ಅಥವಾ

ಒಟ್ಟು 16 ಕಡೆಗಳಲ್ಲಿ , 13 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ?
--------------
ಮಾರೇಶ್ವರೊಡೆಯರು
ಒಲೆಯ ಬೂದಿಯ ಬಿಲಿಯಲು ಬೇಡ, ಒಲಿದಂತೆ ಹೂಸಿಕೊಂಡಿಪ್ಪುದು. ಹೂಸಿ ಏನು ಫಲ, ಮನದಲ್ಲಿ ಲೇಸಿಲ್ಲದನ್ನಕ್ಕ ಒಂದನಾಡಹೋಗಿ ಒಂಬತ್ತನಾಡುವ ಡಂಬಕರ ಮೆಚ್ಚ ಕೂಡಲಸಂಗಯ್ಯ. 114
--------------
ಬಸವಣ್ಣ
ಮನವೆಂಬ ಒರಳಿಗೆ ಸಕಲಕರಣಂಗಳೆಂಬ ತಂಡುಲವ ಹಾಕಿ, ಸುಜ್ಞಾನವೆಂಬ ಒನಕೆಯ ಪಿಡಿದು ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ, ಅಜ್ಞಾನವೆಂಬ ತೌಡ ಕೇರಿ ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು ಸದ್ಭಾವವೆಂಬ ಭಾಂಡದಲ್ಲಿ ತುಂಬಿ ಪರಮಾನಂದ ಜಲವೆಂಬ ಎಸರನಿಟ್ಟು, ತ್ರಿಪುಟಿಯೆಂಬ ಒಲೆಯ ಹೂಡಿ ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ, ಮಹಾಜ್ಞಾನವೆಂಬ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು, ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ ಸಲಿಸಬಲ್ಲಾತನೆ ಶರಣನು. ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು. ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕುಂಡಲಿಯ ಒಲೆಯ ಭಾಂಡದಲ್ಲಿ ಮಂಡಿಸಿಪ್ಪ ತುಂಡುಮುಂಡುಕಾರ್ತಿ ಜಗವನೆಲ್ಲಾ ಬಂಡುಮಾಡುತ್ತಿದಾಳೆ ನೋಡಾ. ಕುಂಡಲಿಯ ಒಲೆಯಲ್ಲಿ ಕೆಂಡವ ಚಾಚಲು ಭಾಂಡವೊಡೆದು ತಂಡು ಮುಂಡುಕಾರ್ತಿಯ ತಾಮಸ ಬೆಂದು ಕುಂಡಲಿಯ ಸರ್ಪನೆದ್ದು ಮಂಡೆವಾಲನುಂಡು ಮಡಿದುದ ಕಂಡೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು, ಒಂಬತ್ತು ಸಾವಿರ ಕುದುರೆಯನು ಒಂದು ಎಳಗ ಎಯ್ದಿಸುತ್ತಿದ್ದಿತ್ತು. ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ ? ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ, ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು, ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ನೀರೊಳಗೆ ಯಂತ್ರವನೆ ಹೂಡಿ ನಿರಾಮಯವ ತುಂಬಿ, ತುಂಬಿದ ನೀರೊಳಗೆ ಒಲೆಯ ಹೂಡಿ ಅಡುಕಿ ಸುಡುವಿನಂಶವ ನೀವು ನೋಡಲೊಡನೆ ಎಲ್ಲಾ ಉತ್ಪತ್ಯ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಂಸಾರವೆಂಬ ಅತ್ತೆಗೆ ನಿರ್ಬುದ್ಧಿ ಸೊಸೆಯೊಬ್ಬಳು, ಅಟ್ಟುಂಡೆಹೆನೆಂದು ಒಲೆಯ ಬೂದಿಯ ತೋಡುವನ್ನಕ್ಕ ಒಳಗೊಂದು ಕಿಡಿಯಿದ್ದು ಕೈಬೆಂದು ಮರಗುವಂತಾಯಿತ್ತಲ್ಲಾ ಎನಗೆ! ನಿಸ್ಸಂಸಾರಿಯ ಒಡಲೊಲೆಯ ಬೂದಿಯ ಕೆಣಕುವನ್ನಕ್ಕ ಒಳಗೊಂದು ಸುಜ್ಞಾನವೆಂಬ ಕಿಡಿಯಿದ್ದು ಎನ್ನ ಮನದ ಕೈ ಬೆಂದು ಹೃದಯ ಮರಗುತ್ತಿದ್ದೇನೆ. ಇದಕ್ಕೆ ಶೀತಾಳಮಂತ್ರವುಂಟೆ ಅಯ್ಯಾ! ಎನ್ನ ಸಿಮ್ಮಲಿಗೆಯ ಚೆನ್ನರಾಮಲಿಂಗದಲ್ಲಿ ನಿಜಗುಣ ಶರಣೆಂಬುದೆ ಇದಕ್ಕೆ ಶೀತಾಳಮಂತ್ರ
--------------
ಚಂದಿಮರಸ
ಇಮ್ಮನ ಹತ್ತಿಯಕಾಳ ಸುರಿದು ಪಶು ಮೇವುತ್ತಿರಲಾಗಿ ಓಮ್ಮನವ ಮೇದು ಇಮ್ಮನ ಉಳಿಯಿತು. ಅದ ಸುಮ್ಮಾನದಲ್ಲಿ ಕರೆಯ ಹೋಗಲಿಕೆ ಅಂಡೆಯಲ್ಲಿ ಐಗುಳವ ಕರೆದು ಕಂದಲಲ್ಲಿ ಸುರಿಯಲಾಗಿ ಮೂಗುಳವಾಯಿತ್ತು. ಆ ಮೂಗುಳವ ಒಲೆಯ ದೆಸೆಯಲ್ಲಿರಿಸಲಿಕೆ ಕಾಸೂದಕ್ಕೆ ಮುನ್ನವೆ ನಾಶವಾಯಿತ್ತು. ಇಂತೀ ಈಶ್ವರ ವಿಶ್ವಾಸದಲ್ಲಿ ಆತ್ಮ ನಿಶ್ಚಯಿಸಲಾಗಿ ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.
--------------
ಶಂಕರದಾಸಿಮಯ್ಯ
ಹೊಟ್ಟು ಜಾಲಿಯ ತುತ್ತತುದಿಯ ಮೇಲೊಂದು ಚೌಷಷ್ಟಿ ವಿದ್ಯಾಕಳಾಪ್ರವೀಣವೆಂಬ ಪಟ್ಟಣ. ಆ ಪಟ್ಟಣದೊಳಗೊಬ್ಬ ತಳವಾರ_ ಹುಟ್ಟು ಬಂಜೆಯ ಮಗ ಮರೆದೊರಗಲು, ಐದು ಆನೆಯ ಕಳ್ಳರೊಯ್ದರು, ಐದು ಒಂಟೆ ಹುಯ್ಯಲು ಹೋದವು_ ಅರೆಮರುಳಂಗೆ ನೆರೆಮರುಳ ಬುದ್ಧಿಯ ಹೇಳುತ್ತಿರ್ಪುದ ಕಂಡೆ. ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ ಹಾಲುಕ್ಕಿ ಮಿಕ್ಕ ಹಾಲ ಬೆಕ್ಕು ಕುಡಿಯಿತ್ತು, ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭೂಮಿಯಿಲ್ಲದ ಪೃಥ್ವಿಯ ಕಂಡೆನಯ್ಯ. ನೀರು ಇಲ್ಲದ ಸಮುದ್ರವ ಕಂಡೆನಯ್ಯ. ಅಗ್ನಿಯಿಲ್ಲದ ಒಲೆಯ ಕಂಡೆನಯ್ಯ. ವಾಯುವಿಲ್ಲದ ಮರನ ಕಂಡೆನಯ್ಯ. ಆಕಾಶವಿಲ್ಲದ ಬಯಲ ಕಂಡೆನಯ್ಯ. ಆತ್ಮನಿಲ್ಲದ ಜ್ಞಾನವ ಕಂಡೆನಯ್ಯ. ಸೂರ್ಯನಿಲ್ಲದ ಪ್ರಕಾಶವ ಕಂಡೆನಯ್ಯ. ಚಂದ್ರನಿಲ್ಲದ ಚಿದ್ರೊಪವ ಕಂಡೆನಯ್ಯ. ನಾದವಿಲ್ಲದ ಸುನಾದವ ಕಂಡೆನಯ್ಯ. ಇದು ಕಾರಣ, ಬಯಲಿಂಗೆ ಬಯಲು ನಿರ್ವಯಲನೈದಿದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಒಂದೂ ಅಲ್ಲದ ನೆಲನ ಸುರಿವುದ ಒಲೆಯ ಸುರಿವುದ ಕೇಳಿರಣ್ಣಾ. ಒರಟಂಗೆ ಶಿಕ್ಷೆ ದೀಕ್ಷೆಯ ಮಾಡುವುದ ಸುಡುವುದಯ್ಯಾ. ಒಂದೂ ಅಲ್ಲದವಂಗೆ ಕೊಟ್ಟು ದೀಕ್ಷೆಯ ಸುಟ್ಟ ಫಲವೆಂದ ಕಪಿಲಸಿದ್ಧಮಲ್ಲಿನಾಥದೇವರ ದೇವ.
--------------
ಸಿದ್ಧರಾಮೇಶ್ವರ
ಕಾಣದುದನೆಲ್ಲವ ಕಾಣಲಾರೆನಯ್ಯಾ, ಕೇಳದುದನೆಲ್ಲವ ಕೇಳಲಾರೆನಯ್ಯಾ. ದ್ರೋಹವಿಲ್ಲ ಎಮ್ಮ ಶಿವನಲ್ಲಿ, ಸೀಮೆಯಯ್ಯಾ. ಒಲೆಯ ಮುಂದಿದ್ದು ಮಾಡದ ಕನಸ ಕಾಂಬವರನೊಲ್ಲನಯ್ಯಾ ಕೂಡಲಸಂಗಮದೇವ. 266
--------------
ಬಸವಣ್ಣ
ಉರಿಯ ಮಡಕೆಯಲ್ಲಿ ಅರಗಿನ ನೀರ ತುಂಬಿ, ಪರಸತಿಯೆಂಬವಳು ಒಲೆಯ ಉರುಹತ್ತೈದಾಳೆ. ಒಲೆ ಬಾಯ ನುಂಗಿ, ಅಂಡವ ನೆಲ ನುಂಗಿ ದಿಂಡು ಬಿದ್ದಿತ್ತು. ಏಣಾಂಕಧರ ಸೋಮೇಶ್ವರಲಿಂಗ ತಾನೆ ಬಲ್ಲ.
--------------
ಬಿಬ್ಬಿ ಬಾಚಯ್ಯ
ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ, ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ, ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ, ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ, ಆರೆಸಳ ಪದ್ಮವ ರಂಗವಾಲೆಯ ತುಂಬಿ, ಹತ್ತೆಸಳ ಪದ್ಮವ ಕರಕಮಲವಂ ಮಾಡಿ, ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು, ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ, ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ, ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ, ಸುಗಂಧವೆಂಬ ಧೂಪವ ಬೀಸಿ, ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು, ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು, ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ, ಏಕೋಭಾವವೆಂಬೊನಕೆಯ ಪಿಡಿದು ತಳಿಸಿ, ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ, ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು, ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ, ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು, ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ, ಅಹಂಕಾರವೆಂಬ ಭಾಜನದಲ್ಲಿ ಬಾಗಿ, ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ, ಮನವೆಂಬ ಹರಿವಾಣದಲ್ಲಿ ಗಡಣಿಸಿ, ಆನಂದವೆಂಬಮೃತವನಾರೋಗಣೆಯ ಮಾಡಿ, ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ, ಸತ್ವರಜತಮವೆಂಬ ವೀಳೆಯವ ಕೊಟ್ಟು, ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ, ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಎಂಬ ಸುಪ್ಪತ್ತಿಗೆಯನು ಹಚ್ಚಡಿಸಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ, ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ, ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು, ಊರು ಬಯಲಾಯಿತ್ತು, ಒಕ್ಕಲು ಓಡಿತ್ತು, ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮಥನವಡಗಿತ್ತು. ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು, ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ. ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಒಲೆಯ ಹೊಕ್ಕು ಉರಿಯ ಮರೆದವಳ, ಮಲೆಯ ಹೊಕ್ಕು ಉಲುಹ ಮರೆದವಳ ನೋಡು ನೋಡಾ. ಸಂಸಾರ ಸಂಬಂಧವ ನೋಡಾ. ಸಂಸಾರ ಸಂಬಂಧ ಭವಭವದಲ್ಲಿ ಬೆನ್ನಿಂದ ಬಿಡದು. ಸರವು ನಿಸ್ಸರವು ಒಂದಾದವಳನು, ಎನ್ನಲೇನ ನೋಡುವಿರಯ್ಯಾ, ಚೆನ್ನಮಲ್ಲಿಕಾರ್ಜುನಯ್ಯ
--------------
ಅಕ್ಕಮಹಾದೇವಿ
ಇನ್ನಷ್ಟು ... -->