ಅಥವಾ

ಒಟ್ಟು 15 ಕಡೆಗಳಲ್ಲಿ , 7 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಭೂಮಿಗೆ ಹುಟ್ಟಿದ ಕಲ್ಲು, ಕಲ್ಲುಕುಟ್ಟಿಗರ ಕೈಯ ಕಡಿಸಿಕೊಂಡ ಶಿಲೆಯನೆಂತು ಲಿಂಗವೆಂದೆಂಬೆನಯ್ಯ? ಕೊಟ್ಟಾತ ಗುರುವೆ? ಕೊಂಡಾತ ಶಿಷ್ಯನೆ? ಅಲ್ಲ ಕಾಣಿರಯ್ಯ. ಶಿಲಾಲಿಖಿತವ ಕಳೆದು, ಕಳಾಭೇದವನರಿದು ಕಳೆಯ ತುಂಬಿಕೊಡಬಲ್ಲರೆ ಗುರುವೆಂಬೆ; ಕೊಂಡಾತ ಶಿಷ್ಯನೆಂಬೆನಯ್ಯ `ಯಥಾ ಕಲಾ ತಥಾ ಭಾವೋ| ಯಥಾ ಭಾವಸ್ತಥಾ ಮನಃ|| ಯಥಾ ಮನಸ್ತಥಾ ದೃಷ್ಟಿ| ರ್ಯಥಾ ದೃಷ್ಟಿಸ್ತಥಾ ಸ್ಥಲಂ||' ಎಂದುದಾಗಿ ಈ ಭೇದವನರಿಯದೆ ಇಷ್ಟವ ಮಾರುವಾತಂಗೂ ಕೊಂಬಾತಂಗೂ ನಾಯಕನರಕ ತಪ್ಪದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕ್ರೀಯ ಅನುವನರಿದಾತ ಗುರುವೆಂಬೆ, ಕ್ರೀಯ ಅನುವನರಿತುದು ಲಿಂಗವೆಂಬೆ, ಕ್ರೀಯ ಅನುವನರಿದಾತ ಜಂಗಮವೆಂಬೆ. ಇಂತೀ ತ್ರಿವಿಧಮೂರ್ತಿ ಆಚಾರಕ್ಕೆ ಅನುಕೂಲವಾಗಿ ಬಂಗಾರದೊಳಗೆ ಬಣ್ಣವಡಗಿದಂತೆ, ಆ ಬಣ್ಣವೇಧಿಸಿ ಬಂಗಾರವಾದಂತೆ. ಇಂತು ಆಚಾರಕ್ಕೂ ಅರಿವಿಂಗೂ ಪಡಿಪುಚ್ಚವಿಲ್ಲವಾಗಿ, ಆಚಾರವೆ ಕುಲ, ಅನಾಚಾರವೇ ಹೊಲೆ. ಇದಕ್ಕೆ ಒಲವರವಿಲ್ಲ, ಏಲೇಶ್ವರಲಿಂಗವ ಕೇಳಲಿಲ್ಲ.
--------------
ಏಲೇಶ್ವರ ಕೇತಯ್ಯ
ಲಿಂಗದ್ರೋಹಿಯನೆ ಗುರುವೆಂಬೆ, ಗುರುದ್ರೋಹಿಯನೆ ಶಿಷ್ಯನೆಂಬೆ. ಸಮಯದ್ರೋಹಿಯನೆ ಭಕ್ತನೆಂಬೆ, ಪ್ರಸಾದದ್ರೋಹಿಯನೆ ಮಾಹೇಶ್ವರನೆಂಬೆ. ಇದು ಕಾರಣ, ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ ಸರ್ವಾಂಗದ್ರೋಹಿಯ ಲಿಂಗೈಕ್ಯನೆಂದೆಂಬೆ
--------------
ಚನ್ನಬಸವಣ್ಣ
ಅಂದಾದಿಬಿಂದುವಿಲ್ಲದಂದು ಅಂದಾ ಜೀವನೆಲ್ಲಿಪ್ಪುದೊ ? ಪಿಂಡ ರೂಪಿಸುವಲ್ಲಿ ಆ ಜೀವ ಬಂದು ಪರಿಯೆಂತುಟೊ ? ಇದನರಿದಡೆ ಗುರುವೆಂಬೆ, ಲಿಂಗವೆಂಬೆ, ಜಂಗಮವೆಂಬೆ, ಅಲ್ಲದಿದ್ದಡೆ ನರನೆಂಬೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಶಿವಾಶಿವಾ, ಗುರು ಲಿಂಗಾಂಗಿ ಜಂಗಮ ಭಕ್ತರ ಭೇದವ ಪೇಳ್ವೆ ಕೇಳಿರಯ್ಯಾ. ಶೆರೆಯ ಕುಡಿದವನೇ ಗುರುವೆಂಬೆ. ಸುರೆಯ ಕುಡಿದವನೇ ಲಿಂಗಾಂಗಿಯೆಂಬೆ. ಕಂಡವ ತಿಂದವನೇ ಜಂಗಮವೆಂಬೆ. ಇಂತೀ ಮೂವರ ಕೊಂದು ತಿಂದವನ ಕೊಂದು ತಿಂದಾತನೇ ಭಕ್ತನೆಂಬೆ. ಇಂತಿದರ ಅನುಭಾವ ತಿಳಿಯಬಲ್ಲರೆ ಗುರು-ಲಿಂಗ-ಜಂಗಮ ಭಕ್ತನೆಂಬೆ. ಇಂತೀ ಚತುರ್ವಿಧದ ನಿರ್ಣಯವ ಹೇಳಿದಾತನೇ ಅನಾದಿಗುರುಲಿಂಗಜಂಗಮವೆಂಬೆ. ಆತನಲ್ಲಿ ಉಪದೇಶವ ಹಡಿಯಬೇಕು. ಇಂತಿದರ ಭೇದವ ತಿಳಿಯಬಲ್ಲಾತನೇ ಅನಾದಿ ಶಿಷ್ಯ ಭಕ್ತನೆಂಬೆ. ಇಂತಿವರಿಗೆ ಉಪದೇಶವ ಹೇಳಬೇಕು. ಇಂತಪ್ಪ ಗುರುಶಿಷ್ಯಸಂಬಂಧವೆಂತೆಂದೊಡೆ: ಶಿಖಿ-ಕರ್ಪುರ ಸಂಯೋಗದಂತೆ. ಪಯೋಧರಫಲ ಉದಕದಲ್ಲಿ ಲೀಯವಾದಂತೆ. ಲವಣ ಸಮುದ್ರದಲ್ಲಿ ಲೀಯವಾದಂತೆ. ಈ ಗುರುಶಿಷ್ಯರುಭಯರು ಕೂಡಿ ಪರಶಿವಸಾಗರದಲ್ಲಿ ನಿರ್ವಯಲಾದರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಚಾರಸಹಿತವಿದ್ದಡೆ ಗುರುವೆಂಬೆ. ಆಚಾರಸಹಿತವಿದ್ದಡೆ ಲಿಂಗವೆಂಬೆ. ಆಚಾರಸಹಿತವಿದ್ದಡೆ ಜಂಗಮವೆಂಬೆ. ಸದಾಚಾರಸಹಿತವಿರದೆ ಅನ್ಯದೈವ ಭವಿಮಾಟಕೂಟವ ಮಾಡುವನ ಮನೆಯಲ್ಲಿ ಲಿಂಗಾರ್ಚನೆಯ ಮಾಡಿದನಾದಡೆ ನಿಮಗಂದೆ ದೂರವಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಗುರು ಮುನ್ನವೋ ಶಿಷ್ಯ ಮುನ್ನವೋ ಲಿಂಗ ಮುನ್ನವೋ ಶರಣ ಮುನ್ನವೋ ಜಂಗಮ ಮುನ್ನವೋ ಭಕ್ತ ಮುನ್ನವೋ ಪಾದೋದಕ-ಪ್ರಸಾದ ಮುನ್ನವೋ ವಿಭೂತಿ-ರುದ್ರಾಕ್ಷಿ ಮುನ್ನವೋ ಮಂತ್ರ ಮುನ್ನವೋ ಶಿವಾಚಾರ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಗುರುವೆಂಬೆ. ಭೂಮಿ ಮುನ್ನವೋ ಆಕಾಶ ಮುನ್ನವೋ ಅಗ್ನಿ ಮುನ್ನವೋ ವಾಯು ಮುನ್ನವೋ ಚಂದ್ರ ಮುನ್ನವೋ ಸೂರ್ಯ ಮುನ್ನವೋ ಜ್ಯೋತಿ ಮುನ್ನವೋ ಕಾಳಗತ್ತಲೆ ಮುನ್ನವೋ ಸಮುದ್ರ ಮುನ್ನವೋ ಆತ್ಮ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಲಿಂಗವೆಂಬೆ. ಹೆಣ್ಣು ಮುನ್ನವೋ ಗಂಡು ಮುನ್ನವೋ, ಗರ್ಭ ಮುನ್ನವೋ ಶಿಶು ಮುನ್ನವೋ ತಾಯಿ ಮುನ್ನವೋ ತಂದೆ ಮುನ್ನವೋ ಜ್ಞಾನ ಮುನ್ನವೋ ಅಜ್ಞಾನ ಮುನ್ನವೋ ಗಂಧ ಮುನ್ನವೋ ಘ್ರಾಣ ಮುನ್ನವೋ ರುಚಿ ಮುನ್ನವೋ ಜಿಹ್ವೆ ಮುನ್ನವೋ ನೋಟ ಮನ್ನವೋ ರೂಪ ಮುನ್ನವೋ ಶ್ರೋತ್ರ ಮುನ್ನವೋ ಶಬ್ದ ಮುನ್ನವೋ ತ್ವಕ್ ಮುನ್ನವೋ, ಮೃದು ಕಠಿಣ ಮೊದಲಾದ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಜಂಗಮವೆಂಬೆ. ಅರಿವು ಮುನ್ನವೋ ಮರೆವು ಮುನ್ನವೋ ಆಚಾರ ಮುನ್ನವೋ ಅನಾಚಾರ ಮುನ್ನವೋ ಬ್ರಹ್ಮಾಂಡ ಮುನ್ನವೋ ಪಿಂಡಾಂಡ ಮುನ್ನವೋ ಮನ ಮುನ್ನವೋ ಪ್ರಾಣ ಮುನ್ನವೋ ಧರ್ಮ ಮುನ್ನವೋ ಕರ್ಮ ಮುನ್ನವೋ ಇಂತೀ ಸರ್ವರೊಳಗೆ ತಾ ಮೊದಲಾಗಿ ಆವುದು ಮುನ್ನವೋ ಎಂದು ತಿಳಿಯಬಲ್ಲರೆ ಪಾದೋದಕ ಪ್ರಸಾದಿಗಳೆಂಬೆ; ವಿಭೂತಿ ರುದ್ರಾಕ್ಷಿಧಾರಣ ಮಂತ್ರಮೌನಿಗಳೆಂಬೆ. ಇಂತಪ್ಪ ವಚನದ ತಾತ್ಪರ್ಯ ತಿಳಿಯಬಲ್ಲರೆ ಲಿಂಗಾಂಗಸಮರಸಾನಂದಸುಖವ ತಿಳಿಯಬಲ್ಲ ಶಿವಜ್ಞಾನಸಂಪನ್ನರೆಂಬೆ. ಪರಶಿವಯೋಗಿಗಳೆಂಬೆ, ಷಟ್‍ಸ್ಥಲ ಭಕ್ತರೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನ ನಷ್ಟವಾದರೆ ಭಕ್ತನೆಂಬೆ, ಉಪದೇಶ ನಷ್ಟವಾದರೆ ಗುರುವೆಂಬೆ, ಭಾವ ನಷ್ಟವಾದರೆ ಲಿಂಗವೆಂಬೆ, ಗಮನ ನಷ್ಟವಾದರೆ ಜಂಗಮವೆಂಬೆ, ಅರ್ಪಿತ ನಷ್ಟವಾದರೆ ಪ್ರಸಾದಿಯೆಂಬೆ ಆಕಾ(ಚಾ?)ರ ನಷ್ಟವಾದರೆ ಐಕ್ಯನೆಂಬೆ. ಇಂತೀ ಷಡುಸ್ಥಲ ನಿಂದ ನಿಲವಿನ ಪರಿಣಾಮಪದವ ಕೂಡಲಚೆನ್ನಸಂಗಾ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಅಯ್ಯ, ತನುವಿನಾಸೆಯನಳಿದಾತನ ಸತ್ತುಚಿತ್ತಾನಂದನ ಗುರುವೆಂಬೆ. ಮನದ ಕಾಂಕ್ಷೆಯನಳಿದಾತನ ಸರ್ವಾಚಾರನ ಲಿಂಗವೆಂಬೆ ನೋಡಾ. ಭಾವದ ಭ್ರಮೆಯ ನಳಿದಾತನ ಷಟ್‍ಸ್ಥಲಜಂಗಮವೆಂಬೆ ನೋಡಾ. ಪ್ರಾಣನ ಪ್ರಪಂಚನಳಿದಾತನ ನಿರಾತಂಕನಿರಾಲಂಬ ನಿಷ್ಕಳಂಕನಿಜಶರಣನೆಂಬೆ ನೋಡಾ. ಈ ಚತುರ್ವಿಧ ಪಾಶವ ಗೆದ್ದಾತನ ಗುಹೇಶ್ವರಲಿಂಗವೆಂಬೆ ನೋಡಾ ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ದಿನದಿನಕ್ಕೆ ದೀನಮಾನವನಂತೆ, ಹೀನಾಶ್ರಯದಲ್ಲಿ ಹುಟ್ಟಿ, ಏನನೂ ಅರಿಯದೆ, ಜ್ಞಾನವು ಇಲ್ಲದೆ, ನಾನು ನೀನೆಂಬ ಉಭಯವು ಅಳಿಯದೆ, ನಾನು ಭಕ್ತ, ನಾನು ಜಂಗಮವೆಂಬವರ ನೋಡಿ, ನಾಚಿತ್ತೆನ್ನ ಮನ್ನವು. ಅಂಗಕ್ಕೆ ಆಚಾರವಿಲ್ಲ, ಮನಸಿಂಗೆ ಅರುಹಿಲ್ಲ, ಪ್ರಾಣಕ್ಕೆ ಗೊತ್ತು ಇಲ್ಲ. ಭಾವಕ್ಕೆ ಹೇಯವಿಲ್ಲದೆ ಇನ್ನಾವ ಬಗೆಯಲ್ಲಿ ಭಕ್ತ ಜಂಗಮವಾದಿರೆ ಹೇಳಿರಣ್ಣ ? ಭಕ್ತನಾದರೆ ಎಂತಿರಬೇಕೆಂದರೆ, ಮಾಡಿಹನೆಂಬುದು ಮನದೊಳಗೆ ಹೊಳೆಯದೆ, ನೀಡಿಹೆನೆಂಬ ಅರಿಕೆ ಇಲ್ಲದೆ, ಬೇಡುವುದಕ್ಕೆ ಮುನ್ನವೆ ಆ ಜಂಗಮದ ನಿಲುಕಡೆಯನರಿದು ಮಾಡಬಲ್ಲರೆ ಭಕ್ತ. ಮಾಡಿದ ಭಕ್ತಿಯ ಕೈಕೊಂಡು, ಆ ಭಕ್ತನ ಕರಸ್ಥಲಕ್ಕೆ ಲಿಂಗವಾಗಿ, ಮನಸ್ಥಲಕ್ಕೆ ಅರಿವಾಗಿ, ಭಾವಸ್ಥಲಕ್ಕೆ ಜಂಗಮವಾಗಿ ಅಡಗಿದಡೆ, ಐಕ್ಯನೆಂಬೆ, ಜಂಗಮವೆಂಬೆ, ಲಿಂಗವೆಂಬೆ, ಗುರುವೆಂಬೆ. ಆ ಭಕ್ತ ಜಂಗಮ ಎರಡಕ್ಕೂ ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿ. ಆ ನಿಲುವಿಂಗೆ ನಮೋ ನಮೋ ಎಂದು ಬದುಕಿದೆ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ .
--------------
ಹಡಪದ ಅಪ್ಪಣ್ಣ
ಶಿವಶಿವಾ, ಈ ಲೋಕದೊಳಗೆ ನಾವು ಗುರುಗಳು, ನಾವು ಚರಂತಿಹಿರಿಯರೆಂದು ಬಂದು ದೀಕ್ಷೋಪದೇಶ ಅಯ್ಯತನವ ಮಾಡುವೆವೆಂದು ಹೇಳಿಕೊಂಬರಯ್ಯ. ಅದೆಂತೆಂದೊಡೆ: ಭಕ್ತರ ದೀಕ್ಷೋಪದೇಶವ ಮಾಡುವ ಕಾಲಕ್ಕೆ ಅವರ ಮನೆಯೊಳಗಣ ಗಡಿಗೆ ಮಡಕೆಯ ಹೊರೆಯಕ್ಕೆ ಹಾಕಿಸಿ, ಮೈಲಿಗೆ ಮುಟ್ಟಚಟ್ಟನೆಲ್ಲವ ತೊಳಿಸಿ, ಗೃಹವನೆಲ್ಲ ಸಾರಣೆಯ ಮಾಡಿಸಿ, ಹೊಸ ಮಡಕೆಯ ತರಿಸಿ, ಆ ಭಕ್ತರ ಮಂಡೆಯ ಬೋಳಿಸಿ, ಮೈಯ ತೊಳಸಿ, ಹೊಸ ವಸ್ತ್ರವ ಉಡಿಸಿ, ತೊಡಿಸಿ, ಹೊದಿಸಿ, ಅವರ ಪೂರ್ವದ ಲಿಂಗವನೆಲ್ಲ ವಿಚಾರಿಸಿ ನೋಡಿ ಭಿನ್ನವಾದ ಲಿಂಗವನೆಲ್ಲ ತೆಗೆದು ಪ್ರತ್ಯೇಕಲಿಂಗವ ತಂದು, ವೇಧಾಮಂತ್ರಕ್ರೀಯೆಂಬ ತ್ರಿವಿಧ ದೀಕ್ಷೆಯಿಂದ ಮೂರೇಳು ಪೂಜೆಯ ಮಾಡಿ ಅವರಂಗದ ಮೇಲೆ ಲಿಂಗವ ಧರಿಸಿ ಮಾಂಸಪಿಂಡವಳಿದು ಮಂತ್ರಪಿಂಡವಾಯಿತು, ಭವಿಜನ್ಮವಳಿದು ಭಕ್ತನಾದೆ, ಪೂರ್ವಜನ್ಮವಳಿದು ಪುನರ್ಜಾತನಾದೆ ಎಂದು ಅವರಂಗದ ಮೇಲೆ ಲಿಂಗಧಾರಣ ಮಾಡಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಸದ್ಭಕ್ತರಾದಿರೆಂದು ಅವರನು ಬೋಳೈಸಿಕೊಂಡು ತಮ್ಮ ಒಡಲ ಹೊರೆವರಲ್ಲದೆ ಇವರು ಸದ್ಭಕ್ತರ ಮಾಡಲರಿಯರು. ಸದ್ಭಕ್ತರ ಮಾಡುವ ಪರಿಯ ಪೇಳ್ವೆ. ಅದೆಂತೆಂದೊಡೆ: ಪಂಚಭೂತ ಮಿಶ್ರವಾದ ದೇಹವೆಂಬ ಘಟವನು ತೆಗೆದು, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಲಕ್ಷಣವುಳ್ಳ ಚಿದ್ಘಟವ ತಂದು, ಸಂಕಲ್ಪ ವಿಕಲ್ಪ, ಸಂಸಾರಸೂತಕವೆಂಬ ಮುಟ್ಟು ಚಟ್ಟನೆಲ್ಲ ಚಿಜ್ಜಲದಿಂದ ತೊಳೆದು, ಮಾಯಾ ಮೋಹವೆಂಬ ಹೊದಿಕೆಯ ತೆಗೆಸಿ, ನಿರ್ಮಾಯ ನಿರ್ಮೋಹವೆಂಬ ವಸ್ತ್ರವನುಡಿಸಿ ತೊಡಿಸಿ, ಆಶೆ ಎಂಬ ಕೇಶವ ಬೋಳಿಸಿ, ಅವನ ಹಲ್ಲು ಕಳೆದು, ನಾಲಿಗೆಯ ಕೊಯ್ದು, ಕಣ್ಣುಗುಡ್ಡಿಯ ಮೀಟಿ, ಎರಡು ದಾಡಿಯ ಮುರಿಗುಟ್ಟಿ, ತಲೆ ಹೊಡೆದು, ಕೈಕಾಲು ಕಡಿದು, ತಿದಿಯ ಹರಿದು, ಸಂದ ಮುರಿದು, ಹಂದಿ ನಾಯಿಯ ಕೊಂದು ಕಂಡವ ತಿನಿಸಿ, ಕಪ್ಪೆಯ ಉಚ್ಚಿಯ ಕುಡಿಸಿ, ಇಂತೀ ಪರಿಯಲ್ಲಿ ದೀಕ್ಷೋಪದೇಶವ ಮಾಡಿ ಲಿಂಗವ ಕೊಡಬಲ್ಲರೆ ಗುರುವೆಂಬೆ. ಇಲ್ಲವಾದರೆ ಕಳ್ಳಗುರುಕಿಮಕ್ಕಳೆಂಬೆ. ಇಂತಪ್ಪ ವಿಚಾರವ ತಿಳಿದುಕೊಳ್ಳಬಲ್ಲರೆ ಭಕ್ತರೆಂಬೆ. ಇಲ್ಲದಿದ್ದರೆ ಬದ್ಧಭವಿಗಳೆಂಬೆ. ಇಂತೀ ತರುವಾಯದಲ್ಲಿ ಅಯ್ಯತನವ ಮಾಡಬಲ್ಲರೆ ಚರಂತಿಹಿರಿಯರು ಎಂಬೆ. ಇಲ್ಲದಿದ್ದರೆ ಮೂಕೊರತಿ ಮೂಳಿಯ ಮಕ್ಕಳೆಂಬೆ. ಇಂತೀ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದುಕೊಳ್ಳಬೇಕಲ್ಲದೆ, ಈ ಲೋಕದ ಜಡಜೀವರು ಕಡುಪಾತಕರಲ್ಲಿ ಕೊಳ್ಳಲುಬಾರದು. ಅದೇನು ಕಾರಣವೆಂದೊಡೆ: ತಾವಾರೆಂಬ ತಮ್ಮ ನಿಲವ ತಾವರಿಯರು, ಇನ್ನೊಬ್ಬರಿಗೆ ಏನು ಹೇಳುವರಯ್ಯ? ಇಂತಪ್ಪ ಮೂಢಾತ್ಮರಲ್ಲಿ-ಇದಕ್ಕೆ ದೃಷ್ಟಾಂತ: ಹಿತ್ತಲಲ್ಲಿ ಪಡುವಲಕಾಯಿಗೆ ಕಲ್ಲು ಕಟ್ಟಿದಂತೆ, ಬಾವಿಯೊಳಗೆ ಕೊಡಕ್ಕೆ ಹಗ್ಗವ ಕಟ್ಟಿ ಬಿಟ್ಟಂತೆ, ನಾವು ನಮ್ಮ ಪಾದದಲ್ಲಿ ಮರೆಯ ಮಾಡಬೇಕೆಂದು, ತಮ್ಮ ಕಾಲಿಗೆ ಒಂದೊಂದು ಪೋರಗಳ ಕಟ್ಟಿಕೊಂಡು ಅಡ್ಡಡ್ಡ ಬಿದ್ದು ಮರಿಯ ಪಡಕೊಂಬವರ, ಆ ಮರಿಗಳಿಗೆ ಅಯ್ಯತನ ಮಾಡಿದೆವು ಎಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಮೂಗ ಕೊಯಿದು ಕನ್ನಡಿಯ ತೋರಿ ಮೂಗಿನೊಳಗೆ ಮೆಣಸಿನಹಿಟ್ಟು ತುಂಬಿ ಸಂಗನ ಶರಣರ ಪಾದರಕ್ಷೆಯಲ್ಲಿ ಘಟ್ಟಿಸಿ, ಮೂಡಲ ದಿಕ್ಕಿಗೆ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ವಿಚಾರವ ತಿಳಿದು ಉಪದೇಶವ ಮಾಡಬಲ್ಲಾತನೇ ಗುರುವೆಂಬೆ. ಇಂತೀ ಭೇದವ ತಿಳಿದು ಉಪದೇಶವ ಕೊಳಬಲ್ಲಡಾತನೇ ಶಿಷ್ಯನೆಂಬೆ. ಇಂತಪ್ಪ ನಿರ್ಣಯವ ತಿಳಿದು ಪಾದೋದಕ ಪ್ರಸಾದವ ಕೊಡಬಲ್ಲಡಾತನೇ ಜಂಗಮಲಿಂಗಿಯೆಂಬೆ. ಇಂತೀ ವಿಚಾರವನಳವಡಿಸಿಕೊಂಡು ಪಾದೋದಕ ಪ್ರಸಾದವ ಕೊಳಬಲ್ಲಡಾತನೇ ಭಕ್ತನೆಂಬೆ. ಇಂತಪ್ಪ ಶಿವಾಚಾರದ ಬಗೆಯನು ತಿಳಿಯದೆ ಮಾಡುವ ಮಾಟವೆಲ್ಲಾ ಹೊಳ್ಳಕುಟ್ಟಿ, ಕೈ ನೊಂದು ಗಾಳಿಗೆ ತೂರಿದಂತಾಯಿತಯ್ಯಾ. ಈ ಲೋಕದೊಳಗೆ ಗುರುಶಿಷ್ಯ, ದೇವ ಭಕ್ತರೆಂಬುಭಯರ ಮೇಳಾಪವ ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಡೊಂಕನ ಕೊಂಡು ಡೊಂಕನ ಕಾಡುವಡೆ ನಮ್ಮ ಡೊಂಕನೆ ಸಾಲದೆ ? ಕೆಮ್ಮುವನಾದಡೆ ನಮ್ಮವನೆ ಸಾಲದೆ ? ಎಂಬ ಲೋಕದ ಗಾದೆಯ ಮಾತಿನಂತೆ; ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ ಅವರ ಹಿರಯರೆಂಬೆ ಗುರುವೆಂಬೆ. ಅವರಿಗೆ ನಮೋ ನಮೋ ಎಂಬೆ. ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ, ಆ ಗುರುವಿಂಗೆ ಏಳನೆಯ ನರಕ, ಭವಘೋರದಲ್ಲಿ ಓಲಾಡುತ್ತಿಹ. ಇದು ಕಾರಣ, ಡೊಂಕನ ಕೊಂಡು ಸಸಿನವ ಕೊಡಬಲ್ಲ ಗುರು, ಅಪೂರ್ವ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
-->