ಅಥವಾ

ಒಟ್ಟು 17 ಕಡೆಗಳಲ್ಲಿ , 11 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುವನರಿದು ಅನುಭಾವಿಯಾದ ಕಾರಣ ಸಮ್ಯಗ್‍ಜ್ಞಾನದಿಂದ ತನ್ನನರಿದು, ತನ್ನನೆ ಶಿವಭಾವವಾಗಿ ಕಂಡು ಆ ಶಿವಭಾವದಲ್ಲಿ ತನ್ನಹೃದಯವ ಸಮ್ಮೇಳವ ಮಾಡಿದ ಶರಣನು. ತಾನೆ ಶಿವನ ಪರಮೈಶ್ವರ್ಯಕ್ಕೆ ಭಾಜನವಾಗಿ ಸರ್ವಲೋಕವನು ಶಿವನೊಳಗಡಗಿಸಿದನಾಗಿ, ಆ ಶಿವನ ತನ್ನೊಳಗಡಗಿಸಿ, ಆ ಶಿವನಲ್ಲಿ ಮನವ ನಿಲಿಸಿ ನೆನೆವುತ್ತಿರಲು ಆ ನೆನೆವ ಮನಸಿನ ಲಯಕ್ಕೆ ಭಾಜನವಾದಾತ ಶಿವನೆಂದರಿದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಈಶ್ವರನು ಅಲಂಕೃತರೂಪಾಗಿ ಜಗವ ತಾಳಿ ಬಂದಲ್ಲಿ ಮಾಯೆಯೆಂಬ ಶಕ್ತಿ ಜ್ಯೋತಿ ಕಾಣದ ಮರೆಯಲ್ಲಿ ತಮವಡಗಿಪ್ಪ ಭೇದದಂತೆ. ಚಿತ್ತಶುದ್ಧವಿಲ್ಲದವರ ಕರ್ತೃ ಭೃತ್ಯ ಸಂಬಂಧ ಉಭಯಕ್ಕೂಸರಿ. ಅರಿದು ಮಾಡುವಲ್ಲಿ ಅವನ ಅನುವನರಿದು ಮಾಡಿಸಿಕೊಂಬಲ್ಲಿ ಲಾಗಿನ ಪಶುವಿನಂತೆ ಉಭಯಗುಣ ಭೇದ. ಉಭಯಸ್ಥಲ ನಿರತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಲೇಸೆನಿಸುವ ವಸ್ತುವ ಬೈತಿಡುವುದಕ್ಕೊಂದಾಶ್ರಯ ಬೇಕು. ಮನ ಘನವನಾಶ್ರಯಿಸುವುದಕ್ಕೆ, ಅನುವನರಿದು ನೆಮ್ಮುವುದಕ್ಕೆ, ಚಿದ್ಘನಲಿಂಗವೆಂಬ ಕುರುಹು ಬೇಕು. ಇದರಿಂದ ಬೇರೆ ಕಾಬ ಅರಿವಿಲ್ಲ. ಆ ಕುರುಹೆ ಅರಿವಿಗೆ ಆಶ್ರಯವಾದ ಕಾರಣ, ಕಾಲಾಂತಕ ಭೀಮೇಶ್ವರಲಿಂಗವುಕುರುಹುಗೊಂಡಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಪ್ರಸಾದವ ನೆಮ್ಮಿದ ಭಕ್ತನಲ್ಲಿ, ಪರಶಿವನು ಪ್ರಸನ್ನನಾಗಿರ್ಪನು. ಪಾದತೀರ್ಥವನರಿದು ವಿಶ್ವಾಸಿಸಿಕೊಂಬ ಭಕ್ತನಲ್ಲಿ, ಆ ಪರಶಿವನು ಪರಂಜ್ಯೋತಿ ಪ್ರಕಾಶವಾಗಿಪ್ಪನು. ಸಲುವ ಸೈದಾನದ ತೆರಪನರಿದು ಬಹ ಗುರುಚರದ ಅನುವನರಿದು, ಬಂದುದಕ್ಕೂ ಸಂದುದಕ್ಕೂ ಸಂದಿಲ್ಲದೆ ನಿಂದ ಭಕ್ತನ ಅಂಗಳವೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನನ ಮಂಗಳವಾಸ.
--------------
ಶಿವಲೆಂಕ ಮಂಚಣ್ಣ
ಕಾಯಗುಣವಿಡಿದು ಮಾಡುವನ್ನಕ್ಕ ಸತ್ಯಸದ್ಭಕ್ತನಲ್ಲ. ಜೀವಗುಣವಿಡಿದು ತಿರುಗುವನ್ನಕ್ಕ ಪರಶಿವರೂಪನಲ್ಲ. ಕ್ರೀಯನರಿದು ಆಚಾರದಲ್ಲಿ ನಿಂದು, ರಿಣಾತೂರ್ಯ ಮುಕ್ತ್ಯಾತೂರ್ಯ ಸ್ವ ಇಚ್ಫಾತೂರ್ಯವೆಂಬ ಮೂರುಮಾಟವ ಕಂಡು, ಭಕ್ತಿ ಜ್ಞಾನ ವೈರಾಗ್ಯವೆಂಬ ತ್ರಿವಿಧ ನಿಶ್ಚಯವನರಿದು, ಸುಮನ ವಚನ ಕಾಯ ತ್ರಿಕರಣ ಶುದ್ಧಾತ್ಮನಾಗಿ, ಆಪ್ಯಾಯನದ ಅನುವನರಿದು, ಸಮಯದಲ್ಲಿ ಮಾನ್ಯರ ಇರವನರಿತು ಕೂಡುವಲ್ಲಿ, ಇಂತೀ ಭಾವ ಸದ್ಭಕ್ತ ಸ್ಥಲ. ಹೆಣ್ಣು ಹೊನ್ನು ಮಣ್ಣಿನಲ್ಲಿ, ಸ್ತುತಿ ನಿಂದ್ಯಾದಿಗಳಲ್ಲಿ, ತಥ ಮಿಥ್ಯಂಗಳಲ್ಲಿ ವಿರಾಗನಾಗಿ, ಸುಖದುಃಖಗಳಲ್ಲಿ ಸರಿಗಂಡು ನಿಃಕಳಂಕನಾಗಿ ಚರಿಸಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನನೆಂಬೆನು.
--------------
ಮೋಳಿಗೆ ಮಾರಯ್ಯ
ಅನುಭಾವಿಯ ಭಕ್ತಿ ಗುರುವನರಿದು ಅನುವನರಿದು ಆರಾಧಿಸಿ ನಿಂದಿತ್ತು. ಅನುಭಾವಿಯ ಭಕ್ತಿ ಲಿಂಗವನರಿದು ಅನುವನರಿದು ಆರಾಧಿಸಿ ನಿಂದಿತ್ತು. ಅನುಭಾವಿಯ ಭಕ್ತಿ ಜಂಗಮವನರಿದು ಅನುವನರಿದು ಆರಾಧಿಸಿ ನಿಂದಿತ್ತು. ಅನುಭಾವಿಯ ಭಕ್ತಿ ತನ್ನನರಿದು ಅನುವನರಿದು ಆರಾಧಿಸಿ ನಿಂದಿತ್ತು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನಾದಡೆ ನಿರ್ವಂಚಕಭಾವದಿಂದೆ ತ್ರಿವಿಧಕ್ಕೆ ತ್ರಿವಿಧಪದಾರ್ಥವನರ್ಪಿಸಬೇಕು. ಮಹೇಶ್ವರನಾದಡೆ ತ್ರಿವಿಧವ ಬಯಸದಿರಬೇಕು. ಪ್ರಸಾದಿಯಾದಡೆ ಹುಲ್ಲುಕಡ್ಡಿ ದರ್ಪಣ ಮೊದಲಾದ ಸಕಲಪದಾರ್ಥಂಗಳ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳದಿರಬೇಕು. ಪ್ರಾಣಲಿಂಗಿಯಾದಡೆ ಪ್ರಪಂಚ ನಾಸ್ತಿಯಾಗಿರಬೇಕು. ಶರಣನಾದಡೆ ಸಕಲ ಭೋಗೋಪಭೋಗಂಗಳನು ತಾನಿಲ್ಲದೆ ಲಿಂಗಮುಖವನರಿದು ಕೊಡಬೇಕು. ಐಕ್ಯನಾದಡೆ ಸರ್ವವೂ ತನ್ನೊಳಗೆಂದರಿದು ಸರ್ವರೊಳಗೆಲ್ಲ ತನ್ನನೆ ಕಾಣಬೇಕು. ಇಂತೀ ಷಟ್‍ಸ್ಥಲದ ಅನುವನರಿದು ಆಚರಿಸುವ ಮಹಾಶರಣರ ಆಳಿನ ಆಳು ನಾನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಜಕೋಟಿ ಕಲ್ಪ ವರುಷದವರೆಲ್ಲರು ಹಿರಿಯರೆ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರು ಹಿರಿಯರೆ ? ನಡುಮುರಿದು ಗುಡುಗೂರಿ ತಲೆ ನಡುಗಿ ನೆರೆತೆರೆ ಹೆಚ್ಚಿ, ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ ಅಜ್ಞಾನಿಗಳೆಲ್ಲರು ಹಿರಿಯರೆ ? ಅನುವನರಿದು, ಘನವ ಬೆರಸಿ ಹಿರಿದು ಕಿರಿದೆಂಬ ಭೇದವ ಮರೆದು ಕೂಡಲಚೆನ್ನಸಂಗಯ್ಯನಲ್ಲಿ ಬೆರಸಿ ಬೇರಿಲ್ಲದಿಪ್ಪ ಹಿರಿಯತನ ನಮ್ಮ ಮಹಾದೇವಿಯಕ್ಕಂಗಾಯಿತ್ತು.
--------------
ಚನ್ನಬಸವಣ್ಣ
ಲಿಂಗ ಜಂಗಮವೆಂಬ ಸಕೀಲವ ಅರಿದು ಲಿಂಗಾರ್ಚನೆ ಜಂಗಮಾರ್ಚನೆಯ ಮಾಡಲು ಆ ಲಿಂಗ ಜಂಗಮದೊಳಡಗಿ, ಆ ಜಂಗಮ ಪರಾಪರವೆಂದರಿದು ತೋರಿತ್ತು_ ಆ ಜಂಗಮವೆಂಬ ಘನವು ನಿಮ್ಮೊಳಡಗಿದ ಕಾರಣ, ಗುಹೇಶ್ವರಾ, ನಿಮ್ಮ ಅನುವನರಿದು ಸಂಗನಬಸವಣ್ಣನು ತನ್ನ ಪ್ರಸಾದವನಿಕ್ಕಿದಡೆ ನಿಮ್ಮ ಪ್ರಮಥರೆಲ್ಲರು ಜಯ ಜಯ ಎನುತಿರ್ದರಾಗಿ ನಾನು ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಶೀಲದ ತುದಿಯ ಮೊದಲನರಿಯದೆ, ವ್ರತದಾಚರಣೆಯ ಕ್ರಮವನರಿಯದೆ, ಆಚಾರದ ನೆಲೆಯನರಿಯದೆ, ಬರಿದೆ ವ್ರತ ಶೀಲಾಚಾರವೆಂದೆಂಬಿರಿ. ವ್ರತಶೀಲಾಚಾರದ ಸ್ವರೂಪವನರಿಯದ, ಅದರಾಚರಣೆಯನರಿಯದ ಶೀಲವಂತರು ನೀವು ಕೇಳಿ ಭೋ. ತನುವಿನ [ಗುಣವ] ಮನದಲ್ಲಿಗೆ ತಂದು, ಆ ಮನದ ಅನುವನರಿದು, ಶುಚಿ ಶೀಲ ಉಚ್ಯತೆಯೆಂದುದಾಗಿ, ಸಚ್ಚರಿತ್ರವನುಳ್ಳ ಆಚಾರವೆ ಸ್ವರೂಪವಾದ ಘನಲಿಂಗವ ಬೆರಸಬಲ್ಲಡೆ ಅದು ಶೀಲ. ಮನದ ತನುವ ಮಹಾಘನದರುವಿನಲ್ಲಿಗೆ ತಂದು ಅರಿವಿನ ಆಚಾರವೆ ಗುರುಲಿಂಗಜಂಗಮ ಪ್ರಸಾದ ಪಾದತೀರ್ಥ ಭಕ್ತಿ ಎಂದರಿದು, ಅವರ ಸ್ವರೂಪವನರಿದು, ಆಚರಿಸಿದ ಘನ ಶರಣರ ಬೆರಸಬಲ್ಲಡೆ ಅದು ವ್ರತ. ಸದಾಚಾರ ನಿಯತಾಚಾರ, ಭಕ್ತ್ಯಾಚಾರ ಶಿವಾಚಾರ ಸಮಯಾಚಾರ ಗಣಾಚಾರವೆಂಬವುಗಳ ಸ್ವರೂಪವನರಿದು ಆಚರಿಸಬಲ್ಲಡೆ ಅದು ಆಚಾರ. ವ್ರತ ಶೀಲಾಚಾರದ ಅನುವನರಿಯದೆ, ಘನ ಶರಣರ ಬೆರಸದೆ, ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸದೆ ಬರಿದೆ ಅನುವಿನ ತನುವಿನ ಕೊನೆಯ ಮೊನೆಯ ಮೇಲಣ ಜ್ಯೋತಿಯ ತಮ ತಮಗೆ ಅರಿದೆಹೆನೆಂಬವರೆಲ್ಲರೂ ಅನುಮಾವನನರಿಯದೆ ಕೆಟ್ಟರು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನ ದೇವಯ್ಯಾ. ನಿಮ್ಮ ಶರಣರ ಅನುವನರಿದು, ಘನವ ಬೆರಸಬಲ್ಲ ಶರಣ ಸಂಗನಬಸವಣ್ಣನು, ಇಂತಪ್ಪ ಮಹಾಲಿಂಗವಂತರ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ ? ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ವಿೂಸಲು ಸೂಸಲಾಗಿ, ದೋಸೆ ಕಡಬು ಹೊಯ್ದು, ಹಬ್ಬವ ಮಾಡಿಹೆನೆಂಬ ಹೇಸಿಗಳ ಮಾತ ಕೇಳಲಾಗದು. ಅದೇಕೆ ಎಂದರೆ, ಲಿಂಗ ಜಂಗಮದ ಭಾಷೆ ಸಲ್ಲದಾಗಿ, ಇನ್ನು ವಿೂಸಲಾವುದೆಂದರೆ, ಭಾಷೆಗೇರಿಸಿದ ತನುವೆ ಅಡ್ಡಣಿಗೆ, ಘನವೆ ಹರಿವಾಣ, ಮನ ವಿೂಸಲೋಗರ, ಈ ಅನುವನರಿದು, ಮಹಾಲಿಂಗಕ್ಕೆ ಅರ್ಪಿತವ ಮಾಡುವನೆ ಸದ್ಭಕ್ತನು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮೂಲಾಧಾರದ ಮಂಟಪದ ಮನೆಯಮೇಲೆ ಲೀಲಾವಿಚಾರಮೂರ್ತಿಯ ಅನುವ ಕಂಡೆನು. ಆ ಅನುವನರಿದು ಮುಖರಸವನರಿದು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಪರಮನಪ್ಪಣೆಯಿಂದೆ ಧರೆಗಿಳಿದು ಬಂದು ಗುರುಲಿಂಗಜಂಗಮದ ಭಕ್ತಿಯನಳವಡಿಸಿಕೊಂಡು, ಷಟ್‍ಸ್ಥಲಬ್ರಹ್ಮದ ಅನುವನರಿದು ನೂರೊಂದು ಸ್ಥಳಕುಳಂಗಳ ಕರತಳಾಮಳಕವಾಗಿ ತಿಳಿದು, ನಿಜೈಕ್ಯಪಥದಲ್ಲಿ ನಿರ್ವಯಲಾದರು ಬಸವಣ್ಣ ಮೊದಲಾದ ಅಸಂಖ್ಯಾತ ಮಹಾಗಣಂಗಳು. ಅದೆಂತೆಂದೊಡೆ : ಸಂಗನಬಸವಣ್ಣನು ಕಪ್ಪಡಿಯಸಂಗಯ್ಯನೊಳಗೆ ಬಯಲಾದನು. ಅಕ್ಕಮಹಾದೇವಿ, ಪ್ರಭುದೇವರು ಶ್ರೀಶೈಲ ಕದಳಿಯ ಜ್ಯೋತಿರ್ಮಯಲಿಂಗದೊಳಗೆ ಬಯಲಾದರು. ಹಡಪದಪ್ಪಣ್ಣ, ನೀಲಲೋಚನೆತಾಯಿ ಮೊದಲಾದ ಕೆಲವು ಗಣಂಗಳು ತಮ್ಮ ಲಿಂಗದಲ್ಲಿ ಬಯಲಾದರು. ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಕಿನ್ನರಿಯ ಬ್ರಹ್ಮಿತಂದೆ ಮೊದಲಾದ ಉಳಿದ ಗಣಂಗಳು ಉಳಿವೆಯ ಮಹಾಮನೆಯಲ್ಲಿ ಮಹಾಘನಲಿಂಗದೊಳಗೆ ಬಯಲಾದರು. ಇಂತಪ್ಪ ಸಕಲಗಣಂಗಳಿಗೆ ಆಯಾಯ ಸ್ಥಾನದಲ್ಲಿ ನಿರವಯಲಪದವ ಕರುಣಿಸಿಕೊಟ್ಟಾತ ನೀನೊಬ್ಬನಲ್ಲದೆ ಮತ್ತಾರನು ಕಾಣೆನಯ್ಯಾ. ಇಂತಪ್ಪ ಸಕಲಗಣಂಗಳ ತೊತ್ತಿನಮಗನೆಂದು ಎನ್ನನೆತ್ತಿಕೊಂಡು ಸಲಹಿದಿರಾಗಿ ಎನಗೆ ನಿಜೈಕ್ಯ ನಿರವಯಲಪದವೆಲ್ಲಿಹುದೆಂದೊಡೆ : ಉತ್ಪತ್ತಿ ಸ್ಥಿತಿ ಪ್ರಳಯಂಗಳಿಗೆ ಹೊರಗಾದ ನಿಮ್ಮ ಪರಾತ್ಪರ ಪರಮ ಹೃದಯಕಮಲಕರ್ಣಿಕಾವಾಸಮಧ್ಯ ಸೂಕ್ಷ್ಮಬಯಲೊಳಗೆನ್ನ ನಿರವಯಲ ಮಾಡಿಕೊಳ್ಳಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->