ಅಥವಾ

ಒಟ್ಟು 17 ಕಡೆಗಳಲ್ಲಿ , 9 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿಡಿದು ತನುವಾಯಿತ್ತು ; ಲಿಂಗವಿಡಿದು ಮನವಾಯಿತ್ತು ; ಜಂಗಮವಿಡಿದು ಧನವಾಯಿತ್ತು ; ಬಸವಣ್ಣವಿಡಿದು ಭಕ್ತಿಯಾಯಿತ್ತು ; ಕಪಿಲಸಿದ್ಧಮಲ್ಲಿನಾಥಯ್ಯ
--------------
ಸಿದ್ಧರಾಮೇಶ್ವರ
ಗುರುವಿಡಿದು ಲಿಂಗವಾವುದೆಂದರಿಯಬೇಕು, ಲಿಂಗವಿಡಿದು ಜಂಗಮವಾವುದೆಂದರಿಯಬೇಕು, ಜಂಗಮವಿಡಿದು ಪ್ರಸಾದವಾವುದೆಂದರಿಯಬೇಕು, ಪ್ರಸಾದವಿಡಿದು ಪರಮಪರಿಣಾಮವೆಡೆಗೊಳ್ಳಬೇಕು. ಅಂತಪ್ಪ ಪರಮಪರಿಣಾಮವೆ ಪರಬ್ರಹ್ಮವೆಂದರಿತಲ್ಲಿ, ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತ.
--------------
ಆದಯ್ಯ
ಗುರುವಿಡಿದು ಕುರುಹಕಾಣಬೇಕು. ಕುರುಹುವಿಡಿದು ಅರುಹಕಾಣಬೇಕು. ಅರುಹುವಿಡಿದು ಆಚಾರವಕಾಣಬೇಕು. ಆಚಾರವಿಡಿದು ನಿಜವಕಾಣಬೇಕು. ನಿಜವಿಡಿದು ನಮ್ಮ ಅಖಂಡೇಶ್ವರಲಿಂಗವ ಕೂಡಬೇಕು.
--------------
ಷಣ್ಮುಖಸ್ವಾಮಿ
ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ. ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ ನೀರಾಟ ನಿಂದು ನೆಲೆಗೊಂಡನಯ್ಯ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಇಷ್ಟಲಿಂಗದಲ್ಲಿ ಗುರುವಿಡಿದು, ಪ್ರಾಣಲಿಂಗದಲ್ಲಿ ಲಿಂಗವಿಡಿದು, ಭಾವಲಿಂಗದಲ್ಲಿ ಜಂಗಮವಿಡಿದು ಪರಮಪ್ರಸಾದವ ಸ್ವೀಕರಿಸಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವಿಡಿದು ಕಾಯದ ಕರ್ಮವ ಹರಿದೆನಯ್ಯ. ಲಿಂಗವಿಡಿದು ಜೀವದ ಕರ್ಮವ ಹರಿದೆನಯ್ಯ. ಜಂಗಮವಿಡಿದು ಪ್ರಾಣದ ಕರ್ಮವ ಹರಿದೆನಯ್ಯ. ಪ್ರಸಾದವ ಹಿಡಿದು ಸರ್ವಕರ್ಮವ ಹರಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗವಿಡಿದು ಅರಿವ ಅರಿವು ಅವಲ್ಲದೆ ಗುರುವಿಡಿದು ಅರಿವ ಅರಿವು ಅರಿವಲ್ಲ. ಗುರುವಿಡಿದು ಲಿಂಗವುಂಟೆಂಬುದು ಕಲ್ಪಿತ, ತನ್ನಿಂದ ತಾನಹುದಲ್ಲದೆ. ಗುಹೇಶ್ವರಲಿಂಗದಲ್ಲಿ ಹಂಗು ಹರಿಯದನ್ನಕ್ಕರ ತಾನಾಗಬಾರದು ಕಾಣು ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿಯದ ಪಾತಕರ ಮುಖವ ನೋಡಲಾಗದಯ್ಯ. ಅಂತಪ್ಪ ಪಾತಕರ ಮಾತ ಕೇಳಲಾಗದು, ಹೇಳಲಾಗದು. ಅದೇನು ಕಾರಣವೆಂದರೆ; ಗುರುವಿಡಿದು ಕಾಯ ಪಾವನವಾಯಿತ್ತಯ್ಯ. ಲಿಂಗವಿಡಿದು ಜೀವ ಪಾವನವಾಯಿತ್ತಯ್ಯ. ಜಂಗಮವಿಡಿದು ಪ್ರಾಣ ಪಾವನವಾಯಿತ್ತಯ್ಯ. ಪಾದೋದಕ ಪ್ರಸಾದವಿಡಿದು ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಾದೋದಕ ಪ್ರಸಾದದಿಂದ ಮೇಲೆ ಪರವಿಲ್ಲವಾಗಿ, ಗುರುವಿಡಿದು ಲಿಂಗವ ಕಂಡೆ. ಲಿಂಗವಿಡಿದು ಜಂಗಮವ ಕಂಡೆ. ಪ್ರಸಾದದಿಂದ ಪರವ ಕಂಡೆ. ಪರವ ತೋರಿದ ಗುರುವಿನಾಜ್ಞೆಯನು ಮೀರುವ ದುರಾತ್ಮರೆನ್ನ ಮುಖಕ್ಕೆ ತೋರದಿರು, ಕಲಿದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ ದೀಕ್ಷೆಯನು ಗುರು ತನ್ನ ಶಿಷ್ಯಂಗೆ ಉಪದೇಶಿಸಿ ಮತ್ತೆ ಆ ಲಿಂಗದಲ್ಲಿ ಮಾಡುವ ಜಪ ಧ್ಯಾನ ಅರ್ಚನೆ ಉಪಚರಿಯ ಅರ್ಪಿತ ಪ್ರಸಾದಭೋಗವಾದಿಯಾದ ವೀರಶೈವರ ಸಾವಧಾನ ಸತ್ಕಿೃಯಾಚಾರಂಗಳ ಹೊಲಬನರಿಯದೆ ಭವಿಶೈವ ಭಿನ್ನಕರ್ಮಿಗಳಂತೆ ಆಂಗನ್ಯಾಸ ಕರನ್ಯಾಸ ಪಂಚಮಶುದ್ಧಿ ಪಂಚಾಮೃತಾಭಿಷೇಕ ಶ್ರೀರುದ್ರ ಪಂಚಬ್ರಹ್ಮಸ್ಥಲಾದಿ ಶೈವಪಂಚಪಂಚಾಕ್ಷರ ಭೂತಾದಿ ದೇವತಾದಿ ಗಣಿಕಾಜನನಿಕರ ಗಣನಾಕೃತ ಪರಿಪೂರಿತ ಅಕ್ಷಮಣಿ ಭವಮಾಲಿಕಾ ಜಪೋಪಚರಿಯಂಗಳಾದಿಯಾದ ಶೈವ ಪಾಷಂಡಕೃತ ಕರ್ಮಮಯವಪ್ಪ ಭವಿಮಾಟಕೂಟಂಗ?ನುಪದೇಶಿಸಿ ಭವಹರನಪ್ಪ ಘನವೀರಶೈವಲಿಂಗದಲ್ಲಿ ಮಾಡಿ ಕೂಡಿ ನಡೆಸಿಹನೆಂಬ ಕಡುಸ್ವಾಮಿದ್ರೋಹಿಗೆ ಆ ನಿಜದೀಕ್ಷೆಗೆಟ್ಟು ಗುರುಶಿಷ್ಯರಿರ್ವರು ನರಕಭಾಜನರಪ್ಪುದು ತಪ್ಪುದು ಅದೆಂತೆಂದೊಡೆ ``ನಾಮಧಾರಕಶಿಷ್ಯಾನಾಂ ನಾಮಧಾರೀ ಗುರುಸ್ತಥಾ ಅಂಧಕೋ[s]ಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್' ಎಂದುದಾಗಿ ಇದು ಕಾರಣ ಗುರುಚರಪರಕರ್ತೃವಹ ಅರುಹು ಆಚಾರ ಶರಣಸದ್ಭಾವಸಂಪದವನುಳ್ಳು ಘನಗುರುರೂಪರಪ್ಪ ಪರಮಾರಾಧ್ಯರಲ್ಲಿ ಶರಣುವೊಕ್ಕು ಅಜಡಮತಿಗಳಪ್ಪ ಗುರುಶಿಷ್ಯರಿಬ್ಬರು ತಮ್ಮ ಹೊದ್ದಿದ ಅಬದ್ಧವಪ್ಪ ಭವಿಮಾಟಕೂಟಂಗಳ ಪರಿಹರಿಸಿಕೊಂಡು ನಿಜವಿಡಿದು ನಡೆದು ಕೃತಾರ್ಥರಾಗಲರಿಯದೆ ಅಜ್ಞಾನದಿಂದಲಹಂಕರಿಸಿ ಗುರುವಿಡಿದು ಬಂದುದ ಬಿಡಬಾರದೆಂದು ಕಡುಮೂರ್ಖತನದಿಂ ಗುರುವಚನವನುಲ್ಲಂಘಿಸಿ ಶರಣ ಸತ್ಕ್ರಿಯಾಚಾರಂಗಳನು ಕಡೆಮೆಟ್ಟಿಸಲವ ತನ್ನ ಕರಸ್ಥಲದ ನಿಜವೀರಶೈವಲಿಂಗದಲ್ಲಿ ಸಲ್ಲದ ಭವಿಶೈವ ಮಾಟಕೂಟಂಗ? ಮಾಡಿಕೊಂಡು ನಡೆವ ನರಕಜೀವಿಗಳು ಗುರುಮಾರ್ಗಕ್ಕೆ ಹೊರಗು. ಅವರು ಕೊಂಬುದು ಸುರೆ ಮಾಂಸವಲ್ಲದೆ ಅವರ್ಗೆ ಪ್ರಸಾದವಿಲ್ಲ. ಇದು ಕಾರಣ ಈ ಉಭಯರನ್ನು ಕೂಡಲಚೆನ್ನಸಂಗಯ್ಯ ಸೂರ್ಯಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಸರಿವಿಡಿಯೆ ಗುರುವಿಡಿಯೆ. ಗುರುವಿಡಿದು ಲಿಂಗವಿಡಿಯೆ. ಪರಿವಿಡಿಯೆ ಈ ಲೋಕದ ಬಳಕೆವಿಡಿಯೆ. ಇಲ್ಲವೆಯ ತಂದೆನು ಬಲ್ಲವರು ಬನ್ನಿ ಭೋ! ಶರಣಸತಿ ಲಿಂಗಪತಿಯೆಂಬುದ ಕೇಳಿ ಉಂಟಾದುದ ಇಲ್ಲೆನಬಂದೆ. ಇಲ್ಲದುದ ಉಂಟೆನಬಂದೆ. ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಕರ್ಮಿಗಳಿಗೆ ನೆಟ್ಟನೆ ಗುರುವಿಲ್ಲೆನಬಂದೆ. ಮುಟ್ಟಲರಿಯರು ಪ್ರಾಣಲಿಂಗವ. ಅಟ್ಟಿ ಹತ್ತುವರೀ ಲೋಕದ ಬಳಕೆಯ ಇಷ್ಟಲಿಂಗದ ಹಂಗು ಹರಿಯದ ಕಾರಣ ಚಿಕ್ಕಯ್ಯಪ್ರಿಯ ಸಿದ್ಧಲಿಂಗವಿಲ್ಲೆನ ಬಂದೆ.
--------------
ಘಟ್ಟಿವಾಳಯ್ಯ
ಗುರುವಿಡಿದು ಲಿಂಗವ ಕಂಡೆ. ಲಿಂಗವಿಡಿದು ಜಂಗಮವ ಕಂಡೆ. ಜಂಗಮವಿಡಿದು ಪಾದತೀರ್ಥ ಪ್ರಸಾದವ ಕಂಡೆ. ಪಾದತೀರ್ಥಪ್ರಸಾದವಿಡಿದು ಪರವ ಕಂಡೆ. ಇಂತಿವ ತೋರಿದ ಗುರುವಿನಾಜ್ಞೆಯ ಮೀರಿ ನಡೆವ ದುರಾಚಾರಿಗಳ ಮುಖವ ನೋಡಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಾ ಹುಟ್ಟುವಾಗ ಬಟ್ಟಬಯಲೆ ಗಟ್ಟಿಯಾಯಿತ್ತು. ಆ ಬಟ್ಟಬಯಲು ಗಟ್ಟಿಯಾದ ಬಳಿಯಲ್ಲಿ ನಾ ಜನನವಾದೆ. ಜನನವಾದವರಿಗೆ ಮರಣ ತಪ್ಪದು. ಅದೇನು ಕಾರಣವೆಂದಡೆ ಮರವೆ ಮರವೆಗೆ ಮುಂದುಮಾಡಿತ್ತು; ಕರ್ಮಕ್ಕೆ ಗುರಿಮಾಡಿತ್ತು; ಕತ್ತಲೆಯಲ್ಲಿ ಮುಳುಗಿಸಿತ್ತು. ಕಣ್ಣು ಕಾಣದೆ ಅಂಧಕನಂತೆ ತಿರುಗುವುದ ನೋಡಿ, ನಾ ಹೆದರಿಕೊಂಡು ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ನಿಶ್ಚಿಂತವಾಗಿ ನಿಜವ ನೆಮ್ಮಿ ಅರುಹ ಕಂಡೆ. ಅರುಹುವಿಡಿದು ಆಚಾರವ ಕಂಡೆ; ಆಚಾರವಿಡಿದು ಗುರುವ ಕಂಡೆ; ಗುರುವಿಡಿದು ಲಿಂಗವ ಕಂಡೆ; ಲಿಂಗವಿಡಿದು ಜಂಗಮವ ಕಂಡೆ; ಜಂಗಮವಿಡಿದು ಪಾದೋದಕ ಪ್ರಸಾದವ ಕಂಡೆ. ಪಾದೋದಕ ಪ್ರಸಾದವಿಡಿದು ಮಹಾಶರಣನ ಕಂಡೆ. ಆ ಮಹಾಶರಣನ ಪಾದವಿಡಿದು ಎನ್ನ ಕಾಯಗುಣವಳಿಯಿತ್ತು ಕರಣಗುಣ ಸುಟ್ಟಿತ್ತು; ಅಂಗಗುಣ ಅಳಿಯಿತ್ತು ಲಿಂಗಗುಣ ನಿಂದಿತ್ತು; ಭಾವ ಬಯಲಾಯಿತ್ತು ಬಯಕೆ ಸವೆಯಿತ್ತು. ಮಹಾದೇವನಾದ ಶರಣನ ಬರಿಯ ಬೆಳಗಲ್ಲದೆ, ಕತ್ತಲೆ ಕಾಣಬಾರದು ಕಾಣಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಲಿಂಗ ಘನವೆಂಬೆನೆ? ಗುರುವಿಡಿದು ಕಂಡೆ. ಗುರು ಘನವೆಂಬೆನೆ? ಸಾಕಾರವಿಡಿದು ಕಂಡೆ. ಸಾಕಾರ ಘನವೆಂಬೆನೆ? ನಿರಾಕಾರವಿಡಿದು ಕಂಡೆ. ನಿರಾಕಾರ ಘನವೆಂಬೆನೆ? ಜಂಗಮವಿಡಿದು ಕಂಡೆನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆನೆ ಮೊದಲು ಇರುವೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯಲ್ಲಿ ಸತ್ತು ಹುಟ್ಟಿ ಮಾಡಿದ ಪಾಪಂಗಳಿಗೆ ಕಡೆ ಇಲ್ಲವು ನೋಡಾ ! ಒಬ್ಬ ಶಿವನ ಅಂಗವ ಕಂಡೆನಾಗಿ ಹರಿದುಹೋಹವು ನೋಡಾ ! ಆ ಶಿವನ ತನು ಮನದ ಕೊನೆಯಲ್ಲಿ ನಿರಾಲಂಬಲಿಂಗವಿಪ್ಪದು ನೋಡಾ ! ಆ ಲಿಂಗವು ಒಂದೇ ಮೂರುತೆರನಾಯಿತ್ತು. ಅದು ಹೇಗೆಂದಡೆ : ಗುರು-ಲಿಂಗ-ಜಂಗಮವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ : ಗುರುವಿಡಿದು ಭಕ್ತ-ಮಹೇಶ್ವರನೆಂದು ಎರಡುತೆರನಾಯಿತ್ತು. ಲಿಂಗವಿಡಿದು ಪ್ರಸಾದಿ-ಪ್ರಾಣಲಿಂಗಿಯೆಂದು ಎರಡುತೆರನಾಯಿತ್ತು. ಜಂಗಮವಿಡಿದು ಶರಣ-ಐಕ್ಯನೆಂದು ಎರಡುತೆರನಾಯಿತ್ತು. ಹೀಂಗೆ ಮೂರು ಆರುತೆರನಾಯಿತ್ತು. ಅದು ಹೇಗೆಂದಡೆ; ಇಷ್ಟ-ಪ್ರಾಣ-ಭಾವವೆಂದು ಮೂರುತೆರನಾಯಿತ್ತು. ಈ ಮೂರು ಒಂದೊಂದಾಗಿ ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ; ಇಷ್ಟಲಿಂಗವಿಡಿದು ಆಚಾರಲಿಂಗ-ಗುರುಲಿಂಗವೆಂದು ಎರಡುತೆರನಾಯಿತ್ತು. ಪ್ರಾಣಲಿಂಗವಿಡಿದು ಶಿವಲಿಂಗ-ಜಂಗಮಲಿಂಗವೆಂದು ಎರಡುತೆರನಾಯಿತ್ತು. ಭಾವಲಿಂಗವಿಡಿದು ಪ್ರಸಾದಲಿಂಗ-ಮಹಾಲಿಂಗವೆಂದು ಎರಡುತೆರನಾಯಿತ್ತು. ಹೀಂಗೆ ಮೂರು ಆರುತೆರನಾಯಿತ್ತು. ಅದು ಹೇಗೆಂದಡೆ: ಧ್ಯಾನ ಧಾರಣ ಸಮಾಧಿಯೆಂದು ಮೂರುತೆರನಾಯಿತ್ತು. ಈ ಮೂರನೊಂದೊಂದು ಎರಡೆರಡಾಗಿ ಆರುತೆರನಾಯಿತ್ತು. ಅದು ಹೇಗೆಂದಡೆ; ಧ್ಯಾನವಿಡಿದು ಕ್ರಿಯಾಶಕ್ತಿ-ಜ್ಞಾನಶಕ್ತಿಯೆಂದು ಎರಡುತೆರನಾಯಿತ್ತು. ಧಾರಣವಿಡಿದು ಇಚ್ಫಾಶಕ್ತಿ-ಆದಿಶಕ್ತಿಯೆಂದು ಎರಡುತೆರನಾಯಿತ್ತು. ಸಮಾಧಿವಿಡಿದು ಪರಾಶಕ್ತಿ-ಚಿಚ್ಫಕ್ತಿಯೆಂದು ಎರಡುತೆರನಾಯಿತ್ತು. ಇದಕ್ಕೆ ಭಕ್ತಿ ಆರುತೆರನಾಯಿತ್ತು. ಅದು ಹೇಗೆಂದಡೆ: ಸದ್ಭಕ್ತಿ, ನೈಷಿ*ಕಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿಯೆಂದು ಆರುತೆರನಾಯಿತ್ತು. ಒಬ್ಬ ನಿಃಕಲಶಿವನು ಒಂದೇ ಮೂರುತೆರನಾಯಿತ್ತು. ಮೂರೇ ಆರುತೆರನಾಯಿತ್ತು. ಆರೇ ಮೂವತ್ತಾರುತೆರನಾಯಿತ್ತು. ಮೂವತ್ತಾರೇ ಇನ್ನೂರಹದಿನಾರುತೆರನಾಯಿತ್ತು. ಇನ್ನೂರಹದಿನಾರಾದ ಶಿವನು ಮೂವತ್ತಾರಾದ. ಮೂರಾದ ಶಿವನು ಆರಾದ. ಆರಾದ ಶಿವನು ಮೂರಾದ, ಮೂರಾದ ಶಿವನು ಒಂದಾದ, ಒಂದಾದ ಶಿವನು ಅಂಗಲಿಂಗಸಂಬಂಧ ಗರ್ಭೀಕರಿಸಿಕೊಂಡು ತಾನು ತಾನಾಗಿರ್ಪನು ನೋಡಾ. ಇಂತಪ್ಪ ನಿಃಕಲಶಿವನ ಮಹಾಮಹಿಮೆ ಕಂಡು ನೆನೆದ ನೆನಹಿಂಗೆ ತೃಪ್ತಿಯಾಯಿತ್ತು ಕಾಣಾ, ಅಂದವಾಗಿ ಎನ್ನ ಸಲಹಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->