ಅಥವಾ

ಒಟ್ಟು 38 ಕಡೆಗಳಲ್ಲಿ , 16 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಸಭೆ ನೆರೆದಲ್ಲಿ ಬ್ರಹ್ಮವಿತ್ತುಗಳು ಬ್ರಹ್ಮತ್ವವಡೆದು, ತಮ್ಮ ವಚನಬ್ರಹ್ಮರೆನಿಸಿಕೊಂಡು ನೆಮ್ಮುವರು ವಿಷ್ಣುವನು- ತಮ್ಮ ದೈವವ ಬಿಡುವುದಾವುದುಚಿತ ವಿಷ್ಣು ಶಿವಭಕ್ತನಾಗಿ ನಿಷ್ಠೆಯಿಂದ ಕಣ್ಣನಿತ್ತು ಹಡೆದನು ಶಿವಭಕ್ತಿಯಿಂದ. ಕಷ್ಟಜಾತಿ ಜೀವಿಗಳಿಗೆ ಮಟ್ಟಿ ಎಂತು ಬಂದತ್ತೊ ! ಮುಟ್ಟರೊಂದುವನು ಮೂವಿಧಿಬಟ್ಟರೊ ! ಹುಸಿವನೆ ಹೊಲೆಯನೆಂದು ವಚನವುಂಟು ಲೋಕದಲ್ಲಿ. ಹುಸಿದಜನ ಶಿರ ಹೋಯಿತ್ತಾದಿಯಲ್ಲಿ, ಎಸವೋದ ಕಿರುಪಶುವನುಸರಲೀಯದೆ ವಿ[ದಾರಿ]ಸಿ ತಿಂಬ ಜನ್ಮ ಅದಾವ ಫಲವೋ. ದಕ್ಷ ಯಾಗವ ಮಾಡಿ ನಿಕ್ಷೇತ್ರ ನೆರೆದ ಅಕಟಕಟಾ, ಕೇಳಿಯೂ ಏಕೆ ಮಾಣಿರೊ ಮಮಕರ್ತ ಕೂಡಲಸಂಗನ ಶರಣರು ಅಕ್ಷಯರದ್ಥಿಕರು, ವಿಪ್ರರು ಕೀಳು ಜಗವೆಲ್ಲರಿಯಲು !
--------------
ಬಸವಣ್ಣ
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ, ಆ ಗುಣ ಭಾವವೋ, ನಿರ್ಭಾವವೋ ? ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ, ಉಭಯದ ಗೊತ್ತು ಅದೇನು ಹೇಳಾ. ಬೀಜದ ಸಸಿಯ ಒಳಗಣ ಬೇರಿನಂತೆ, ಅದಾವ ಠಾವಿನ ಕುರುಹು ಹೇಳಾ. ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ತಾವು ಗುರುವೆಂದು ಮುಂದಣವರಿಗನುಗ್ರಹವ ಮಾಡುವರಯ್ಯಾ, ತಾವು ಗುರುವೆಂತಾದರೊ ! ಎಲ್ಲರಿಗೆಯೂ ಒಂದೇ ದೇಹ. ``ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ ಆತ್ಮಾಕಾಯಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಯಂ' ಎಂದುದಾಗಿ, ಗುರುವೆಂಬುದು ತಾನು ಪರುಷವು ಆ ಪರುಷವು ಮುಟ್ಟಲೊಡನೆ ಉಳಿದ ಲೋಹಂಗಳು ಸುವರ್ಣವಾದುವಲ್ಲದೆ, ಆ ಪರುಷವೆ ಆಗಲರಿಯವು_ ಅದು ಗುರುಸ್ಥಲವಲ್ಲ ನಿಲ್ಲು ಮಾಣು. ಗುರುವೆಂಬುದು ತಾನು ಸ್ವಯಂ ಜ್ಯೋತಿಪ್ರಕಾಶವು, ಅಂತಪ್ಪ ಸ್ವಯಂಜ್ಯೋತಿ ಪ್ರಕಾಶವ ತಂದು ಪರಂಜ್ಯೋತಿಯ ಹೊತ್ತಿಸಿದಡೆ, ಆ ಜ್ಯೋತಿ ತನ್ನಂತೆ ಮಾಡಿತ್ತು. ಅದಾವ ಜ್ಯೋತಿಯೆಂದಡೆ ಪಶ್ಚಿಮಜ್ಯೋತಿ. ಆ ಪಶ್ಚಿಮಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು ಸುಖಿಯಾದೆನು. ನಾಲ್ಕು ವೇದಾರ್ಥ:ಅಜಪಗಾಯತ್ರಿ. ಅಜಪಗಾಯತ್ರಿಯರ್ಥ:ಪ್ರಾಣಾಯಾಮ. ಪ್ರಾಣಾಯಾಮದಿಂದ ಪ್ರಾಣಲಿಂಗ ಸಂಬಂಧವ ಮಾಡೂದು. ಇಷ್ಟರಲ್ಲಿ ತಾನು ಸ್ವತಂತ್ರನಾದಡೆ, ಇಷ್ಟಲಿಂಗವನಾರಿಗಾದರೂ ಕೊಡುವುದು. ಇಲ್ಲದಿದ್ದರೆ ಅಂಧಕನ ಕೈಯ ಹೆಳವ ಹಿಡಿದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ
--------------
ಚನ್ನಬಸವಣ್ಣ
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ? ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ? ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ? ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ? ಅದು ನುಡಿವಡೆ ಸಮಯಕ್ಕೆ ದೂರ. ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ, ಅದು ಪರಿಭ್ರಮಣ ಭ್ರಾಂತಿ. ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ. ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು, ಅದೇತಕ್ಕೂ ಒಡಲಿಲ್ಲದಿಪ್ಪುದು, ಕಾಮಧೂಮ ಧೂಳೇಶ್ವರ ತಾನು ತಾನೆ.
--------------
ಮಾದಾರ ಧೂಳಯ್ಯ
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎನ್ನ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸಕಲದ್ರವ್ಯಂಗಳೆಂದು ಕಲ್ಪಿಸಿ, ಇದಿರಿಟ್ಟು ಅರ್ಪಿಸಿಕೊಂಬುದು, ಅರ್ಪಿಸಿಹೆನೆಂಬುದು, ಅದಾವ ಚಿತ್ತ ? ಅದು ಉದಕ ವರ್ಣದ ಭೇದ, ವರ್ಣಕೂಟದ ಭಾವ. ಲೆಪ್ಪವ ಲಕ್ಷಿಸಿದಂತೆ, ಅದೆಂತೆಯಿದ್ದಿತ್ತು ಚಿತ್ತವಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕಣ್ಣು ನೋಡಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಕಿವಿ ಕೇಳಿ ಅರ್ಪಿಸಿದ ಪ್ರಸಾದ ಅದಾವ ಲಿಂಗಕ್ಕೆ ? ಘ್ರಾಣ ವಾಸಿಸಿ ಅರ್ಪಿಸಿದುದು ಅದಾವ ಲಿಂಗಕ್ಕೆ ? ಜಿಹ್ವೆಯ ಕೊನೆಯಲ್ಲಿ ಸವಿದು ಅರ್ಪಿಸಿದುದು ಅದಾವ ಲಿಂಗಕ್ಕೆ ? ಕರ ಮುಟ್ಟಿದ ಸೋಂಕಿನ ಸುಖ ಅದಾವ ಲಿಂಗಕ್ಕೆ ? ಇಂತೀ ಪಂಚೇಂದ್ರಿಯಂಗಳಲ್ಲಿ ಅರ್ಪಿಸಿಕೊಂಬ ಆತ್ಮನ ತೃಪ್ತಿ ಐದೋ ಮೂರೋ ಬೇರೆರಡೋ ಏಕವೋ ? ಎಂಬುದ ನಿಧಾನಿಸಿ ಬಹುವೆಜ್ಜದ ಕುಂಭದಲ್ಲಿ ಅಗ್ನಿಯನಿರಿಸಿ ಉರುಹಲಿಕೆ ವೆಜ್ಜ ವೆಜ್ಜಕ್ಕೆ ತಪ್ಪದೆ ಕಿಚ್ಚು ಹೊದ್ದಿ ತೋರುವದು ವೆಜ್ಜದ ಗುಣವೋ ? ಒಂದಗ್ನಿಯ ಗುಣವೋ ? ಇಂತೀ ಗುಣವ ನಿಧಾನಿಸಿಕೊಂಡು ನಿಜಪ್ರಸಾದವ ಕೊಂಬ ಸ್ವಯಪ್ರಸಾದಿಗೆ ತ್ರಿವಿಧಪ್ರಸಾದ ಸಾಧ್ಯವಪ್ಪುದಲ್ಲದೆ ವರ್ತಕಪ್ರಸಾದಿಗಳಿತ್ತಲೆ ಉಳಿದರು. ದಹನ ಚಂಡಿಕೇಶ್ವರಲಿಂಗಕ್ಕೆ ಅರ್ಪಿತ ಮುಟ್ಟದೆ ಹೋಯಿತ್ತು.
--------------
ಪ್ರಸಾದಿ ಲೆಂಕಬಂಕಣ್ಣ
ಬೆಟ್ಟವ ನೆಮ್ಮಿದಡೆ ಕಟ್ಟಿಗೆಯ ತಾಳುವದು, ಅದಾವ ಅಚ್ಚರಿ ಎನಿಸುವದು ? ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವದು, ಅದಾವ ಅಚ್ಚರಿ ಎಂದೆನಿಸುವದು ? ಪರಕಾಯವ ತೊಟ್ಟಿರ್ದಲ್ಲಿ ಅಚ್ಚರಿಗೆ ಅರಿಬಿರಿದೇಕೆ ? ನಿಮ್ಮುವ ಕಾರುಣ್ಯವನಾಗಿರ್ದಲ್ಲಿ ಎನಗೆಲ್ಲೆಲ್ಲಿ ಸುಖವಲ್ಲಲ್ಲಿಯೂ ನೀವೆ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುದೇವಯ್ಯಾ, ಪ್ರಭುದೇವರ ಕಾರುಣ್ಯ ಪ್ರಸಾದದಿಂದ ಆನು ಬದುಕಿದೆನು ಕಾಣಾ, ಸಂಗನಬಸವಣ್ಣ.
--------------
ಮರುಳಶಂಕರದೇವ
ಕೂಲಿ ಕೃಷಿ ಕಾಯಕಂಗಳಿಂದ ಮಾಡುವ ಗುರುಲಿಂಗಜಂಗಮದ ಸೇವೆ, ಅದಾವ ತೆರನೆಂದರಿದು, ಭಾವ ಶುದ್ಧವಾಗಿ ಮಾಡುವ ಸುಕಾಯಕವಂತನಿರವು ಎಂತುಟೆಂದಡೆ : ಮಾಡಿಕೊಂಡ ಕೃತ್ಯದಲ್ಲಿ ಆರಿಗೂ ಒಡಲೆಡೆಗೂಡದೆ, ಕೊಂಡುದು ಪ್ರಸಾದ, ನಿಂದುದು ಸಯಿದಾನವೆನ್ನದೆ, ಉಭಯ ಪ್ರತಿಪಾಕದಲ್ಲಿ ಆದ ಸಯಿದಾನಕ್ಕೆ ಸಂಕಲ್ಪವಳಿದು, ಉಭಯಭಾಂಡವೂ ಸರಿಯೆಂದ ಪ್ರಸಾದಿಗೆ ಪ್ರಸಾದವ ಎಡೆಮಾಡಬೇಕು. ಅದು ನಿರ್ಮಾಲ್ಯವಲ್ಲ, ಅದು ಲಿಂಗಾಂಗ, ಕುಂಭದಲ್ಲಿ ನಿಂದಪ್ರಸಾದ. ಇದರ ಸಂದೇಹವ ಹರಿದು ಕೊಂಬ ನಿರಂಗಪ್ರಸಾದಿಗೆ ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ ಸಾಕ್ಷಿಯಾಗಿ ನಮೋ ನಮೋ ಎನುತಿದ್ದೆನು.
--------------
ಹೊಡೆಹುಲ್ಲ ಬಂಕಣ್ಣ
ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ ಮಹಾಘನಲಿಂಗ ನಿಕ್ಷೇಪವಾಗಿದೆ! ಈ ದಿವ್ಯ ನಿಕ್ಷೇಪವ ಸಾಧಿಸುವಡೆ ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು. ಲಿಪಿಯಿಲ್ಲದೆ ತೆಗೆವಡಸದಳ. ಆ ಲಿಪಿಯ ವ್ರಯವ ಷಟ್‍ತತ್ವದ ಮೇಲೆ ನಿಶ್ಚಯಿಸಿ. ಆ ನಿಶ್ಚಯದೊಳಗೆ ಈ ನಿಕ್ಷೇಪದ ಕರ್ತೃವಿನ ಹೆಸರೋದಿತ್ತು. ತಿಳಿಯಲೋದುವನ್ನಬರ ಆತ ನಮ್ಮ ಹೆತ್ತಯ್ಯನೆಂಬ ಹೆಸರೋದಿತ್ತು. ಆ ಓದಿಕೆಯ ಕಡೆಯಕ್ಕರದೊಳಗೆಅಂಜನಸಿದ್ಧಿ ಹೇಳಿತ್ತು. ಅದಾವ ಪರಿಕ್ರಮದ ಅಂಜನವೆಂದಡೆ ಅದೆಮ್ಮ ಹೆತ್ತಯ್ಯ ಜಗದ್ವಿಲಾಸ ತದರ್ಥವಾಗಿ ಆ ತನ್ನ ಮೂಲಶಕ್ತಿ ಸಂಭೂತವಾದುದು. ಅಲ್ಲಿ ಹುಟ್ಟಿದ ದಿವ್ಯ ಚಿತ್ಕಳೆಯಿಂದೊಗೆದ ದಿವ್ಯಭಸಿತವೆಂದಿತ್ತು. ಆ ದಿವ್ಯ ಭಸಿತವೆಂಬ ದಿವ್ಯಾಂಜನವ ತಳೆದುಕೊಂಡು ಅತಿ ವಿಶ್ವಾಸದಿಂದ ನಾನೆನ್ನ ಹಣೆಯೆಂಬ ಕಣ್ಣಿಂಗೆಚ್ಚಿ ಸರ್ವಾಂಗವ ತೀವಲೊಡನೆ ಕರಸ್ಥಲದೊಳಗಣ ನಿಕ್ಷೇಪ ಕಣ್ದೆರವಾಯಿತ್ತು. ಆ ಕಣ್ದೆರವಾದ ನಿಕ್ಷೇಪವ ಮುಟ್ಟಹೋದಡೆ ಅಲ್ಲಿ ನಮ್ಮ ಹೆತ್ತಯ್ಯನ ಹೊಳಹ ಕಂಡು ತಳವೆಳಗಾದೆ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಕೈ ಕಲಸಿ ಬಾಯಿ ಉಂಡಲ್ಲಿ ಅದಾವ ಹಂಗೆಂದೆನಬಹುದೆ? ಪೂಜಿಸಿಕೊಂಬಲ್ಲಿ ಕರ್ತು, ಪೂಜಿಸುವಾತ ಭೃತ್ಯನೆ? ಅದು ಜಗದ ಆಗುಚೇಗೆಯನರಿವುದಕ್ಕೆ ಉಭಯ ನಾಮವಾಯಿತ್ತು. ಹಣ್ಣು ರಸದಂತೆ ಭಿನ್ನವಿಲ್ಲ. ಸದಾಶಿವಮೂರ್ತಿಲಿಂಗ ತಾನೆ.
--------------
ಅರಿವಿನ ಮಾರಿತಂದೆ
ಕಾರುಕನ ಕೈ ಮುಟ್ಟುವುದಕ್ಕೆ ಮುನ್ನವೆ, ಗುರುವಿನ ಕರ ಮುಟ್ಟುವುದಕ್ಕೆ ಮುನ್ನವೆ, ಮನಸಿಜನ ಮನ ಮುಟ್ಟುವುದಕ್ಕೆ ಮುನ್ನವೆ, ನಾಮ ರೂಪು ಬಹುದಕ್ಕೆ ಮುನ್ನವೆ, ಅದಾವ ರೂಪು ಎಂದರಿತಡೆ, ಆ ವಸ್ತು ಪ್ರಮಾಣಕ್ಕೆ ರೂಪಹ ಪರಿಯಿನ್ನೆಂತುಂಟು ? ಅದು ಭಾವಕ್ಕೆ ಅಗೋಚರ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಅಂಗದಲ್ಲಿ ಲಿಂಗ ವೇಧಿಸಿ ಪ್ರಾಣಕ್ಕೆ ಸಂಬಂಧವ ಮಾಡಬೇಕೆಂಬಲ್ಲಿ, ಅಂಗಕ್ಕೂ ಪ್ರಾಣಕ್ಕೂ ಲಿಂಗ ವೇಧಿಸುವುದಕ್ಕೆ ಹಾದಿಯ ಹೊಲಬು ಅದಾವ ಠಾವಿನಲ್ಲಿ ವೇಧಿಸುವುದು ಹೇಳಯ್ಯಾ ? ಆ ಅಂಗ ನೀರಬಾಗಿಲ ನೆಲನೆ ? ಮೆಳೆಯ ಸವರಿನ ಹಾದಿಯೆ ? ಹೋಹ ಹೊಲಬಿನ ಪಥವೆ ? ಈ ಅಪ್ರಮಾಣವಪ್ಪ ಲಿಂಗವ ಚಿತ್ತದ ಭೇದದಿಂದರಿತು ಆತ್ಮನ ದೃಷ್ಟದಲ್ಲಿ ಲಕ್ಷಿಸಿ, ಇದಿರಿಟ್ಟು, ಕರದ ಇಷ್ಟದಲ್ಲಿ ನಿರೀಕ್ಷಣೆಯಿಂದ ನಿಜವಸ್ತುವ ನಿಕ್ಷೇಪಿಸಿ ಬೈಚಿಟ್ಟಲ್ಲಿ ಅಂಗಕ್ಕೂ ಪ್ರಾಣಕ್ಕೂ ಬೇರೆಡೆ ಲಿಂಗವಿಪ್ಪುದೆರಡಿಲ್ಲ. ಇದು ಕ್ರಿಯಾಲೇಪಸ್ಥಲ ಇದು ಸದ್ಭಾವ ಸಂಬಂಧ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಸ್ವಕ್ಷೇತ್ರದಲ್ಲಿ ಒಂದು ಕ್ಷೇತ್ರಗೇರಿ ಹುಟ್ಟಿತ್ತು. ಅದು ಮೊದಲಲ್ಲಿ ಸುರಾಪಾನದ ಮನೆ. ಕಡೆಯಲ್ಲಿ ಮಾಂಸ ಕಟಕರ ವಾಸ. ನಡುಮಧ್ಯದಲ್ಲಿ ಶೀಲವಂತರ ಆಲಯವ ಕಂಡೆ. ಅದಾವ ಶೀಲವೆಂದು ತಾನರಿದಡೆ ಭಾವಭ್ರಮೆಯಿಲ್ಲ. ನಿಃಕಳಂಕ ಮಲ್ಲಿಕಾರ್ಜುನಲಿಂಗ ತಾನು ತಾನೆ.
--------------
ಮೋಳಿಗೆ ಮಾರಯ್ಯ
ವೇಳೆಯನರಿದು ಧ್ವನಿದೋರುವ ತಾಮ್ರಚೂಡಂಗೆ ಅದಾವ ಜ್ಞಾನ ? ಮಧುರರಸಂಗಳಿದ ಠಾವನರಿದೆಯಿದುವ ಪಿಪೀಲಿಕಂಗೆ ಅದಾವ ಜ್ಞಾನ ? ತಾನುಂಡು ನೆನದಡೆ ಶಿಶು ತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ ? ಅರಿದು ನಡೆದಡೆ ವೇದವೇದ್ಯನು, ಅರಿದು ನಡೆದಡೆ ಶಾಸ್ತ್ರಸಂಬಂಧಿ, ಅರಿದು ನಡೆದಡೆ ಪುರಾಣಪುಣ್ಯವಂತನು, ಅರಿದು ನಡೆದಡೆ ಸಕಲಾಗಮಭರಿತನು. ಇಂತೀ ಪಂಚಾಕ್ಷರಿಯ ಮೂಲಷಡಕ್ಷರಿಯ ಭೇದ. ಜಗಕ್ಕಾಧಾರವಾರೆಂಬುದ ಏಕಮೇವನದ್ವಿತೀಯನೆಂಬುದ ತಿಳಿದು, ಸೋಹಂ ಕೋಹಂ ಎಂಬುದ ತಿಳಿದು, ಆ ನಿಜವೆ ವಸ್ತುವಿಗೊಡಲೆಂಬುದ ಪ್ರಮಾಣಿಸಿ, ನುಡಿದು ನಡೆಯಬಲ್ಲವನೆ ವೇದವೇದ್ಯನು ಕಾಣಾ, ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.
--------------
ವೇದಮೂರ್ತಿ ಸಂಗಣ್ಣ
ಇನ್ನಷ್ಟು ... -->