ಅಥವಾ

ಒಟ್ಟು 43 ಕಡೆಗಳಲ್ಲಿ , 17 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗ ಬಿಟ್ಟು, ನಡೆದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟಕೂಟ ಜಪಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಆಗರದಲ್ಲಿ ಅಡಕೆ ಸಣ್ಣಾದಾಗ ತೋಟದ ಎಲೆ ಉದುರಿತ್ತು. ಉದುರುವುದಕ್ಕೆ ಮೊದಲೆ ಸುಣ್ಣವ ಸುಡುವವ ಸತ್ತ. ಇವರ ಮೂವರ ಹಂಗಿಗತನ ಬಿಟ್ಟಿತ್ತು, ಬಾಯ ಹಂಬಲಿಲ್ಲದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಮೂರರ ಹಂಗ ಬಿಟ್ಟ ಕಾರಣ.
--------------
ಸಗರದ ಬೊಮ್ಮಣ್ಣ
ವಿರಳವಿಲ್ಲದ ಮಣಿಗೆ ದಾರದ ಹಂಗೇಕೆ ? ನಿರವಯಾಂಗಗೆ ಪರಿಭ್ರಮಣವೇತಕ್ಕೆ ? ನಿರಾಳದಲ್ಲಿ ನಿಂದ ಸುಖಿಗೆ ವಿರಾಳದಲ್ಲಿ ಸುತ್ತಿ ತಿರುಹಲೇಕೆ ? ಸಂಸಾರದ ಸುಖದುಃಖಮಂ ಮರೆದು, ಅಂಗ ಮೊದಲು, ಮನವೆ ಕಡೆಯಾಗಿ ಮನುಜರ ಹಂಗ ಬಿಟ್ಟವಂಗೆ ಮನೆಮನೆಯ ಹೊಗಲೇಕೆ ? ತಲೆಹುಳಿತ ದನವಿನಂತೆ ಗಳುವಿನಾಸೆಗಾಗಿ ಇವರಿಗೆ ಲಿಂಗದ ಅನುವಿನ ಆಸೆಯೇಕೆ ? ಘನಮಹಿಮಾ, ಅಲಸಿದೆ ಅಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಪ್ರಮಾಣಿಸಿ ಅವಧರಿಸಿ ಮಾಡುವಂಗೆ, ಮಾಡುವ ದ್ರವ್ಯಕ್ಕೆ ಹೇಗೆಂದು ಮನಗುಂದದಿರಬೇಕು. ನೀಡಿದ ಮತ್ತೆ, ನಿಜವಸ್ತುವಿನಲ್ಲಿರಬೇಕು. ಕೂಡಿದ ಮತ್ತೆ, ಹಿಂದಣ ಹಂಗ ಹರಿದು, ಸಂದಳಿದು ಅಂದಂದಿಗೆ ಬಂದುದ ಕಂಡು, ಬಾರದುದಕ್ಕೆ ಭ್ರಮೆಯಿಲ್ಲದಿರಬೇಕು. ಇಂತೀ ಸ್ಥಲ, ಭಕ್ತಂಗೆ. ಮುಕ್ತಿಯನರಸಿ ಇಪ್ಪವಂಗೆ ಇದೇ ಸತ್ಯಸಮರ್ಪಣ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸದ್ಭಕ್ತಿ ನಿರ್ಲೇಪ.
--------------
ಮೋಳಿಗೆ ಮಾರಯ್ಯ
ವಿಷ ಕೊಲುವಲ್ಲಿ, ಹಾವೇನ ಮಾಡುವುದು ? ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.
--------------
ಸಗರದ ಬೊಮ್ಮಣ್ಣ
ಜಗದೊಳಗೆ ಹುಟ್ಟಿ ಜಗದ ಹಂಗಿಗರಾಗಿ, ನಾವು ಜಂಗಮ, ನಾವು ಭಕ್ತರೆಂಬ ನುಡಿಗೆ ನಾಚರು ನೋಡಾ. ಅಪ್ಪುವಿನ ಘಟನ ಹೊತ್ತುಕೊಂಡು ಅನ್ನಪಾಂಗಳಿಗೆ ಅನುಸರಿಸಿ ನಡೆವುತ್ತ, ಹೊನ್ನು, ಹೆಣ್ಣು, ಮಣ್ಣನೀವವರ ಬಾಗಿಲ ಕಾಯ್ವ ಅಣ್ಣಗಳ ವೇಷಕ್ಕೆ ಶರಣಾರ್ಥಿ. ಅವರ ಆಶಾಪಾಶವ ಕಂಡು, ಹೇಸಿತ್ತೆನ್ನ ಮನವು. ಅದಂತಿರಲಿ, ಅದು ಬ್ರಹ್ಮನ ಹುಟ್ಟು, ವಿಷ್ಣುವಿನ ಸ್ಥಿತಿ, ರುದ್ರನ ಲಯಕ್ಕೊಳಗಾಗಿ ಹೋಯಿತ್ತು ಅಂತಲ್ಲ ಕೇಳಿರಣ್ಣ. ಜಂಗಮವಾದರೆ ಜಗದೊಳಗೆ ಹುಟ್ಟಿ, ಜಗದ ಹಂಗ ಹರಿದು, ಹೊನ್ನು, ಹೆಣ್ಣು, ಮಣ್ಣು ಕಣ್ಣಿಲೆ ನೋಡಿ ಕಾಮಿಸದೆ, ಮನದಲ್ಲಿ ನೆನೆಯದೆ, ಮಾಯವನುಣ್ಣದೆ, ಆಶೆಗೊಳಗಾಗದೆ, ವೇಷವ ಹೊರದೆ, ದೇಶದ ಮನುಜರ ಸುತ್ತಿದ ಪಾಶಕ್ಕೆ ಹೊರಗಾಗಿ ಸುಳಿವ ಜಂಗಮದ ಈಶನೆಂದೆ ಕಾಂಬೆ. ಆ ಜಂಗಮಕ್ಕೆ ಅರ್ಥ, ಪ್ರಾಣ, ಅಬ್ಥಿಮಾನವನೊಪ್ಪಿಸಿ, ತಪ್ಪದೆ ಒಡೆಯನೆಂದರಿದು ಮಾಡುವ ಭಕ್ತನ ಎಂತಿಪ್ಪನೆಂದು ಕಾಂಬೆ. ಇದನೆಂತಾದರೂ ಒಪ್ಪುಗೊಳ್ಳ ಎನ್ನ. ಬಸವಪ್ರಿಯ ಕೂಡಲಚೆನ್ನಸಂಗನ ಬಸವಣ್ಣನಲ್ಲಿ ಶರಣಗಣಂಗಳು.
--------------
ಹಡಪದ ಅಪ್ಪಣ್ಣ
ಕೊಟ್ಟ ಕೂಗಿತ್ತು, ಹಾಲುವಕ್ಕಿ ಬಳಿಯಿತ್ತು, ಹಂಗ ಕಟ್ಟಿತ್ತು; ಅವನ ಅವಳ ಮದುವೆ ನಿಂದಿತ್ತು, ಇವನಿಗಾಯಿತ್ತು. ತಂದ ಮರುದಿನಕ್ಕೆ ಸತ್ತಳವಳು. ಮದುವಳಿಗ ಮಂಡೆಯ ಮೇಲೆ ಸೀರೆಯ ಹಾಕಿಕೊಂಡು, ಕೆಟ್ಟೆ ಕೆಟ್ಟೆ ಕೆಟ್ಟೆನೆಂದು ಹೋಗುತ್ತಿದ್ದನು, ಸದಾಶಿವಮೂರ್ತಿಲಿಂಗದಲ್ಲಿಗೆ.
--------------
ಅರಿವಿನ ಮಾರಿತಂದೆ
ಮಾತಿಲ್ಲದವನ ಕೂಡೆ ಮಾತನಾಡಹೋದಡೆ, ಎನ್ನ ಮಾತಿನ ಪ್ರಸಂಗವ ನುಡಿಯಲೊಲ್ಲ ಬಸವಯ್ಯನು. ಮಾತಿನ ಹಂಗ ಹರಿದು, ಆ ಪ್ರಸಂಗದ ಸಂಗವ ಕೆಡಿಸಿ, ಪರವಶನಾಗಿ ನಿಲಲು ಬಸವಯ್ಯನು, ಸಂಗಯ್ಯನಲ್ಲಿ ಹೆಸರಿಲ್ಲದ ವೃಕ್ಷವನರಿದ ಬಸವಯ್ಯನು.
--------------
ನೀಲಮ್ಮ
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು
--------------
ಆಯ್ದಕ್ಕಿ ಮಾರಯ್ಯ
ಅಂಗಲಿಂಗಸಂಬಂಧವೆಂಬ ದ್ವಂದ್ವವನಳಿದು, ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗ ಹರಿದು, ಸೋಹಂ ಸೋಹಂ ಎನುತ್ತಿದ್ದಿತ್ತು. ಸೋಹಂ ಸೋಹಂ ಎಂಬ ಸುಖದ ಸವಿಯ, ಮಹಾದಾನಿ ಸೊಡ್ಡಳಲಿಂಗವಾರೋಗಣೆಯ ಮಾಡಿ, ನಿಜನಿವಾಸಿಯಾದ ಕಾರಣ, ನಾನು ನಾಮಸೀಮೆಗೆಟ್ಟೆನಯ್ಯ.
--------------
ಸೊಡ್ಡಳ ಬಾಚರಸ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಪ್ರಥಮ ಮೂರು, ಆಶ್ರಯ ನಾಲ್ಕು, ಸ್ಥಲವಾರು, ಯೋಗವೆಂಟು, ಸಂಯೋಗವೆರಡು, ವಿಯೋಗವೊಂದು, ವಿಭೇದವೆರಡು, ಭೇದವೊಂದು, ಅರಿಕೆಯೆರಡು ಅರಿದುದೊಂದು ಆಕಾಶ ಮೂರು ಅವಾಕಾಶವೆರಡು, ಮಹದಾಕಾಶ ನಾಲ್ಕು. ಇಂತಿವೆಲ್ಲವೂ ಮಹಾಪ್ರಕಾಶದ ಪ್ರಭೆ ಪ್ರಜ್ವಲವಾಗಿ ಉಭಯನಾಮರೂಪ ತಾಳ್ದು, ವಂಶ ಮೂರರಲ್ಲಿ ಅಳವಟ್ಟು ಸ್ಥಲವಾರರಲ್ಲಿ ಬೆಳೆದು, ಕುಳವೆಂಟರಲ್ಲಿ ಓಲೈಸಿ ಕುಳ ನಾಲ್ಕರಲ್ಲಿ ಒಕ್ಕಿ, ಫಲ ಮೂರರಲ್ಲಿ ಅಳೆದು ಹಗ ಒಂದರಲ್ಲಿ ತುಂಬಿತ್ತು. ಇಂತೀ ವಿವಿಧ ಸ್ಥಲಂಗಳ ಹೊಲಬನರಿತು ವರ್ತಕಕ್ಕೆ ಕ್ರೀ ಶುದ್ಧ, ಅರಿವಿಂಗೆ ಬಿಡುಗಡೆ ಶುದ್ಧ ಬಿಡುಗಡೆ ಎರಡು ಏಕವಾದಲ್ಲಿ ಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು. || 59 ||
--------------
ದಾಸೋಹದ ಸಂಗಣ್ಣ
ಬಚ್ಚಬರಿಯ ಬೆಳಗ ನೋಡಿಹೆನೆಂದು, ಮನೆಯಾತನ ಮಂಕುಮಾಡಿದೆ ಭಾವನ ಬಯಲ ಮಾಡಿದೆ; ಕಂದನ ಕಣ್ಮುಚ್ಚಿದೆ; ನಿಂದೆ ಕುಂದುಗಳ ಮರೆದೆ; ಜಗದ ಹಂಗ ಹರಿದೆ. ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ ಮಂಗಳದ ಮಹಾಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ ! ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ ! ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ ! ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ ! ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ ಕೂಡಲಸಂಗಮದೇವಾ. 451
--------------
ಬಸವಣ್ಣ
ಇನ್ನಷ್ಟು ... -->