ಅಥವಾ

ಒಟ್ಟು 39 ಕಡೆಗಳಲ್ಲಿ , 15 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಜಗವೊಂದೆಸೆ, ತಾನೊಂದೆಸೆ, ಮತ್ತಾ ಜಗದೊಳಗೆ ತಾ, ತನ್ನೊಳಗೆ ಜಗ. ಆಗಮವೊಂದೆಸೆ, ತಾನೊಂದೆಸೆ, ಮತ್ತಾ ಆಗಮದೊಳಗೆ ತಾ, ತನ್ನೊಳಗೆ ಆಗಮ. ವಿದ್ಥಿಯೊಂದೆಸೆ, ತಾನೊಂದೆಸೆ, ಮತ್ತಾ ವಿದ್ಥಿಯೊಳಗೆ ತಾ, ತನ್ನೊಳಗೆ ವಿದ್ಥಿ. ಕ್ರೀಯೊಂದೆಸೆ, ತಾನೊಂದೆಸೆ, ಮತ್ತಾ ಕ್ರೀಯೊಳಗೆ ತಾ, ತನ್ನೊಳಗೆ ಕ್ರೀ. ಇಂತೀ ಜಗ, ಆಗಮ, ವಿದ್ಥಿ, ಕ್ರೀ ನಿಷೇಧವಾಗಿ, ಹೊದ್ದಿಯೂ ಹೊದ್ದನು, ನೀರ ತಾವರೆಯಂತೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹವಣಿಲ್ಲದ ಶಾಖೆಯ ಕಪಿ ಕೈವಿಡಿಯಲೊಲ್ಲದು, ಗಮನವಿಲ್ಲದೆ ಪಿಕಶಿಶು ನುಡಿಯಲೊಲ್ಲದು, ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕುಟ. ಈ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪರೆಲ್ಲ. ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ? ಹಸಿವು ತೃಷೆ ನಿದ್ರೆ ಆಲಸ್ಯವುಳ್ಳನ್ನಕ್ಕರ ಅದ್ವೈತವುಂಟೆ ಜಗದೊಳಗೆ ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವೆಂಥದೋ ? ಸುಡು ಸುಡು ಅವರು ಗುರುದ್ರೋಹಿಗಳು, ಆಚಾರಭ್ರಷ್ಟರು. ಉಭಯ ತನುಗುಣನಾಸ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಯ್ಯನೆಂತೊಲಿವನು ?
--------------
ಚನ್ನಬಸವಣ್ಣ
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ, ಜಂಗಮಪ್ರೇಮಿಗಳಾರನೂ ಕಾಣೆನಯ್ಯ. ಲಿಂಗಪೂಜಕರನಂತರುಂಟು ಜಗದೊಳಗೆ, ಜಂಗಮಪೂಜಕರಾರನೂ ಕಾಣೆನಯ್ಯ. ಲಿಂಗಪ್ರಾಣಿಗಳನಂತರುಂಟು ಜಗದೊಳಗೆ, ಜಂಗಮಪ್ರಾಣಿಗಳಾರನೂ ಕಾಣೆನಯ್ಯ. ಲಿಂಗದ ಬಾಯಿ ಜಂಗಮವೆಂದರಿದು ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ, ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ. ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ, ಹೊನ್ನು, ಹೆಣ್ಣು, ಮಣ್ಣನೀವವರ ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ. ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ, ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ. ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು, ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ, ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ, ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ ಸುಳಿವ ಜಂಗಮದ ಈಶನೆಂದೆ ಕಾಂಬೆ. ಆ ಜಂಗಮಕ್ಕೆ ಅರ್ಥ, ಪ್ರಾಣ, ಅಬ್ಥಿಮಾನವನೊಪ್ಪಿಸಿ, ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ. ಇದನೆಂತಾದರೂ ಒಪ್ಪುಗೊಳ್ಳ ಎನ್ನ. ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು.
--------------
ಹಡಪದ ಅಪ್ಪಣ್ಣ
`ಅಣೋರಣೀಯಾನ್ ಮಹತೋ ಮಹೀಯಾನ್` ಎಂದು ಶ್ರುತಿವಿಡಿದು ಅಣು ರೇಣು ತೃಣಕಾಷ್ಠದೊಳಗೆ ಶಿವನು ಕೂಡೆ ಜಗಭರಿತನೆಂಬ ಪಾತಕರ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಜನ್ನಕ್ಕೆ ತಂದ ಕನ್ನೆಯಾಡು ಶ್ರುತಿಯಿಂದ ಹೊರಗು. ಸರ್ವವೂ ಶಿವಮಯವೆಂಬ ಪಾತಕರ ನುಡಿಗಿನ್ನೆಂತೊ ? ಅಂತ್ಯಜ-ಅಗ್ರಜ, ಮೂರ್ಖ-ಪಂಡಿತರೆಂಬ ಭೇದಕ್ಕಿನ್ನೆಂತೊ ? ಜಗದೊಳಗೆ ಶಿವ ಶಿವನೊಳಗೆ ಜಗವೆಂಬ ಭ್ರಮಿತರ ನುಡಿಗಿನ್ನೆಂತೋ `ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ ವ್ಯೋಮೇತಿ ಭಸ್ಮ, ಭಸ್ಮೇತಿ ಭಸ್ಮ ಸರ್ವಗ್‍ಂ ಹವಾ ಇದಂ ಭಸ್ಮ ಎಂದುದಾಗಿ ಜಗದೊ?ಗೆ ಶಿವನಿಲ್ಲ, ಶಿವನೊಳಗೆ ಜಗವಿಲ್ಲ, ಶಿವ ಜಗವಾದ ಪರಿ ಇನ್ನೆಂತೊ ? ಅದೆಂತೆಂದಡೆ : ಯಂತ್ರಧಾರೀ ಮಹಾದೇವೋ ಯಂತ್ರಪಾಣಸ್ಸ ಏವ ಹೀ ಯಂತ್ರಕರ್ಮ ಚ ಕರ್ತಾ ಯಂತ್ರವಾಹಾಯ ವೈ ನಮಃ ಎಂದುದಾಗಿ; ಸಕಲಬ್ರಹ್ಮಾಂಡಗಳೆಂಬ ಯಂತ್ರಗಳ ವಾಹಕ ನಮ್ಮ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಅಂಗದ ಮೇಲಣ ಲಿಂಗವ ಹಿಂಗಿದಾತನ ಭವಿಯೆಂಬರು, ಅಂಗದ ಮೇಲಣ ಲಿಂಗವು ಇಪ್ಪಾತನ ಭಕ್ತನೆಂಬರು, ಅಂಗದೊಳಗೆ ಬೆರಸಿಪ್ಪ ಲಿಂಗದ ಹೊಲಬನರಿಯದೆ. ಲಿಂಗವಿಲ್ಲದೆ ಒಂದು ಕ್ಷಣ ಒಂದಂಗ ಸುಳಿದುದುಂಟೆ ಜಗದೊಳಗೆ ? ಅಂಗದೊಳಗಣ ಲಿಂಗವನು ಹಿಂಗಿದವರಿಗೆ ಭವಮಾಲೆಯುಂಟು, ಹಿಂಗದವರಿಗೆ ಭವಮಾಲೆಯಿಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸಹಜವ ನುಡಿದಡೆ ಸೇರುವರಿಲ್ಲ ಕಾಣಿರಣ್ಣಾ. ಅಸಹಜಕ್ಕಲ್ಲದೆ ಲೋಕ ಭಜಿಸದು. ಕೆರೆಯ ಕಟ್ಟಿಸುವನ (ಕಟ್ಟುವನ?) ಕಂಡು ಒಡ್ಡರಾಮಯ್ಯನೆಂದಡೆ ಮುಳಿಸಿನಿಂದ ಲಿಂಗತನುವ ನೋಯಿಸುವರೆ ? ನಮ್ಮ ಗುಹೇಶ್ವರಲಿಂಗವು ಜಗದೊಳಗೆ ಪರಿಪೂರ್ಣವಾದ ಕಾರಣ, ಶರಣರ ನೋವು ಮರಳಿ, ಪಾತಕರ ತಾಗಿದಡೆ, ಅಲ್ಲಯ್ಯ ನೋಡಿ ನಗುತಿರ್ದನು
--------------
ಅಲ್ಲಮಪ್ರಭುದೇವರು
ರೇಚಕ ಪೂರಕ ಕುಂಭಕವೆಂಬ ಗರುಡವಾಯುವ ಸೋಂಕ ತೆಗೆದು, ಬ್ರಹ್ಮಾಂಡದಲ್ಲಿ ಕೀಲಿಟ್ಟು, ದ್ವಾರಕವಾಟವನೆ ತೆರೆದು ಆಂದೋಳಿಸುತ್ತಿದ್ದಿತ್ತು, ಪರಶಿವಯೋಗ. ಬಾಲ ಕುಮಾರ ಪ್ರೌಢ ಭಾಗದಲ್ಲಿ ಕಾಳಂ ಪೊಕ್ಕಿತ್ತು. ಕಾಳಾಂದರದಿಂದತ್ತತ್ತಲಾರು ಬಲ್ಲರೋ ? ಅಪ್ಪಿನ ಘಟ ಹೊತ್ತುಕೊಂಡು ಸುಳಿದ ಜಗದೊಳಗೆ, ಅದು ಬಿರಿಬಿರಿದು ನಿರಾಳದಲ್ಲಿ ನೆರೆವ ಭೇದವ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯರನುವ ಆ ಲಿಂಗೈಕ್ಯರೆ ಬಲ್ಲರು
--------------
ಚನ್ನಬಸವಣ್ಣ
ಘನಗಂಭೀರವಾರುದ್ಥಿಯೊಳಗೆ ತೋರುವ ವೀಚಿಗಳು ಆ ವಾರುದ್ಥಿಯ ಬಿಟ್ಟು ತೋರಬಲ್ಲವೆ ತೋರಿದಡೆ ಆ ವಾರುದ್ಥಿ ತನ್ನ ತಾ ಜರೆದುಕೊಂಬುದೆ ನಿಮ್ಮೊಳಡಗಿದ ಪ್ರಮಥರೆಲ್ಲರ ಗುಣಾದಿಗುಣಂಗಳೆಲ್ಲವನು ನಿಮ್ಮಡಿಗಳೆತ್ತಲುಂಟೆ ಜಗದೊಳಗೆ ಕೂಡಿ ಪರಿಪೂರ್ಣನಾದ ಬಳಿಕ, ಇದಿರ ನೋಡಿ ಜರೆದು ನುಡಿವಠಾವಾವುದು ಹೇಳಯ್ಯಾ ಕೂಡಲಸಂಗಮದೇವಯ್ಯಾ, ನಿಮ್ಮ ನೀವು ಪರಿಣಾಮಿಸಿಕೊಂಬುದಲ್ಲದೆ ಬ್ಥಿನ್ನವ ಮಾಡಲುಂಟೆ
--------------
ಬಸವಣ್ಣ
ನಾಣಮರೆಯ ನೂಲು ಸಡಿಲಲು ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು. ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು ದೇವರ ಮುಂದೆ ನಾಚಲೆಡೆಯುಂಟೆ ? ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು ಮುಚ್ಚಿ ಮರಸುವ ಠಾವಾವುದು ಹೇಳಯ್ಯಾ ?
--------------
ಅಕ್ಕಮಹಾದೇವಿ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಫಲಪದವನತಿಗಳೆದು ಹಲವು ಸೀಮೆಯ ಮೀರಿ ಹೊಲಬುಗೆಟ್ಟಾತನ್ಕ ಬ್ರಹ್ಮವಾದ, ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ ತನುಗುಣಕೆ ತಾ ದೂರವಾಗಿ. ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ ಜಲ-ಬಿಂದುವಿನ ವ್ಯವಹಾರ ಒಂದೇ, ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ. ಏನನೋದಿ, ಏನ ಕೇಳಿ, ಏನು ಫಲ ಕುಲಜನೆಂಬುದಕ್ಕೆ ಆವುದು ದೃಷ್ಟ ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ, ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ. ಕರ್ಣದಲ್ಲಿ ಜನಿಸಿದರುಂಟೆ ಜಗದೊಳಗೆ ಇದು ಕಾರಣ ಕೂಡಲಸಂಗಮದೇವಾ, ಲಿಂಗಸ್ಥಲವನರಿದವನೆ ಕುಲಜನು.
--------------
ಬಸವಣ್ಣ
ಜಗದೊಳಗೆ ಹುಟ್ಟಿದವರೆಲ್ಲ ಹಗರಣಿಗರಾಗಿ ಹುಟ್ಟಿದರಲ್ಲದೆ, ಜಗವ ಗೆಲ್ಲಲರಿಯದೆ, ನಗೆಗೆಡೆಯಾಗಿ ಹೋದರು. ಎಮ್ಮ ಶರಣರು ಅಂತಲ್ಲ ಕೇಳಿರಣ್ಣಾ. ಜಗದಲ್ಲಿಯೇ ಹುಟ್ಟಿ, ಜಗದಲ್ಲಿಯೇ ಬೆಳೆದು, ಜಗದಂತೆ ಇದು, ಈ ಜಗವ ಗೆದ್ದು ಹೋಗುವರು. ನಿಗಮಶಾಸ್ತ್ರ ಸಾಕ್ಷಿಯಾಗಿ, ಚೆನ್ನಮಲ್ಲೇಶ್ವರ ನಿನಗಾಯಿತ್ತಯ್ಯಾ. ಅಂತಪ್ಪ ಚೆನ್ನಮಲ್ಲೇಶ್ವರನ ಪಾದವಡಿದು, ಅವರು ಹೋದ ಹಾದಿಗೊಂಡು ಹೋಗುವನಲ್ಲದೆ, ಈ ಮೇದಿನಿಯೊಳಗೆ ಕಾಮಕಾಲಾದಿಗಳ ಬಲೆಯೊಳಗೆ ಸಿಕ್ಕಿಬಿದ್ದು ಹೋದೆನಾದರೆ, ನಿಮ್ಮ ಪಾದಕ್ಕೆ ಅಂದೇ ದೂರವಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->