ಅಥವಾ

ಒಟ್ಟು 55 ಕಡೆಗಳಲ್ಲಿ , 29 ವಚನಕಾರರು , 50 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟಬಯಲಿನಲ್ಲಿ ಒಂದು ಮರ ಹುಟ್ಟಿತ್ತು. ಅದಕ್ಕೆ ಸುತ್ತಲು ಬೇರು ಆವರಿಸಿತ್ತು. ಅದಕ್ಕೆ ಶತಕೋಟಿ ಕೊನೆ ಬಿಟ್ಟಿತ್ತು. ಅಡಗಿದ ಬೇರನೆ ಸವರಿ, ಶತಕೋಟಿ ಕೊನೆಯನೆ ಕಡಿಯೆ, ಮರ ಒಣಗಿತ್ತು, ಉಲುಹು ನಿಂದಿತ್ತು, ಎಲೆ ಉದುರಿತ್ತು. ತರಗೆಲೆಯಾದ ಶರಣರ ಚರಣವಿಡಿದು ನಿಜಮುಕ್ತಳಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾಯ ನರಿಯ ಮಧ್ಯದಲ್ಲಿ ನಾರಿವಾಳದ ಸಸಿ ಹುಟ್ಟಿತ್ತು. ಐದು ಗೇಣು ಉದ್ದ ಎಂಟು ಗೇಣು ವಿಸ್ತೀರ್ಣ. ಅದರ ಬೇರು ಪಾತಾಳಕ್ಕೆ ಇಳಿಯಿತ್ತು; ಬೇರಿನ ಮೊನೆ ನೀರ ತಿಂದಿತ್ತು; ನೀರ ಸಾರ ತಾಗಿ ಮರನೊಡೆಯಿತ್ತು, ಮಟ್ಟೆ ಇಪ್ಪತ್ತೈದಾಗಿ ಹೊಂಬಾಳೆ ಬಿಟ್ಟಿತ್ತು; ಹದಿನಾರು ವಳಯದಲ್ಲಿ ಕಾಯಿ ಬಲಿದವು. ಮೂರು ದಿಸೆಯಲ್ಲಿ ಆ ಮರವ ಹತ್ತಿ ಕಾಯ ಕೆಡಹುವರಿಲ್ಲ. ವಾಯವಾಯಿತ್ತು ಮರಹುಟ್ಟಿ ಮರದ ಕೆಳಗಿದ್ದು ಹಣ್ಣಿನ ಹಂಬಲು ಹರಿವುದ ನೋಡುತ್ತಿದ್ದೇನೆ. ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಬೇರು ಇಲ್ಲದ ಮರ ಹೋಗಿ ಆದಿಯ ಸೇರಿತ್ತಯ್ಯ, ಆ ಮರಕ್ಕೆ ಐದು ಕೊಂಬೆಗಳು ಬೆಳೆದಿರ್ಪವು ನೋಡಾ. ಬ್ರಹ್ಮವೊಂದನೇರಿದ, ವಿಷ್ಣುವೊಂದನೇರಿದ, ರುದ್ರವೊಂದನೇರಿದ, ಈಶ್ವರನೊಂದನೇರಿದ, ಸದಾಶಿವನೊಂದನೇರಿದ- ಈ ಐದು ಕೊಂಬೆಗಳ ಮೆಟ್ಟಿ ತುಟ್ಟತುದಿಯಲೊಂದು ಬಟ್ಟಬಯಲ ಹಣ್ಣಾಗಿಪ್ಪುದು ನೋಡಾ ! ಆ ಹಣ್ಣ ಸವಿಯಲೊಡನೆ, ಹಣ್ಣಿನ ಒಡೆಯ ಬಂದು ಸವಿದಾತನ ನುಂಗಿದ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುಪ್ರಸಾದಿಯಾದಡೆ ಬಡತನ ಎಡರು ಕಂಟಕಂಗಳು ಬಂದು ತಾಗಿದಲ್ಲಿ ಧೈರ್ಯಗುಂದದಿರಬೇಕು. ಲಿಂಗಪ್ರಸಾದಿಯಾದಡೆ ಉಪಾದ್ಥಿಯಿಂದ ಪರರಿಗೆ ಬಾಯ್ದೆರೆಯದಿರಬೇಕು. ಜಂಗಮಪ್ರಸಾದಿಯಾದಡೆ ಅಂಗಕ್ಕೆ ವ್ಯಾದ್ಥಿ ಸಂಘಟಿಸಿದಲ್ಲಿ ನಾರು ಬೇರು ವೈದ್ಯವ ಕೊಳ್ಳದಿರಬೇಕು. ಇಂತೀ ಪ್ರಸಾದದ ಘನವನರಿಯದ ಸಂತೆಯ ಸೂಳೆಯ ಮಕ್ಕಳಿಗೆ ಎಂತು ಮೆಚ್ಚುವನಯ್ಯ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಅರಿಯದವಂಗೆ ಅರಿದಿಹೆನೆಂಬ ಬಯಲರೋಗ ಹುಟ್ಟಿ, ಕಾಲುಗೆಟ್ಟು ದೃಷ್ಟಿ ನಷ್ಟವಾಗುತ್ತಿದೆ ನೋಡಾ ! ಅದಕ್ಕೆ ನಾನೊಂದ ಮದ್ದ ಕಂಡೆ. ಹೆಸರಿಲ್ಲದ ಗಿಡ, ಮೂಲವಿಲ್ಲದ ಬೇರು. ಎಲೆ ಹೂ ನಷ್ಟವಾದ ಚಿಗುರಿನ ಕುಲಗೆಟ್ಟು, ಸಹಮೂಲಮಂ ತಂದು, ಆ ಕಲ್ಲಿನಲ್ಲಿ ಇಕ್ಕಿ ನೀರನೆರೆದು, ಆ ಗುಂಡಿನಲ್ಲಿ ಹಾಗರೆಯಲಾಗಿ, ತಟ್ಟೆಯಲ್ಲಿ ಇಕ್ಕುವದಕ್ಕೆ ಮೊದಲೆ, ಮದ್ದಿನ ದೃಷ್ಟ ನಷ್ಟವಾಯಿತ್ತು , ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.
--------------
ವೈದ್ಯ ಸಂಗಣ್ಣ
ಗುಣತ್ರಯಂಗಳನಳಿದ ನಿರ್ಗುಣನ ಮೇಲೆ ನಿರ್ವಯಲು ಬಂದೆರಗಿತ್ತು ನೋಡಾ. ನಿರ್ವಯಲು ಬಂದೆರಗಿದ ರಭಸಕ್ಕೆ ವಿಶ್ವಪ್ರಪಂಚು ಎದ್ದೋಡಿದವು. ಕರಣಂಗಳೆಂಬ ಕಳ್ಳರು ಕಾಲುಗೆಟ್ಟರು ನೋಡಾ. ತನುತ್ರಯಂಗಳೆಂಬ ತ್ರಿಪುರದ ಕೀಲು ಹರಿಯಿತ್ತು. ಕಾಮ ಕಾಲರ ಊಳಿಗದ ಉಪಟಳ ಎದ್ದೋಡಿತ್ತು ನೋಡಾ. ಆತ್ಮತ್ರಯಂಗಳ ಅಹಂಕಾರದ ಬೇರು ಸಂಹಾರವಾಗಿ ಪ್ರಕೃತಿತ್ರಯಂಗಳ ಪ್ರಪಂಚು ಕೆಟ್ಟು ಜೀವ ಪರಮರೆಂಬ ಭಾವ ಸತ್ತಿತ್ತು. ಜೀವ ಪರಮರೆಂಬ ಭಾವ ಸತ್ತಿತ್ತಾಗಿ ನಿರ್ಗುಣ ಲಿಂಗೈಕ್ಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಎನ್ನ ಭವದ ಬಳ್ಳಿಯ ಬೇರು ಹರಿಯಿತ್ತಯ್ಯಾ ಸಂಗನಬಸವಣ್ಣನ ಒಕ್ಕುದ ಕೊಂಡೆನಾಗಿ. ಎನ್ನ ಮನದ ಕಪಟ ಹಿಂಗಿತ್ತಯ್ಯಾ ಚೆನ್ನಬಸವಣ್ಣನ ಕರುಣವ ಪಡೆದೆನಾಗಿ. ಎನ್ನಂತರಂಗದ ಸಂದುಸಂಶಯ ತೊಲಗಿತ್ತಿಂದು ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ಎನ್ನ ಪರಮಗುರು ಅಲ್ಲಮಪ್ರಭುದೇವರ ಶ್ರೀ ಚರಣವ ಕಂಡೆನಾಗಿ.
--------------
ನಾಗಲಾಂಬಿಕೆ
ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ? ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ? ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು. ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ ನಿಶ್ಚಯವನರಿಯಬಾರದು, ಗುರುವಾದಡೂ ಲಿಂಗವಾದಡೂ ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ, ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟಿ; ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ? ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು, ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.
--------------
ಶ್ರೀ ಮುಕ್ತಿರಾಮೇಶ್ವರ
ಆತ್ಮ ಘಟದಲ್ಲಿ ನಿಂದಿಹ ಭೇದ : ನೀರು ಮಣ್ಣಿನಂತೆ, ಬೇರು ಸಾರದಂತೆ ಗಂಧ ತರುವಿನಂತೆ ಒಂದ ಬಿಟ್ಟೊಂದ ಹಿಂಗಿರವಾಗಿ, ಅಂಗ ಲಿಂಗ ಪ್ರಾಣಯೋಗ ಸಂಬಂಧ ಸಂದಿಲ್ಲ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಊರೊಳಗಣ ಘನಹೇರಡವಿಯೊಳೊಂದು ಬೇರು ಮೇಲು, ಕೊನೆ ಕೆಳಗಾಗಿ ಸಸಿ [ಹುಟ್ಟಿತ್ತು] ಆರೈದು ನೀರನೆರೆದು ಸಲುಹಲಿಕ್ಕೆ, ಅದು ಸಾರಾಯದ ಫಲವಾಯಿತ್ತಲ್ಲಾ ! ಬಾರುಗೊಂಬಿನಲುದುರಿದ ಹಣ್ಣ ಮೆಲಿದವ ಘೋರ ಸಂಸಾರಭವಕ್ಕೆ ಸಿಕ್ಕಿದ. ಬೇರಿಂದಲಾದ ಫಲವ ದಣಿದುಂಡವ, ಊರಿಂದ ಹೊರಗಾದ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಅಂದು ಅರಿಯಲಾದ ಆನಂದ ರೂಪಿನ ನಿಜವನು ತಂದೆನ್ನ ಕರಕ್ಷೇತ್ರದಲ್ಲಿ ಬಿತ್ತಿದ, ಸದ್ಗುರುಸ್ವಾಮಿ. ಕೊಂಬು ಬೇರಾಗಿ ಬೇರು ಕೊಂಬಾಗಿ ಫಲಂಗಳಾರಾದವು. ಆ ಫಲ ಗುರುವಿಂಗೊಂದು ಲಿಂಗಕ್ಕೊಂದು ಉಳಿದ ನಾಲ್ಕ ಜಂಗಮಕ್ಕಿತ್ತು ಹಿಂದು ಮುಂದುಗೆಟ್ಟ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು: ಅದು ಬೇರಿಲ್ಲದೆ, ಆ ಮರನ ಮೀರುವ ಕೊಂಬಿಲ್ಲದೆ, ಕೊಂಬ ಮೀರುವ ಎಲೆಯಿಲ್ಲದೆ, ಎಲೆಯ ಮೀರುವ ಹೂವಿಲ್ಲದೆ, ಹೂವ ಮೀರುವ ಕಾಯಿಯಿಲ್ಲದೆ, ಇದು ಚೆನ್ನಾಗಿ ತಿಳಿದು ನೋಡಿ. ಆ ನೀರು ಬೇರ ನುಂಗಿ, ಬೇರು ವೃಕ್ಷವ ನುಂಗಿ, ಪರ್ಣ ಕುಸುಮವ ಕೊಂಡು, ಕುಸುಮ ಕಾಯವ ಕೊಂಡು, ಕಾಯಿ ಹಣ್ಣನು ಮೆದ್ದಲ್ಲಿ ಭಾವವಳಿಯಿತ್ತು. ಇದನಾರು ಬಲ್ಲರು ? ನಿಃಕಳಂಕ ಮಲ್ಲಿಕಾರ್ಜುನಾ, ನೀನೆ ಬಲ್ಲೆ.
--------------
ಮೋಳಿಗೆ ಮಾರಯ್ಯ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಬೇರು ಮಾಡಿ ನುಡಿದು ಬೇರು ಮಾಡಿ ನಡೆವ ಭಿನ್ನನಲ್ಲ. ಭಿನ್ನವಿಲ್ಲದ ಅಂತರಂಗದಲ್ಲಿ ಅರಿವು ಪರಿಪೂರ್ಣ ಬಸವಣ್ಣ. ಬಹಿರಂಗದಲ್ಲಿ ದಾಸೋಹ ಸಂಪನ್ನ ಬಸವಣ್ಣ. ಮನ ವಚನ ಕಾಯದಲ್ಲಿ ಸದ್ಭಕ್ತಿಸಂಪನ್ನ ಬಸವಣ್ಣ. ಎಡೆದೆರಹಿಲ್ಲದ ಲಿಂಗಸಂಪನ್ನ ಬಸವಣ್ಣ. ಸರ್ವಾಂಗದಲ್ಲಿ ಸರ್ವಾಚಾರಸಂಪನ್ನ ಬಸವಣ್ಣ. ಕೂಡಲಚೆನ್ನಸಂಗನಲ್ಲಿ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಇನ್ನಷ್ಟು ... -->