ಅಥವಾ

ಒಟ್ಟು 93 ಕಡೆಗಳಲ್ಲಿ , 33 ವಚನಕಾರರು , 88 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿರ್ಬಯಲು ಮಹಾಬಯಲು ಚಿದ್‍ಬಯಲು ಬಯಲಾತ್ಮ ಸೂರ್ಯ ಚಂದ್ರ ತಾರಕ ಕಠೋರ ವಾಯು ಆಕಾಶ ಅಗ್ನಿ ಅಪ್ಪು ಪೃಥ್ವಿ ಬೀಜ ಅನ್ನರಸ ವೀರ್ಯ ಪಿಂಡ ಪ್ರಾಣ ಮನ ಅಸಿ ಉತ್ಪತ್ತಿ ಸ್ಥಿತಿ ಲಯ ಅಕ್ಷರ ಮೊದಲಾದ ಬ್ರಹ್ಮಾಂಡ ನೀನಾದುದಕ್ಕೆ, ನಿನ್ನ ನೀನರಿವುದಕ್ಕೆ ನೀನೇ ನಾನಾದುದೇ ಇದೇ ಆದಿಯಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಹಿರಿದುಂಟೆಂಬ ನುಡಿ ಚೋದ್ಯವಪ್ಪುದು ಶರಣಂಗೆ. ಅದೇನು ಕಾರಣವೆಂದೊಡೆ, ತನ್ನಿಂದ ತೋರಿದ ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಆತ್ಮ ಸೂರ್ಯ ಚಂದ್ರ ತನ್ನಿಂದೆ ತೋರಿದ ಸಕಲಾರಂಭ. ಇದು ಕಾರಣ, ತಾನೊಂದರಿಂದ ತೋರಿದವನಲ್ಲ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಕಾರಣನಹುದು ಕಾರ್ಯನಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು, ನಿಟ್ಟೆಲುವ ನೆಟ್ಟನೆ ಮಾಡಿ, ಅಧೋಮುಖ ಕಮಲವ ಬಲಿದು, ಊಧ್ರ್ವಮುಖವ ಮಾಡಿ, ಇಂದ್ರಿಯಂಗಳನು ಏಕಮುಖವ ಮಾಡಿ, ಚಂದ್ರ ಸೂರ್ಯರನೊಂದಠಾವಿನಲ್ಲಿರಿಸಿ ಅತ್ತಿತ್ತ ಮಿಸುಕದೆ ನಡುಗೀರ ಜ್ಯೋತಿಯ ದೃಢವಾಗಿ ಹಿಡಿದು, ಪರಮಾನಂದದ ವಠದೊಳಗೆ, ಪ್ರಾಣಲಿಂಗಾರ್ಚನೆಯ ಮಾಡುವ ಮಹಾಮಹಿಮರ ತೋರಿ ಬದುಕಿಸಾ, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಬ್ರಹ್ಮ ಪೂಜಿಸುವ, ವಿಷ್ಣು ಪೂಜಿಸುವ, ಇಂದ್ರ ಪೂಜಿಸುವ, ರವಿ ಪೂಜಿಸುವ, ಚಂದ್ರ ಪೂಜಿಸುವ- ಅಂದಂಂಗೆ ಬಂದ ಸುಖದುಃಖಗಳನುಣ್ಕಪ್ಪರು. ಅದು ಕಾರಣ, ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಪ್ರಾಸಾದಂಗಪ್ರಾಣಿಗಳಿಗೆ ಭವವಿಲ್ಲ, ಸಂದಿಲ್ಲ ; ಇದು ನಿಶ್ಚಯ, ನಂಬು, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಾಣೆ.
--------------
ಸಿದ್ಧರಾಮೇಶ್ವರ
ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ, ಚಂದ್ರ ಕುಂದೆ, ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ, ಅಯ್ಯಾ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೆ, ಅಯ್ಯಾ, ಕೂಡಲಸಂಗಮದೇವಯ್ಯಾ !
--------------
ಬಸವಣ್ಣ
ನೀರುಕಲೆತ ಭೂಮಿಯ ಆಸೆಯ ಮರೆದಲ್ಲಿ ಪುಷ್ಪವರಳಿತ್ತು, ಪೂರ್ಣಿಮೆಯ ಚಂದ್ರ ಮೂಡಿಬರಲು ಸಣ್ಣಬಾವಿಯ ಶಿಲೆಯ ಜಲವುಕ್ಕಿ ಹಾದಿಯಮೇಲೆ ಸುರಿಯೆ ಎಡೆಯಾಡುವ ಸಕಲ ತಿಂಥಿಣಿ ಪ್ರಮಥಗಣವಾದುದು ಕಂಡು ಗುರುನಿರಂಜನ ಚನ್ನಬಸವಲಿಂಗವಾಗಿ ಮರೆದಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರ ನೋಡುವಡೆ ಭಗದೇಹಿ; ಚಂದ್ರ ನೋಡುವಡೆ ಗುರುಪತ್ನೀಗಮನಿ; ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ; ಬ್ರಹ್ಮ ನೋಡುವಡೆ ಸುಪುತ್ರೀಪತಿ ಮುನಿಗಣ ನೋಡುವಡೆ ಕುಲಹೀನರು; ಗಣಪತಿ ನೋಡುವಡೆ ಗಜಾನನ; ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋದ್ಥಿ; ಷಣ್ಮುಖ ನೋಡುವಡೆ ತಾರಕಧ್ವಂಸಿ. ಇವರೆಲ್ಲರು ಎಮ್ಮ ಪೂಜೆಗೆ ಬಾರರು. ನೀ ನೋಡುವಡೆ ಶ್ಮಶಾನವಾಸಿ, ರುಂಡಮಾಲಾದ್ಯಲಂಕಾರ; ನಿನ್ನ ವಾಹನ ಚಿದಂಗ ಆದಿವೃಷಭ. ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಿಂದು ನಾದವನೊಂದು ರೂಪು ಮಾಡಿ ಮನವ ಸಂದ್ಥಿಸಿ ಬಂದ್ಥಿಸಿ ನಿಲಿಸಿ ಇಂದ್ರಿಯಂಗಳನೇಕಮುಖವ ಮಾಡಿ ಚಂದ್ರ ಸೂರ್ಯರನೊಂದು ಮಾರ್ಗದಲ್ಲಿ ನಡೆಸಿ ಚೌದಳಮಧ್ಯದ ಜ್ಞಾನಪೀಠದಲ್ಲಿರ್ದ ಅಮೃತಲಿಂಗವ ಕಂಡು ಕೂಡುವ ಬೆಡಗಿನ ಯೋಗವ ನಿಮ್ಮ ಶರಣರಲ್ಲದೆ ಉಳಿದ ಭವರೋಗಿಗಳೆತ್ತ ಬಲ್ಲರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ಸಾಗರದೊಳಿಪ್ಪ ಊರಿಂಗೆ ದ್ವಾರವತಿಯ ಭಯ. ದ್ವಾರವತಿಗೆ ಅಗ್ರಗಿರಿಯ ಚಂದ್ರ ಸೂರ್ಯರ ಭಯ. ಚಂದ್ರಸೂರ್ಯರಿಬ್ಬರಿಗೆ ನಡೆಗೋಟಿಯ ಭಯ. ನಡೆಗೋಟಿಗೆ ಸ್ಪರುಷನಪುರದ ಭಯ. ಇವು ನಾಲ್ಕನೂ ಮೂರುಮುಖದ ಪಕ್ಷಿ ನುಂಗಿಕೊಂಡಿಪ್ಪುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ, ಚಂದ್ರ, ಸೂರ್ಯ, ಸೋಮ, ಮಂಗಳ, ಬುಧ, ಬೃಹಸ್ಪತಿ, ಶುಕ್ರ, ಶನಿ ಇವು ಮೊದಲಾದ ಪಂಚತತ್ವ ನವಗ್ರಹಂಗಳಿಲ್ಲದಂದಿನ, ನಕ್ಷತ್ರಂಗಳಿಲ್ಲದಂದಿನ, ಸಪ್ತ ಸಮುದ್ರಂಗಳಿಲ್ಲದಂದಿನ, ಸಪ್ತಕುಲ ಪರ್ವತಂಗಳು ಇಲ್ಲದಂದಿನ, ಸಪ್ತಮುನಿವರ್ಗಂಗು ಇಲ್ಲದಂದಿನ, ಹರಿಬ್ರಹ್ಮ, ಕಾಲಕರ್ಮ, ದಕ್ಷಾದಿಗಳಿಲ್ಲದಂದಿನ ರುದ್ರಕೋಟಿ, ಸದಾಶಿವನಿಲ್ಲದಂದಿನ, ಏನೂ ಏನೂ ಇಲ್ಲದಂದಿನ, ಶೂನ್ಯ ನಿಶ್ಶೂನ್ಯಕ್ಕೆ ನಿಲ್ಕುದ ಮಹಾಘನವ ನಾನು ಬಲ್ಲೆ, ತಾನು ಬಲ್ಲೆನೆಂದು ನುಡಿವ ಹೀನಮನುಜರ ಕೂಗಾಟ, ಬೇಟಕ್ಕೆ ನಾಯಿ ಬೊಗಳಿದಂತಾಯಿತ್ತು. ಆ ತುಟ್ಟತುದಿಯಲ್ಲಿಪ್ಪ ಘನವ ಮುಟ್ಟಿ ಹಿಡಿದುಬಂದ ಶರಣರು ಬಲ್ಲರಲ್ಲದೆ, ಬಹುವಾಕ್ಕು ಜಾಲವ ಕಲಿತಕೊಂಡು, ಗಟ್ಟಿತನದಲ್ಲಿ ಬೊಗಳಿಯಾಡುವ ಮಿಟ್ಟೆಯ ಭಂಡರೆತ್ತ ಬಲ್ಲರು ನಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಪೃಥ್ವಿಯ ಪೂರ್ವಾಶ್ರಯ ರಂಗವಲ್ಲಿಯಲ್ಲಿ ಹೋಹುದು. ಅಪ್ಪುವಿನ ಪೂರ್ವಾಶ್ರಯ ಶಬ್ದದಿಂದ ಹೋಹುದು. ಅಗ್ನಿಯ ಪೂರ್ವಾಶ್ರಯ ಧೂಪದಿಂದ ಹೋಹುದು. ವಾಯುವಿನ ಪೂರ್ವಾಶ್ರಯ ಧ್ಯಾನದಿಂದ ಹೋಹುದು. ಆಕಾಶದ ಪೂರ್ವಾಶ್ರಯ ಮಂತ್ರದಿಂದ ಹೋಹುದು. ಚಂದ್ರ ಸೂರ್ಯ ಆತ್ಮನ ಪೂರ್ವಾಶ್ರಯ ಮಾಡುವ ಕಿಂಕಿಲದಿಂದ ಹೋಹುದು ಇದು ಕಾರಣ ಭಕ್ತಕಾಯ ಮಮಕಾಯ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗೂಡಿನೊಳಗಿಪ್ಪ ಪಕ್ಷಿಗೆ ಗೂಡಿನ ಹೊರಗೆ ಪಕ್ಕ ಬಂದಿವೆ. ನೋಡಿದರೆ ಪಕ್ಷಿ ಒಳಗೆ, ರೆಕ್ಕೆ ಹೊರಗೆ. ಪಕ್ಷಿಯ ಎರಡು ರೆಕ್ಕೆಯೊಳು, ಒಂದು ರೆಕ್ಕೆಯೊಳು ಚಂದ್ರನಡಗಿಪ್ಪ, ಒಂದು ರೆಕ್ಕೆಯೊಳು ಸೂರ್ಯನಡಗಿಪ್ಪ. ಪಕ್ಷಿಯ ಕೊಂದು ಗೂಡಿನ ಹೊರಗಣ ರೆಕ್ಕೆಯೊಳಿಪ್ಪ ಚಂದ್ರ ಸೂರ್ಯರ ಶೀತ ಉಷ್ಣವ ತೆಗೆಸಿ ರೆಕ್ಕೆಯ ಮುರಿದಾತನಲ್ಲದೆ ಶಿವಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಚ್ಚಿದಾನಂದ ನಿತ್ಯಪರಿಪೂರ್ಣ ನಿಃಕಲ ಶಿವತತ್ವವು ತನ್ನಿಂದ ತಾನೆ ಅಖಂಡ ಪರಿಪೂರ್ಣ ಗೋಳಕಾಕಾರ ಪರಂಜ್ಯೋತಿಸ್ವರೂಪವಪ್ಪ ಮಹಾಲಿಂಗವಾಯಿತ್ತು ನೋಡಾ. ಆ ಲಿಂಗದ ಮಧ್ಯದಲ್ಲಿ ಬೀಜದಿಂದ ವೃಕ್ಷವು ಉದಯವಾಗುವ ಹಾಂಗೆ, ಆ ಲಿಂಗವು ತನ್ನ ಇಚ್ಛಾಶಕ್ತಿಯ ಕೂಡಿಕೊಂಡು, ಜಗದುತ್ಪತ್ತಿ ಸ್ಥಿತಿ ಲಯಂಗಳಿಗೆ ಕರ್ತುವಾಗಿ, ಸಕಲ ನಿಃಕಲವಾಗಿ, ಪಂಚಮುಖ ದಶಭುಜ ದಶಪಂಚನೇತ್ರ ದ್ವಿಪಾದ ತನುವೇಕ ಶುದ್ಧ ಸ್ಫಟಿಕವರ್ಣ ಧಾತುವಿನಿಂದ ಒಪ್ಪುತ್ತಿಪ್ಪುದು ಸದಾಶಿವಮೂರ್ತಿ. ಆ ಸದಾಶಿವನ ಈಶಾನ್ಯಮುಖದಲ್ಲಿ ಆಕಾಶ ಪುಟ್ಟಿತ್ತು. ತತ್ಪುರುಷಮುಖದಲ್ಲಿ ವಾಯು ಪುಟ್ಟಿತ್ತು. ಅಘೋರಮುಖದಲ್ಲಿ ಅಗ್ನಿ ಪುಟ್ಟಿತ್ತು. ವಾಮದೇವಮುಖದಲ್ಲಿ ಅಪ್ಪು ಪುಟ್ಟಿತ್ತು. ಸದ್ಯೋಜಾತಮುಖದಲ್ಲಿ ಪೃಥ್ವಿ ಪುಟ್ಟಿತ್ತು. ಮನಸ್ಸಿನಲ್ಲಿ ಚಂದ್ರ, ಚಕ್ಷುವಿನಲ್ಲಿ ಸೂರ್ಯ. ಪರಮಾತ್ಮ ಸ್ವರೂಪವಪ್ಪ ಗೋಪ್ಯಮುಖದಲ್ಲಿ ಆತ್ಮ ಹುಟ್ಟಿದನು. ಇಂತು, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮನೆಂಬ ಶಿವನ ಅಷ್ಟತನುಮೂರ್ತಿಯೆ ಸಮಸ್ತ ಜಗತ್ತಾಯಿತ್ತು. ಆ ಜಗತ್ತಾವಾವವೆಂದಡೆ: ಚತುರ್ದಶ ಭುವನಂಗಳು, ಸಪ್ತ ಸಮುದ್ರಂಗಳು, ಸಪ್ತ ದ್ವೀಪಂಗಳು, ಸಪ್ತ ಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ಬ್ರಹ್ಮಾಂಡವೆನಿಸಿತ್ತು. ಇದು ಜಗದುತ್ಪತ್ತಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚಂದ್ರ ಮೂಡಿದನಂತೆ, ಚಂದ್ರಿಕೆಯೊಳು ನಿಂದು ನೋಡಿದನಂತೆ, ಎಮ್ಮೊಡೆಯನ ಕುತ್ತಿಗೆಯ ಕೊಯ್ದನಂತೆ, ಎಮ್ಮೊಡತಿಯ ಮೊಲೆ ಮೂಗ ಹರಿದು ಹಾಕಿದನಂತೆ, ಗಾರುಡಿಗನಾಟವ ಕಲಿತುಕೊಂಡನಂತೆ, ನಮ್ಮೆಲ್ಲರ ಕೊಂದು ಕೊಂಬುವನಂತೆ, ನಿರಂಜನ ಚನ್ನಬಸವಲಿಂಗನಂತೆ, ಬಲ್ಲಕಡೆಗೆ ಹೋಗುವ ಬನ್ನಿರತ್ತತ್ತ ಅರಿಯದಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->