ಅಥವಾ

ಒಟ್ಟು 15 ಕಡೆಗಳಲ್ಲಿ , 12 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ ಹಂಸನ ಕಟ್ಟಬೇಕೆಂಬರು. ಈ ಹೊಟ್ಟೆಯ ಕೂಳ ಅಣ್ಣಗಳೆಲ್ಲರೂ ಕಟ್ಟಬಲ್ಲರೆ ನಿಜಹಂಸನ ? ಬೆಟ್ಟಬೆಟ್ಟವನೇರಿದ ಭೃಗು ದದ್ಥೀಚಿ ಅಗಸ್ತ್ಯ ಕಶ್ಯಪ ರೋಮಜ ಕೌಂಡಿಲ್ಯ ಚಿಪ್ಪಜ ಮುಂತಾದ ಸಪ್ತ ಋಷಿಗಳೆಲ್ಲರೊಳಗಾದ ಋಷಿಜನಂಗಳು, ಬೆಟ್ಟವನೇರಿ ಕಟ್ಟಿದುದಿಲ್ಲ. ಮತ್ತೆಯೂ ಬಟ್ಟೆಗೆ ಬಂದು ಮತ್ತರಾದರಲ್ಲದೆ, ಸುಚಿತ್ತವನರಿದುದಿಲ್ಲ. ವಿಷರುಹಕುಸುಮಜನ ಕಪಾಲವ ಹಿಡಿದಾತನ ಕೈಯಲ್ಲಿ ಗಸಣೆಗೊಳಗಾದರು. ಆತ್ಮನ ರಸಿಕವನರಿಯದೆ, ಈ ಹುಸಿಗರ ನೋಡಿ ದೆಸೆಯ ಹೊದ್ದೆನೆಂದೆ, ಪಶುಪತಿದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶ್ರೀಗುರುಲಿಂಗಜಂಗಮದ ಚರಣ ಸೋಂಕಿನಿಂ ಪವಿತ್ರವಾದ ಚಿದ್ಭಸಿತವ ಧರಿಸಿದವರಿಗೆ ಬಹುಜನ್ಮ ಪಾಪದೋಷವ ತೊಡವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಅಜ್ಞಾನದ ಪಾಶವ ಹರಿವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸಮಸ್ತ ಜನವಶ್ಯ ರಾಜವಶ್ಯವ ಕೊಡುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸದಾಚಾರ ಸದ್ಭಕ್ತಿಸಾರದುನ್ನತಿಯ ಬೆಳಗ ತೋರುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಜನನ-ಮರಣದ ಭಯವ ತೊಡವುದಯ್ಯ. ಶಿವನಿಂದ ಅಗಸ್ತ್ಯ, ಕಸ್ಯಪ, ಜಮದಗ್ನಿ, ಗೌತಮ, ವಶಿಷ್ಠ ಮೊದಲಾದ ಋಷಿ ಸಮೂಹಗಳೆಲ್ಲ ಶ್ರೀ ವಿಭೂತಿಯ ಪಡೆದು ಧರಿಸಿ, ಸದ್ಭಕ್ತಿಪಥವ ಸೇರಿದರಯ್ಯ. ನಮ್ಮ ಶರಣಗಣಂಗಳು ಆ ಶಿವನ ಚಿತ್ಕಾಂತಿಯ ಬಹಿಷ್ಕರಿಸಿ, ಶ್ರೀಗುರುಲಿಂಗಜಂಗಮದ ಚಿದ್ಬೆಳಗನೆ ಹೆಪ್ಪಹಾಕಿ, ಚಿದಾಂಡವೆಂಬ ಘಟ್ಟಿಯ ಮಾಡಿ, ನಿಷ್ಕಲ ನಿಶ್ಶೂನ್ಯಮೂರ್ತಿಯ ಚರಣಜಲವ ವೇದ್ಥಿಸಿ, ಮಹಾಮಂತ್ರವ ಸ್ಥಾಪಿಸಿ, ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ತತ್ವಸ್ಥಾನಂಗಳಲ್ಲಿ ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಶಾಂಭವಲೋಕದ ಶಾಂಭವಗಣಂಗಳು, ಮತ್ರ್ಯಲೋಕದ ಮಹಾಗಣಂಗಳೆಲ್ಲ ಧರಿಸಿ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಭಾಭೂತಿಯೆ ಸರ್ವಾಚಾರಸಂಪದಕ್ಕೆ ಮೋಕ್ಷದ ಕಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ವೇದೋತ್ತರ ಸಂಧಿ ಉಪಸನ್ನೆ ಸಂಜ್ಞೆ ಉತ್ತರ ಚಿಂತನೆ ಖಂಡನೆಗಳಲ್ಲಿ ಭೃಗು, ದಧೀಚಿ, ಕಾಶ್ಯಪ, ಸಾಂಖ್ಯ, ಅಗಸ್ತ್ಯ ಮೊದಲಾದ ಋಷಿವರ್ಗಂಗಳೆಲ್ಲರು ವೇದದ ಕಡೆ ಮೊದಲೆಂದು ಪಠಿಸಿ ವೇಧಿಸಿ ಆ ವೇದ ಚಿಂತನೆಗೆ ಸಂದುದಿಲ್ಲ. ಇಂತೀ ವೇದ ಮೊದಲು ಶಾಸ್ತ್ರ ಆಗಮ ಪುರಾಣಂಗಳಲ್ಲಿ ಸನ್ನಿಧಿ ಸಮನ ಗಮನ ಪರಿಪೂರ್ಣವಾದುದಿಲ್ಲ. ಒಂದು ವೇದ ನಾಮದ ಶಾಖೆವೊಂದಕ್ಕೆ ಉಪನಯನ ಭೇದ ಸಂಖ್ಯೆ ಶತಸಹಸ್ರ ಪುನರಪಿಯಾಗಿ ಬಪ್ಪಲ್ಲಿ ಒಂದು ಅಧ್ಯಾಯ ಸಂಬಂಧದಿಂದ. ಆ ಸಂಬಂಧ ಶಾಖೆ ಉಚಿತವಹಾಗ ವಿಷ್ಣುವಿಂಗೆ ಪರಮಾಯು, ಬ್ರಹ್ಮಂಗೆ ಉಪನಯನವಿಲ್ಲ ಋಷಿವರ್ಗಕ್ಕೆ ವೇದೋಪದೇಶವಿಲ್ಲ. ಇಂತೀ ಶಂಕೆಯ ಸಂಕಲ್ಪದಲ್ಲಿ ನೋಡಿ ಕಂಡೆಹೆನೆಂದಡೆ ಚಕ್ರದ ಅಂಗುಲದ ಬಳಸಿನ ಲೆಕ್ಕದಂತೆ ಇಂತೀ ವೇದದ ಹಾದಿಯಲ್ಲ, ಶಾಸ್ತ್ರದ ಸಂದೇಹವಲ್ಲ. ಆಗಮಂಗಳಲ್ಲಿ ಭೇದ ವಿಭೇದವ ಕಂಡು ತರ್ಕಂಗಳಲ್ಲಿ ಹೋರುವ ಕುತರ್ಕಿಯಲ್ಲ. ಇಂತಿವ ನೇತಿಗಳೆದ ಸರ್ವಾಂಗಲಿಂಗಸಂಬಂಧವಾದ ಶರಣನು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೇ ಅಂಗವಾದ ನಿರಂಗನು.
--------------
ಪ್ರಸಾದಿ ಭೋಗಣ್ಣ
ಶಿವಶಿವಾ, ಭಕ್ತಿಹೀನನ ಬಟ್ಟೆಯಲ್ಲಿ ಕಂಡು ನೆಟ್ಟನೆ ಶಿವಭಕ್ತ ಜೋಹಾರ ಎಂದಡೆ, ಸುರಾಪಾನದಲ್ಲಿ ಮಜ್ಜನಮಾಡಿದಂತಾಯಿತ್ತು ಅವನ ಶಿವಪೂಜೆ? ಕಟ್ಟಿದ ಕೆರೆಯನೊಡೆದಂತಾಯಿತ್ತು ಅವನ ಶಿವಪೂಜೆ. ಅಮೇಧ್ಯವ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ. ಹೇಲೊಳಗಣ ಹುಳವ ಕೋಳಿ ಕೆದರಿದಂತಾಯಿತ್ತು ಅವನ ಶಿವಪೂಜೆ. ಒಣಗಿದೆಲುವ ಸೊಣಗ ಕಡಿದು ತನ್ನ ರಕ್ತವ ತಾನೇ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ. ಅವನ ಸರ್ವಾಂಗವು ಪಾಕುಳದ ಕುಳಿಯಂತಾಯಿತ್ತು. ಕನ್ನಡಿಯ ಮೇಲೆ ಉದ್ದುರುಳಿದಂತಾಯಿತ್ತು ಅವನ ಶಿವಪೂಜೆ. ಅರೆಯ ಮೇಲೆ ಆಡು ಹಿಕ್ಕೆಯನಿಟ್ಟಂತಾಯಿತ್ತು ಅವನ ಶಿವಪೂಜೆ. ಲೋಳಸರದ ಮೇಲೆ ಬಂಡಿ ಹರಿದಂತಾಯಿತ್ತು ಅವನ ಶಿವಪೂಜೆ. ಅದೆಂತೆಂದಡೆ:ವಿಷ್ಣು ಪುರಾಣೇ, ಬ್ರಹ್ಮಬೀಜಂ ತೃಣಂ ನಾಸ್ತಿ ಕೇಶವಶ್ಚಾಧಿದೇವತಾ ಗುರುಭ್ರಷ್ಟಶ್ಚ ಚಾಂಡಾಲೋ ವಿಪ್ರಃ ಶ್ವಾನೋ ಹಿ ಜಾಯತೇ ವಿಪ್ರಸ್ಯ ದರ್ಶನಂ ಚೈವ ಪಾಪಪಂಜರಮೇವ ಚ ವಿಪ್ರಸ್ಯ ವಂದನಂ ಚೈವ ಕೋಟಿಜನ್ಮಸು ಸೂಕರಃ ಎಂದುದಾಗಿ ರೇಣುಕಾದೇವಿಯ ಮಗನೇ ಬ್ರಾಹ್ಮಣನು, ಮಾತಂಗಿಯ ಮಗನೇ ಹೊಲೆಯನು, ಇವರಿಬ್ಬರೂ ಜಮದಗ್ನಿಗೆ ಹುಟ್ಟಿದರಾಗಿ, ಇದಕ್ಕೆ ಸಾಕ್ಷಿ, ಭಾರದ್ವಾಜ ವಿಶ್ವಾಮಿತ್ರ ಅಗಸ್ತ್ಯ ನಾರದ ಕೌಂಡಿಲ್ಯ ಈಯೈವರು ಸಾಕ್ಷಿಯಲ್ಲಿ, ನಿಮ್ಮ ನಿಮ್ಮೊಳಗೆ ಸಂವಾದವು ಬೇಡೆಂದು ವಿಭಾಗವಂ ಮಾಡಿಕೊಟ್ಟ ವಿವರಮಂ ಕೇಳಿರಣ್ಣಾ ಗ್ರಾಮದೊಳಗಣ ಸೀಮೆಯ ಗೃಹವನೇ ಹೊಲೆಯರಿಗೆ ಕೊಟ್ಟರು, ಸತ್ತ ಹಸುವನೆಳೆದುಕೊಂಡು ಹೋಹವರನೇ ಹೊಲೆಯರ ಮಾಡಿದರು. ಜೀವದ ಹಸುವ ಹದಿನೆಂಟು ಜಾತಿಯ ಮಂಚದಡಿಯಲ್ಲಿ ನುಸಿದು ಗೋದಾನಮುಖದಲ್ಲಿ ಕೊಂಡು ಹೋಹರನೇ ಬ್ರಾಹ್ಮಣರ ಮಾಡಿದರು. ಇನ್ನು ನಿಮಗೂ ತಮಗೂ ಸೊಮ್ಮು ಸಂಬಂಧವಿಲ್ಲವೆಂದು ಕಂಡಾಗ ತೊಲಗುವಂತೆ ಸಂಬೋಳಿಯೆಂಬ ನಾಮಾಂಕಿತವಂ ಕೊಟ್ಟು ತೊರೆ ಪತ್ರಮಂ ಬರೆದರಾಗಿ. ಇದನರಿಯದಿದ್ದಡೆ ಇನ್ನೂ ಕೇಳಿರಣ್ಣ: ನಳಚಕ್ರವರ್ತಿರಾಯನು ಪಿಂಡ ಪಿತೃಕಾರ್ಯವ ಮಾಡುವಲ್ಲಿ, ಹೊನ್ನ ಗೋವಂ ತಂದು ಬಿನ್ನಾಣದಲ್ಲಿ ದಾನವ ಕೊಟ್ಟಲ್ಲಿ, ಹೊಲೆಯರು ನಾಡಕೂಟವ ಕೂಡಿ ಆ ಸ್ಥಲ ತಾರ್ಕಣೆಯಲ್ಲಿ ಪೂರ್ವಸಾಧನ ಸಂಬಂಧದಿಂದ ನ್ಯಾಯವನಾಡಿ ಇತ್ತಂಡವ ಹಂಚಿಕೊಂಡ ವಿವರವ ಕೇಳಿರಣ್ಣಾ: ಕೊಂಬುಕೊಳಗನೇ ತೆಗೆದು ಏಳುನೂರೆಪ್ಪತ್ತು ತೂಕ ಚಿನ್ನವ ಹಂಚಿಕೊಂಡು ಉಳಿದ ಕೊಂಬು ಕೊಳಗವ ವಿಪ್ರರು ಎತ್ತಿಕೊಂಡರಾಗಿ, ಈ ಹೊನ್ನಗೋವನಳಿದು ತಿಂಬ ಕುನ್ನಿಗಳ ಕಂಡು ಕೇಳಿಯೂ ಅರಿದು ಮರೆದೂ ಉತ್ತಮಕುಲದ್ವಿಜರೆಂದು ಅಲ್ಲಿ ಉಪದೇಶವಂ ಕೊಂಡು ನಮಸ್ಕರಿಸುವ ಅಜ್ಞಾನಿ ಹೊಲೆಯರ ನಾನೇನೆಂಬೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬಲ್ಲಿದ ಬಲ್ಲಿದರೆಂಬವರು ತಮ್ಮಿಂದ ತಾವಾದ ಸ್ವತಂತ್ರಶೀಲರೆ ? ಅಲ್ಲ. ಬ್ರಹ್ಮ ಬಲ್ಲಿದನೆಂದಡೆ, ಶಿರ ಹೋಗಲದೇನು ? ಹರಿ ಬಲ್ಲಿದನೆಂದಡೆ, ಹಲವು ಭವಕ್ಕೆ ಬರಲದೇನು ? ಅಂಧಕಾಸುವ ಬಲ್ಲಿದನೆಂದಡೆ ಹರನ ಅಂಗಾಲ ಕೆಳಗೆ ಇರಲೇನು ? ದಕ್ಷ ಬಲ್ಲಿದನೆಂದಡೆ, ಹೋಮಕ್ಕೆ ಗುರಿಯಾಗಲದೇನು ? ಕೋಪಾಗ್ನಿರುದ್ರನೆಂಬ ಜಮದಗ್ನಿ ಬಲ್ಲಿದನೆಂದಡೆ ಆತನ ತಲೆಯನರಿಯಲದೇನು ? ಪರಶುರಾಮ ಬಲ್ಲಿದನೆಂದಡೆ ತನ್ನ ಬಿಲ್ಲ ಬಿಟ್ಟು ಹೋಗಲದೇನು ? ಸಹಸ್ರಾರ್ಜುನ ಬಲ್ಲಿದನೆಂದಡೆ, ತೋಳು ತುಂಡಿಸಲದೇನು ? ಅಂಬುಧಿ ಬಲ್ಲಿತ್ತೆಂದಡೆ, ಅಪೋಶನಕ್ಕೊಳಗಾಗಲದೇನು ? ಅಗಸ್ತ್ಯ ಬಲ್ಲಿದನೆಂದಡೆ ಅರಣ್ಯದೊಳಗೆ ತಪವ ಮಾಡಲದೇನು ? ನಳರಾಜ ಬಲ್ಲಿದನೆಂದಡೆ ತನ್ನ ಸತಿಯನಿಟ್ಟು ಹೋಗಲದೇನು ? ಕೃಷ್ಣ ಬಲ್ಲಿದನೆಂದಡೆ, ಬೇಡನ ಅಂಬು ತಾಗಲದೇನು ? ರವಿ ಶಶಿಗಳು ಬಲ್ಲಿದರೆಂದಡೆ, ರಾಹುಕೇತು ಗ್ರಹಿಸಲದೇನು ? ಶ್ರೀರಾಮ ಬಲ್ಲಿದನೆಂದಡೆ, ತನ್ನ ಸತಿ ಕೋಳುಹೋಗಲದೇನು ? ಪಾಂಡವರು ಬಲ್ಲಿದರೆಂದಡೆ ತಮಗೆ ಹಳುವಟ್ಟು ಹೋಗಲದೇನು ? ಹರಿಶ್ಚಂದ್ರ ಬಲ್ಲಿದನೆಂದಡೆ, ಸ್ಮಶಾನವ ಕಾಯಲದೇನು ? ಹರನೆ ನೀ ಮಾಡಲಿಕೆ ರುದ್ರರು, ನೀ ಮಾಡಲಿಕೆ ದೇವರ್ಕಳು, ನೀ ಮಾಡಲಿಕೆ ಬಲ್ಲಿದರು, ನೀ ಮಾಡಲಿಕೆ ವೀರರು, ನೀ ಮಾಡಲಿಕೆ ಧೀರರು. ಅಮೂರ್ತಿ, ಮೂರ್ತಿ, ನಿರಾಕಾರ, ನಿರ್ಮಾಯ_ ಇಂತು ಬಲ್ಲಿದರೆಂಬವರ ಇನ್ನಾರುವ ಕಾಣೆ ನಿಮ್ಮ ತಪ್ಪಿಸಿ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶ್ರುತಿವಿಧಿಸಿದ ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಭವಭೀತಿ ಮೃತ್ಯುಭಯಕ್ಕಂಜಿ ಜಮದಗ್ನಿ ಅಗಸ್ತ್ಯ ಕಸ್ಯಪ ಮೊದಲಾದ ಎಲ್ಲಾ ಋಷಿಗಳು ಧರಿಸಿ ಕೊರಜರಾದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿಯೆಂದರಿದು ಎಲ್ಲಾ ದೇವರ್ಕಳು ಎಲ್ಲಾ ಶ್ರುತಿ ಸ್ಮøತಿಗಳು ಧರಿಸಿದವು ನೋಡಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂದರಿದು ಗಾಯತ್ರಿ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳು ಧರಿಸಿದರು ನೋಡಾ. ಶ್ರೀವಿಭೂತಿಯ ಪರಂಜ್ಯೋತಿ ನಿರುತವಿದು ನಂಬಿ ಧರಿಸಿ ಬದುಕು ಮನುಜಾ. ಶ್ರೀವಿಭೂತಿಯೆ ಪರಂಜ್ಯೋತಿಯೆಂಬುದು. ಇದಕ್ಕೆ ಜಾಬಾಲೋಪನಿಷತ್ : ``ಓಂ ಸ ಏಷ ಭಸ್ಮ ಜ್ಯೋತಿ ಸ್ಸಏಷ ಭಸ್ಮ ಜ್ಯೋತಿರಿತ'' ಇಂತೆಂದುದು ಶ್ರುತಿ. ಇದಕ್ಕೆ ಮಾನವಪುರಾಣೇ : ``ಭಸ್ಮ ಜ್ಯೋತಿರ್ಭವತ್ಯೇವ ಶಿವಾಖ್ಯಂ ನ ಹಿ ಸಂಶಯಃ | ಜಾಬಾಲೋಪನಿಷತ್ಸರ್ವಂ ಪ್ರಾಹೇದಂ ಪರಯಾ ಮುದಾ ||'' ಇಂತೆಂದುದಾಗಿ, ಇನ್ನು ವಿಭೂತಿ ಅಭಿಮಂತ್ರ ವಿಭೂತಿಧಾರಾ ಎಂಬುದಕ್ಕೆ ಕಾತ್ಯಾಯನ ಗೃಹ್ಯೇ, ಕಾತ್ಯಾಯನ ಸ್ಮೃತಿ, ಬೋಧಾಯನ ಸ್ಮೃತಿ, ಅಭಿಮಂತ್ರ ಶ್ರುತಿ : ``ಮಾನಸ್ತೋಕೇ ತನಯೇ ಮಾನ ಆಯುಷಿ ಮಾನೋ ಗೋಷು ಮಾನೋ ಅಶ್ವೇಷು ರೀರಿಷಃ | ವೀರಾನ್ಮಾನೋ ರುದ್ರ ಭಾಮಿತೋ ವಧೀರ್ಹವಿಷ್ಮಂತೋ ಶಮಿತ್ವಾ ಹವಾಮಹೇ ||'' ಇಂತೆಂದುದು ಶ್ರುತಿ. ಇನ್ನು ವಿಭೂತಿಧಾರಾ ಎಂಬುದಕ್ಕೆ ಶ್ರುತಿ: ``ಓಂ, ಕುಕ್ಷರುಷಿ ರುದ್ರೋ ದೇವತಾ ಜಗತೀ ಛಂದಃ | ಓಂ, ತ್ರಿಯಾಯುಷಂ ಜಮದಗ್ನೇಃ ಕಶ್ಯಪಸ್ಯ ತ್ರಿಯಾಯುಷಂ | ಅಗಸ್ತ್ಯಸ್ಯ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ | ಯದ್ದೇವಾನಾಂ ತ್ರಿಯಾಯುಷಂ ಶತಾಯುಷಂ ಕುರು ತ್ವಾನಿ || ಲಲಾಟ ಭುಜದ್ವಯಂ ನಾಭೇರುತ್ವಾರುಷಿ | ಬ್ರಹ್ಮಣ ರುಷಿ ವೈದಿಕಂ ಸದಾ || '' ಇಂತೆಂದುದು ಶ್ರುತಿ. ಇದಕ್ಕೆ ಬೋಧಾಯನ ಶ್ರುತಿ : ``ಮಾನಸ್ತೋಕೇತ್ಯಾದಿ ಮಂತ್ರೇಣ ಮಂತ್ರಿತಂ ಭಸ್ಮ ಧಾರಯೇತ್ | ಊಧ್ರ್ವಪುಂಡ್ರಂ ಭವೇತ್ ಸಾಮ ಮಧ್ಯಪುಂಡ್ರಂ ಯಜೂಂಷಿ ಚ | ಅಧಃ ಪುಂಡ್ರಮೃಚಃ ಸಾಕ್ಷಾತ್ ತಸ್ಮಾತ್ ಪುಂಡ್ರಂ ತ್ರಿಯಾಯುಷಂ ||'' ಇದಕ್ಕೆ ಲೈಂಗ್ಯ ಪುರಾಣೇ : ``ಅಕಾರೋನಾಮಿಕಂ ಪ್ರೋಕ್ತಂ ಉಕಾರೋ ಮಧ್ಯಮಾಂಗುಲಿಃ | ಮಕಾರೋ ತಜ್ರ್ಜನಿಸ್ಥಾನಂ ತ್ರಿಭಿಃ ಕುರ್ಯಾತ್ ತ್ರಿಪುಂಡ್ರಕಂ ||'' ಇಂತೆಂದುದಾಗಿ. ಇದಕ್ಕೆ ಕಾಲಾಗ್ನಿರುದ್ರೋಪನಿಷತ್ : ``ಹರಃ ಓಂ, ಅಥ ಕಾಲಾಗ್ನಿರುದ್ರಂ ಭಗವಂತಂ ಸನತ್ಕುಮಾರಃ ಅಪಪ್ರಚ್ಛಧೀಹಿ ಭಗವನ್ ತ್ರಿಪುಂಡ್ರವಿಧಿಂ ಸತತ್ವಂ ಕಿಂ ದ್ರವ್ಯಂ ಕ್ರಿಯತ್ ಸ್ಥಾನಂ ಕತಿ ಪ್ರಮಾಣಂ ಕಾ ರೇಖಾ ಕೇ ಮಂತ್ರಾಃ ಕಾ ಶಕ್ತಿಃ ಕಿಂ ದೈವತಂ ಕಃ ಕರ್ತಾ ಕಿಂ ಫಲಮಿತಿ ಚ || ತಂ ಹ್ಯೋವಾಚ ಭಗವಾನ್ ಕಾಲಾಗ್ನಿ ರುದ್ರಃ ಯದ್ದ್ರವ್ಯಂ ತದಾಗ್ನೇಯಂ ಭಸ್ಮ, ಸದ್ಯೋಜಾತಾದಿ ಪಂಚಬ್ರಹ್ಮ ಮಂತ್ರೈಃ ಪರಿಗೃಹ್ಯ ಅಗ್ನಿರಿತಿ ಭಸ್ಮೇತ್ಯನೇನ ಚಾಭಿಮಂತ್ರ್ಯ ಮಾನಸ್ತೋಕ ಇತಿ ಸಮುದ್ದøತ್ಯ, ಮಾನೊ ಮಹಾಂತಮಿತಿ ಜಲೇನ ಸಂಸೃಜ್ಯ, ತ್ರಿಯಾಯುಷಮಿತಿ ಶಿರೋ ಲಲಾಟವಕ್ಷ ಸ್ಕಂಧೇಷು ತ್ರಿಯಾಯುಷೈಸ್ತ್ರ್ಯಂಬಕೈಸ್ತ್ರಿಶಕ್ತಿಭಿಸ್ತಿರ್ಯಕ್ ತಿಸ್ರೋ ರೇಖಾಃ ಪ್ರಕುರ್ವೀತ ವ್ರತಮೇತಚ್ಛಾಂಭವಂ ಸರ್ವೇಷು ದೇವೇಷು ವೇದವೇದಾದಿಭಿರುಕ್ತಂ ಭವತಿ ತಸ್ಮಾತ್ತತ್ಸಮಾಚರೇನ್ಮುಮುಕ್ಷುರ್ನಪುನರ್ಭವಾಯ || ಅಥ ಸನತ್ಕುಮಾರಃ ಪಪ್ರಚ್ಛ ಪ್ರಮಾಣಮಸ್ಯ ತ್ರಿಪುಂಡ್ರಧಾರಣಸ್ಯ ತ್ರಿಧಾರೇಖಾಭವತ್ಯಾಲಲಾಟಾದಾಚಕ್ಷುಷೋರಾಮೂಧ್ರ್ನೋರಾಭ್ರುವೋರ್ಮ- ಧ್ಯತಶ್ಚ ಪ್ರಥಮಾ ರೇಖಾ ಸಾ ಗಾರ್ಹಪತ್ಯಶ್ಚಾಕಾರೋ ರಜೋ ಭೂರ್ಲೋಕಃ ಸ್ವಾತ್ಮಾ ಕ್ರಿಯಾಶಕ್ತಿಃ ಋಗ್ವೇದಃ ಪ್ರಾತಃ ಸವನಂ ಮಹೇಶ್ವರೋ ದೇವತೇತಿ || ಯಾsಸ್ಯ ದ್ವಿತೀಯಾ ರೇಖಾ ಸಾ ದಕ್ಷಿಣಾಗ್ನಿರುಕಾರಃ ಸ್ವತ್ವ ಮಂತ್ರರಿಕ್ಷಮಂತರಾತ್ಮಾ ಚೇಚ್ಛಾಶಕ್ತಿಃ ಯಜುರ್ವೇದೋ ಮಾಧ್ಯಂ ದಿನಂ ಸವನಂ ಸದಾಶಿವೋ ದೇವತೇತಿ || ಯಾsಸ್ಯ ತೃತೀಯಾ ರೇಖಾ ಸಾsಹವನೀಯೋ ಮಕಾರಸ್ತಮೋ - ದ್ಯೌರ್ಲೋಕಃ ಪರಮಾತ್ಮಾ ಜ್ಞಾನಶಕ್ತಿಃ ಸಾಮವೇದಸ್ತøತೀಯಂ ಸವನಂ ಮಹಾದೇವೋ ದೇವತೇತಿ || ಏವಂ ತ್ರಿಪುಂಡ್ರವಿಧಿಂ ಭಸ್ಮನಾ ಕರೋತಿ ಯೋ ವಿದ್ವಾನ್ ಬ್ರಹ್ಮಚಾರೀ ಗೃಹೀ ವಾನಪ್ರಸ್ಥೋ ಯತಿರ್ವಾ ಸಃ ಸಮಸ್ತ ಮಹಾಪಾತಕೋ - ಪಪಾತಕೇಭ್ಯಃ ಪೂತೋ ಭವತಿ, ಸ ಸರ್ವೇಷು ತೀರ್ಥೇಷು ಸ್ನಾತೋ ಭವತಿ, ಸ ಸರ್ವಾನ್ ಜ್ಞಾತೋ ಭವತಿ, ಸ ಸರ್ವಾನ್ ವೇದಾನಧೀತೋ ಭವತಿ, ಸ ಸತತಂ ಸಕಲರುದ್ರಮಂತ್ರಜಾಪೀ ಭವತಿ, ಸ ಸಕಲಭೋಗಾನ್‍ಭುಂಕ್ತೆ ದೇಹಂತ್ಯಕ್ತ್ವ ಶಿವಸಾಯುಜ್ಯಮೇತಿ ನ ಸ ಪುನರಾವರ್ತತೇನ ಸ ಪುನರಾವರ್ತತ ಇತ್ಯಾಹ ಭಗವಾನ್ ಕಾಲಾಗ್ನಿರುದ್ರಃ ||'' ಇಂತೆಂದುದಾಗಿ, ಇದಕ್ಕೆ ಭೀಮತಂತ್ರಾಗಮೇ : ``ಸರ್ವತೀರ್ಥೇಷು ಯತ್‍ಪುಣ್ಯಂ ಸರ್ವಯಜ್ಞೇಷು ಯತ್‍ಫಲಂ| ತತ್‍ಫಲಂ ಕೋಟಿಗುಣಿತಂ ಭಸ್ಮಸ್ನಾನಾನ್ನಸಂಶಯಃ||'' ಇಂತೆಂದುದಾಗಿ, ಇದಕ್ಕೆ ಭವಿಷ್ಯೋತ್ತರಪುರಾಣೇ : ``ಶಿವಾಗ್ನಿಕಾರ್ಯಂ ಯಃ ಕೃತ್ವಾ ಕುರ್ಯಾತ್ರಿಯಾಯುಷಂ | ಆತ್ಮವಿತ್ ವಿಶುದ್ಧ ಃ ಸರ್ವಪಾಪೈಶ್ಚ ಸಿತೇನ ಭಸ್ಮನಾ || '' ಇಂತೆಂದುದಾಗಿ, ಇದಕ್ಕೆ ಪರಾಶರಪುರಾಣೇ : ``ಕ್ರಿಯಾಯುಷ್ಯಾಣಿ ಕುರುತೇ ಲಲಾಟೇಚ ಭುಜದ್ವಯೇ | ನಾಶಿಕಾಂತೇ ಚ ಧೃತ್ವಾರ್ಷೇ | '' (?) ಇದಕ್ಕೆ ಬ್ರಹ್ಮಪುರಾಣೇ : ``ಶ್ರಾದ್ಧೇ ಯಜ್ಞೇ ಜಪೇ ಹೋಮೇ ವೈಶ್ವದೇವೇ ಸುರಾರ್ಚನೇ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವ ಃ || '' ಇಂತೆಂದುದಾಗಿ, ಇದಕ್ಕೆ ಆದಿತ್ಯಪುರಾಣೇ : ``ಸರ್ವಾಶ್ರಮಾಣಾಂ ವರ್ಣಾನಾಂ ಭಸ್ಮ ರುದ್ರಾಕ್ಷ ಧಾರಣಂ | ಕರ್ತವ್ಯಂ ಮಂತ್ರತಶ್ಚೋಕ್ತಂ ದ್ವಿಜಾನಾಂ ನಾತ್ರ ಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ ಃ ``ವಿಪ್ರಾದೀನಾಂಚ ಸರ್ವೇಷಾಂ ಲಲಾಟಂ ಭಸ್ಮಶೂನ್ಯಕಂ | ಭಿಕ್ಷಾ ಚ ಜಪಹೋಮಂ ಚಾರ್ಪಣಂ ನಿಷ್ಫಲಂ ಭವೇತ್ || '' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಸಿತೇನ ಭಸ್ಮನಾ ಕಾರ್ಯಂ ತ್ರಿಸಂಧ್ಯಾಂ ತ್ರಿಪುಂಡ್ರಕಂ | ಸರ್ವಪಾಪವಿನಿರ್ಮುಕ ್ತಃ ಶಿವಸಾಯುಜ್ಯಮಾಪ್ನುಯಾತ್ || '' ಇಂತೆಂದುದಾಗಿ, ಇದಕ್ಕೆ ಲೋಕಾಕ್ಷಿ ಸ್ಮೃತಿ : ``ಮಧ್ಯಮಾನಾಮಿಕಾಂಗುಷೆ*ೀ ತ್ರಿಪುಂಡ್ರಂ ಭಸ್ಮನಾ ಧೃತಂ | ತತ್ತ್ರಿಪುಂಡ್ರಂ ಭವೇತ್ಪುಣ್ಯಂ ಮಹಾಪಾತಕನಾಶಕಂ ''|| ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ನೃಪಾಣಾವಿೂೀಶ್ವರಾಣಾಂ ಚ ಭಸ್ಮೀ ತ್ರೇಣ ಚ ಚಂದನಂ | ತ್ರಿಪುಂಡ್ರಂ ವಿಧಿವತ್ಕುರ್ಯಾತ್ ಸುಗಂಧೇನಾಪಿ ವಾಗುಹಾಂ || ಭಸ್ಮನಾಯೈ ತ್ರಿಸಂಧ್ಯಾಂ ಚ ಗೃಹಸ್ಥೋ ಜಲಸಂಯುತಂ | ಸರ್ವಕಾಲೇ ಭವೇತ್ ಸ್ತ್ರೀಣಾಂ ಯತಿನಾಂ ಜಲವರ್ಜಿತಂ || ವಾನಪ್ರಸ್ಥೇಷು ಕಾಂಸ್ಯಾನಾಂ ದೀಕ್ಷಾಹೀನಂ ಮೃಣಂ ತಥಾ | ಮಧ್ಯಾಹ್ನೇ ಪ್ರಾಕ್‍ಜಲಯುಕ್ತಂ ಪರಾಕ್ ಜಲವಿವರ್ಜಿತಂ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶುದ್ಧ ತಾ ಜಲೇನೈೀವ ಭಸ್ಮಸ್ಯಾತ್ ತ್ರಿಪುಂಡ್ರಕಂ | ಯೋ ಧಾರಯೇತ್ ಪರಬ್ರಹ್ಮ ಸಂಪ್ರಾಪ್ನೋತಿ ನ ಸಂಶಯಃ|| ಮಧ್ಯಮಾನಾಮಿಕಾಂಗುಷೆ* ೈರನುಲೋಮವಿಲೋಮತಃ ||'' ಧಾರಯದ್ಯಗ್ನಿ ತ್ರಿಪುಂಡ್ರಾಂತಂ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುಗಾಗಿ, ಇದಕ್ಕೆ ಕ್ರಿಯಾಸಾರೇ : ``ಮಧ್ಯಾಂಗುಲಿ ತ್ರಯೇಣೈವ ಸ್ವದಕ್ಷಿಣ ಕರಸ್ಯ ತು | ಷಡಂಗುಲಾಯತಂ ಮಾನಮಪಿವಾsಲಿಕಮಾನನಂ || ಷಡಂಗುಲಪ್ರಮಾಣೇನ ಬ್ರಾಹ್ಮಣಾನಾಂ ತ್ರಿಪುಂಡ್ರಕಂ | ನೃಪಾನಾಂ ಚತುರಂಗುಲ್ಯಂ ವೈಶ್ಯಾನಾಂ ಚ ದ್ವಿರಂಗುಲಂ | ಶೂದ್ರಾಣಾಂ ಚ ಸರ್ವೇಷಾಂ ಏಕಾಂಗುಲಾ ತ್ರಿಪುಂಡ್ರಕಂ ||'' ಇಂತೆಂದುಗಾಗಿ, ಇದಕ್ಕೆ ಭೀಮಸಂಹಿತಾಯಾಂ : ``ಮೂಧ್ರ್ನಾ ಲಲಾಟಕಂ ದ್ಯೌಶ್ಚ ಶ್ರೋತ್ರೇ ಬಾಹೂ ತಥೈೀವ ಚ | ಹೃದಯಂ ನಾಭಿಪೃಷೌ* ಚ ಹಸ್ತೋ ವೈ ಸಂಧಯಃ ಕ್ರಮಾತ್ || ಮೂಧ್ರ್ನಿಃ ಸ್ಯಾತ್ ಬ್ರಹ್ಮಣ ಪ್ರೀತಿಃ ಲಲಾಟೇ ಚ ಸರಸ್ವತೀ | ಕಂಠೋ ಲಕ್ಷ್ಮ್ಯಾ ಭವೇತ್ ಪ್ರೀತಿಃ ಸ್ಕಂದೇ ಪೀಣಾತಿ ಪಾರ್ವತಿ || ಇಂದ್ರ ಪ್ರೀತಿ ಕರಂ ಬಾಹೋ ಹೃದಯಂ ಚ ಶರಪ್ರಿಯಂ | ಅನೇನ ವಿಧಿನಾ ಚೈವ ವಿಭೂತಿಂ ಧಾರಯೇತ್ ಸುಧೀಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ತ್ರಿಪುಂಡ್ರಂ ಬ್ರಹ್ಮಣೋ ವಿದ್ವಾನ್ ಮನಸಾsಪಿ ನ ಲಂಘಯೇತ್ | ಶ್ರುತ್ವಾ ವಿಧೀಯತೇ ಯಸ್ಮಾತ್ ತತ್ಯಾನಿ ಪತಿತೋ ಭವೇತ್ ||'' ಇಂತೆಂದುದಾಗಿ, ಇದಕ್ಕೆ ಮತ್ಸ್ಯಪುರಾಣೇ : ``ನ ಚ ಶೌಚಂ ತಪೋ ಯಜ್ಞಂ ತೀರ್ಥಂ ದೇವಾಗ್ನಿಪೂಜನಂ | ಅಶ್ವಮೇಧಮಿದಂ ವ್ಯರ್ಥಂ ತ್ರಿಪುಂಡ್ರೋ ಯೋ ನ ಧಾರಯೇತ್ ||'' ಇಂತೆಂದುದಾಗಿ, ಇದಕ್ಕೆ ಬ್ರಹ್ಮಾಂಡಪುರಾಣೇ : ``ವಿಪ್ರಾಣಾಂ ವೇದವಿದುಷಾಂ ವೇದಾಂತಜ್ಞೇನ ವೇದಿನಾಂ | ಸಿತೇನ ಭಸ್ಮನಾ ಕಾರ್ಯಂ ತ್ರಿಪುಂಡ್ರಮಿತಿ ಪದ್ಮಭೂಃ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಸರ್ವೇ ತಪಸ್ವಿನಃ ಪ್ರೋಕ್ತಾಃ ಸರ್ವೇ ಯಜ್ಞೇಷು ಭಾಗಿನಃ | ರುದ್ರಭಕ್ತಾ ಸ್ಮøತಾಸ್ಸರ್ವೇ ತ್ರಿಪುಂಡ್ರಾಂಕಿತಮಸ್ತಕಾಃ ||'' ಇಂತೆಂದುದಾಗಿ, ಇದಕ್ಕೆ ಕ್ರಿಯಾಸಾರೇ : ``ಶಿರೋ ಲಲಾಟೇ ಶ್ರವಣೋದ್ವಯಾಗ್ನಿರ್ವಾಭುಜದ್ವಯಂ | ವಕ್ಷೋ ನಾಭಿಃ ಪೃಷ*ಭಾಗೇ | ಕಕುದಿತ್ಯೇಕದೋದಶ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಮೂಧ್ನೇ ಲಾಲಟೇ ಕರ್ಣೇ ಚ ಚಕ್ಷುಷೇ ಮಸ್ತಕಸ್ತಥಾ | ಅನ್ಯ ಬಾಹು ಭುಜದ್ವಂದ್ವಂ ಸ್ಥಾನಾವಪ್ಯುದರಂ ತಥಾ || ಮಣಿಬಂಧೇಷು ಧೃತ್ವಾ ಪಾಶ್ರ್ವೇ ನಾಭಿಮೇಢ್ರಂ ಚ ಪೃಷ್ಟಕಂ | ಊರೂ ಚ ಚಾಮಕಾಶ್ಚ ೈವ ಸಂಷ್ಟಪಿ ಯಥಾಕ್ರಮಂ || ವಿಧಿವತ್‍ಭಸ್ಮಸ್ನಾನಂ ಧಾರಣಂ ಮೋಕ್ಷಕಾರಣಂ || '' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಶಿರೋ ಫಾಲಃ ಕರ್ಣಕಂ ತೌಚ ಬಾಹೂ ಚ ಮಣಿಬಂಧಕೇ | ಹೃದಯಂ ಚ ಪರಂ ಚೈವ ನಾಭಿ ಭುಜದ್ವಯಂ ತಥಾ || ಓಷಾ*ವಪಿ ಚ ವಿಜ್ಞೇಯೋ ಷೋಡಶಃ ಸಂಧಯಃ ಸ್ಮøತಾಃ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಲಲಾಟಾಂಘ್ರಿವಾಂ ಭುಜಾತ್ ಹೃದಯಂ ನಾಭಿರೇವ ಚ | ಅಪರೇ ಸಂಧಯೋ ಜ್ಞೇಯಾ ಅಷ್ಟಸ್ಥಾನಂ ಚ ಭೂಷಣಂ || ಭಸ್ಮಸ್ನಾನಂ ನರೋ ತೀರ್ಥಂ ಗಂಗಾಸ್ನಾನಂ ದಿನೇ ದಿನೇ | ಭಸ್ಮರೂಪಂ ಶಿವಂ ಸಾಕ್ಷಾದ್ಭಸ್ಮ ತ್ರೈಲೋಕ್ಯಸಾಧನಂ || '' ಇಂತೆಂದುದಾಗಿ, ಇದಕ್ಕೆ ಯಜುರ್ವೇದ : ``ಓಂ ಭಾಗದ್ವಯೇವಾಯೇವಂ ಪ್ರಣಯೇತಿ ಬ್ರಾಹ್ಮಣಃ | ಆ ಋಷಯಃ ಉದ್ಧರೇವ ಬ್ರಾಹ್ಮಣೋ ವೈ ಸರ್ವದೇವತಾಃ | ಸರ್ವಾದಿ ದೇವೈಃ ಆನಂದೇವತಾಭಿರುದ್ಧತಿ || '' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಜಲಸ್ನಾನಂ ತಪಃ ಪುಣ್ಯಂ ಮಂತ್ರಸ್ನಾನಂ ಕುಲಕ್ಷಯಃ| ವಿಭೂತಿರೇಣುಮಾತ್ರೇಣ ತತ್ಫಲಂ ಶ್ರುಣು ಪಾರ್ವತಿ || '' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಶ್ರೀಮತ್ ತ್ರಿಪುಂಡ್ರಮಹಾತ್ಮ್ಯಂ ಯಃ ಪಠೇತ್ ಸತತಂ ನರಃ | ಈಹೇಷ್ಟಾನ್ ಸಕಲಾನ್ ಪ್ರಾಪ್ಯ ಗಚ್ಛಂತಿ ಪರಮಂ ಪದಂ ||'' ಇಂತೆಂದುದಾಗಿ, ಇದನರಿದು ಶ್ರೀ ವಿಭೂತಿಯ ಧರಿಸದ ಕರ್ಮಿಯ ಎನಗೊಮ್ಮೆ ತೋರದಿರಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪ ಕಮ್ಮಾರ, ರೋಮಜ ಕಂಚುಗಾರ, ಕೌಂಡಿಲ್ಯ ನಾವಿದನೆಂಬುದನರಿದು, ಮತ್ತೆ ಕುಲವುಂಟೆಂದು ಛಲಕ್ಕೆ ಹೋರಲೇತಕ್ಕೆ ? ಇಂತೀ ಸಪ್ತಋಷಿಯರುಗಳೆಲ್ಲರೂ ಸತ್ಯದಿಂದ ಮುಕ್ತರಾದುದನರಿಯದೆ, ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು ಹೋರುವ ಹೊತ್ತುಹೋಕರ ಮಾತೇತಕ್ಕೆ ? ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ.
--------------
ವೀರ ಗೊಲ್ಲಾಳ/ಕಾಟಕೋಟ
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು. ಕುಲವನರಸದಿರಿಂ ಭೋ ! ಕುಲದಿಂದ ಮುನ್ನೇನಾದಿರಿಂ ಭೋ ! ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, Põ್ಞಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ ! ನಮ್ಮ ಕೂಡಲಸಂಗನ ವಚನವಿಂತೆಂದುದು ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ !
--------------
ಬಸವಣ್ಣ
ಆದಿ ಅನಾದಿಯೆಂಬ (ಯೆಂಬುದ?) ಅಂತರಾತ್ಮನಲ್ಲಿ ತಿಳಿಯಲರಿಯದೆ ಆದಿ ದೈವವೆಂದು ಬರಿಯ ಬಹಿರಂಗದ ಬಳಕೆಯನೆ ಬಳಸಿ, ಅನ್ಯ ದೈವಂಗಳನಾರಾಧಿಸಿ ಕೆಡುತ್ತಿಪ್ಪರು ನೋಡಾ. ಅದಕೆ ತಪ್ಪೇನು, ಮಕ್ಕಳಿಗೆ ತಮ್ಮ ಮಾತೆಯೇ ದೈವ. ಮಾತೆಗೆ ತನ್ನ ಪುರುಷನೆ ದೈವ, ಪುರುಷಂಗೆ ತನ್ನ ಪ್ರಭುವೆ ದೈವ. ಪ್ರಭುವಿಗೆ ತನ್ನ ಪ್ರಧಾನನೆ ದೈವ, ಪ್ರಧಾನಂಗೆ ತನ್ನ ರಾಯನೆ ದೈವ. ರಾಯಂಗೆ ತನ್ನ ಲಕ್ಷ್ಮಿಯೆ ದೈವ, ಲಕ್ಷ್ಮಿಗೆ ತನ್ನ ವಿಷ್ಣುವೆ ದೈವ. ವಿಷ್ಣುವಿಗೆ ತನ್ನ ರುದ್ರನೆ ದೈವ, ಆ ರುದ್ರಂಗೆ ತನ್ನ ಈಶ್ವರನೆ ದೈವ. ಈಶ್ವರಂಗೆ ತನ್ನ ಸದಾಶಿವನೆ ದೈವ, ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ. ಸರ್ವಗತ ಶಿವನಿಗೆ ಆಕಾಶಮಹಿಪತಿಯೆಂಬ ಮಹಾಲಿಂಗಕ್ಕೆ ಆದಿ ದೇವರುಳ್ಳಡೆ ಹೇಳಿರೆ, ಇಲ್ಲದಿರ್ದಡೆ ಸುಮ್ಮನೆ ಇರಿರೆ. ಇದು ಕಾರಣ ಷಡುದರುಶನದ ಚರಾಚರಾದಿಗಳೆಲ್ಲರೂ ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ ವರವುಳ್ಳ ದೇವರೆಂದು ಬೆರವುತ್ತಿಹರು. ಅದಕ್ಕೆ ತಪ್ಪೇನು ಅವರಿಗಪ್ಪಂಥ, ವರವೀವುದಕ್ಕೆ ಸತ್ಯವುಳ್ಳವನಹುದು. ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು. ಅವರ ಕೈಯಲ್ಲಿ ಆರಾಧಿಸಿಕೊಂಬ ದೈವಂಗಳೆಲ್ಲವು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ, ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂ ತೊಟ್ಟು ಜಪತಪ ಹೋಮ ನೇಮಂಗಳ ಮಾಡಿ ಮಾರಣ ಮೋಹನ ಸ್ತಂಭನ ಉಚ್ಚಾಟನ ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ ದೂರ ಶ್ರವಣ, ಕಮಲದರ್ಶನ, ತ್ರಿಕಾಲಜ್ಞಾನ, ಪರಕಾಯಪ್ರವೇಶವೆಂಬ ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡೆದು ತಮ್ಮ ಬೇಡಿದವರಿಗೆ ಕೊಟ್ಟು ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ, ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹರು. ಕಿರಿದುದಿನ ಅವರ ದೇವರೆನ್ನಬಹುದೆ ? ದೇಹಕೇಡಿಗಳ ಸತ್ಯರೆಂದೆನಬಹುದೆ ? ಅಸತ್ಯದಲ್ಲಿ ಅಳಿದವರ ಭಕ್ತರೆಂದೆನಬಹುದೆ ? ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ ? ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ. ಅದೆಂತೆಂದಡೆ: ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ ಲಿಂಗ ಶರಣರ ಒಂದು ನಿಮಿಷಕ್ಕೆ ಒಬ್ಬ ಸರ್ವಗತನಳಿವ ಲಿಂಗ ಶರಣರಿಗೆ ಅಳಿವುಳ್ಳಡೆ ಹೇಳಿರೆ ? ಇಲ್ಲದಿರ್ದಡೆ ಸುಮ್ಮನಿರಿರೆ. ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು. ಅದು ಹೇಗೆಂದಡೆ: ಬ್ರಹ್ಮವೇದದಲ್ಲರಸುವನು. ವಿಷ್ಣು ಪೂಜೆಯಲ್ಲರಸುವನು. ರುದ್ರ ಜಪದಲ್ಲರಸುವನು. ಈಶ್ವರ ನಿತ್ಯನೇಮದಲ್ಲರಸುವನು. ಸದಾಶಿವನು ನಿತ್ಯ ಉಪಚಾರದಲ್ಲರಸುವನು. ಸರ್ವಗತ ಶೂನ್ಯದಲ್ಲರಸುವನು. ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು. ಚಂದ್ರ ಸೂರ್ಯರು ಹರಿದರಸುವರು. ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ' ಎಂಬ ಮಂತ್ರದಲ್ಲರಸುವರು. ಸತ್ಯಋಷಿ ದಧೀಚಿ ಗೌತಮ ವಶಿಷ* ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ ತಪ, ಯೋಗ, ಆಗಮಂಗಳಲ್ಲಿ ಅರಸುವರು. ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು, ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ. ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು. ಮತ್ತಾ ಕಣ್ಣ ತೆರೆದು ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ. ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು ನಿಶ್ಚಿಂತ ನಿರಾಳನು
--------------
ಅಲ್ಲಮಪ್ರಭುದೇವರು
ಪರಮೇಶ್ವರನ ಪರಮೈಶ್ವರ್ಯವೆನಿಪ, ನಿತ್ಯ ನಿಜವಾದ ವಿಭೂತಿಯನು, ಭಕ್ತಿಯಿಂದೊಲಿದು ಧರಿಸಲು, ನಿತ್ಯರಪ್ಪರು ನೋಡಿರೇ. ಮುನ್ನ ಜಮದಗ್ನಿ ಕಶ್ಯಪ ಅಗಸ್ತ್ಯ ಮೊದಲಾದ ಋಷಿಗಳು, ಸಮಸ್ತ ದೇವತೆಗಳು, ಮೂರು ಮೂರು ಬಾರಿ, ಆಯುಷ್ಯವ ಪಡದೆರೆಂದು ವೇದಗಳು ಸಾರುತ್ತಿವೆ. `ತ್ರಿಯಾಯುಷಂ ಜಮದಗ್ನೇ:ಕಶ್ಯಪಸ್ಯ ತ್ರಿಯಾಯುಷಂ ಅಗಹಸ್ತ್ಯಸ್ಯ ತ್ರಿಯಾಯುಷಂ ಯುದ್ದೇವಾನಾಂ ತ್ರಿಯಾಯುಷಂ ತನ್ಮೇ ಅಸ್ತು ತ್ರಿಯಾಯುಷಂ' ಎಂದುವು ಶ್ರುತಿಗಳು. ಇದನರಿದು ಧರಿಸಿರೇ, ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಬಲ್ಲಡೆ.
--------------
ಸ್ವತಂತ್ರ ಸಿದ್ಧಲಿಂಗ
ಸಂಕಲ್ಪ ವಿಕಲ್ಪವೆಂಬ ಉದಯಾಸ್ತಮಾನಗಳಿಗೆ ದೂರವಾದ ಶಿವಶರಣರ ಅಕುಲಜರೆಂದು ಗಳಹುತಿಪ್ಪರು ನೋಡಾ ಈ ಮರುಳ ವಿಪ್ರರು ತಾವು ಮಾತಂಗಿಯ ಗರ್ಭಸಂಭವ ಜೇಷ*ಪುತ್ರರೆಂಬುದನರಿಯದೆ. ನಮ್ಮ ಶಿವಭಕ್ತರು ಅಂತಹ ಕುಲ ಇಂತಹ ಕುಲದವರೆಂದು ನಿಂದಿಸಿ ನುಡಿವ ವಿಪ್ರಹೊಲೆಯರು ನೀವು ಕೇಳಿ ಭೋ ಅದೆಂತೆಂದಡೆ_ ಸ್ತ್ರೀವಾದಪುರುಷಃ ಷಂಡಶ್ಚಂಡಾಲೋ ದ್ವಿಜವಂಶಜಃ ನಜಾತಿಭೇದೋ ಲಿಂಗಾರ್ಚೇ ರುದ್ರಗಣಾಃ ಸ್ಮೃತಾಃ ಇಂತೆಂಬ ಪುರಾಣವಾಕ್ಯವನರಿದು ನಮ್ಮ ಶಿವಭಕ್ತನು ಹೊಲೆಯ ಮಾದಿಗ ಕಬ್ಬಿಲ ಕಮ್ಮಾರ ಕಂಚುಗಾರ ಅಕ್ಕಸಾಲೆ ಕುಂಬಾರ ಅಗಸ ನಾವಿಂದ ಜೇಡ ಬೇಡನೆಂದು ನುಡಿಯುತಿಪ್ಪರು. ನಿಮ್ಮ ಉತ್ತಮ ಸತ್ಕುಲಂಗಳ ನಾವು ಎತ್ತಿ ನುಡಿಯಬಹುದೇ ಮಾರ್ಕಂಡೇಯ ಮಾದಿಗನೆಂದು ಸಾಂಖ್ಯ ಶ್ವಪಚನೆಂದು ಕಾಶ್ಯಪ ಕಮ್ಮಾರನೆಂದು ರೋಮಜ ಕಂಚುಗಾರನೆಂದು ಅಗಸ್ತ್ಯ ಕಬ್ಬಿಲನೆಂದು ನಾರದ ಅಗಸನೆಂದು ವ್ಯಾಸ ಬೇಡನೆಂದು ವಶಿಷ* ಡೊಂಬನೆಂದು ದುರ್ವಾಸ ಮಚ್ಚಿಗನೆಂದು ಕೌಂಡಿಲ್ಯ ನಾವಿಂದನೆಂದು ಅದೆಂತೆಂದಡೆ ವಾಸಿಷ*ದಲ್ಲಿ_ ವಾಲ್ಮಿಕೀ ಚ ವಶಿಷ*ಶ್ಚ ಗಾಗ್ರ್ಯಮಾಂಡವ್ಯಗೌತಮಾಃ ಪೂರ್ವಾಶ್ರಯೇ ಕನಿಷಾ*ಸ್ಯುರ್ದೀಕ್ಷಯಾ ಸ್ವರ್ಗಗಾಮಿನಃ ಎಂದುದಾಗಿ ಇದನರಿದು ಮರೆದಿರಿ ನಿಮ್ಮ ಕುಲವನು ಇನ್ನು ನಿಮ್ಮ ಕುಲದಲ್ಲಿ ಹಿರಿಯರುಳ್ಳರೆ ನೀವು ಹೇಳಿ ಭೋ ನಿಮ್ಮ ಗೋತ್ರವ ನೋಡಿ ನಿಮ್ಮ ಹಮ್ಮು ಬಿಡಿ ಭೋ ಎಮ್ಮ ಸದ್ಭಕ್ತರೇ ಕುಲಜರು. ಇದ ನಂಬಿದಿರ್ದಡೆ ಓದಿ ನೋಡಿರಣ್ಣಾ ನಿಮ್ಮ ವೇದವರ್ಗಂಗಳೊಳಗೆ ಅದೆಂತೆಂದಡೆ ಅಥರ್ವವೇದದಲ್ಲಿ_ ಮಾತಂಗೀ ರೇಣುಕಾ ಗರ್ಭಸಂಭವಾತ್ ಇತಿ ಕಾರುಣ್ಯಂ ಮೇಧಾವೀ ರುದ್ರಾಕ್ಷಿಣಾ ಲಿಂಗಧಾರಣಸ್ಯ ಪ್ರಸಾದಂ ಸ್ವೀಕುರ್ವನ್ ಋಷೀಣಾಂ ವರ್ಣಶ್ರೇಷೊ*ೀs ಘೋರ ಋಷಿಃ ಸಂಕರ್ಷಣಾತ್ ಇತ್ಯಾದಿ ವೇದ ವಚನ ಶ್ರುತಿಮಾರ್ಗೇಷು ಎಂದುದಾಗಿ ಮತ್ತಂ ವಾಯವೀಯಸಂಹಿತಾಯಾವಮ್_ ಬಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋsಪಿ ವಾ ಭಸ್ಮ ರುದ್ರಾಕ್ಷಕಕಂಠೂೀ ವಾ ದೇಹಾಂತೇ ಸ ಶಿವಂ ವ್ರಜೇತ್ ಎಂದುದಾಗಿ ಮತ್ತಂ ಶಿವರಹಸ್ಯದಲ್ಲಿ_ ಗ್ರಾಮೇಣ ಮಲಿನಂ ತೋಯಂ ಯಥಾ ಸಾಗರಸಂಗತವರಿï ಶಿವಸಂಸ್ಕಾರಸಂಪನ್ನೆ ಜಾತಿಭೇದಂ ನ ಕಾರಯೇತ್ ಎಂದುದಾಗಿ ಇವರೆಲ್ಲರ ವರ್ಣಂಗಳು ಲಿಂಗಧಾರಣೆಯಿಂದ ಮರೆಸಿಹೋದವು ಕೇಳಿರಣ್ಣಾ. ಇಂತಪ್ಪ ಋಷಿ ಜನಂಗಳೆಲ್ಲ ಶ್ರೀಗುರುವಿನ ಕಾರುಣ್ಯವಂ ಪಡೆದು ವಿಭೂತಿ ರುದ್ರಾಕ್ಷಿಯಂ ಧರಿಸಿ ಶಿವಲಿಂಗಾರ್ಚನೆಯಂ ಮಾಡಿ ಪಾದತೀರ್ಥ ಪ್ರಸಾದವಂ ಕೊಂಡು ಉತ್ತಮ ವರ್ಣಶ್ರೇಷ*ರಾದರು ಕಾಣಿರೇ ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನ ಅರಿದು ಪೂಜಿಸುವಾತನೇ ಉತ್ತಮ ಸದ್ಭಕ್ತ ಬ್ರಾಹ್ಮಣನು. ಅರಿಯದವನೀಗಲೇ ಕೆಟ್ಟ ಹೊಲೆಯ ಕಾಣಿರಣ್ಣಾ.
--------------
ಚನ್ನಬಸವಣ್ಣ
ಹಿತವಿದೆ ಸಕಲಲೋಕದ ಜನಕ್ಕೆ, ಮತವಿದೆ ಶ್ರುತಿಪುರಾಣಾಗಮದ, ಗತಿಯಿದೆ, ಭಕುತಿಯ ಬೆಳಗಿನುನ್ನತಿಯಿದೆ. ಶ್ರೀ ವಿಭೂತಿಯ ಧರಿಸಿದಡೆ ಭವವ ಪರಿವುದು ದುರಿತಸಂಕುಳವನೊರಸುವುದು ಹರನ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಲ್ಲಿರಿಸುವುದು. ನಿರುತವಿದು ನಂಬು ಮನುಜಾ, ಜನನಭೀತಿ ಈ ವಿಭೂತಿ. ಮರಣಭಯದಿಂದ ಅಗಸ್ತ್ಯ ಕಾಶ್ಯಪ ಜಮದಗ್ನಿಗಳು ಧರಿಸಿದರಂದು ನೋಡಾ. ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಒಲಿವ ವಿಭೂತಿ.
--------------
ಅಕ್ಕಮಹಾದೇವಿ
ಜೀವರು ಜೀವಿಸಿ ಜೀವನ್ಮುಕ್ತವೆಂತೆಂದರಿಯರು. ಜೀವಂಗೆ ಆತ್ಮಸ್ಥಲ ಸಲ್ಲದು. ತಮ್ಮ ಜೀವಾತ್ಮನನು ಶಿವನೆಂದು, ತಮ್ಮ ಶರೀರವನು ಶಿವನೆಂದು ಅನಂತ ಋಷಿಯ ಅರ್ಚಿಸಿಕೊಂಬರು. ಆರಾರುವೆಂದಡೆ: ವಶಿಷ* ವಾಲ್ಮೀಕಿ ಭೃಗು ದಧೀಚಿ ಕಾಶ್ಯಪ ಅಗಸ್ತ್ಯ ಮಾರ್ಕಂಡೇಯ ಮೊದಲಾದ ಮಹಾಋಷಿಯರು. ಅವರ ಶಾಪಾನುಗ್ರಹ ಸಾಮರ್ಥಿಕೆಯ ಪೇಳುವಡೆ, ಅನಂತ ಶ್ರುತಿಗಳೈದಾವೆ, ಅನಂತ ಶಾಸ್ತ್ರಂಗಳೈದಾವೆ. ಶಿವನ ಕರದೋಯೆನಿಸಬಲ್ಲರು. ಅಂತಹರು, ಅಕಟಕಟ ಭಕ್ತಿಯ ಕುಳವನರಿಯದೆ, ಭವಭಾರಕರಾದರು. ಅಂತು ಜೀವನ ಬಲುಹಿಂದಲು ಸುರರು ಖೇಚರರು ಗರುಡ ಗಂಧರ್ವರು ಸಿದ್ಧವಿದ್ಯಾಧರರು ಗುಹ್ಯಕರು ಯಕ್ಷರಾಕ್ಷಸರು ಹರಿವಿರಂಚಿಗಳು ಮೊದಲಾದ ದೈವಂಗಳೆಲ್ಲಾ ಪ್ರಳಯಚಕ್ರಕ್ಕೊಳಗಾದರು. ಭಾವಾದ್ವೈತರು ವಾಗಾದ್ವೈತರು ಶ್ವಾನಜ್ಞಾನಿಗಳಾಗಿ ಕೆಟ್ಟರು. ಭಕ್ತರು ಭಕ್ತಿಯ ಸ್ಥಿತಿ ಕುಳವನರಿಯದೆ, ಧ್ಯಾನ ಮೌನ ಅನುಷಾ*ನ ಜಪತಪ ಸಮಾಧಿ ಸಂಜೆ ಹೋಮ ನೇಮ ನಿತ್ಯ ಅಷ್ಟವಿಧಾರ್ಚನೆ ಷೋಡಶೋಪಚಾರ ಇಂತೀ ವ್ರತ ಭಾವ ಭಕ್ತಿಯ ಮಾಡಿದರಲ್ಲದೆ, ಭಕ್ತಿದಾಸೋಹವನರಿಯದೆ ಕೆಟ್ಟರು. ಅಂದು ನಮ್ಮ ಬಸವಣ್ಣ ಸ್ವತಂತ್ರನಾದ ಕಾರಣ, ಭಕ್ತಿದಾಸೋಹವಳವಟ್ಟಿತ್ತು. ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವಳವಟ್ಟಿತ್ತು. ಜಂಗಮ ಲಿಂಗವೆಂಬುದು ಸಂಗನಬಸವಣ್ಣಂಗೆ ಅಳವಟ್ಟಿತ್ತು. ದ್ವೈತನಲ್ಲ ಅದ್ವೈತನಲ್ಲ ಬಸವಣ್ಣ, ಭಾವಿಯಲ್ಲ ನಿರ್ಭಾವಿಯಲ್ಲ ಬಸವಣ್ಣ. ದೇಹಿಯಲ್ಲ ನಿರ್ದೇಹಿಯಲ್ಲ ಬಸವಣ್ಣ, ಖಂಡಿತನಲ್ಲ ಅಖಂಡಿತನಲ್ಲ ಬಸವಣ್ಣ. ಇಂತಪ್ಪ ಬಸವಣ್ಣಂಗೆ ಆವ ಗುಣಂಗಳೂ ಇಲ್ಲ. ನಿರ್ಗುಣ ನಿರಂಜನ ನಿಸ್ಸೀಮ ಶಿವನು ಬಸವಣ್ಣನೊಡನೆ ಆಡುತ್ತಿಪ್ಪನು ಹಾಡುತ್ತಿಪ್ಪನು. ಅದು ಕಾರಣ, ಬಸವಣ್ಣನ ಮನ ಪರುಷ, ಬಸವಣ್ಣನ ನೋಟ ಪರುಷ. ಭಾವ ಪರುಷ, ನಡೆ ಪುರುಷ, ನುಡಿ ಪರುಷ, ಹಸ್ತ ಪರುಷ. ತನುಮನಧನವ ನಿವೇದಿಸಿದಾತ ಬಸವಣ್ಣ. ಲಿಂಗ ಬಸವಣ್ಣ, ಜಂಗಮ ಬಸವಣ್ಣ, ಗುರು ಬಸವಣ್ಣ. ಆದಿ ಅನಾದಿಯಿಲ್ಲದಂದಿನ ಬಸವಣ್ಣನ ನೆನೆವುದೆ ಪರತತ್ವ. ಬಸವಣ್ಣನ ನೆನೆವುದೆ ಪರಮಜ್ಞಾನ, ಬಸವಣ್ಣನ ನೆನೆವುದೆ ಮಹಾನುಭಾವ. ಎಲೆ ಕಲಿದೇವ, ನಿಮ್ಮ ಶರಣ ಬಸವಣ್ಣನ ಸಮಸ್ತ ಗಣಂಗಳೆಲ್ಲಾ ನೆನೆದು ಶುದ್ಧರಾದರು.
--------------
ಮಡಿವಾಳ ಮಾಚಿದೇವ
ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ ? ವೇದವೆಂಬುದೊಂದು ಸಾಧಕ ಸಂಪತ್ತು. ವೇದಂಗಳು ಶ್ವೇತ, ಅಗಸ್ತ್ಯ, ವಿಶ್ವಾಮಿತ್ರಮುನಿಗಳಿಂದಾದವು. ಶಬ್ದಗಾಂಭೀರ್ಯ ಶ್ರುತಿಕೋಟಿ ಚರಣಕಮಲನೆಂಬ ಲಿಂಗದ ಕೈಯಲ್ಲಿ ಕಲಿತ ವೇದಂಗಳು ಅಜ್ಞಾನಸಂಗವಾಗಿ ಅಗೋಚರವಾಗಿ ನುಡಿದವು. ಋಗ್ವೇದ_`ನಾಹಂಕಾರೋ ಬ್ರಹ್ಮತೇಜಃ ಎಂದುದಾಗಿ, ಯಜುರ್ವೇದ_`ನಾಹಂಕಾರೋ ಲಕ್ಷ್ಮೀಪತಿರ್ವಿಷ್ಣುತೇಜಃ ಎಂದುದಾಗಿ, ಸಾಮವೇದ_`ನಾಹಂ ದೇವೋ ರುದ್ರತೇಜಃ ಎಂದುದಾಗಿ, ಅಥರ್ವಣವೇದ_`ನಾಹಂ ಸ್ಥಲಂ ಎಂದುದಾಗಿ, ಕುಲಮದದಿಂದ ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು ಕೆಟ್ಟ, ದೈವಮದದಿಂದ ರುದ್ರ ಕೆಟ್ಟ, ಛಲಮದದಿಂದ ಇಂದ್ರ ಕೆಟ್ಟ, ಇಂತೀ ನಾಲ್ಕು ಶ್ರುತಿಗಳು ತಮ್ಮ ಗರ್ವದಿಂದ ನೂಂಕಿಸಿಕೊಂಡವು ಶಿವನ ಅರಮನೆಯ ಬಾಗಿಲಲ್ಲಿ. ಮತ್ತಾ ಚತುರ್ವೇದಂಗಳು ಬಂದು ಲಿಂಗದ ಚತುರ್ದಿಶೆಯಲ್ಲಿ ಓಲೈಸಿ, ಕೈಮುಗಿದುಕೊಂಡು ಹೊಗಳುತ್ತಿದ್ದವು. ಅದೆಂತೆಂದಡೆ ಶ್ರುತಿ, `ಓಂ ಜಯತತ್ವಾನಾಂ ಪುರುಷಮೇರು ಕಾಮ್ಯಾನಾಂ ಪುಣ್ಯಜಪಧ್ಯಾನಾನಾಂ ಸರ್ವಜನ್ಮವಿನಾಶಿನಾಂ ಆದಿ ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ ದೇವಕೋಟಿಚರಣಕಮಲಾನಾಂ ಎಂದು ವೇದಂಗಳು ದೇವರ ಚರಣದ ಕುರುಹ ಕಾಣವು. ಆದಿಯಲ್ಲಿ ನಮ್ಮ ಪುರಾತನರು ವೇದವನೋದಿದರೆ ? ಇಲ್ಲ. ಕಲ್ಲಿಲಿಟ್ಟರು, ಕಾಲಿಲೊದೆದರು, ಬಿಲ್ವಪತ್ರದ ಮರದ ಕೆಳಗೆ ಲಿಂಗವಂ ಪುಟ್ಟಿಸಿ ನಿಷೆ*ಯ ಪಡೆದರು. ಮನೆಯ ಬಾಗಿಲ ಕಾಯಿಸಿಕೊಂಡರು, ಆಡಿಸಿದರು, ಅಡಗಿಸಿದರು, ಓಡಿದ ಲಿಂಗವಂ ತಂದು ಪ್ರತಿಷೆ*ಯಂ ಮಾಡಿದರು. ಇಂತಪ್ಪ ದೃಷ್ಟವ ಸಾಧಿಸಿದರು ನಮ್ಮ ಪುರಾತನರು. ನಿಮ್ಮವರು ವೇದವನೋದಿದರೆಂಬುದನರಿದು. ಅವರನೊಲ್ಲದೆ ಬಿಟ್ಟ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜನ್ಮಾಂತರಸಹಸ್ರೇಷು ತಪೋಧ್ಯಾನಸಮಾಧಿಭಿಃ ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ ಇಂತೆಂದುದಾಗಿ, ಅನೇಕ ಜನ್ಮದ ಪಾಪಂಗಳು ಸವೆದು, ಶ್ರೀಗುರುಕಾರುಣ್ಯಮಂ ಪಡೆದು ಶಿವಭಕ್ತನಾಗಿ ಶಿವಲಿಂಗವಂ ಧರಿಸಿ, ಶಿವಲಿಂಗದರ್ಶನಸ್ಪರ್ಶನಂ ಮಾಡಿ ಇಷ್ಟಲಿಂಗ ಪ್ರಾಣಲಿಂಗಸಂಬಂಧ, ಅಂತರಂಗ ಬಹಿರಂಗ ಸರ್ವಾಂಗವಾದ ಬಳಿಕ ಮರಳಿ ಆತ್ಮತತ್ತ್ವವ ವಿಚಾರಿಸಿ, ಪರಮಾತ್ಮನಲ್ಲಿ ಯೋಗವ ಮಾಡಿ ಯೋಗಿಗಳಾದೆವೆಂಬಿರಿ. ಅದೇನು ಕಾರಣ, ಆತ್ಮನೇ ಪ್ರಾಣ, ಪರಮಾತ್ಮನೇ ಶಿವಲಿಂಗ. ಇಂತೀ ಪ್ರಾಣಾತ್ಮನನೂ ಪರಮಾತ್ಮನಪ್ಪ ಶಿವಲಿಂಗವನೂ ಶ್ರೀಗುರು ಯೋಗವ ಮಾಡಿ ತೋರಿಕೊಟ್ಟು, ಕರುಣಿಸಿದ ಬಳಿಕ ಗುರ್ವಾಜ್ಞೆಯಂ ಮೀರಿ, ದ್ವಿಜರನು ಸನ್ಯಾಸಿಯನು ಶ್ರೀಗುರ್ವಾಜ್ಞೆಯನರಿಯದ, ಶಿವನ ಮಹಾತ್ಮೆಯನರಿಯದ ಶಿವಲಿಂಗವೇ ಪರಮಾತ್ಮನೆಂಬ ತಾತ್ಪರ್ಯವನರಿಯದ ಈ ಭ್ರಷ್ಟರ ಮರಳಿ ಮರಳಿ ಗುರುವೆಂದು ಮಾಡಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ! ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರು ಸರ್ವಧರ್ಮಂಗಳಿಗೆಯೂ ಅಧಿಕಾಧಿಕವೆಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಆತ್ಮಯೋಗವೆಂದು ವೈದಿಕವೆಂದು ಸಕಲವೆಂದು ನಿಷ್ಕಲವೆಂದು ವೈಷ್ಣವವೆಂದು ಮಾಯಾವಾದಿಗಳೆಂದು ಚಾರ್ವಾಕರೆಂದು ಬೌದ್ಧರೆಂದು ಇತ್ಯಾದಿ ಭಿನ್ನದರ್ಶನಂಗಳಲ್ಲಿ ಧರ್ಮಶಾಸ್ತ್ರಂಗಳ ಕೇಳಿ ಮರಳಿ ಉಪದೇಶವಂ ಮಾಡಿಸಿಕೊಳಬಹುದೆ? ಶಿವ ಶಿವಾ ಅದು ಗುರುದ್ರೋಹ, ಶ್ರೀಗುರು ತಪ್ಪಿ ಮಾಡಿದುದಿಲ್ಲ. ಶ್ರೀಗುರುವೇ ಪರಶಿವನಾಗಿ `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂದುದಾಗಿ, `ಶಿವ ಏಕೋ ಧ್ಯೇಯಃ ಎಂದುದಾಗಿ, ಶಿವನನೇ ಪೂಜಿಸಿ ಶಿವನನೇ ಧ್ಯಾನಿಸಿ _ಎಂದು ಹೇಳಿ ತೋರಿಕೊಟ್ಟು ಕರುಣಿಸಿದ ಬಳಿಕ ಶಿವನಿರ್ಮಾಲ್ಯಕಂ ಶುದ್ಧಂ ಭುಂಜೀಯಾತ್ ಸರ್ವತೋ ದ್ವಿಜ ಅನ್ಯದೈವಸ್ಯ ನಿರ್ಮಾಲ್ಯಂ ಭುಕ್ತ್ಯಾಚಾಂದ್ರಾಯಣಂ ಚರೇತ್ ಇಂತೆಂದುದಾಗಿ, ಪ್ರಸಾದವ ಕರುಣಿಸಿದನು ಶ್ರೀಗುರು. ಆ ಶ್ರೀಗುರುವ ಭ್ರಷ್ಟನ ಮಾಡುವಿರಿ, ಗುರು ನಿಮ್ಮಿಚ್ಛೆಗೆ ಬಾರನಾಗಿ, ಪೂರ್ವಪುರುಷರು ಮರುಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ದೂರ್ವಾಸ, ಅಗಸ್ತ್ಯ. ಭೃಗು, ದಧೀಚಿ, ಮಾರ್ಕಂಡೇಯ ಮೊದಲಾದ ಋಷಿಜನಂಗಳೆಲ್ಲರೂ ಶಿವಲಿಂಗಪ್ರತಿಷೆ*ಯ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರು ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಮತ್ತೆ ವಿಷ್ಣು ಬ್ರಹ್ಮ ಇಂದ್ರ ಮೊದಲಾಗಿ ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಮತ್ಸ್ಯಕೇಶ್ವರ, ಕೂರ್ಮೇಶ್ವರ, ಮಾಹೇಶ್ವರ, ರಾಮೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರುಗಳೆಲ್ಲರು ಮರಳರು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು ಕೆಡದಿರು. ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳು ಶಿವಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯಂ ಮಾಡಿದರು. ಇವರು ಮಾಡಿದುದಕ್ಕೆ ದೃಷ್ಟವ ನೋಡಿರೆ: ಕಾಶೀಪುರದಲ್ಲಿ ಇಂದ್ರೇಶ್ವರ, ಬ್ರಹ್ಮೇಶ್ವರ, ಯಕ್ಷಸಿದ್ಧೇಶ್ವರವೆಂದು ಲಿಂಗಪ್ರತಿಷೆ*ಯಂ ಮಾಡಿ ಶಿವಲಿಂಗಾರ್ಚನೆಯ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಕೆಡದಿರು, ಕೆಡದಿರು. ತಾರಕಾಸುರ ರಾವಣಾದಿಗಳೆಲ್ಲರೂ ಶಿವಲಿಂಗಪ್ರತಿಷೆ*ಯಂ ಮಾಡಿ, ಶಿವಲಿಂಗಾರ್ಚನೆಯಂ ಮಾಡಿದರು. ಇವರೆಲ್ಲರೂ ಮರುಳುಗಳು, ನೀನೊಬ್ಬನೇ ಬುದ್ಧಿವಂತನೇ? ಇದು ಕಾರಣ, ಶ್ರೀಗುರುವೆ ಅಧಿಕ, ಶಿವಲಿಂಗವೇ ಅಧಿಕ ಶಿವಲಿಂಗಾರ್ಚನೆಯೇ ಅಧಿಕ, ಆ ಸಂಗವೇ ಸಂಗ, ಶ್ರೀಗುರುಲಿಂಗಜಂಗಮದ ಪೂಜೆಯೇ ಪೂಜೆ, ಅರ್ಚನೆಯೇ ಅರ್ಚನೆ, ಆ ಸಂಗವೇ ಸಂಗ ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->