ಅಥವಾ

ಒಟ್ಟು 13 ಕಡೆಗಳಲ್ಲಿ , 9 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಿತ್ಯ ತೃಪ್ತನಿಗೆ ಹಸಿವಿನ ಭಯವುಂಟೇ?. ಸತ್ಯ ಜ್ಞಾನಿಗೆ ಅಜ್ಞಾನದ ಭಯವುಂಟೇ?. ವಾತ ಪಿತ್ತ ಶ್ಲೇಷ್ಮ ನಷ್ಟವಾದವಂಗೆ ತಾಪತ್ರಯಾದಿಗಳ ಭಯವುಂಟೇ?. ಸ್ವಯಂಜ್ಯೋತಿಯ ಬೆಳಗನುಳ್ಳಾತನು ಚಂದ್ರಸೂರ್ಯಾದಿಗಳ ಬೆಳಗನಾಶ್ರಯಿಸುವನೆ?. ನಿಜದಿಂದ ತನ್ನ ತಾನರಿದು, ತಾನು ತಾನಾದತನು, ಮಾಯಾದ ಗಜಬಜೆಯ ಹುಸಿಗೆ ಬೆದರುವನೆ ಮಹಾಶರಣನು?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರೀಗುರುಲಿಂಗಜಂಗಮದ ಚರಣ ಸೋಂಕಿನಿಂ ಪವಿತ್ರವಾದ ಚಿದ್ಭಸಿತವ ಧರಿಸಿದವರಿಗೆ ಬಹುಜನ್ಮ ಪಾಪದೋಷವ ತೊಡವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಅಜ್ಞಾನದ ಪಾಶವ ಹರಿವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸಮಸ್ತ ಜನವಶ್ಯ ರಾಜವಶ್ಯವ ಕೊಡುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಸದಾಚಾರ ಸದ್ಭಕ್ತಿಸಾರದುನ್ನತಿಯ ಬೆಳಗ ತೋರುವುದಯ್ಯ. ಶ್ರೀ ವಿಭೂತಿಯ ಧರಿಸಿದವರಿಗೆ ಜನನ-ಮರಣದ ಭಯವ ತೊಡವುದಯ್ಯ. ಶಿವನಿಂದ ಅಗಸ್ತ್ಯ, ಕಸ್ಯಪ, ಜಮದಗ್ನಿ, ಗೌತಮ, ವಶಿಷ್ಠ ಮೊದಲಾದ ಋಷಿ ಸಮೂಹಗಳೆಲ್ಲ ಶ್ರೀ ವಿಭೂತಿಯ ಪಡೆದು ಧರಿಸಿ, ಸದ್ಭಕ್ತಿಪಥವ ಸೇರಿದರಯ್ಯ. ನಮ್ಮ ಶರಣಗಣಂಗಳು ಆ ಶಿವನ ಚಿತ್ಕಾಂತಿಯ ಬಹಿಷ್ಕರಿಸಿ, ಶ್ರೀಗುರುಲಿಂಗಜಂಗಮದ ಚಿದ್ಬೆಳಗನೆ ಹೆಪ್ಪಹಾಕಿ, ಚಿದಾಂಡವೆಂಬ ಘಟ್ಟಿಯ ಮಾಡಿ, ನಿಷ್ಕಲ ನಿಶ್ಶೂನ್ಯಮೂರ್ತಿಯ ಚರಣಜಲವ ವೇದ್ಥಿಸಿ, ಮಹಾಮಂತ್ರವ ಸ್ಥಾಪಿಸಿ, ಶ್ರೀಗುರುಲಿಂಗಜಂಗಮದ ಸ್ಪರ್ಶದಿಂದ ತತ್ವಸ್ಥಾನಂಗಳಲ್ಲಿ ಶಿವಲೋಕದ ಶಿವಗಣಂಗಳು, ರುದ್ರಲೋಕದ ರುದ್ರಗಣಂಗಳು, ನಾಗಲೋಕದ ನಾಗಗಣಂಗಳು, ದೇವಲೋಕದ ದೇವಗಣಂಗಳು, ಶಾಂಭವಲೋಕದ ಶಾಂಭವಗಣಂಗಳು, ಮತ್ರ್ಯಲೋಕದ ಮಹಾಗಣಂಗಳೆಲ್ಲ ಧರಿಸಿ ಜ್ಯೋತಿರ್ಮಯವಾದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಭಾಭೂತಿಯೆ ಸರ್ವಾಚಾರಸಂಪದಕ್ಕೆ ಮೋಕ್ಷದ ಕಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ತತ್ತಿಯೊಳಗಣ ಪಕ್ಷಿಯಂತೆ, ಎತ್ತಲೆಂದರಿಯದೆ ಅಜ್ಞಾನದ ಕತ್ತಲೆಯೊಳಗೆ ಸಿಕ್ಕಿ ದುಃಖಗೊಳುತ್ತಿಹರೆಲ್ಲರು. ದಿವಾ ರಾತ್ರಿ ಇಂತು ದುಃಖವನನುಭವಿಸುತ್ತ, ಕಾಯುವ ಹೊತ್ತು ಬಳಲುವ ಜೀವರುಗಳು, ತಾವಾರೆಂದರಿಯದೆ ನೋವುತ್ತ ಬೇವುತ್ತ ಸಾವುತ್ತಿರ್ಪರವರಿಗಿನ್ನೆಂದಿಂಗೆ ಮುಕ್ತಿಯಹುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಅಂತರಂಗದಲ್ಲಿ ಜ್ಞಾನಸಂಬಂಧವಾದ ಶರಣಂಗೆ ಅಜ್ಞಾನದ ಭಯವುಂಟೇನಯ್ಯ ? ಅಜ್ಞಾನಭಯವಳಿದು ನಿಶ್ಚಿಂತ ನಿರಾಕುಳಲಿಂಗದಲ್ಲಿ ಕೂಡಬಲ್ಲಾತನೆ ಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾರ್ಯಕಾರಣವಾದ ತತ್ತ್ವವಿತತ್ತ್ವಂಗಳೆಲ್ಲ ತೋರಿಯಡಗುವ ಇಂದ್ರಚಾಪದಂತೆ, ಸಾವಯ ನಿರವಯವಾಗಿ, ಉಂಟಿಲ್ಲವೆಂಬ ರೂಪು ನಿರೂಪುಗಳೆಲ್ಲ ಅಜ್ಞಾನವಶದಿಂದ ತೋರುತ್ತಿಹವಾಗಿ ಅಂತಪ್ಪ ಅಜ್ಞಾನದ ಬಲುಹಿಂದ, ನಾನು ನನ್ನದೆಂಬ ಅಹಂಕಾರ ಮಮಕಾರ ಮೊದಲಾದವೆಲ್ಲವೂ ತೋರುತ್ತಿಹವು. ಇಂತಪ್ಪ ಅಹಂಕಾರ ಮಮಕಾರ ಮೊದಲಾದವೆಲ್ಲವ ನೇತಿಗಳೆವುದೇ ಬ್ರಹ್ಮಜ್ಞಾನವು. ಅಂತಪ್ಪ ಬ್ರಹ್ಮಜ್ಞಾನಿಯಾದ ಶರಣನಲ್ಲಿ ಏನೂ ತೋರಿಕೆಯಿಲ್ಲದೆ ಜ್ಞಾನ ಜ್ಞೇಯಂಗಳೇಕವಾಗಿ, ಜ್ಞಾನ ನಿಃಪತಿಯಾದುದೇ ಲಿಂಗೈಕ್ಯವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹಸಿಹಂದರದಿ ಪಡೆದ ಗಂಡನ ವಂಚಿಸಿ, ವಿಷಯಾತುರದಿ ಪಿಸುಣಮಾನವರನಪ್ಪುವ ಹಾದರಗಿತ್ತಿಯೆಂತೆ, ಪಂಚಕಳಸವಿಕ್ಕಿ ದೇವಭಕ್ತರ ನಡುವೆ ಹಸ್ತಮಸ್ತಕ ಸಂಯೋಗವ ಮಾಡಿ ಗುರುಕರುಣಿಸಿ ಕೊಟ್ಟ ಪ್ರಾಣಲಿಂಗವನವಿಶ್ವಾಸವ ಮಾಡಿ, ಕ್ಷೇತ್ರ ಜಾತ್ರಿ ಲಿಂಗವ ಕಂಡು, ವಿಶ್ವಾಸವಿಟ್ಟು ಎರಗುವ ಪಂಚಮಹಾಪಾತಕರ ನೋಡಾ ! ಸಾಕ್ಷಿ :``ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಂ ವಿಶೇಷಯೇತ್ | ಪ್ರಸಾದನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಮತ್ತೊಮ್ಮೆ ಗ್ರಂಥಸಾಕ್ಷಿಯ ಕೇಳು ಮುಂದರಿಯದ ಮಾನವ. ಸಾಕ್ಷಿ :``ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ| ಶಿವಜ್ಞಾನಂ ನ ಜಾನಂತಿ ಸರ್ವತೀರ್ಥಂ ನಿರರ್ಥಕಂ ||'' ಎಂದುದಾಗಿ. ಇಂತೆಂಬುದನರಿಯದೆ, ಅಜ್ಞಾನದ ಭ್ರಾಂತಿಯಲ್ಲಿ ಅನ್ಯಲಿಂಗವನಾಶ್ರಯಿಸುವ ಕುನ್ನಿಗಳಿಗೆ ಗುರುವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲವಾಗಿ ಮುಕ್ತಿಯೆಂಬುದು ಎಂದಿಗೂ ಇಲ್ಲವಾಗಿ ರೌರವನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶರಣಸ್ಥಲದ ಕುರುಹಿನ ಮಾರ್ಗವನರಿಯದೆ, ನಾನು ಶರಣ ತಾನು ಶರಣನೆಂದು ನುಡಿವ ಕರ್ಮಜೀವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ತಾವು ಶರಣರಾದಡೆ ತಮ್ಮ ಚಿತ್ತಿನ ಕೊನೆಯಲ್ಲಿ ಮುಸುಕಿದ ಕತ್ತಲೆಯ ಕಳೆಯಬೇಕು. ತಾವು ಶರಣರಾದಡೆ ತಮ್ಮ ಆತ್ಮನ ಸುತ್ತಿದ ಅಷ್ಟಮದಂಗಳ ಕತ್ತರಿಗಡಿಯಬೇಕು. ತಾವು ಶರಣರಾದಡೆ ತಮ್ಮ ಲಿಂಗದಲ್ಲಿ ಅತ್ತಿತ್ತ ಹರಿದಾಡುವ ಮನವ ನಿಕ್ಷೇಪವ ಮಾಡಬೇಕು. ತಾವು ಶರಣರಾದಡೆ ನಿತ್ಯಾನಿತ್ಯವನರಿದು ತತ್ತಾ ್ವತತ್ತ್ವಂಗಳ ವ್ಯಕ್ತೀಕರಿಸಿ ಮಹಾಜ್ಞಾನದ ಮೊತ್ತದಲ್ಲಿ ಸುಳಿಯಬೇಕು. ಇಂತೀ ಭೇದವನರಿಯದೆ ತುತ್ತು ಸವಿಯೆಂದುಂಡು ಮರ್ತ್ಯದ ವಿಷಯಪ್ರಪಂಚಿನ ಸುಖದಲ್ಲಿ ವ್ಯವಹರಿಸಿ, ಅಜ್ಞಾನದ ಕತ್ತಲೆಯಲ್ಲಿ ಸೆರೆಯ ಸಿಕ್ಕಿ ಮುಂದುಗಾಣದೆ ಮುಕ್ತಿಯ ಹೊಲಬುದಪ್ಪಿ ಹೋಗುವ ವ್ಯರ್ಥಪ್ರಾಣಿಗಳ ಕಂಡು ನಗುತಿರ್ದನು ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಆದಿ ಮಧ್ಯಾವಸಾನಂಗಳಿಂದತ್ತತ್ತಲಾದ ಶಿವಾಂಗರೂಪ ತಾನೆಂದರಿಯದೆ, ನಿತ್ಯ ನಿರ್ಗುಣ ನಿರವಯ ಅಗಣಿತ ಅಕ್ಷಯ ತಾನೆಂದರಿಯದೆ, ನಿತ್ಯೋದಿತ ಸ್ವಯಂಪ್ರಕಾಶ ತಾನೆಂದರಿಯದೆ, ಸರ್ವಗತ ಸರ್ವಜ್ಞ ಸರ್ವಶಕ್ತಿಯನುಳ್ಳ ಪರಮಾತ್ಮ ತಾನೆಂದರಿಯದೆ, ಮಹದಾದಿ ತತ್ತ್ವಂಗಳ ಮೇಲಿಹ ಸಚ್ಚಿದಾನಂದರೂಪ ತಾನೆಂದರಿಯದೆ, ಅಜ್ಞಾನದ ಬಲದಿಂದ ಅಹಂಕಾರವಶನಾಗಿ, ನಾನು ಕರ್ತನು, ನಾನು ಭೋಕ್ತನೆಂದು ಬಗೆದು, ಇಲ್ಲದ ಮಾಯಾ ಮೋಹರೂಪಾದ ಕರ್ಮಜನ್ಯ- ಸಂಸಾರವ ಹೊಂದಿಸಿಕೊಂಡು, ತನ್ನ ನಿಜಸ್ವರೂಪವನರಿಯದೆ, ಎಂದೆಂದೂ ಭವದಲ್ಲಿ ಬಳಲುತ್ತಿಹರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ, ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ, ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
--------------
ಬಸವಣ್ಣ
ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ. ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ, ಮೀರಿನಿಂದ ವಿರಕ್ತನ ವಿಚಾರದ ಭೇದವ. ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ, ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು, ಆ ಚಿನ್ಮಂತ್ರ ಬಲದಿಂದ ಊಧ್ರ್ವಕ್ಕೆ ಮುಖವ ಮಾಡಿ, ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು. ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು. ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ, ಪ್ರಸಾದಮಂತ್ರವ ಪಡೆದು, ಸದ್ಭರ್ಮರೂಪದಿಂದಿರಬೇಕು. ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು, ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶ್ರೀ ಗುರುಲಿಂಗಜಂಗಮದ ಪಾದೋದಕದಿಂದ ತನುವಿನ ಜಡತ್ವವಳಿದು ಶಿವಭಕ್ತಿಯ ಪಥವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಇಂದ್ರಿಯಂಗಳ ಜಡತ್ವವಳಿದು ಲಿಂಗೇಂದ್ರಿಯಂಗಳ ಮಾಡುವುದಯ್ಯಾ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಕರಣಂಗಳ ಕಾಮವಿಕಾರವಳಿದು ಲಿಂಗನಡೆ, ಲಿಂಗನುಡಿ, ಲಿಂಗನೋಟ, ಲಿಂಗಕೂಟ, ಲಿಂಗಭೋಗ, ಲಿಂಗಾಚಾರವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಪ್ರಾಣನ ಪ್ರಪಂಚು ಸಂಚಲಗುಣವಳಿದು ಮಂತ್ರಧ್ಯಾನದಲ್ಲಿ ನಿಲಿಸುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಅಜ್ಞಾನದ ಜಡತ್ವವಳಿದು ಸುಜ್ಞಾನಸುಖವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ದುರ್ವರ್ತನೆ ಗುಣವಳಿದು ಸದ್ವರ್ತನೆಗುಣವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ದುರಾಚಾರ ದುರ್ಮಾರ್ಗವ ಹರಿದು ಸರ್ವಾಚಾರ ಸಂಪತ್ತಿನಾಚರಣೆಯ ಮಾರ್ಗವ ತೋರುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಬಹುಜನ್ಮದ ಪರಮಪಾತಕದ ಮಹಾಪಾಪವ ತೊಳದು ನಿರ್ಮಲ ಲಿಂಗಶರೀರವೆನಿಸುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಜೀವನ ಜಡತ್ವವಳಿದು ಅಜಡಸ್ವರೂಪವ ಮಾಡಿ, ಗಣ ಸಮ್ಮೇಳನದಲ್ಲಿರಿಸುವುದಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಮಲ ಮಾಯಾ ಕರ್ಮಪಾಶವ ಹರಿದು ನಿರ್ಮಲ ನಿರ್ಮಾಯ ನಿಷ್ಕರ್ಮ ಸ್ವರೂಪವ ಮಾಡಿ, ಚಿಜ್ಜ್ಯೋತಿಸ್ವರೂಪವೆಂದೆನಿಸುವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಾತ್ಪರ ದೇವಲೋಕದ ದೇವಗಂಗಾಜಲ, ಶಿವಲೋಕದ ಶಿವಗಂಗಾಜಲ, ಶಾಂಭವಲೋಕದ ಪರಮಗಂಗಾಜಲವಾಗಿ ನೆಲಸಿರ್ಪುದು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಬಟ್ಟಲೊಳಗಣ ಉದಕವ ತೆಗೆದುಕೊಂಡು ಲಿಂಗದ ಮೇಲೆ ನೀಡಿ, ಜಿಹ್ವೆಯಲ್ಲಿ ಸ್ವೀಕರಿಸಿದಲ್ಲಿಗೆ ಗುರು ಪಾದೋದಕವು. ಮೊದಲು ನಿರೂಪಿಸಿದ ಗುರುಪಾದೋದಕದಿಂದ ಆವ ಪದವಿಯೆಂದಡೆ: ಧರೆಯ ಜನನದ ಅಜ್ಞಾನದ ಭವತ್ವವಳಿದು, ಶಿವಜ್ಞಾನವ ಕರುಣಿಸಿ ಕೊಡುವುದು. ಲಿಂಗಪಾದೋದಕದಿಂದ ಆವ ಪದವಿಯೆಂದಡೆ: ಇಹಲೋಕದ ತನುಭೋಗವಪ್ಪ ಪ್ರಾರಬ್ಧಕರ್ಮವಳಿವುದು, ಶಿವಲೋಕದಲ್ಲಿ `ಇತ್ತಬಾ' ಎಂದೆನಿಸಿಕೊಂಬ ಮನ್ನಣೆಯ ಪದವಿಯಪ್ಪುದು, ಆ ಬಟ್ಟಲಲೆತ್ತಿ ಸಲಿಸಿದ ಜಂಗಮಪಾದೋದಕದಿಂದ ಆವ ಪದವಿ ಎಂದಡೆ: ಇಹಪರಕ್ಕೆ ಎಡೆಯಾಡುವ ಅವಸ್ಥೆಗಳನು, ಪರತತ್ವವಾದ ಜಂಗಮವನು ಐಕ್ಯಮಾಡಿ ಅರಿವಡಿಸಿಕೊಂಡಿಪ್ಪನು. ಇಂತು ಗುರುಪಾದೋದಕ, ಲಿಂಗಪಾದೋದಕ, ಜಂಗಮಪಾದೋದಕ, ತ್ರಿವಿಧ. ಉಳಿದ ಏಳು ಉದಕದೊಳಗೆ ಸ್ಪರ್ಶನೋದಕ ಅವಧಾನೋದಕ ಇವೆರಡು, ಆ ಲಿಂಗದ ಮಸ್ತಕದ ಮೇಲೆ ನೀಡಿ, ಅಂಗುಲಿಗಳ ಜಿಹ್ವೆಯಲ್ಲಿ ಇಟ್ಟುಕೊಂಡಂತಹ ಗುರುಪಾದೋದಕದಲ್ಲಿ ಸಂಬಂಧವು ಅಪ್ಯಾಯನೋದಕ, ಹಸ್ತೋದಕ ಇವೆರಡು, ಲಿಂಗವನೆತ್ತಿ ಸಲಿಸಿದಂತಹ ಲಿಂಗಪಾದೋದಕದಲ್ಲಿ ಸಂಬಂಧವು ಪರಿಣಾಮೋದಕ ನಿರ್ನಾಮೋದಕ ಇವೆರಡು, ಬಟ್ಟಲೆತ್ತಿ ಸಲಿಸಿದಂತಹ ಜಂಗಮ ಪಾದೋದಕದಲ್ಲಿ ಸಂಬಂಧವು. ಸತ್ಯೋದಕ ಬಟ್ಟಲ ಖಂಡಿತ ಮಾಡಿದಲ್ಲಿಗೆ ಸಂಬಂಧವು ಈ ಹತ್ತು ಪಾದೋದಕವು ಮಹತ್ಪಾದದಲ್ಲಿ ಸಂಬಂಧವು ಧೂಳಪಾದೋದಕ, ದಶವಿಧ ಪಾದೋದಕ ಸಂಬಂಧವು ಕ್ರಿಯಾಪಾದೋದಕದಲ್ಲಿ ನೋಡಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
-->