ಅಥವಾ

ಒಟ್ಟು 203 ಕಡೆಗಳಲ್ಲಿ , 38 ವಚನಕಾರರು , 157 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು. ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು. ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು. ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ. ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು, ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ
--------------
ಚನ್ನಬಸವಣ್ಣ
ಅರ್ಪಿತ ಆನರ್ಪಿತವೆಂಬ ಉಭಯಕುಳದ ಶಂಕೆವುಳ್ಳನ್ನಕ್ಕ ಅಚ್ಚಸಂಸಾರಿಯೆಂಬೆ. ಅರ್ಪಿತ ಅನರ್ಪಿತವೆಂಬೆರಡ ಕಳೆದು ನಿಂದಾತನ ಅಚ್ಚಲಿಂಗವಂತನೆಂಬೆ. ಅರ್ಪಿತ ಅನರ್ಪಿತವನರ್ಪಿಸಿ ಪ್ರಸಾದ ಸ್ವೀಕರಿಸಬಲ್ಲಡಾತನ ವಾಙ್ಮನಾತೀತನೆಂಬೆ. ಅರ್ಪಿತವಿಲ್ಲ, ಅನರ್ಪಿತವಿಲ್ಲ, ಅಕಲ್ಪಿತವಯ್ಯಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗದಲ್ಲಿ ಕೊಡಲುಂಟು, ಕೊಳಲುಂಟಾಗಿ ಅರ್ಪಿತ, ಜಂಗಮದಲ್ಲಿ ಕೊಟ್ಟು ಕೊಳಲಿಲ್ಲಾಗಿ ಅನರ್ಪಿತ, ಪ್ರಸಾದದಲ್ಲಿ ಕೊಡಲು ಕೊಳಲಿಲ್ಲಾಗಿ ಉಭಯನಾಸ್ತಿ. ಈ ತ್ರಿವಿಧ ಸಂಚದ ಸನುಮತವನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಅರ್ಪಿತ ಅರ್ಪಿತವೆನುತ್ತಿಹರೆಲ್ಲ ಅರ್ಪಿತವಾವುದೆಂದು ಹೇಳಿರಯ್ಯಾ? ಕಾಯಾರ್ಪಿತವೆಂಬಿರೆ ಅಳಿವಿನೊಳಗಾಯಿತ್ತು, ಭಾವಾರ್ಪಿತವೆಂಬಿರೆ ಭ್ರಮೆಗೊಳಗಾಯಿತ್ತು, ಜಿಹ್ವಾರ್ಪಿತವೆಂಬಿರೆ ರುಚಿಯೊಳಗಾಯಿತ್ತು. ಸರ್ವವೂ ಶಿವನಾಜ್ಞೆಯೊಳಗೆಂಬಿರೆ ಭವಬಂಧನ ಬಿಡದು, ಅರ್ಪಿಸಲೇಬೇಕು, ಅರ್ಪಿಸಿದಲ್ಲದೆ ಪ್ರಸಾದವಾಗದು. ಅರ್ಪಿತದ ಮರ್ಮ ಸಕೀಲನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ. ಅರ್ಪಿತ ಅನರ್ಪಿತ ನೀನೆ ಎಂಬೆ, ಕೂಡಲಸಂಗಮದೇವಾ.
--------------
ಬಸವಣ್ಣ
ದ್ರವ್ಯರೂಪ ರೂಪಿಸುವೆ ಅರ್ಪಿತಕ್ಕೆಂದು ಅರ್ಪಿತರೂಪ ರೂಪಿಸುವೆ ಪ್ರಸಾದಕ್ಕೆಂದು, ಪ್ರಸಾದರೂಪ ರೂಪಿಸುವೆ ಕಾಯಕ್ಕೆಂದು, ಪ್ರಥಮೇ ಯೋಜಯೇದ್ದ್ರವ್ಯಂ ದ್ವಿತೀಯಂ ಅರ್ಪಿತಂ ತಥಾ ತದರ್ಥಂ ತು ಶರೀರಾರ್ಥಂ ಶರೀರಂ ಪ್ರಾಣಕಾರಣಂ ಎಂದುದಾಗಿ ಕಾಯರೂಪ ರೂಪಿಸುವೆ ಪ್ರಾಣಕ್ಕೆಂದು ಪ್ರಾಣರೂಪ ರೂಪಿಸುವೆ ಕೂಡಲಚೆನ್ನಸಂಗಯ್ಯಗೆಂದು.
--------------
ಚನ್ನಬಸವಣ್ಣ
ಲಿಂಗವೇ ಪ್ರಾಣವಾದ ಮತ್ತೆ ಬೇರೆ ನೆನೆಯಿಸಿಕೊಂಬುದು ಇನ್ನಾವುದಯ್ಯಾ ? ಇದಿರಿಟ್ಟು ಬಂದುದ ಮುನ್ನವೆ ಮುಟ್ಟಿ ಅರ್ಪಿತ ಅವಧಾನಂಗಳಲ್ಲಿ ಸೋಂಕಿದ ಮತ್ತೆ ಪುನರಪಿಯಾಗಿ ಸೋಂಕಿದಡೆ ನಿರ್ಮಾಲ್ಯ ಕಂಡಯ್ಯಾ. ಮೊನೆಗೂಡಿ ಹಾಯ್ವ ಕಣೆಯಂತೆ ಅರ್ಪಿತಾಂಗ ಸಂಗಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಪ್ರಸಾದಿ ಭೋಗಣ್ಣ
ಜ್ಞಾನಚಕ್ರ: ಪರಮ ತತ್ವ ಪರಮಜ್ಞಾನ ಪರಮಾರ್ಥ ಪರಾಪರ ವಾಙ್ಮನಕ್ಕಗೋಚರ ಶಬ್ದಗಂಭೀರ ಉಪಮಾತೀತ, ಉನ್ನತ ಪರಶಿವ, ಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ, ಶಿವಜ್ಞಾನವೆ ಶೃಂಗಾರ, ಮಹಾಬೆಳಗೆ ವಿಭೂತಿ, ಪಂಚಬ್ರಹ್ಮವೆ ದರ್ಶನ ಗಗನಸ್ಥಾನವೆ ಕಂಥೆ, ಆಕಾಶವೆ ಟೊಪ್ಪರ, ಅಜಾಂಡ_ಬ್ರಹ್ಮಾಂಡವೆ ಕರ್ಣಕುಂಡಲ, ಆದಿ ಆಧಾರವೆ ಕಕ್ಷಪಾಳ ಅನಾಹತವೆ ಒಡ್ಯಾಣ, ಅದ್ವೈತವೆ ಯೋಗವಟ್ಟಿಗೆ, ಅಗಮ್ಯವೆ ಯೋಗವಾವುಗೆ, ಅಚಳಿತವೆ ಖರ್ಪರ, ಅಪ್ರಾಮಣವೆ ಲಾಕುಳ, ಅವಿಚಾರವೆ ಸುಳುಹು, ಅಕಲ್ಪಿತವೆ ಭಿಕ್ಷೆ, ಕೊಂಡುದೆ ಗಮನ, ನಿಂದುದೆ ನಿವಾಸ,_ ನಿಶ್ಚಿಂತವೆಂಬ ಆಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ; ಗಗನಗಂಭೀರದ ಬಾವಿಯೊಳಗೆ ಅಗೋಚರದ ಅಗ್ಘಣಿಯ ತಂದು ಮಹಾಘನಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು; ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ, ಪರಾಪರವೆ ಪತ್ರೆಪುಷ್ಪ, ನಿರ್ಮಳವೆ ಲಿಂಗಾರ್ಚನೆ, ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪದೀಪಾರತಿ, ಸಕಲ ಭುವನಾದಿಭುವನಂಗಳೆ ಸಯದಾನ, ಆಚಾರವೆ ಅರ್ಪಿತ, ಮಹತ್ವವೆ ಸಿತಾಳ, ಅಖಂಡಿತವೆ ಅಡಕೆ, ಏಕೋಭಾವವೆ ಎಲೆ, ಶುದ್ಧಶಿವಾಚಾರವೆ ಸುಣ್ಣ_ ವಿವೇಕ ವಿಚಾರದಿಂದ ವೀಳೆಯವನವಧರಿಸೂದು. ಮಹಾಲಿಂಗದ ಪರಿಣಾಮವೆ ಪ್ರಸಾದ, ಸಮ್ಯಕ್ ಜ್ಞಾನವೆ ಸಂತೋಷ. ಸಹಜ ನಿರಾಭಾರಿಗಳ ಮೇಳದಿಂದ, ನಿಸ್ಸೀಮದ ನಿಭ್ರಾಂತಿನ ಸುಸಂಗದಲ್ಲಿ_ ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ, ಅನುಪಮದ ನಿಶ್ಶೂನ್ಯವೆ ವಿಶ್ರಾಮ, ನಿರಾಕಾರವೆ ಗಮನ. ನಿರಂತರ ಪಾತಾಳ ಊಧ್ರ್ವದ ಪವನ;_ತ್ರಿಭುವನಗಿರಿಯೆಂಬ ಪರ್ವತವನೇರಿ, ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ; ಇಹಲೋಕವೇನು ? ಪರಲೋಕವೇನು ?_ ಅಲ್ಲಿಂದತ್ತ ಆಗಮ್ಯ ನಿರಾಳ ಪರಮಜ್ಞಾನದ ಸಿದ್ಧಿ ಮಹಾಲಿಂಗದ ಬೆಳಗು, ಗುಹೇಶ್ವರಾ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ, ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಎರಡು ಒಂದಾದ ಬಳಿಕ ಅರ್ಚನೆ ಹಿಂಗಿತ್ತು. ಎರಡು ಒಂದಾದ ಬಳಿಕ ಅರ್ಪಿತ ಹಿಂಗಿತ್ತು. ಎರಡು ಒಂದಾದ ಬಳಿಕ ಆಚಾರ ಹಿಂಗಿತ್ತು. ಎರಡು ಒಂದಾದ ಬಳಿಕ ಅವಧಾನ ಹಿಂಗಿತ್ತು. ಎರಡು ಒಂದಾದ ಬಳಿಕ ಶಬ್ದಕ್ಕೆ ಇಂಬಿಲ್ಲ ರೂಹಿಸಲೆಡೆಯುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ಕೈ[ಯ]ಮರೆದು ಕಾದುವ ಕಾಳಗವದೇನೋ? ಮೈಮರೆದು ಮಾಡುವ ಮಾಟವದೇನೋ? ಬಾಯಿ ಮರೆದು ಉಂಬ ಊಟವದೇನೋ? ಸನ್ಮಾನ ಸಾವಧಾನ ಸನ್ನಹಿತವಿಲ್ಲದ ಲಿಂಗಸಂಧಾನ ಜನ್ಮದ ಮೃತ್ಯು ನೋಡಾ. ಎಚ್ಚರಿಕೆಯಿಲ್ಲದ ಅರ್ಪಿತ ವಿಕಾರ ನೋಡಾ. ಸಂಕಲ್ಪ ವಿಕಲ್ಪವಿಲ್ಲದೆ ಮನ ಲಿಂಗಸಾಹಿತ್ಯವಾದರೆ ಅರ್ಪಿತ; ಅದು ಪ್ರಸಾದ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗಕ್ಕೆ ದೃಷ್ಟಾರ್ಪಿತ, ಪ್ರಾಣಲಿಂಗಕ್ಕೆ [.....ಅರ್ಪಿತ] ಜ್ಞಾನಲಿಂಗಕ್ಕೆ ಪರಮಪರಿಣಾಮವೆ ಅರ್ಪಿತ. ಇಂತೀ ತ್ರಿವಿಧಾರ್ಪಣದಲ್ಲಿ ಸುಚಿತ್ತನಾಗಿರಬೇಕು, ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಮನ ಮುಟ್ಟದ ಪೂಜೆ, ಮಣ್ಣುಗೋಡೆಯ ತೊಳೆದು, ನಿರ್ಮಲವನರಸುವನಂತೆ. ವಸ್ತುವ ಮುಟ್ಟದ ಅರ್ಪಿತ, ಕುಕ್ಕರ ಅಸ್ಥಿಯ ಕಡಿದು, ತನ್ನಯ ಶೋಣಿತಕ್ಕೆ ಚಪ್ಪರಿವಂತೆ, ಇದು ನಿಶ್ಚಯದ ಮುಟ್ಟಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅಂಗದೇಹಿ ಲಿಂಗೋದಕವ ಕೊಳಲಾಗದು. ಪ್ರಕೃತಿಜೀವಿ ಪಾದೋದಕವ ಕೊಳ್ಳಲಾಗದು. ಭವಜೀವ ಪ್ರಸಾದೋದಕವ ಕೊಳಲಾಗದು. ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಶುದ್ಧವಾಗಿ ಕೊಳಬಲ್ಲಡೆ, ತ್ರಿವಿಧೋದಕ ಸಮರ್ಪಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತ.
--------------
ಶಿವಲೆಂಕ ಮಂಚಣ್ಣ
ರತ್ನದ ಪುಂಜವ ಬೆಗಡವನಿಕ್ಕುವಲ್ಲಿ ಮೊನೆ ಮುಂದೆ ಸವೆದ ಮತ್ತೆ ಪೂರ್ವಕ್ಕೆ ಉತ್ತರವಿಲ್ಲ. ನಿಶ್ಚೈಸಿ ಉತ್ತರ ಕಡೆಗಾಣಿಸಿದಲ್ಲಿ ಮುಟ್ಟಿ ಮುಂಚುವ ಅರ್ಪಿತ ಅಲ್ಲಿಯೆ ಉಪದೃಷ್ಟ ನಷ್ಟ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಇನ್ನಷ್ಟು ... -->