ಅಥವಾ

ಒಟ್ಟು 20 ಕಡೆಗಳಲ್ಲಿ , 12 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಣ ದೋಷ ಕರ್ಮಂಗಳನೇನೆಂದು ಅರಿಯ. ಈ ಜಗವೆಲ್ಲಾ ಮಾಯೆಯೆಂದು ಕಂಡನಭೇದ್ಯ. ಸುಖಸ್ವರೂಪ ನಿಜಗುಣ ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಒಂದ ಮಾಡಹೋದಡೆ ಮತ್ತೊಂದಾಯಿತ್ತೆಂಬುದು, ಎನಗಾಯಿತ್ತು ನೋಡಾ ಬಸವಣ್ಣಾ ಮಡಿವಾಳನ ಪೂರ್ವಾಪರವನೊರೆದು ನೋಡಿದಡೆ ನಿನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ನಿನ್ನ ಪೂರ್ವಾಪರಸಂಗವ ಮಾಡಬಂದಡೆ ಎನ್ನ ಪೂರ್ವಾಪರ ಎನಗೆ ಅರಿಯ ಬಂದಿತ್ತು ನೋಡಾ ಬಸವಣ್ಣಾ. ಮಹಾಜ್ಞಾನಿಗಳ ಸಂಗದಿಂದ ಉಭಯ ಸಂಗಸಿದ್ಧಿಯೆಂಬುದು ದಿಟವಾಯಿತ್ತು ನೋಡಾ ಬಸವಣ್ಣಾ. ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಕಾಳಮೇಘನೆಂಬ ಭೂಮಿಯಲ್ಲಿ ಕಾಳರಾತ್ರಿಯೆಂಬ ಏರಿ [ಕಟ್ಟೆ], ಮಂಜಿನ ನೀರು ತೊರೆಗಟ್ಟಿ ಹಾಯ್ದು ತುಂಬಿತ್ತು. ಆ ಕೆರೆಗೆ ತೂಬು ಬಿಸಿಲ ಸಂಭ್ರಮದ ಕಲ್ಲು, ಕಂಜನಾಳದ ನೂಲಿನ ಕಂಬ ಆ ತಲಪಿಂಗೆ. ಅಂದಿನ ಮುಚ್ಚುಳು, ಇಂದಿನ ದ್ವಾರದಲ್ಲಿ ಸೂಸುತ್ತಿರಲಾಗಿ ಸಾಳಿವನ ಬೆಳೆಯಿತ್ತು, ಕೊಯ್ದು ಅರಿಯ ಹಾಕಲಾಗಿ ಒಂದಕ್ಕೆ ಎರಡಾಗಿ ಎರಡಕ್ಕೆ ಮೂರುಗೂಡಿ ಹೊರೆಗಟ್ಟಿತ್ತು. ಹಾಕುವುದಕ್ಕೆ ಕಳನಿಲ್ಲದೆ, ನೆಡುವುದಕ್ಕೆ ಮೇಟಿಯಿಲ್ಲದೆ ಒಕ್ಕುವುದಕ್ಕೆ ಎತ್ತಿಲ್ಲದೆ, ಹೊರೆಯೆತ್ತ ಹೋಯಿತೆಂದರಿಯೆ ನಾ ಹೋದೆ, ಸದ್ಯೋಜಾತಲಿಂಗದಲ್ಲಿಗಾಗಿ.
--------------
ಅವಸರದ ರೇಕಣ್ಣ
ಮಲೆಯ ಮಂದಿರದ ಕಾಳವ್ವೆಯ ಉದರದಲ್ಲಿ ಮೂವರು ಪುರೋಹಿತರು ಬಂದರು. ಒಬ್ಬ ಇಹದಲ್ಲಿ ಗುಣವ ಬಲ್ಲವ; ಒಬ್ಬ ಪರದಲ್ಲಿ ಗುಣವ ಬಲ್ಲವ; ಮತ್ತೊಬ್ಬ ಇಹಪರ ಉಭಯ ತಾ ಸಹಿತಾಗಿ ಮೂರ ನೆನೆದು ಅರಿಯ. ಅರಿಯದವನ ತೋಳಿನ ಕೊಡಗೂಸು, ಕಾಳವ್ವೆಯ ಕತ್ತಲೆಯಲ್ಲಿ ತಳ್ಳಿ, ಮಲೆಗೆ ಕಿಚ್ಚ ಹಚ್ಚಿ, ಮಂದಿರವ ಹಿರಿದುಹಾಕಿ, ಪುರೋಹಿತರ ಕಣ್ಣ ಕಳೆದು ಕೊಡಗೂಸು ಕೊಡನೊಳಗಾದಳು. ಇಂತಿವರಡಿಯ ಭೇದವನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಹನ್ನೆರಡುಯುಗ ಪ್ರಳಯವಾದಲ್ಲಿ, ಆದಿಬ್ರಹ್ಮಂಗೆ ಪ್ರಳಯ. ಆದಿಬ್ರಹ್ಮನ ಪ್ರಳಯ ಅಳಿದುಳಿದಲ್ಲಿ, ಮೀನಜರಿಗೊಂದು ಸಿಂಪಿನ ಪ್ರಳಯ. ಮೀನಜರಿಗೆ ಮೀನ ಪ್ರಳಯವಾದಲ್ಲಿ, ಅಸಹಸ್ರನೆಂಬ ಗಣೇಶ್ವರಂಗೆ ಒಂದು ಪ್ರಳಯ. ಆ ಅಸಹಸ್ರನೆಂಬ ಗಣೇಶ್ವರನು ಪ್ರಳಯದಲ್ಲಿ ಅಳಿದುಳಿದಲ್ಲಿ, ಅಕ್ಷಯನೆಂಬ ಗಣೇಶ್ವರಂಗೆ ಒಂದು ತಲೆಯ ಪ್ರಳಯ ಆ ಅಕ್ಷಯನೆಂಬ ಗಣೇಶ್ವರಂಗೆ ಅರುವತ್ತುಕೋಟಿ ತಲೆ. ಇಂತಹ ರುದ್ರಾವತಾರ ಹಲವಳಿದಡೆ, ಗುಹೇಶ್ವರಲಿಂಗವನೆಂದೂ ಅರಿಯ !
--------------
ಅಲ್ಲಮಪ್ರಭುದೇವರು
ಅರಿಯ, ಅರಿಯದೆ ತಾ ಸಹಜ ಇರಲಿ, ಕಡೆಯಲ್ಲಿ ಪರಾತ್ಪರವಸ್ತು ತಾನೆಂಬುದು ದಿಟ ನೋಡಾ. ಅರಿದ ದಾರಿಯದು ಆರನು ಕೇಳದು; ಅರಿಯದ ದಾರಿಯದು ನೂರಾರನು ಕೇಳಿ, ಕಡೆಗೆ ಕಪಿಲಸಿದ್ಧಮಲ್ಲಿಕಾರ್ಜುನ ನಗರ ಸೇರುವುದು ಓರೆಯಾಗದು, ಕೇದಾರ ಗುರುವೆ.
--------------
ಸಿದ್ಧರಾಮೇಶ್ವರ
ಚಿತ್ತುವಿನ ವರ್ತನೆಯ ಬಿಟ್ಟ ಶರಣ ನಿತ್ಯನೇಮವನರಿಯ, ಕರ್ತೃಭೃತ್ಯತ್ವವನೇನೆಂದು ಅರಿಯ, ಎಂತೆಂದು ಅರಿಯ, ಎಂತಿದ್ದುದಂತೆಯೆಂಬುದ ಮುನ್ನವೆ ಅರಿಯ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ, ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು. ಎಲ್ಲಾ ವಚನಂಗಳು ತಾಪದೊಳಗು. ಎಲ್ಲಾ ಸ್ತೋತ್ರಂಗಳು ಕ್ರೋಧದೊಳಗು. ಎಲ್ಲಾ ಅರಿವು ಮಥನದೊಳಗು. ಎಲ್ಲಾ ಮೂರ್ತಿಗಳು ಪ್ರಳಯದೊಳಗು. ಎಲ್ಲಾ ಗೀತಂಗಳು ಸಂವಾದದೊಳಗು. ಲಿಂಗಾನುಭಾವಿ ಇವನೊಂದನೂ ಮನದಲ್ಲಿ ನೆನೆಯ, ಏನೆಂದು ಅರಿಯ. ಸ್ವತಂತ್ರ ನಿತ್ಯನಾಗಿ, ಭಕ್ತಿದಾಸೋಹವ ನಿಮ್ಮ ಬಸವಣ್ಣನಳವಡಿಸಿಕೊಂಡನು. ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಪರಾರ್ಥಪೂಜೆಯನಾಯಿತ್ತಾದೊಡೆ, ಅಲ್ಲಿಂದ ಮೇಲೆ ಕೇಳು:`ಗ್ರಾಮಾದೌ ಸ್ಥಾಪಿತೇ ಲಿಂಗೇ ಯದ್ವಾದೈವಾದಿ ನಿರ್ಮಿತೇ ಪರಾರ್ಥಮಿತಿಜ್ಞೇಯಂ ಸರ್ವಪ್ರಾಣಿತಾವಹಿ' ಇಂತೆಂದು ಆವುದಾನೊಂದು ಕಾರಣದಿಂದ ದೇವ ಋಷಿ ದಾನವ ಮಾನವಾದಿಗಳಿಂದ ನಿರ್ಮಿಸಿ, ಗ್ರಾಮಗಿರಿ ಗಂಹರವನ ಮೊದಲಾದವ ರಲ್ಲಿ ಪ್ರತಿಷಿ*ತವಾದ ಶಿವಲಿಂಗಪೂಜೆ ಪರಾರ್ಥ ಪೂಜೆ ಎಂದು ಅರಿಯ ಬೇಕಾದುದು. ಆ ಪೂಜೆಯಲ್ಲಿ ಪ್ರಾಣಿಗಳಿಗೆಯೂ ಹಿತವ ಮಾಡುವಂಥಾದು `ಶಿವದ್ವಿಜೇನ ಕರ್ತನ್ಯಂ ದ್ವಿಧಾ ಪೂಜೇತಿ ಬೋಧಿತಾ' ಎಂದು ಈ ಕ್ರಮದಿಂದ ಹೇಳಲ್ಪಟ್ಟಎರಡು ಪ್ರಕಾರದ ಪೂಜೆ ಶಿವಬ್ರಾಹ್ಮಣನಿಂದವೆ ಮಾಡಲ್ತಕ್ಕಂಥಾದು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಬ್ರಾಹ್ಮಣದೈವವೆಂದು ಆರಾಧಿಸಿದ [ಕಾರಣ] ಗೌತಮಗೆ ಗೋವಧೆಯಾಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ಕರ್ಣನ ಕವಚ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಬಲಿಗೆ ಬಂಧನವಾಯಿತ್ತು. ವಿಷ್ಣುದೈವವೆಂದು ಆರಾಧಿಸಿದ ಕಾರಣ ಪಾಂಡವರಿಗೆ ದೇಶಾಂತರ ಯೋಗವಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಪರಶುರಾಮ ಸಮುದ್ರಕ್ಕೆ ಗುರಿಯಾದ. ವಿಷ್ಣುದೈವವೆಂದು ಆರಾಧಿಸಲು ವ್ಯಾಸನ ತೋಳು ಆಕಾಶಕ್ಕೆ ಹೋಯಿತ್ತು. ಈ ದೃಷ್ಟವಿದ್ದು, ಮಾಯಿರಾಣಿಯ ದೈವವೆಂದು ಆರಾಧಿಸಿದ ಕಾರಣ ತಲೆಯಲ್ಲಿ ಕೆರವ ಕಟ್ಟಿ, ಕೊರಳಲ್ಲಿ ಕವಡೆಯ ಕಟ್ಟಿ, ಬೇವನುಟ್ಟು, ಜಾವಡಿ ಅರಿಯ ಲಜ್ಜೆ ಹೋಯಿತ್ತು. ಮುಂದೆ ಭೈರವ ದೇವರೆಂದು ಆರಾಧಿಸಿದ ಕಾರಣ ಕರುಳ ಬೆರಳ ಖಂಡಿಸಿ ತುತ್ತು ತುತ್ತಿಗೆ ಅಂತರಂಗ ಬಹಿರಂಗವಾಯಿತ್ತು. ಮುಂದೆ ಜಿನನ ದೈವವೆಂದು ಆರಾಧಿಸಿದ ಕಾರಣ ಜೈನ ಮಾಡಿದ ಕರ್ಮ ನಿಷ್ಕರ್ಮವಾದುದಾಗಿ ನರರ ಹಾಡಿದಡೆ ಗತಿಯಿಲ್ಲ, ಕೇಳಿದರೆ ಗತಿಯಿಲ್ಲ ಹರ ನಿಮ್ಮ ಶರಣರ ಶ್ರೀಪಾದವೆ ಗತಿಯಾಗಿದ್ದೆ ನೋಡಾ. ಹರ ನಿಮ್ಮ ಶರಣರ ಒಲವಿಂದ ತುತ್ತು ಬುತ್ತಿಗೆ ಬೆನ್ನುಹತ್ತುವ ಮಾರಿ ಮಸಣಿ ಮೈಲಾರ ಹೊನ್ನ ಲಕ್ಷ್ಮಿಗಳು ಅರ್ಥ ಅಯುಷ್ಯವ ಕೊಡಬಲ್ಲವೆ ? ಒಡೆಯನಿಲ್ಲದ ಮನೆಯ ತುಡುಗುಣಿನಾಯಿ ಹೊಗುವಂತೆ, ಜಡದೇಹಿಗಳ ತನುವ ಕಾಡುತಿಹವೆಂದಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಏಕಮೂರ್ತಿ ತ್ರಿಮೂರ್ತಿ ದ್ವಿಮೂರ್ತಿಯಾಗಿ ತೋರಿ ಬೇರೆ ಅರಿಯ ಬಂದಿತ್ತಯ್ಯ. ಅರಿಯಲು, ಪ್ರಭೆ ಪರಿಪೂರಿತವಂತಃಕ್ಕರುಣಮೂರ್ತಿಯುಳ್ಳವಳಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಹಲವ ತೊಳೆವ ಮಡಿವಾಳಂಗೆ ತನ್ನಯ ಕುರುಹಿನ ಸೆರಗ ನೋಡಿಯಲ್ಲದೆ ಅರಿಯ. ಅವ ಮರೆದು ಕೊಟ್ಟಡೆ, ಸೀರೆಯೊಡೆಯರು ಬೇರೊಂದು ಕುರುಹನಿಟ್ಟುಕೊಂಡಿಹರು. ಅದು ಒಡವೆಯರೊಡವೆಯಲ್ಲದೆ ಬರುಬರಿಗರಗದು. ಆ ಕುರುಹ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ನಂಬಿ ನಚ್ಚಿದೆನೆಂದು ಮನವನಿಂಬುಗೊಡದಿರು. ಕಾಯದ ಮಾಯದ ಕಪಟ ಕರ್ಮ ಸಂಸಾರಕ್ಕೆ ತನು ಮನ ಧನದಲ್ಲಿ ನೆನಹುಳ್ಳವರ ಕನಸಿನಲ್ಲಿ ಅರಿಯ, ನಮ್ಮ ರಾಮನಾಥ.
--------------
ಜೇಡರ ದಾಸಿಮಯ್ಯ
ಸಾವುಯಿಲ್ಲಾ, ಸಾವು ಇಲ್ಲದೆ ಸಾವು ಬಂತು, ಸತ್ತವನ ಚಂದ ಇದ್ದವಗಲ್ಲದೇ ಸತ್ತವಗೆಲ್ಲಿಹದೋ ? ಇದ್ದವರು ಮಾಡಿದ ಮಂತ್ರಪಠನ ಸಮಾಧಿಕ್ರಿಯಾ ಇದ್ದವರೇ ಬಲ್ಲರು, ಸತ್ತವ ಅರಿಯ. ಸತ್ತವನೆನಿಸಿಕೊಂಡು, ಸತ್ತವ ಸಾಯದೇ, ಸತ್ತು ಸತ್ತು ಹೋಯಿತ್ತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->