ಅಥವಾ

ಒಟ್ಟು 16 ಕಡೆಗಳಲ್ಲಿ , 11 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆನು, ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ, ಅತತ್ವ ತತ್ವವಿವೇಕಭ್ರಮೆ, ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ, ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ ಆದಿಯಾದ ಸಪ್ತಕರ್ಮ ಬಂಧಭ್ರಮೆ, ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ, ಯೋಗದಾಸೆ ಸಿಲುಕುಭ್ರಮೆ, ಅಂತರ್ಮುಖಭ್ರಮೆ ಬಹಿರ್ಮುಖಭ್ರಮೆ, ಅನೃತಭ್ರಮೆ ಸತ್ಯಭ್ರಮೆ ನಿತ್ಯಭ್ರಮೆ, ವಾಗದ್ವೈತಭ್ರಮೆ, ಅದ್ವೈತಭ್ರಮೆ, ಮಂತ್ರಭ್ರಮೆ ತಂತ್ರಭ್ರಮೆ, ನಾಹಂ ಭ್ರಮೆ, ಕೋಹಂ ಭ್ರಮೆ, ಸೋಹಂ ಭ್ರಮೆ. ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ. ಕೂಡಲಚೆನ್ನಸಂಗಾ ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.
--------------
ಚನ್ನಬಸವಣ್ಣ
ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು. ನೀನೆತ್ತ ನಾನೆತ್ತಲೆಂದು_ ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ. ಸರ್ವೇಂದ್ರಿಯಂಗಳ ಸಂಚವ ಬಿಟ್ಟು, ಏಕೇಂದ್ರಿಯದಲ್ಲಿ ವಸ್ತುವ ಆಚರಿಸಬೇಕೆಂಬುದು ಅದೇನು ಹೇಳಾ. ಅಲ್ಲ ಅಹುದು, ಉಂಟು ಇಲ್ಲ ಎಂಬುದು ಗೆಲ್ಲ ಸೋಲಕ್ಕೆ ಹೋರುವುದು ಅದೇನು ಹೇಳಾ. ಅದು ಪಂಚಲೋಹದ ಸಂಚದಂತೆ ಹಿಂಚು ಮುಂಚಿನ ಭೇದ. ಅರಿದೆ ಮರೆದೆನೆಂಬುದು ಪರಿಭ್ರಮಣದ ಭೇದ. ಅರಿಯಲಿಲ್ಲ ಮರೆಯಲಿಲ್ಲ ಎಂಬುದು ಅದು ಪರತತ್ವದ ಭೇದ. ಇಂತೀ ಗುಣ ಭಾವಂಗಳ ಲಕ್ಷಿಸಿ, ದೃಷ್ಟಿ ಉಂಟೆಂದಲ್ಲಿ ಆತ್ಮ, ದೃಷ್ಟ ನಷ್ಟವಾಯಿತ್ತೆಂಬಲ್ಲಿಯೆ ಪರಮ. ಉಭಯದ ತೊಟ್ಟು ಬಿಟ್ಟಲ್ಲಿ, ನಿಜ ನಿಶ್ಚಯ ಅದೆಂತು ತಾನಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಆತ್ಮಕ್ಕೂ ಘಟಕ್ಕೂ ಶರಸಂಧಾನದಿಂದ ಆತ್ಮ ಬ್ರಹ್ಮರಂಧ್ರಕ್ಕೆ ಎಯ್ದುವುದಕ್ಕೆ ಮುನ್ನವೆ ಶಿರಚ್ಛೇದನವಾಗಲಿಕ್ಕೆ ಆ ಹಾಹೆ ಆತ್ಮ ಬಯಲ ಕೂಡುವುದನ್ನಕ್ಕ ಅದುವಭೇದ. ಇಂತೀ ಭೇದ. ಜೀವದ ಆಗುಚೇಗೆಯನರಿದು ಷಡಾಧಾರ ಮುಂತಾದ ದಶವಾಯುವ ಕಂಡು, ನವದ್ವಾರವ ಭೇದಿಸಿ, ಷೋಡಶ ಕಳೆಯಲ್ಲಿ ಮಗ್ನನಾಗಿ ನಿಂದಲ್ಲಿ, ತ್ರಿವಿಧಾತ್ಮದೊಳಗಾದ, ಪಂಚಭೂತಿಕದೊಳಗಾದ, ಪಂಚವಿಂಶತಿತತ್ವದೊಳಗಾದ, ಕ್ರೀ ನಿಃಕ್ರೀ ಧರ್ಮಂಗಳಲ್ಲಿ ಅರಿದೆ ಮರದೆನೆಂಬುದ ಸಾಧನೆಗೊಂಡು, ಪಿಂಡದಲ್ಲಿ ಅರಿದುನಿಂದುದು ಪಿಂಡಜ್ಞಾನ. ಆ ಜ್ಞಾನದಲ್ಲಿ ಸೂಕ್ಷ್ಮಾಂಗನಾಗಿ ಕಾರಣವ ಕೂಡಿಕೊಂಡು ಆ ಕಾರಣವಾದುದು ಜ್ಞಾನಪಿಂಡದ ಭೇದ. ಇಂತೀ ಪಿಂಡಜ್ಞಾನ ಜ್ಞಾನಪಿಂಡದ ಕೂಟ ಸದ್ಯೋಜಾತಲಿಂಗದ ನಿರುತದಾಟ.
--------------
ಅವಸರದ ರೇಕಣ್ಣ
ಕಂಡೆ ಕಾಣೆನೆಂಬುದು ಕಂಗಳ ಭ್ರಮೆ, ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ, ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ, ಓದು ವೇದಂಗಳ ಜಿನುಗು ಉದುಮನದ ಭ್ರಮೆ, ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ, ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.
--------------
ಆದಯ್ಯ
ಬಲ್ಲೆನು, ಒಲ್ಲೆ ಮರ್ತ್ಯದ ಹಂಗ, ಹಿಂದಣ ಮರವೆಯಿಂದ ಬಂದು ನೊಂದೆ, ಸಾಕು. ಇನ್ನು ಅರಿದೆ, ತ್ರಿವಿಧಪಾಶವ ಹರಿದೆ. ಗುಹೇಶ್ವರಾ, ಇನ್ನು ಮರ್ತ್ಯದ ಸುಖವ ಮನದಲ್ಲಿ ನೆನೆದೆನಾದಡೆ ನಿಮ್ಮಾಣೆ ನಿಮ್ಮ ರಾಣಿವಾಸದಾಣೆಯಯ್ಯಾ.
--------------
ಅಲ್ಲಮಪ್ರಭುದೇವರು
ಸ್ಥೂಲ ಸೂಕ್ಷ ್ಮ ಕಾರಣವೆಂಬ ತನುಗಳ ಭೇದಂಗಳ ಭೇದಿಸುವ ಪರಿಯನರಿದೆನಯ್ಯಾ ನಿಮ್ಮಲ್ಲಿ. ನೀ ಕಾರಣತನುವಾಗಿಪ್ಪಲ್ಲಿ ಅರಿದೆ. ಮಹಾಕಾರಣವ ಅರಿದು ಅನಾಮಯನಾದೆ. ಸ್ಥೂಲದಲಿ ಶುದ್ಧನಾದೆ, ಸೂಕ್ಷ ್ಮದಲಿ ಸಿದ್ಧನಾದೆ, ಕಾರಣದಲಿ ಪ್ರಸಿದ್ಧನಾದೆ. ನಿಮ್ಮ ಕರುಣಕಾನನದಲಿ ಕಂಗೆಟ್ಟೆ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಉಸುರುಸುರ ಸರಹಿನೊಳಗಡಗಿಕೊಂಡು ಬೆಳೆವುತಿಪ್ಪುದು ಲೋಕ! ಇದನು ನೀನೆಂತು ಅರಿದೆ ಹೇಳಾ. ಆ ನಿನ್ನ ಪ್ರಸಾದಂದರಿತೆ ನಾ, ಎನ್ನ ಕಪಿಲಸಿದ್ಧಮಲ್ಲಿನಾಥಯಾ
--------------
ಸಿದ್ಧರಾಮೇಶ್ವರ
ಬತ್ತೀಸ ಆಯುಧದಲ್ಲಿ ಕಾದಿ ಕೊಂದಡೂ ಪ್ರಾಣಕ್ಕೆ ಕೈದುವಿನ ಹೆಚ್ಚುಗೆ ತಗ್ಗುಂಟೆ ? ನಿಶ್ಚಯಿಸಿ ನಿಜತತ್ವವನರಿದವಂಗೆ ಮತ್ತೆ ಹತ್ತುವ ಹಾವಸೆಯುಂಟೆ ? ಉಂಟೆಂಬ ಭಾವ, ಇಲ್ಲಾ ಎಂಬ ಶಂಕೆ ನಿಶ್ಶಂಕೆಯಾದಲ್ಲಿ, ಅರಿದೆ, ಮರೆದೆನೆಂಬ ಆ ತೆರದ ಸೂತಕವಿಲ್ಲ. ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಕೃತಯುಗದಲ್ಲಿ ನೀನು ಸ್ಕಂದನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ತ್ರೇತಾಯುಗದಲ್ಲಿ ನೀನು ನೀಲಲೋಹಿತನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ದ್ವಾಪರದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿರ್ದುದ ಬಲ್ಲೆ ನಾನು. ಕಲಿಯುಗದಲ್ಲಿ ನೀನು ಬಸವನೆಂಬ ಗಣೇಶ್ವರನಾಗಿ, ಸರ್ವಾಚಾರ ಸಂಪನ್ನನಾಗಿ, ಭಕ್ತಿಜ್ಞಾನವ ಕಂದೆರವೆಯ ಮಾಡಿ, ಶಿವಾಚಾರದ ಘನದ ಬೆಳವಿಗೆಯ ಮಾಡಿ, ಶಿವಭಕ್ತಿಯ ಧ್ವಜವನೆತ್ತಿಸಿ ಮರ್ತ್ಯಲೋಕದೊಳಗೆ ಹರಹಿದ ಭೇದವ ಭೇದಿಸಿ ನೋಡಿ ಆನು ಅರಿದೆ. ಗುಹೇಶ್ವರ ಸಾಕ್ಷಿಯಾಗಿ ನಿನ್ನ ಮಹಾತ್ಮೆಗೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅರಿದೆ ಮರೆದೆನೆಂಬನ್ನಕ್ಕ ಭಕ್ತಿವಿಶ್ವಾಸಭಾವಿಯಲ್ಲ. ಇನ್ನರಿಯಲಿಲ್ಲ, ಮುಂದೆ ಒಂದು ಕುರುಹಿಲ್ಲ ಎಂಬನ್ನಕ್ಕ ಪರವಸ್ತುಭಾವಿಯಲ್ಲ. ನಾನೆಂಬನ್ನಕ್ಕ ತಾನಿದ್ದು ಮುಂದೆ ಏನೂ ಇಲ್ಲವೆಂಬುದು ನಿಜವೆ ? ತಾನೆಂಬುದನಳಿದು ಮುಂದೆ ಏನೂ ಇಲ್ಲಾಯೆಂಬುದು ನಿಜವಾಗಿ ಅದು ನಿರ್ಭಾವವಾದುದು ಸಂಗನಬಸವಣ್ಣನ ಐಕ್ಯ. ಬ್ರಹ್ಮೇಶ್ವರಲಿಂಗದ ಕುರುಹು ನಾಮನಷ್ಟ.
--------------
ಬಾಹೂರ ಬೊಮ್ಮಣ್ಣ
ಕಾಯ ಇಂದ್ರಿಯಂಗಳಲ್ಲಿ ಮಚ್ಚಿ ಇಹನ್ನಕ್ಕ ಭಕ್ತಿಸ್ಥಲವಿಲ್ಲ. ಆತ್ಮ ಹಲವು ವಿಷಯಂಗಳಲ್ಲಿ ಹರಿವನ್ನಕ್ಕ ಮಹೇಶ್ವರಸ್ಥಲವಿಲ್ಲ. ಹಿರಿದು ಕಿರಿದನರಿದು ರೋಚಕ ಆರೋಚಕವೆಂಬನ್ನಕ್ಕ ಪ್ರಸಾದಿಸ್ಥಲವಿಲ್ಲ. ಜಾಗ್ರದಲ್ಲಿ ಕಂಡು ಸ್ವಪ್ನದಲ್ಲಿ ತೋರಿ ಸುಷುಪ್ತಿಯಲ್ಲಿ ಅಳಿವನ್ನಕ್ಕ ಪ್ರಾಣಲಿಂಗಸಂಬಂಧಿಯಲ್ಲ. ಚತುರ್ವಿಧಫಲಪದಂಗಳಲ್ಲಿ ಕಾಬ ಕಾಣಿಕೆ ಉಳ್ಳನ್ನಕ್ಕ ಶರಣಸ್ಥಲವಿಲ್ಲ. ಅರಿದೆ ಮರೆದೆನೆಂದು ಉಭಯದ ಸಂದೇಹವುಳ್ಳನ್ನಕ್ಕ ಐಕ್ಯಸ್ಥಲವಿಲ್ಲ. ಇಂತೀ ಷಟ್ಸ್ಥಲಂಗಳಲ್ಲಿ ಸೋಪಾನದ ಮೆಟ್ಟಿಲಿನಂತೆ, ಒಂದ ಮೆಟ್ಟಿ ಒಂದನೇರುವನ್ನಕ್ಕ ಸ್ಥಲಕುಳಭರಿತನಾಗಬೇಕು. ಮೇಲನೇರಿ ಕೆಳಗೆ ಇಳಿಯೆನೆಂಬ ಭಾವ ನಿಂದಲ್ಲಿ ಆರನೆಣಿಸಲಿಲ್ಲ. ಮೂರೆಂದು ಬೇರೊಂದ ಮುಟ್ಟಲಿಲ್ಲ. ಕರಗಿದ ಬಂಗಾರಕ್ಕೆ ಕರಚರಣಾದಿಗಳು ಇಲ್ಲದಂತೆ, ಆತ ಕುರುಹಡಗಿದ ಷಡುಸ್ಥಲಬ್ರಹ್ಮಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಿದೆನೆಂಬುದೆ ಅಜ್ಞಾನ, ಮರೆದೆನೆಂಬುದೆ ದಿವ್ಯಜ್ಞಾನ. ಅರಿದೆ ಮರೆದೆನೆಂಬುದ ಹರಿದಾಗಲೆ ಉಪಮಾಪಾತಕ. ಆ ಪಾತಕದ ಫಲಂಗಳಲ್ಲಿ ಜ್ಞಾಸಜ್ಞರುಗಳ ನೋಡಿ, ನಾ ನಾಶವಾದೆ ಸದ್ಯೋಜಾತಲಿಂಗ ವಿನಾಶವಾಯಿತ್ತು.
--------------
ಅವಸರದ ರೇಕಣ್ಣ
ಭಕ್ತರ ಭಾವವ ನೋಡಲೆಂದು ಸಾಕಾರವಾದ ಲಿಂಗವು ನಿರಾಕಾರವಾದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಕೆಂಬಾವಿಯ ಭೋಗಣ್ಣಗಳೊಂದಿಗೆ ಹೋದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಅಪ್ಪುವಿನಲ್ಲಿ ಅಡಗಿದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಅಗ್ನಿಯಲ್ಲಿ ಅಳಿದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕøಷ್ಟವಾದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ? ಎತ್ತಿ ಧರಿಸೂದೆ ಭಕ್ತ ವಿರಕ್ತರಿಗೆ, ಮುಕ್ತಿಯ ಪಥವಯ್ಯ. ಅದೆಂತೆಂದಡೆ: ಉಂಬಲ್ಲಿ ಉಡುವಲ್ಲಿ ಕೊಂಬಲ್ಲಿ ಕೊಡುವಲ್ಲಿ, ಅರಿದೆ ಮರದೆನೆಂಬ ನಾನಾ ಸಂದೇಹದ ಕೀಲ ಕಳೆದು, ಇಷ್ಟಲಿಂಗದ ಪೂಜೆ, ಚರಲಿಂಗದ ದಾಸೋಹವ ಮಾಡಬಲ್ಲಡೆ, ಕಲಿದೇವರದೇವನ ನಿಜವ ಕಾಣಬಹುದು ಕಾಣಾ, ಚಂದಯ್ಯ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->