ಅಥವಾ

ಒಟ್ಟು 16 ಕಡೆಗಳಲ್ಲಿ , 14 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ, ನೀವು ಕೇಳಿರೆ, ನೀವು ಕೇಳಿರೆ, ನಿಮ್ಮ ನಿಟಿಲದಲ್ಲಿ ಸಂಚಿತ ಪ್ರಾರಬ್ಧ ಆಗಾಮಿ ಎಂಬ ಲಿಖಿತವ ಬರೆದವಾರು ಹೇಳಿರೆ ? ನೀವೆ ಬ್ರಹ್ಮ, ಬೇರೆ ಈಶ್ವರನಿಲ್ಲೆಂದು ನುಡಿವಿರಿ. ತಪಸ್ಸು ತನ್ನಂತೆ, ಊಟ ಮನದಿಚ್ಛೆಯೆಂಬ ಲೋಕಗಾದೆಯ ಮಾತು ನಿಮಗಾಯಿತ್ತು. ಅಶನವನುಂಡು ವ್ಯಸನಕ್ಕೆ ಹರಿದು ವಿಷಯಂಗಳೆಂಬ ಹಿಡಿಮೊಲಕ್ಕೆ ಸಿಲ್ಕಿ ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು, ನಾಯಾಗಿ ಬಗುಳಿ ನಾಯ ಡೋಣಿಯಲ್ಲಿ ಉಂಡು ನಾಯ ಸಾವ ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು ? ಬ್ರಹ್ಮ ವಿಷ್ಣ್ವಾದಿಗ?ು `ಬ್ರಹ್ಮೋಹಂ' ಎಂದು ಕೆಮ್ಮನೆ ಕೆಟ್ಟು ಹದ್ದು ಹೆಬ್ಬಂದಿಗಳಾದುದನರಿಯಿರೆ ? ಹಮ್ಮಿಂದ ಸನತ್ಕುಮಾರ ಒಂಟೆಯಾದುದನರಿಯಿರೆ ? ಕರ್ತನು ಭರ್ತನು ಹರ್ತನು ಶಿವನಲ್ಲದೆ ಬೇರೆ ಮತ್ತೊಬ್ಬ ಕಾವರಿಲ್ಲ ಕೊಲುವರಿಲ್ಲ, ಮತ್ತೊಬ್ಬರು?್ಳಡೆ ಹೇಳಿರೆ, ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ ಅಸತ್ಯಮಪ್ರತಿಷ್ಠಂ ಚ ಜಗದಾಹುರನೀಶ್ವರವರಿï ಎಂದುದಾಗಿ ಶಿವನೆ, ನಿಮ್ಮನಿಲ್ಲೆಂದು, ಬೊಮ್ಮವಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ ಬಾಯಲ್ಲಿ ಹುಡಿಯ ಹೊಯ್ಸಿ, ನರಕಾಗ್ನಿಯಲ್ಲಿ ಅನೇಕಕಾಲ ಇರಿಸದೆ ಮಾಣ್ಬನೆ ನಮ್ಮ ಕೂಡಲಚೆನ್ನಸಂಗಮದೇವರು ?
--------------
ಚನ್ನಬಸವಣ್ಣ
ದೇಶಾಖಿಯಲ್ಲದ ರಾಗ, ಉಪ್ಪಿಲ್ಲದ ಊಟ ಸಪ್ಪೆ ಕಾಣಿರೋ ಅಯ್ಯಾ, ಮಿಕ್ಕಿನ ರಾಗ. ಶಿವನಲ್ಲದ ದೈವಫಲವಿಲ್ಲ ಕಾಣಿರೊ ಅಯ್ಯಾ. ಮಿಕ್ಕಿನ ತುಂಬುರ ನಾರದರು ಶಿವನ ಕೇಳಿಸುವ ರಾಗ, ಮಹಾಲಿಂಗ ಗಜೇಶ್ವರನ ನಚ್ಚಿನ ರಾಗ.
--------------
ಗಜೇಶ ಮಸಣಯ್ಯ
ಅಣ್ಣೆವಾಲ ಕರೆದು, ಪುಣ್ಯದ ಕಡೆಗೋಲಿನಲ್ಲಿ ಕಡೆದು, ಕಂಪಿಲ್ಲದ ತುಪ್ಪವನು ಅನಂತ ಹಿರಿಯರಿಗೆಡೆಮಾಡಿ ಉಣಬಡಿಸಲೊಡನೆ, ಊಟ ನಿರಾಕುಳವಾಗಿ ನಿಂದಿತ್ತು; ಪ್ರಾಣವಿಲ್ಲದೆ ಪರಿಣಾಮಿಗಳಾದರು ಅನಂತಕೋಟಿ ಹಿರಿಯರು. ಅವರುಂಡ ಪ್ರಸಾದವನುಣಹೋದಡೆ ಎನಗವಧಿಯಾಯಿತಯ್ಯಾ. ಹಿರಿಯತನದುಪಕಾರವ ನೋಡದೆ, ಅವರ ಕಡಿದು ಆನಡಿಯಿಟ್ಟೆನಯ್ಯಾ ಸಂಗಯ್ಯನಲ್ಲಿಗೆ.
--------------
ನೀಲಮ್ಮ
ಅನುಭಾವಮಾಡಬಲ್ಲವರೆಂದು ಮನ ಭಾವ ಕಳೆಯೊಳು ನಡೆವ ಲಿಂಗಜಂಗಮ ದ್ರೋಹಿಗಳ ಸಂಗಸಮರಸ ಮಾಡಲಾಗದು ಶಿವಜ್ಞಾನಿಗಳು. ಅದೇನು ಕಾರಣವೆಂದೊಡೆ: ಶುಕನ ಮಾತು, ಚೆಲುವು ನೀತಿ, ಹೊಲೆಯ ವಿಹಂಗನ ಊಟ ವಿಸರ್ಜನೆಯಂತೆ ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಟದಲಿ ಕೆಲಹೊತ್ತುಗಳೆದು, ಕೂಟದಲಿ ಕೆಲಹೊತ್ತುಗಳೆದು, ನೋಟದಲಿ ಕೆಲಹೊತ್ತುಗಳೆದು, ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ, ಊಟ ಮಾಟಕೂಟದಲ್ಲಿ ಕೋಟಲೆಗೊಳುತ್ತಿದೆನೆಂಬುವನೊಬ್ಬ ಪೋಟ. ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಬಸಿರೊಳಗಣ ಕೂಸಿಂಗ ಬೇರೆ ಊಟ ಬೇರೆ ಮೀಹ ಉಂಟೆ ? ಜ್ಞಾನವೆಂಬ ಗರ್ಭದೊಳಗೆ ಲಿಂಗವೆಂಬ ಶಿಶುವಿರಲು ಬೇರೆ ಕೊಡುವ ಕೊಂಬ ಪರಿಯೆಂತೊ ? ದೇಹದೊಳಗಿನ ಪ್ರಾಣವ ಬೇರೆ ಮಾಡಿ ಭೋಗಿಸಲುಂಟೆ ? ಅನುಮಾನ ಅಳಿದು ಮಹದಲ್ಲಿ ಮನ ಮುಸುಕಿದ ಬಳಿಕ ಭಿನ್ನವ ಮಾಡಲುಂಟೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ನೇಮವ ಮಾಡಿಕೊಂಡು ತನ್ನಯ ಸಂಸಾರದ ಕಾಮ್ಯಾರ್ಥಕ್ಕಾಗಿ ಐದು ಹತ್ತು ಹದಿನೈದೆಂದು ಮೀರಿ ಬಂದಡೆ ಕೃತ್ಯವಿಲ್ಲ ಎಂದು ಅವರಿಗಿಕ್ಕಿಹೆವೆಂದು ಭಕ್ತರ ಮನೆಯಲ್ಲಿ ಹೊಕ್ಕು ಹೊಕ್ಕು ಬೇಡುವುದು ಭಕ್ತನ ಯುಕ್ತಿಯೆ? ಆರೊಡವೆಯ ಆರಿಗೆ ಬೇಡಿ ಮಾಡಿ ತಾನು ದಾರಿಯಾದೆನೆಂಬ ಭೋಗಿಯ ನೋಡಾ? ವೇಶಿಯ ಪುತ್ರ ಪೈತೃಕವ ಮಾಡಿದಲ್ಲಿ ಅದೇತರ ಊಟ? ಅದೇತರ ಮಾಟ? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಗಂಡ ಭಕ್ತನಾಗಿ, ಹೆಂಡತಿ ಭವಿಯಾದಡೆ ಉಂಡ ಊಟ ಇಬ್ಬರಿಗೂ ಸರಿಭಾಗ! ಸತ್ತ ನಾಯ ತಂದು ಅಟ್ಟದ ಮೇಲಿಳುಹಿ ಒಬ್ಬರೊಪ್ಪಚ್ಚಿಯ ಹಂಚಿಕೊಂಡು ತಿಂಬಂತೆ! ರಾಮನಾಥ.
--------------
ಜೇಡರ ದಾಸಿಮಯ್ಯ
ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ : ನಿಮ್ಮ ನಿಟಿಲತಟದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಲಿಖಿತವ ಬರೆದವರಾರು ? ಕೇಳಿರೆ. ನೀವು ನೀವೇ ಬ್ರಹ್ಮವು, ಬೇರೆ ಈಶ್ವರನಿಲ್ಲೆಂದು ನುಡಿವಿರಿ. ತಪಸ್ಸು ತನ್ನಂತೆ ಊಟ ಮನದಿಚ್ಛೆಯೆಂಬ ಗಾದೆಯ ಮಾತು ನಿಮಗಾಯಿತ್ತು. ಅನ್ನವನುಂಡು, ವ್ಯಸನಕ್ಕೆ ಹರಿದು, ವಿಷಯಂಗಳೆಂಬ ಹಿಡಿಮಲಕ್ಕೆ ಸಿಕ್ಕಿ, ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು, ನಾಯಾಗಿ ಬಗಳಿ, ನಾಯಡೋಣಿಯಲುಂಡು ನಾಯಿಸಾವು ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು ? ಬ್ರಹ್ಮ ವಿಷ್ಣ್ವಾದಿಗಳು ಬ್ರಹ್ಮೋಹಮೆಂದು ಕೆಮ್ಮನೆ ಕೆಟ್ಟು, ಹದ್ದು ಹೆಬ್ಬಂದಿಗಳಾದುದನರಿಯಿರೆ. ಹಮ್ಮಿನಿಂದ ಸನತ್ಕುಮಾರ ಒಂಟಿಯಾದುದನರಿಯಿರೆ. ಕರ್ತನು ಭರ್ತನು ಹರ್ತನು ಶಿವನಲ್ಲದೆ ಬೇರೆ ಕಾವಲ್ಲಿ ಕೊಲುವಲ್ಲಿ ಮತ್ತೊಬ್ಬರುಳ್ಳರೆ ಹೇಳಿರೆ. ಅದೆಂತೆಂದಡೆ : ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ ತ್ವಂ ವಿಶ್ವಭಕ್ತಾ ತನ್ನ ತವ ನಾಸ್ತಿ ಭರಾ | ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ || ಎಂದುದಾಗಿ, ಶಿವನೇ ನಿಮ್ಮನಿಲ್ಲೆಂದು, ಬೊಮ್ಮ ತಾವೆಂಬ ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ, ಬಾಯಲ್ಲಿ ಹುಡಿಯ ಹೊಯಿಸಿ, ನರಕಾಗ್ನಿಯಲ್ಲಿ ಅಕ್ಷಯಕಾಲವಿರಿಸದೆ ಮಾಣ್ಬನೆ, ನಮ್ಮ ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಸಂಗಮೇಶ್ವರದ ಅಪ್ಪಣ್ಣ
ಗುರುವಿಲ್ಲದ ಕೂಟ ಲಿಂಗವಿಲ್ಲದ ನೋಟ, ಜಂಗಮವಿಲ್ಲದ ಮಾಟ, ಪ್ರಸಾದವಿಲ್ಲದ ಊಟ, ಈ ನಾಲ್ಕರ ಬೇಟವಿಲ್ಲದ ಕೂಟ, ಕೂಡಲಚೆನ್ನಸಂಗಯ್ಯನೆನಲಿಲ್ಲದ ಆಟ
--------------
ಚನ್ನಬಸವಣ್ಣ
ಪ್ರಾಣಲಿಂಗಿಯ ನಿಲವ ಪೇಳ್ವೆ. ಬಲ್ಲರೆ ಪೇಳಿರಿ, ಅರಿಯದಿದ್ದರೆ ಕೇಳಿರಯ್ಯಾ. ಪ್ರಾಣಲಿಂಗಿಗೆ ಪ್ರಪಂಚದ ಪ್ರೇಮವುಂಟೆ ? ಪ್ರಾಣಲಿಂಗಿಗೆ ಮಾತಾಪಿತ, ಸತಿಸುತರುಗಳು ಮೊದಲಾದ ಬಂಧುಗಳ ಸ್ನೇಹಿತರ ಪ್ರೇಮವುಂಟೆ ? ಪ್ರಾಣಲಿಂಗಿಗೆ ಪರದ್ರವ್ಯದ ಪ್ರೇಮವುಂಟೆ ? ಪ್ರಾಣಲಿಂಗಿಗೆ ದ್ವೈತಿಗಳಾದ ವೇದಾಂತಿ, ಸಿದ್ಧಾಂತಿಗಳು ಮೊದಲಾದ ಭಿನ್ನಭಾವದ ಜೀವಾತ್ಮರಲ್ಲಿ ಪ್ರೇಮವುಂಟೆ ? ಪ್ರಾಣಲಿಂಗಿಗೆ ಊಟ ಉಡಿಗೆ ತೊಡಿಗೆ ಮೃಷ್ಟಾನ್ನ ಭೋಜನವ ಸೇವಿಸಿ, ಸಕಲಪದಾರ್ಥವ ಭೋಗಿಸಬೇಕೆಂಬ ಮಮಕಾರವುಂಟೆ ? ಇಂತೀ ಮಾಯಾಪ್ರಪಂಚದ ವಿಲಾಸದ ಮೇಲಣ ಮಮಕಾರವನಳಿದುಳಿದಾತನೇ ಪ್ರಾಣಲಿಂಗಿ, ಇಲ್ಲದಾತನೇ ಅಂಗಲಿಂಗಿ ಮುಖಭಂಗಿತರಾದ ಜೀವರುಗಳು ಎಂದರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಭೋಜನ ಮಾಡುವ ಸಾಧನೆವಂತರು ಕೇಳಿರೊ: ಲಿಂಗ ಕರ್ತೃವಾಗಿ ನೀ ಭೃತ್ಯನಾಗಿದ್ದಲ್ಲಿ ಲಿಂಗ ಅಮಲ, ನೀ ಮಲದೇಹಿ, ನಿನಗೆ ಪ್ರಪಂಚು, ಲಿಂಗವು ನಿಃಪ್ರಪಂಚು, ನೀ ಅಂಗ, ಲಿಂಗವು ನಿರಂಗ. ಲಿಂಗಕ್ಕೂ ನಿನಗೂ ಸಹಭೋಜನವೆಂತುಟಯ್ಯಾ? ಜಾಗ್ರದಲ್ಲಿ ತೋರಿ, ಸ್ವಪ್ನದಲ್ಲಿ ಕಂಡುದ ಲಿಂಗಕ್ಕೆ ಸಹಭೋಜನವ ಮಾಡುವ ಪರಿಯಿನ್ನೆಂತೊ? ಸಾಕು ಕುಟಿಲದ ಊಟ, ಸದಾಶಿವಮೂರ್ತಿಲಿಂಗವು ಮುಟ್ಟದ ಅರ್ಪಿತ.
--------------
ಅರಿವಿನ ಮಾರಿತಂದೆ
ಹುಟ್ಟಿ ಹೋಟಾರದಲ್ಲಿ ಒಂದಾವೆ, ಕೋಟಿ ಮರಿಯನಿಕ್ಕಿತ್ತು ಅವಕ್ಕೆ ಊಟ ಎಲ್ಲಿಂದ ಬಹವು ಎಂಬುದನರಿತಲ್ಲಿ, ಲಿಂಗಮೂರ್ತಿಯ ಧ್ಯಾನ. ಆ ಕೂರ್ಮ ತನ್ನೂಟ, ಅವರಸುವಿನಾಟ. ಸಗರದ ಬೊಮ್ಮನೊಡೆಯ ತನುಮನದಲ್ಲಿ ಕೂರ್ತು ಸಂಗವಾಗಿರು.
--------------
ಸಗರದ ಬೊಮ್ಮಣ್ಣ
ಯಾಚಕನ ಮಾಟ, ಕೀರ್ತಿಗೆ ಇಕ್ಕುವನ ಮನೆಯಲ್ಲಿಯ ಊಟ, ಜಗ ಮೆಚ್ಚಬೇಕೆಂದು ಮಾಟ ಕೂಟ, ಮನ ಮೆಚ್ಚಬೇಕೆಂಬುದಕ್ಕಿಲ್ಲ. ಇಂತೀ ಮಾಟ ಕೂಟ, ಅವನ ವ್ರತದಾಟ, ಕೂಸು ಹೇತು ಕಲಸಿ, ತಮ್ಮಪ್ಪನ ಬಾಯಲ್ಲಿ ಇಕ್ಕಿ, ಮಿಕ್ಕುದ ತೋರಿದಂತಾಯಿತ್ತು. ವರ್ತಕ ಚಿತ್ತಶುದ್ಧವಿಲ್ಲದವನ ತ್ರಿವಿಧದ ಗೊತ್ತಿನ ಪೂಜೆ ಮಾಡಿ, ನಷ್ಟವಹುದಕ್ಕೆ ಇದೇ ದೃಷ್ಟ. ಇದಕ್ಕೆ ಐಘಂಟೇಶ್ವರಲಿಂಗವೇ ಸಾಕ್ಷಿ.
--------------
ಸತ್ತಿಗೆ ಕಾಯಕದ ಮಾರಯ್ಯ
ಬೊಬ್ಬೆಯ ಬಾಯಿ, ಬಾಚದ ಮಂಡೆ, ಮೀರಿದ ಶರಣಂಗಲ್ಲದೆ ಇಲ್ಲ. ಓಡಿನ ಊಟ, ಕಾಡಿನಲ್ಲಿ ಇಕ್ಕೆ, ಮೀರಿದ ಶರಣಂಗಲ್ಲದೆ ಇಲ್ಲ. ವಿರಕ್ತೋ ವಾsಥ ಯುಕ್ತೋ ವಾ ಸಸ್ತ್ರ್ಯಾದಿವಿಷಯೇಷ್ವಪಿ ಪಾಪೈರ್ನೈವ ಪ್ರಲಿಪ್ಯೇತ ಪದ್ಮಪತ್ರಮಿವಾಂಭಸಾ ಎಂದುದಾಗಿ, ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣರು ಮಲೆಯೊಳಗಿರ್ದಡೇನು ? ಮೊಲೆಯೊಳಗಿರ್ದಡೇನು ?
--------------
ಚನ್ನಬಸವಣ್ಣ
ಇನ್ನಷ್ಟು ... -->