ಅಥವಾ

ಒಟ್ಟು 11 ಕಡೆಗಳಲ್ಲಿ , 10 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಧವ ಬಂದ್ಥಿಸಿ ಹಿಡಿದೆಹೆನೆಂದಡೆ ಆ ಗಂಧದ ಅಂಗವಿಲ್ಲದೆ ನಿಂದುದುಂಟೆ ಸುಗಂಧ? ಈ ಶಿವಲಿಂಗವನರಿಯದ ಆತ್ಮನು ಮುಂದೆ ಏತರಿಂದ ಸಂದ್ಥಿಸುವುದು? ಇದು ಲಿಂಗಾಂಗಿಯ ಸಾವಧಾನ ಸಂಬಂಧ. ನಿಳಯದ ಬಾಗಿಲು ತಿಳುವಳ. ಲಿಂಗಮೂರ್ತಿಯ ತದ್ದಾ ್ಯನ ಶುದ್ಧ ಲೇಪವಾದುದು ತತ್ಕಾಲ ಸಂಬಂದ್ಥಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಬ್ರಹ್ಮರಂಧ್ರ, ಶಿಖಾ, ಪಶ್ಚಿಮವೆಂಬ ನವಚಕ್ರಸ್ಥಾನವ ಗುದ ಗುಹ್ಯ ನಾಬ್ಥಿ ಹೃದಯ ಕಂಠ ಉತ್ತಮಾಂಗ ಅಳ್ಳನೆತ್ತಿ ನಡುನೆತ್ತಿ ಹಿಂಭಾಗದ ಕಳ್ಳಕುಣಿಕೆಯೆಂದು ಪೇಳುವಿರಿ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗ ಇರ್ಪುದೇ? ಇಲ್ಲ. ಮತ್ತಂ, ಬಲ್ಲಾದರೆ ಪೇಳಿರಿ, ಇಲ್ಲವಾದರೆ ನಮ್ಮ ಶಿವಗಣಂಗಳ ಕೇಳಿರಿ. ಅದೆಂತೆಂದಡೆ : ಆಧಾರಚಕ್ರವೆಂಬುದೇ ಘ್ರಾಣ. ಸ್ವಾದ್ಥಿಷ್ಠಾನಚಕ್ರವೆಂಬುದೇ ಜಿಹ್ವೆಸ್ಥಾನ. ಮಣಿಪೂರಕಚಕ್ರವೆಂಬುದೇ ನೇತ್ರಸ್ಥಾನ. ಅನಾಹತಚಕ್ರವೆಂಬುದೇ ತ್ವಕ್ಕಿನಸ್ಥಾನ. ವಿಶುದ್ಧಿಚಕ್ರವೆಂಬುದೇ ಕರ್ಣಸ್ಥಾನ. ಆಜ್ಞಾಚಕ್ರವೆಂಬುದೇ ಹೃದಯಸ್ಥಾನ. ಬ್ರಹ್ಮಸ್ಥಾನವೆಂಬುದೇ ಕರಸ್ಥಲ. ಶಿಖಾಸ್ಥಾನವೆಂಬುದೇ ಮನಸ್ಥಲ. ಪಶ್ಚಿಮಸ್ಥಾನವೆಂಬುದೇ ಪ್ರಾಣಸ್ಥಲ. ಇಂತಪ್ಪ ಸ್ಥಾನದಲ್ಲಿ ಪರಶಿವಲಿಂಗವು ಸಂಬಂಧವಾಗಿರುವುದಲ್ಲದೆ ಅಂತಪ್ಪ ಜಡದೇಹಿ ನವಸ್ಥಾನದ ಮಾಂಸರಕ್ತದಲ್ಲಿ ಪರಶಿವಲಿಂಗವು ಇರ್ಪುದೆ? ಇಲ್ಲ. ಅದೇನು ಕಾರಣವೆಂದಡೆ : ಘ್ರಾಣದಲ್ಲಿ ಆಚಾರಲಿಂಗಸ್ವಾಯತವಿಲ್ಲದೆ ಗಂಧ ದುರ್ಗಂಧ ಮೊದಲಾದ ಆವ ಗಂಧದ ವಾಸನೆಯು ತಿಳಿಯದು. ಜಿಹ್ವೆಯಲ್ಲಿ ಗುರುಲಿಂಗಸ್ವಾಯತವಿಲ್ಲದೆ ಸವಿ ಕಹಿ ಮೊದಲಾದ ಆವ ರುಚಿಸ್ವಾದವು ತಿಳಿಯದು. ನೇತ್ರದಲ್ಲಿ ಶಿವಲಿಂಗಸ್ವಾಯತವಿಲ್ಲದೆ ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ ಮೊದಲಾದ ಷಡ್ವರ್ಗದ ರೂಪು ಲಕ್ಷಣ ತಿಳಿಯದು. ತ್ವಕ್ಕಿನಲ್ಲಿ ಜಂಗಮಲಿಂಗಸ್ವಾಯತವಿಲ್ಲದೆ ಮೃದು ಕಠಿಣ ಮೊದಲಾದ ಆವ ಸುಖವು ತಿಳಿಯದು. ಶ್ರೋತ್ರದಲ್ಲಿ ಪ್ರಸಾದಲಿಂಗಸ್ವಾಯತವಿಲ್ಲದೆ ಸುಸ್ವರ ಅಪಸ್ವರ ಮೊದಲಾದ ಆವ ಸ್ವರಲಕ್ಷಣವು ತಿಳಿಯದು. ಹೃದಯದಲ್ಲಿ ಮಹಾಲಿಂಗಸ್ವಾಯತವಿಲ್ಲದೆ ಷಡಿಂದ್ರಿಸುಖತೃಪ್ತಿ ಮೊದಲಾದ ಸಕಲೇಂದ್ರಿಯ ಸುಖತೃಪ್ತಿ ಸಂತೋಷವು ತಿಳಿಯದು. ಕರಸ್ಥಲದಲ್ಲಿ ನಿರಾಕಾರವಾದ ನಿಷ್ಕಲಲಿಂಗವೆಂಬ ಇಷ್ಟಲಿಂಗ ಸ್ವಾಯತವಿಲ್ಲದೆ ಷಡ್ವಿಧಾಂಗದಲ್ಲಿ ಷಡ್ವಿಧಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಮನದಲ್ಲಿ ಶೂನ್ಯಲಿಂಗವೆಂಬ ಪ್ರಾಣಲಿಂಗಸ್ವಾಯತವಿಲ್ಲದೆ ಸರ್ವೇಂದ್ರಿಯಲ್ಲಿ ಲಿಂಗಸ್ವಾಯತವಾಗಿರುವ ಭೇದವು ತಿಳಿಯದು. ಪ್ರಾಣವೆಂಬಾತ್ಮನಲ್ಲಿ ಭಾವಲಿಂಗಸ್ವಾಯತವಿಲ್ಲದೆ ಸರ್ವಾಂಗಲಿಂಗಮಯ ಪರವಸ್ತುಸ್ವರೂಪ ತಾನೆಂದು ತಿಳಿಯದು. ಇಂತಪ್ಪ ವಿಚಾರವನು ತಿಳಿಯಬಲ್ಲಾತನೇ ಅನಾದಿಶರಣನು. ಅಂತಪ್ಪ ಪರಶಿವಲಿಂಗದ ಸ್ವಾಯತಸಂಬಂಧವಾದ ಭೇದವ ತಿಳಿಯದೆ ಅಂಗಭಾವ ಮುಂದುಗೊಂಡು ಇರ್ಪಾತನೇ ಭವಭಾರಿಕನು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪ್ರಾಣಲಿಂಗಿಯ ಯೋಗಸಂಬಂಧವೆಂತುಟೆಂದಡೆ : ಫಲರಸ ವರುಣನ ಕಿರಣ ಕೊಂಡಂತಿರಬೇಕು. ಪಯದೊಳಗಣ ನವನೀತದಂತಿರಬೇಕು. ವಾಯುವಿನ ಗಂಧದ ತೆರದಂತಿರಬೇಕು. ದೃಷ್ಟಿಯ ಚಿತ್ತದಂತಿರಬೇಕು. ಅಪ್ಪುವಿನ ಮೆಚ್ಚಿಕೆಯಂತಿರಬೇಕು. ಹೀಂಗೆ ಲಿಂಗದಲ್ಲಿ ಒಪ್ಪವಿಟ್ಟ ಶರಣಂಗೆ ಅರ್ಚನೆಯ ಮಾಡಿದಡೂ ಸರಿ, ಅರ್ಪಣದಲ್ಲಿ ಒಪ್ಪವಿಟ್ಟಡೂ ಸರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನು ಆ ಐಕ್ಯನಲ್ಲಿಯ ಭಕ್ತಂಗೆ ಆತ್ಮನಲ್ಲಿಯ ಪೃಥ್ವಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಚಿತ್ತವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಆಚಾರಲಿಂಗವೇ ಲಿಂಗ. ಆ ಆಚಾರಲಿಂಗದಮುಖದಲ್ಲಿ ಗಂಧದ ತೃಪ್ತಿಯನೆ ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆತ್ಮ ತೇಜದಿಂದ ಹೋರುವ ಮಿಥ್ಯಾಭಾವಿಗೆ ನಿಜತತ್ವದ ಮಾತೇಕೆ? ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಬಲ್ಲವರಾದಡೆ ವಾದಕ್ಕೆ ಹೋರಿಹೆನೆಂಬ ಸಾಧನವೇಕೆ? ಇಷ್ಟನರಿವುದಕ್ಕೆ ದೃಷ್ಟ ಕುಸುಮ ಗಂಧದ ತೆರದಂತೆ; ಅನಲ ಅನಿಲನ ತೆರದಂತೆ; ಕ್ಷೀರ ನೀರಿನ ತೆರದಂತೆ; ಅದು ತನ್ನಲ್ಲಿಯೆ ಬೀರುವ ವಾಸನೆ. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣ.
--------------
ಗುಪ್ತ ಮಂಚಣ್ಣ
ರೂಪ ಕಂಡಲ್ಲಿ ಇಷ್ಟಕ್ಕೆ, ರುಚಿಯ ಕಂಡಲ್ಲಿ ಪ್ರಾಣಕ್ಕೆ, ಉಭಯವ ಹೆರೆಹಿಂಗಿ, ಅರ್ಪಿತವನರಿವ ಪರಿಯಿನ್ನೆಂತೊ ? ಕುಸುಮ ಗಂಧದ ಇರವು, ಫಳರಸದಿರವು ಇಷ್ಟಪ್ರಾಣ. ಇಷ್ಟವನರಿತಡೆ ಅರ್ಪಿತ ಅವಧಾನಿ. ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅರ್ಪಿತ ಅವಧಾನಿ[ಯ] ಇರವು.
--------------
ಮನುಮುನಿ ಗುಮ್ಮಟದೇವ
ಕಂಗಳ ಮಣಿಯ ಬೆಳಗಿನೊಳು, ಈರೇಳು ಭುವನದ ಶೃಂಗಾರವಡಗಿತ್ತು. ಆರೂ ಅರಿಯರಲ್ಲಾ. ಅತಿ ಶೃಂಗಾರದೊಳಗಣ ಗಂಧವನೊಂದು ಘ್ರಾಣ ನುಂಗಿತ್ತು. ಘ್ರಾಣದೊಳಗಣ ಗಂಧವ ಪ್ರಾಣ ನುಂಗಿತ್ತು. ಪ್ರಾಣದೊಳಗಣ ಗಂಧದ ಭಾವ ನುಂಗಿತ್ತು. ಭಾವದೊಳಗಣ ಗಂಧದ ಬಯಲು ನುಂಗಿತ್ತು. ಬಯಲೊಳಗಣ ಗಂಧವ ಮಹಾಬಯಲ ಕೂಡಿದ ಲಿಂಗೈಕ್ಯಂಗೆ ಭವಬಂಧನವಿಲ್ಲೆಂದಿತ್ತು ಗುರುವಚನ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ರಸದ ಸಾರ, ಗಂಧದ ಸುಗುಣ, ರೂಪಿನ ಚಿತ್ರ, ಶಬ್ದದ ಘೋಷ, ಸ್ವರ್ಶನದ ಮೃದು ಕಠಿಣಂಗಳ ಅರಿದರ್ಪಿಸಬೇಕು. ಅರಿದರ್ಪಿಸುವುದಕ್ಕೆ ಸಂದೇಹವ ಗಂಟನಿಕ್ಕಿ ಒಂದೊಂದೆಡೆಯ ಅರಿದೆಹೆನೆಂದಡೆ, ಭಿತ್ತಿ ಮೂರು, ಲಕ್ಷಣವೈದು, ಮಾರ್ಗವಾರು, ವಿಭೇದ ಮೂವತ್ತಾರು, ತತ್ವವಿಪ್ಪತ್ತೈದು, ಸ್ಥಲನೂರೊಂದರಲ್ಲಿ ಹೊರಳಿ ಮರಳಿ ಮತ್ತೊಂದರಲ್ಲಿಯೆ ಕೂಡುವುದಾಗಿ ಒಂದೆ ಎಂದು ಸಂದೇಹವ ಬಿಟ್ಟಲ್ಲಿ, ಉತ್ತರಾಂಗಿಯ ಅರ್ಪಿತ. ಉಭಯವೆಂದಲ್ಲಿ ಪೂರ್ವಾಂಗಿಯ ಉಭಯದೃಷ್ಟ ಇವು ಅಲಕ್ಷ್ಯವಾದಲ್ಲಿ ಸದ್ಯೋಜಾತಲಿಂಗವಿಪ್ಪ ಭೇದ.
--------------
ಅವಸರದ ರೇಕಣ್ಣ
ಕರ್ಪುರವ ಕರಂಡದಲ್ಲಿ ಹಾಕಿ ತೆಗೆದಡೆ ಗಂಧವಿಪ್ಪುದಲ್ಲದೆ ಮತ್ತಾ ಕರ್ಪುರವ ಕಿಚ್ಚಿನಲ್ಲಿ ಹಾಕಿ ಗಂಧದ ಲಕ್ಷಣವ ನೋಡಿಹೆನೆಂದಡೆ ಅದು ಅಪ್ರಮಾಣು ನೋಡಾ. ಇಂತೀ ಸ್ಥಲವನಾಚರಿಸುವಲ್ಲಿ ಕರಂಡ ಗಂಧಸ್ಥಲ ನಿಶ್ಚಯವಾದಲ್ಲಿ ಉರಿ ಗಂಧ ಸಂಗ. ಇಂತೀ ಜ್ಞಾತೃ ಜ್ಞೇಯ ಭೇದಕ್ರೀ ನಿರ್ವಾಹಕ್ಕೆ ಸ್ಥಲ. ಆರೋಪ ಲಕ್ಷಣ ಐಕ್ಯಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಅಯ್ಯಾ, ಗುರುಲಿಂಗಜಂಗಮ ಕರುಣಕಟಾಕ್ಷದಿಂದ ಚಿದ್ವಿಭೂತಿ ರುದ್ರಾಕ್ಷಿ ಚಿನ್ಮಂತ್ರಗಳ ಗುರುವಚನ ಪ್ರಮಾಣದಿಂದ ನಿರಂತರವು ಆಚರಿಸಿ, ಚಿದ್ಘನ ಇಷ್ಟ ಮಹಾಲಿಂಗವ ಉರಸ್ಥಲದಲ್ಲಿ ಧರಿಸಬೇಕಾದಡೆ, ದಾರದಿಂದ ಹುಟ್ಟಿದ ಸಜ್ಜೆಯ ಕರಕಮಲವಟುವ ನೂಲಕಾಯಿ, ಬಿಲ್ವಕಾಯಿ, ಗಂಧದ ಮನೆ, ನಾರಂಗದ ಕಾಯಿ, ರಜತ, ಹೇಮ, ತಾಮ್ರ, ಹಿತ್ತಾಳೆ, ಮೃತ್ತಿಕೆ ಮೊದಲಾದ ಆವುದು ತನಗೆ ಯೋಗ್ಯವಾಗಿ ಬಂದ ಚಿದ್ಘನಲಿಂಗದೇವಂಗೆ ಪರಿಣಾಮ ಕಟ್ಟುವಂತೆ, ಮೂವತ್ತಾರೆಳೆಯ ದಾರವಾದಡೆಯೂ ಸರಿಯೆ, ನಾಲ್ವತ್ತೆರಡೆಳೆಯ ದಾರವಾದಡೆಯೂ ಸರಿಯೆ, ಐವತ್ತಾರೆಳೆಯಾದಡೆಯೂ ಸರಿಯೆ, ಅರುವತ್ತುಮೂರಾದಡೆಯೂ ಸರಿಯೆ, ನೂರೆಂಟು ಇನ್ನೂರ ಹದಿನಾರು, ಮುನ್ನೂರರುವತ್ತು ಎಳೆ ಮೊದಲಾಗಿ ಲಿಂಗಾಣತಿಯಿಂದ ಒದಗಿ ಬಂದಂತೆ ಶಿವಲಾಂಛನಸಂಯುಕ್ತದಿಂದ ದಾರವ ಕೂಡಿ ಜ್ಞಾನಕ್ರಿಯಾಯುಕ್ತವಾದ ಎರಡೆಳೆಯಾದಡೆಯೂ ಸರಿಯೆ, ಪರಿಪೂರ್ಣ ಅವಿರಳ ಪರಂಜ್ಯೋತಿ ಎಂಬ ಮಹಾಜ್ಞಾನಸೂತ್ರಯುಕ್ತವಾದ ಮೂರೆಳೆಯಾದಡೆಯೂ ಸರಿಯೆ. ಸತ್ತು ಚಿತ್ತು ಆನಂದ ನಿತ್ಯವೆಂಬ ಸ್ವಾನುಭಾವ ಸೂತ್ರಯುಕ್ತವಾದ ನಾಲ್ಕೆಳೆಯಾದಡೆಯೂ ಸರಿಯೆ. ಆ ಲಿಂಗಗೃಹಂಗಳಿಗೆ ಮಂತ್ರಧ್ಯಾನದಿಂದ ಸೂತ್ರವ ರಚಿಸಿ ಲಾಂಛನಯುಕ್ತವಾದ ಪಾವಡ ಯಾವುದಾದಡೆಯೂ ಸರಿಯೆ, ಗುರುಪಾದೋದಕದಲ್ಲಿ ತೊಳೆದು ಮಡಿಕೆಯ ಮಾಡಿ, ಬೆಳ್ಳಿ ಬಂಗಾರ ತಾಮ್ರ ಹಿತ್ತಾಳೆ ಕರತಾಳವೋಲೆ ಮೊದಲಾಗಿ ತಗಡ ಮಾಡಿ. ಪ್ರಮಾಣಯುಕ್ತವಾಗಿ ಪಾವಡವ ಮಡಿಚಿ ಹುದುಗಿ, ಪೂರ್ವ ಗಳಿಗೆಯಲ್ಲಿ ತ್ರಿವಿಧಪ್ರಣವ, ಪಶ್ಚಿಮ ಗಳಿಗೆಯಲ್ಲಿ ತ್ರಿವಿಧಪ್ರಣವ ಮಧ್ಯ ಗಳಿಗೆಯಲ್ಲಿ ತ್ರಿವಿಧಪ್ರಣವ, ಎತ್ತುವ ಹುದುಗದಲ್ಲಿ ಪಂಚಪ್ರಣವ, ಉತ್ತರ ಭಾಗದರಗಿನಲ್ಲಿ ಚಿಚ್ಛಕ್ತಿಪ್ರಣವ, ದಕ್ಷಿಣ ಭಾಗದರಗಿನಲ್ಲಿ ಚಿಚ್ಛಿವಪ್ರಣವ, ಇಂತು ಹದಿನಾರು ಪ್ರಣವಂಗಳ ಷೋಡಶವರ್ಣಸ್ವರೂಪವಾದ ಷೋಡಶಕಗಳೆಂದು ಭಾವಿಸಿ, ಕ್ರಿಯಾಭಸಿತದಿಂದ ಆಯಾಯ ನಸ್ಧಲದಲ್ಲಿಫ ಸ್ಥಾಪಿಸಿ, ಆ ಮಂತ್ರಗೃಹದಲ್ಲಿ ಚಿದ್ಘನಮಹಾಪರತತ್ವಮೂರ್ತಿಯ ಮೂರ್ತವ ಮಾಡಿಸುವುದಯ್ಯಾ, ಆಮೇಲೆ ನಿರಂಜನಜಂಗಮದ ಪಾದಪೂಜೆಯ ಮಾಡಬೇಕಾದಡೆ ರೋಮಶಾಟಿಯಾಗಲಿ ಪಾವಡವಾಗಲಿ, ಆಸನವ ರಚಿಸಿ, ಮಂತ್ರಸ್ಮರಣೆಯಿಂದ ಗುರುಪಾದೋದಕದ ವಿಭೂತಿಯಿಂದ ಸಂಪ್ರೋಕ್ಷಣೆಯ ಮಾಡಿ ಪುಷ್ಪಪತ್ರೆಗಳ ರಚಿಸಿ, ಆ ಮಹಾಪ್ರಭುಜಂಗಮಕ್ಕೆ ಅಘ್ರ್ಯಪಾದ್ಯಾಚಮನವ ಮಾಡಿಸಿ, ಪಾವುಗೆಯ ಮೆಟ್ಟಿಸಿ ಮಂತ್ರಸ್ಮರಣೆಯಿಂದ ಪಾಣಿಗಳನೇಕಭಾಜನವ ಮಾಡಿ, ಬಹುಪರಾಕೆಂದು ಆ ಸಿಂಹಾಸನಕ್ಕೈತಂದು ಮೂರ್ತವ ಮಾಡಿದ ಮೇಲೆ ಪಾದಾಭಿಷೇಕಜಲವ ಶಿವಗೃಹಕ್ಕೆ ತಳಿದು, ಪಾದೋದಕ ಪುಷ್ಪೋದಕ ಗಂಧೋದಕ ಭಸ್ಮೋದಕ ಮಂತ್ರೋದಕದಿಂದ ಲಿಂಗಾಭಿಷೇಕವ ಮಾಡಿಸಿ, ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಮ್ಮುಖದಲ್ಲಿ ಗರ್ದುಗೆಯ ಹಾಕಿ, ಅಷ್ಪಾಂಗಹೊಂದಿ ಶರಣುಹೊಕ್ಕು, ಗರ್ದುಗೆಯ ಮೇಲೆ ಮೂರ್ತವ ಮಾಡಿ, ಆ ಲಿಂಗಜಂಗಮವ ಮೂಲಮಂತ್ರದಿಂದ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ತನ್ನ ವಾಮಕರದ ಪಂಚಾಂಗುಲಿಗಳಲ್ಲಿ ಪಂಚಪ್ರಣವವ ಲಿಖಿಸಿ ಮಧ್ಯಸಿಂಹಾಸನದಲ್ಲಿ ಮೂಲಪ್ರಣವ ಸ್ಥಾಪಿಸಿ ಅರ್ಚಿಸಿ, ಮಹಾಪ್ರಭುಜಂಗಮದ ಶ್ರೀಪಾದವ ಮೂರ್ತವ ಮಾಡಿ ಬಹಿರಂಗದ ಕ್ರೀ ಅಂತರಂಗದ ಕ್ರೀಯಿಂದರ್ಚಿಸಿ ಪ್ರಥಮ ತಳಿಗೆಯಲ್ಲಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ತ್ರಿಪುಂಡ್ರರೇಖೆಗಳ ರಚಿಸಿ, ಪಂಚದಿಕ್ಕುಗಳಲ್ಲಿ ಪ್ರಣವವ ಲಿಖಿಸಿ, ದ್ವಿತೀಯ ಬಟ್ಟಲೊಳಗೆ ಮೂಲಪ್ರಣವವ ಲಿಖಿಸಿ ಗುರುಪಾದೋದಕದ ಪಾತ್ರೆಯಲ್ಲಿ ಬಿಂದುಯುಕ್ತವಾಗಿ ಮೂಲಪ್ರಣವವ ಲಿಖಿಸಿ ತ್ರಿವಿಧಲಿಂಗಸ್ವರೂಪವಾದ ಸ್ಥಾನವನರಿದು ಪಂಚಾಕ್ಷರ, ಷಡಕ್ಷರ, ನವಾಕ್ಷರ ಸ್ಮರಣೆಯಿಂದ ಪಡಕೊಂಡು ಮಂತ್ರಸ್ಮರಣೆಯಿಂದ ಲಿಂಗ ಜಂಗಮ ಭಕ್ತ ಶರಣಗಣಂಗಳಿಗೆ ಸಲಿಸಿ, ಮುಕ್ತಾಯವ ಮಾಡಿ ಪ್ರಸಾದಭೊಗವ ತಿಳಿದಾಚರಿಸೆಂದಾತ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
-->