ಅಥವಾ

ಒಟ್ಟು 48 ಕಡೆಗಳಲ್ಲಿ , 15 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ ಸಮರಸದಲ್ಲಿ! ಉದಯದ ಬೆಳಗನು ಮದಗಜ ಒಳಕೊಂಡು ಮಾವತಿಗನ ನುಂಗಿ ಉಗುಳದಲ್ಲಾ! ಸದಮದ ಭರಿಕೈಯೊಳಗೆ ಈರೇಳು ಭುವನವನು ಒದರಿ ಹಾಯ್ಕಿ ತಾನೆ ನಿಂದುದಲ್ಲಾ! ಸದಮಲಜಾÕನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಸ್ವಯವಾಯಿತ್ತು
--------------
ಚನ್ನಬಸವಣ್ಣ
ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು, ಅಡಿಗೆಯ ಮಾಡಿಸಿದಾತ ಬಸವಣ್ಣ. ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರ ಹಿಡಿತಂದು, ದಹಿಸಿದಾತ ಬಸವಣ್ಣ. ರುದ್ರರ ರುದ್ರಗಣಂಗಳ ಹಿಡಿತಂದು, ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ. ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಮಾಟ ಮದುವೆಯ ಮನೆ. ದಾನಧರ್ಮ ಸಂತೆಯ ಪಸಾರ, ಸಾಜಸಾಜೇಶ್ವರಿ ಸೂಳೆಗೇರಿಯ ಸೊಬಗು. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ. ಭಕ್ತಿಯೆಂಬುದು ಬಾಜಿಗಾರರಾಟ. ಬಸವಣ್ಣಗೆ ತರ ; ನಾನರಿಯದೆ ಹುಟ್ಟಿದೆ, ಹುಟ್ಟಿ ಹುಸಿಗೀಡಾದೆ. ಹುಸಿ ವಿಷಯದೊಳಡಗಿತ್ತು, ವಿಷಯ ಮಸಿಮಣ್ಣಾಯಿತ್ತು. ನಿನ್ನ ಗಸಣೆಯನೊಲ್ಲೆ ಹೋಗಾ, ಚೆನ್ನಮಲ್ಲಿಕಾರ್ಜುನಾ,
--------------
ಅಕ್ಕಮಹಾದೇವಿ
ಯುಗವನೊಗೆದಾತ, ಯುಗವನೆಲ್ಲವ ಮಾಡಿದಾತ ರುದ್ರನ ಜಡೆಯ ಸುತ್ತಿದ ಫಣಿಯ ಬಿಳಿದು ಮಾಡಿದಾತ ಇವನೆಲ್ಲವ ಬಿಳಿದು ಮಾಡಿ ಬಸವಣ್ಣಂಗೆ ಸೂತ್ರಧಾರಿಯಾದ ಮಡಿವಳ ಮಾಚಯ್ಯನ ನೆನೆದಾಡುತ್ತಿರ್ದೆ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
--------------
ಬಹುರೂಪಿ ಚೌಡಯ್ಯ
ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. ಅಕ್ಕನಾಗಾಯಿ ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮೊಗವಾಡದ ಕೇಶಿರಾಜ ಕೋಲಶಾಂತಯ್ಯ ಮೊದಲಾದ ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು. ಆ ಬಯಲ ಪ್ರಸಾದದಿಂದ, ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು. ಆ ಬಯಲ ಪ್ರಸಾದದಿಂದ, ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ ಮೇದರ ಕೇತಯ್ಯ ಮೊದಲಾದ ಏಳುನೂರೆಪ್ಪತ್ತು ಅಮರಗಣಂಗಳ ದಂಡು, ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು. ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ, ಕಲಿದೇವರದೇವಯ್ಯಾ, ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು.
--------------
ಮಡಿವಾಳ ಮಾಚಿದೇವ
ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ ಅನ್ಯವೆಂದಣುಮಾತ್ರವಿಲ್ಲ ನೋಡಯ್ಯಾ. ಭಕ್ತನ ಮಠವೆ ತನ್ನ ಮಠವೆಂದು ಮುನ್ನವೆ ಅರಿದರಿದು ಬಂದು, ಮತ್ತೊಂದ ಮತ್ತೊಂದ ನೆನೆವರೆ ? ಬಸವಪ್ರಿಯ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ಸ್ವತಂತ್ರಭಾವವುಳ್ಳಡೆ ನಿಮ್ಮ ಪಾದದಾಣೆ.
--------------
ಸಂಗಮೇಶ್ವರದ ಅಪ್ಪಣ್ಣ
ಅಹುದಹುದು ಇಂತಿರಬೇಡವೆ ನಿರಹಂಕಾರ. ಮಹಾಜ್ಞಾನಕ್ಕೆ ನಿರಹಂಕಾರವೆ ಶೃಂಗಾರ. ನಿರಹಂಕಾರಕ್ಕೆ ಭಕ್ತಿಯೆ ಶೃಂಗಾರ. ಭಕ್ತಿಗೆ ಬಸವಣ್ಣನೆ ಶೃಂಗಾರ. ಬಸವಣ್ಣಂಗೆ ಚೆನ್ನಬಸವಣ್ಣನೆ ಶೃಂಗಾರ. ಕಲಿದೇವರದೇವಾ, ಎನಗೆಯೂ ನಿನಗೆಯೂ ಚೆನ್ನಬಸವಣ್ಣನೆ ಶೃಂಗಾರ.
--------------
ಮಡಿವಾಳ ಮಾಚಿದೇವ
ನಂದಿ ದೇವಂಗೆ, ಖಳ ಸಿರಿಯಾಳಂಗೆ, ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ, ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ? ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಪಣ, ಒಬ್ಬಂಗೆ ತನು ಮನ ಧನದ ರಪಣ. ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅನಿಮಿಷನ ಕೈಯ ಲಿಂಗವನಲ್ಲಮ ಕೊಂಡುದಿಲ್ಲಾಗಿ, ಆದಿಯಲ್ಲಿ ಬಸವಣ್ಣಂಗೆ ಗುರುಲಿಂಗವಿಲ್ಲಾಗಿ, ಬಸವ-ಚೆನ್ನಬಸವಂಗೆ ಕಾರಣವಿಲ್ಲಾಗಿ, ಇವರಾರೆಂಬುದ ಕೇಳಿದ್ದು ಇಲ್ಲ ಇಲ್ಲಾ ಎಂದನು. ಇವರಿಬ್ಬರ ಸಾಹಿತ್ಯ ಇಲ್ಲೆಂಬುದ ಕಂಡು ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದನು.
--------------
ಘಟ್ಟಿವಾಳಯ್ಯ
ಭಕ್ತನಾದಡೆ ತನುಮನದಾಸೆಯಳಿದುಳಿದಿರಬೇಕು. ಮಹೇಶ್ವರನಾದಡೆ ಪರಧನ ಪರಚಿಂತೆ ಪರಾಂಗನೆಯರೆಡೆಯಳಿದಿರಬೇಕು. ಪ್ರಸಾದಿಯಾದಡೆ ಸುಖರುಚಿಯ ಗ್ರಹಣ ಮರೆದು, ಪ್ರಸಾದ ಪುಟವಳಿಯದೆ ಉಳಿದಿರಬೇಕು. ಪ್ರಾಣಲಿಂಗಿಯಾದಡೆ ಘಟದಾಸೆಯಂ ತೊರೆದು, ಪ್ರಾಣಲಿಂಗದೊಳಗೆ ಬೆರಸಿ ಬೇರಿಲ್ಲದಿರಬೇಕು. ಶರಣನಾದಡೆ ಸತಿಯ ಸಂಗವಳಿದು, ಲಿಂಗಕ್ಕೆ ತಾಯಾಗಿರಬೇಕು. ಲಿಂಗೈಕ್ಯನಾದಡೆ ಆಪ್ಯಾಯನಮಡಸಿ, ಸುಖದುಃಖಮಂ ತಾಳಿ ನಿಭ್ರಾಂತನಾಗಿರಬೇಕು. ಮಾತಿನ ಮೋಡಿಯಲ್ಲಿ ಸಿಲ್ಕದು ಶಿವಾಚಾರ. ಇಂತೀ ಷಡುಸ್ಥಲವಾರಿಗೂ ಅಳವಡದು. ಸೊಡ್ಡಳದೇವನು, ಷಡುಸ್ಥಲಭಕ್ತಿಯನು ಬಸವಣ್ಣಂಗೆ ಮೂರ್ತಿಯ ಮಾಡಿದನು.
--------------
ಸೊಡ್ಡಳ ಬಾಚರಸ
ಪ್ರಮಥಗಣಂಗಳ ಪ್ರಸಾದಕೊಂಡದಲ್ಲಿ ಅಡಗಿದ ಗೊತ್ತ ಆರೂ ಅರಿಯರಲ್ಲ, ಬಸವಣ್ಣಂಗೆ ಪ್ರಭುದೇವರು ತೋರಿ ಕೊಟ್ಟನು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತಿಸೂತ್ರ ಬಸವಣ್ಣಂಗೆ, ಭಾವಸೂತ್ರ ಚೆನ್ನಬಸವಣ್ಣಂಗೆ, ಜ್ಞಾನಸೂತ್ರ ಪ್ರಭುದೇವಂಗೆ. ಇಂತೀ ಸ್ಥೂಲತನು ಬಸವಣ್ಣಂಗೆ, ಸೂಕ್ಷ್ಮತನು ಚೆನ್ನಬಸವಣ್ಣಂಗೆ, ಕಾರಣತನು ಪ್ರಭುದೇವಂಗೆ. ಕಾಯ ಬಸವಣ್ಣನಾಗಿ, ಜೀವ ಚೆನ್ನಬಸವಣ್ಣನಾಗಿ, ಉಭಯದರಿವು ಪ್ರಭುದೇವರಾಗಿ. ಇಂತೀ ತ್ರಿವಿಧ ಪ್ರಸಾದ ಎನಗೆ ನಿಂದು, ಎನ್ನ ಜನ್ಮವಾಸನೆ ಬಿಡದಿದೆ ನೋಡಾ. ಈ ವಾಸನೆ ನಿಃಕಳಂಕ ಮಲ್ಲಿಕಾರ್ಜುನ ನಷ್ಟವಾಗಿಯಲ್ಲದೆ, ಎನ್ನ ಭಾವ ನಷ್ಟವಿಲ್ಲ.
--------------
ಮೋಳಿಗೆ ಮಾರಯ್ಯ
ಗುರು ಸ್ವಾಯುತವಾಯಿತ್ತು, ಎಂಟುಭಾವ ಸ್ವಾಯುತವಾಯಿತ್ತು. ಹದಿನಾರುತೆರನ ಭಕ್ತಿ ಸ್ವಾಯುತವಾಯಿತ್ತು. ಅಷ್ಟವಿಧಾರ್ಚನೆ ಸ್ವಾಯುತವಾಯಿತ್ತು. ತ್ರಿವಿಧದ ಅರಿವು ಸ್ವಾಯುತವಾಯಿತ್ತು. ಮಹಾಲಿಂಗದ ನಿಲವು, ಮಹಾಜಂಗಮದ ನಿಜವು ಸ್ವಾಯುತವಾಯಿತ್ತು. ಶುದ್ಭ ಪ್ರಸಾದ ತನು ಸ್ವಾಯುತವಾಯಿತ್ತು. ಸಿದ್ಧಪ್ರಸಾದ ಚೈತನ್ಯ ಸ್ವಾಯುತವಾಯಿತ್ತು. ಪ್ರಸಿದ್ಧಪ್ರಸಾದ ಮನ ಸ್ವಾಯುತವಾಯಿತ್ತು. ವಾಮಭಾಗದಲ್ಲಿ ಮಹವು ಉದಯವಾಯಿತ್ತು. ನಿಜಸ್ಥಾನದಲ್ಲಿ ನಿಂದಿತ್ತು, ಕ್ಷೀರಸ್ಥಾನದಲ್ಲಿ ಸಾರಾಯವಾಯಿತ್ತು. ಅನುಭಾವದಲ್ಲಿ ಘನಾಗಮವೆನಿಸಿತ್ತು. ಸ್ವಾನುಭಾವದಲ್ಲಿ ನಿಮ್ಮ ಬಸವಣ್ಣಂಗೆ ಶರಣೆಂದಿತ್ತು. ನೆಮ್ಮುಗೆವಿಡಿದು ಬಸವಣ್ಣನ ಪ್ರಸಾದವ ಕೊಂಡಿತ್ತು. ನಿಮ್ಮ ಬಸವಣ್ಣನ ಪ್ರಸಾದದಿಂದ ಇಂತಹ ಘನ ಸ್ವಾಯುತವಾಯಿತ್ತು. ನೀವು ಬಸವಣ್ಣನಿಂದಾದಿರಾಗಿ, ಬಸವಣ್ಣಂಗೆ ನಮೋ ನಮೋ ಎನುತಿರ್ದೆನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಬೆನ್ನಲ್ಲಿ ಬಸವಣ್ಣನ ತೆಗೆದ, ಹೊಟ್ಟೆಯಲ್ಲಿ ಎನ್ನ ತೆಗೆದ, ಬ್ರಹ್ಮರಂಧ್ರದಲ್ಲಿ ಅಲ್ಲಮನ ತೆಗೆದ, ಸಂಗನೆ ಮಡಿವಾಳನೊ, ಮಡಿವಾಳನೆ ಸಂಗನೊ, ಎಂದು ನುಡೆಯಲಮ್ಮೆನು. ಇದು ಕಾರಣ_ಕೂಡಲಚೆನ್ನಸಂಗಯ್ಯನಲ್ಲಿ ಮಡಿವಾಳಸಾಹಿತ್ಯ ನಮ್ಮ ಬಸವಣ್ಣಂಗೆ.
--------------
ಚನ್ನಬಸವಣ್ಣ
ಇನ್ನಷ್ಟು ... -->