ಅಥವಾ

ಒಟ್ಟು 81 ಕಡೆಗಳಲ್ಲಿ , 32 ವಚನಕಾರರು , 76 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು; ಇಂತಡಗುವರೆ ಮಹಿಮರು; ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಕಂಗಳೆ ಕರುಳಾಗಿ ಉರವಣಿಸಿ ಬಪ್ಪವನ ಬರವ ನೋಡಾ, ಇರವ ನೋಡಾ. ಪರವ ನೋಡಾ, ಇಹಪರವ ನೋಡಾ, ಇಹಪರವೊಂದಾದ ಘನವ ನೋಡಾ, ಎಲೆ, ಘನಕ್ಕೆ ಘನವ ನೋಡಾ. ಕರುವಿಟ್ಟ ರೂಪಿನಂತೆ ಕಂಗಳೆರಡು ಹಳಚದೆ ಭುಗಿಲನೆ ನಡೆತಹ. ಇಂತಪ್ಪ ಗರುವ ಪ್ರಭುವ ಕಂಡೆವೈ ಕೂಡಲಸಂಗಮದೇವಾ.
--------------
ಬಸವಣ್ಣ
ಘನಕ್ಕೆ ಮಹಾಘನಗಂಬ್ಥೀರ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸನ್ಮಾನಿತರು, ನಿರವಯವಸ್ತುವಿನ ಪ್ರತಿಬಿಂಬರಾಗಿ, ತಮ್ಮ ತಾವರಿದು. ಚತುರ್ವಿಧ ವಿಸರ್ಜನೆಯನರಿದಾಚರಿಸುವುದು. ಆ ವಿಸರ್ಜನೆಗಳಾವಾವೆಂದಡೆ : ಮಲಮೂತ್ರವೆರಡನು ವಿಸರ್ಜನೆಯಿಂದ ಬಿಡುವಂಥದೆ ಸ್ಥೂಲಾಚಮನವೆನಿಸುವುದು. ಕ್ರೀಡಾವಿಲಾಸದಿಂದ ತಮ್ಮರ್ಧಾಂಗವೆಂದು ಭಕ್ತಗಣಸಾಕ್ಷಿಯಾಗಿ ವಿರಾಜಿಸುವಂಥ ಕ್ರಿಯಾಂಗನೆಯಲ್ಲಿ ವೀರ್ಯವ ಬಿಡುವಂಥಾದ್ದೊಂದು ಸ್ತೂಲಾಚಮನವೆನಿಸುವುದು. ಈ ಸ್ಥೂಲಾಚಮನಗಳ ಮಾಡಿದ ವೇಳೆಯಲ್ಲಿ ದಂತಗಳ್ಮೂವತ್ತೆರಡನು ತೀಡಿ, ಲಿಂಗಾಂಗ ಮಜ್ಜನಂಗೈದು, ಸರ್ವೋಪಚಾರಂಗಳಿಂ ಕ್ರಿಯಾಜಪ ಜ್ಞಾನಜಪ ಮಹಾಜ್ಞಾನಜಪ ಪರಿಪೂರ್ಣಾನುಭಾವಜಪಂಗಳೊಳ್ ಲಿಂಗಜಂಗಮ ಜಂಗಮಲಿಂಗಾರ್ಪಣವ ಮಾಡುವುದು. ಶಿವಶರಣಗಣಾರಾಧ್ಯರು ಲಿಂಗಾಬ್ಥಿಷೇಕ ಅರ್ಚನಾದಿಗಳ ಮಾಡಿ, ಅರ್ಪಣ ಸಂದ್ಥಿನಲ್ಲಿ ಜಲತೋರಿಕೆಯಾಗಿ ವಿಸರ್ಜಿಸಿ, ಉದಕವ ಬಳಸಿದ ವೇಳೆಯೊಳು, ಲಿಂಗಬಾಹ್ಯರಸಂಗಡ ಪ್ರಸಂಗಿಸಿದರೂ ದೀಕ್ಷಾಜಲದಿಂದ ಆರುವೇಳೆ ಲಿಂಗಸ್ಪರಿಶನದಿಂದ ಜಿಹ್ವೆಯ ಪ್ರಕ್ಷಾಲಿಸಿ, ಮುಖ ಮಜ್ಜನವಮಾಡಿ, ಲಿಂಗಾರ್ಚನಾರ್ಪಣವನುಭಾವಗಳ ಮಾಡುವುದು, ಇದು ಸೂಕ್ಷ್ಮಾಚಮನವೆನಿಸುವುದು. ಪ್ರಮಾಣಗಳಾದರೂ ಅನುವಲ್ಲದೆ ವಿಪತ್ತಿನ ವೇಳೆಯಾಗಲಿ, ಜಲ ಪರಿಹರಿಸಿದಲ್ಲಿ ಪರಿಣಾಮಜಲದಿಂದ ಆ ಸ್ಥಾನವ ಪ್ರಕ್ಷಾಲಿಸಿ, ಹಸ್ತಪಾದವ ತೊಳೆದು ಉದಕವ ಶೋದ್ಥಿಸಿ, ಲಿಂಗಸ್ಪರಿಶನವಗೈದು, ಆರುವೇಳೆ ಜಿಹ್ವೆಯ ಪ್ರಕ್ಷಾಲಿಸಿ, ಸತ್ಯೋದಕದ ಪರಮಾನಂದಜಲ ಮಹಾಜ್ಞಾನಪ್ರಣಮಪ್ರಸಾದಂಗಳ ಗುಟುಕ ಲಿಂಗಮಂತ್ರ ನೆನಹಿನೊಡನೆ ಸೇವಿಸುವುದು. ಲಿಂಗಬಾಹ್ಯರ ಸಂಗಡಪ್ರಸಂಗಿಸಿದೊಡೆ ಇದೇ ರೀತಿಯಲ್ಲಿ ಮುಖಪ್ರಕ್ಷಾಲನಂಗೈದು ಆಚರಿಸುವುದು. ಇದಕೂ ಮೀರಿದರೆ ಜಲಬಿಟ್ಟು, ಭವಿಗಳಸಂಗಡ ಪ್ರಸಂಗವ ಮಾಡಿದರೆ ಆ ಸಮಯದಲ್ಲಿ ಪ್ರಮಾದವಶದಿಂದ ಉದಕವು ದೊರೆಯದಿದ್ದರೆ ಅಲ್ಲಿ ವಿಸರ್ಜನಸ್ಥಾನವ ದ್ರವವಾರುವಂತೆ ಶುಚಿಯುಳ್ಳ ಮೃತ್ತಿಕೆ ಪಾಷಾಣ ಕಾಷ್ಠ ಕಾಡುಕುರುಳು ಪರ್ಣಗಳಿಂದ ಪ್ರಕ್ಷಾಲನಂಗೈದು, ಜಿಹ್ವಾಗ್ರದಲ್ಲಿ ಸಂಬಂಧವಾದ ಗುರುಲಿಂಗೋದಕದಿಂದ ಮತ್ತಾ ಜಿಹ್ವೆಯ ಪ್ರಕ್ಷಾಲಿಸಿ, ಆರುವೇಳೆ ತೂವರಂಗೈದು, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಶ್ರೀಗುರುಬಸವಲಿಂಗಾಯೆಂದು ಘನಮನವ ಚಿದ್ಘನಲಿಂಗಪ್ರಸನ್ನಧ್ಯಾನದಿಂದ ನವನಾಳವೆಂಬ ಕವಾಟಬಂಧನಂಗೈದು, ಪ್ರದಕ್ಷಣವಮಾಡಿ, ಪರಿಪೂರ್ಣ ಚಿದ್ಬೆಳಗಿನೊಳು ಮತ್ತೆಂದಿನಂತೆ ಅತಿಜಾಗ್ರವೆಂಬ ಮಹಾದರುವಿನೊಳ್ ಸತ್ಕøತ್ಯ ಸದ್ಧರ್ಮರಾಗಿರ್ಪುದು. ಮುಂದೆ ಲಿಂಗಾರ್ಚನಾರ್ಪಣಗಳ ಮಾಡಬೇಕಾದರೆ, ಶುದ್ಧೋದಕದಿಂದ ಲಿಂಗಾಬ್ಥಿಷೇಕಸ್ನಾನಂಗೈದು, ಪಾವುಡಗಳ ಮಡಿಮಾಡಿ ಪರಿಣಾಮಾರ್ಪಣ ತೃಪ್ತರಾಗಿರ್ಪುದು. ಇದಕೂ ಮೀರಿದರೆ, ಜಲವ ಬಿಡುವುದು, ಭವಿಗಳಸಂಗಡ ಪ್ರಸಂಗಿಸಿದರೆ ಸ್ನಾನಮಾಡುವ ಪರಿಯಂತರ ಜಿಹ್ವಾಗ್ರದಲ್ಲಿ ಸ್ಥಾಪ್ಯವಾದ ಸತ್ಯಶುದ್ಧ ಗುರುಲಿಂಗೋದಕ ಮಹಾಪ್ರಣಮಪ್ರಸಾದವೆ ಮೊದಲು ಕ್ರಿಯಾಘನ ಗುರುಲಿಂಗಜಂಗಮಾರ್ಚನೆ ತೀರ್ಥಪ್ರಸಾದಸೇವನೆಗಳಂ ಮಾಡಲಾಗದು. ಇದಕೂ ಮೀರಿದರೆ, ತನ್ನ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರು ಪರಿಪೂರ್ಣಗುರುಸ್ಮರಣೆ ಧ್ಯಾನದಿಂದ ಸರ್ವಾವಸ್ಥೆಗಳ ನೀಗಿ, ಮಹಾಬಯಲ ಬೆರೆವುದು. ಇದಕೂ ಮೀರಿದರೆ, ತನುವಿಗೆ ಆಯಸದೋರಿ, ಆಪ್ತರಾರೂ ಇಲ್ಲದಂತೆ, ಪರಿಣಾಮಜಲ ದೊರೆಯದ ವೇಳೆಯೊಳು ಮಲಮೂತ್ರಗಳೆರಡೂ ತೋರಿಕೆಯಾದರೆ, ಎಲ್ಲಿ ಪರಿಯಂತರ ಸಂಶಯಗಳುಂಟೊ ಅಲ್ಲಿ ಪರಿಯಂತರವು ಎರಡನೂ ವಿಸರ್ಜಿಸುವುದು. ಆ ಸಂಶಯ ತೀರಿದಲ್ಲಿ ಉದಕವಿದ್ದಲ್ಲಿಗೆ ಹೋಗಿ, ಪೂರ್ವದಂತೆ ಮೃತ್ತಿಕಾಶೌಚಗಳ ಬಳಸಿ, ನಿರ್ಮಲವಾಗಿ ತೊಳೆದು, ಹಸ್ತಪಾದಗಳ ಪ್ರಕ್ಷಾಲಿಸಿ, ಆ ಸಮಯದಲ್ಲಿ ಕ್ರಿಯಾಭಸಿತವಿದ್ದರೂ ರಸಯುಕ್ತವಾದ ಪದಾರ್ಥವಾದರೂ ಪುಷ್ಪಪತ್ರಿಗಳಾದರೂ ಇದ್ದರೆ ಸತ್ಕ್ರಿಯಾಲಿಂಗಾರ್ಚನಾರ್ಪಣಗಳಿಗೆ ಬಾರವು. ಆದ್ದರಿಂದ ಅವು ಇದ್ದವು ನಿಕ್ಷೇಪವ ಮಾಡುವುದು. ಕ್ರಿಯಾಗುರು ಲಿಂಗಜಂಗಮಮುಖದಿಂದ ಶುದ್ಧೋದಕವ ಮಾಡಿ, ತ್ರಿವಿಧ ಸ್ನಾನಂಗೈದು, ಪುರಾತನೋಕ್ತಿಯಿಂದ ಜಂಗಮಲಿಂಗದಲ್ಲಿ ಚಿದ್ಭಸಿತವ ಬೆಸಗೊಂಡು, ಸತ್ಕ್ರಿಯಾರ್ಪಣಗಳನಾಚರಿಸಿ, ನಿತ್ಯಮುಕ್ತರಾಗಿರ್ಪವರೆ ಪೂರ್ವಾಚಾರ್ಯಸಗುಣಾನಂದಮೂರ್ತಿಗಳೆಂಬೆ ಕಾಣಾ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಘನಕ್ಕೆ ಘನವೆಂಬವರ ಮನಕ್ಕೆ ತಂದು ಅನುಗೊಳಿಸಿದೆಯಲ್ಲಾ, ಅಲ್ಲಮದೇವಾ. `ಸರ್ವಂ ಖಲ್ವಿದಂ ಬ್ರಹ್ಮ' ಎಂದು ವಾಸಿದಲ್ಲಿ, ಲಿಂಗತ್ರಯದಲ್ಲಿ ಬೋಧಗೊಳಿಸಿದೆಯಲ್ಲಾ, ಅಲ್ಲಮದೇವಾ. ಮಾಡಿ ನೀಡುವೆನೆಂಬವರ ರೂಹು ಮೂಡದಂತೆ ಮಾಡಿದೆಯಲ್ಲಾ, ಅಲ್ಲಮದೇವಾ. ದೃಷ್ಟಿಗೆ ಬಿದ್ದವರ ಮಹದೈಶ್ವರ್ಯಕ್ಕಿಟ್ಟು, ನೀ ನೆಟ್ಟನೆ ಬೆಟ್ಟದಲ್ಲಿಯ ಬಟ್ಟಬಯಲ ಕದಳಿಯ ಹೋಗಿ ಬಟ್ಟಬಯಲಾಗಿ, ಜಗದಂತರ್ಯಾಮಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದೆಯಲ್ಲಾ ಅಲ್ಲಮದೇವಾ
--------------
ಸಿದ್ಧರಾಮೇಶ್ವರ
ಅರಿದು ನೆನೆಯಲಿಲ್ಲ, ಮರೆದು ಪೂಜಿಸಲಿಲ್ಲ. ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ. ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ ಗುರುವಿಗೆ ಶಿಷ್ಯನು ಹೊಡವಡುವ ಕಾರಣ ಮುನ್ನಿಲ್ಲ. ಬಯಲ ಬಿತ್ತಲಿಲ್ಲ, ಬೆಳೆಯಲಿಲ್ಲ, ಒಕ್ಕಲಿಲ್ಲ, ತೂರಲಿಲ್ಲ, ಗುಹೇಶ್ವರನೆಂಬ ಲಿಂಗಕ್ಕೆ ಕುರುಹು ಮುನ್ನಿಲ್ಲ.
--------------
ಅಲ್ಲಮಪ್ರಭುದೇವರು
ಅಂಡಾಭರಣರು ಘನವೆಂಬೆನೆ ? ಅಂಡಾಭರಣರು ಘನವಲ್ಲ. ರುಂಡಾಭರಣರು ಘನವೆಂಬೆನೆ ? ರುಂಡಾಭರಣರು ಘನವಲ್ಲ. ಗಂಗಾಧರರು ಘನವೆಂಬೆನೆ ? ಗಂಗಾಧರರು ಘನವಲ್ಲ. ಗೌರೀವಲ್ಲಭರು ಘನವೆಂಬೆನೆ ? ಗೌರೀವಲ್ಲಭರು ಘನವಲ್ಲ. ಚಂದ್ರಶೇಖರರು ಘನವೆಂಬೆನೆ ? ಚಂದ್ರಶೇಖರರು ಘನವಲ್ಲ. ನಂದಿವಾಹನರು ಘನವೆಂಬೆನೆ ? ನಂದಿವಾಹನರು ಘನವಲ್ಲ. ತ್ರಿಯಂಬಕರು ಘನವೆಂಬೆನೆ ? ತ್ರಿಯಂಬಕರು ಘನವಲ್ಲ. ತ್ರಿಪುರವೈರಿ ಘನವೆಂಬೆನೆ ? ತ್ರಿಪುರವೈರಿ ಘನವಲ್ಲ. ಪಂಚಮುಖರು ಘನವೆಂಬೆನೆ ? ಪಂಚಮುಖರು ಘನವಲ್ಲ. ಫಣಿಕುಂಡಲರು ಘನವೆಂಬೆನೆ ? ಫಣಿಕುಂಡಲರು ಘನವಲ್ಲ. ಶೂಲಪಾಣಿಗಳು ಘನವೆಂಬೆನೆ ? ಶೂಲಪಾಣಿಗಳು ಘನವಲ್ಲ. ನೀಲಲೋಹಿತರು ಘನವೆಂಬೆನೆ ? ನೀಲಲೋಹಿತರು ಘನವಲ್ಲ. ಅದೇನು ಕಾರಣವೆಂದೊಡೆ, ಇಂತಿವರಾದಿಯಾಗಿ ಅನಂತಕೋಟಿ ರುದ್ರಗಣಂಗಳು ಶರಣನ ಸರ್ವಾಂಗದಲ್ಲಿ ಅಡಗಿಹರಾಗಿ ಅಖಂಡೇಶ್ವರಾ, ನಿಮ್ಮ ಶರಣ ಘನಕ್ಕೆ ಘನವೆಂಬೆನಯ್ಯಾ.
--------------
ಷಣ್ಮುಖಸ್ವಾಮಿ
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ? ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ, ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ? ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ | ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮøತಂ || ಇಂತೆಂದುದಾಗಿ, ಅರಿಯಬಾರದು, ಕುರುಹ ತೋರದು, ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ.
--------------
ಹಾವಿನಹಾಳ ಕಲ್ಲಯ್ಯ
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ವೇದಂಗಳು ನಿಜವ ಬಲ್ಲಡೆ, ವಟ್ಟಂಕುರರ ಮರೆಯಬೇಕಲ್ಲದೆ, ಚನ್ನಯ್ಯ ಕಕ್ಕಯ್ಯಗಳ ಮೆರೆಯಲೇಕೆ ? ಶಾಸ್ತ್ರಂಗಳು ಸತ್ಯವ ನುಡಿದಡೆ, ಶಾಸ್ತ್ರಂಗಳ ಮಾತಿಂಗೆ ಹೇಸಿ, ಕಿರಾತಬೊಮ್ಮಣ್ಣಂಗಳ ಮೆರೆಯಲೇಕೆ ? ಆಗಮಂಗಳು ಆಚಾರವನರಿದಡೆ, ಆಗಮಂಗಳ ಮೆರೆಯದೆ, ಕೆಂಬಾವಿಯ ಭೋಗಣ್ಣಗಳ ಹಿಂದುರುಳುತ್ತ ಹೋಗಿ ಮರೆಯಲೇಕೆ ? ಇಂತೀ ವೇದಶಾಸ್ತ್ರಾಗಮಂಗಳು ಶಿವನಾದಿಯಂತವನರಿದಡೆ, ಸಾಮವೇದಿಗಳು ಶ್ವಪಚಯ್ಯಂಗೆ ಶಿಷ್ಯರಾಗಲೇಕೆ ? ವಾದಿಸಿದರೆಲ್ಲರು ಪ್ರತಿವಾದಿಗಳಾದರು ನಿಮ್ಮಂತವನರಿಯದೆ. ಅಭೇದ್ಯವು, ಘನಕ್ಕೆ ಘನವು, ಶಂಭು ಸೊಡ್ಡಳಾ.
--------------
ಸೊಡ್ಡಳ ಬಾಚರಸ
ತನು ಕರಣೇಂದ್ರಿಯ ವಿಷಯಾದಿ ವಿಕಾರಂಗಳ ಹಿಂಗಿ, ತನ್ನ ನಿಜಸ್ವರೂಪವನರಿದು, ಅಂಗಲಿಂಗಸಂಬಂಧಿಯಾಗಿ, ಲೋಕದ ಜನರ ಸಂಗವ ತೊಲಗಿ, ಕರ್ಮದ ಹೊರೆಯಂ ಬಿಸುಟು, ಸೀಮೆಯಂ ಬಿಟ್ಟು, ಉಪಾಧಿಯಿಲ್ಲದೆ ಜೀವ ಭಾವವ ಬಿಟ್ಟು, ಮಲತ್ರಯವ ಹೊದ್ದದೆ, ನಿತ್ಯವಾದ ವಸ್ತುವೆ ತಾನಾಗಿ ನಿಂದ ಮಹಾಜ್ಞಾನ ಜಂಗಮವ ನೋಡಿರಯ್ಯ. ಅದೆಂತೆಂದಡೆ: ನಿಸ್ಸಂಗತ್ವಂ ನಿರಾಭಾರಂ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ತಸ್ಯ ಜಂಗಮ ಲಕ್ಷಣಂ || ಇಂತೆಂದುದಾಗಿ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಅದೇನು ಕಾರಣವೆಂದಡೆ, ಘನಕ್ಕೆ ಘನವಾದರು; ಮನಕ್ಕೆ ಮನವಾದರು; ತನುವಿಂಗೆ ತನುವಾದರು; ನಡೆನುಡಿಗೆ ಚೈತನ್ಯವಾದರು ನೋಡುವುದಕ್ಕೆ ನೋಟವಾದರು; ಕೂಡುವುದಕ್ಕೆ ಲಿಂಗವಾದರು. ಈ ಒಳಹೊರಗೆ ಬೆಳಗುವ ಬೆಳಗು ನೀವೆಯಾದ ಕಾರಣ, ನಿಮ್ಮ ಪಾದದಲ್ಲಿ ನಾ ನಿಜಮುಕ್ತಳಾದೆನಯ್ಯಾ ಚೆನ್ನಮಲ್ಲೇಶ್ವರ, ಅಪ್ಪಣ್ಣಪ್ರಿಯ ಚೆನ್ನಬಸವಣಾ
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂತುಟೆಂದು ಹೇಳಿಹೆ ಕೇಳಿರೇ: ಶುದ್ಧಪ್ರಸಾದವು ಗುರುವಿನಲ್ಲಿ, ಸಿದ್ಧಪ್ರಸಾದವು ಲಿಂಗದಲ್ಲಿ, ಪ್ರಸಿದ್ಧಪ್ರಸಾದವು ಜಂಗಮದಲ್ಲಿ. ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ? ಘನಕ್ಕೆ ಘನ ಮಹಾಘನ ಪ್ರಸಾದವು. ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು.
--------------
ಚನ್ನಬಸವಣ್ಣ
ಶಿವಶರಣಗಣಾರಾಧ್ಯರು ನಿರಾಕಾರ ಚಿತ್ಪಾದೋದಕದಾಚರಣೆಯ ಮಾರ್ಗಕ್ರಿಯೆ ಮುಗಿದ ಮೇಲೆ, ಸಾಕಾರಚಿತ್ಪ್ರಸಾದವ ಆ ಪಾದತೀರ್ಥದಾಚರಣೆಯಂತೆ ತಟ್ಟಿ, ಬಟ್ಟಲಗಳೊಳ್ ಪರಿಪೂರ್ಣತೃಪ್ತಿಯನೈದುವುದು. ಆ ನಿಲುಕಡೆಯೆಂತೆಂದೊಡೆ : ನಿರಾಭಾರಿವೀರಶೈವಸಂಪನ್ನ ಸದ್ಭಕ್ತ ಜಂಗಮಮೂರ್ತಿಗಳು ಪಾದೋದಕದಿಂದ ಅವರ ಭಾಂಡಕ್ಕೆ ಹಸ್ತಸ್ಪರಿಶನವ ಮಾಡುವುದು. ಉಳಿದ ವಿಶೇಷ ವೀರಶೈವಸನ್ಮಾರ್ಗಿ ಭಕ್ತಜಂಗಮವು ತಮ್ಮ ತಮ್ಮ ತಂಬಿಗೆ ತಟ್ಟೆ ಬಟ್ಟಲಿಗೆ ಪಾದೋದಕ ಹಸ್ತಸ್ಪರಿಶನವ ಮಾಡಿ, ಕೇವಲಪರಮಾನಂದದ ಚಿದ್ಗರ್ಭೋದಯ ಶುದ್ಧಪ್ರಸಾದವೆಂದು ಭಾವಿಸಿ, ಅತಿವಿಶೇಷ ಮಹಾಸುಯ್ದಾನದಿಂದ ಸಮಸ್ತ ಜಂಗಮ ಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ, ಅಷ್ಟಾಂಗ ಹೊಂದಿ, ಎಡಬಲ ಗಣತಿಂತಿಣಿಯ ಪೂರ್ಣಾನಂದದ ನಿಜದೃಷ್ಟಿಯಿಂ ನೋಡಿ, ನಿರೀಕ್ಷಿಸಿ, ಶರಣಾರ್ಥಿ ಸ್ವಾಮಿ, ನಿಮ್ಮ ದಯದಿಂದುದಯವಾದ ಪರಿಪೂರ್ಣರಸಾಮೃತವ ಮಹಾಲಿಂಗಾರ್ಪಣವ ಮಾಡಬೇಕೆಂದು ಅಭಿವಂದಿಸಿ, ಪರಮಪತಿವ್ರತತ್ವದಿಂದ ಗುರುಚರವರಸ್ಥಲಕ್ಕೆ ತನುಮನಧನಂಗಳ ಸಮರ್ಪಿಸುವಲ್ಲಿ ನಿರ್ವಂಚಕವಾಗಿ, ಭಕ್ತಲಿಂಗಜಂಗಮವೆಂದು ಉಭಯ ನಾಮರೂಪ ಕ್ರಿಯಾಕಾಯವಳಿದು, ಕ್ಷೀರ ಕ್ಷೀರವ ಕೂಡಿದಂತೆ ಪರುಷ ಮುಟ್ಟಿ ಪರುಷವಾದಂತೆ, ಪರಮಾನಂದಾಬ್ಧಿ ಚಿದ್ರಸಾಮೃತ ಅಷ್ಟಾವರಣದ ಸತ್ಕ್ರಿಯಾಜ್ಞಾನಾಚಾರಂಗಳ ಅನುಭಾವದೊಳ್ ಕೂಟಸ್ಥದಿಂದೊಡಲಾಗಿ, ನಿರಾಕಾರ ನಿಃಶಬ್ದಲೀಲೆಪರ್ಯಂತರವು ಆ ಗುರುಲಿಂಗಜಂಗಮ ಚಿತ್ಪ್ರಭಾಂಗ ಭಸ್ಮಮಂತ್ರಾದಿಗಳೆ ಮುಂದಾಗಿ, ಸತ್ಯಶುದ್ಧ ನಡೆನುಡಿ ಕ್ರಿಯಾಜ್ಞಾನಾನುಭಾವ ಪಾದೋದಕ ಪ್ರಸಾದಸೇವನೆಯೆ ಹಿಂದಾಗಿ, ಸಮಸ್ತ ಕಾರಣಕ್ಕೂ ಸಾವಧಾನ ಸಪ್ತವಿಧ ಸದ್ಭಕ್ತಿಗಳಿಂದ ಮಾರ್ಗಾಚಾರವುಳ್ಳ ಕ್ರಿಯಾರ್ಪಣ, ದ್ರವ್ಯಮೀರಿದಾಚಾರವುಳ್ಳ ಜ್ಞಾನಾರ್ಪಣದ್ರವ್ಯಂಗಳಂ ಪರಿಪೂರ್ಣಾನುಭಾವದಿಂದ ನಿಜನೈಷಾ*ನುಭಾವಸಂಬಂಧಿಗಳೆ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ ಸೇವಿತಕ್ಕೆ ಯೋಗ್ಯರಾದ ಘನಕ್ಕೆ ಘನವೆಂದವರಾಳಿನಾಳಾಗಿರ್ಪೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶಿವ ತಾನೆಂಬ ವಿವೇಕವಿಲ್ಲದೆ, ಶಿವನಲ್ಲಿ ತಾನಡಗಿ, ತನ್ನಲ್ಲಿ ಶಿವನಡಗಿ, ತಾನು ತಾನೇಕವಾದಾತಂಗೆ ಸಂದು ಸಂಶಯಂಗಳುಂಟೆ? ತೃಪ್ತಿ ಸಂಕೋಚವೆಂಬವಡಗಿದ ಬಳಿಕ ಮತ್ತೆ ಘನಕ್ಕೆ ಘನವಾದೆನೆಂಬ ನೆನಹುಂಟೆ? ನಿಜವೆಂತಿಪ್ಪುದಂತಿಪ್ಪನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯನು.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->