ಅಥವಾ

ಒಟ್ಟು 56 ಕಡೆಗಳಲ್ಲಿ , 36 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಾಳದಗ್ವಣಿಯ ನೇಣಿಲ್ಲದೆ ತೆಗೆಯಬಹುದೆ, ಸೋಪಾನದ ಬಲದಿಂದಲ್ಲದೆ ? ಶಬ್ದಸೋಪಾನವ ಕಟ್ಟಿ ನಡೆಯಿಸಿದರು ಪುರಾತರು, ದೇವಲೋಕಕ್ಕೆ ಬಟ್ಟೆ ಕಾಣಿರೋ. ಮತ್ರ್ಯರ ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು, ಕೂಡಲಚೆನ್ನಸಂಗನ ಶರಣರು.
--------------
ಚನ್ನಬಸವಣ್ಣ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ತ್ಯಾಗಾಂಗನಾಗಿ ಕೊಡುತ್ತಿದ್ದಲ್ಲಿ ಭೋಗಾಂಗನಾಗಿ ಸುಖಿಸುತ್ತಿದ್ದಲ್ಲಿ ಯೋಗಾಂಗನಾಗಿ ವಾಯುದ್ವಾರ ಭೇದಂಗಳನರಿತು ಧ್ಯಾನ ಧಾರಣ ಸಮಾದ್ಥಿಗಳಲ್ಲಿದ್ದಡೂ ಒಂದು ಕುರಿತು ಲಕ್ಷಸಿ ವಸ್ತು ಇದೇನೆಂದು ವಿಶ್ವಾಸದಿಂದಲ್ಲದಾಗದು. ಹಿಂದಕ್ಕಾದ ದೇವಪದವಂತರು ಮುಂದಕ್ಕೆ ಅರಿದು ಕೂಡುವ ಅರುಹಿರಿಯ ಶರಣತತಿಗಳೆಲ್ಲರು ವಿಶ್ವಾಸದಿಂದಲ್ಲದೆ ದೃಷ್ಟವ ಕಾಣರು. ಇದು ಕಾರಣ, ಬಾಹ್ಯಕರ್ಮ ಅಂತರಂಗ ಶುದ್ಧ ನಿರವಯವೆಂಬುದೊಂದು ಕುರುಹಿನ ನೆಮ್ಮುಗೆ ಉಂಟಹನ್ನಕ್ಕ ವಿಶ್ವಾಸಬೇಕು. ಇದು ಸಂಗನಬಸವಣ್ಣ ಕೊಂಡು ಬಂದ ಲಿಂಗದ ಬಟ್ಟೆ. ಬ್ರಹ್ಮೇಶ್ವರಲಿಂಗವೆಂಬ ವಸ್ತುವ ಕೂಡುವ ದೃಷ್ಟ.
--------------
ಬಾಹೂರ ಬೊಮ್ಮಣ್ಣ
ಸದ್ವಾಸನ ಧರ್ಮಚರಿತೆಯ ವರ್ಮವನುಳಿದು ದುಷ್ಕರ್ಮಬಾಧೆಯ ಉರಿಯೊಳು ತೊಳಲುವ ಭಾವ ಭಕ್ತಿತ್ರಯದ ಯುಕ್ತಿಯನರಿವುದು ಚೋದ್ಯ ಕಾಣಾ. ಹಿಡಿದ ಕುರುಹು ಹೊತ್ತ ಹೊರೆ ನಡೆವ ಬಟ್ಟೆ ಮಿಥ್ಯ ಮಾಯಾ ಬದ್ಧ ನೋಡಾ. ಇಂತಿರ್ದ ಅರುವಿಗೆ ಕುರುಹುಗಾಣಿಸದಿರ್ದನು ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ಶರಣ ಭಕ್ತಸಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇದವನೋದಿದಡೇನು? ಶಾಸ್ತ್ರವ ಕಲಿತಡೇನು? ಮಾಘವ ಮಿಂದಡೇನು? ಮೂಗ ಹಿಡಿದಡೇನು? ಹಲ್ಲ ಕಿರಿದಡೇನು? ಬಾಯ ಹುಯ್ದುಕೊಂಡಡೇನು? ಉಟ್ಟುದನೊಗೆದಡೇನು? ಮಟ್ಟಿಯನಿಟ್ಟಡೇನು? ಮಂಡೆಯ ಬಿಟ್ಟಡೇನು? ತಿಟ್ಟನೆ ತಿರುಗಿದಡೇನು? ಕಣ್ಣು ಮುಚ್ಚಿದಡೇನು? ಕೈಗಳ ಮುಗಿದಡೇನು? ಬೊಟ್ಟನಿಟ್ಟಡೇನು? ಬಯಲಿಂಗೆ ನೆನೆದಡೇನು? ಮುಸುಡ ಹಿಡಿದಡೇನು? ಮೌನದಲ್ಲಿರ್ದಡೇನು? ಅವಕ್ಕೆ ಶಿವಗತಿ ಸಿಕ್ಕದು. ಕುಲವಳಿದು ಛಲವಳಿದು ಮದವಳಿದು ಮತ್ಸರವಳಿದು, ಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗವ ಧರಿಸಿ, ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬಲ್ಲಡೆ, ಶಿವಗತಿ ಸಿಕ್ಕುವುದು. ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ, ಕೈಲಾಸದ ಬಟ್ಟೆ ಬೇರಿಲ್ಲವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಂಗಳ ಮುಂದೆ ಕತ್ತಲೆ ಇದೇನೊ? ಮನದ ಮುಂದಣ ಮರಣ (ಮರವೆ ?) ಇದೇನೊ? ಒಳಗಣ ರಣರಂಗ ಹೊರಗಣ ಶೃಂಗಾರ ! ಬಳಕೆಗೆ ಬಂದ ಬಟ್ಟೆ ಇದೇನೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ. ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ, ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ? ಆಗಮವಿದ್ಥಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ. ಆದ ಕೇಳಲಾಗದು ಭ್ರಾಂತು ಬೇಡ. ಭಾವಮೂರುತಿ ಬಲ್ಲ ಪ್ರಮಾಣವಿದೆ. ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ. ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ? ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ. ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ, ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ. ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಅಳೆವುತ್ತ ಅಳೆವುತ್ತ ಬಳಲುವರಲ್ಲದೆ, ಕೊಳಗ ಬಳಲುವುದೆ ನಡೆವುತ್ತ ನಡೆವುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ, ಕೋಲು ಬಳಲುವುದೆ ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ ಕೂಡಲಸಂಗಮದೇವಾ, ಅರಸರಿಯದ ಬಿಟ್ಟಿಯೋ. 113
--------------
ಬಸವಣ್ಣ
ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ ಶರ ಚರಿಸುವುದಕ್ಕೆಡೆಯಾಯಿತ್ತು. ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ ವಸ್ತುವನರಿವುದಕ್ಕೆ ಒಡಲಾಯಿತ್ತು. ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ ತ್ರಿಗುಣ ನಷ್ಟ. ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ, ಸಪ್ತಧಾತು ವಿಸರ್ಜನ, ಅಷ್ಟಮದ ಹುಟ್ಟುಗೆಟ್ಟಿತ್ತು, ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು, ಸದ್ಭಾವದ ನಿಷ್ಠೆ ನಷ್ಟವಾಯಿತ್ತು. ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು. ನಾನಾರೆಂಬುದ ತಿಳಿದಲ್ಲಿ ಕೂಗಿನ ಕುಲಕ್ಕೆ ಹೊರಗಾಯಿತ್ತು ಮಹಾಮಹಿಮ ಮಾರೇಶ್ವರನನರಿಯಲಾಗಿ.
--------------
ಕೂಗಿನ ಮಾರಯ್ಯ
ಇಂತಪ್ಪ ತ್ರಿವಿಧಾಚರಣೆಯಲ್ಲಿ ಬ್ಥಿನ್ನಜ್ಞಾನಿಗಳಾಗಿ ಬ್ಥಿನ್ನ ಕ್ರಿಯಗಳಾಚರಿಸಿ, ಬ್ಥಿನ್ನಭಾವ ಮುಂದುಗೊಂಡು ವ್ರತವನಾಚರಿಸುವ ಅಜ್ಞಾನಿಗಳಾದ ಜೀವಾತ್ಮರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ? ಮತ್ತೆಂತೆಂದೊಡೆ : ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ, ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು ತನುವಿನಲ್ಲಿ ಸ್ವಾಯತವ ಮಾಡಿ, ಆ ತನುಪ್ರಕೃತಿಯನಳಿದು ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ ದಿನಚರಿ ವಾರ ಸೋಮವಾರವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ, ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ ಸುಜ್ಞಾನಕ್ರಿಯಗಳನಾಚರಿಸುವುದೇ ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ ನಿರಂಜನಭಾವಲಿಂಗವನು - ಧನವೆಂದಡೆ ಆತ್ಮ. ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ, ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ ಮಹಾಜ್ಞಾನಾಚರಣೆಯನಾಚರಿಸುವುದೇ ದ್ವಾದಶಮಾಸ, ದ್ವಾದಶ ಚತುರ್ದಶಿ, ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ ಶಿವರಾತ್ರಿಅಮವಾಸೆಯ ವ್ರತವೆಂಬೆ. ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ, ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು ಮನು ಮುನಿ ದೇವ ದಾನವರು ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ ಇದಿರಿಟ್ಟು ಕೆಟ್ಟುಪೋದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಿದು ಚುಚ್ಚುವರೆಲ್ಲರೂ ದನದಟ್ಟೆ. ಮರೆದು ಚುಚ್ಚುವರೆಲ್ಲರೂ ದನದಟ್ಟೆ. ನಾ ಚುಚ್ಚುವುದೆಲ್ಲ ಸತ್ತ ಜೀವದನದಟ್ಟೆ. ಅಟ್ಟೆಯ ಕೊಯ್ದು ಮೆಟ್ಟಿಸಿದ ಸತ್ಯರಿಗೆಲ್ಲಕ್ಕೂ ಎನಗೆ ಬಟ್ಟಬಯಲ ತೋರಬೇಕೆಂದು. ನಿಮ್ಮ ಬಟ್ಟೆಯಲ್ಲಿ ನೀವೆ ಹೋಗಿ, ಎನ್ನ ಬಟ್ಟೆ ಕಾಮಧೂಮ ಧೂಳೇಶ್ವರನ ಬಟ್ಟೆಯೇ ಸಾಕು.
--------------
ಮಾದಾರ ಧೂಳಯ್ಯ
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ ತಮಗೊಂದು ಬಟ್ಟೆ, ಶಾಸ್ತ್ರಕೊಂದು ಬಟ್ಟೆ ! ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
--------------
ಬಸವಣ್ಣ
ಎಂಟು ಯೋಗ ಆರು ಭೇದ ಮೂರು ಬಟ್ಟೆ ಐದು ಮುಟ್ಟು ಈರೈದು ಹಾದಿ ಹದಿನಾರು ಸಂಗ ನಾಲ್ಕು ಮೆಟ್ಟು ಎರಡುಸಂಚಾರ ಒಂದರ ಕಟ್ಟಿನಲ್ಲಿ ಮುಟ್ಟುಮಾಡಿ ನಿಲಿಸಿ, ದೃಷ್ಟದ ಇಷ್ಟದಲ್ಲಿ ಬೈಚಿಟ್ಟು, ಅವರವರ ಸ್ವಸ್ಥಾನದ ಕಟ್ಟಣೆಯಲ್ಲಿ ವಿಶ್ರಮಿಸಿ ಆ ಚಿತ್ತವ ಆ ಚಿತ್ತು ಒಡಗೂಡಿ ಇಪ್ಪುದೆ ಕ್ರಿಯಾಪಥಲಿಂಗಾಂಗಯೋಗ. ಇದನರಿಯದೆ ಮಾಡುವ ಯೋಗವೆಲ್ಲವೂ ತನ್ನಯ ಭವರೋಗ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ತಳದಲೊಂದು ಕೋಲ ಕುಳಿ ಮಾಡಿ, ಮೇಲೊಂದು ಕೋಲ ಮೊನೆ ಮಾಡಿ [ಮಥಿ]ಸಲು ಅಗ್ನಿ ದೃಷ್ಟವಾಗಿ ಕಾಣಿಸಿಕೊಂಬಂತೆ, ಆತ್ಮನ ಸತಿಗೋಲಮಾಡಿ, ಪ್ರಣವವ [ಪ]ತಿಗೋಲ ಮಾಡಿ, ಪ್ರಣವಾತ್ಮಕನು ಶಿವಧ್ಯಾನದಿಂ ಮಥಿಸಲು ಆ ಧ್ಯಾನಪರ್ದಣದಲ್ಲಿ ಶಿವನು ಗೂಢವಿಲ್ಲದೆ ಕಾಣಿಸಿಕೊಂಬನು. ಇದಕ್ಕೆ ಶ್ರುತಿ: ಆತ್ಮಾನಮರಣಿಂ ಕೃತ್ವಾ ಪ್ರಣವಂ ಚೋತ್ತರಾರಣಿಂ ಧ್ಯಾನನಿರ್ಮಥನಾಭ್ಯಾಸಾತ್ಪಾಶಂ ದಹತಿ ಪಂಡಿತಃ ಎಂದುದಾಗಿ ಶಿವಧ್ಯಾನದಿಂ ¸õ್ಞರಾಷ್ಟ್ರ ಸೋಮೇಶ್ವರ ಲಿಂಗವ ಕಾಂಬುದಕ್ಕಿದೇ ಬಟ್ಟೆ ಕಂಡಯ್ಯಾ!
--------------
ಆದಯ್ಯ
ಐವರ ಸಂಗಡ ಉದಯದಲ್ಲಿ ಹೊರವಂಟಿರಾದಡೆ, ಕೇಳಿರಣ್ಣಾ, ಮಧ್ಯಾಹ್ನಕ್ಕೆ ಬಂದಿರಾದಡೆ, ಕಳೆಯಳಿದು ಕಳೆಯ ತಪ್ಪದೆ ನಿಂದಿರಾದಡೆ, ಬಟ್ಟೆ ಸರಿಸ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿಗೆ ಹೋಯಿತ್ತು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->