ಅಥವಾ

ಒಟ್ಟು 14 ಕಡೆಗಳಲ್ಲಿ , 12 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಗುರೂಪದೇಶವ ಪಡೆದು ಗುರುಪುತ್ರನೆನಿಸಿಕೊಂಡ ಬಳಿಕ ಹಿಂದಣ ತಾಯಿ ತಂದೆ ಬಂಧು ಬಳಗವ ನೆನೆಯದಿರಿರೋ. ಕುಲಗೆಟ್ಟ ಹೊಲೆಯರಿರ ನೆನೆದರೆ ನಿಮಗೆ ಶಿವದ್ರೋಹ ತಪ್ಪದು. ನಿಮಗೆ ತಂದೆ ತಾಯಿ ಬಂಧು ಬಳಗವ ಹೇಳಿಹೆನು ಕೇಳಿರೊ. 'ಗುರುದೈವಾತ್ ಪರಂ ನಾಸ್ತಿ' ಎಂದುದಾಗಿ, ಗುರುವೇ ತಾಯಿ, ಗುರುವೇ ತಂದೆ, ಗುರುವೇ ಬಂಧುಬಳಗವೆಂದು ನಂಬಬಲ್ಲಡೆ ಆತನೆ ಶಿಷ್ಯನೆಂಬೆ, ಆತನೆ ಭಕ್ತನೆಂಬೆ. ಅಲ್ಲದಿರ್ದಡೆ ಭವಿಯೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪರಸ್ತ್ರೀಯರ ನೋಡುವ ಕಣ್ಣು, ಲಿಂಗವ ನೋಡಿದ ಅವರಿಗೆ ಲಿಂಗವಿಲ್ಲ. ಪರಬ್ರಹ್ಮವ ನುಡಿವ ನಾಲಿಗೆಯಲ್ಲಿ, ಪರಸ್ತ್ರೀಯರ ಅಧರಪಾನವ ಕೊಂಡಡೆ, ಪ್ರಸಾದಕ್ಕೆ ದೂರ. ಘನಲಿಂಗವ ಪೂಜಿಸುವ ಕೈಯಲ್ಲಿ, ಪರಸ್ತ್ರೀಯರ ತೋಳು ಕುಚವ ಮುಟ್ಟಿದಡೆ, ತಾ ಮಾಡುವ ಪೂಜೆ ನಿಷ್ಫಲ. ಇದರಿದಡೆ ವ್ರತ. ಅಲ್ಲದಿರ್ದಡೆ, ಸುರೆಯ ಒಳಗೆ ತುಂಬಿ, ಹೊರಗೆ ಬೂದಿಯ ಪೂಸಿದಂತಾಯಿತ್ತು, ಕಲಿದೇವಾ.
--------------
ಮಡಿವಾಳ ಮಾಚಿದೇವ
ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ ಗುರುಲಿಂಗಜಂಗಮವ ನಿಂದಿಸಿ ನುಡಿದವರ, ಬಾಯ ಸೀಳಿ ನಾಲಗೆಯ ಕಿತ್ತು ಕೊಲುವೆನು. ಅದೆಂತೆಂದಡೆ: ಯೋ ವಾಪ್ಯುತ್ಪಾಟಯೇಜ್ಜಿಹ್ವಾಂ ಶಿವನಿಂದಾರತಸ್ಯ ತು ತ್ರಿಸಪ್ತಕುಲಮುದ್ಧರೇತ್ ಶಿವಲೋಕೇ ಮಹೀಯತೇ ಎಂದುದಾಗಿ, ಮತ್ತಂ ಶಿವಭಕ್ತನಿಂದಯನು ಎನ್ನ ಕಿವಿಯಲ್ಲಿ ಕೇಳಿ ಆ ನಿಂದಕರ ಕೊಲ್ಲುವೆನು, ಅಲ್ಲದಿರ್ದಡೆ ನಾನು ಸಾವೆನು. ಅದೆಂತೆಂದಡೆ: ಶ್ರುತ್ವಾ ನಿಂದಾಂ ಶಿವಸ್ಯಾಥ ತತ್‍ಕ್ಷಣಾದ್ದೇಹಮುತ್ಸೃ ಜೇತ್ ತಸ್ಯ ದೇಹನಿಹಂತಾ ಚೇತ್ ರುದ್ರಲೋಕಂ ಸ ಗಚ್ಛತಿ ಎಂದುದಾಗಿ, ಇದನರಿತು ಶಿವನಿಂದಕರ ಸಂಹರಿಸಿದಲ್ಲದೆ ಎನಗೆ ಸಂತೋಷವಿಲ್ಲವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ದೇವಾ ನಿಮ್ಮ ಪರಿಹಾಸ ಪರಿ ಪರಸಮಯಿಗಳ ಮನೆಯಲಿಪ್ಪರೆ. ದೇವಾ ದೇವಾ ನಿಮ್ಮ ಪರಿಹಾಸ ಪರಿಹರಿಸರಿಯೆಂಬ ಮಾತ ಹುಟ್ಟಿಸುವರೆ ಜಗದಿ. ದೇವಾ ನೀವು ಮಾಡಿದ ಮಾಯೆ ಅಲ್ಲದಿರ್ದಡೆ ನೊರಜುಗಳ ಸರಿಯೆಂಬರೆ ಹೇಳಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ
ಹರನ ಭಜಿಸುವುದು, ಮನಮುಟ್ಟಿ ಭಜಿಸಿದೆಯಾದಡೆ ತನ್ನ ಕಾರ್ಯ ಘಟ್ಟಿ. ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವುದು, ವಿಧಿ ಹೆಡಗಯ್ಯ ಕಟ್ಟಿ ಕುಟ್ಟುವುದು. ಕೂಡಲಸಂಗನ ಶರಣರ ದೃಷ್ಟಿಯವನ ಮೇಲೆ ಬಿದ್ದವ ಜಗಜಟ್ಟಿ.
--------------
ಬಸವಣ್ಣ
ನಾನಾ ವೇದ ಶಾಸ್ತ್ರ ಪುರಾಣ ಆಗಮ ಪಾಠಕನಾದಲ್ಲಿ ಪರಿಭಾಷೆ ಪರತತ್ವದ ಮಾತನಾಡಿದಡೇನು ? ಜಿಹ್ವೇಂದ್ರಿಯಕ್ಕೆ ಹರಿಯದೆ, ಗುಹ್ಯೇಂದ್ರಿಯಕ್ಕೆ ಸಿಕ್ಕದೆ ಬಂದ ತೆರನನರಿದು ವಿಚಾರಿಸಿ ಮುಟ್ಟುವ ಕಟ್ಟನರಿತು ಅರ್ಪಿತದ ಭೇದವನರಿದು ವಸ್ತುವಿಪ್ಪೆಡೆಯಲ್ಲಿ ಅರ್ಪಿಸಬಲ್ಲಡೆ ವಿರಕ್ತನು, ಅಲ್ಲದಿರ್ದಡೆ ಪಂಡಿತನಪ್ಪನು. ಇಂತೀ ಉಭಯದ ಸೊಲ್ಲನರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಲಿಂಗಪ್ರಸಾದವ ಕೊಂಬುತಿದ್ದು ಮತ್ತೆ, ಪದಾರ್ಥದ್ರವ್ಯಂಗಳು ಇದಿರೆಡೆಯಾಗಿ ಬರಲಿಕಾಗಿ ಆ ಕರದಲ್ಲಿಯೆ ದ್ರವ್ಯವ ಸಮರ್ಪಿಸಬಹುದೆ ? ಅಹುದೆಂದಡೆ ಕ್ರೀ ಸೂತಕ, ಅಲ್ಲಾ ಎಂದಡೆ ಪ್ರಥಮಪ್ರಸಾದ ಅವರಿಗಿಲ್ಲ. ಇಂತೀ ಉಭಯವನರಿದು ಅರ್ಪಿಸಬಲ್ಲಡೆ ಲಿಂಗಾಂಗ ಸಹಭೋಜನವೆಂಬೆ. ಅಲ್ಲದಿರ್ದಡೆ ಪಡುವಿಂಗೆ ನೆರೆದ ತುಡುಗುಣಿಗಳಂತೆ ಬಾಯೊಳಗಣ ಕಚ್ಚು ದೇಹದೊಳಗಣ ಮುರುಗು ಅವಂಗಾವ ನಿತ್ಯನೇಮವೂ ಇಲ್ಲ, ಇದು ಸತ್ಯ ಭೋಗಬಂಕೇಶ್ವರಲಿಂಗ ಸಾಕ್ಷಿಯಾಗಿ.
--------------
ಶ್ರೀ ಮುಕ್ತಿರಾಮೇಶ್ವರ
ಬಂಧನಂ ಪಾಪರೂಪಂ ಚ ನಿರ್ಬಂಧಃ ಪುಣ್ಯರೂಪಕಃ ಸತ್ಯಜ್ಞಾನ ಸಂಬಂಧಶ್ಚ ತದ್ಯಥಾ ಶ್ರುಣು ಪಾರ್ವತಿ || ಎಂದಕಾರಣ, ಬಂಧನದೈಕ್ಯವ ಶಿವಶರಣರೊಪ್ಪರಾಗಿ. ಅದೆಂತೆಂದಡೆ: ತೈಲ ಬತ್ತಿಯುಳ್ಳನ್ನಕ್ಕ ಜ್ಯೋತಿ ಬಯಲಾಗದು. ಎಣ್ಣೆ ಬತ್ತಿ ತೀರಿದ ಮೇಲೆ ಗೃಹದೊಳಗಣ ಜ್ಯೋತಿ ಉರಿಯಬಲ್ಲುದೆ ಹೇಳಿರಣ್ಣಾ ? ಈ ದೃಷ್ಟಾಂತದಂತೆ, ದೇಹಿಗಳ ದೇಹಮಧ್ಯದಲ್ಲಿ ಸಪ್ತಧಾತುಗಳುಳ್ಳ ಪರಿಯಂತರ ಪಂಚಾಗ್ನಿಯಿದ್ದ ಜೀವರುಗಳು ಪ್ರಾಣತ್ಯಾಗವ ಮಾಡುವುದು. ಹಾಗೆ ಶರಣನ ದೇಹಮಧ್ಯದಲ್ಲಿ ಚಿದಗ್ನಿಯಿದ್ದು, ಪ್ರಾಣ ದಗ್ಧವ ಮಾಡಿ, ವಸ್ತುವಿನಲ್ಲಿ ಎಯ್ದಿಸುತ್ತಿರಲಾಗಿ, ಆತನ ಅರಿವು ಮರವೆಗೆ ಕರ್ತರಾಗಿಪ್ಪ ತೆತ್ತಿಗತ್ತ್ವವಲ್ಲದೆ ತಾವು ಕಳಂಕರಾಗಿ, ಆತನ ವಿಕಳತೆಯಿಂದ ಐಕ್ಯವ ಮಾಡಿದಡೆ, ಆ ದ್ರೋಹ ತಮಗಲ್ಲದೆ ಆತಂಗಿಲ್ಲ. ಇಂತೀ ವಿವೇಕವುಳ್ಳ ವೀರಮಾಹೇಶ್ವರರ ಐಘಟದೂರ ರಾಮಲಿಂಗವೆಂಬೆ. ಅಲ್ಲದಿರ್ದಡೆ, ನೀ ಸಾಕ್ಷಿಯಾಗಿ ಛೀ ಎಂಬೆನು.
--------------
ಮೆರೆಮಿಂಡಯ್ಯ
ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ ? ಹುಟ್ಟು ಕೆತ್ತುವ ಡೊಂಬನಂತೆ ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ ? ಕಟ್ಟುಹರಿದ ಪಂಜಿನಂತೆ, ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ ? ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ ? ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ ? ಹೊನ್ನು ಹೆಣ್ಣು ಮಣ್ಣ ಬಿಟ್ಟು ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ ?ಅಲ್ಲ. ವಿರಕ್ತನ ಪರಿಯೆಂತೆಂದೊಡೆ ಒಡಲ ಹುಡಿಗುಟ್ಟಿ, ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು. ಅಲ್ಲದಿರ್ದಡೆ ಮೈಲಾರಿ ಮಲ್ಲಿ ಗೊರವಿಯಲ್ಲವೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ವಸ್ತು ತನ್ನ ವಿನೋದಕ್ಕೆ ತಾನೆ ಕರ್ತೃ ಭೃತ್ಯನಾದ ಭೇದಮಂ ಪೇಳ್ವೆ, ಅದೆಂತೆಂದಡೆ : ಒಂದು ಎರಡಾದ ಭೇದಮಂ ತಿಳುಹುವೆ. ಅದು ತಾನೆ ಸಂಗನಬಸವಣ್ಣನೆಂದು, ಚೆನ್ನಬಸವಣ್ಣನೆಂದು ಎರಡು ನಾಮ ಅಂಗ-ಪ್ರಾಣದ ಹಾಂಗೆ. ಚನ್ನಬಸವಣ್ಣನಿಂದ ಸಂಗನಬಸವಣ್ಣ ಧನ್ಯನಪ್ಪನು. ಈ ಎರಡು ವಸ್ತುವನೊಳಕೊಂಡು ಆಚರಿಸುವ ಜ್ಞಾನಿಜಂಗಮದ ನಿಲವೆಂತೆಂದೊಡೆ : ಆವನಾನೊಬ್ಬನು ಭಸಿತಮಂ ಪಿಡಿದು ಅಯ್ಯಾ ಶರಣಾರ್ಥಿ ಎಂದು ಕರೆಯಲು, ಒಯ್ಯನೆ ನಿರೀಕ್ಷಿಸುವುದೆ ಜ್ಞಾನಿಜಂಗಮಕ್ಕೆ ಕರ್ತೃತ್ವ. ಇದಲ್ಲದೆ, ನಡೆಯದೆ ಜಂಗಮ ಎಲವೋ ಎಂದು ಕರೆವುತ್ತಿರಲು ನಸುಗೆಂಪಿನ ಭಾವವೇರಿ ಹೋದರೆ ಭಸಿತಕ್ಕೆ ದೂರ. ಸಾಕ್ಷಿ : ವರ್ಣಿ ವಕಾಪೋಸೋವಾಸಿ ಶೂದ್ರೋಪಿ ಯದಿ ಭೂತಿದಃ| ಸಾ ಭೂತಿಃ ಸರ್ವಥಾ ಗ್ರಾಹ್ಯಾ ನೋ ಚೇದ್ಧ್ರೋಹಿ ಮಮೈವ ನಃ || ದುರಾಯ ಲೆಕ್ಕಕ್ಕೆ ಹರಣವ ಕೊಟ್ಟವರುಂಟು. ವಿಶ್ವಾಸಕ್ಕೆ ಅಂಗಕ್ಕೆ ಅರಿವನರಸುವ ಪರಿಯಂತರ ಇದೇ ದೃಷ್ಟ. ಲಿಂಗದೇವನು ಮನವ ನೋಡಬೇಕೆಂದು ಭಕ್ತಿಯೆಂಬ ಭಿನ್ನಹಕ್ಕೆ ಅವಿಶ್ವಾಸದಿಂದ ಅಡ್ಡಬರಲು ಇದರ ವಿಶ್ವಾಸವನರಿದು ವಿಚಾರಿಸಬೇಕು. ಕಿಚ್ಚು ಹತ್ತಿದಲ್ಲಿ ಊರಡವಿ ಕಾಡಡವಿಯೆಂದುಂಟೆ? ಚಿದಗ್ನಿ ಸ್ವರೂಪಮಪ್ಪ ಶ್ರೀಭಸಿತವ ಕಂಡಲ್ಲಿ ಹೋಗಲಮ್ಮೆನು, ಆವನಾದರಾಗಲಿ ಶ್ರೀ ಮಹಾದೇವನ ನೆನವನೆ ದೇವನೆಂದುದಾಗಿ, ಭವಿಯಾದರಾಗಲಿ ಹೋಗಲಮ್ಮೆನು. ಇದು ಎನಗೆ ಚೆನ್ನಬಸವಣ್ಣನಿಕ್ಕಿದ ಕಟ್ಟು. ಭವಿಯಾದರೆ ಕರೆದು ಒಡಂಬಡಿಸೂದು. ಭಕ್ತನಾದರೆ ಬಿನ್ನಹವ ಕೈಕೊಂಬುದು. ಆವನಾದರಾಗಲಿ ಶ್ರೀ ಮಹಾದೇವನ ನೆನವವನೆ ದೇವನೆಂದುದಾಗಿ, ಭವಿಯಾದರೆ ಹಾಲು ಹಣ್ಣು ಕಾಯಿ ವಸ್ತ್ರವ ಕೈಕೊಂಬುದು. ಮತ್ತಾ ಭಸಿತಕ್ಕೆ ಶರಣೆಂದು ಅವನ ಕಳುಹುವುದು. ಭಕ್ತನಾದರೆ ಬಿನ್ನಹವ ಕೈಕೊಂಡು ಆತನ ತ್ರಿವಿಧಕ್ಕೆ ತಾ ಕರ್ತನಾಗಿ ಆತನ ತನ್ನೊಳಗೆ ಇಂಬಿಟ್ಟುಕೊಂಬುದು ಜ್ಞಾನಜಂಗಮದ ಲಕ್ಷಣ. ಇನ್ನು ಕ್ರಿಯಾಮಾಹೇಶ್ವರ ಭೇದಮಂ ಪೇಳ್ವೆ : ಶಿವಭಕ್ತರು ಬಂದು ಬಿನ್ನಹವ ಕೈಕೊಳ್ಳಿಯೆಂದು ಉದಾಹರಣೆಯಿಂದ ಬಿನ್ನವಿಸುತ್ತಿರಲ ಅದಕ್ಕೆ ಒಡಂಬಟ್ಟು ಕೈಕೊಂಬುದು ; ಅಲ್ಲದಿರ್ದಡೆ ಕಳುಹುವುದು. ಇದಲ್ಲದೆ ಬಾಯಿಗೆ ಬಂದಂತೆ ನುಡಿದು ಅಡ್ಡ ಮೋರೆಯ ಹಾಕೋದು ಜಂಗಮಕ್ಕೆ ಕರ್ತೃತ್ವವಲ್ಲ. ಜ್ಞಾನಿಜಂಗಮ ತ್ರಿವಿಧಪದಾರ್ಥವ ಕೈಕೊಂಬುದು. ಕ್ರಿಯಾಜಂಗಮ ಎರಡು ಪದಾರ್ಥವಂ ಬಿಟ್ಟು ಒಂದು ಪದಾರ್ಥವ ಕೈಕೊಂಬುದು. ಭಾವಜಂಗಮ ಇಂತೆರಡ ಮೀರಿ ತ್ರಿವಿಧರಹಿತವಾಗಿ ತೋರ್ಪುದು. ಗೋಣಿಯ ಮರೆಯ ಕೇಟೇಶ್ವರಲಿಂಗವು ತ್ರಿವಿಧಜಂಗಮದ ನಿಲವಿನ ನಿರುಗೆಯ ನಿರೂಪಿಸಿದರು.
--------------
ಬೊಕ್ಕಸದ ಚಿಕ್ಕಣ್ಣ
ಹುಲಿ ಹಾವು ಕಿಚ್ಚು ಕಳ್ಳರ ಭಯವೆಂದು ಹೇಳಿದವರ ಮೇಲೆ ನೋವುಂಟೆ ಅಯ್ಯಾ ? ನೊಂದರೆ ನೋಯಲಿ, ಇದರಿಂದೇನಾದಡಾಗಲಿ ಕಂಡು ಸುಮ್ಮನಿರ್ದಡೆ ದ್ರೋಹ. ಆನೆಯ ಚೋಹವ ತೊಟ್ಟು ನಾಯಾಗಿ ಬಗುಳಿದಂತೆ, ಭಕ್ತನಾಗಿ ಭವಿಯೊಡ ಕೂಟಂಗಳ ಮಾಡಿ, ಭವಿಶೈವದೈವಕ್ಕೆರಗಿ, ಭವಿಸಂಗ ಭವಿಸೇವೆ, ಭವಿಪಾಕ ಭವಿಪಂತಿ ಭವಿಶೈವಕ್ರಿಯೆ ಮಾಡಿ, ಕೆಟ್ಟು ನಡೆದು ಕೊಟ್ಟು ವರ್ತಿಸಿ, ನರಕಭಾಜನರಾಗಿ ಹೋಹಲ್ಲಿ, ಅರಿದರಿದು ಗುರುರೂಪರಾದ ಶರಣರು ಸುಮ್ಮನಿರ್ದಡೆ ದ್ರೋಹ. ಇದೇನು ಕಾರಣವೆಂದಡೆ, ಆ ಭಕ್ತಮಾರ್ಗವು ಸತ್ಯಶರಣರದಾಗಿ. ಅವರ ಹಾನಿವೃದ್ಧಿ ತನ್ನದಾಗಿ, ಅವರ ಸುಖದುಃಖಂಗಳು ತನ್ನವಾಗಿ. ಅದು ಕಾರಣ ಅವರ ಹೊಡೆದು ಬಡಿದು ಜಡಿದು ನುಡಿದು ತಡಿಗೆ ಸಾರಿಸಿದಲ್ಲಿ ಒಡಗೂಡಿಕೊಂಡಿಪ್ಪ ಲಿಂಗವು. ಅಲ್ಲದಿರ್ದಡೆ ನಡುನೀರೊಳಗದ್ದುವನು ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಸುರತರು ತರುಗಳೊಳಗಲ್ಲ. ಸುರಧೇನುವದು ಪಶುವಿನೊಳಗಲ್ಲ. ಪರುಷ ಪಾಷಾಣದೊಳಗಲ್ಲ. ಶಿಷ್ಯನ ಭಾವಕ್ಕೆ ಗುರು ನರನಲ್ಲ. ನರನೆಂದರೆ ನರಕ ತಪ್ಪದು. ಗುರುವೆ ಪರಶಿವನೆಂದು ಭಾವಿಸಬಲ್ಲಡೆ ಆತನೆ ಶಿಷ್ಯನೆಂಬೆ, ಆತನೆ ಭಕ್ತನೆಂಬೆ, ಅಲ್ಲದಿರ್ದಡೆ ಭವಿಯೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಆಚಾರ ಸನ್ನಹಿತವಾಗಿ ಬಂದಡೆ, ಜಂಗಮ ಬೇರಲ್ಲದಿರ್ದಡೆ ಭೂತಪ್ರಾಣಿ ಎಂಬೆ. ಅರ್ತಿಯಲ್ಲಿ ಲಿಂಗವೆ ಜಂಗಮವೆಂದರಿದು ಮಾಡುವಲ್ಲಿ, ಭಕ್ತನಲ್ಲದಿರ್ದಡೆ ಫಲದಾಯಕನೆಂಬೆ. ಸ್ಥಾವರ ಜಂಗಮ ಒಂದೆ ಎನಬಲ್ಲಡೆ, ಶರಣ ಸಂಬಂಧಿ, ಅಲ್ಲದಿರ್ದಡೆ ಪೂಜಕನೆಂಬೆ. ಇಂತೀ ತ್ರಿವಿಧ ನಿರ್ಣಯದ ಸೋಂಕಿನ ಸುಖವ, ಗುಹೇಶ್ವರ ಲಿಂಗದಲ್ಲಿ ಬಸವಣ್ಣನೊಬ್ಬನೆ ಬಲ್ಲನು
--------------
ಅಲ್ಲಮಪ್ರಭುದೇವರು
-->