, ಸರೋವರವೆಲ್ಲ ಉರಿದು ಹೋಯಿತ್ತು. ಒಳಕ್ಕೆ ಹೊಕ್ಕು ಕದವ ತೆಗೆದು ಬಯಲು ನೋಡಿ ಬೆಳಗ ಕೂಡಿದಲ್ಲದೆ ನಿಜಮುಕ್ತಿ ಇಲ್ಲವೆಂದರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮುಡಿಬಿಟ್ಟು ತೊಂಗವಾರಿದವು ಕೇಳು ತಂದೆ. ಉಡಿ ಜೋಲಿ ಅಡಿಗಿಕ್ಕಿ ಹೋಯಿತ್ತು ಶಿವಶಿವಾ. ನಡೆಗೆಟ್ಟು ನಿಧಿ ನಿಂದಿತ್ತು ಕೇಳಾ ಎನ್ನ ತಂದೆ. ಪ್ರಾಣದೊಡೆಯಾ, ಕರುಣದಿಂದೊಪ್ಪುಗೊಳ್ಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಂಬರವಿಲ್ಲದ ಮೇರು, ಅಂಬುಧಿಯಿಲ್ಲದ ಗುಂಪ ತಂದವರಿಲ್ಲದೆ ಬಂದಿತ್ತು, ನಿಜವನೊಳಕೊಂಡಿತ್ತು ಸಾಧನವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ ಭೋಜನವಿಲ್ಲದೆ ತೃಪ್ತಿಯಾಯಿತ್ತು ನೋಡಾ. ಕ್ರಿಯಾವಿರಹಿತಯೋಗ ಫಲದಾಯಕ ಹೀನಭಕ್ತಿ, ಆಯತ ಸ್ವಾಯತವರಿಯದೆ ಹೋಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಒಡಲಿಲ್ಲದ ಭಕ್ತಂಗೆ ನಿರ್ಜೀವಿ ಜಂಗಮ ಸುಳಿದ ನೋಡಯ್ಯಾ. ಆ ಜಂಗಮ ಸುಳಿದಡೆ, ಆ ಭಕ್ತನೋಡಲು ತುಂಬಿ ಜೀವವಾಯಿತ್ತು. ಆ ಜಂಗಮದ ಭೇದವನರಿಯಲಾಗಿ, ಆ ಜೀವವಳಿದು, ನೀ ನಾನೆಂಬ ಭಾವಕ್ಕೆ ನೆಲೆಯಾಯಿತ್ತು. ಆ ಜಂಗಮದ ಕಳಾಪರಿಪೂರ್ಣವನರಿಯಲಾಗಿ, ಆ ಭಾವ ಮಹತ್ವವನೊಳಕೊಂಡಿತ್ತಯ್ಯಾ. ಆ ಒಳಕೊಂಡ ಮಹತ್ವವೆ ಮಹದೊಡಗೂಡಿ ಹೋಯಿತ್ತು. ಹೋದ ಮತ್ತೆ ನಾ ನೀನೆಂಬುದಿಲ್ಲ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ, ಕುಲ ಕೆಡದಿಪ್ಪ ಈ ಪರಿಯ ನೋಡಾ ! ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ ಕುಲವುಳ್ಳವರೆಲ್ಲರೂ ಕೈವಿಡಿದರು. ಕುಲಗೆಟ್ಟವನೆಂದು ತಿಳಿದು ವಿಚಾರಿಸಲು, ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->