ಅಥವಾ

ಒಟ್ಟು 87 ಕಡೆಗಳಲ್ಲಿ , 35 ವಚನಕಾರರು , 82 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೊಡರ ಹಿಡಿದು ಕುಣಿಯಲ್ಲಿ ಬೀಳುವವರ ಕಂಡು, ವಿದ್ಥಿಯ ಕೈಯಲ್ಲು ನಿಸ್ತರಿಸಲಾರೆನಯ್ಯಾ ನಾನು. ಅಹಂಗಾದೆನಲ್ಲಾ ಎಂಬ ಚಿಂತೆಯ ನಿಸ್ತರಿಸಲಾರೆನಯ್ಯಾ. ವೇದವೆಂಬ ಮಹಾಜ್ಯೋತಿಯ ಹಿಡಿದು ಶಿವಪಥದಲ್ಲಿ ನಡೆಯಲರಿಯದೆ ಪಾಪದ ಕುಣಿಯಲ್ಲಿ ಬೀಳುವವರ ಕಂಡು ನಗೆಯಾದುದಯ್ಯಾ. ಗುರೂಪದೇಶವೆಂಬ ಜ್ಯೋತಿಯ ಹಿಡಿದು, ಶಿವಪಥದಲ್ಲಿ ನಡೆದು ಪ್ರಸಾದವೆಂಬ ನಿಧಾನವ ಕಂಡುಕೊಂಡು ಉಂಡು ಪರಿಣಾಮಿಸಿ ಬದುಕಿದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು, ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಧಿಕ ತೇಜೋನ್ಮಯ ಬಸವಾ. ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ. ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ ಪ್ರಣವಮೂರ್ತಿಯಯ್ಯಾ ಬಸವಯ್ಯನು. ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಬಸವಣ್ಣನ ಡಿಂಗರಿಗನಯ್ಯಾ, ಚನ್ನಬಸವಣ್ಣನ ಹಳೆಯನಯ್ಯಾ, ಪ್ರಭುದೇವರ ಬಂಟನಯ್ಯಾ, ಮಡಿವಾಳಯ್ಯನ ಲೆಂಕನಯ್ಯಾ, ಸಿದ್ಭರಾಮಯ್ಯನ ಭೃತ್ಯನಯ್ಯಾ. ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು, ಬದುಕಿದೆನಯ್ಯಾ. ಕಾಮಧೂಮ ಧೂಳೇಶ್ವರಾ. ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ, ಅಂತಿಂತೆನಲಮ್ಮದೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಶುದ್ಧಗುರು ಬಸವಣ್ಣ, ಸಿದ್ಧಗುರು ಚೆನ್ನಬಸವಣ್ಣ, ಪ್ರಸಿದ್ಧಗುರು ಪ್ರಭುರಾಯನು. ತನುತ್ರಯ ಮಲತ್ರಯ ಆರನತಿಗಳೆದು, ಲಿಂಗತ್ರಯ ಪ್ರಸಾದ ಮೂರನು ಪರಿಭವಿಸಿ ವಶಮಾಡಿ ಎನ್ನ ರಕ್ಷಿಸಿದ ಬಸವ, ಚೆನ್ನಬಸವ, ಪ್ರಭು ಶರಣೆಂದು ಬದುಕಿದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಮಾಟಕೂಟ ಸಮಯಾಚಾರ ಸದ್ಭಕ್ತಿಯ ನೆಲೆಯ ನಮ್ಮ ಬಸವಯ್ಯನಲ್ಲದೆ ಮತ್ತಾರೂ ಅರಿಯರು. ಅರಿವಿನ ಕುರುಹನಾತ್ಮದಲ್ಲಿ ನಿಲಿಸಿ, ಶಿವಕೂಟಸಮಾಧಿಯ ಕಂಡು ಆನು ಬದುಕಿದೆನಯ್ಯಾ ಸಂಗಯ್ಯಾ.
--------------
ನೀಲಮ್ಮ
ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರದೇವರು. ಲಿಂಗದಲ್ಲಿ ನಿಬ್ಬೆರಗಾದರಯ್ಯಾ ಅನುಮಿಷದೇವರು. ಜಂಗಮವಾಗಿ ಸುಳಿದರಯ್ಯಾ ಪ್ರಭುದೇವರು. ಪ್ರಸಾದವ ಕೊಂಡು ಪಥವ ತೋರಿದರಯ್ಯಾ ಬಿಬ್ಬಿಬಾಚಯ್ಯಗಳು. ಲಿಂಗದಲ್ಲಿ ನಿರ್ವಯಲಾದರಯ್ಯಾ ನೀಲಲೋಚನೆಯಮ್ಮನವರು. ಸೌರಾಷ್ಟ್ರಮಂಡಲದಲ್ಲಿ ಮೆರೆದರಯ್ಯಾ ಓಹಿಲದೇವರು. ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದ ಕೊಂಡು ಬದುಕಿದೆನಯ್ಯಾ, ವೀರಶೂರ ರಾಮೇಶ್ವರಾ
--------------
ಬಾಲಬೊಮ್ಮಣ್ಣ
ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಪರವ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಗತಿಯ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಮತಿಯ ಕಂಡೆ ಅಯ್ಯಾ, ರುದ್ರಾಕ್ಷೆಯಿಂದ ಮೋಕ್ಷವ ಕಂಡೆ ಅಯ್ಯಾ, ಇನ್ನ ಬದುಕಿದೆ, ಬದುಕಿದೆನಯ್ಯಾ, ಅಯ್ಯಾ, ಭವಂ ನಾಸ್ತಿಯಾಯಿತ್ತೆನಗೆ. ಅಯ್ಯಾ, ಮಹಾಲಿಂಗ ಕಲ್ಲೇಶ್ವರಾ, ಶ್ರೀಮಹಾರುದ್ರಾಕ್ಷೆಯಿಂದೆ ಕಂಡೆನಯ್ಯಾ, ಎನ್ನ ಕರಸ್ಥಳದಲ್ಲಿ ಮಹಾಗೂಢವಾಗಿರ್ಪ ನಿಮ್ಮ ದಿವ್ಯಮೂರ್ತಿ ಪೆಂಪನು.
--------------
ಹಾವಿನಹಾಳ ಕಲ್ಲಯ್ಯ
ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ. ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ ನೀರಾಟ ನಿಂದು ನೆಲೆಗೊಂಡನಯ್ಯ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ, ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ, ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ, ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ, ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ, ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ, ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ, ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ, ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ ಬಹಿರಂಗದ ಸೂತಕ ಹೋಯಿತ್ತಯ್ಯಾ, ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ, ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ, ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಅಮುಗಿದೇವಯ್ಯ
ಜಲದಲ್ಲಿ ಉದಯಿಸಿ ಮತ್ತೆ ಜಲವು ತಾನಲ್ಲ; ಜಲವೆಂದಿಪ್ಪುದೀ ಲೋಕವೆಲ್ಲಾ. ಪರಮಗುರು ಬಸವಣ್ಣ ಜಗವ ಪಾಲಿಸ ಬರಲು ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ. ಆ ಸುದ್ದಿಯನರಿಯದೆ ಅನೇಕ ಜಡರುಗಳೆಲ್ಲ ಬೇಕಾದ ಪರಿಯಲ್ಲಿ ನುಡಿವುತ್ತಿಹರು. ಸತ್ತಪ್ರಾಣಿಯನ್ನೆತ್ತಿ ಒಪ್ಪಿಪ್ಪ ನಿಶ್ಚಯವು ಮತ್ರ್ಯದವರಿಗುಂಟೆ ಶಿವಗಲ್ಲದೆ? ಶಿವಗುರು ಬಸವಣ್ಣ, ಬಸವಗುರು ಶಿವನಾಗಿ, ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿಯಾದನು. ಬಸವಣ್ಣನ ನೆನಹು ಸುಖಸಮುದ್ರವಯ್ಯಾ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ತೋರಿರಾಗಿ ಬದುಕಿದೆನಯ್ಯಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಜಪಿಸಿರೊ ಜಪಿಸಿರೊ ಶ್ರೀ ಪಂಚಾಕ್ಷರಿಯ. ಜಪದಿಂದ ರುದ್ರನಪ್ಪುದು ತಪ್ಪದು ನೋಡಾ ! ಶ್ರೀ ಪಂಚಾಕ್ಷರಿಯನಿಂಬುಗೊಳದವನ ಅಂಗ ಹಾಳು. ಶ್ರೀ ಪಂಚಾಕ್ಷರಿಯ ನೆನೆಯದವ ಜಿಹ್ವೆ ಹೇಳು. ಶ್ರೀ ಪಂಚಾಕ್ಷರಿಯ ಕೇಳದವನ ಕರ್ಣ ಹಾಳು. ನಡೆವೆಡೆಯಲ್ಲಿ ನುಡಿವೆಡೆಯಲ್ಲಿ ಕೊಡುವೆಡೆಯಲ್ಲಿ ಕೊಂಬೆಡೆಯಲ್ಲಿ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಬಿಡದೆ ಪಂಚಾಕ್ಷರಿಯೆಂಬ ಮಂತ್ರವನೆ `ನಮಃ ಶಿವಾಯ' `ನಮಃ ಶಿವಾಯ' `ನಮಃ ಶಿವಾಯ'ಯೆಂದು ಜಪಿಸಿ, ಒಡಲ ದುಗುರ್ಣವ ಕೆಡಿಸಿ, ಮೃಡ ನಿಮ್ಮ ನೆನೆದು ನಾ ಬದುಕಿದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಎನ್ನಂತರಂಗವೆ ಬಸವಣ್ಣನಯ್ಯಾ. ಎನ್ನ ಬಹಿರಂಗವೆ ಚೆನ್ನಬಸವಣ್ಣನಯ್ಯಾ. ಎನ್ನ ಸರ್ವಾಂಗವೆ ಪ್ರಭುದೇವರಯ್ಯಾ. ಇಂತಿವರ ಕರುಣದ ಕಂದನಾಗಿ ಬದುಕಿದೆನಯ್ಯಾ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದದಿಟವೆನ್ನಿರಣ್ಣಾ.
--------------
ಗಾವುದಿ ಮಾಚಯ್ಯ
ಎನ್ನ ಭಕ್ತಿಯ ಶಕ್ತಿಯು ನೀನೆ, ಎನ್ನ ಯುಕ್ತಿಯ ಶಕ್ತಿಯು ನೀನೆ, ಎನ್ನ ಮುಕ್ತಿಯ ಶಕ್ತಿಯು ನೀನೆ. ಎನ್ನ ಮಹಾಘನದ ನಿಲವಿನ ಪ್ರಭೆಯನುಟ್ಟು ತಳವೆಳಗಾದ ಸ್ವಯಜ್ಞಾನಿ ಕೂಡಲಸಂಗಯ್ಯನಲ್ಲಿ ಮಹಾದೇವಿಯಕ್ಕಗಳ ನಿಲವ ಮಡಿವಾಳನಿಂದರಿದು ಬದುಕಿದೆನಯ್ಯಾ, ಪ್ರಭುವೆ.
--------------
ಬಸವಣ್ಣ
ಇನ್ನಷ್ಟು ... -->