ಅಥವಾ

ಒಟ್ಟು 47 ಕಡೆಗಳಲ್ಲಿ , 17 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಜ್ಞಾನವೆಂಬ ಭಾವವು ಗುರುವಿನಲ್ಲಿ ಸಾಹಿತ್ಯವು. ಜ್ಞಾನವೆಂಬ ಭಾವವು ಶಿಷ್ಯನಲ್ಲಿ ಸಾಹಿತ್ಯವು. ಮನವೆಂಬ ಭಾವವು ಲಿಂಗದಲ್ಲಿ ಸಾಹಿತ್ಯವು. ಲಿಂಗಕ್ಕೆ ಮಜ್ಜನ ಮಾಡಲಾಗದು, ಅದೇನು ಕಾರಣ ? ಮನವೆಂಬ ಲಿಂಗವು ಭಾವದಲ್ಲಿ ಸಾಹಿತ್ಯವಾದ ಕಾರಣ. ಲಿಂಗಕ್ಕೆ ಗಂಧ ಧೂಪ ನಿವಾಳಿಯ ಕುಡಲಾಗದು, ಅದೇನು ಕಾರಣ ?
--------------
ಚನ್ನಬಸವಣ್ಣ
ವಾಚಾತೀತಂ ಮನೋತೀತಂ ಭಾವಾತೀತಂ ಜ್ಞಾನಾತೀತಂ ನಿರಂಜನಂ ಅಣೋರಣೀಯಾನ್ ಮಹತೋಮಹೀಯಾನ್ ಎಂದೆನಿಸುವ ಅತಿಶಯಬ್ರಹ್ಮವು, ದಿವ್ಯ ಜ್ಞಾನವೆಂಬ ಭಕ್ತಿಮಂದಿರಕ್ಕೆ ಕರ್ತೃವಾದ ಈಶ್ವರ_ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಕಾಯವೆಂಬ ಘಟಕ್ಕೆ ಚೈತನ್ಯವೆ ಸಯದಾನ, ಸಮತೆ ಎಂಬ ಜಲ ಕರಣಾದಿಗಳೆ ಶ್ರಪಣ. ಜ್ಞಾನವೆಂಬ ಅಗ್ನಿಯನಿಕ್ಕಿ ಮತಿಯೆಂಬ ಸಟ್ಟುಕದಲ್ಲಿ ಘಟ್ಟಿಸಿ, ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ ಪರಿಣಾಮದೋಗರವ ನೀಡಿದಡೆಕೂಡಲಸಂಗಮದೇವಂಗಾರೋಗಣೆಯಾಯಿತ್ತು.
--------------
ಬಸವಣ್ಣ
ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ : ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ : ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.
--------------
ಪುರದ ನಾಗಣ್ಣ
ಮಾತು ಇಲ್ಲದ ಮನೆಯಲ್ಲಿ ಒಬ್ಬ ಸತಿಯಳು ಕುಳಿತು ನೀತಿಯ ಹೇಳುತಿರ್ಪಳು ನೋಡಾ. ಆ ನೀತಿಯ ಜ್ಞಾನವೆಂಬ ಪುರುಷ ಕೇಳಿ ಮೌನವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಂಸಾರವೆಂಬ ಸಾಗರವ ದಾಂಟುವಡೆ, ಅರಿವೆಂಬ ಹರುಗೋಲನಿಕ್ಕಿ ಜ್ಞಾನವೆಂಬ ಅಂಬಿಗ ಹರುಗೋಲದಲ್ಲಿ ಕುಳ್ಳಿರ್ದು, ಸುಜ್ಞಾನವೆಂಬ ಘಾತದ ಗಳೆಯ ಪಿಡಿದು, ನಾನೀ ಹೊಳೆಯ ಕಂಡು, ಅಂಬಿಗನು ಕೇಳಿದಡೆ, ನಾನು ಹಾಸಿಕೊಟ್ಟೆಹೆನೆಂದನು. ನಾನು ನಿನ್ನ ನಂಬಿ ಹರುಗೋಲನೇರಿದೆನು ಕಾಣಾ, ಅಂಬಿಗರಣ್ಣಾಯೆಂದು ನಾನು ಹರುಗೋಲದಲ್ಲಿ ಕುಳ್ಳಿರ್ದು ಹೊಳೆಯೊಳಗೆ ಹೋಗಲಿಕೆ, ಕಾಮವೆಂಬ ಕೊರಡು ಅಡ್ಡಬಿದ್ದಿತ್ತು. ಕ್ರೋಧವೆಂಬ ಸುಳುಹಿನೊಳಗೆ ಅಹಂಕಾರವೆಂಬ ಮೀನು ಬಂದು ನಿಂದಿತ್ತು. ಮಾಯೆಯೆಂಬ ಮೊಸಳೆ ಬಂದು ಬಾಯಬಿಡುತ್ತಿದ್ದಿತ್ತು. ಮೋಹವೆಂಬ ನೊರೆತೆರೆಗಳು ಹೆಚ್ಚಿ ಬರುತ್ತಿದ್ದಿತ್ತು. ಲೋಭವೆಂಬ ಕಾಳ್ಗಡಲು ಎಳೆದೊಯ್ವುತ್ತಿದ್ದಿತ್ತು. ಮರವೆಂಬ ಮೊರಹು ನೂಕುತ್ತಲಿದ್ದಿತ್ತು. ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು. ಇವೆಲ್ಲವನೂ ಪರಿಹರಿಸಿ, ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು. ಈ ಹೊಳೆಯ ದಾಂಟಿಸಿದ ಕೂಲಿಯ ನನ್ನ ಬೇಡಿದಡೆ, ಕೂಲಿಯ ಕೊಡುವಡೇನೂ ಇಲ್ಲೆಂದಡೆ, ಕೈಸೆರೆಯಾಗಿ ಎನ್ನನೆಳದೊಯ್ದನಯ್ಯಾ. ಅರುವೆಯ ಕೊಟ್ಟ ಕೂಲಿಗೆ ತನ್ನ ಕರುವ ಕಾಯಿಸಿಕೊಂಡನಯ್ಯಾ. ಅರಿಯದೆ ಹರುಗೋಲವ ನೆರೆತೊರೆಯ ದಾಂಟಿಸಿದ ಕೂಲಿಗೆ ಕರುವ ಕಾಯಿದೆನು ಕಾಣಾ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಸೂತ್ರಧಾರಿ ಮನದ ಮೈಲಿಗೆಯ ಕಳೆಯಬಂದನಯ್ಯಾ ಮಡಿವಾಳನು. ಎನ್ನ ಕಾಯದ ಮೈಲಿಗೆಯ ತಂದು ತನ್ನ ಮುಂದೆ ಇರಿಸಿದೆಡೆ ಸಮತೆಯೆಂಬ ಕೂಪತೋಹಿನಲ್ಲಿ ಅದ್ದಿ, ಕಟ್ಟಿ ಹಿಳಿದನಯ್ಯಾ. ಪಂಚೇಂದ್ರಿಯವರ್ಗಂಗಳ ಜ್ಞಾನವೆಂಬ ನಿರ್ಮಲಜಲದಲ್ಲಿ ಅಲುಬಿ ಸೆಳೆದನಯ್ಯಾ. ರವಿಶಶಿಶಿಖಿಯ ತೇಜದಲ್ಲಿ ಆರಿಸಿದನು, ಚತುರ್ದಶ ಷೋಡಶವೆಂಬ ಘಳಿಗೆಯ ಮಾಡಿದನು. ಸಮಾಧಾನವೆಂಬ ಅಡ್ಡೆಯ ಮೇಲಿರಿಸಿ ಸಮಗುಣವೆಂಬ ಕೊಡತಿಯಲ್ಲಿ ಘಟ್ಟಿಸಿದನು. ಹರಿಯಿತ್ತಯ್ಯಾ ಸೆರಗು ಮೂರಾಗಿ. ಆ ಮೂರರಿವೆಯ ಕೊಟ್ಟನಯ್ಯಾ, ಎನ್ನ ಕೈಯಲ್ಲಿ, ಆ ಅರಿವೆಯ ಗುರುವಿಂಗೊಂದ ಕೊಟ್ಟೆನು, ಲಿಂಗಕ್ಕೊಂದ ಕೊಟ್ಟೆನು, ಜಂಗಮಕ್ಕೊಂದ ಕೊಟ್ಟೆನು. ಎನಗೆ ಕೊಟ್ಟ ಮೂರರಿವೆಯನೂ ಒಂದುಮಾಡಿ ಹೊದೆದುಕೊಂಡು ನಿಶ್ಚಿಂತನಾಗಿ, ಮಡಿವಾಳನ ಕೃಪೆಯಿಂದಲಾನು ಬದುಕಿದೆನು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಹಿಡಿಗಟ್ಟಿಗೊಳಗಾದನೆಂಬ ಸುದ್ದಿಯ ಗುರು ಕೇಳಿದ. ಕೇಳಿ ಸೈರಿಸಲಾರದೆ ಕಂಡು ಕಂಡು, ಇರಿಸುವ ಠಾವಂ ತೋರಿದ. ಅಲ್ಲ್ಲಲ್ಲಿಯಿದ್ದಡೆ ಎಲ್ಲಿಯೂ ಇರನೆಂದು ಅಜಲೋಕಕ್ಕೆ ಕಳುಹಿದ. ಅಜಲೋಕದಲ್ಲಿ ಆನಂದವೆಂಬ ಮನೆಯಲ್ಲಿ, ಭಕ್ತಿಯೆಂಬ ಬಂಧನವಂ ಮಾಡಿ, ಜ್ಞಾನವೆಂಬ ಕಾವಲಂ ಕೊಟ್ಟಿರಲಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಇನಿತು ಬಂಧನಕ್ಕೊಳಗಾದೆ.
--------------
ಸಿದ್ಧರಾಮೇಶ್ವರ
ಭವತಿಮಿರವೆಂಬ ಅಜ್ಞಾನದಿಂದ ಮುಸುಕಿಕೊಂಡು, ಕಾಣಬಾರದೆಯಿದ್ದ ಕಣ್ಣಿಂಗೆ ಜ್ಞಾನವೆಂಬ ಅಂಜನವನೆಚ್ಚು ಶಿವಪಥವಿದೆಂದು ತೋರಿಸಿದ ಸದ್ಗುರುದೇವಂಗೆ ನಮೋನಮೊಯೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕ್ರೀ ಜ್ಞಾನವೆಂಬ ಉಭಯವ ತಾವರಿಯದೆ, ಕಾಯಜೀವವೆಂಬ ಹೆಚ್ಚು ಕುಂದನರಿಯದೆ, ನಾನೀನೆಂಬ ಭಾವದ ಭ್ರಮೆ ಆರಿಗೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ, ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು. ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ. ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ? ಕಾಷ*ವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ*ಕ್ಕೆ, ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ. ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ. ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ ಕಾಮಧೂಮ ಧೂಳೇಶ್ವರ ತಾನೂ ತಾನೆ.
--------------
ಮಾದಾರ ಧೂಳಯ್ಯ
ಕಾಯವೆಂಬ ಘಟಕ್ಕೆ ಕರಣಾದಿಗಳೆ ಸುಯಿದಾನ ಅದಕ್ಕೆ ಚೈತನ್ಯವೇ ಜಲವಾಗಿ, ಸಮತೆಯೇ ಮುಚ್ಚಳಿಕೆ, ಧೃತಿಯೆಂಬ ಸಮಿದೆ, ಮತಿಯೆಂಬ ಅಗ್ನಿಯಲುರುಹಿ, ಜ್ಞಾನವೆಂಬ ದರ್ವಿಯಲ್ಲಿ ಘಟ್ಟಿಸಿ ಪಕ್ವಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ, ಪರಿಣಾಮ[ದೋ]ಗರವ ನೀಡುವೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ ಉಭಯವನಲಂಕರಿಸಿದನಾಗಿ ಆತ್ಮಂಗೆ ಭಾವನೆಂಬ ಹೆಸರಾಯಿತ್ತು. ಆತ್ಮ ಬಂದು ಆಕಾಶವ ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು. ಆತ್ಮ ಬಂದು ವಾಯುವ ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು. ಆತ್ಮ ಬಂದು ಅಪ್ಪುವ ಕೂಡಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು. ಆತ್ಮ ಬಂದು ಪೃಥ್ವಿಯ ಕೂಡಿದಲ್ಲಿ ಚಿತ್ತೆಂಬ ಹೆಸರಾಯಿತ್ತು. ಚಿತ್ತು ಆಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು. ಅಹಂಕಾರ ಶಿವಲಿಂಗವ ಧರಿಸಿಪ್ಪುದು ಮನಸ್ಸು ಜಂಗಮಲಿಂಗವ ಧರಿಸಿಪ್ಪುದು. ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು. ಭಾವ ಮಹಾಲಿಂಗವ ಧರಿಸಿಪ್ಪುದು. ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕು.
--------------
ಆದಯ್ಯ
ಸಂಸಾರವೆಂಬ ಸಾಗರಕ್ಕೆ ಒಡಲೆಂಬುದೊಂದು ಭೈತ್ರ ಕಂಡಾ. ಪುಣ್ಯಪಾಪವೆಂಬ ಭಂಡವನೆ ತುಂಬಿ ಪಂಚ ಪಂಚೈವರು ಏರಿದರು. ಜ್ಞಾನವೆಂಬ ಕೂಕಂಬೆಯ ಲಿಂಗವೆಂಬ ತಾರಾಮಂಡಲವ ನೋಡಿ ನಡಸೂದು. ಜವನ ಕಳ್ಳಾಳು ಕರ ಹಿರಿದು ಕಂಡಾ. ಪುಣ್ಯಪಾಪವೆಂಬ ಭಂಡವ ಸಮಜೋಗವೆಂಬ ನೇಣ ನವನಾಳದಲಿ ಕಟ್ಟಿ, ಮನವೆಂಬ ಉಪಾಯವನು ವಾಹಿಕೊಳಲಿ ನಿಧಿಯೆಂಬ ನಡುಗಡಲ ಸುಖದುಃಖದೊಳಗೆ ತೆರೆಯ ಹೊಯಿಲು ಕರ ಹಿರಿದು ಕಂಡಾ. ಉದುಮದವೆಂಬಾ ಸುಳಿಯಲ್ಲಿತಿರುಗದೆ ಗುರುವೆಂಬ ಬೆಂಗುಂಡ ಹಿಡಿ ಕಂಡಾ. ಇಹಲೋಕ ಪರಲೋಕ ವಿಘ್ನಗಳ ಕಳೆದು ಕಪಿಲಸಿದ್ಧಮ್ಲನಾಥನ ಕಾಬೆ ಕಂಡಾ.
--------------
ಸಿದ್ಧರಾಮೇಶ್ವರ
ವಾಚಾತೀತವೂ ಮನೋತೀತವೂ ಭಾವಾತೀತವೂ ಆದ ಮಹಾಲಿಂಗವು ಸತ್ಯಜ್ಞಾನಾನಂದ ಸ್ವರೂಪಮಾದಲ್ಲಿ, ಸತ್ಯವೇ ಭಕ್ತ, ಜ್ಞಾನವೇ ಗುರು, ಆನಂದವೇ ಜಂಗಮಸ್ವರೂಪವಾಗಿ ನಟಿಸುತಿರ್ಪ ಮಹಾಲಿಂಗವು ತನ್ನ ಲೀಲೆಗೋಸುಗ ಆನಂದವನ್ನು ಮರೆವಿಡಿದು, ಅದರಲ್ಲಿಯೇ ದುಃಖಸ್ವರೂಪಮಾಗಿ ಮಹಾರುದ್ರನಂ ಸೃಜಿಸಿ, ಜ್ಞಾನಮಂ ಮರೆವಿಡಿದು, ಅದರಲ್ಲಿಯೇ ಅಜ್ಞಾನವೆಂಬ ವಿಷ್ಣುವಂ ಕಲ್ಪಸಿ, ಸತ್ಯವಂ ಮರೆವಿಡಿದು, ಅದರಲ್ಲಿ ಮಿಥ್ಯೆಯೆಂಬ ಬ್ರಹ್ಮನು ಕಲ್ಪಿಸಲು, ಸರ್ಗಸ್ಥಿತಿ ಸಂಹಾರಂಗಳಿಗಿದೇ ಕಾರಣಮಾಗಿ, ಆ ರುದ್ರನಲ್ಲಿ ಜಾಗ್ರವೂ, ವಿಷ್ಣುವಿನಲ್ಲಿ ಸುಷುಪ್ತಿಯೂ, ಬ್ರಹ್ಮನಲ್ಲಿ ಸ್ವಪ್ನವೂ ಉತ್ಪನ್ನವಾಗಿ, ಆ ಜಾಗ್ರದಲ್ಲಿ ತೇಜವೂ, ಸುಷುಪ್ತಿಯಲ್ಲಿ ವಾಯ್ವಾಕಾಶಂಗಳೂ, ಸ್ವಪ್ನದಲ್ಲಿ ಪೃಥ್ವಿಯಪ್ಪುಗಳೂ ಆಗಿ, ಅವುಗಳೇ ಒಂದಕ್ಕೊಂದಾವರಣಂಗಳಾಗಿರ್ಪ ಈ ಪ್ರಪಂಚದಲ್ಲಿ ಕ್ರೀಡಾನಿಮಿತ್ತವಾಗಿ ಜೀವಪರಮರೂಪುಗಳಂ ಧರಿಸಿ, ಇದಕ್ಕೆ ಹೊರಗಾಗಿ, ತಾನು ಪರಮರೂಪದಲ್ಲಿ ನಿಂದು, ತನ್ನೊಳ್ತಾನೆ ಕಲ್ಪಿಸಿದ ಜೀವಕೋಟಿಗಳನ್ನು ಇದಕ್ಕೊಳಗುಮಾಡಲು, ಅವೆಲ್ಲವೂ ಒಂದಕ್ಕೊಂದು ಸುತ್ತಿಮುತ್ತಿ ಮಿಥ್ಯೆಯೇ ಸ್ಥೂಲಮಾಗಿ, ಅಜ್ಞಾನವೇ ಸೂಕ್ಷ್ಮವಾಗಿ, ದುಃಖವೇ ಕಾರಣಮಾಗಿ, ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥೆಗಳನನುಭವಿಸುತ್ತಾ. ನಿಜವಂ ಮರತು ನಿಜಾವಸ್ಥೆಯಂ ತೊರೆದು, ತ್ರಿಮೂರ್ತಿಗಳ ಬಲೆಗೆ ಸಿಕ್ಕಿ ದಾಂಟಲಾರದೆ, ಕೋಟಲೆಗೊಳುತತಿಪ್ರ್ಮದಂ ನೋಡಿ ನೋಡಿ, ಆನಂದಿಸುತ್ತಿರ್ಪನೆಂತೆಂದೊಡೆ: ಮದ್ದಂ ಮೆಲುವಾತಂಗದೇ ಸಾಧಕಮಾಗಿ, ಆ ಲಹರಿಯೊಳಗೆ ಕೂಡಿ, ನಿಜಾವಸ್ಥೆಯಂ ತೊರೆದು, ತದವಸ್ಥೆಯೊಳು ಬದ್ಧನಾಗಿ, ಆ ಲಹರಿಯಳಿದಲ್ಲಿ ಮರಣವೇ ಕಾರಣಮಾಗಿ, ತಿರಿಗಿ ಶರೀರಮಂಪೊಂದಿ, ಅವಸ್ಥಾತ್ರಯಂಗಳನನುಭವಿಸುತ್ತಿಪ್ರ್ಮದಂ ನೋಡಿ, ಪರಮಾನಂದಿಸುತ್ತಿಪುನು. ಇಂತಪ್ಪ ಭ್ರಮೆಯಂ ಕಳೆದು, ತನ್ನ ನಿಜಸ್ವರೂಪಮಪ್ಪ ತೂರ್ಯಾವಸ್ಥೆಯಂ ಹೊಂದುವನೆಂದೊಡೆ, ಹೊಂದತೀರದೆ ಸ್ವಲ್ಪಕಾಲವೇ ಮಹಾತ್ಕಾಲಮಾಗಿ, ಪೃಥ್ವಿವ್ಯಪ್ತೇಜೋವಾಯ್ವಾಕಾಶಾದಿ ಪಂಚಭೂತಂಗಳು ದಾಂಟಲಾರದೆ, ಆ ಪಂಚಭೂತಗುಣಗಂಗಳಂ ಪಂಚೇಂದ್ರಿಯಮುಖಗಳಿಂದ ತನ್ನತಃಕರಣದಿಂ ಕೊಂಡುಂಡು, ಭಾವವಂ ಮುಟ್ಟಲೊಲ್ಲದೆ, ಪಂಚೇದ್ರಿಯಂಗಳಲ್ಲಿರ್ಪ ಬ್ರಹ್ಮನ, ಅಂತಃಕರಣದಲ್ಲಿರ್ಪ ವಿಷ್ಣುವಿನ, ಭಾವದಲ್ಲಿರ್ಪ ರುದ್ರನ ಕಾಟದಲ್ಲಿ ಕೋಟಲೆಗೊಳುತ್ತಿರ್ಪುದಂ ತಪ್ಪಿಸುವುದಕ್ಕುಪಾಯಮಂ ಕಾಣದಿರ್ಪ ಜೀವನಿಗೆ ತಾನೇ ದಯೆಯಿಂ ಗುರುರೂಪನಾಗಿ ಬಂದು, ತನ್ನ ನಿಜವನ್ನೇ ಇದಿರಿಟ್ಟು ತೋರಿದಲ್ಲಿ, ಆ ವಸ್ತುವಂ ನೋಡಿ ನೋಡಿ, ತನ್ನ ಅಂತರಂಗದಲ್ಲಿರ್ಪ ಅಜ್ಞಾನವು ಹರಿದು, ಅಲ್ಲೊಂದು ಸೂಕ್ಷ್ಮದ್ವಾರವು ಕಾಣಿಸಲಲ್ಲಿ ಪ್ರವೇಶಿಸಲೆಸದಿರ್ಪ ಅನೇಕ ದುರ್ಗುಣಗಳಿಗಂಜದೆ ಆತ್ಮಾನಮಾತ್ಮನಾವೇತ್ತಿ ಎಂಬ ಶ್ರುತಿವಚನದಿಂ ತನ್ನಿಂದುತ್ಪನ್ನಮಾದ ಪಂಚಭೂತಗಳಲ್ಲಿ ತಾನೇ ಕಾರಣಭೂತಮಾಗಿ ಕೂಡಲು, ಆ ಗುಣಂಗಳು ಆತ್ಮಸ್ವರೂಪಮಾಗಿ, ಆತ್ಮನಿಂದಲೇ ಉಧ್ಭವಿಸಿ, ಆತ್ಮನಿಗೆ ಸುಖವನ್ನೂ ವಾಯುರೂಪಮಾದ ಜೀವನಿಗೆ ದುಃಖವನ್ನೂ ಉಂಟುಮಾಡುತ್ತಿರ್ಪವೆಂತೆಂದೊಡೆ: ಅರಸಿನಲ್ಲಿ ಹುಟ್ಟಿದ ಗ್ರಹವು ಅರಸಿಂಗೆ ಸುಖಮಂ ಪರರಿಗೆ ದುಃಖಮಂ ಮಾಡುವಂದದಿ, ಆಧಿಯಲ್ಲಾಕಾಶಾತ್ಮಸಂಗದಿಂ ಜ್ಞಾನವು ಹುಟ್ಟಿ, ಅದು ಅಭೇದಮಾಗಿರ್ಪ ಆಕಾಶಾತ್ಮಂಗಳಲ್ಲಿ ಇದಾಕಾಶವಿದಾತ್ಮವೆಂಬ ಭೇದಮಂ ಪುಟ್ಟಿಸಿ, ಜೀವರ ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಯಿತ್ತು. ಉಳಿದ ನಾಲ್ಕು ಭೂತಂಗಳಲ್ಲಂತಃಕರಣಚತುಷ್ಟಯಂಗಳು ಹುಟ್ಟಿ, ಅವೇ ನಾಲ್ಕುಮುಖಂಗಳಾಗಿ, ಜ್ಞಾನವು ಮಧ್ಯಮುಖಮಾಗಿ, ತದ್ಬಲದಿಂ ಅಹಂ ಬ್ರಹ್ಮವೆಂದಹಂಕರಿಸುತ್ತಿರ್ಪ ಬ್ರಹ್ಮನಂ ನೋಡಿ, ಆತ್ಮರೂಪಮಾದ ಶಿವನು ಭಾವಹಸ್ತದಲ್ಲಿ ಅಂತಃಕರಣಮಧ್ಯದಲ್ಲಿರ್ಪ ಜ್ಞಾನವೆಂಬ ಬ್ರಹ್ಮಕಪಾಲವಂ ಪರಿಗ್ರಹಿಸಲು, ಉಳಿದ ನಾಲ್ಕು ಶಿರಸ್ಸುಗಳಿಂ ಸೃಷ್ಟಿಕರ್ತನಾದ ಬ್ರಹ್ಮನು ಸಂಹಾರರೂಪಮಾದ ಜ್ಞಾನಮುಖದಲ್ಲಿ ಸಕಲ ಪದಾರ್ಥಗಳನ್ನು ಪರಿಗ್ರಹಿಸುತ್ತಿರ್ಪನು. ಅಂತಪ್ಪ ಆತ್ಮರೂಪಮಾದ ಶಿವನೊಳಗೆ ಆಕಾಶಮೆಂತೈಕ್ಯಮಪ್ಪುದೆಂದೊಂಡೆ : ಆಕಾಶವೂ ವಾಯುರೂಪು. ಭಸ್ತ್ರಿಯಲ್ಲಿ ಪ್ರವೇಶಿಸಿರ್ಪ ವಾಯುವಿನಿಂದ ಆಕಾಶಮಧಿಕಮಾಗಲು. ವಾಯುವಡಗಲಾಕಾಶವೂ ಕೂಡ ಅಡಗುವಂದದಿ, ಅಂತಪ್ಪ ವಾಯುವೇ ಜೀವನು, ಆ ಜೀವನಿಗವಸಾನಸ್ಥಾನವೇ ಆತ್ಮನು, ಆ ಆತ್ಮನಲ್ಲಿ ಕೂಡಿ ತನ್ನ ಮುನ್ನಿನ ವಾಯುರೂಪಮಳಿದಲ್ಲಿ ಅದಕಿಂತ ಮೊದಲೇ ಆಕಾಶವಳಿವುತ್ತಿರ್ಪುದು. ಅಂತಪ್ಪ ಆತ್ಮಸ್ವರೂಪವೆಂತೆಂದೊಂಡೆ : ಆತ್ಮವಂ ವಿಚಾರಿಸಿ ಆತ್ಮಸ್ವರೂಪವನರಿಸಿದ ಜೀವನು ತಾನಾತ್ಮನಾಗುತ್ತಿರಲು ಆತ್ಮಸ್ವರೂಪಮಿತೆಂದು ಮರಳಿಯೋರ್ವರೊಳುಸುರುವುದೆಂತಯ್ಯಾ! ಸತ್ತವನು ಬಂದು ತನ್ನ ವೃತ್ತಾಂತವಂ ಹೇಳಬಲ್ಲನೆ? ಉರಿಯೊಳ್ಕೂಡಿದ ಕರ್ಪುರವು ಉರಿಯಪ್ಪುದಲ್ಲದೆ ಕರ್ಪುರವಪ್ಪುದೆ? ಅಂತಪ್ಪ ಅಭೇದಾನಂದ ಪರಮಾತ್ಮಸಂಗದೊಳೇಕಮಾಗಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನ್ನಷ್ಟು ... -->