ಅಥವಾ

ಒಟ್ಟು 26 ಕಡೆಗಳಲ್ಲಿ , 18 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ ! ಮಹಾದೇವ, ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ? ಮನವೆ ಗುರುವಾದ ಕಾರಣ,_ ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು !
--------------
ಅಲ್ಲಮಪ್ರಭುದೇವರು
ಆರೆಂದು ಕುರುಹ ಬೆಸಗೊಳಲು, ಏನೆಂದು ಹೇಳುವೆನಯ್ಯಾ ? ಕಾಯದೊಳಗೆ ಮಾಯವಿಲ್ಲ; ಭಾವದೊಳಗೆ ಭ್ರಮೆಯಿಲ್ಲ. ಕರೆದು ಬೆಸಗೊಂಬಡೆ ಕುರುಹಿಲ್ಲ. ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು ನಿರ್ಬುದ್ಧಿಯಾದವಳನೇನೆಂಬೆನಣ್ಣಾ ? ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ ಎನ್ನ ಅಜಗಣ್ಣತಂದೆಯ ಬೆನ್ನಬಳಿಯವಳಾನಯ್ಯಾ.
--------------
ಮುಕ್ತಾಯಕ್ಕ
ಹಗಲು ಮನಸಿಂಗಂಜಿ ಇರುಳು ಕನಸಿಂಗಂಜಿ ಧ್ಯಾನ ಮೋನಿಯಾಗಿರ್ದಳವ್ವೆ. ಸಖಿ ಬಂದು ಬೆಸಗೊಂಡಡೆ, ಏನೆಂದು ಹೇಳುವಳವ್ವೆ ಏನೆಂದು ನುಡಿವಳವ್ವೆ? ಸಾಕಾರದಲ್ಲಿ ಸವೆಸವೆದು ನಿರಾಕಾರದಲರ್ಪಿಸಿದಡೆ ಮಹಾಲಿಂಗ ಗಜೇಶ್ವರನುಮೇಶ್ವರನಾಗಿರ್ದನವ್ವೆ.
--------------
ಗಜೇಶ ಮಸಣಯ್ಯ
ಕಾಯದಲಾದ ಮೂರ್ತಿಯಲ್ಲ, ಜೀವದಲಾದ ಮೂರ್ತಿಯಲ್ಲ, ಪ್ರಾಣದಲಾದ ಮೂರ್ತಿಯಲ್ಲ, ಪುಣ್ಯದಲಾದ ಮೂರ್ತಿಯಲ್ಲ, ಮುಕ್ತಿಯಲಾದ ಮೂರ್ತಿಯಲ್ಲ, ಯುಗದಲಾದ ಮೂರ್ತಿಯಲ್ಲ, ಜುಗದಲಾದ ಮೂರ್ತಿಯಲ್ಲ, ಇದೆಂತಹ ಮೂರ್ತಿಯೆಂದುಪಮಿಸುವೆ ? ಕಾಣಬಾರದ ಕಾಯ ನೋಡಬಾರದ ತೇಜ, ಉಪಮಿಸಬಾರದ ನಿಲವು. ಕಾರಣವಿಡಿದು ಕಣ್ಗೆ ಗೋಚರವಾದ ಸುಖವನು ಏನೆಂದು ಹೇಳುವೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವ ನುಂಗಿದ ರುಚಿಯನು ಏನೆಂದು ಉಪಮಿಸುವೆ?
--------------
ನಿಜಗುಣಯೋಗಿ
ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ, ಆಕಾಶವೇ ಕಿರೀಟ, ಮೇಘಾದಿಗಳೆ ಮಜ್ಜನ, ನಕ್ಷತ್ರಂಗಳೆ ಪುಷ್ಪಮಾಲೆಗಳು, ವೇದಂಗಳೆ ಮುಖಂಗಳು, ಶಾಸ್ತ್ರಂಗಳೆ ಅವಯವಂಗಳು, ಸೋಮಸೂರ್ಯಾಗ್ನಿಗಳೆ ನಯನಂಗಳು, ದಶದಿಕ್ಕುಗಳೆ ಹೊದಿಕೆಗಳು, ಬ್ರಹ್ಮಾಂಡವೆ ಒಡಲಾದ ಮಹಾಮಹಿಮನ ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ. ?
--------------
ಷಣ್ಮುಖಸ್ವಾಮಿ
ಶರಣನು ಅದೃಷ್ಟ ದೃಷ್ಟ ಎರಡುವನೂ ತೋರುವನು. ಸಾವಯ ನಿರವಯ ಏನೆಂದು ವಿವರಿಸ ಶರಣನು. ತಾನು ಸ್ವತಂತ್ರನಾಗಿ ಭಾವರಹಿತನು. ವಿಕೃತವೇಷದಿಂದ ಸುಕೃತವ ಜೋಡಿಪನಲ್ಲ. ಪ್ರಕೃತಿಗುಣವಿಡಿದು ಮೂರ್ತಿಯಾದ ಉಪಜೀವಿ ತಾನಲ್ಲ, ಕೂಡಲಚೆನ್ನಸಂಗಾ ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ
--------------
ಚನ್ನಬಸವಣ್ಣ
ಗುರುವೆ ಹೆಂಡತಿಯಾಗಿ, ಹೆಂಡತಿಯೆ ತಾಯಾಗಿ; ತಾಯೆ ಹೆಂಡತಿಯಾಗಿ; ಶಿಷ್ಯನೆ ಗಂಡನಾಗಿ_ ಏನೆಂದು ಹೇಳುವೆ, ಏನೆಂದುಪಮಿಸುವೆ, ಕೂಡಲಚೆನ್ನಸಂಗಯ್ಯಾ ಇಹಪರವಿಲ್ಲವಾಗಿ.
--------------
ಚನ್ನಬಸವಣ್ಣ
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ ಗುರು ಲಿಂಗ ಜಂಗಮದ ಆದ್ಯಂತವನರಿಯದೆ ಏನೆಂದು ಪೂಜಿಸುವಿರಿ, ಆರಾಧಿಸುವಿರಿ? ಅದೆಂತೆಂದಡೆ: ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು ಲಿಂಗವಾದ ಪರಿ ಹೇಂಗೆ? ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ? ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ? ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ? ಸಕಲ ಜೀವವೆರಸಿ ಕರಗಿದ ಆಸಿಯ ಜಲ ತೀರ್ಥವಾದ ಪರಿ ಹೇಂಗೆ? ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ? ಅದೆಂತೆಂಡೆ: ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ ಅಂಗವಾದುದು ಈ ಗುರುವಲ್ಲಾ ಎಂದು ಅರಿದು ಆ ಲಿಂಗದ ಚೈತನ್ಯ ಈ ಲಿಂಗವಲ್ಲಾ ಎಂದು ಅರಿದು ಮಾಡೂದು ತನು ಮನ ಧನ ವಂಚನೆಯಳಿದು. ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು. ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲ್ಲ ಎಂದರಿದು ಧರಿಸೂದು ಶ್ರೀ ವಿಭೂತಿಯ. ಆ ಲಿಂಗದ ಶೃಂಗಾರದ ಹರಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು. ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು. ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದವನು. ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ. ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ. ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ, ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.
--------------
ನಿಃಕಳಂಕ ಚೆನ್ನಸೋಮೇಶ್ವರ
ಎಲ್ಲಾ ವ್ಯಾವರ್ಣಂಗಳು ಸ್ಥಾಪ್ಯದೊಳಗು. ಎಲ್ಲಾ ವಚನಂಗಳು ತಾಪದೊಳಗು. ಎಲ್ಲಾ ಸ್ತೋತ್ರಂಗಳು ಕ್ರೋಧದೊಳಗು. ಎಲ್ಲಾ ಅರಿವು ಮಥನದೊಳಗು. ಎಲ್ಲಾ ಮೂರ್ತಿಗಳು ಪ್ರಳಯದೊಳಗು. ಎಲ್ಲಾ ಗೀತಂಗಳು ಸಂವಾದದೊಳಗು. ಲಿಂಗಾನುಭಾವಿ ಇವನೊಂದನೂ ಮನದಲ್ಲಿ ನೆನೆಯ, ಏನೆಂದು ಅರಿಯ. ಸ್ವತಂತ್ರ ನಿತ್ಯನಾಗಿ, ಭಕ್ತಿದಾಸೋಹವ ನಿಮ್ಮ ಬಸವಣ್ಣನಳವಡಿಸಿಕೊಂಡನು. ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಪಂಚೇಂದ್ರಿಯೆಂಬ ಕರ್ಮಿಗಳ ಉರಿಯ ಪ್ರಪಂಚಿಗೆ ಗುರಿಯಾಗಿ ಯತಿ ಸಿದ್ಧ ಸಾಧ್ಯರೆಲ್ಲ ಮತಿಭ್ರಷ್ಟರಾದರು. ಅದು ಎಂತೆಂದೊಡೆ : ಹಾಳೂರ ಹೊಕ್ಕರೆ ನಾಯ ಜಗಳವ ಕಂಡಂತೆ, ಶಿವಜ್ಞಾನವಿಲ್ಲದಂಗಹಾಳಿಂಗೆ ಪಂಚೇಂದ್ರಿಯವೆಂಬ, ನಾಯಿ ಬೊಗಳೆ ಹಂಚು[ಹರಿಯಾದರು] ಕೆಲಬರು. ಇಂತೀ ಪಂಚೇಂದ್ರಿಯಂಗಳು ಸುಟ್ಟು ಲಿಂಗೇಂದ್ರಿಯಮುಖವಾಗಿಪ್ಪ ಶರಣನ ಏನೆಂದು ಉಪಮಿಸುವೆನಯ್ಯಾ ? ಆತನಂಗವೆ ಶಿವನಂಗ, ಶಿವನಂಗವೆ ಶರಣನಂಗ, ಸಾಕ್ಷಿ :``ಶಿವಾಂಗಂ ಶರಣಾಂಗಂ, ಚ ಶರಣಾಂಗಂ ಶಿವಾಂಗಕಂ | ದ್ವಯೋರಂಗಯೋರ್ಭೇದಃ ನಾಸ್ತಿ ಸಾಕ್ಷಾತ್ ಪರಶಿವಃ ||'' ಎಂದುದಾಗಿ, ನಿಮ್ಮ ಶರಣರ ದರುಶನದಿಂದಲೆನ್ನ ಬದುಕಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಏನೆಂದು ಉಪಮಿಸುವೆನಯ್ಯಾ ಶ್ರೀಪಂಚಾಕ್ಷರಿಯ ! ಏನೆಂದು ಬಣ್ಣಿಸುವೆನಯ್ಯಾ ಶ್ರೀಪಂಚಾಕ್ಷರಿಯ ! ನೆನೆವಡೆನ್ನ ಮನ ಸಾಲದು, ನುಡಿವಡೆನ್ನ ಜಿಹ್ವೆ ಸಾಲದು, ಕೇಳುವಡೆನ್ನ ಕರ್ಣ ಸಾಲದು. ಮನಮುಟ್ಟಿ ನೆನೆದು ಶ್ರೀ ಪಂಚಾಕ್ಷರಿಯ, ಜಿಹ್ವೆಮುಟ್ಟಿ ಸ್ತುತಿಸಿ ಶ್ರೀಪಂಚಾಕ್ಷರಿಯ, ಕರ್ಣಮುಟ್ಟಿ ಕೇಳಿ ಶ್ರೀಪಂಚಾಕ್ಷರಿಯ ನಾನು ಅಡಿಗಡಿಗೆ ನಿತ್ಯಮುಕ್ತನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನವಿಲಾಡಿತೆಂದು ಕೆಂಬೋತ ಪಕ್ಕವ ತರಕೊಂಡಂತೆ ಹುಲಿಯ ಬಣ್ಣಕ್ಕೆ ನರಿ ಮೈಯ ಸುಟ್ಟುಕೊಂಡಂತೆ ಕೋಗಿಲೆ ಸ್ವರಗೆಯ್ದದೆಂದು ಕಾಗೆ ಕರೆದಂತೆ ಲಿಂಗನಿಷಾ*ಂಗಿ ವಚನಹಾಡಿದರೆ ಒಪ್ಪುವನಲ್ಲದೆ ನಿಷೆ*ಹೀನರು ಓದಿ ಹಾಡಿದರೆ ನಳ್ಳಿಗುಳ್ಳೆಯ ತಿಂದ ನರಿ ಹಳ್ಳದ ತಡಿಯಲ್ಲಿ ಬಳ್ಳಿಟ್ಟು ಬಗುಳಿದಂತೆ ಏನೆಂದು ಪಾಟಿ ಮಾಡರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಸಾದಿಯ ಪ್ರಸಾದದಲೊದಗಿದ ಪ್ರಸಾದಿಯನು ಏನೆಂದುಪಮಿಸುವೆನು ಏನೆಂದು ಸ್ತುತಿಸುವೆನಯ್ಯಾ, ಮಹಾಪ್ರಸಾದಿಗೆ ಮಹಾಘನಪ್ರಸಾದವಾದ ಪ್ರಸಾದಿಯನು ಅಗಮ್ಯಪ್ರಸಾದದಲ್ಲಿ ಸ್ವಾಯತವಾದ ಕೂಡಲಸಂಗಮದೇವಾ, ನಿಮ್ಮ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->