ಅಥವಾ

ಒಟ್ಟು 54 ಕಡೆಗಳಲ್ಲಿ , 25 ವಚನಕಾರರು , 51 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರೊಳಗಣ ಕಿಚ್ಚು ತಾಯಲ್ಲಿ ಅಡಗಿತ್ತು. ಶಿಲೆಯೊಳಗಣ ಕಿಚ್ಚು ತಾಯನುಳುಹಿ, ಇದಿರ ಸುಟ್ಟಿತ್ತು. ಮರದೊಳಗಣ ಕಿಚ್ಚು ಮರನನೂ ಸುಟ್ಚು, ಇದಿರನೂ ಸುಟ್ಟು, ಪರಿಸ್ಪಂದಕ್ಕೆ ಹರಿಯಿತ್ತು. ಇಂತೀ ತ್ರಿವಿಧಭೇದದಿಂದ, ಜ್ಞಾನದ ಭೇದವನರಿ ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ನಿಮ್ಮ ಶ್ರೀಪಾದವ ಮುಟ್ಟಿ ಕರ್ಮ ಹರಿಯಿತ್ತು. ನಿಮ್ಮ ಪ್ರಸಾದದಿಂದ ಭವಗೆಟ್ಟೆ ನೋಡಯ್ಯಾ ! ಮನಪರುಷ, ದೃಷ್ಟಿಪರುಷ, ಭಾವಪರುಷ; ಲಿಂಗಗಣಂಗಳು. ಕೂಡಲಸಂಗಮದೇವಾ, ನಿಮ್ಮ ಶರಣರ ಅನುಭಾವದಿಂದ ಸುಖಿಯಾದೆನು.
--------------
ಬಸವಣ್ಣ
ಸಕಲ ಬಹುಕೃತವೆಂಬ ಗಹನದಲ್ಲಿ, ಜೀವವೆಂಬ ದಂತಿ ತಿರುಗಾಡುತ್ತಿರಲಾಗಿ, ಅರಿವೆಂಬ ಕೇಸರಿ ಅದ ಕಂಡು ಒದಗಿಯೈದಿ, ಮಸ್ತಕದ ಕುಂಭಸ್ಥಲವನೊಡೆದು ಸೇವಿಸುತ್ತಿರಲಾಗಿ, ಶಾರ್ದೂಲ ಹೋಯಿತ್ತು, ಕೇಸರಿ ಬಿಟ್ಟಿತ್ತು , ಗಜ ಬದುಕಿತ್ತು, ಶಾರ್ದೂಲ ಶಂಕೆಯ ಹರಿಯಿತ್ತು . ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಲೀಲೆಗೆ ಹೊರಗಾಗಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಕಂಡು ತವಕ ಸಂಗದಿಂದಳಿವಂತೆ, ನಿನ್ನ ನೋಡುವ ನೋಟ, ಎನ್ನಯ ಮನದ ಕೂಟದಿಂದ ಹರಿಯಿತ್ತು. ಮತ್ತೆ ನಿಮ್ಮಾಸೆ ಮುಟ್ಟುವ ಭೇದ ಬಿಡದು. ನೀವು ರೂಪಾಗಿ, ನಾ ಸಾಕಾರವಾಗಿ ಉಭಯವುಳ್ಳನ್ನಕ್ಕ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವಾಸ ರೂಪಾದೆ.
--------------
ಶಿವಲೆಂಕ ಮಂಚಣ್ಣ
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ ಗುರುವೆಂಬರ್ಚಕನು ತಂದು, ಎನಗಿಷ್ಟವ ಕಟ್ಟಲಿಕೆ, ಹಂಗನೂಲ ಕೊರಳಲ್ಲಿ ಹಾಕಿ ಕಟ್ಟಿಕೋ ಎಂದನು. ಅದು ಎನಗೊಡವೆಯಲ್ಲವೆಂದು ಕಂಠವ ಹಿಡಿದು, ಲಿಖಿತವ ಲೇಖನವ ಮಾಡಿ ಮಾಡಿ ದಣಿದು, ಹಂಗನೂಲ ಹರಿದು ಹಾಕಿದೆನು. ಇಷ್ಟವನಿಲ್ಲಿಯೇ ಇಟ್ಟೆನು. ಅಯ್ಯಾ ನಾ ಹಿಡಿದ ನೀಲಕಂಠನು ಶಕ್ತಿ ಸಮೇತವ ಬಿಟ್ಟನು, ಕಲ್ಯಾಣ ಹಾಳಾಯಿತ್ತು, ಭಂಡಾರ ಸೊರೆಹೋಯಿತ್ತು, ನಿರ್ವಚನವಾಯಿತ್ತು . ಶಾಂತ ಸಂತೋಷಿಯಾದ, ಅರಸರು ನಿರ್ಮಾಲ್ಯಕ್ಕೊಳಗಾದರು. ಅಲೇಖ ನಾಶವಾಯಿತ್ತು, ಪತ್ರ ಹರಿಯಿತ್ತು, ನಾದ ಶೂನ್ಯವಾಯಿತ್ತು ಒಡೆಯ ಕಲ್ಲಾದ ಕಾರಣ, ಎನ್ನೈವರು ಸ್ತ್ರೀಯರು ಉಳಲಾಟಗೊಂಡೇಳಲಾರದೆ ಹೋದರು ಕಾಣಾ, ಕಲ್ಲಿನಾಥಾ.
--------------
ವಚನಭಂಡಾರಿ ಶಾಂತರಸ
ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳೀ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆ ಅರಿದೆನೆಂದು ಆಗಮ ಅಗಲಕ್ಕೆ ಹರಿಯಿತ್ತು. ನೀನೆತ್ತ ನಾನೆತ್ತಲೆಂದು_ ಬೊಮ್ಮ ಬಕ್ಕಟ ಬಯಲು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು. ಮನದ ಸೂತಕ ಮುಟ್ಟಲಾಗಿ ಬಿಟ್ಟಿತ್ತು. ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು !
--------------
ಅಲ್ಲಮಪ್ರಭುದೇವರು
ಅಂದು ನೀ ಬಂದ ಬೆಂಬಳಿಯಲ್ಲಿ ನಾ ಬಂದೆ. ಅಂದಂದಿನ ಸಂದೇಹ ಹರಿಯಿತ್ತು. ನೀ ಭಕ್ತನಾಗಿ ನಾ ಜಂಗಮವಾಗಿ, ಗುಹೇಶ್ವರಲಿಂಗವೆಂಬುದಕ್ಕೆ ಅಂಗವಾಯಿತ್ತು.
--------------
ಅಲ್ಲಮಪ್ರಭುದೇವರು
ಗುಣತ್ರಯಂಗಳನಳಿದ ನಿರ್ಗುಣನ ಮೇಲೆ ನಿರ್ವಯಲು ಬಂದೆರಗಿತ್ತು ನೋಡಾ. ನಿರ್ವಯಲು ಬಂದೆರಗಿದ ರಭಸಕ್ಕೆ ವಿಶ್ವಪ್ರಪಂಚು ಎದ್ದೋಡಿದವು. ಕರಣಂಗಳೆಂಬ ಕಳ್ಳರು ಕಾಲುಗೆಟ್ಟರು ನೋಡಾ. ತನುತ್ರಯಂಗಳೆಂಬ ತ್ರಿಪುರದ ಕೀಲು ಹರಿಯಿತ್ತು. ಕಾಮ ಕಾಲರ ಊಳಿಗದ ಉಪಟಳ ಎದ್ದೋಡಿತ್ತು ನೋಡಾ. ಆತ್ಮತ್ರಯಂಗಳ ಅಹಂಕಾರದ ಬೇರು ಸಂಹಾರವಾಗಿ ಪ್ರಕೃತಿತ್ರಯಂಗಳ ಪ್ರಪಂಚು ಕೆಟ್ಟು ಜೀವ ಪರಮರೆಂಬ ಭಾವ ಸತ್ತಿತ್ತು. ಜೀವ ಪರಮರೆಂಬ ಭಾವ ಸತ್ತಿತ್ತಾಗಿ ನಿರ್ಗುಣ ಲಿಂಗೈಕ್ಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತನಾದರು ಆಗಲಿ, ಗುರುವಾದರು ಆಗಲಿ, ಲಿಂಗವಾದರು ಆಗಲಿ, ಜಂಗಮವಾದರು ಆಗಲಿ, ಈ ಮತ್ರ್ಯದಲ್ಲಿ ಒಡಲುವಿಡಿದು ಹುಟ್ಟಿದ ಮೇಲೆ, ಮಾಯೆಯ ಗೆದ್ದೆ[ಹೆ]ನೆಂದರೆ ಸಾಧ್ಯವಲ್ಲ ಕೇಳಿರಣ್ಣಾ ! ಗೆಲ್ಲಬಹುದು ಮತ್ತೊಂದು ಭೇದದಲ್ಲಿ. ಅದೆಂತೆಂದರೆ:ಭಕ್ತನಾದರೆ ತನುವ ಗುರುವಿಂಗಿತ್ತು, ಮನವ ಲಿಂಗಕ್ಕಿತ್ತು, ಧನವ ಜಂಗಮಕ್ಕಿತ್ತು ಬೆರೆದರೆ, ಮಾಯಾಪಾಶ ಹರಿಯಿತ್ತು. ಇದರ ಗೊತ್ತು ಹಿಡಿವನೆಂದರೆ ಆತನ ಭಕ್ತನೆಂಬೆ. ಗುರುವಾದರೆ ಸಕಲ ಆಗಮಂಗಳನರಿದು, ತತ್ವಮಸಿ ಎಂದು ನಿತ್ಯವ ನೆಮ್ಮಿ, ತನ್ನ ಒತ್ತುವಿಡಿದ ಶಿಷ್ಯಂಗೆ ಪರತತ್ವವ ತೋರಿ, ಪ್ರಾಣಲಿಂಗವ ಕರದಲ್ಲಿ ಕೊಟ್ಟು, ಆ ಲಿಂಗ ಅಂಗವೆಂಬ ಉಭಯದೊಳಗೆ ತಾನಡಗಿ, ತನ್ನೊಳಗೆ ಶಿಷ್ಯನಡಗಿ, ನಾನು ನೀನು ಎಂಬ ಉಭಯ ಎರಡಳಿದರೆ, ಆತನ ಗುರುವೆಂಬೆ. ಜಂಗಮವಾದರೆ ಬಾಯಿಲೆಕ್ಕಕ್ಕೆ ಬಾರದೆ, ಬಂದು ಆಶ್ರಿತವೆನಿಸಿಕೊಳ್ಳದೆ ಆಸೆಯಳಿದು ಲಿಂಗಜಂಗಮವಾಗಿ ನಿರ್ಗಮನಿಯಾಗಿ, ಭರ್ಗೋ ದೇವಸ್ಯ ಎಂಬ, ಏಕೋದೇವ ನ ದ್ವಿತೀಯವೆಂಬ ಶ್ರುತಿಗೆ ತಂದು ತಾ ಪರಮಾನಂದದಲ್ಲಿ ನಿಂದು, ಪರಿಪೂರ್ಣನೆನಿಸಿಕೊಂಡು, ಅಣುವಿಂಗಣು, ಮಹತ್ತಿಂಗೆ ಮಹತ್ತು, ಘನಕ್ಕೆ ಘನವೆಂಬ ವಾಕ್ಯಕ್ಕೆ ಸಂದು, ತಾ ನಿಂದು ಜಗವನೆಲ್ಲವ ಆಡಿಸುವ ಅಂತರಾತ್ಮಕನಾಗಿ ಅಡಗಿದರೆ ಜಂಗಮವೆಂಬೆ. ಅಂತಾದರೆ ಈ ತ್ರಿವಿಧವು ಏಕವಾದುದನರಿದು, ಈ ಲೋಕದ ಕಾಕುಬಳಕೆಗೆ ಸಿಲ್ಕದೆ, ಇಲ್ಲಿ ಹುಟ್ಟಿದವರೆಲ್ಲ ಇವರೊಳಗೆ ಆದರು. ನಾನು ತ್ರಿವಿಧದ ನೆಲೆಯ ಹಿಡಿದುಕೊಂಡು ಇವೆಲ್ಲಕ್ಕೂ, ಹೊರಗಾಗಿ ಹೋದನಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ.
--------------
ಹಡಪದ ಅಪ್ಪಣ್ಣ
ಒಬ್ಬನಿಗಿಬ್ಬರು ಸ್ತ್ರೀಯರು ನೋಡಾ, ಒಬ್ಬಳು ಕಾಯದ ರೂಪೆಯಾಗಿ ಕಾಯವ ಶುದ್ಧವ ಮಾಡುವಳು. [ಆ]ಕಾಯದ ಗುಣವ ಹೊದ್ದಳು ನೋಡಾ. ಮತ್ತೊಬ್ಬಳು ಪ್ರಾಣದ ರೂಪೆಯಾಗಿ ಪ್ರಾಣವ ಶುದ್ಧವ ಮಾಡುವಳು; ಆ ಪ್ರಾಣನ ಗುಣವ ಹೊದ್ದಳು ನೋಡಾ. ಇಬ್ಬರ ಸಂಗದಿಂದ ತಾನೊಬ್ಬ ಸಾಯಲು ಮೂರುಲೋಕದ ತಬ್ಬಿಬ್ಬು ಬಿಟ್ಟು, ಕತ್ತಲೆ ಹರಿಯಿತ್ತು, ತಲ್ಲಣವಡಗಿತ್ತು. ಎಲ್ಲರೂ ನಿರಾಳರಾದರು. ಅವರು ನಿಮ್ಮವರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಲ್ಲನ ಕೂಡಿದ ಸುಖದ ಸುಗ್ಗಿಯ ನಾನೇನೆಂಬೆ ಕೇಳಾ ಕೆಳದಿ. ಸುಖದ ಸವಿ ಸ್ರವಿಸಿ ಹರಿಯಿತ್ತು. ಹೇಳಲು ನಾಚಿಕೆ, ಕೇಳಲೂ ನಾಚಿಕೆ, ಕೇಳಾ ಕೆಳದಿ. ಸುಖರಸ ಮಡುಗಟ್ಟಿದಲ್ಲಿ, ಉರಿಲಿಂಗದೇವನ ಕೂಡಿದ ಸುಖಸಾಗರದಲ್ಲಿ ಕ್ರೀಡಿಸುತಿರ್ದೆ ಕೆಳದಿ.
--------------
ಉರಿಲಿಂಗದೇವ
ಅರಗಿನ ತೇಜಿಯ ಮೇಲೆ ಉರಿಯ ಹಿರಿಯರಸು ಮೂರ್ತಿಗೊಂಡಿರಲು ಮಂಜಿನ ಪರಿವಾರ ಸಂದಣಿಸಿ ಸಂತೈಸಿ ಅವರಂಗಕ್ಕೆ ಬಿಸಿಲಿನ ಜೋಡ ತೊಡಿಸಿ ತಾ ತುರಂಗದ ಮೇಲೆ ಪಶುತಮವೆಂಬ ಖಂಡೆಯವ ಪಿಡಿದು ಚಂಜಿಕಾಕಿರಣದ ಮೇಲೆ ಅಂಗೈಸಿ ಏರಲಾಗಿ ಫೌಜು ಬೆರಸಿತ್ತು. ಉರಿಯರಸು ಎತ್ತಿದ ಖಂಡೆಯ ವರುಣನ ಕಿರಣದೊಳಗೆಬಯಲಾಯಿತ್ತು. ಮಂಜಿನ ಪರಿವಾರ ಆ ರಂಜನೆಯೊಳಡಗಿತ್ತು. ಉರಿಯರಸು ವಾಯುವಿನ ಸಿರಿಯೊಳಗಾದ. ಅರಗಿನ ಅಶ್ವ ಅರಸಿನ ತೊಡೆಯೊಳಗೆ ಹರಿಯಿತ್ತು. ಇಂತೀ ದೊರೆಗೆ ಅರಿ ಇದಿರಿಲ್ಲಾ ಎಂದು ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗಕ್ಕೆ ಇದಿರಿಲ್ಲಾ ಎನುತಿರ್ದೆ.
--------------
ಗೋರಕ್ಷ / ಗೋರಖನಾಥ
ಇನ್ನಷ್ಟು ... -->