ಅಥವಾ

ಒಟ್ಟು 63 ಕಡೆಗಳಲ್ಲಿ , 26 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಣ್ಣನ ನೂಲುವ ಚಿಣ್ಣಂಗೆ ಬಣ್ಣ ಮುನ್ನಿಲ್ಲ ನೋಡಯ್ಯ. ಚಿಣ್ಣ ತಾನಾದರೇನಯ್ಯ? ಬಣ್ಣವುಳ್ಳವರ ಕಣ್ಣಿಗೆ ಕಾಣಿಸನು ನೋಡಯ್ಯ. ಬಣ್ಣವಳಿದು ಕಣ್ಣ ಕತ್ತಲೆ ಹರಿದಲ್ಲದೆ ಚಿಣ್ಣನ ಕಾಣಬಾರದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕøಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲೆಪ್ಪದ ಬೊಂಬೆ ಒಂದಾದಡೆ ಅವಯವಂಗಳಲ್ಲಿ ಬಣ್ಣ ನಿಂದು ರೂಪುದೋರುವಂತೆ ವಸ್ತು ಭಾವವೊಂದಾದಲ್ಲಿ ಮುಟ್ಟುವ ಸ್ಥಲದಿಂದ ಹಲವಾಯಿತ್ತು. ಕೇಳಿದಲ್ಲಿ ಭಾವನಾಸ್ತಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಅರಿವರತು ಕುರುಹು ನಷ್ಟವಾದ ಬಳಿಕ ಕುರುಹಿನ ಬಣ್ಣ ಅಂಗದ ಮೇಲೇಕೊ ಘಟ್ಟಿವಾಳಂಗೆ ? ಅರಿವನಾರು ? ಅರುಹಿಸಿಕೊಂಬನಾರು ? ಬರಿಯ ಬಯಲು ಕಾಣಾ, ಕೂಡಲಚೆನ್ನಸಂಗಾ ನಿಮ್ಮ ಶರಣ ಘಟ್ಟಿವಾಳನಲ್ಲದೆ ನೆರೆ ಅರಿವರಾರೊ ?
--------------
ಚನ್ನಬಸವಣ್ಣ
ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ ರಸವೊಸರಿ ಸಂಗ ಪರಿಪೂರ್ಣವಾದಲ್ಲಿ, ರಸವೋ ? ಬಣ್ಣವೋ ? ಘಟವೋ? ಎರಕವಿಲ್ಲದೆ ಘಟ್ಟಿಯಾದಂತೆ ಅಂಗವು, ಲಕ್ಷಿಸಿಪ್ಪ ಲಿಂಗವು, ಲಕ್ಷಿಸುತಿಪ್ಪ ಚಿತ್ತವು, ಹೆಪ್ಪುಗೊಂಡಂತೆ ಈ ಗುಣ ಲಿಂಗಾಂಗಿಯ ಶುಭಸೂಚನೆ, ನಿಃಕಳಂಕ ಮಲ್ಲಿಕಾರ್ಜುನ ಲಿಂಗವನೊಡಗೂಡಿದವನಂಗ.
--------------
ಮೋಳಿಗೆ ಮಾರಯ್ಯ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಿಲದೊಳಗಣ ತೈಲ, ಫಲದೊಳಗಣ ರಸ, ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ, ಇಕ್ಷುದಂಡದ ಸಾರದ ಸವಿ, ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು. ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ, ಶಿಲೆಕುಲದ ಸೂತಕ ಬಿಡದು. ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಬಣ್ಣವಿಲ್ಲದ ಪಕ್ಷಿ ಕಣ್ಣಿನ ಕೊನೆಯಲ್ಲಿ ಸಣ್ಣಗೂಡನಿಕ್ಕಿ ಸುಳಿವುದ ಕಂಡೆ. ಬಣ್ಣ ಮೂವತ್ತಾರ ನುಂಗಿತ್ತ ಕಂಡೆ. ಬಯಲ ಸೀಮೆಯ ವಾಸವಾಗಿರ್ಪ ಪಕ್ಷಿ ಹೆಣ್ಣೋ ಗಂಡೋ ಎಂದು ಕುರುಹವಿಡಿವ ಅಣ್ಣಗಳನಾರನೂ ಕಾಣೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.
--------------
ಮೋಳಿಗೆ ಮಾರಯ್ಯ
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಈರೇಳುಲೋಕವ ಕೋಡಗ ನುಂಗಿತ್ತ ಕಂಡೆ. ನುಂಗಿದ ಕೋಡಗವ ಗುಂಗುರ ನುಂಗಿತ್ತು. ಗುಂಗುರ ಬಂದು ಕಣ್ಣ ಕಾಡಲಾಗಿ, ಕಣ್ಣಿನ ಕಾಡಿಗೆ ಅಳಿಯಲಾಗಿ, ಕಣ್ಣಿನ ಬಣ್ಣ ಕೆಟ್ಟಿತ್ತು. ಕಣ್ಣಿನ ಒಡೆಯ ನೋಡಿ ಗುಂಗುರ ಒರಸಲಾಗಿ, ಆ ಗುಂಗುರ ಸತ್ತು, ಕೋಡಗ ಉಳಿಯಿತ್ತು. ಆ ಕೋಡಗವನಾಡಿಸಿಕೊಂಡುಂಬ ಜೋಗಿಗಳಿಗೇಕೆ, ಆ ರೂಢನ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಲ್ಲದಲ್ಲಿ ಇಲ್ಲವಿದ್ದಿತ್ತು. ಇಲ್ಲವೆಂಬುದು ಉಂಟು ನೋಡಾ. ಉಂಟೆಂದಲ್ಲಿ `ಇಲ್ಲ' ಉಂಟಾಯಿತ್ತು. ಉಂಟೆಂದು ತಿಳಿದಡೆ ಅದೆ `ಇಲ್ಲ'. ಆ `ಇಲ್ಲ'ದಲ್ಲಿ ಒಂದು ತಲೆ ಉದಿಸಿತ್ತು. ಆ ತಲೆಯೊಳಗೆ ಮೂರು ಲಿಪಿಯ ಕಂಡೆ. ಲಿಪಿಯೊಳಗೊಂದು ಧ್ವನಿಯ ಕಂಡೆ. ಧ್ವನಿಯ ಬಣ್ಣ ತಲೆಯೆತ್ತದ ಮುನ್ನ, ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು. ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ. ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು. ಅಡವಿಯ ಸುಟ್ಟು ಆಕಾಶವ ಹೊಕ್ಕು ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು
--------------
ಅಲ್ಲಮಪ್ರಭುದೇವರು
ಬಣ್ಣ ನುಂಗಿದ ಕಪ್ಪಡಕ್ಕೆ ಮುನ್ನಿನ ಅಂದವುಂಟೆ? ನಿಜದ ನನ್ನಿಯನರಿತವಂಗೆ ಮುನ್ನಿನ ಕುನ್ನಿಯ ಗುಣವುಂಟೆ? ಇದು ಸನ್ನದ್ದ ನಾರಾಯಣಪ್ರಿಯ ರಾಮನಾಥನಲ್ಲಿ ಸುಸಂಗಿಯಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಉದಕವಿಲ್ಲದಿರೆ ಅಂಬುದ್ಥಿ ತಟಾಕಂಗಳೆಂಬ ನಾಮವುಂಟೆ? ಬಣ್ಣ ನಾಸ್ತಿಯಾಗಿರೆ ಬಂಗಾರವೆಂಬ ವಿಶೇಷವುಂಟೆ? ಗಂಧವಿಲ್ಲದಿರೆ ಚಂದನವೆಂಬ ಅಂಗವುಂಟೆ? ನೀನಿಲ್ಲದಿರೆ ನಾನೆಂಬ ಭಾವವುಂಟೆ? ಜಗವೆಲ್ಲ ನಿನ್ನ ಹಾಹೆ, ಉತ್ಪತ್ಯ ಸ್ಥಿತಿ ಲಯವೆಲ್ಲ ನಿನ್ನ ಹಾಯೆ. ಕ್ರೀ, ನಿಃಕ್ರೀಯೆಂಬುದೆಲ್ಲ ನಿನ್ನ ಹಾಹೆ. ಜಗಹಿತಾರ್ಥವಾಗಿ ಭಕ್ತನಾದೆ. ಭಕ್ತಿ ತದರ್ಥವಾಗಿ ಮಾಹೇಶ್ವರನಾದೆ. ಮಾಹೇಶ್ವರ ತದರ್ಥವಾಗಿ ಪ್ರಸಾದಿಯಾದೆ. ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ. ಪ್ರಾಣಲಿಂಗಿ ತದರ್ಥನಾಗಿ ಶರಣನಾದೆ. ಶರಣ ತದರ್ಥನಾಗಿ ಐಕ್ಯನಾದೆ. ಇಂತೀ ಷಡುಸ್ಥಲಮೂರ್ತಿಯಾಗಿ ಬಂದೆಯಲ್ಲಾ ಸಂಗನಬಸವಣ್ಣ, ಚೆನ್ನಬಸವಣ್ಣ, ನಿಮ್ಮ ಸುಖದುಃಖದ ಪ್ರಮಥರು ಸಹಿತಾಗಿ ಏಳುನೂರೆಪ್ಪತ್ತು ಅಮರಗಣಂಗಳು, ಗಂಗೆವಾಳುಕ ಸಮಾರುದ್ರರು ಮತ್ತೆ ಅವದ್ಥಿಗೊಳಗಲ್ಲದ ಸಕಲ ಪ್ರಮಥರು ಬಂದರಲ್ಲಾ. ಬಂದುದು ಕಂಡು ಎನ್ನ ಸಿರಿ ಉರಿಯೊಳಗಾಯಿತ್ತು. ಎನ್ನ [ಭ]ವದ ಉರಿಯ ಬಿಡಿಸು, [ಭ]ವವಿರಹಿತ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ, ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ, ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ, ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ, ಲಿಂಗವ ಕೂಟ ಕೂಡುವ ಏಕವಾಗಿರಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.
--------------
ಆನಂದಯ್ಯ
ಇನ್ನಷ್ಟು ... -->