ಅಥವಾ

ಒಟ್ಟು 21 ಕಡೆಗಳಲ್ಲಿ , 15 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತದಲ್ಲಿ ನೆನೆದ ಲೆಕ್ಕವ ಇದಿರಿಟ್ಟು ಬರೆದಲ್ಲದೆ ಅರಿಯಬಾರದು. ಅರಿವು ಘನದಲ್ಲಿ ನಿಂದೆನೆಂದಡೆ ದೃಷ್ಟವಾದ ಲಿಂಗದಲ್ಲಿ ನಿಂದಲ್ಲದೆ ಕಾಣಬಾರದು. ಹೀಗಲ್ಲದೆ, ಆಧ್ಯಾತ್ಮದಲ್ಲಿ ಹೊದ್ದಿನೋಡಿ ಕಂಡೆನೆಂಬ ಬದ್ಧರ ಮಾತ ಹೊದ್ದದಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ, ಲಿಂಗವಿಲ್ಲಾ ಎಂದೆ. ಕಣ್ಣಿನಲ್ಲಿ ನೋಡಿ ಕಬಳೀಕರಿಸಿದೆನೆಂದಡೆ ಅದು ಕವುಳಿಕವೆಂಬೆ. ಮನದಲ್ಲಿ ನೆನೆದು ಘನದಲ್ಲಿ ನಿಂದೆಹೆನೆಂದಡೆ ಭವಕ್ಕೆ ಬೀಜವೆಂದೆ. ಕೈಗೂ ಕಣ್ಣಿಗೂ ಮನಕ್ಕೂ ಬಹಾಗ ತೊತ್ತಿನ ಕೂಸೆ ? ಕಂಡಕಂಡವರ ಅಪ್ಪಾ ಅಪ್ಪಾ ಎಂಬ ಇಂತೀ ಸುಚಿತ್ತರನರಿಯದೆ, ಉದ್ಯೋಗಿಸಿ ನುಡಿವ ಜಗದ ಭಂಡಕರನೊಲ್ಲೆನೆಂದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಹದಿನಾಲ್ಕು ಭುವನದಲ್ಲಿ ಮನೋವೇದ್ಯವಾಗಿ, ಅಲ್ಲಿಂದತ್ತತ್ತ ಮೀರಿದ ಘನದಲ್ಲಿ ಕೂಡಿದ ಶಿವಯೋಗಿಗೆ ಪ್ರಳಯವಿಲ್ಲ. ಅದೇನು ಕಾರಣವೆಂದಡೆ: ಆತನರಿವು ಅಖಂಡವಾಗಿ ಬೆಳಗುತ್ತಿರುವ ಕಾರಣ. ಜಲಾಗ್ನಿ ಪ್ರಳಯಂಗಳಾದಡೂ ಮರುತಾದಿತ್ಯರ ಪ್ರಳಯಂಗಳಾದಡೂ ಶಿವನ ನೆನಹಿಂದ ಮನವು ಶಿವಮಯವಾಗಿ ಮನವಿಲ್ಲದ ಮುಕ್ತಂಗೆ ಕೇಡು ಮುನ್ನಿಲ್ಲ ಆತ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ, ನಿತ್ಯನಾಗಿಹನು.
--------------
ಸ್ವತಂತ್ರ ಸಿದ್ಧಲಿಂಗ
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಉರವಣಿಸುವ ಮನ ಮುಟ್ಟುವನ್ನಬರ ಕಾಡುವುದು ಘನ ಘನದಲ್ಲಿ ಮನ ನಂಬುವನ್ನಬರ ಕಾಡುವುದು. ಮಹಂತ ಗುಹೇಶ್ವರನೆಂಬ ಶಬ್ದವುಳ್ಳನ್ನಬರ ಕಾಡುವುದು.
--------------
ಅಲ್ಲಮಪ್ರಭುದೇವರು
ಮನದ ಸೂತಕವಳಿಯದೆ ಘನದಲ್ಲಿ ಕೂಡಿಹೆನೆಂದರೆ ದೊರೆಕೊಳ್ಳದು, ಭಕ್ತಿಪಥ ದೊರೆಕೊ?್ಳದು, ಶರಣಪಥ ದೊರೆಕೊಳ್ಳದು, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನಾದಂಗಲ್ಲದೆ.
--------------
ಚನ್ನಬಸವಣ್ಣ
ಅರಿವಿಂಗೂ ಮರವೆಯ ದೆಸೆಯಲ್ಲಿ ಓಲಾಡುವ ಇಂದ್ರಿಯಂಗಳ ಸಮೂಹ. ಈ ಉಭಯವೂ ಕೂಡಿ, ಮಹವೊಡಗೂಡಿದಲ್ಲಿ ಭರಿತಾರ್ಪಣ. ಅರಿವುಳ್ಳವನೆಂದು, ನಿಬ್ಬೆರಗು ಕರಿಗೊಂಡವನೆಂದು, ಸರ್ವಸಂಗಪರಿತ್ಯಾಗಿಯೆಂದು ತಾನರಿಯದೆ, ಉಳಿದರ ಕೈಯಿಂದ, ಪರಾಧೀನರಿಗೊರೆಯದೆ, ಅಮೃತ ಸುಧೆಯಂತೆ, ಪರಿಪೂರ್ಣ ಕಳೆದಂತೆ, ಅರಿದರಿಯದಂತಿದ್ದುದು ಭರಿತಾರ್ಪಣ. ಹೀಂಗಲ್ಲದೆ ಅಜಯಾಗವ ಮಾಡುವ ವಿಪ್ರನ ಕರ್ಮದಂತೆ ನಾನಲ್ಲ ನೇಣು ಕೊಂದಿತ್ತೆಂದು ದಾಯಗಾರಿಕೆಯಲ್ಲಿ ಹೋಹ ದರ್ಶನ ಢಾಳಕವಂತಂಗೆ, ತನ್ನ ಕಾಲ ವೇಳೆಗೆ ತಕ್ಕಹಾಗೆ ಭಕ್ತಿಯ ಮರೆದು, ಸತ್ಯವ ತೊರೆದ ದುರ್ಮತ್ತಂಗೆ ಭರಿತಾರ್ಪಣದ ಕಟ್ಟುಂಟೆ ? ಇಂತೀ ಭೇದಂಗಳ ಯುಕ್ತಿಯಲ್ಲಿ ಸತ್ತು ಚಿತ್ತು ಆನಂದವೆಂಬ ಗೊತ್ತ ಮುಟ್ಟದೆ, ಮನ ಘನದಲ್ಲಿ ನಿಂದು ಉಭಯದೆಡೆಗೆಟ್ಟುದು ಭರಿತಾರ್ಪಣ. ಈ ಗುಣ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಶಬ್ದಶಾಸ್ತ್ರ ತರ್ಕಾಗಮಂಗಳ ಹೇಳಿ ಕೇಳಿ, ಕಲಿತುಲಿದವರೆಲ್ಲಾ ವಿದ್ಯಾಗೂಡಾದರಲ್ಲದೆ, ಲಿಂಗಗೂಡಾದುದಿಲ್ಲ ನೋಡಯ್ಯಾ. ಕಲಿಕಲಿತು ಉಲಿವ ಅಭ್ಯಾಸದ ಮಾತಿಂಗೆ ಮರುಳಪ್ಪರೆ ನಮ್ಮ ಶಿವಶರಣರು. ಆದಿ ಅನಾದಿಗಭೇದ್ಯವಾದ ನಿಜವ ಭೇದಿಸಲರಿತು ಮನ ಘನದಲ್ಲಿ ನಿವಾಸಿಯಾಗಬೇಕು. ಮನ ಘನದಲ್ಲಿ ನಿವಾಸಿಯಾಗದೆ ಸೌರಾಷ್ಟ್ರ ಸೋಮೇಶ್ವರಲಿಂಗವ ಬಲ್ಲೆನೆಂದು ನುಡಿವ ಬರಿ ಮಾತಿನ ಬಾಯ ಬಣ್ಣದ ಸೊಲ್ಲು, ಸಲ್ಲದೆ ಹೋಯಿತ್ತು.
--------------
ಆದಯ್ಯ
ಉದಕ ಒಂದಾದಡೆ ಕೂಟದ ಗುಣದಿಂದ ಜಾತಿ ಉತ್ತರವಾಯಿತ್ತು. ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ ಅವರವರಲ್ಲಿ ಅವ ಬೆರಸಿದಡೆ ಅವರವರ ಭಾವಕ್ಕೆ ತಕ್ಕಂತೆ ಇಪ್ಪ ಜಲಭೇದದ ವಸ್ತು ನಿರ್ದೇಶ. ಆನೆಯ ಮಾನದಲ್ಲಿ ಇರಿಸಬಹುದೆ? ಕಿರಿದು ಘನದಲ್ಲಿ ಅಡಗುವುದಲ್ಲದೆ ಘನ ಕಿರಿದಿನಲ್ಲಿ ಅಡಗುವುದೆ? ಅಮೃತದ ಕೆಲದಲ್ಲಿ ಅಂಬಲಿಯುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅರಿವಾರಡಿಗೊಂಡುದು ಮನ, ಮನದಲ್ಲಿ ಘನವಡಗಿತ್ತು, ಆಶ್ರಯವಿಲ್ಲ. ಬಲ್ಲೆನೆಂಬರೆ ನೆರೆ ಅರಿತ ಅರಿವು ಘನ, ಘನದಲ್ಲಿ ಆಶ್ರಯ ನಿರಾಶ್ರಯವಿಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಸ್ಥೂಲತನು, ಸೂಕ್ಷ್ಮತನು, ಕಾರಣತನು. ಇಂತೀ ತನುತ್ರಯದ ಭೇದವನರಿಯಬೇಕಣ್ಣಾ. ಸ್ಥೂಲತನು ಗುರುವಿಂಗೆ ಭಿನ್ನ, ಸೂಕ್ಷ್ಮತನು ಲಿಂಗಕ್ಕೆ ಭಿನ್ನ, ಭಿನ್ನಕಾರಣತನು ಜಂಗಮಕ್ಕೆ ಭಿನ್ನ. ನಾದ ಗುರುವಿನಲ್ಲಿ ಅಡಗಿತ್ತು, ಬಿಂದು ಲಿಂಗದಲ್ಲಿ ಅಡಗಿತ್ತು, ಕಳೆ ಜಂಗಮದಲ್ಲಿ ಅಡಗಿತ್ತು. ಮಹಾಘನ ವಸ್ತುವಿನಲ್ಲಿ ಲೀಯವಾಯಿತ್ತು. ಆದ ಬಳಿಕ, ಗುರುಲಿಂಗೆ ತನುವೆಂಬುದಿಲ್ಲ, ಲಿಂಗಕ್ಕೆ ಮನವೆಂಬುದಿಲ್ಲ, ಜಂಗಮಕ್ಕೆ ಘನವೆಂಬುದಿಲ್ಲ, ಪ್ರಸಾದಕ್ಕೆ ಜಿಹ್ವೆಯೆಂಬುದಿಲ್ಲ. ಅನುವರಿದು ಘನದಲ್ಲಿ ನಿಂದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಅರಸಿಕೊಳ್ಳಿರಣ್ಣಾ.
--------------
ಮೋಳಿಗೆ ಮಾರಯ್ಯ
ಹತ್ತು ಬಣ್ಣದ ಗಿಡುವಿಂಗೆ, ಹತ್ತೆಲೆ, ಹತ್ತು ಹೂ, ಹತ್ತು ಕಾಯಾಯಿತ್ತು. ಹತ್ತು ಹತ್ತು ಘನದಲ್ಲಿ ಅಳವಟ್ಟು, ಹತ್ತು ಹತ್ತು ಆಚಾರಕ್ರಮದಲ್ಲಿ ವಿಚಾರವ ಕಾಣಬಲ್ಲಡೆ ಆ ಕಾಯ ಲಿಂಗ ಉದಯ (ಲಿಂಗಮಯ?)ವಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಏನೆಂದೆನ್ನಬಹುದಯ್ಯ ?ಎಂತೆಂದೆನ್ನಬಹುದಯ್ಯ ? ಈ ಘನದ ವಿಚಾರವ ? ಈ ಘನದಲ್ಲಿ ಇಹಪರದ ಸುಖವ ಕಂಡು ಕೊಡುವೆನೆಂದು ಹೋದರೆ ಆ ಲಿಂಗವೆನ್ನ ಕರದೊಳಗೆ ತಾನೆಯಡಗಿತ್ತು. ನಾನಡಗಿ ನನ್ನ ವಿಚಾರವ ತಿಳಿಯಲು ನಾನು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಲಿಂಗಕ್ಕೆ ಮಜ್ಜನವ ಮಾಡಿದಲ್ಲಿ ತನುವಿನಾವಿಷ್ಕಾಂತದ ಕೇಡು. ಕುಸುಮವ ಧರಿಸುವಲ್ಲಿ ಮನದ ಪ್ರಕೃತಿಯ ಕೇಡು. ನೈವೇದ್ಯವ ಸಮರ್ಪಿಸುವಲ್ಲಿ ಸರ್ವ ಇಂದ್ರಿಯಂಗಳ ಕೇಡು. ಕಾಯಕ್ಕೆ ಮಜ್ಜನ, ಚಿತ್ತದ ವಿಲಾಸಿತಕ್ಕೆ ಕುಸುಮ. ಮನ ಘನದಲ್ಲಿ ನಿಂದುದಕ್ಕೆ ಅರ್ಪಿತ. ಇಂತೀ ತ್ರಿವಿಧದ ಮರೆಯಲ್ಲಿ ಕುರುಹುದೋರಿದವನ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಂಗದಲ್ಲಿದ್ದು ಅವಧಾನಿಯಾಗಿ, ಭಾವದಲ್ಲಿದ್ದು ಭವಚ್ಛೇದನವಾಗಿ, ಸುಖದಲ್ಲಿದ್ದು ಅಸು ಅಂತಕನಾಗಿ, ಸಕಲಭೋಗಂಗಳಲ್ಲಿದ್ದು ಭೋಗವಿರಾಗನಾಗಿ, ಬಂಕೇಶ್ವರಲಿಂಗವ ನೋಡುತ್ತಿದ್ದು ನೋಡದಂತಿರು, ಮನ ಘನದಲ್ಲಿ ನಿಂದು.
--------------
ಸುಂಕದ ಬಂಕಣ್ಣ
ಇನ್ನಷ್ಟು ... -->