ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗಜಂಗಮವ ನೆರೆ ನಂಬಿಪ್ಪಾತನೆ ಶಿವಭಕ್ತ. ಗುರುಲಿಂಗಜಂಗಮವೆ ಶಿವನೆಂದು ಅರ್ಥ ಪ್ರಾಣ ಅಬ್ಥಿಮಾನವ ಸೇವಿಸುತ್ತಿಪ್ಪಾತನೆ ಶಿವಭಕ್ತ. ಸಾಕ್ಷಿ :`ಅರ್ಥಪ್ರಾಣಬ್ಥಿಮಾನಂ ಚ ಗುರೌ ಲಿಂಗೇ ತು ಜಂಗಮೇ |' ತಲ್ಲಿಂಗ ಜಂಗಮದಲ್ಲಿ ಧನವಂಚಕನಾಗಿ ಮಾಡುವ ಭಕ್ತಿಯ ತೆರನೆಂತೆಂದರೆ : ನರಿಯ ಕೂಗು ಸ್ವರ್ಗಕ್ಕೆ ಮುಟ್ಟುವುದೆ ? ಹರಭಕ್ತಿಯಲ್ಲಿ ನಿಜವನರಿಯದೆ ಮಾಡಿದ ಭಕ್ತಿ ಸಯಿಧಾನದ ಕೇಡು ಕಾಣಾ ಪರಮ[ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].
--------------
ಹೇಮಗಲ್ಲ ಹಂಪ
ಸದ್ಭಕ್ತಂಗೆಯೂ ಜಂಗಮಕ್ಕೆಯೂ ಭಾಜನ ಬೇರೆಂಬ ಶಾಸ್ತ್ರದ ಸದಗರು ನೀವು ಕೇಳಿರೋ. ಭಕ್ತದೇಹಿಕ ದೇವನೆಂದು ಶ್ರುತಿ ಸಾರುತ್ತಿವೆ, ಅರಿದು ಮರೆಯದಿರಿ, ಮರವೆಯಿಂದ ಬ್ರಹ್ಮ ಶಿರವ ಹೋಗಾಡಿಕೊಂಡ, ಮರವೆಯಿಂದ ದಕ್ಷ ಶಿರವ ನೀಗಿ ಕುರಿದಲೆಯಾದುದನರಿಯಿರೆ ಮರೆಯದೆ ವಿಚಾರಿಸಿ ನೋಡಿ, ಭಕ್ತಂಗೂ ಲಿಂಗಕ್ಕೂ ಭಿನ್ನವಿಲ್ಲ. ಇನ್ನು ಆ ಭಕ್ತಂಗೆಯೂ ಆ ಜಂಗಮಕ್ಕೆಯೂ ಭೇದವಿಲ್ಲ. ಬೇರ್ಪಡಿಸಿ ನುಡಿಯಲುಂಟೆ ಇನ್ನು ಆ ಗುರುವಿಂಗೆಯೂ ಆ ಭಕ್ತಂಗೆಯೂ ಸಂಕಲ್ಪವಿಲ್ಲ. ಅದೆಂತೆಂದಡೆ; ಮೆಟ್ಟುವ ರಕ್ಷೆ, ಮುಟ್ಟುವ ಯೋನಿ, ಅಶನ, ಶಯನ, ಸಂಯೋಗ, ಮಜ್ಜನ, ಭೋಜನ ಇಂತಿವನು ಗುರುಲಿಂಗಜಂಗಮ ಸಹಿತವಾಗಿ ಭೋಗಿಸುವ ಸದ್ಭಕ್ತಂಗೆ ನಾನು ನಮೋ ನಮೋ ಎಂಬೆನು. ಅದೆಂತೆಂದಡೆ; ಅರ್ಥಪ್ರಾಣಾಭಿಮಾನಂ ಚ ಗುgõ್ಞ ಲಿಂಗೇ ಚ ಜಂಗಮೇ± ತಲ್ಲಿಂಗಜಂಗಮಪ್ರಾಣಂ ಭಕ್ತಸ್ಥಲಮುದಾಹೃತಮ್ ಎಂದುದಾಗಿ, ಇದನರಿದು ಅರ್ಥವನೂ ಪ್ರಾಣವನೂ ಅಭಿನವನೂ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ಆ ಗುರುಲಿಂಗಜಂಗಮವೆ ಪ್ರಾಣವಾಗಿಹ ಸದ್ಭಕ್ತಂಗೆಯೂ ಆ ಗುರುಲಿಂಗಜಂಗಮಕ್ಕೆಯೂ ಏಕಭಾಜನವಲ್ಲದೆ ಏಕಭೋಜನವಲ್ಲದೆ, ಭಿನ್ನಭಾಜನ ಭಿನ್ನಭೋಜನವುಂಟೆ _ಇಲ್ಲವಾಗಿ, ಅದೇನು ಕಾರಣವೆಂದಡೆ; ಆ ಸದ್ಭಕ್ತನ ಅಂಗವೆಂಬ ಗೃಹದಲ್ಲಿ ಜಂಗಮವಿಪ್ಪನಾಗಿ ಇದನರಿದು ಬೇರೆ ಮಾಡಿ ನುಡಿಯಲಾಗದು. ಚೆನ್ನಯ್ಯನೊಡನುಂಬುದು ಆವ ಶಾಸ್ತ್ರ ಕಣ್ಣಪ್ಪ ಸವಿದುದ ಸವಿವುದಾವ ಶಾಸ್ತ್ರ ಭಕ್ತದೇಹಿಕ ದೇವನಾದ ಕಾರಣ. ಅದೆಂತೆಂದಡೆ; ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ ರುಚ್ಯಗ್ರೇ ತು ಪ್ರಸಾದೋಸ್ತು ಪ್ರಸಾದಃ ಪರಮಂ ಪದಂ ಇಂತೆಂಬ ಪುರಾಣವಾಕ್ಯವನರಿದು ಸದ್ಭಕ್ತನೂ ಗುರುಲಿಂಗಜಂಗಮವೂ ಈ ನಾಲ್ವರೂ ಒಂದೆ ಭಾಜನದಲ್ಲಿ ಸಹಭೋಜನಮಾಡುವರಿಂಗೆ ಇನ್ನೆಲ್ಲಿಯ ಸಂಕಲ್ಪವೊ, ಇನ್ನೆಲ್ಲಿಯ ಸೂತಕವೋ, ಇನ್ನೆಲ್ಲಿಯ ಪಾತಕವೋ ಕೂಡಲಸಂಗಮದೇವಾ.
--------------
ಬಸವಣ್ಣ
ಗುರುಲಿಂಗಜಂಗಮವೆ ಶಿವನೆಂದು ಅರಿದು ಮರೆವನು ಶಿವಭಕ್ತನೆ ಅಲ್ಲ, ಶಿವಭಕ್ತನು ಅರಿದ ಬಳಿಕ ಮರೆಯನು. ಅರಿದು ಮರೆವನು ಮದ್ದುಕುಣಿಕೆಯ ಕಾಯ ಮೆದ್ದವನು, ಮದ್ಯ ಮಾಂಸವ ಸೇವಿಸಿದವನು, ಅರಿದು ಮರೆವವನು ಅಜ್ಞಾನಿಗಳ ಸಂಗವ ಮಾಡಿದವನು, ಶ್ವಾನನ ಮಿತ್ರನು. ಅವಂದಿರುಗಳಿಗೆ ಅರಿವು ಮರವೆ ಸಹಜವಾದ ಕಾರಣ ಅರಿದು ಮರೆವವನಲ್ಲ ಶಿವಭಕ್ತನು, ಮರೆದು ಅರಿವವನಲ್ಲ ಶಿವಭಕ್ತನು, ನಂಬಿದವನಲ್ಲ ಶಿವಭಕ್ತನು, ನಂಬಿ ಕೆಡದವನಲ್ಲ ಶಿವಭಕ್ತನು, ವಿಶ್ವಾಸವ ಮಾಡುವವನಲ್ಲ ಶಿವಭಕ್ತನು ಅವಿಶ್ವಾಸ ಮಾಡುವವನಲ್ಲ ಶಿವಭಕ್ತನು. ಮರೆದಡೆಯು ಮರೆದವನಂತೆ, ಅರಿದಡೆಯು ಶಿವನಂತೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
`ಏಕೋ ದೇವೋ ನ ದ್ವಿತೀಯಃ' ಎಂದೆನಿಸುವ ಶಿವನೊಬ್ಬನೆ, ಜಗಕ್ಕೆ ಗುರುವೆಂಬುದನರಿಯದೆ, ವಿಶ್ವಕರ್ಮ ಜಗದ ಗುರುವೆಂದು ನುಡಿವ ದುರಾಚಾರಿಯ ಮುಖವ ನೋಡಲಾಗದು. ಪ್ರಥಮದಲ್ಲಿ ಹುಟ್ಟಿದಾಗ ವಿಶ್ವಕರ್ಮಂಗೆ ತಾಯಿತಂದೆಗಳಾರು ? ಅವನು ಹುಟ್ಟಿದಾಗ ಹೊಕ್ಕಳನಾಳವ ಕೊಯ್ವ ಕತ್ತಿಯ ಮಾಡಿದರಾರು ? ಅವಂಗೆ ತೊಟ್ಟಿಲವ ಕಟ್ಟಿದರಾರು ? ಅವಂಗೆ ಹಾಲು ಬೆಣ್ಣೆ ಬಿಸಿನೀರು ಇಡುವುದಕೆ ಮಡಕೆಯ ಮಾಡಿದರಾರು ? ಅವಂಗೆ ವಿದ್ಯಾಬುದ್ಧಿಯ ಕಲಿಸಿದರಾರು ? ಅವಂಗೆ ಅರುಹು ಮರಹು ಹುಟ್ಟಿಸಿದರಾರು ? ಅವಂಗೆ ಇಕ್ಕುಳ, ಅಡಿಗಲ್ಲು, ಚಿಮ್ಮಟಿಗೆ, ಮೊದಲಾದ ಸಂಪಾದನೆಗಳ ಕೊಟ್ಟವರಾರು ? ಇನಿತನು ವಿಚಾರಿಸದೆ ತಾನು ವೆಗ್ಗಳವೆಂದು ಗಳಹುವನ ದುರಾಚಾರಿಯೆಂದು ಭಾವಿಸುವುದು. ಸರ್ವಜಗದ ಜೀವದ ಪ್ರವರ್ತನೆಯ ಚಾರಿತ್ರಂಗಳ ನೆನಹು ಮಾತ್ರದಿಂದ ಶಿವನು ಒಂದೇ ವೇಳೆಯಲ್ಲಿ ನಿರ್ಮಿಸಿದನು. ಅದೆಂತೆಂದಡೆ; ಅರಣ್ಯಗಿರಿಯ ಕನ್ನಡಿಯೊಳು ನೋಡಿದಂತೆ, ಗಿಡವೃಕ್ಷಂಗಳು ಎಳೆಯದು ಹಳೆಯದು ಒಂದೆ ವೇಳೆ ಕಾಣಿಸಿದಂತೆ, ಒಂದೆ ವೇಳೆಯಲಿ ಬೀಜವೃಕ್ಷನ್ಯಾಯದಲ್ಲಿ, ದಿವಾರಾತ್ರಿನ್ಯಾಯದಲ್ಲಿ ಹಿಂಚು ಮುಂಚು ಕಾಣಲೀಯದೆ, ಸರ್ವಜೀವವ ಹುಟ್ಟಿಸಿ, ರಕ್ಷಿಸಿ, ಸಂಹರಿಸಿ, ಲೀಲಾವಿನೋದದಿಂದಿಪ್ಪ ಶಿವನೊಬ್ಬನೆ ಸಕಲ ಜಗಕ್ಕೆ ಗುರುಸ್ವಾಮಿ. ``ಮನ್ನಾಥಸ್ತ್ರಿಜಗನ್ನಾಥೋ ಮದ್ಗುರುಸ್ತ್ರಿಜಗದ್ಗುರುಃ ಸರ್ವಮಮಾತ್ಮಾ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ ಅರಿತರಿತು ಅನಾಚಾರವ ಗಳಹಿ, ಗುರುಲಿಂಗಜಂಗಮವೆ ಘನವೆಂದು ಅರಿಯದ ಶಿವಭಕ್ತಿಶೂನ್ಯ ಪಾತಕನ ಹಿರಿಯನೆಂದು ಸಂಭಾಷಣೆಯ ಮಾಡಿ ಅವನ ಚಾಂಡಾಲ ಬೋಧೆಯ ಕೇಳ್ವ ಪಂಚಮಹಾಪಾತಕನ ರೌರವನರಕದಲ್ಲಿ ಹಾಕಿ ಮೆಟ್ಟಿಸುತಿಪ್ಪ, ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಇನಿಗಬ್ಬಿನೊಳಗಿನ ತನಿರಸವನರಿಯದೆ ಸೋಗೆಯ ಹೊರಗಿನ ರವದಿಯ ಸವಿದು ಸಂತಸಬಡುವ ಮೇಷದಂತೆ, ಅಂತರಂಗದ ಆತ್ಮತೀರ್ಥವನುಳಿದು ಹೊರಗಿನ ಜಡಭೌತಿಕತೀರ್ಥವ ಬೆದಕಿ ಬೆಂಡಾಗಿ ಹಲವೆಡೆಗೆ ಹರಿವ ನರಗುರಿಗಳು ಕೈಸೇರಿದ ರತ್ನವನೊಗೆದು ಕಾಜಿನ ಗುಂಡನು ಕೊಂಡ ಮರುಳನಂತಾಗಿಪ್ಪರು ನೋಡಾ ! ಆತ್ಮತೀರ್ಥಂ ಸಮುತ್ಸೃಜ್ಯ ಬಹಿಸ್ತೀರ್ಥಾಣಿ ಯೋ ವ್ರಜೇತ್ ಕರಸ್ಥಂ ಸುಮಹಾರತ್ನಂ ತ್ಯಕ್ತ್ವಾ ಕಾಚಂ ವಿಮಾರ್ಗತೇ ಎಂದುದಾಗಿ, ಕೂಡಲಚೆನ್ನಸಂಗಮದೇವಾ, ನಿಮ್ಮ ನಿಲವಿನ ಗುರುಲಿಂಗಜಂಗಮವೆ ಎನ್ನ ಸ್ವರೂಪವೆಂದರಿದೆನಾಗಿ ಆ ಗುರುಲಿಂಗಜಂಗಮದ ಪಾದೋದಕವೆ ಆತ್ಮತೀರ್ಥವಾಗಿಪ್ಪುದು ಕಾಣಾ. ಅಂತಪ್ಪ ಆತ್ಮತೀರ್ಥವ ಪಡೆದು ಪರಮಪವಿತ್ರನಾಗಿಪ್ಪೆನು.
--------------
ಚನ್ನಬಸವಣ್ಣ
ಹುಟ್ಟಿದಂದು ತನುವ ಸೋಂಕಿದ ಲಿಂಗವ, ಸಾವಾಗ ಶರೀರದೊಡನೆ ಹೂಳಿಸಿಕೊಂಬ ಲಿಂಗವ ಬಿಟ್ಟು ಬಟ್ಟೆ ಬಟ್ಟೆಯಲ್ಲಿ ಕಂಡ ಕಲ್ಲಿಗೆರಗುವ ಭ್ರಷ್ಟಹೀನ ಹೊಲೆಯರ ನೋಡಾ ! ಇಂತಪ್ಪವರ ಶಿವಭಕ್ತರೆನಬಹುದೆ ? ಎನಲಾಗದು. ಶಿವಭಕ್ತರಾರೆಂದಡೆ ಹೇಳುವೆ ಕೇಳಿರಣ್ಣಾ ; ಗುರುಲಿಂಗಜಂಗಮವೆ ಶಿವನೆಂದು ನಂಬಿಪ್ಪಾತನೆ ಶಿವಭಕ್ತ. ಗುರುವ ನಂಬದೆ, ಲಿಂಗವ ನಂಬದೆ, ಜಂಗಮವ ನಂಬದೆ ಕಿರುಕುಳದೈವಕ್ಕೆ ಹರಕೆಯ ಹೊರುವವ ಭಕ್ತನೂ ಅಲ್ಲ, ಭವಿಯೂ ಅಲ್ಲ. ಇಂತಿವೆರಡರೊಳು ಒಂದೂ ಅಲ್ಲಾದ ಎಡ್ಡಗಳ ನಾನೇನೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಿಂಡವಾದುದ ಪಿಂಡಜ್ಞಾನ ಹುಟ್ಟಿ ಅರಿದನಯ್ಯಾ ಶರಣನು. ಅದೆಂತೆಂದಡೆ:ಆತ್ಮರುಗಳಲ್ಲಿ ಪರಮಾತ್ಮನ ಕಳೆ ವೇದ್ಯವಾಗಿರೆ, ತನುವ ರುಧಿರವ ಕೂಡಿಕೊಂಡು ಅಷ್ಟತನುಮೂರ್ತಿಯೆನಿಸಿಕೊಂಡು, ಸಪ್ತಧಾತು ಬೆರೆಸಿಕೊಂಡು, ಷಡುವರ್ಣವ ಕೂಡಿಕೊಂಡು, ಪಂಚತತ್ವವ ಪ್ರವೇಶಿಸಿಕೊಂಡು, ಚತುಷ್ಟಯ ಕರಣವ ದಳಕುಳವ ಮಾಡಿಕೊಂಡು, ಸ್ಥೂಲಸೂಕ್ಷ್ಮಕಾರಣವ ಅಂಗವ ಮಾಡಿಕೊಂಡು, ಕಾಯ ಜೀವವೆರಡು ದಳಕುಳವ ಮೆಟ್ಟಿಕೊಂಡು, ಏಕದಳದ ಮೇಲೆ ಪರಮಾತ್ಮ ತಾ ನಿಂದು, ಸಾಕ್ಷಿಕನಾಗಿ ಸಾವು ಹುಟ್ಟನರಿವುತ್ತ, ಜ್ಞಾನವಿದು ಅಜ್ಞಾನವಿದು ಎಂದು ಕಾಣುತ್ತ, ಸಂಸಾರ ಹೇಯವ ಮಾಡುತ್ತ, ಲಿಂಗವ ಹಾಡುತ್ತ, ಲಿಂಗವ ಹಾಡುತ್ತ, ಜಂಗಮವ ಹರಸುತ್ತ, ಲಿಂಗವಾಗಿ ಬಂದು ಗುರುಪಾದವಿಡಿದಾತನೀಗ ತತ್‍ಶಿಷ್ಯ. ಆ ಶಿಷ್ಯಂಗೆ ಶ್ರೀ ಗುರುಸ್ವಾಮಿ, ಕಾಯವಿದು ಕರಣವಿದು ಜೀವವಿದು ವಾಯುವಿದು, ಮನವಿದು ಪ್ರಾಣವಿದು ಮಾಯವಿದು ಮದವಿದು ಮಲವಿದೆಂದು ಆತನಾದಿಯನುರುಹಿ, ತನ್ನಾದಿಯ ಕುರುಹಿದೇಕೋ ಮಗನೇ ಎಂದು, ಗಣಸಾಕ್ಷಿಯಾಗಿ ಹಸ್ತಮಸ್ತಕಸಂಯೋಗ ಮಾಡಿ, ಕರ್ಣದಲಿ ಮಂತ್ರವ ಹೇಳಿ, ಕರಸ್ಥಲಕ್ಕೆ ಲಿಂಗವ ಕೊಡುವಲ್ಲಿ, ಮಗನೆ ಹಸ್ತವೆಂದರೆ ಮಂತ್ರಲಿಂಗವಾಗಿ ಇದೇನೆ, ಮಸ್ತಕವೆಂದರೆ ಚಿದ್ಬ್ರಹ್ಮದಲ್ಲಿ ತೋರುವ ಸುನಾದಕಳೆ ನಾನೇಯಾಗಿ ಇದೇನೆ. ಸಂಯೋಗವೆಂದರೆ ಸರ್ವಾಂಗದಲ್ಲಿ ಪ್ರಾಣಜಂಗಮನಾಗಿ ನಾನೇ ಇದೇನೆ. ತ್ರಿವಿಧ ಉಪದೇಶವೆ ತ್ರಿವಿಧ ಪ್ರಣವವಾಗಿ ಅದಾವೆ. ತ್ರಿವಿಧ ಪ್ರಣವವೆ ಗುರುಲಿಂಗಜಂಗಮವೆಂದು, ಆ ಗುರುಲಿಂಗಜಂಗಮವೆ ಇಷ್ಟ ಪ್ರಾಣ ತೃಪ್ತಿಯೆಂದು, ಆ ಇಷ್ಟ ಪ್ರಾಣ ತೃಪ್ತಿಯೆ ಆಚಾರಾದಿ ಮಹಾಲಿಂಗವೆಂದು, ಆ ಆಚಾರಾದಿ ಮಹಾಲಿಂಗವೆ ಮೂವತ್ತಾರು ಲಿಂಗವೆಂದು, ಆ ಮೂವತ್ತಾರು ಲಿಂಗವೆ ಇನ್ನೂರ ಹದಿನಾರು ಲಿಂಗವೆಂದರಿದು, ಇಂತಿವೆಲ್ಲಕ್ಕೆ ಇಷ್ಟ ಗುರುವೆ ಆದಿ, ಇಷ್ಟೆ ಲಿಂಗವೆ ಮಧ್ಯ, ಇಷ್ಟಜಂಗಮವೆ ಅವಸಾನ. ಇದು ಕಾರಣ, ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ಈ ತ್ರಿವಿಧವು ತ್ರಿವಿಧ ಮುಖದಲ್ಲಿ ಗುರುವಿಂದ ತನು ಶುದ್ಧಪ್ರಸಾದವಾಯಿತ್ತು. ಲಿಂಗದಿಂದ ಮನ ಸಿದ್ಧಪ್ರಸಾದವಾಯಿತ್ತು. ಜಂಗಮದಿಂದ ಪದಾರ್ಥ ಪ್ರಸಿದ್ಧಪ್ರಸಾದವಾಯಿತ್ತು. ಈ ತ್ರಿವಿಧ ಪ್ರಸಾದವೆ ಅಂಗವಾದ ಶರಣಂಗೆ ಅರಿವೇ ಗುರು, ಜ್ಞಾನವೆ ಲಿಂಗ, ಭಾವನೆ ಜಂಗಮ. ಇಂತಪ್ಪ ಶರಣ ಮತ್ತೆ ಗುರುವೆನ್ನ, ಲಿಂಗವೆನ್ನ, ಜಂಗಮವೆನ್ನ, ಆಚಾರವೆನ್ನ, ತಾನೆನ್ನ ನಾನೆನ್ನ, ಏನೂ ಎನ್ನ, ಬಸವಪ್ರಿಯ ಕೂಡಲಚೆನ್ನಸಂಗಮದೇವ ತಾನೆ ತನ್ಮಯವಾಗಿ.
--------------
ಹಡಪದ ಅಪ್ಪಣ್ಣ
ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ ನೀವು ಶರಣರಾದ ಭೇದವ ಹೇಳಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಶರಣತ್ವದ ಭೇದಾಭೇದವ. ತನುವಿನ ಕಾಂಕ್ಷೆಯ ಸುಟ್ಟುರುಹಿ, ಮನದ ಲಜ್ಜೆಯ ಮರೆದು, ಭಾವದ ಭ್ರಮೆಯ ಹೊಟ್ಟುಮಾಡಿ ತೂರಿ, ಸದ್ಭಕ್ತಿ ನಿಜನೈಷೆ*ಯ ತಿಳಿದು, ಸತಿಸುತರಿಗೆ ಸದಾಚಾರದ ಸನ್ಮಾರ್ಗವ ತೋರಿ, ಗುರುಲಿಂಗಜಂಗಮವೆ ಮನೆದೈವ ಮನದೈವ ಕುಲದೈವವೆಂದು ಭಾವಿಸಿ, ನಿರ್ವಂಚಕತ್ವದಿಂದ ಅರಿದಾಚರಿಸಬಲ್ಲಾತನೆ, ಅಚ್ಚಶರಣ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ, ಎನ್ನೊಳಗೆ ನೀವು ಹುಡುಕಿದಡೆ ಎಳ್ಳಿನಿತು ಸುಗುಣವಿಲ್ಲವಯ್ಯ. ಎನ್ನೊಳಗೆ ನೀವು ವಿಚಾರಿಸಿದಡೆ ಸಪ್ತಸಮುದ್ರ ಸಪ್ತದ್ವೀಪದಷ್ಟು ಅಪರಾಧವುಂಟಯ್ಯ. ತಂದೆ, ಎನ್ನ ಅಪರಾಧವ ನೋಡದೆ ನಿಮ್ಮ ಕರುಣದೃಕ್ಕಿನಿಂದ ಸಲಹಯ್ಯ. ಪರಮಾರಾಧ್ಯ ಪರಾತ್ಪರಮೂರ್ತಿ ಶ್ರೀ ಗುರುಲಿಂಗಜಂಗಮವೆ, ನೀವು ಈರೇಳುಲೋಕಕ್ಕೆ ಅಪರಾಧಕ್ಷಮಿತರೆಂಬ ಬಿರುದುಂಟು ನೋಡಾ. ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ !
--------------
ಬಸವಲಿಂಗದೇವ
ಭೂತ ಒಲಿದು ಆತ್ಮನ ಸೋಂಕಿದ ಬಳಿಕ ಭೂತದ ಗುಣವಲ್ಲದೆ ಆತ್ಮನ ಗುಣವುಂಟೆ ಗುರುಕಾರುಣ್ಯವಾಗಿ ಹಸ್ತಮಸ್ತಕಸಂಯೋಗವಾದ ಬಳಿಕ ಗುರುಲಿಂಗಜಂಗಮವೆ ಗತಿಯಾಗಿ ಇದ್ದೆ, ಕೂಡಲಸಂಗಮದೇವಾ.
--------------
ಬಸವಣ್ಣ
-->