ಅಥವಾ

ಒಟ್ಟು 26 ಕಡೆಗಳಲ್ಲಿ , 17 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಮನವೇ, ನಿನ್ನ ನೆನಹು ಸಿದ್ಧಿಯಾದುದಲ್ಲಾ, ಪರಶಿವನೇ ಶ್ರೀಗುರುರೂಪಾಗಿ ನಿನ್ನ ಮನಕ್ಕೆ ಬಂದನು. ಬುದ್ಧಿಯೇ ನಿನ್ನ ಬುದ್ಧಿ ಸುಬುದ್ಧಿಯಾದುದಲ್ಲಾ, ಶ್ರೀಗುರುವೇ ಶಿವ[ಲಿಂಗ]ರೂಪಾಗಿ ನಿನ್ನ ಬುದ್ಧಿಗೆ ಬಂದನು. ಚಿತ್ತವೇ ನೀ ನಿನ್ನ ಚಿತ್ತ ನಿಶ್ಚಿಂತವಾದುದಲ್ಲಾ, ಶಿವಲಿಂಗವೇ ಜಂಗಮರೂಪಾಗಿ ನಿನ್ನ ಚಿತ್ತಕ್ಕೆ ಬಂದನು. ಅಹಂಕಾರವೇ, ನಿನ್ನಹಂಕಾರ ನಿಜವಾದುದಲ್ಲಾ, ಶ್ರೀ ಗುರು ಲಿಂಗ ಜಂಗಮ ತ್ರಿವಿಧವು ಏಕೀಭವಿಸಿ ನಿನಗೆ ಪ್ರಸನ್ನಪ್ರಸಾದವ ಕರುಣಿಸಿದನು. ಆ ಪ್ರಸಾದಲಿಂಗಸ್ವಾಯತವಾಗಿ ನಿಮಗೆ ನಾಲ್ವರಿಗೂ ಪರಿಣಾಮವಾಯಿತ್ತು ಕಾಣಾ. ಪ್ರಾಣವು ನಿನಗೆ ಲಿಂಗಪ್ರಾಣವಾದುದಲ್ಲಾ, ನಮ್ಮೆಲ್ಲರನೂ ಗಬ್ರ್ಥೀಕರಿಸಿಕೊಂಡಿಪ್ಪ ಅಂಗವೇ ಲಿಂಗವಾದುದಲ್ಲಾ. ಪ್ರಾಣವೇ ನಿನ್ನ ಸಂಗದಿಂದ ನಿನ್ನನಾಶ್ರಯಿಸಿಕೊಂಡಿಪ್ಪ ಸರ್ವತತ್ತ್ವಂಗಳೂ ಸರ್ವಪಂಚಾದ್ಥಿಕಾರಿಗಳೂ ಸರ್ವಯೋಗಿಗಳೆಲ್ಲ ಶಿವಪದಂಗಳ ಪಡೆದರಲ್ಲಾ. ಅಹಂಗೆ ಅಹುದು ಕಾಣಾ, ಪ್ರಾಣವೇ ಇದು ದಿಟ, ನೀನೇ ಮಗುಳೆ ಮಹಾಬಂಧುವಾಗಿ ನಿನಗೊಂದು ಏಕಾಂತವ ಹೇಳುವೆನು ಕೇಳು. ನಾನು ನೀನು ಅನೇಕ ಕಲ್ಪಂಗಳಲ್ಲಿಯೂ ಅನೇಕ ಯೋನಿಗಳಲ್ಲಿಯೂ ಜನಿಸಿ ಸ್ಥಿತಿ ಲಯಂಗಳನೂ ಅನುಭವಿಸಿ, ಪಾಪಪುಣ್ಯಂಗಳನುಂಡುದ ಬಲ್ಲೆ. ಅವೆಲ್ಲವನೂ ಕಳೆದುಳಿದು, ಶ್ರೀಗುರುವಿನ ಕರುಣ ಮೇರೆವರಿದು ಮಹಾಪದವಾಯಿತ್ತು. ಶ್ರೀಗುರುವಿನ ಹಸ್ತದಲ್ಲಿ ಜನನವಾಯಿತ್ತು. ಶ್ರೀಗುರುವಿನ ಕರುಣವಾಯಿತ್ತು. ಶಿವಲಿಂಗ ಸ್ವಾಯತವಾಯಿತ್ತು. ಜಂಗಮವೆಂದರಿದು ಜ್ಞಾನವಾಯಿತ್ತು. ಶ್ರೀಗುರು ಲಿಂಗ ಜಂಗಮದಿಂದ ಪ್ರಸಾದವ ಪಡೆದು ಪ್ರಸಾದವನು ಗ್ರಹಿಸಿ ಶಿವಮಹಾಮುಕ್ತಿಪದವಾಯಿತ್ತು. ಇನ್ನೊಂದ ನಾ ನಿಮ್ಮ ಬೇಡಿಕೊಂಬೆನು : ಮಾಯಾಂಗನೆ ಆಸೆ ಮಾಡಿಕೊಂಡು ಬಂದಹಳು, ಅವರಿಬ್ಬರೂ ಹೋಗಲೀಸದಿರಿ, ನಿಮಗೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಾಣೆ ಎನಗೆಯೂ ಅದೇ ಆಣೆ.
--------------
ಉರಿಲಿಂಗಪೆದ್ದಿ
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು ದೃಷ್ಟವಾರಿ ಶರಣೆಂದಡೆ, ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು ನೋಡಾ. ಮುಟ್ಟಿ ಚರಣಕ್ಕೆರಗಿದಡೆ ತನು[ವ]ಪ್ಪಿದಂತೆ, ಅಹುದು ಪರುಷ ಮುಟ್ಟಿದಂತೆ. ಕರ್ತೃ ಕೂಡಲಸಂಗನ ಶರಣರ ಸಂಗವು ಮತ್ತೆ ಭವಮಾಲೆಗೆ ಹೊದ್ದಲೀಯದು ನೋಡಾ. 140
--------------
ಬಸವಣ್ಣ
ಮನ್ನಣೆ ತಪ್ಪಿದ ಬಳಿಕ ಅಲ್ಲಿರಬಹುದೆ ಸಲಿಗೆ ತಪ್ಪಿದ ಬಳಿಕ ಸಲುವುದೆ ಮಾತು ತಿವಿದು ತಪ್ಪಿದಡೆ ಸಾವೊಂದು ತಪ್ಪದು. ಬರಿದೆ ಚಿಂತಿಸಿ ಬಳಲಿ ಕೆಡಬೇಡ ಮನವೆ. ಅಹುದು ಆಗದೆಂಬ ಸಂದೇಹವುಳ್ಳಡೆ ಅಹುದೆ ಕೂಡಲಸಂಗಯ್ಯ ಕೊಟ್ಟಲ್ಲದಿಲ್ಲ.
--------------
ಬಸವಣ್ಣ
ಆ ಪರಶಿವನ ಚಿದ್ವಿಲಾಸದಿಂದಾದ ಇಹದೊಳಗೆ ನರನಾಗಿ ಅರುವುಹಿಡಿದು ಕುರುಹುಕಂಡವಂಗೆ ಗರ್ವವುಂಟೆ ? ಅರುವು ಪಿಡಿಯದೆ ಕುರುಹುಗಾಣದೆ ಬರಿಯ ಬಾಯಿಲೆ ಬ್ರಹ್ಮವ ನುಡಿದರೆ ಬ್ರಹ್ಮನಾಗಬಲ್ಲರೆ ? ಬ್ರಹ್ಮನಾದ ಮೇಲೆ ಇಮ್ಮನ ಎಲ್ಲಿಹದೊ ? ತಾನು ಅದ್ವೆ ೈತನಾದ ಮೇಲೆ ದ್ವೆ ೈತವನಾಚರಿಸುವದುಂಟೆ ? ತಾನೇ ನಿಜ ಸರ್ವವೂ ಸುಳ್ಳೆಂಬುದುಂಟೆ ? ಅಹುದು ಅಲ್ಲ ಎಂಬುವುದುಂಟೆ ? ಗುರುವ ಹಿಂದುಗಳೆದು, ಕಟ್ಟಿದಾ ಲಿಂಗವ ಬಿಟ್ಟು, ಜಂಗಮವ ಜರಿಯಲುಂಟೆ ? ಅಖಂಡವ ತಿಳಿದು ಆ ಅಖಂಡವು ತಾನಾಗದೆ ಭಂಗಿ ಮುಕ್ಕಿದವನಂತೆ, ಅಂಗ ಬತ್ತಲೆಯಾಗಿ, ಮಂಗಮತಿಗೂಡಿ ಸಂಗವ ಸಂದು, ಒಂದಾಗದೆ ಭಂಗಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ. ಸರ್ವೇಂದ್ರಿಯಂಗಳ ಸಂಚವ ಬಿಟ್ಟು, ಏಕೇಂದ್ರಿಯದಲ್ಲಿ ವಸ್ತುವ ಆಚರಿಸಬೇಕೆಂಬುದು ಅದೇನು ಹೇಳಾ. ಅಲ್ಲ ಅಹುದು, ಉಂಟು ಇಲ್ಲ ಎಂಬುದು ಗೆಲ್ಲ ಸೋಲಕ್ಕೆ ಹೋರುವುದು ಅದೇನು ಹೇಳಾ. ಅದು ಪಂಚಲೋಹದ ಸಂಚದಂತೆ ಹಿಂಚು ಮುಂಚಿನ ಭೇದ. ಅರಿದೆ ಮರೆದೆನೆಂಬುದು ಪರಿಭ್ರಮಣದ ಭೇದ. ಅರಿಯಲಿಲ್ಲ ಮರೆಯಲಿಲ್ಲ ಎಂಬುದು ಅದು ಪರತತ್ವದ ಭೇದ. ಇಂತೀ ಗುಣ ಭಾವಂಗಳ ಲಕ್ಷಿಸಿ, ದೃಷ್ಟಿ ಉಂಟೆಂದಲ್ಲಿ ಆತ್ಮ, ದೃಷ್ಟ ನಷ್ಟವಾಯಿತ್ತೆಂಬಲ್ಲಿಯೆ ಪರಮ. ಉಭಯದ ತೊಟ್ಟು ಬಿಟ್ಟಲ್ಲಿ, ನಿಜ ನಿಶ್ಚಯ ಅದೆಂತು ತಾನಂತೆ, ಕಾಮಧೂಮ ಧೂಳೇಶ್ವರನು.
--------------
ಮಾದಾರ ಧೂಳಯ್ಯ
ಜೀವವಳಿದು ಪರಮನಾಗಬೇಕೆಂಬರು: ಜೀವವೆಲ್ಲಿ ಅಳಿವುದು ? ಪರಮನೆಲ್ಲಿ ಅಹುದು ? ಅಳಿವುದು ಬೇರೊಂದು. ಈ ಉಭಯದ ಅಳಿವ ಉಳಿವ ಮನೆಯ ಹೇಳಾ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಅಂಗ ಮೂವತ್ತಾರರ ಮೇಲೆ ಲಿಂಗ. ನಿಸ್ಸಂಗವೆಂಬ ಕರದಲ್ಲಿ ಹಿಡಿದು ಅಂಗವಿಸಿ, ಅಹುದು ಆಗದು ಎಂಬ ನಿಸ್ಸಂಗದ ಅರ್ಪಣವ ಮಾಡಿ ಸುಸಂಗ ಪ್ರಸಾದವ ಕೊಳಬಲ್ಲವಂಗೆ ಗುಹೇಶ್ವರಾ, ಮುಂದೆ ಬಯಲು ಬಯಲು ಬಟ್ಟ ಬಯಲು !
--------------
ಅಲ್ಲಮಪ್ರಭುದೇವರು
ಶಿವಜೀವರಿಲ್ಲದಂದು, ಮಂತ್ರತಂತ್ರಗಳಿಲ್ಲದಂದು, ಅಹುದು ಅಲ್ಲ ಇಲ್ಲದಂದು, ನವಬ್ರಹ್ಮ ಷಡುಬ್ರಹ್ಮ ಪಂಚಬ್ರಹ್ಮವಿಲ್ಲದೆ ನಿನ್ನ ನೀ ಅರಿಯದೆ ಅಖಂಡನಾಗಿರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನಡೆವ ನುಡಿವ ಚೈತನ್ಯವುಳ್ಳನಕ್ಕ ಒಡಲ ಗುಣಂಗಳಾರಿಗೂ ಕಾಣವು. ನೋಡುವ ನಯನ, ಕೇಳುವ ಶ್ರೋತ್ರ, ವಾಸಿಸುವ ಘ್ರಾಣ, [ಮುಟ್ಟವ ತ್ವಕ್ಕು, ರುಚಿಸುವ ಚಿಹ್ವೆ] ತಾಗಿತ್ತೆನಬೇಡ. ನೋಡುತ್ತ [ಕೇಳುತ್ತ ವಾಸಿಸುತ್ತ ಮುಟ್ಟುತ್ತ, ರುಚಿಸುತ್ತ] ಲಿಂಗಾರ್ಪಿತವಮಾಡಿ ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ ಸರ್ವಾಂಗಶುದ್ಧವೆಂಬುದಿದೆಯಯ್ಯಾ. ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ; ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ; ಅಹುದು ಅಲ್ಲ, ಬೇಕುಬೇಡೆಂಬ ಸಂಶಯವ ಕಳೆದು; ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು.
--------------
ಚನ್ನಬಸವಣ್ಣ
ನುಲಿಯೊಡೆಯರೆ ನಿಮ್ಮಾಳ್ದರ ಕೊಳ್ಳಿರೆ. ಆಳ್ದರೆಂದವರಾರು ? ಅವರು ನಿಮ್ಮ ಕೈಯಲ್ಲಿದ್ದಂಥವರೂ ಅವರಾಳ್ದರಲ್ಲ. ಅವರೇನು ? ಅವರು ನಿಮ್ಮ ಇಷ್ಟರುದ್ರರಾಗರೆ ? ಜಂಗಮವಾಗಿದ್ದಹರು ಇವರು ಬೇಡವೆ ? ಇಹರೆ ಬೇಡೆನ್ನೆ, ಹೋಹರೆ ನಿಲಿಸ ಶಕ್ತನಲ್ಲ. ನಾವು ಇರಲು ಬಲ್ಲಲ್ಲಿ ಇರಿ, ಕೈಯಲ್ಲಿ ಕೊಳ್ಳಿರೆ. ಮುನ್ನವೆ ಕೊಂಡಿದ್ದೆನು, ಎನ್ನನೇಕೆ ಒಲ್ಲೆಯಯ್ಯಾ, ನೀನು ಮುನಿದಿದ್ದೆಯಾಗಿ, ಇನ್ನು ಮುನಿವುದಿಲ್ಲ ನಾನು. ನಿಮ್ಮ ನಂಬುವದಿಲ್ಲ. ಹೊಣೆಯ ಕೊಟ್ಟೆಹೆನು. ಅದ ಕಂಡು, ಮಾಚಿದೇವ ಮಹಾಪ್ರಸಾದಿ ಹೊಣೆಯಾಗಯ್ಯಾ. ನಂಬೆನು ಜೀಯಾ, ನಿಮ್ಮಾಣೆ. ಪತ್ರವಾದರೆ ಕೊಟ್ಟೆಹೆನು, ಇರಲಿಕೆ ಠಾವೆಲ್ಲಿ ? ಕರದಲ್ಲಿಯೆ ಅಲ್ಲ, ಉರದಲ್ಲಿಯೆ ಅಹುದು. ನಂಬಿದೆನು, ಸುಖದಲ್ಲಿಹ ಧರ್ಮೇಶ್ವರ[ಲಿಂಗಾ].
--------------
ಹೆಂಡದ ಮಾರಯ್ಯ
ಆದಿಪಿಂಡ ಮಧ್ಯಪಿಂಡ ಅನಾದಿಪಿಂಡವೆಂದು ಮೂರು ಪ್ರಕಾರವಾಗಿಪ್ಪುದು. ಆದಿಪಿಂಡವೇ ಜೀವಪಿಂಡ. ಮಧ್ಯಪಿಂಡವೇ ಸುಜ್ಞಾನಪಿಂಡ. ಅನಾದಿಪಿಂಡವೇ ಚಿತ್‍ಪಿಂಡ. ಜೀವಪಿಂಡವೆಂದು ಅಷ್ಟತನುಮೂರ್ತಿಗಳಿಂದ ಉತ್ಪತ್ತಿಯಾದವು. ಅಂದಿಂದ ಭವಭವಂಗಳೊಳಗೆ ಬಂದು, ಶಿವಕೃಪೆಯಿಂದ ಭವಕಲ್ಪಿತ ತೀರಿ, ಶಿವವಾಸನಾ ಪಿಂಡಸ್ವರೂಪವನಂಗೀಕರಿಸಿದ್ದೀಗ ಜೀವಪಿಂಡ. ಸುಜ್ಞಾನಪಿಂಡವೆಂದು ಶಿವಾಜ್ಞೆಯಿಂದ ಚಿತ್ತಿನಂಶವೆ ಸಾಕಾರವಾಗಿ, ಜಗದ್ದಿತಾರ್ಥಕಾರಣ ಮತ್ರ್ಯಲೋಕದಲ್ಲಿ ಉದಯವಾಗಿ, ಶರೀರಸಂಬಂಧಿಗಳಾಗಿಯು ಆ ಶರೀರದ ಗುಣಧರ್ಮಕರ್ಮಂಗಳ ಹೊದ್ದಿಯು ಹೊದ್ದದಿಪ್ಪರು. ಅದೇನು ಕಾರಣವೆಂದಡೆ:ಚಿದಂಶಿಕರಾದ ಕಾರಣ. ಶರೀರವಿಡಿದರೆಯೂ ಆ ಶರೀರಸಂಬಂಧಿಗಳಲ್ಲ ಎಂಬುದಕ್ಕೆ ದೃಷ್ಟವಾವುದೆಂದಡೆ: ಉರಿ ಬಂದು ಕರ್ಪೂರವ ಸೋಂಕಲಾಗಿ ಕರ್ಪೂರದ ಗುಣ ಕೆಟ್ಟು ಉರಿಯೇ ಆದಂತೆ, ಪರುಷದ ಬಿಂದು ಬಂದು ಲೋಹವ ಸೋಂಕಲು ಆ ಲೋಹದ ಗುಣ ಕೆಟ್ಟು ಚಿನ್ನವಾದಂತೆ, ಆ ಶರಣರು ಬಂದು ಆ ಲಿಂಗವ ಸೋಂಕಲಾಗಿ, ಆ ಪಂಚಭೂತದ ಪ್ರಕೃತಿಕಾಯ ಹೋಗಿ, ಪ್ರಸಾದಕಾಯವಾಗಿತ್ತಾಗಿ. ಇದು ಕಾರಣ, ಬಸವ ಮೊದಲಾದ ಪ್ರಮಥರು ಧರಿಸಿದ ಶರೀರವೆಲ್ಲ ಸುಜ್ಞಾನಪಿಂಡವೆಂದು ಹೇಳಲ್ಪಟ್ಟಿತ್ತು. ಅದುಕಾರಣ ಪಂಚಭೂತಂಗಳ ಪವಿತ್ರವ ಮಾಡಲೋಸ್ಕರವಾಗಿ, ಧರಿಸಿದ ಪಿಂಡವಲ್ಲದೆ, ವಾಸನಾಧರ್ಮದ ಪಿಂಡವಲ್ಲ. ಶುದ್ಧರೇ ಅಹುದು ದೇಹಮಾತ್ರದಲಾದ ವಾಸನಾಪಿಂಡವೆಂಬುದದು ಅಜ್ಞಾನ ನೋಡ. ಚಿತ್‍ಪಿಂಡವೆಂದು ಚಿನ್ನ ಬಣ್ಣದ ಹಾಂಗೆ ಶಿವತತ್ವವ ಬಿಟ್ಟು ಎಂದೂ ಅಗಲದೆ ಇದ್ದಂಥಾದು. ಚಿದಂಗಸ್ವರೂಪವಾಗಿ, ಚಿದ್ಭನಲಿಂಗಕ್ಕೆ ಚಿದ್ಭಾಂಡಸ್ಥಾನವಾಗಿದ್ದಂಥದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಹುದು ಅಹುದು ಲಿಂಗವಿಲ್ಲದ ಶಿಷ್ಯನ ಅರಿಯಿಸಬಲ್ಲ ಗುರುವು ಲಿಂಗವಿಲ್ಲದ ಗುರುವು. ಲಿಂಗವಿಲ್ಲದೆ ಇದ್ದ ಗುರುವನರಿಯಬಲ್ಲ ಶಿಷ್ಯ, ಶಿಷ್ಯನನರಿಯಬಲ್ಲ ಗುರು, ಇವರಿಬ್ಬರ ಭೇದವ ನೀನೆ ಬಲ್ಲೆ ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಒಳಹೊರಗೆ ಪರಿಪೂರ್ಣವಾದ ಸ್ವಯಜ್ಞಾನಿ ಕ್ರಿಯಾಮಯ ನಾನಯ್ಯ, ನಿಃಕ್ರಿಯ ನಾನಯ್ಯ, ಶೈವ ನಾನಯ್ಯ, ವೀರಶೈವ ನಾನಯ್ಯ, ಧರ್ಮವೇ ನಾನಯ್ಯ, ಅಧರ್ಮವೇ ನಾನಯ್ಯ, ಬೇಕುವೆ ನಾನಯ್ಯ, ಬೇಡವೆ ನಾನಯ್ಯ, ಅಹುದು ನಾನಯ್ಯ, ಅಲ್ಲವೆ ನಾನಯ್ಯ, ನೀನು ನಾನಯ್ಯ, ನಾನುವೆ ನಾನಯ್ಯ, ಏನೇನುವೆ ನಾನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸುಖದುಃಖಗಳನರಿವುದು, ಕಾಯ ಜೀವ ಒಂದಾದಲ್ಲಿ. ಅಹುದು ಅಲ್ಲಾ ಎಂಬುದನರಿವುದು, ಜೀವ ಪರಮ ಒಂದಾದಲ್ಲಿ. ಕಂಡೆ ಕಾಣೆನೆಂಬುದು, ದೃಕ್ಕೂ ದೃಶ್ಯ ಒಂದಾದಲ್ಲಿ. ಇಂತೀ ಪೂರ್ವ ಉತ್ತರ ಮಧ್ಯದಲ್ಲಿ ನಿಶ್ಚಯವದೇಕೋ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->