ಅಥವಾ

ಒಟ್ಟು 120 ಕಡೆಗಳಲ್ಲಿ , 37 ವಚನಕಾರರು , 108 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆಧಾರ ಧಾರಣವೆಂತೆಂದಡೆ : ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾದ್ಥಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ: ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ. ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ. ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ. ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದು ಈ ಐದು ವಾಯುವಿನ ಅಂಶ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ. ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
--------------
ಚನ್ನಬಸವಣ್ಣ
ಆಚಾರಲಿಂಗಾನುಭಾವದಿಂದ ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ! ಸದ್ಗುರುರತಿಯಿಂದ ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ! ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ! ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ ಜಂಗಮಲಿಂಗಗ್ರಾಹಕನ ನೋಡಾ! ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ ನಿರ್ಮಲ ನಿರಾವರಣನ ನೋಡಾ! ಮಹಾಲಿಂಗದ ಸಂಗದಿಂದ ಜೀವಭಾವವಳಿದ ಮಹಾಮಹಿಮನ ನೋಡಾ! ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ ನಿರಂಗಸಂಗಿಯ ನೋಡಾ! ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆ ಅನಾಹತಚಕ್ರದ ದ್ವಾದಶದಳದ ಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕುಂಕುಮವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ,ಮನ ಪವನ ಬಿಂದು ಸಂಯೋಗದಿಂದ ವಿಶುದ್ಧಿಚಕ್ರದ ಷೋಡಶದಳದ ಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಗ್ನಿಯ ಸಂಗದಿಂದೆ ಕಾನನ ಕೆಟ್ಟಂತೆ, ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ, ಪರುಷದ ಸಂಗದಿಂದ ಕಬ್ಬಿಣ ಕೆಟ್ಟಂತೆ, ಲಿಂಗಾನುಭಾವಿಗಳ ಸಂಗದಿಂದೆ ಎನ್ನ ಹುಟ್ಟು ಹೊಂದುಗಳು ನಷ್ಟವಾಗಿ ಕೆಟ್ಟುಹೋದುವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶಬ್ದಿಯಾದಾತ ತರುಗಳ ಹೋತ, ನಿಶ್ಶಬ್ದಿಯಾದಾತ ಪಾಷಾಣವ ಹೋತ. ಕೋಪಿಯಾದಾತ ಅಗ್ನಿಯ ಹೋತ, ಶಾಂತನಾದಾತ ಜಲವ ಹೋತ. ಬಲ್ಲೆನೆಂಬಾತ ಇಲ್ಲವೆಯ ಹೋತ, ಅರಿಯೆನೆಂಬಾತ ಪಶುವ ಹೋತ. ಇದು ಕಾರಣ_ಅರಿಯೆನೆನ್ನದೆ ಬಲ್ಲೆನೆನ್ನದೆ ಅರುಹಿನ ಕುರುಹನಳಿದುಳಿದು ಗುಹೇಶ್ವರನೆಂಬ ಲಿಂಗವ ಹೋತವರನಾರನೂ ಕಾಣೆ.
--------------
ಅಲ್ಲಮಪ್ರಭುದೇವರು
ಆ [ವಿಶುದ್ದಿಚಕ್ರದ] ಷೋಡಶದಳಪದ್ಮವ ಪೊಕ್ಕುನೋಡಿ ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಅಲ್ಲಿ ಶ್ವೇತವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ, ಅಗ್ನಿಯ ಪಟುಮಾಡಿ, ಮನ-ಪವನ-ಬಿಂದು ಸಂಯೋಗದಿಂದ ಆಜ್ಞಾಚಕ್ರದ ದ್ವಿದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗಾರುಡಿಗನ ವಿಷವಡರಬಲ್ಲುದೆ ? ಸೂರ್ಯನ ಮಂಜು ಮುಸುಕಬಲ್ಲುದೆ ? ಗಾಳಿಯ ಮೊಟ್ಟೆಯ ಕಟ್ಟಬಹುದೆ ? ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ? ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ ರೇಕಣ್ಣಪ್ರಿಯ ನಾಗಿನಾಧಾ ?
--------------
ಬಹುರೂಪಿ ಚೌಡಯ್ಯ
ಅನಾದಿಯ ಮಗನು ಆದಿ, ಆದಿಯ ಮಗನತೀತ, ಅತೀತನ ಮಗನು ಆಕಾಶ,. ಆಕಾಶನ ಮಗನು ವಾಯು, ವಾಯುವಿನ ಮಗನಗ್ನಿ, ಅಗ್ನಿಯ ಮಗನು ಅಪ್ಪು, ಅಪ್ಪುವಿನ ಮಗನು ಪೃಥ್ವಿ. ಪೃಥ್ವಿಯಿಂದ ಸಕಲ ಜೀವರೆಲ್ಲರು ಉದ್ಭವಿಸಿದರು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು. ಗುರುಲಿಂಗದೊಳಗಿಪ್ಪೆವೆಂಬರು ಅಪ್ಪುವಿನ ಕತ್ತಲೆಯೊಳಡಗಿಹರು. ಶಿವಲಿಂಗದೊಳಗಿಪ್ಪೆವೆಂಬರು ಅಗ್ನಿಯ ಕತ್ತಲೆಯೊಳಡಗಿಹರು. ಜಂಗಮಲಿಂಗದೊಳಗಿಪ್ಪೆವೆಂಬರು ವಾಯುವಿನ ಕತ್ತಲೆಯೊಳಡಗಿಹರು. ಪ್ರಸಾದಲಿಂಗದೊಳಗಿಪ್ಪೆವೆಂಬರು ಆಕಾಶದ ಕತ್ತಲೆಯೊಳಡಗಿಹರು. ಮಹಾಲಿಂಗದೊಳಗಿಪ್ಪೆವೆಂಬರು ಆತ್ಮನ ಕತ್ತಲೆಯೊಳಡಗಿಹರು. ಇವರನೆಂತು ಶರಣೈಕ್ಯರೆನ್ನಬಹುದು ಹುಸಿಡಂಭಕ ಹೇಸಿಮಾನವರ ? ಗುರುನಿರಂಜನ ಚನ್ನಬಸವಲಿಂಗಾ
--------------
ದೇಶಿಕೇಂದ್ರ ಸಂಗನಬಸವಯ್ಯ
ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ, ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು. ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು. ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ ರಸವೊಸರಿ ಸಂಗ ಪರಿಪೂರ್ಣವಾದಲ್ಲಿ, ರಸವೋ ? ಬಣ್ಣವೋ ? ಘಟವೋ? ಎರಕವಿಲ್ಲದೆ ಘಟ್ಟಿಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು, ಲಕ್ಷಿಸುತಿಪ್ಪ ಚಿತ್ತವು, ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭಸೂಚನೆ, ನಿಃಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.
--------------
ಮೋಳಿಗೆ ಮಾರಯ್ಯ
ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ, ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ, ಆಕಾಶವ ಕೂಡಿ ಬಯಲಹನಲ್ಲ, ಆತ್ಮನ ಗೂಡಿ ಭವಕರ್ಮಿಯಹನಲ್ಲ. ಲಿಂಗವ ಕೂಡಿ ಲಿಂಗವಹನು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಸರಣ.
--------------
ಆದಯ್ಯ
ಅಬ್ದಿಯ ಘೋಷವೆದ್ದು ನಿರ್ಭರ ನಿರ್ವೇಗದಿಂದ ಅಬ್ಬರಿಸಿ ಬರುವಾಗ ಅದನೊಬ್ಬರು ಹಿಡಿದ [ರುಂಟೆ]? ಆಕಾಶದ ಸಿಡಿಲು ಆರ್ಭಟದಿಂದ ಬಡಿವಲ್ಲಿ ತಾಕು ತಡೆಯುಂಟೆ? ಮಹಾದ್ಭುತವಾದ ಅಗ್ನಿಯ ಮುಂದೆ ಸಾರವರತ ತೃಣಕಾಷ್ಟವಿ [ದ್ದುದುಂ]ಟೆ? ತಾ ಸರ್ವಮಯವಾದ ನಿಃಕಳಂಕ ನಿರಂಜನ ಐಕ್ಯಾನುಭಾವಿಗೆ ಅಂಡ ಪಿಂಡ ಬ್ರಹ್ಮಾಂಡ ಅಬ್ದಿ ಆಕಾಶ ಆತ್ಮನೆಂದುಂಟೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನಷ್ಟು ... -->