ಅಥವಾ

ಒಟ್ಟು 16 ಕಡೆಗಳಲ್ಲಿ , 9 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲ ಆತ ಏತರೊಳಗೂ ಸಿಕ್ಕದ ಅಜಾತ ಶಂಭು. ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟು ವೇಷದಿಂದಾದ ಘಾತಕತನವನೊಲ್ಲದೆ ಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆ ನಿಜ ತತ್ವದ ಆಶೆಯೇ ಸಾಕಾರವಾಗಿ ಅರಿದ ಆತ್ಮ ಕರಿಗೊಂಡಲ್ಲಿ ಹರಿಪ್ರಿಯ ಅಘೋರನಾಶನ ರಾಮನಾಥಾ.
--------------
ಗುಪ್ತ ಮಂಚಣ್ಣ
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ, ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ, ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ, ತಾಳಸಂಪುಟಕ್ಕೆ ಬಾರದ ಘನವ ? ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ, ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ, ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
--------------
ಚನ್ನಬಸವಣ್ಣ
ಎನ್ನ ಜನನ ಸೂತಕ ಹೋಯಿತ್ತು ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ. ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ. ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ ಅನ್ಯದೈವವನರಿಯೆನಾಗಿ. ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ. ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು. ಎನ್ನ ಕಂಗಳ ಸೂತಕ ಹೋಯಿತ್ತು ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ. ಎನ್ನ ಕೈಯಸೂತಕ ಹೋಯಿತ್ತು ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ. ಎನ್ನ ಕಿವಿಯ ಸೂತಕ ಹೋಯಿತ್ತು ನಿಮ್ಮ ಕೀರ್ತಿಯ ಕೇಳಿ ಕೇಳಿ. ಎನ್ನ ಜಿಹ್ವೆಯ ಸೂತಕ ಹೋಯಿತ್ತು ನಿಮ್ಮ ಪರಮಪ್ರಸಾದವ ಸವಿಸವಿದು. ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ. ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗವಸ್ತುವಾದಲ್ಲಿ, ನಂಬುವ ಮನ ವಿಶ್ವಾಸವಾಗಬೇಕು. ಆಸೆವಿರಹಿತ ಗುರುವಾದಲ್ಲಿ, ಪಾಶವಿರಹಿತ ಪೂಜಿಸುವ ಶಿಷ್ಯನಾಗಬೇಕು. ಸರ್ವದೋಷನಾಶನನಾಗಿ, ಆಸೆಯೆಂಬುದು ಎಳ್ಳನಿತು ತೋರದಿದ್ದಡೆ, ಆತ ಈಶಾನ್ಯಮೂರ್ತಿ ಪೂಜಿಸುವಾತ, ಅಜಾತ ಶಂಭು. ಇಂತೀ ಉಭಯ ಏಕಮಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಗ್ರಾಮವೆಂಟರ ಒಳಗೆ ಆನಂದದಾಳಾಪ ಸ್ವಾನುಭೂತ್ರೈತೆಕದಲಿ ಸೌಖ್ಯವಾಗಿ ಭಾನುವಿನುದಯದ ಪ್ರಭೆಯ ನುಂಗಿದ ದೀಪ್ತಿ ಅಜಾತ ಗುರುವಿನ ರೂಪು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲೋಕಮಚ್ಚು ನಡೆಯ ಬಲಿಸುವನು, ಲೋಕಮಚ್ಚು ನುಡಿಯ ಕಲಿವನು. ಲೋಕದ ಮಚ್ಚು ಸೂತಕಾದಿ ಸಕಲಸನ್ನಿಹಿತನಾಗಿ ಪಾತಕದಲ್ಲಿ ಮುಳುಗಿ ಹೋಗುವ ವೇಷಗಳ್ಳನಂತಲ್ಲ. ಮತ್ತೆಂತೆಂದಡೆ, ಲಿಂಗಮಚ್ಚು ನಡೆಸಾಧಿಸುವ, ಲಿಂಗಮಚ್ಚು ನುಡಿಯ ಗಳಿಸುವ, ಲಿಂಗಮಚ್ಚು ಸೂತಕಪಾತಕಂಗಳ ವಿಸರ್ಜಿಸಿ ಅಜಾತ ಅಪ್ರತಿಮನಾಗಿಪ್ಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ ಅನುವನರಿದ ಅಭಿನ್ನಪ್ರಸಾದಿಗೆ ದ್ವೈತಾದ್ವೈತ ಕಷ್ಟ; ಭಾವಿಕರು ಕಾರಣದ ಬರವೆಂದು ಕಾಣಲಿಲ್ಲ. ಅದೇನು ಕಾರಣವೆಂದೊಡೆ: ಅಜಾತ ಅನುಪಮಾನಂದಪ್ರಕಾಶ ಗುರುನಿರಂಜನ ಚನ್ನಬಸವಲಿಂಗ ಪ್ರಾಸದಕ್ಕೆ ಪ್ರಸಾದಿಯಾದ ಕಾರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಿಘ್ನೇಶ್ವರ ಹರನ ಮಗನೆಂಬ ಪಂಚಮಹಾಪಾತಕರ ನುಡಿಯ ಕೇಳಲಾಗದು. ಪಾರ್ವತಿ ಹರನ ಸತಿಯೆಂಬ ಲಿಂಗದ್ರೋಹಿಗಳ ನೆನೆಯಲಾಗದು. ಬಹುರೂಪಿ ಹರನ ಸರಿಯೆಂಬ ಗುರುದ್ರೋಹಿಗಳ ನೆನೆಯಲಾಗದು. ಅಂದೆಂತೆಂದಡೆ:`ಯತ್ರ ಜೀವಾತ್ಮ ತತ್ರ ಶಿವ' ಎಂದೆನಿಸಿಕೊಂಬಾತನೊಬ್ಬ ಗಣೇಶ್ವರನು. ಭೂಮಿಪೀಠಾಕಾಶವಾಗಿರ್ದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಬಾಣಸವ ಮಾಡಿಸಿದಾತನೊಬ್ಬ ಗಣೇಶ್ವರನು. ಅರ್ಜುನನ ಕೂಡ ಯುದ್ಧವ ಮಾಡಿ, ತನ್ನ ಸತಿಯಳಿಗೆ ತೋರಿಸಿದಾತನೊಬ್ಬ ಗಣೇಶ್ವರನು. ಅಂಗಜನ ಸಂಹಾರವ ಮಾಡಿದಾತನೊಬ್ಬ ಆದಿರುದ್ರನೆಂಬ ಗಣೇಶ್ವರನು. ದಕ್ಷನ ಸಂಹಾರವ ಮಾಡಿದಾತನೊಬ್ಬ ವೀರಭದ್ರನೆಂಬ ಗಣೇಶ್ವರನು. ಹತ್ತು ಅವತಾರ ವಿಷ್ಣುವಿಂಗೆ, ಅನಂತ ಅವತಾರ ಬ್ರಹ್ಮಂಗೆ. ಇಂತಿವರೆಲ್ಲರಿಗೂ ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರ. ಈ ನಾಲ್ಕೂ ಪ್ರಳಯಚಕ್ರವೆಂದೆನಿಸಿಹವು. ಇಂತಿವರೊಳಗಾದವರೆಲ್ಲರು ಇನ್ನುಳಿದವರು ನರದೇಹಿಗಳಿಗೆ ಪ್ರಳಯವು. ಉಪಮಿಸಲಾಗದು, ಅಜಾತ ಪವಿತ್ರ ನಿರ್ಲೇಪ [ಜಂಗಮಲಿಂಗ ಪ್ರಭುವೆ].
--------------
ಮಾರೇಶ್ವರೊಡೆಯರು
ಜಾತ, ಅಜಾತ, ನಿರ್ಜಾತನೆಂಬುದು ಅದೇತರ ಭಾವ ? ಅದು ತನ್ನ ಭ್ರಾಂತಿನ ಕಲೆ. ಸತ್ತೆನೆಂದು ಹೇಳುತಿಪ್ಪುದೆ ಹೆಣ ? ಆ ನಿಶ್ಚಯವೆಂಬುದು ಹುಟ್ಟುಗೆಟ್ಟಲ್ಲಿ, ಮತ್ತೆ ಬಟ್ಟಬಯಲೆಂಬ ದೃಷ್ಟವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಚಾತುಷ್ಟ ಬ್ರಹ್ಮದಲಿ ಅನೇಕ ವಿಧ ಸಂಗಮದ ಸಾಕಲ್ಯ ದೇಹವನು ಕಳೆದು, ಸತ್ಯಾನಂದ ಏಕಮಯನೆನಿಪ ಭವದೂರನು. ಆತನನು ತಂದು ಮನಮಧ್ಯದೊಳಿರಿಸಿದ ಅಜಾತ ಗುರುವೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಣದೆ ಕೇಳದೆ ಮೂವರು ಹೋದರೆಂದರೆ, ಕಂಡು ನುಡಿಸಿ ದಿಟವಾಯಿತ್ತ ಕಂಡೆನಿದೇನೊ ! ಬಯಲಶಬ್ದವಡಗಿತ್ತ ಕಂಡೆ, ಅಜಾತ, ಕೂಡಲಚೆನ್ನಸಂಗಯ್ಯಾ ಲಿಂಗಜಂಗಮದನುಭಾವವೆನಲಿಲ್ಲ, ಎನಿಸಿಕೊಳಲಿಲ್ಲ.
--------------
ಚನ್ನಬಸವಣ್ಣ
ಸಂಜೆ ಮಂಜಾನೆಯೆಂದೆನಬೇಡ, ಅಂಜಿಕೆ ಬೇಡ, ಅಳುಕು ಬೇಡ. ಸಂದುಸಂಶಯವೆಂಬ ಸಂದೇಹ ಬೇಡ. ಮನದಲ್ಲಿ ಸಂಕಲ್ಪ ವಿಕಲ್ಪ ಆದಿವ್ಯಾಧಿ ದುರಿತ ದುಮ್ಮಾನ ಭಯ ಮೋಹ ಚಿಂತೆ ಸಂತೋಷ ಸುಖದುಃಖ ಮೊದಲಾದವು ಒಂದೂ ಇಲ್ಲದಿಲ್ಲದ್ದಡೆ, ಆತನೇತರಲ್ಲಿರ್ದಡೂ ಅಜಾತ ಸ್ವಯಂಭು. ಬಂದುದನೆ ಪರಿಣಾಮಿಸಿ, ನಿಶ್ಚಿಂತ ನಿಜನಿವಾಸಿಯಾಗಿಪ್ಪ ಪರಮ ವಿರಕ್ತಂಗೆ ನಮೋ ನಮೋ ಎಂಬೆ. ಆತ, ಬಸವಪ್ರಿಯ ಕೂಡಲಸಂಗಯ್ಯನಲ್ಲಿ ಒಂದಾದ ಲಿಂಗೈಕ್ಯನು.
--------------
ಹಡಪದ ಅಪ್ಪಣ್ಣ
ಮೂವರರಿಯದ ಮುಗ್ಧ ಮಾತಿನ ಜಾಣರರಿಯರು, ನೀತಿಯ ಜಾಣರರಿಯರು, ಕಷ್ಟದ ಕರ್ಮಿಗಳರಿಯರು. ಸೋತುಕಾಣದ ಜಾತಶೂನ್ಯ ಅಜಾತ ಬಲ್ಲ ನಮ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧಾತುವ ಮೀರಿದ್ದ ಬಣ್ಣವ, ಅಜಾತ ನಿನ್ನ ಕೂಟವ, ಆರಿಗಯ್ಯಾ ಭೇದಿಸಲಕ್ಕು? ಅಭೇದ್ಯ ಕಾರಣ ಶಿವನೇ, ಆ ಅಕ್ಷರದಲ್ಲಿ ಅಮೋದದಾನತದ ಭೇದವ ಆ ಭೇದವ ಭೇದಿಸಲಾಹುದೆ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಮಾತು ಮಾತಿಗೆ ಮಥನವ ಮಾಡುವಾತನೆ ಜಾತ. ಮಾತಿಗೆ ಮೊದಲ ಕಂಡಾತನೆ ಅಜಾತ, ಕಾತರಕ್ಕೆ ಕಂಗೆಟ್ಟು, ಕಳವಳಿಸದಿಪ್ಪನೆ ಪರಮಾತ್ಮ. ನೀತಿ ನಿಜ ನೆಲೆಗೊಂಡಾತನೆ ಜಗನ್ನಾಥ, ಇವೇತರೊಳಗು ಸಿಕ್ಕದಿಪ್ಪಾತನೆ ಗುರುನಾಥ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->