ಅಥವಾ

ಒಟ್ಟು 34 ಕಡೆಗಳಲ್ಲಿ , 19 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು ನಿಜವ ತೋರುತಿರ್ಪಳು ನೋಡಾ. ಆ ನಿಜವ ಈ ಜನಂಗಳೇನು ಬಲ್ಲರಯ್ಯ ? ಅಜ ಹರಿ ಸುರ ನಾರದ ಮೊದಲಾದವರಿಗೆ ಅಗೋಚರವೆನಿಸಿತ್ತು ನೋಡಾ. ಸ್ವಜ್ಞಾನಿಯಾದ ಶರಣನು ಆ ನಿಜವ ನೋಡಬಲ್ಲನಯ್ಯಾ. ಆ ಬಾಲೆಯ ಅಂಗವ ಕೂಡಬಲ್ಲನಯ್ಯ. ಆ ಸಜ್ಜನವೆಂಬ ಮಾರ್ಗವ ಹತ್ತಬಲ್ಲನಯ್ಯ. ಇಂತಪ್ಪ ಶರಣಂಗೆ ನಮೋ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೊದಲಿಂದತ್ತಲರಿಯದೆ, ಕಡೆಯಿಂದ ಮೇಲೆ ಕಾಣದೆ, ಚದುರಿನ ಹದನ ಸದನ ಸಂಭ್ರಮಕ್ಕೆ ಒದಗಿ ಬಿದ್ದೊರಲಿದರು ಅಜ ವಿಷ್ಣು ಇಂದ್ರಾದಿ ಸಕಲ ಸಂದೋಹ. ಉಳಿದ ಉಚ್ಛಿಷ್ಟ ಬಚ್ಚಲದೊಳು ಬಿದ್ದ ಪ್ರಾಣಿಗಳಂತಿರಲಿ, ಮತ್ತೆ ಕೋಟಲೆಯ ಕಳೆದು ರಾಟಣವ ಹರಿದು, ನಿಜಬೇಟವರಿದು ನಿರ್ಮಲವನರ್ಪಿಸಿ, ನಿರಾವಯವ ಕೊಂಡಾಡುವ ನಿಜಪ್ರಸಾದಿಗಲ್ಲದೆ ಅಸಾಧ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಶೃಂಗದಲ್ಲಿ ತುಂಬುರ ನಾರದರು, ಬಸವಣ್ಣನ ಲಲಾಟದಲ್ಲಿ ವೀರಗಣಂಗಳು, ಬಸವಣ್ಣನ ನಯನದಲ್ಲಿ ಸೂರ್ಯಚಂದ್ರರು, ಬಸವಣ್ಣನ ಕರ್ಣದಲ್ಲಿ ಗಂಗೆವಾಳುಕಸಮರುದ್ರರು, ಬಸವಣ್ಣನ ನಾಸಿಕದಲ್ಲಿ ವಾಯು, ಬಸವಣ್ಣನ ದಂತದಲ್ಲಿ ಭೃಂಗೀಶ್ವರದೇವರು, ಬಸವಣ್ಣನ ಕೊರಳಲ್ಲಿ ಈರೇಳು ಭುವನಂಗಳು, ಬಸವಣ್ಣನ ಅಂಡದಲ್ಲಿ ಅಷ್ಟಷಷ್ಟಿ ತೀರ್ಥಂಗಳು, ಬಸವಣ್ಣನ ಬಲದೊಡೆಯಲ್ಲಿ ಅಜ, ಹರಿ, ಸರಸ್ವತಿ, ಪಂಚನದಿ, ಮಹಾಗಂಗೆ, ಬಸವಣ್ಣನ ಮಣಿಪಾದದಲ್ಲಿ ದೇವಲೋಕದ ದೇವಗಣಂಗಳು, ಬಸವಣ್ಣನ ಕಿರುಗೊಳಗಿನಲ್ಲಿ ಸಮಸ್ತಸಮುದ್ರಂಗಳು. ಈ ಸಪ್ತಸಮುದ್ರಂಗಳೊಳಗಿಹ ಸಕಲಪ್ರಾಣಿಗಳಿಗೆ ಸಂಕೀರ್ಣತೆಯಾದೀತೆಂದು, ಬಾಲದಂಡದಲೆತ್ತಿ ತಡಿಗೆ ಸೇರಿಸಿದನು ನಮ್ಮ ಬಸವಣ್ಣನು-ಇದು ಕಾರಣ, ನಾಗಲೋಕದ ನಾಗಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ಮತ್ರ್ಯಲೋಕದ ಮಹಾಗಣಂಗಳು ಕೊಂಬುದು ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳ ಕೊಂಬುದು ಬಸವಣ್ಣನ ಪ್ರಸಾದ. ರುದ್ರಲೋಕದ ರುದ್ರಗಣಂಗಳು ಕೊಂಬುದು ಬಸವಣ್ಣನ ಪ್ರಸಾದ.- ಇಂತು ನಮ್ಮ ಬಸವಣ್ಣನ ಪ್ರಸಾದವನುಂಡುಟ್ಟು ಕೊಂಡು ಕೊಟ್ಟು ಅನ್ಯದೈವಂಗಳ ಹೊಗಳುವ ಕುನ್ನಿಗಳನೇನೆಂಬೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಪರಶಿವನ ಜ್ಞಾನಚಕ್ಷುವಿನಲ್ಲಿ ಉದಯವಾದ ರುದ್ರಾಕ್ಷೆಯ ಹಸ್ತ ತೋಳು ಉರ ಕಂಠ ಕರ್ಣ ಮಸ್ತಕದಲ್ಲಿ ಧರಿಸಿದ ಶಿವಶರಣನೇ ರುದ್ರನು. ಆ ರುದ್ರಾಕ್ಷೆಯ ಜಪಿಸಿದಾತನೇ ಸದ್ಯೋನ್ಮುಕ್ತನು. ಇದು ಕಾರಣ, ಅಜ ಹರ ಸುರ ಮನು ಮುನೀಶ್ವರರು ಶ್ರೀವಿಭೂತಿ ರುದ್ರಾಕ್ಷೆಯನೆ ಧರಿಸಿ ಶಿವಲಿಂಗಾರ್ಚನೆಯ ಮಾಡುತ್ತಿಪ್ಪರು. ಪ್ರಮಥಗಣ ರುದ್ರಗಣ ಮುಖ್ಯವಾದ ಗಣಾದ್ಥೀಶ್ವರರು ವಿಭೂತಿ ರುದ್ರಾಕ್ಷೆಯನೆ ಧರಿಸಿ, ಪ್ರಣವ ಪಂಚಾಕ್ಷರಿಯನೆ ಜಪಿಸಿ, ಪ್ರಣವ ಸ್ವರೂಪಿಗಳಾಗುತ್ತಿಪ್ಪರು. ನೋಡಿದವರು ಮುಟ್ಟಿದವರು ಧರಿಸಿದವರು ಜಪಿಸಿದವರೆಲ್ಲ ಸಕಲ ಪ್ರಪಂಚನಳಿದು ಪರಶಿವ ಸ್ವರೂಪರಪ್ಪುದು ತಪ್ಪದು ನೋಡಾ. ಇದು ಕಾರಣ, ನಾನು ವಿಭೂತಿ ರುದ್ರಾಕ್ಷೆಯನೆ ಧರಿಸಿ, ಶಿವಲಿಂಗಾರ್ಚನೆಯನೆ ಮಾಡಿ ಪ್ರಣವ ಪಂಚಾಕ್ಷರಿಯನೆ ಜಪಿಸುತ್ತಿದ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಪ್ರತಿಮಭಸಿತವನು ಸುಪ್ರಭಾಚಾರ್ಯನಿಂದೆ ಅರಿದು ಅವಧರಿಸಿದ ಅನುಪಮ ಶರಣಂಗೆ ಅಜ ವಿಷ್ಣು ಇಂದ್ರಾದಿ ಮನುಮುನಿ ಷಡುದರ್ಶನ ಸಕಲ ನಿಃಕಲ ಸಂಭವಿತರೆಲ್ಲ ಶರಣು ಶರಣೆಂದು ಬದುಕುವರು ಕಾಣಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಜ ಹರಿ ಸುರರಿಗೆ ಶರೀರವ ತೊಡಿಸಿ ಕರಣದೋಕುಳಿಯಾಡಿ ವಿಷಯದ ಮಳೆಯ ಕರೆವುತ್ತಿದ್ದಾಳೆ ನೋಡಾ. ಹರಣದ ಮಧ್ಯದಲ್ಲಿ ನಿಂದು, ಹೆಣ್ಣು ಹೊನ್ನು ಮಣ್ಣು ತೋರಿ, ಕಣ್ಣ ಕಟ್ಟಿದಳು ನೋಡಾ, ನಿಮ್ಮ ಕಾಣಲೀಯದೆ. ತಾನು ತಲೆಕೆಳಗಾಗಿ ಕಾಲುಮೇಲಾಗಿ ನಡೆವಳು. ಕರಿಯಾಗಿ ನಿಂದು, ಹರಿಯಾಗಿ ಹರಿದು, ಉರಿಯಾಗಿ ಸುಡುತಿಪ್ಪಳು ನೋಡಾ. ಕರಿಯ ಶಿರದಲ್ಲಿ ಉರಿ ಹುಟ್ಟಲು ಕರಿ ಬೆಂದಿತ್ತು, ಹರಿ ನಿಂದಿತ್ತು, ಉರಿ ಕೆಟ್ಟಿತ್ತು. ಶರೀರಗುಣವಳಿದು ಸದ್ಭಕ್ತಿಸಾಮ್ರಾಜ್ಯವನಾಳುತ್ತಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಮೃತಮಥನದಲ್ಲಿ ಅಜ ಹರಿ ಸುರಪ ವಾಲಿ ಸುಗ್ರೀವರಳಿದರು. ಕಾಶಿಯಲ್ಲಿ ಬ್ರಹ್ಮ ವಿಷ್ಣುಗಳಳಿದರು. ಕೇದಾರದಲ್ಲಿ ಪಾಂಡವರಳಿದರು, ಕಲ್ಯಾಣದಲ್ಲಿ ವ್ಯಾಳನಳಿದನು. ಶ್ರೀಶೈಲದಲ್ಲಿ ಹಿರಣ್ಯ ಧನುಜ ನಾಗಾರ್ಜುನರಳಿದರು. ಪಾತಾಳ ಲಂಕೆಯಲ್ಲಿ ಮಹಿರಾವಣನಳಿದನು. ಲವಣ ಲಂಕೆಯಲ್ಲಿ ಲಕ್ಷ್ಮಿಗಳುಪಿದವನಳಿದನು. ದಶರಥನ ತೋಹಿನಲ್ಲಿ ಮಂಡುಬಲಚೌಡನಳಿದನು. ಬ್ಥೀಮನ ಕೈಯಲ್ಲಿ ಕೀಚಕನಳಿದನು. ಮುನಿ ಕರ್ಣಿಕೆಯ ಶಿರವ ಹರಿದು, ಸುರಪನಜಹರಿಗಳು ಶಾಪಹತರಾದರು. ಋಷಿಯ ಸತಿಗಳುಪಿ ಸುರಪ ಮೈಯನಳಿದ. ಬ್ಥೀಷ್ಮರು ಕುಂಭಕರ್ಣ ದ್ರೋಣ ಜಾಂಬರು ನಿದ್ರೆಯಲ್ಲಿ ಅಳಿದರು. ವ್ಯಾಧರ ಬಾಣದಲ್ಲಿ ಬಿದ್ದರು ವಿಷ್ಣು ಪಾಂಡ್ಯರಾಯರು. ವಿಷದ ಪಣ್ಣಿಂದಳಿದ ಪರೀಕ್ಷಿತರಾಯನು. ಪರಶುರಾಮನ ಕೈಯಲಿ ಜಮದಗ್ನಿ ಮುನಿಯ ವಧೆಯಿಂದ ಕಾರ್ತಿಕರಳಿದರು. ವೃಷಭನ ವಧೆಯಿಂದ ವೀತರಾಜನಳಿದ. ಕುರುಕ್ಷೇತ್ರದಲ್ಲಿ ಕೌರವರಳಿದರು. ಮಾಸನೂರಲ್ಲಿ ಸಿದ್ಧರಳಿದರು. ಕೊಲ್ಲಾಪುರದಲ್ಲಿ ಹರಿ ಅಜ ಇಂದ್ರ ದಿಕ್ಪಾಲಕರು ತೃಣಕೆ ಲಫುವಾದರು. ಹೋಮ ಕಾಮ ತ್ರಿಣೇತ್ರ ಪಂಚಮುಖರೆಲ್ಲ ಮಹಾಪ್ರಳಯದಲ್ಲಿ ಅಳಿದರು. ಇನ್ನು ಬಿಜ್ಜಳರಾಯನ ಅಳಿವಿನುಳಿವಿನ ಹವಣವೇನು ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಜನನಮರಣರಹಿತ ನೀನೊಬ್ಬನೆಯೆಂದು ಸಂಸಾರಭಯಕ್ಕಂಜಿ ಶರಣುಹೊಕ್ಕೆನೆಂದಿತ್ತು ವೇದ. ತಾರುಣ್ಯದಿಂದ ಸದಾ ರಕ್ಷಿಸುವುದೆಂದು ಮಾರಾರಿಯನು ಶರಣುಹೊಕ್ಕಿತ್ತು ನೋಡಾ ವೇದ. ಅಜಾಯತ್ತೇಧಂ ಕಶ್ಚಿತ್ ಭೇದಾತ್ | ಪ್ರಪದ್ಯೋ ರುದ್ರಯತ್ತೇ ದಕ್ಷಿಣಂ ಮುಖಂ || ಎಂದುದು ಶ್ರುತಿವಚನ. ಇದು ಕಾರಣ, ಅಜ ಹರಿ ಸುರರು ಮೊದಲಾದವರಿಗೆಲ್ಲಾ ನೀನೆ ಶರಣನಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಶ್ರೀಮತ್ ಸಚ್ಚಿದಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವೇ ಮಹಾಂತ ಅಖಂಡಪರಶಿವಬ್ರಹ್ಮದ ನಿಜಚಿದ್ವಿಲಾಸದೊಳಾದ ಬ್ರಹ್ಮಾಂಡಮಂಡಲಕ್ಕೆ ನಡುಗಂಬವಾದ ಬಳಿಕ ಅನಂತ ನರ ನಾಗ ಸುರ ಅಸುರ ಮನು ಮುನಿ ಮನೋವಿಷ್ಟಪ್ರದಾಯಕ ಈರೇಳುಲೋಕಾಧಾರ ಮಹಾಮೇರುಶಿಖರಮಂದಿರಮಂಟಪಮಧ್ಯದೊಳೆಸೆವಾ ನವರತ್ನಸಿಂಹಾಸನಾಗ್ರದಮ್ಯಾಲೆ ಆ ನಿರ್ಬಯಲವೇ ಗಟ್ಟಿಗೊಂಡು ಆ ಅಖಂಡಪರಬ್ರಹ್ಮವೇ ವಿನೋದದೊಳಗೊಂದು ವಿನೋದವಾಗಿ ತಾನೇ ರೂಪದೋರಿ, ಪಂಚಮುಖ ದಶಭುಜ ತ್ರಿಪಂಚನೇತ್ರ ವಿಷಕಂಠ ಗಂಗೋತ್ತುಮಾಂಗ ಚಂದ್ರಮೌಳಿ ಅಹಿಕುಂಡಲಿ ಗಜಚರ್ಮಾಂಬರ ಅರ್ಧನಾರೀಶ ವ್ಯಾಘ್ರಾಜಿನುಡಿಗೆ ಹರಿನಯನಾಂಕಿತ ಪಾದಪಂಕಜ ಶ್ರೀಮನ್‍ಮಹಾದೇವ ಮೂರ್ತಿಗೊಂಡಿರಲು ಅಲ್ಲಿ ಹರಿ ಅಜ ಇಂದ್ರಾದ್ಯಷ್ಟ ದಿಕ್ಪಾಲಕರು ಅಷ್ಟವಸುಗಳು ಹದಿನಾಲ್ಕು ಮನುಗಳು ಎಂಬತ್ತೆಂಟುಕೋಟಿ ಮುನಿಗಳು ಮುನ್ನೂರಾಮೂವತ್ತಾರು ಕೋಟಿ ದೇವತೆಗಳು ಕಿನ್ನರರು ಕಿಂಪುರುಷರು ಗರುಡರು ಗಂಧರ್ವರು ಸಿದ್ಧರು ಸಾಧ್ಯರು ಸಾಧಕರು ಅಪ್ಸರೆಯರು ನಾಗದೇವತೆಗಳು ಮೊದಲಾದ ಅನಂತ ದೇವತೆಗಳು, ಮತ್ತೆ ವೀರೇಶ ನಂದೀಶ ಭೃಂಗೀಶ ವಿಘ್ನೇಶ ಕಾಲಭೈರವ ಮಹಾಕಾಯ ಗಜಕರ್ಣ ಘಂಟಾಕರ್ಣ ಶಂಖಕರ್ಣಾದಿ ವ್ಯಾಘ್ರಮುಖ ಸಿಂಹಮುಖ ವಾಮಮುಖ ಗಜಮುಖಾದಿಯಾದ ಅನಂತ ಮುಖದವರು, ಏಕಾಕ್ಷ ದ್ವಿಯಕ್ಷ, ತ್ರಿಯಕ್ಷ ಶತಾಕ್ಷ ಸಹಸ್ರಾಕ್ಷ ಅನಂತಾಕ್ಷರರು, ಏಕಜಿಹ್ವೆ ದ್ವಿಜಿಹ್ವೆ ತ್ರಿಜಿಹ್ವೆ ಶತಜಿಹ್ವೆ ಸಹಸ್ರಜಿಹ್ವೆ ಮೊದಲಾದ ಅನಂತ ಜಿಹ್ವೆಗಳು, ಏಕ ದ್ವಿತೀಯ ಪಂಚ ಶತ ಸಹಸ್ರನಾಸಿಕ ಮೊದಲಾದ ಅನಂತ ನಾಸಿಕರು, ಇದರಂತೆ ಅನಂತಪಾದ ಅನಂತಬಾಹು ಅನಂತಶಿರ ಮೊದಲಾದ ಗಂಗೆಯ ಮೇಲ್ಗಣಿತಕ್ಕೆ ಮೀರಿದ ಪ್ರಮಥಗಣ ರುದ್ರಗಣ ಅಮರಗಣ ಮಹಾಗಣಂಗಳು, ಓಲೈಸಿ ಮೆರೆಯುವ ವೇದಾಗಮ ಪುರಾಣಶಾಸ್ತ್ರ ಉಪನಿಷತ್ತು ಬಲ್ಲ ಪಾಂಡಿತ್ಯರು ವೇದಾಧ್ಯಯನರು ನವರಸವ ಬಲ್ಲ ಕವಿಗಳು ಗಮಕಿ ವಾದಿ ವಾಗ್ಮಿಗಳು, ರಾಗವಿಶಾರದರಾದ ನಾರದ ತುಂಬುರ ಕಂಬಲ ಅಶ್ವತ್ಥರು, ಪಾಠಕ ಪರಿಹಾಸಕರ ಬಹುನಾಟ್ಯದಿಂ ಭೇರಿ ಮೃದಂಗ ಮೊದಲಾದ ಅನಂತ ನಾದಘೋಷ ಅನಂತ ಮಾಂಗಲ್ಯೋತ್ಸವದಿಂದ ಓಲಗವ ಕೈಕೊಂಡು ಅನಂತ ಸೌಖ್ಯದಲಿ ಪರಮಾತ್ಮನೆನಿಸಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಹೀಂಗೆ ಪೂರ್ವಪುರಾತನರು ಸದ್ಗುರು ವಚನೋಕ್ತಿಯಿಂದ ತಿಳಿದು ರೇವಣಸಿದ್ಭೇಶ್ವರ, ಮರುಳಸಿದ್ಧೇಶ್ವರ, ತೋಂಟದಸಿದ್ಧೇಶ್ವರ ನೂರೊಂದು ವಿರಕ್ತರು ಮೊದಲಾದ ಮತ್ರ್ಯಲೋಕದ ಮಹಾಗಣಂಗಳೆಲ್ಲ ಸರ್ವಾಚಾರ ಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯ ಸದ್ಗುರುಮುಖದಿಂದ ಬೆಸಗೊಂಡು ನಿಜಪ್ರಸಾದವೆಂದು ಸದ್ಭಾವದಿಂದ ಭಾವಿಸಿ ನಡೆದಂತೆ ನುಡಿದು, ನುಡಿದಂತೆ ನಡೆದು, ಹರುಕಿಲ್ಲದೆ ಹರಿ ಅಜ ಸುರ ಮನು ಮುನಿ ದೇವ ದಾನವ ಮಾನವರೆಲ್ಲ ಮುಳುಗಿಹೋದ ಹೊನ್ನು-ಹೆಣ್ಣು-ಮಣ್ಣು-ಅನ್ನ-ನೀರು-ವಸ್ತ್ರ-ಆಭರಣ-ವಾಹನವೆಂಬ ಮಾಯಾಪಾಶ ಕಡವರವ ದಾಂಟಿದರು ನೋಡ. ಮಾಯಾಭೋಗವಿರಹಿತರಾಗಿ ಲಿಂಗಭೋಗಸಂಪನ್ನರಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ. ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ. ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ. ತ್ರೆ ೈಜಗವೆಲ್ಲಾ ಮೂರ್ಛೆಗತರಾದರು ನೋಡಾ. ವೀರರು ದ್ಥೀರರು ವ್ರತಿಗಳು ಸಾಮಥ್ರ್ಯರೆಲ್ಲ ಮತಿಗೆಟ್ಟು ಮರುಳಾದರು ನೋಡಾ. ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ ವಿಕಾರಗೊಂಡರು ನೋಡಾ. ಶಿವನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ, ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ. ಈ ಮಾಯಾ ಪ್ರಪಂಚ ಕಳೆವಡೆ ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಜ ಗಳದಲ್ಲಿ ಬಿಡುಮೊಲೆಯಿದ್ದಡೆ ಅದು ಗಡಿಗೆಗೇಡು. ದೃಢವೆನಗಿಲ್ಲದಲ್ಲಿ ಒಡಗೂಡುವುದಕ್ಕೆಡಹೆ ? ತುಡುಗುಣಿಯಲ್ಲಿ ಮೀಸಲುಂಟೆ ? ಅಡಿಯನರಿಯದವಂಗೆ ದೃಢಭಕ್ತಿಯುಂಟೆ ? ಇಂತಿವರೊಡಗೂಡುವ ಗುರುಶಿಷ್ಯನ ಇರವು, ಪರಿಭ್ರಮಣ ಬಂದು ಶರೀರವನೊಡಗೂಡಿದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಜ ಹರಿಗಳರಿತಕ್ಕೆ ಅಗೋಚರವಾದ ನಿಜವನರಿದು ಸಹಜಾತ್ಮನಾದ ಶರಣಂಗೆ, ಏಕವೆಂಬುದು ಅನೇಕವೆಂಬುದು ತೋರದೆ, ಸ್ಥೂಲವೆಂಬುದು ಸೂಕ್ಷ ್ಮವೆಂಬುದು ತೋರದೆ, ಚರಾಚರವು ನಾಸ್ತಿಯಾಗಿ, ಸಮಸ್ತ ಭುವನಂಗಳು ಶೂನ್ಯವಾಗಿ ತೋರದೆ, ನಿಶೂನ್ಯವಾಗಿ ತೋರದೆ, ಜ್ಞಾನರೂಪಾಗಿ ತೋರದೆ, ಮತ್ತೊಂದು ರೂಪಾಗಿಯೂ ತೋರದೆ, ಭೂಮಿ ಜಲ ಅಗ್ನಿ ಮರುದಾಕಾಶ ಚಂದ್ರ ಸೂರ್ಯರೆಂಬವೇನೂ ತೋರದೆ, ಸರ್ವಸಾಕ್ಷಿಯಾದ ಸಮ್ಯಗ್‍ಜ್ಞಾನವೊಂದೇ ಪರಿಪೂರ್ಣವಾಗಿ ತನ್ನ ಸ್ವರೂಪಿನಿಂದ ತೋರುತ್ತಿಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಅಜ ಅರ್ಕನ ಕೊಂಬಿನಲ್ಲಿ ನಿಂದು, ಭಜನೆವಂತರ ಕಂಡು, ತ್ರಿಜಗವೆಲ್ಲ ತಾನೆಂದು ಗಜಬಜೆಯಲ್ಲಿ ಅಡಗಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ.
--------------
ಮೋಳಿಗೆ ಮಾರಯ್ಯ
ಆಡಿನ ಶಿರದಮೇಲೆ ಕುಣಿದಾಡುವ ಕೋಡಗ ಮಾರುತನ ಕೂಡೆ ಉಡುವ ಹಡೆಯಿತ್ತು ನೋಡಾ. ಉಡುವಿನ ನಾಲಗೆಯಲ್ಲಿ ಅಜ ಹರಿ ಸುರ ಮನು ಮುನಿಗಳು ಅಡಗಿದರು. ಇವರೆಲ್ಲರ ಯಜನಾದಿಕೃತ್ಯಂಗಳು ಉಡುವಿನ ಕಾಲಿನಲ್ಲಿ ಅಡಗಿದವು. ತ್ರಿಜಗವೆಲ್ಲವು ಹೀಂಗೆ ಪ್ರಳಯದಲ್ಲಿ ಮುಳುಗಿದೆಯಲ್ಲ. ಉಡುವಿನ ನಾಲಗೆ ಕೊಯಿದು, ಕುಣಿದಾಡುವ ಕೋಡಗನ ಕಾಲಮುರಿದು, ಅಜಪಶುವ ಕೊಂದು, ಅಗ್ನಿಯಲ್ಲಿ ಸುಟ್ಟು ಭಸ್ಮವಮಾಡಬಲ್ಲಾತನ ಜನನಮರಣ ವಿರಹಿತನೆಂಬೆ, ತ್ರಿಜಗಾಧಿಪತಿಗಳಿಗೆ ಒಡೆಯನೆಂಬೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->