ಅಥವಾ

ಒಟ್ಟು 66 ಕಡೆಗಳಲ್ಲಿ , 19 ವಚನಕಾರರು , 60 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು. ಒಳಗೂ ಕಲ್ಯಾಣ ಹೊರಗೂ ಕಲ್ಯಾಣ. ಇದರಂತುವನಾರು ಬಲ್ಲರಯ್ಯಾ ? ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ. ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಒಳಗೊಂದು ಗಾಲಿ, ಹೊರಗೊಂದು ಗಾಲಿ ಎರಡಕ್ಕೆ ಹೂಡಿದುದೊಂದು ಹರಿಯಚ್ಚು, ಮೇಲೆ ಹಾಸಿದ ನೀಳ Zõ್ಞಕದ ಕುರುಗುಣಿಯ ಕೊಂಬಿಂಗೆ ಈಚೆರಡು. ಏಳು ಹುರಿಯ ಬಲುಮಿಣಿಯಿಂ ಆಳವನಿಕ್ಕಿದ ಕಾಮನ ನೊಗ. ಅರೆತ್ತು ಹೂಡಿ, ಹಾಸು ದಡಿಕೆ ಒಂದು, ಮೇಲು ದಡಿಕೆ ಎರಡು, ಒಂದು ದೊಡ್ಡದು, ಒಂದು ಚಿಕ್ಕದು, ಒಂದುರೆ ಚಿಕ್ಕದು, ಬಂಡಿಯ ಮೇಲೊಬ್ಬ ಮೊದಲೆತ್ತ ಹೊಡೆವ, ತಲೆಯಾರು ನಡುವಣಾರು ಹೊಡೆವರಿಬ್ಬರು. ಬಂಡಿ ನಡೆವ ಬಟ್ಟೆಯಯ್ದು, ತುಂಬಿದ ಭಂಡವೈದು, ಐದು ಬಟ್ಟೆಯಂ ತಪ್ಪಿಸಿ ಆರು ಬಟ್ಟೆಯಲಿ ನಡೆಸಿ, ಹೇರಿದ ಭಂಡವನೊಡೆಯಂಗೊಪ್ಪಿಸಲರಿಯದೆ, ಎಡೆಯ ಕಡಿದು ಭುಂಜಿಸಿ ಒಡೆಯಂಗೆ ದೂರಾಗಿ, ಬಹುಮುಖದ ದಂಡಣೆಗೊಳಗಾಗಿ ಬಹಳ ಮುಖದಲ್ಲಿ ಬಂದು, ಹೇರಡವಿಯ ಕಗ್ಗತ್ತಲಲ್ಲಿ ತೊಳಲಿ ಭ್ರಮಿಸುವ ಹೊಲಬರಿಯದೆ ಹೊಲಬುಗೆಟ್ಟ ಮಲಮಾಯಾದ್ಥಿಕರು ನಿಮ್ಮನೆತ್ತ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾರಿ
--------------
ಉರಿಲಿಂಗಪೆದ್ದಿ
ಭಕ್ತ ಜಂಗಮದ ಸಕೀಲಸಂಬಂಧವೆಂತಿಪ್ಪುದೆಂಬುದನಾರು ಬಲ್ಲರಯ್ಯಾ ? ಅದು ಉಪಮಾತೀತ ! ಭಕ್ತನೊಳಗೆ ಜಂಗಮವಡಗಿದಡೆ ಭಕ್ತನಾಗಿ ಕ್ರಿಯಾನಿಷ್ಪತ್ತಿಯಲ್ಲಿ ಸಮರಸಸುಖಿಯಾಗಿಪ್ಪ ನೋಡಯ್ಯಾ. ಜಂಗಮದೊಳಗೆ ಭಕ್ತನಡಗಿದಡೆ, ಕರ್ತೃಭೃತ್ಯಭಾವವಳಿದು ಸಂಬಂಧ ಸಂಶಯದೋರದೆ, ಅರಿವರತು ಮರಹು ನಷ್ಟವಾಗಿ, ಸ್ವತಂತ್ರ ಶಿವಚಾರಿಯಾಗಿರಬೇಕು ನೋಡಯ್ಯಾ. ಈ ಉಭಯಭಾವಸಂಗದ ಪರಿಣಾಮವ ಕಂಡು ಕೂಡಲಚೆನ್ನಸಂಗಯ್ಯನಲ್ಲಿ ಬಸವಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು
--------------
ಚನ್ನಬಸವಣ್ಣ
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದು, ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ. ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ. ಇದ ನಮ್ಮ ಶಿವಶರಣರು ಮೆಚ್ಚರು. ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ, ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ ಸರ್ವನಿರ್ವಾಣಿಕಾಯೆಂಬೆನು. ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಶುಕ್ಲಶೋಣಿತಾತ್ಮಸಂಬಂಧವಾದ ಮಾತಾ ಪಿತರುಗಳ ಕಾಮವಿಕಾರದಿಂದ ಪುಟ್ಟಿದ ಪಿಂಡಕ್ಕೆ, ಅಂಗೈಯೊಳಗೆ ಇರುವ ಪರಿಯಂತರವಾಗಿ ಜಡೆಯ ಕೂಸೆಂಬುವರು. ಅಂಬೆಗಾಲಲಿ ನಡೆಯುವಾಗ ಹುಡುಗನೆಂಬುವರು. ಎದ್ದು ಕಾಲಲಿ ನಡೆಯುವಾಗ ಪೋರನೆಂಬುವರು ಒಳ ಹೊರಗೆ ಓಡಾಡುವಾಗ ಹೆಸರುಗೊಂಡು ಬಾರಲೇ ಹೋಗಲೆಯೆಂಬುವರು. ಷೋಡಶವರುಷಕ್ಕೆ ತಮ್ಮಾ ಅಪ್ಪಾ ಎಂದು ಕರೆವರು. ಪಂಚವಿಂಶತಿವರುಷಕ್ಕೆ ಅಣ್ಣಾ ಅಪ್ಪಾ ಎಂದು ಕರೆವರು. ಮೂವತ್ತುವರುಷದಿಂ ಐವತ್ತುವರುಷತನಕ ಅಪ್ಪನವರು ಎಂದು ಕರೆವರು, ನೆರೆಯೊಡೆದ ಮೇಲೆ ಹಿರಿಯರೆಂಬುವರು. ಹಲ್ಲುಬಿದ್ದ ಮೇಲೆ ಮುದುಕನೆಂಬುವರು. ಬೆನ್ನುಬಾಗಿ ಕಣ್ಣು ಒಳನಟ್ಟು ಗೂಡುಗಟ್ಟಿ ಗೂರಿಗೂರಿ ಮುಕುಳಿ ನೆಲಕ್ಕೆಹತ್ತಲು ಮುದೋಡ್ಯಾ ಎಂಬುವರು. ಇಂತೀ ನಾಮಂಗಳು ಆತ್ಮಂಗೆ ದೇಹಸಂಗದಿಂದ ಪುಟ್ಟಿದವಲ್ಲದೆ ಆ ದೇಹದೊಳಗಿರುವ ಆತ್ಮನು ಕೂಸಲ್ಲ, ಪೋರನಲ್ಲ, ಹಿರಿಯನಲ್ಲ, ಮುದುಕನಲ್ಲ. ಈ ಭೇದವ ನಿಮ್ಮ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಿಂದು ನಾದವನೊಂದು ರೂಪು ಮಾಡಿ ಮನವ ಸಂದ್ಥಿಸಿ ಬಂದ್ಥಿಸಿ ನಿಲಿಸಿ ಇಂದ್ರಿಯಂಗಳನೇಕಮುಖವ ಮಾಡಿ ಚಂದ್ರ ಸೂರ್ಯರನೊಂದು ಮಾರ್ಗದಲ್ಲಿ ನಡೆಸಿ ಚೌದಳಮಧ್ಯದ ಜ್ಞಾನಪೀಠದಲ್ಲಿರ್ದ ಅಮೃತಲಿಂಗವ ಕಂಡು ಕೂಡುವ ಬೆಡಗಿನ ಯೋಗವ ನಿಮ್ಮ ಶರಣರಲ್ಲದೆ ಉಳಿದ ಭವರೋಗಿಗಳೆತ್ತ ಬಲ್ಲರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?
--------------
ಸ್ವತಂತ್ರ ಸಿದ್ಧಲಿಂಗ
ಸ್ಥಾವರಲಿಂಗ ಜಂಗಮವೆಂಬುದನಾರು ಬಲ್ಲರಯ್ಯಾ, ಬಸವಣ್ಣನಲ್ಲದೆ ? ಎಲ್ಲಿ ಸ್ಥಾವರವಿದ್ದಲ್ಲಿ ನೋಡಲಾಗದು, ಮನದಲ್ಲಿ ನೆನೆಯಲಾಗದು. ಲಿಂಗಕ್ಕಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಲಿಂಗವುಂಟೆ ? ಗುರುವಿಂಗಾದಡೆಯೂ ಜಂಗಮಬೇಕು, ಜಂಗಮವಿಲ್ಲದ ಗುರುವುಂಟೆ ? ಎಲ್ಲಿ ಜಂಗಮವಿದ್ದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಅನುಭಾವ ಸನ್ನಹಿತವಾಗಿಹುದು. ಇಂತಿವರ ಭೇದವ ಬಸವಣ್ಣ ಬಲ್ಲನು. ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯೊಳೆದ್ದು, ನಮೋ ನಮೋ ಎಂಬೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತಂದೆಯ ಸದಾಚಾರ ಮಕ್ಕಳೆಂಬರು, ಗುರುಮಾರ್ಗಾಚಾರ ಶಿಷ್ಯನದೆಂಬರು. ಮೇಲು ಪಂಕ್ತಿಯ ಕಾಣರು ನೋಡಾ. ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು. ಕತ್ತಲೆಯ ಮರೆಯಲ್ಲಿ ಕಾಣರು ನೋಡಾ. ತತ್ವದ ಹಾದಿಯನು, ಭಕ್ತಿಯ ಭೇದವನು, ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಬ್ರಹ್ಮಸ್ಥಾನದಲ್ಲಿ ಜ್ಯೋತಿರ್ಲಿಂಗವಿಪ್ಪುದನರಿತು, ಕ್ರೀವೆರಸಿ ನಿಃಕ್ರೀಯಲ್ಲಿ ನಿಂದು ಕ್ರಮದಿಂದೂಧ್ರ್ವಕ್ಕೆಯ್ದಲು ಮಹಾಲಿಂಗದ ಬೆಳಗು, ಪೃಥ್ವಿಯಂ ಮುಸುಕಿ, ಅಪ್ಪುವನೀಂಟಿ, ಅಗ್ನಿಯಂ ದಹಿಸಿ, ವಾಯುವಂ ನುಂಗಿ, ಆಕಾಶಕ್ಕಳವಲ್ಲದೆ ಸ್ಥಲನಿಸ್ಥಲವನೆಯ್ದಿ ಶೂನ್ಯಾವಸ್ಥೆಯಲ್ಲಿ ನಿಂದ ನಿಲವ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲದೆ ಅರಿವು ಮರಹನೊಳಕೊಂಡಿಪ್ಪ ಅಜ್ಞಾನಿಗಳೆತ್ತ ಬಲ್ಲರಯ್ಯಾ ?
--------------
ಆದಯ್ಯ
ಪಾದೋದಕ ಪಾದೋದಕವೆಂದು ಕೊಂಬಿರಿ, ಎಲ್ಲರಿಗೆ ಎಲ್ಲಿಹುದೋ ಪಾದೋದಕ ? ಈ ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಪಾದೋದಕವೆಂಬುದು ಪಾತಾಳಾದಿ ಪರಲೋಕಾಂತ್ಯಮಾದ ಅಖಿಳಕೋಟಿ ಬ್ರಹ್ಮಾಂಡಗಳ ಗಬ್ರ್ಥೀಕರಿಸಿಕೊಂಡಿರ್ದ ಪರಿಪೂರ್ಣತ್ವವೇ ಪಾದೋದಕ. ಪಾದೋದಕವೆಂಬುದು ಶರಣನ ಸರ್ವಾಂಗವನೊಳಕೊಂಡು ಥಳಥಳಿಸಿ ಹೊಳೆಯುವ ಚಿದ್ರಸವೇ ಪಾದೋದಕ. ಇಂತಪ್ಪ ಪಾದೋದಕದ ಭೇದ ಬಲ್ಲವರು ನಿಜಗುಣಸ್ವಾಮಿಗಳು ಅಜಗಣ್ಣ ತಂದೆಗಳು ನಿಜಮಂಚಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳು ಬಲ್ಲರಲ್ಲದೆ, ಸತ್ತುಹೋಗುವ ಹೇಸಿಮೂಳ ಕತ್ತಿಗಳೆತ್ತ ಬಲ್ಲರಯ್ಯಾ ? ಇಂತಪ್ಪ ಪರಾಪರ ನಾಮವನುಳ್ಳ ಪರಂಜ್ಯೋತಿಸ್ವರೂಪವಾದ ಪರತತ್ವ ಪಾದೋದಕವನರಿದು ಕೊಡಬಲ್ಲರೆ ಗುರುಲಿಂಗಜಂಗಮವೆಂದೆನ್ನಬಹುದು. ಇಂತೀ ವಿಚಾರವ ತಿಳಿದುಕೊಳ್ಳಬಲ್ಲರೆ ಸತ್ಯಸದ್ಭಕ್ತರೆಂದೆನ್ನಬಹುದು. ಇಂತಪ್ಪ ಭೇದವನರಿಯದೆ ಮತಿಭ್ರಷ್ಟ ಮರುಳಮಾನವರು ಆಣವಾದಿ ಕಾಮಿಕಾಂತ್ಯಮಾದ ಮಲತ್ರಯದ ಬಲೆಯಲ್ಲಿ ಶಿಲ್ಕಿ, ದೇಹಾದಿ ಮನಾಂತ್ಯಮಾದ ಅರುವತ್ತಾರುಕೋಟಿ ಕರಣಾದಿ ಗುಣಂಗಳು ಮೊದಲಾದ ಸಕಲಸಂಸಾರವಿಷಯಲಂಪಟದಲ್ಲಿ ಮಗ್ನರಾಗಿ, ಮಂದಮತಿ ಅಧಮ ಜಂಗಮದ ಕಾಲ ತ್ರಿಕಾಲದಲ್ಲಿ ಜಲದಿಂದ ತೊಳೆದು ಪಾದೋದಕವೆಂದು ಬಟ್ಟಲ ಬಟ್ಟಲ ತುಂಬಿ ನೀರ ಕುಡಿದು ತಮ್ಮ ದೇಹದ ಪ್ರಾಣಾಗ್ನಿಯ ತೃಷೆಯನಡಗಿಸಿಕೊಂಡು ಗಳಿಗೆ ತಾಸಿನ ಮೇಲೆ ಮೂತ್ರವಿಸರ್ಜಿಸಿ ಮಡಿಮೈಲಿಗೆಯೆಂದು ನುಡಿಯುವ ಮಲದೇಹಿಗಳ ಮೂಗ ತುಟಿತನಕ ಕೊಯ್ದು ಇಟ್ಟಂಗಿಯಲೊರಸಿ ಕಟಬಾಯಿ ಸೀಳಿ ಕನ್ನಡಿಯತೋರಿ ಮೇಲಮುಂದಾಗಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿ ಅನಾದಿಯಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು, ಶ್ರುತಿ ಸ್ಮøತಿಗಳು ತಲೆದೋರದಂದು, ಚತುರ್ದಶಭುವನಂಗಳ ರಚನೆ ರಚಿಸದಂದು, ಲಯಭೋಗಾದಿ ಕರಣಂಗಳಲ್ಲಿಯ ತತ್ವಪ್ರಭಾವ ಮೂರ್ತಿಗಳೆಂಬ ಅರಿವು ಕುರುಹಿಗೆ ಬಾರದಂದು, ತಿಥಿ, ವಾರ, ನಕ್ಷತ್ರ, ಯೋಗ, ಕರಣಂಗಳೆಂಬ ಪಂಚಾಂಗ ಲಗ್ನವಿಲ್ಲದಂದು, ಅನುಪಮ ಅಸಾಧ್ಯ ಅಭೇದ್ಯ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜವನಾರು ಬಲ್ಲರಯ್ಯಾ.
--------------
ಆದಯ್ಯ
ರಾತ್ರಿಯಲ್ಲಿ ಬಹುಕುಲದಲ್ಲಿ ಪುಟ್ಟಿದೆ. ಹಗಲಿನಲ್ಲಿ ಒಂದು ಕುಲದಲ್ಲಿ ಪುಟ್ಟಿದೆ. ಉಭಯವಿಲ್ಲದಕಾರಣ ಆವಲ್ಲಿ ನಾ ಪುಟ್ಟಿದೆನೆಂಬುದ ನೀ ಬಲ್ಲೆಯಲ್ಲದೆ ಇವರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮರ್ಕಟ ದರ್ಪಣವ ಹಿಡಿದು ನೋಡಿ ತನ್ನ ಪ್ರತಿಬಿಂಬವ ಕಂಡು ದರ್ಪಣವ ಮರ್ಕಟವೆಂದು ಬಗೆದೇಡಿಸಲನುಗೆಯ್ವಂತೆ, ಮನೋವಿಕಾರದಿಂ ಪ್ರಕೃತಿವಿಡಿದು ಚರಿಸುತಿರ್ಪ ಮತ್ರ್ಯದ ಮನುಜರು ಪ್ರಕೃತಿ ನಿಃಕಂಪನವಾದ ಪರಮಾನುಭಾವಿಗಳಪ್ಪ ಪರಮಲಿಂಗೈಕ್ಯರ ಅನುವನರಿಯದೆ, ಬಾಯಿಗೆ ಬಂದಂತೆ ಒಂದೊಂದ ನುಡಿವ ಮಂದಮತಿಗಳಪ್ಪ ಸಂದೇಹಿಗಳು ನಿಮ್ಮನೂ ತಮ್ಮನೂ ತಾವೆತ್ತ ಬಲ್ಲರಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಮನೋಮಧ್ಯದಲ್ಲಿ ಒಂದು ಶಶಿ ಸಂಧಾನದ ಕಳೆ ಸಂದ್ಥಿಸಿ ಅರುಣೋದಯವಾದಂತಿದೆ ಇದೇನಯ್ಯ? ಅದು ಎನ್ನ ಭಾಗ್ಯದಿಂದ ಮತಿಪ್ರಕಾಶನವಾಯಿತ್ತಯ್ಯ. ಆ ಪ್ರಸನ್ನ ಪ್ರಸಾದವನೊಳಕೊಂಡು, ಉತ್ತಮೋತ್ತಮವಾಗಿ ನಿಮಗೆ ಸಲುವಳಿಯಾದುದನು ಆರು ಬಲ್ಲರಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->