ಅಥವಾ

ಒಟ್ಟು 30 ಕಡೆಗಳಲ್ಲಿ , 12 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ ಪುರಾಣದ ಅಬ್ಥಿಸಂದ್ಥಿಯ ತಿಳಿದು ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ, ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ. ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ. ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು. ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು.
--------------
ಪ್ರಸಾದಿ ಭೋಗಣ್ಣ
ಭಕ್ತನ ಭಾಷೆ ಗುರುಲಿಂಗಜಂಗಮವಲ್ಲ. ತ್ರಿವಿಧ ಕರ್ತೃವಿನ ಭಾಷೆ, ತನ್ನ ಮುಟ್ಟಿ ಪೂಜಿಸುವ ಭಕ್ತನಲ್ಲ. ಇಂತೀ ಉಭಯದ ಭಾಷೆ, ಕರ್ತೃ ಭೃತ್ಯಂಗಲ್ಲ [ವೆ]? ಶಿವಲೆಂಕನ ಮಾತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.
--------------
ಶಿವಲೆಂಕ ಮಂಚಣ್ಣ
ಸೃಷ್ಟಿಯೊಳಗಾದ ತೀರ್ಥಂಗಳ ಮೆಟ್ಟಿ ಬಂದಡೂ ದೃಷ್ಟಿಮತಿ, ನಿಮುಷಮತಿ, ಭೇದಮತಿ[ವೇ]ದ್ಯಮತಿ ಅಭೇದ್ಯಭೇದಕಮತಿ ಉಚಿತಮತಿ ಸಾಮಮತಿ ದಾನಮತಿ ದಂಡಮತಿ ಆತ್ಮಚಿಂತನಮತಿಗಳಲ್ಲಿ ನುಡಿದಡೂ ಪಂಡಿತನಪ್ಪನಲ್ಲದೆ ವಸ್ತುವ ಮುಟ್ಟ. ಇದಕ್ಕೆ ದೃಷ್ಟ ಮತ್ತರಿಗೆ ಹಾಕಿದ ಮುಂಡಿಗೆ. ವಸ್ತುವನರಿದುದಕ್ಕೆ ಲಕ್ಷಣವೇನೆಂದಡೆ: ತಥ್ಯಮಿಥ್ಯವಳಿದು ರಾಗದ್ವೇಷ ನಿಂದು ಆವಾವ ಗುಣದಲ್ಲಿಯೂ ನಿರ್ಭಾವಿತನಾಗಿ ಸರ್ವಗುಣಸಂಪನ್ನನಾಗಿ ತತ್ಪ್ರಾಣ ಸಾವಧಾನವನರಿತು ಬಂದ ಬಂದ ಮುಖದಲ್ಲಿ ಲಿಂಗಾರ್ಪಿತವ ಮಾಡಿ ನಿಂದುದೆ ನಿಜಲಿಂಗಾಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನೆ.
--------------
ಪ್ರಸಾದಿ ಭೋಗಣ್ಣ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರ ಕನ್ನವನಿಕ್ಕಿ ನೀರ ಕದ್ದೆನು. ಹೋಹಾಗ ಆರೂ ಅರಿಯರು, ಬಾಹಾಗ ಎಲ್ಲರೂ ಅರಿವರು. ಅರಿದರಲ್ಲಾ ಎಂದು ಸುರಿದೆ ನೀರ. ಹಾಕಿದ ಮಡಕೆಯು ಕನ್ನಗತ್ತಿಯ ಕೈಯಲ್ಲಿಯದೆ. ಅಂಗ ಸಿಕ್ಕಿತ್ತು ಮದನಂಗದೂರ ಮಾರೇಶ್ವರಾ.
--------------
ಕನ್ನದ ಮಾರಿತಂದೆ
ನಾಲ್ಕು ವೇದವನೋದಿದ ವಿಪ್ರರ ಮನೆಯ ಎಣ್ಣೆಹೊಳಿಗೆ ತುಪ್ಪ ಸಕ್ಕರೆ ಎಂದಡೆ ನಮ್ಮ ಶಿವಭಕ್ತರ ಮನೆಯ ಶ್ವಾನ, ಮೂಸಿನೋಡಿ ಒಲ್ಲದೆ ಹೋಯಿತ್ತು. ಅದೆಂತೆಂದಡೆ:ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು, ತಮ್ಮ ಪಾಕಕ್ಕೆ ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ. ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ ಆರಾದಡೂ ಎತ್ತುವಿರೊ, ಜಗದ ಸಂತೆಯ ಸೂಳೆಯ ಮಕ್ಕಳಿರಾ ? ಜಗಕ್ಕೆ ಪಿತನೊಬ್ಬನೆ ಅಲ್ಲದೆ ಇಬ್ಬರೆಂದು ಬಗಳುವನ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅವನಂಗಳ ಮೆಟ್ಟಿಕ್ಕುವೆನೆಂದ_ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಭಕ್ತಂಗೆ ಹೆಣ್ಣುಬೇಡ, ಹೊನ್ನುಬೇಡ, ಮಣ್ಣುಬೇಡವೆಂದು ಹೇಳಿ, ತಾ ಮುಟ್ಟುವನ್ನಬರ ಆ ಬೋಧೆಯ ಹುಸಿಯೆಂದ. ತಾ ಮುಟ್ಟದೆ ತನ್ನ ಮುಟ್ಟಿಪ್ಪ ಭಕ್ತನ ತಟ್ಟದೆ, ಕರ್ಮಕ್ಕೆ ಕರ್ಮವನಿತ್ತು ತಾ ವರ್ಮಿಗನಾಗಬಲ್ಲಡೆ, ಹೊಳೆಯಲ್ಲಿ ಹಾಕಿದ ಸೋರೆಯಂತೆ, ಅನಿಲ ಕೊಂಡೊಯ್ದ ಎಲೆಯಂತೆ, ಯಾತಕ್ಕೂ ಹೊರಗಾಗಿ ಜಗದಾಸೆಯಿಲ್ಲದಿಪ್ಪ ವೇಷಕ್ಕೆ ಒಳಗಲ್ಲ. ಆತ ಜಗದೀಶನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೊಲದವರೆಯ ನಡೆದು ಸೊಡಗೆಯ ಸುಲಿದಲ್ಲಿ, ತಳಿಲು ಬಲಿದು ಒಡೆದುದಿಲ್ಲ. ಬಿತ್ತವಟ್ಟಕ್ಕೆ ಮೊದಲೆ ಕೂಳೆಹೋಯಿತ್ತು. ಹೊಲದವನಿಗೆ ಒಮ್ಮನವಾದುದಿಲ್ಲ. ಇಮ್ಮನ ಸೊಡಗೆಯ ಮೆದ್ದು, ಕರ್ಮಕ್ಕೀಡಾದವರ ನುಡಿಯೆಂದಡೆ, ಎನ್ನ ಹಮ್ಮಿಗನೆಂಬರು. ಅವರಿಗೆ ಹಾಕಿದ ಗಾಣ ಸಾಕು, ನಿಲ್ಲು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೀ ಹಾಕಿದ ಮುಂಡಿಗೆ ಎನಗೂ ಸರಿ, ನಿನಗೂ ಸರಿ. ನಾ ಹಾಕಿದ ಮುಂಡಿಗೆ ನಿನ್ನ ಕೇಡು, ಎನ್ನ ಕೇಡು. ಗರ್ಭವ ಹೊತ್ತಿದ ಸ್ತ್ರೀ ಅಳಿದಂತೆ. ಶಿವಲೆಂಕನ ಮಾತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ.
--------------
ಶಿವಲೆಂಕ ಮಂಚಣ್ಣ
ಹುಸಿಯ ಹಟ್ಟಿಯಲಿಪ್ಪ ಸೊನಗ, ಹಾಕಿದ ಹಿಟ್ಟಿಗೆ ಬೊಗಳುವಂತೆ. ಆರಾದರು ಕೊಟ್ಟುದೊಂದು ವಾಟುಹಾಸಿಗೆ, ಅವರಿಚ್ಛೆಗೆ ಬೊಗಳುವ ಖೊಟ್ಟಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದರೆ, ಮುಟ್ಟಿ ಅವರ ಸಂಗವ ಮಾಡುವ ಮನುಜಗೆ, ಕರ್ಮ ಕಟ್ಟಿಹುದಲ್ಲದೆ ಮಾಣದು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಹೇರನೊಪ್ಪಿಸಿದವಂಗೆ ಸುಂಕವ ಬೇಡಿ ಗಾರುಮಾಡಲೇತಕ್ಕೆ ? ಮೊದಲು ತ್ರಿವಿಧವ ಎನಗೆಂದು ಕೊಟ್ಟು ಮತ್ತೆ ; ನೀ ಬೇಡಿದಡೆ ನಿನಗಿತ್ತ ಮತ್ತೆ , ಎನ್ನಡಿಯ ನೋಡುವ ಬಿಡುಮುಡಿ ಯಾವುದು ? ನಿನಗೆ ಶಿವಲೆಂಕ ಹಾಕಿದ ಮುಂಡಿಗೆಯ ನೀನೆತ್ತಲಮ್ಮದೆ, ಎನ್ನ ಕೈಯೊಳಗಾದೆಯಲ್ಲಾ , ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ಹಾಕಿದ ಮುಂಡಿಗೆಯ ಎತ್ತುವರಿಲ್ಲ. ಎತ್ತಿದ ಮುಂಡಿಗೆಯ ದೃಷ್ಟದಲ್ಲಿ , ಶ್ರುತದಲ್ಲಿ ಗೆದ್ದು , ಇಸಕೊಂಬವರಿಲ್ಲ . ಈ ಉಭಯದ ಗೊತ್ತನರಿಯದೆ ಕೆಟ್ಟರು, ನಾವು ಭಕ್ತ ಜಂಗಮರೆಂಬುವರೆಲ್ಲ . ಅದಂತಿರಲಿ. ನಾನು ನೀನು ಎಂಬುಭಯದ ಗೊತ್ತನರಿದು, ದೃಷ್ಟದಲ್ಲಿ ಶ್ರುತದಲ್ಲಿ ಗೆದ್ದು ಕೊಟ್ಟು, ನ್ಯಾಯದಲ್ಲಿ ಜಗವನೊಡಂಬಡಿಸಿ ಕೊಟ್ಟು, ಆ ಸಿಕ್ಕಿಹೋಗುವ ಮುಂಡಿಗೆಯ ಎತ್ತಿಕೊಂಡು, ಸುತ್ತಿ ನೋಡಿದರೆ ಬಟ್ಟಬಯಲಾಗಿರ್ದಿತ್ತು . ಆ ಬಟ್ಟಬಯಲ ದಿಟ್ಟಿಸಿ ನೋಡಲು, ನೆಟ್ಟಗೆ ಹೋಗುತ್ತಿದೆ . ಹೋಗಹೋಗುತ್ತ ನೋಡಿದರೆ, ನಾ ಎತ್ತ ಹೋದೆನೆಂದರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಹರಿಗೆಯ ಹಿಡಿದವ ಇದಿರ ಗೆದ್ದಿಹೆನೆಂದು ಅದನೆದೆಗಿಕ್ಕಿಕೊಂಡು, ಉರವಣಿಸಿಕೊಂಡು, ಬಾಹ ಸಮರವ ತರಹರಿಸಿಹೆನೆಂದು ಇದಿರಿಗೆ ಈಡಹ ತೆರನಂತೆ ಅದಕ್ಕೇ ಹಾನಿ. ಅಂಗದ ಕುರುಹಿನ ನೆಮ್ಮುಗೆಯಪ್ಪ ಲಿಂಗವು, ಕಲಸಿದ ಮಣ್ಣು ರೂಹಿಂಗೆ ಈಡಾಗದೆಂದರಿದಡೆ, ಆ ಲಿಂಗ ಭವಪಾಶವ ಗೆಲ್ಲುವುದು. ಹಾಕಿದ ಮುಂಡಿಗೆಯ, ಭಾಷೆಯ ತಪ್ಪಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ (ಮಾಡಿ) ಧರಿಸುವ ಭೇದವೆಂತೆಂದಡೆ : ಆವ ವರ್ಣದ ಗೋವಾದಡೆಯೂ ಸರಿಯೆ, ಅವಯವಂಗಳು ನೂನು-ಕೂನಿಲ್ಲದೆ, ಬರೆಗಳ ಹಾಕದೆ ಇರುವಂತಹ ಗೋವ ತಂದು, ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ; ಧೂಳಪಾದೋದಕಸೇವನೆಯೆ ಮಹಾತೀರ್ಥ. ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು. ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ, ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ ಪೂರ್ವದಲ್ಲಿ (ಗುರು) ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ ಗುರುದೀಕ್ಷೆಯುಂಟಾಗುವುದಯ್ಯಾ, ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ, ನಿರುಪಾಧಿಭಕ್ತಂಗೆ ತ್ರಿವಿಧಪಾದೋದಕ ಪ್ರಸಾದ ದೊರೆಯುವುದಯ್ಯಾ ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ ನಿರ್ವಂಚಕ ಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ, ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇದವೆಂಬುದು ವಾದ, ವೈದಿಕತ್ವ ಮಾಯಾಭೇದ. ದೇವತಾ ದೇವತೆ ಕುಲ ಋಷಿ ಪ್ರಯೋಗಯಾಗಕ್ರಮ ದಿಗ್ವಳಯ ಬಂಧನ, ಗ್ರಹಸಂಬಂಧಯೋಗ. ಇಂತಿವು ಮೊದಲಾದ ಕರ್ಮಂಗಳಲ್ಲಿ ವ[ತಿರ್]ಸಿ ನಿಂದ ಸ್ವಯವಾವುದು ? ಧರ್ಮಶಾಸ್ತ್ರವ ತಿಳಿದು, ಶಿಲ್ಪ ವೈದಿಕ ಜೋಯಿಸ ಇವು ಮುಂತಾದ ನಾನಾ ಭೇದಂಗಳ ಹೇಳಿ ತನ್ನ ಅಳಿವು ಉಳಿವು ಕಂಡುದಿಲ್ಲ. ಪುರಾಣವನೋದಿ ಕೆಲರ್ಗೆ ಹೇಳಿ ಪೂರ್ವಯಥ್ಞಿಕಥನ ಮುಂತಾದ ರಾಮರಾವಣಾದಿಗಳು ಚಕ್ರವರ್ತಿಗಳು ಮುಂತಾದ ಧರ್ಮಕರ್ಮಂಗಳನೋದಿ ಬೋಧಿಸಿದಲ್ಲಿಯೂ ಸಫಲವಾದುದಿಲ್ಲ. ಇಂತಿವನ್ನೆಲ್ಲವನರಿತು, ಉಭಯಸಂಧಿಯ ಉಪೇಕ್ಷಿಸಿದಲ್ಲಿ ಬಿಡುಮುಡಿ ಉಭಯದ ಭೇದವ ತಾನರಿತು ಮಲತ್ರಯಕ್ಕೆ ದೂರಸ್ಥನಾಗಿ ತ್ರಿವಿಧಾತ್ಮಕ್ಕೆ ಅಳಿವು ಉಳಿವನರಿತು ಆರಾರ ಮನ ಧರ್ಮಂಗಳಲ್ಲಿ ಭೇದವಿಲ್ಲದೆ ನುಡಿದು ಅಭೇದ್ಯಮೂರ್ತಿಯ ತೋರಿ, ವಿಭೇದವ ಬಿಡಿಸಿ ತರಣಿಯ ಕಿರಣದಂತೆ, ವಾರಿಯ ಸಾರದಂತೆ 'ಖಲ್ವಿದಂ ಬ್ರಹ್ಮವಸ್ತು'ವೆಂದಲ್ಲಿ, ಏಕಮೇವನದ್ವಿತೀಯನೆಂದಲ್ಲಿ 'ಓಂ ಭರ್ಗೋ ದೇವಸ್ಯ ಧೀಮಹಿ' ಯೆಂದಲ್ಲಿ ಆದಿ ಪರಮೇಶ್ವರನೆಂದಲ್ಲಿ, ಆದಿ ಪುರುಷೋತ್ತಮನೆಂದಲ್ಲಿ ಆರಾರ ಭೇದಕ್ಕೆ ಭೇದ. ತ್ರಿಮೂರ್ತಿಗಳ ಜಗಹಿತಾರ್ಥವಾಗಿ ಸಂಶಯಸಿದ್ಧಿಯಿಂದ ತಿಳಿವುದು. ಸರ್ವಶಾಸ್ತ್ರದಿಂದ ಈ ಗುಣವಾಚಕರಿಗೆ ದೂಷಣದಿಂದ ನುಡಿವರಿಗೆ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ ಎಂಬೆನು.
--------------
ಪ್ರಸಾದಿ ಭೋಗಣ್ಣ
ಇನ್ನಷ್ಟು ... -->