ಅಥವಾ

ಒಟ್ಟು 27 ಕಡೆಗಳಲ್ಲಿ , 17 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ರದ ಬೊಂಬೆ ರೂಪಾಗಿರ್ದರೇನೋ? ಅಚೇತನವಾದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಹಾವುಮೆಕ್ಕೆಯ ಹಣ್ಣು ನುಂಪಾಗಿರ್ದರೇನೋ? ಕಹಿ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಅತ್ತಿಯ ಹಣ್ಣು ಕಳಿತಿರ್ದರೇನೋ? ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ತಿಪ್ಪೆಯ ಹಳ್ಳ ತಿಳಿದಿರ್ದರೇನೋ? ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ವೇದ ಶಾಸ್ತ್ರ ಪುರಾಣಾಗಮಂಗಳನೋದಿ ಎಲ್ಲರಲ್ಲಿಯೂ ಅನುಭಾವಿಗಳಾದರೇನೋ? ಆಶೆಯೆಂಬ ಪಾಶದಲ್ಲಿ ಕಟ್ಟುವಡೆದು ಪಾಶಬದ್ಧರಾದ ಕಾರಣ ಪ್ರಯೋಜನಕಾರಿಗಳಾದುದಿಲ್ಲ. ನುಡಿವಂತೆ ನಡೆಯದವರ ನಡೆದಂತೆ ನುಡಿಯದವರ ಎಂತು ಶಿವಶರಣರೆಂಬೆ ವಾಚಾಳಿಕರ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ. ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ, ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ. ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಬ್ಥೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಒಕ್ಕಲಿಗ ಮುದ್ದಣ್ಣ
ಮಾಣಿಕ್ಯದ ಮಂಟಪದೊಳಗೆ ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಂಗಳ. ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು! ವಾರಿಕಲ್ಲಲ್ಲಿ ವಜ್ರದ ಕೀಲು ಕೂಟ ಜಾಳಾಂಧರದೊಳಗೆ ಮಾಣಿಕ್ಯದ ಪ್ರತಿಬಿಂಬ ಏಳು ರತ್ನದ ಪುತ್ಥಳಿಗಳಾಟವು, ಮಣಿಮಾಲೆಗಳ ಹಾರ, ಹೊಳೆವ ಮುತ್ತಿನ ದಂಡೆ, ಎಳೆಯ ನೀಲದ ತೊಡಿಗೆಯನೆ ತೊಟ್ಟರು, ಸುಳಿದು ಮದ್ದಳೆಗಾರರೊಳು ಮೊಳಗೆ (ದಂದ?) ಮೆನಲು ಕುಣಿವ (ಪಾಡುವ) ಬಹುರೂಪಿಗಳ ನಾಟಕ, ತಾಳಧಾರಿಯ ಮೇ? ಕಹಳೆಗಾರನ ನಾದ ಕೊಳಲ ರವದೊಳಗಾಡುತ್ತ ಒಳಹೊರಗೆ ಕಾಣಬರುತ್ತದೆ ಚಿತ್ರದ ಬೊಂಬೆ! ಫಣಿಪತಿಯ ಕೋಣೆ ಸಂದಣಿಸುತ್ತಿರಲು ಗಣಮೇ? ಕೂಡಲಚೆನ್ನಸಂಗಯ್ಯನಲ್ಲಿ ಕಳಸ (ಕಳಾಸರಿ) ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು
--------------
ಚನ್ನಬಸವಣ್ಣ
ಚಿತ್ರದ ಬೊಂಬೆಯ ಹಾಹೆ ಎಲ್ಲಕ್ಕೂ ಆತ್ಮನಿಂದ ಚೇತನಿಸಿ ನಡೆಯುತ್ತಿಹವೆ ? ಅವು ಸೂತ್ರಾಧಿಕನ ಭೇದ, ಎನ್ನ ಶಕ್ತಿಜಾತಿಯ ಲಕ್ಷಣ. ನಿಮ್ಮ ಭಕ್ತಿಸೂತ್ರದಿಂದ ಎನ್ನ ಸ್ತ್ರೀಜಾತಿ ನಿಮ್ಮ ಶ್ರೀಪಾದದಲ್ಲಿ ಅಡಗಿತ್ತು. ಎನಗೆ ಭಿನ್ನದ ಮಾತಿಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನೆಂಬವರು ನೀವೆ ?
--------------
ಮೋಳಿಗೆ ಮಹಾದೇವಿ
ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ, ಶಿಲೆ ಬಿಂದುವಿನ ಚಂದ್ರನ ಬಿಂಬದಂತೆ ಇದ್ದಿತ್ತು. ಪ್ರಸಾದಿಯ ಪ್ರಾಣಲಿಂಗಿಯ ಸ್ಥಲ ಏಕವಾದಲ್ಲಿ, ಅರಗಿನ ಪುತ್ಥಳಿಯ ಅವಯವಂಗಳ ಉರಿ ಹರಿದು, ಪರಿಹರಿಸಿದಂತೆ ಇದ್ದಿತ್ತು. ಶರಣನ ಐಕ್ಯಸ್ಥಲದ ಭಾವ ಕರ್ಪುರವ ಅಗ್ನಿ ಆಹುತಿಯ ಕೊಂಡಂತೆ ಇದ್ದಿತ್ತು. ಇಂತೀ ಆರು ಮೂರರಲ್ಲಿ ಅಡಗಿನಿಂದ ಕೂಟಸ್ಥಲ. ಲೆಪ್ಪದ ಮೇಗಣ ಚಿತ್ರದ ದೃಕ್ಕಿನ ದೃಶ್ಯದಂತೆ ಇದ್ದಿತ್ತು. ಇಂತೀ ತ್ರಿವಿಧಸ್ಥಲ ಏಕರೂಪವಾದಲ್ಲಿ, ಆಕಾಶದ ವರ್ಣದ ಬಹುರೂಪ ಗಬ್ರ್ಥೀಕರಿಸಿದ ನಿರಾಕಾರದಂತೆ ಇದ್ದಿತ್ತು. ನಾಮವಿಲ್ಲದ ರೂಪು, ಭಾವವಿಲ್ಲದ ಮಾತು, ನೀ ನಾನೆಂಬ ಸ್ಥಲ ಅದೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪ್ಪುವಿನ ಉತ್ಕಟದ ಮಣಿಯಂತೆ ಚಿತ್ರದ ಎಸುಗೆಯ ಲಕ್ಷಣದಂತೆ ಸೂತ್ರದ ಲೆಪ್ಪದ ಭಿತ್ತಿ ಕಡೆಗಾಣಿಸಿದಂತೆ ದೀಪದ ಮೊತ್ತ ಕೆಟ್ಟು ಮೃತ್ತಿಕೆಯ ಘಟ ಒಪ್ಪವಿದ್ದಂತೆ ರಾಜ ಚಿತ್ರದ ಗೃಹ ಹೊತ್ತಿ ಬೆಂದು ಭಸ್ಮಗುಪ್ಪೆಯಿದ್ದಂತೆ ಇದು ಕ್ರಿಯಾಪಥ ಮುಕ್ತನ ಭೇದ. ಅರಿದು ಮರೆದವನ ಚಿತ್ತದ ಗೊತ್ತು. µಟ್ಕರ್ಮ ವಿರಕ್ತನ ನಷ್ಟ, ಸರ್ವಗುಣಿ ಸಂಪನ್ನನ ಮುಟ್ಟಿನ ಭೇದ; ನಿರುತ ಸ್ವಯ ಸಂಗದ ಕೂಟ, ಈ ಗುಣ ಸಾವಧಾನಿಯ ಬೇಟ, ಸರ್ವಾಂಗಲಿಂಗಿಯ ಕೂಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅಗ್ನಿವರ್ಣದ ಚಿತ್ರ ಆಕಾಶವ ನುಂಗಿತ್ತು. ಚಂದ್ರವರ್ಣದ ಚಿತ್ರ ಜಲವ ನುಂಗಿತ್ತು. ಸೂರ್ಯವರ್ಣದ ಚಿತ್ರ ಪೃಥ್ವಿಯ ನುಂಗಿತ್ತು. ಉಳಿದ ವರ್ಣದ ಚಿತ್ರವು ಪಂಚವರ್ಣದ ಭೂಮಿಯ ನುಂಗಿದವು, ಈ ಚಿತ್ರದ ಭೇದವ ಬಲ್ಲವರು ಅಸುಲಿಂಗಿಗಳು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕೊರಡು ಕೊನರ್ವೋದಲ್ಲಿ, ಬರಡು ಹಯನಾದಲ್ಲಿ ಚಿತ್ರದ ಬೊಂಬೆ ನಿಜಕರ್ತೃರೂಪಾಗಿ ಬಂದಲ್ಲಿ ಅವು ಹಾಹೆಯ ದೃಷ್ಟವೋ, ವಿಶ್ವಾಸಿಯ ಚಿತ್ತವೋ ? ಇದು ಭಕ್ತಿಯ ಹೊಲಬಿಗೆ ಮುಖ್ಯ. ಸಂಗನಬಸವಣ್ಣನ ಸತ್ಯ, ಬ್ರಹ್ಮೇಶ್ವರಲಿಂಗವ ಕೂಡುವ ಕೃತ್ಯ.
--------------
ಬಾಹೂರ ಬೊಮ್ಮಣ್ಣ
ಮೃತ್ಪಿಂಡದÀ ಹದನ ಚಕ್ರಿಯ ಚಿತ್ತದ ಕರದಂತೆ, ಚಿತ್ರಜ್ಞನ ಚಿತ್ರದ ಲೆಕ್ಕಣಿಕೆಯ ಒಪ್ಪದಂತೆ. ಇಂತೀ ಆತ್ಮನ ದೃಷ್ಟ, ತನ್ನ ಇಷ್ಟದ ಲಕ್ಷದಲ್ಲಿ. ಇಂತೀ ಉಭಯದ ದೃಷ್ಟವಿದ್ದಂತೆ, ಚಿತ್ತ ಅಚ್ಚೊತ್ತಿರಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ.
--------------
ಮೋಳಿಗೆ ಮಾರಯ್ಯ
ವಿಹಂಗಂಗೆ ಗುರಿಯಾಸೆಯೆಂದಡೆ ಸಂಚಾರವಿಲ್ಲದೆ ಚರಿಸಬಹುದೆ? ಅರಿವಿಂಗೆ ಕುರುಹಿನಾಸೆಯೆಂದಡೆ, ಆ ಅರಿವು ಕುರುಹಿನೊಳಗಾದ ಮತ್ತೆ, ಬೇರೊಂದು ಕುರುಹೆಂಬ ನಾಮವುಂಟೆ? ಚಿತ್ರದ ಬೊಂಬೆಗಳಿದ್ದ ಮನೆ ಕಿಚ್ಚೆದ್ದು ಬೇವಲ್ಲಿ ಬೊಂಬೆಯ ಹೊತ್ತಿದ ಕಿಚ್ಚು ಚಿತ್ರವಾಗಿ ಉರಿವುದೆ? ನಿಶ್ಚಯವನರಿದ ನಿಜಾತ್ಮನು ಮತ್ತೆ ಕತ್ತಲೆಯ ಹೊಗನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭಿತ್ತಿಯ ಮೇಲಣ ಚಿತ್ರದ ಬೊಂಬೆಯ ಕೈಯಲ್ಲಿ, ಹೊತ್ತುವ ದೀಪ ಇದ್ದಡೇನು, ಕತ್ತಲೆಯ ಬಿಡಿಸಬಲ್ಲುದೆ ? ನಿಷೆ*ಹೀನನಲ್ಲಿ ಇಷ್ಟಲಿಂಗ ಇರುತಿರಲಿಕ್ಕೆ ದೃಷ್ಟವ ಬಲ್ಲನೆ ? ಭಕ್ತಿಹೀನಂಗೆ ನಿತ್ಯಾನಿತ್ಯವ ಹೇಳಲಿಕ್ಕೆ ನಿಶ್ಚಯಿಸಬಲ್ಲನೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಸತ್ತುವೆಂಬ ಗುರುವಿನಲ್ಲಿ ಎನ್ನ ಸರ್ವಾಂಗವಾಗಿ ಚಿತ್ರದ ಪ್ರತಿಮೆಯ ಅವಯವಂಗಳ ಶೃಂಗಾರದಂತೆ ಆಕಾರವೆಂಬಂತಿರ್ದೆನಯ್ಯ. ಚಿತ್ತೆಂಬ ಲಿಂಗದೊಳಗೆ ಮನವಡಗಿ ನವನಾಳದ ಸುಳುಹು ಕೆಟ್ಟು ಸುಷುಪ್ತಿಯನೆಯ್ದಿದ್ದೆನಯ್ಯ. ಇದು ಕಾರಣ: ಎನ್ನ ಜಾಗ್ರ ಸ್ವಪ್ನ ಸುಷುಪ್ತಿಯೆಂತಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳಾ. ಆನಂದವೆಂಬ ಜಂಗಮದಲ್ಲಿ ಅರುಹು ಏಕತ್ವವಾಗಿ ಅತ್ಮೋಹಂಯೆಂಬುದನರಿಯೆನು ನೋಡಾ, ನಾನು ಪರಮಾತ್ಮನಾದ ಕಾರಣ. ನಿತ್ಯವೆಂಬ ಪ್ರಸಾದದಲ್ಲಿ ಪ್ರಾಣವಡಗಿ ನಿತ್ಯಾನಿತ್ಯವನರಿಯದೆ ಸಚ್ಚಿದಾನಂದ ನಿತ್ಯ ಪರಿಪೂರ್ಣವಾಗಿ ಅನಾದಿ ಭಕ್ತನಾದೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗೈಯ ಲಿಂಗದಲ್ಲಿ ಕಂಗಳು ನಟ್ಟು, ಎವೆಹಳಚದೆ, ಮನ ಕವಲಿಡದೆ, ಚಿತ್ರದ ರೂಹಿನ ತೆರನಂತೆ, ಲಿಂಗವ ನೋಡಿ ನೋಡಿ, ಕಂಗಳಲಚ್ಚೊತ್ತಿ, ಮನದಲ್ಲಿ ನೆನೆನೆನೆದು ನೆರೆವ ಲಿಂಗಸುಖ ಸಂಪನ್ನರನೆ, ಲಿಂಗವೆಂಬೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ ತುಪ್ಪದ ಮಧುರದ ಸಾರವ ಕೂಡಿ ಸುಟ್ಟು ಮೆದ್ದಲ್ಲಿ ಕಿಚ್ಚಿನಲ್ಲಿ ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ? ಇದು ನಿಶ್ಚಯ ವಸ್ತು ಸ್ವರೂಪು. ಮತ್ರ್ಯದ ದೃಕ್ಕು ದೃಶ್ಯಕ್ಕೆ ನಿಶ್ಚಯವಾಗಿಹನು. ಏಕಲಿಂಗ ನಿಷೆ*ವಂತರಲ್ಲಿ ಕಟ್ಟಳೆಯಾಗಿಹನು. ಆತ್ಮಲಕ್ಷ ನಿರ್ಲಕ್ಷ ಗೋರಕ್ಷಪಾಲಕ ಮಹಾಪ್ರಭು ಸಿದ್ಧ ಸೋಮನಾಥ ಲಿಂಗವು.
--------------
ಗೋರಕ್ಷ / ಗೋರಖನಾಥ
ಇನ್ನಷ್ಟು ... -->